ಬಿಜೆಪಿ-ಜೆಡಿಎಸ್‌ ಮೈತ್ರಿ ನೂರಕ್ಕೆ ನೂರರಷ್ಟು ನಡೆಯುತ್ತದೆ: ಜಿ.ಟಿ.ದೇವೇಗೌಡ

ಬಿಜೆಪಿ ಹಾಗೂ ಜೆಡಿಎಸ್​ ಮೈತ್ರಿಯ ವಿಚಾರವಾಗಿ ಜೆಡಿಎಸ್​ ಕೋರ್​ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಪ್ರತಿಕ್ರಿಯಿಸಿದರು.

ಬೆಂಗಳೂರು : ಬಿಜೆಪಿ-ಜೆಡಿಎಸ್‌ ಮೈತ್ರಿ ನೂರಕ್ಕೆ ನೂರರಷ್ಟು ಆಗುತ್ತದೆ. ಕ್ಷೇತ್ರ ಹಂಚಿಕೆ ಬಗ್ಗೆ ಇನ್ನೂ ಚರ್ಚೆ ಆಗಿಲ್ಲ ಎಂದು ಮಾಜಿ ಸಚಿವ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಹೇಳಿದ್ದಾರೆ.

ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗು ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ಮೈತ್ರಿ ಆಗಲಿದೆ. ಆದರೆ ಕ್ಷೇತ್ರ ಹಂಚಿಕೆ ಬಗ್ಗೆ ಚರ್ಚೆ ಆಗಿಲ್ಲ. ನಾವೂ ಕೇಳಿಲ್ಲ, ಅವರೂ ಹೇಳಿಲ್ಲ. ಸದ್ಯಕ್ಕೆ ನಮಗೆ ಕಾಂಗ್ರೆಸ್‌ ಪಕ್ಷವನ್ನು ದೂರವಿಡುವುದೇ ಗುರಿ. ಅದಕ್ಕಾಗಿ ಬಿಜೆಪಿ-ಜೆಡಿಎಸ್‌ ಮೈತ್ರಿ ಆಗಲಿದೆ ಎಂದರು.

ಗ್ಯಾರಂಟಿಯಲ್ಲೇ ಮುಳುಗಿದೆ ಸರ್ಕಾರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ನಾಲ್ಕು ತಿಂಗಳು ಆಗಿದೆ. ಭೀಕರ ಬರಗಾಲ ಬಂದಿದ್ದರೂ, ಸಿಎಂ ಸೇರಿದಂತೆ ಎಲ್ಲರೂ ಗ್ಯಾರಂಟಿಯಲ್ಲೇ ಮುಳುಗಿದ್ದಾರೆ. ಸರ್ಕಾರ ನೂರು ದಿನದ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಣೆ ಮಾಡಿದೆ. ಸರ್ಕಾರ ರಚನೆಯಾಗಿ ನಾಲ್ಕು ತಿಂಗಳಾಗಿದ್ದರೂ, ಇದುವರೆಗೂ ಯಾವುದೇ ಅಭಿವೃದ್ಧಿ ಕಾರ್ಯಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದರು.

ಸರ್ಕಾರದಲ್ಲಿ ವರ್ಗಾವಣೆ ದಂಧೆ ಹೆಚ್ಚಾಗಿದೆ. ರೈತರ ಕೃಷಿ ಚಟುವಟಿಕೆಗೆ ಯಾವುದೇ ಉಪಕರಣ ಕೊಟ್ಟಿಲ್ಲ. ಹಲವೆಡೆ ಬೆಳೆ ಒಣಗಿ ಹೋಗಿದೆ. 45 ಲಕ್ಷ ರೈತರಿಗೆ ಕೇಂದ್ರ, ರಾಜ್ಯ ಸರ್ಕಾರ ಸೇರಿ ಹಣ ನೀಡುತ್ತಿದ್ದರು. ಆದರೆ ರಾಜ್ಯ ಸರ್ಕಾರ ಈಗ ಅದನ್ನು ನಿಲ್ಲಿಸಿದೆ ಎಂದು ದೂರಿದರು.

ಕಾವೇರಿ ನೀರನ್ನು ತಮಿಳುನಾಡಿಗೆ ಇವತ್ತಿಗೂ ಬಿಡುತ್ತಿದ್ದೀರಿ. ಈಗ ನೀರು ಬಿಟ್ಟರೆ ಇರುವ 16 ಟಿಎಂಸಿ ನೀರಿನಲ್ಲಿ 7 ಟಿಎಂಸಿ ನೀರು ಹೋಗಿ ಕೇವಲ 9 ಟಿಎಂಸಿ ನೀರು ಇರುತ್ತದೆ. ಇದರಿಂದ ಬೆಂಗಳೂರಿಗೆ ಕುಡಿಯಲು ನೀರು ಎಲ್ಲಿ ಕೊಡ್ತೀರಿ?. ಇಂತಹ ಪರಿಸ್ಥಿತಿಯಲ್ಲಿ ಆಪರೇಷನ್ ಹಸ್ತ ಮಾಡಿಕೊಂಡು ಕುಳಿತಿದ್ದೀರಾ?, ನೀವು ಬನ್ನಿ ಎಂದು ಕರೆಯುತ್ತಿದ್ದೀರಾ ಎಂದು ಜಿಟಿಡಿ ಪ್ರಶ್ನೆ ಮಾಡಿದರು.

ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಬೇಕಿತ್ತು. ಬಿಡುವುದಿಲ್ಲವೆಂದು ಹೇಳಬೇಕಿತ್ತು. ಏನಾಗುತಿತ್ತು?. ಸುಪ್ರೀಂ ಕೋರ್ಟ್​ಗೆ ಹೋಗ್ತಿದ್ರು. ಆಗ ನೀವು ಕೋರ್ಟ್​ಗೆ ಹೇಳಬಹುದಿತ್ತು. ಕೂಡಲೇ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿ ಎಂದು ಒತ್ತಾಯಿಸಿದರು.

ಬರಗಾಲದ ವೇಳೆ ಕೇಂದ್ರಕ್ಕೆ ಮುಖ್ಯಮಂತ್ರಿಗಳ ನಿಯೋಗ ಹೋಗಬೇಕಿತ್ತು. ಆದರೆ ಒಮ್ಮೆಯೂ ಹೋಗಿಲ್ಲ ಎಂದು ಹೇಳಿದ ಅವರು, ಬೆಂಗಳೂರಿನಲ್ಲಿ ಈಗಾಗಲೇ ನೀರಿನ ಅಭಾವ ಕಂಡುಬರುತ್ತಿದೆ. ಬೆಂಗಳೂರಿನಲ್ಲಿ ಕಸ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ರಸ್ತೆ ಗುಂಡಿ ಬಿದ್ದಿದೆ. ಬಿಬಿಎಂಪಿಯಲ್ಲಿ ಯಾರು ಇಲ್ಲ, ಬೆಂಗಳೂರು ಅಭಿವೃದ್ಧಿ ಆಗುತ್ತಿಲ್ಲ. ಆ ಕಡೆ ಹಳ್ಳಿಯ ಕಡೆ ಹೋದರೆ ರೈತರಿಗೆ ಸಂಕಷ್ಟ ಎದುರಾಗಿದೆ. ಹೀಗೆ ಆದರೆ ರೈತರ ಆತ್ಮಹತ್ಯೆ ಪ್ರಮಾಣ ಹೆಚ್ಚಾಗುತ್ತದೆ. ನಮ್ಮದು ರೈತರ ಪಕ್ಷ. ಸೆ. 26 ರಂದು ಕಲಬುರಗಿಯಿಂದ ನಾವು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಬಗ್ಗೆ ಹಲವರು ಆರೋಪ ಮಾಡ್ತಿದ್ದಾರೆ. 1983ರಲ್ಲಿ ರಾಮಕೃಷ್ಣ ಹೆಗ್ಗಡೆಯವರ ಸರ್ಕಾರದಲ್ಲಿ ಸಿದ್ದರಾಮಯ್ಯನವರು ಕನ್ನಡ ಕಾವಲು ಸಮಿತಿ ಅಧ್ಯಕ್ಷರಾದ್ರು. ಬಿಜೆಪಿಯ ಬೆಂಬಲದಿಂದಲೇ ಅವರು ಅಧ್ಯಕ್ಷರಾಗಿದ್ದು. ನನ್ನ ಹೆಣ ಕೂಡ ಬಿಜೆಪಿ ಕಚೇರಿ ಬಳಿ ಹೋಗಲ್ಲ ಎಂದು ಹೇಳ್ತೀರಿ. ಏಕೆ ಈ ರೀತಿ ಮಾತಾಡ್ತೀರಿ. ನೀವು ಸತ್ತರೆ ಎಲ್ಲರೂ ಬರ್ತಾರೆ. ಬಿಜೆಪಿಯವರು, ಜೆಡಿಎಸ್‌ನವರು ಎಲ್ಲರೂ ಬಂದು ಹಾರ ಹಾಕ್ತಾರೆ. ನೀವು ಬೇಡ ಅಂತಿರಾ?. ಏಕೆ ಈ ರೀತಿ ಮಾತನಾಡುತ್ತೀರಿ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗುವುದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ. ದೇಶದ ಜನ ಮೋದಿ ಪರವಾಗಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರೇ ಪ್ರಧಾನಿಯವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದರು.

ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್, ಪರಿಷತ್​ನ ಮಾಜಿ ಸದಸ್ಯರಾದ ಶ್ರೀಕಂಠೇಗೌಡ, ರಮೇಶ್ ಗೌಡ, ಮಾಜಿ ರಾಜ್ಯಸಭೆ ಸದಸ್ಯ ಕುಪೇಂದ್ರರೆಡ್ಡಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

B S Yediyurappa: ದೆಹಲಿಯಿಂದ ವಾಪಸಾದ ಯಡಿಯೂರಪ್ಪ.. ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಚರ್ಚೆಯಾಗಿಲ್ಲ ಎಂದ ಮಾಜಿ ಸಿಎಂ

Please follow and like us:

tmadmin

Leave a Reply

Your email address will not be published. Required fields are marked *

Next Post

ರಾಮಚರಿತಮಾನಸ 'ಪೊಟ್ಯಾಸಿಯಂ ಸೈನೈಡ್‌'ನಷ್ಟೆ ವಿಷಕಾರಿ: ಬಿಹಾರ ಸಚಿವ ಚಂದ್ರಶೇಖರ್‌

Fri Sep 15 , 2023
ಪಟ್ನಾ: ರಾಮಚರಿತಮಾನಸದಂತಹ ಪ್ರಾಚೀನ ಕೃತಿಗಳಲ್ಲಿ ‘ಪೊಟ್ಯಾಸಿಯಂ ಸೈನೈಡ್‌’ಗೆ ಹೋಲಿಸುವಂತಹ ವಿನಾಶಕಾರಿ ಅಂಶಗಳಿವೆ ಎಂದು ಬಿಹಾರ ಶಿಕ್ಷಣ ಸಚಿವ ಚಂದ್ರಶೇಖರ್‌ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ಆರ್‌ಜೆಡಿ ನಾಯಕ ಗುರುವಾರ ರಾತ್ರಿ ಕಾರ್ಯಕ್ರಮವೊಂದರಲ್ಲಿ ನೀಡಿದ ಹೇಳಿಕೆಯ ವಿಡಿಯೊ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿದೆ. ‘ಇದು ನನ್ನೊಬ್ಬನ ದೃಷ್ಟಿಕೋನವಷ್ಟೇ ಅಲ್ಲ. ಹಿಂದಿಯ ಪ್ರಸಿದ್ಧ ಲೇಖಕ ನಾಗಾರ್ಜುನ ಮತ್ತು ಸಮಾಜವಾದಿ ಚಿಂತಕ ರಾಮ ಮನೋಹರ ಲೋಹಿಯಾ ಅವರೂ ರಾಮಚರಿತಮಾನಸವು ಪ್ರತಿಗಾಮಿ ಚಿಂತನೆಗಳನ್ನು ಒಳಗೊಂಡಿದೆ ಎಂದು ಹೇಳಿದ್ದಾರೆ’ […]

Breaking News

Advertisement

Wordpress Social Share Plugin powered by Ultimatelysocial