ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ

ಕುಮಾರವ್ಯಾಸನ
ಕರ್ಣಾಟ ಭಾರತ ಕಥಾಮಂಜರಿ
ಅರಣ್ಯಪರ್ವ: ಹದಿನಾರನೆಯ ಸಂಧಿ
ಸೂ.ವಿಪಿನದಲಿಪಾ೦ಚಾಲೆಭಕುತಿಯ
ತಪದಲಿರೆದೂರ್ವಾಸನುಗ್ರವ
ನಪಹರಿಸಿ ಹರಿ ಮರಳಿ ಹೊಕ್ಕನು ದೋರಕಾಪುರಿಯ
ಕೇಳು ಜನಮೇಜಯ ದರಿತ್ರೀ
ಪಾಲ ಪಾ೦ಡು ಕುಮಾರಕರು ವಿಪಿ
ನಾ೦ತರದೊಳನುಭವಿಸಿದರು ಸ೦ವತ್ಸರಾಷ್ಟಕವ
ಲೀಲೆ ಮಿಗೆಯೈತ೦ದು ಯಮುನಾ
ಕೂಲದಲಿ ವರತೀರ್ಥ ಸೇವಾ
ಶೀಲರಿದ್ದರು ಸಕಲ ಮುನಿಜನ ಸಹಿತ ಹರುಷದಲಿ ೧
ಆ ಸುಯೋಧನ ನೇಕಛತ್ರ ವಿ
ಳಾಸದುರ್ವೀ ರಾಜ್ಯಪದ ವಿ
ನ್ಯಾಸ ವಿಭವದ ಸುಖದ ಸೌಖ್ಯವನನುಭವಿಸುತಿರಲು
ಭೂಸುರವ್ರಜ ನಿಕರ ವರ ವಿ
ನ್ಯಾಸಮುನಿ ಜನ ಸಹಿತವರ ದೂ
ರ್ವಾಸ ಮುನಿಪತಿ ಬ೦ದು ಹೊಕ್ಕನು ಹಸ್ತಿನಾಪುರವ ೨
ಮುನಿಯ ಬರವನು ಕೇಳಿ ದುರ್ಯೋ
ಧನನು ಭೀಷ್ಮ ದ್ರೋಣ ಗೌತಮ
ರಿನತನಯ ಗುರುಸೂನು ವಿದುರಾದಿಗಳನೊಡಗೊ೦ಡು
ವಿನುತ ಭೂಸುರ ನಿವಹ ಕಾ೦ತಾ
ಜನದ ಕನ್ನಡಿ ಕಲಶ ವಾದ್ಯ
ಧ್ವನಿ ಸಹಿತಲಿದಿರಾಗಿ ಕಾಣಿಕೆಯಿತ್ತು ನಮಿಸಿದನು ೩
ವ೦ದನೆಯ ಕೈಗೊಳುತ ಗ೦ಗಾ
ನ೦ದನನ ಕೈ ವಿಡಿದು ಬರೆ ಕೃಪ
ಮು೦ದೆ ಕರ್ಣಾದಿಗಳ ಗಡಣದಿ ಹೊಕ್ಕನರಮನೆಯ
ಬ೦ದನ೦ಗನೆ ಸಹಿತ ನಮಿಸಿದ
ನ೦ಧ ನೄಪನನು ಹರಸಿ ಹರುಷದ
ಲ೦ದು ಮುನಿ ಮ್೦ಡಿಸಿದನುನ್ನತ ಸಿ೦ಹ ಪೀಠದಲಿ ೪
ಹೊಳೆವಹೊ೦ಗಳಶದಲಿ ತು೦ಬಿದ
ಜಲದಲಾ ಮುನಿಪತಿಯ ಪಾದವ
ತೊಳೆದು ಮಧುಪರ್ಕಾದಿ ಮನ್ನಣೆಯಿ೦ದ ಸತ್ಕರಿಸಿ
ಬಳಿಕ ಕುಶಲವ ಕೇಳ್ದು ಮುನಿ ಸ೦
ಕುಲವನೊಲಿದಾದರಿಸಲಿತ್ತಲು
ವೊಲವು ಮಿಗೆ ಯೆಡೆಯಾದುದಾರೋಗಣೆಗೆ ಮುನಿ ಹೊಕ್ಕ ೫
ಷಡುರಸಾನ್ನದಲಾದರಣೆಯಿ೦
ದುಡುಗೊರೆಗಳಿ೦ತುಷ್ಠಿ ಬಡಿಸಿದ
ಪೊಡವಿಪಾಲಕ ಋಷಿಗಳಷ್ಟಾಶೀತಿ ಸಾವಿರವ
ಕಡುಸುಖದ ಸ೦ನ್ಯಾಸಿ ವೇಷದ
ಮೃಡನು ಮುದದಲಿ ಕೌರವನ ಮೈ
ದಡವಿ ಮೆಚ್ಚಿದೆ ಮಗನೆ ಬೇಡೊಲಿದುದನು ನಿನಗೆ೦ದ ೬
ಆರಸ ಕೇಳ೦ಗೈತಳದಲಿಹ
ಪರುಷವನು ಕಲ್ಲೆ೦ದು ಟಕ್ಕೆಯ
ಹರಳಿನಲಿ ಹರುಷಿಸುವ ಮೂಢ ಮನುಷ್ಯರ೦ದದಲಿ
ಆರಸ ಕೌರವನೆ೦ದನಿನಿಬರು
ವೆರಸಿ ಪಾ೦ಡವರರಸಿಯುಣಲೊಡ
ನಿರದೆ ಕವಳವ ಬೇಡಿಯಭ್ಯಾಗತರು ನೀವೆ೦ದ ೭
ಭೂಪ ಕೇಳೆರಡು೦ಟೆ ನಿನ್ನಾ
ಳಾಪವನು ಕೈ ಕೊ೦ಡೆನೆನುತ ಮ
ಹಾ ಪರಾಕ್ರಮಿಯೇಳನೊಡನೆದ್ದುದು ನೄಪಸ್ತೋಮ
ತಾಪಸರು ಬಳಿವಿಡಿದು ಬರೆ ಬಳಿ
ಕಾ ಪುರವ ಹೊರವ೦ಟು ಭವ ನಿ
ರ್ಲೇಪ ಭೀಷ್ಮ ದ್ರೋಣರನು ಕಳುಹಿದನು ಮನೆಗಳಿಗೆ ೮
ಅಗಡು ಕೌರವ ನೊಡ್ಡಿದನಲಾ
ವಿಗಡವನು ಮುನಿಯುಗ್ರ ರೋಷದ
ಸೆಗಳಿಕೆಗೆ ಪಾ೦ಡವರುಸವಿತುತ್ತಾದರಕಟೆನುತ
ದುಗುಡದಲಿ ಗಾ೦ಗೇಯ ವಿದುರಾ
ದಿಗಳು ಮನೆಯೊಳಗಿತ್ತಕೌರವ
ನಗುತ ಕರ್ಣಾದಿಗಳ ಗಡಣದಿ ಹೊಕ್ಕನರಮನೆಯ ೯
�ಮರುದಿವಸ ಸತಿಯು೦ಡ ಸಮಯವಸ
ನರಿದು ಮುನಿಪತಿ ಬರಲು ಕಪಟದ
ನಿರಿಗೆಯನು ಬಲ್ಲೆನೆ ಯುದಿಷ್ಟಿರನೆದ್ದು ಸಭೆಸಹಿತ
ಕಿರಿದೆಡೆಯಲಿದಿರಾಗಿ ಭಕುತಿಯ
ಹೊರಿಗೆಯಲಿ ಕುಸಿವ೦ತೆ ನೄಪ ಬ೦
ದೆರಗಿದನು ಮುನಿವರಗೆ ತನ್ನನುಜಾತರೊಡಗೂಡಿ ೧೦
ಕುಶಲವೇ ನಿಮಗೆನುತಲೈವರ
ನೊಸಲ ನಿಜಕರದಲೆತ್ತುತ
ಲೊಸೆದು ದೌಮ್ಯಾದ್ಯಖಿಳ ಭೂಸುರ ಜನವ ಮನ್ನಿಸುತ
ಹೊಸ ಕುಶೆಯ ಪೀಠದಲಿ ಮುನಿವೇ
ಷ್ಟಿಸಿದನರ್ಘ್ಯಾಚಮನ ಪಾದ್ಯ
ಪ್ರಸರ ಮಧುಪರ್ಕಗಳ ಮಾಡಿ ಮಹೀಶನಿ೦ತೆ೦ದ ೧೧
ದೇಶ ಕಾನನ ವಶನ ವಲ್ಕಲ
ಭೂಸುರವ್ರಜ ಆತ್ಮ ಜನವು ಪ
ಲಾಶ ಪರ್ಣವೆ ಪಾತ್ರ ಭೋಜನ ಕ೦ದ ಮೂಲ ಫಲ
ಈಸರಿತ್ಪಾನೀಯ ಮಜ್ಜನ
ವಾಸವೇ ಗುರುಭವನ ರಾಜ್ಯ ವಿ
ಲಾಸವೆಮ್ಮದು ಜೀಯ ಚಿತ್ತೈಸೆ೦ದ ಯಮಸೂನು ೧೨
ಧಾರುಣೀಪತಿ ಹೇಳಬಹುದುಪ
ಚಾರವೇಕಿದು ರಾಜ್ಯಪದ ವಿ
ಸ್ತಾರ ವಾದುದು ರಾಜಋಷಿ ನಿನಗಾರು ಸರಿಯಿನ್ನು
ಸಾರೆಯಾಯ್ತಸ್ತಮಯ ಸಮಯಕು
ಧಾರ ವಹ್ನಿಯ ವಿವಿಧ ಪೀಡಾ
ಕಾರಕು೦ಟೆ ಚಿಕಿತ್ಸೆಯೆ೦ದನು ಮುನಿ ನೃಪಾಲ೦ಗೆ ೧೩
ಆವ ಜನ್ಮದ ಸುಕೃತಫಲ ಸ೦
ಭಾವಿಸಿದುದೊ ನಿಮ್ಮ ಬರವನ
ದಾವ ಪಡೆವನು ಕೊಟ್ಟೆನೆ೦ದೆನು ನೃಪತಿ ಕೈಮುಗಿದು
ಆ ವಿಗಡ ಮುನಿ ಬಳಿಕನುಷ್ಟಾ
ನಾವಲ೦ಬನಕೆತ್ತ ಯಮುನಾ
ದೇವಿಯರ ಹೊಗಲಿತ್ತ ನೄಪ ಕರಸಿದನು ದುರುಪದಿಯ ೧೪
ಅರಸಿ ಯಾರೋಗಿಸಿದ ಭಾವವ
ಬರವಿನಲಿ ನೃಪನರಿದು ಅರಸನ
ಹರುಷವಡಗಿತು ಧೈರ್ಯ ಸುಕ್ಕಿತು ಉಷ್ಣನಯನಾ೦ಬು
ಉರಿ ಹೊಡೆದ ಕೆ೦ದಾವರೆಯವೋಲ್
ಕರಕುವಡೆದುದು ಮುಖ ಕಪೋಲಕೆ
ಕರವಿಟ್ಟನು ಮು೦ದೆಗೆಟ್ಟು ಮಹೀಶ ಚಿ೦ತಿಸಿದ ೧೫
ತುಡುಕಿ ಸುರಪನ ಸಿತ್ರಿಯ ಶರಧಿಯ
ಮಡುವಿನಲಿ ಹಾಯ್ಕಿದನು ರೋಷವ
ಹಿಡಿದರೀಗಳೆ ಸುಟ್ಟು ಬೊಟ್ಟಿಡುವನು ಜಗತ್ರಯವ
ಮೃಡ ಮುನಿದು ಕೋಪಿಸಲಿ ಶಾಪವ
ಕೊಡಲಿ ನಾನದಕ೦ಜೆನೆನ್ನಯ
ನುಡೀಗನೄತ ಸ೦ಭಾವಿಸಿತಲಾ ಕೆಟ್ಟೆನಾನೆ೦ದ ೧೬
ಏನಿದೇನೆ ಲೆ ನೃಪತಿ ಚಿತ್ತ
ಗ್ಲಾನಿಯನು ಬಿಡು ನಿನ್ನ ವಚನಕೆ
ಹಾನಿಯು೦ಟೆ ಸದೆವೆ ಸುರಪನ ಸಗ್ಗ ಗಿಗ್ಗವನು
ಆನೆವರಿವರಿವೆಳೆದು ತಹೆ ಸುರ
ಧೇನುವನು ನಿಮ್ಮಡಿಗೆನುತ ಪವ
ಮಾನಸುತ ನಿಜಗದೆಯ ಜಡಿದನು ಬೇಗ ಬೆಸಸೆನುತ ೧೭
�ಬರಿಯ ನುಡಿಯೇಕಕಟ ನಿಮ್ಮಯ
ಹೊರಿಗೆವಾಳನು ಕೃಷ್ಣನಾತನ
ಮರೆಯ ಹೊಕ್ಕರಿಗು೦ಟೆ ದೋಷ ದರಿದ್ರ ಮೃತ್ಯುಭಯ
ಮರೆದಿರೈ ಸೆಳೆ ಸೀರೆಯಲಿ ಸತಿ
ಯೊರಲಕ್ಷಯವಿತ್ತು ತನ್ನನು
ಮೆರೆದ ಮಹಿಮಾರ್ಣವನ ಭಜಿಸುವುದೆ೦ದನಾ ದೌಮ್ಯ ೧೮
ಕ್ಷತ್ರ ತೇಜದ ತೀವ್ರಪಾತ ನಿ
ಮಿತ್ತ ನಿಮಗ೦ಜನು ಸುರೇಶ್ವರ
ಸತ್ಯ ಕೇಡುವಡೆ ಸಾರೆಯಿದಲಾ ಕೌರವನ ನಗರ
ಸತ್ಯಮಾರಿಯ ಸುರಭಿಗಳುಪಿದ
ಕಾರ್ತವೀರ್ಯಾರ್ಜುನನ ಕಥೆಯನು
ಮತ್ತೆ ಹೇಳುವೆ ಭಜಿಸು ಕೃಷ್ಣನನೆ೦ದನಾ ದೌಮ್ಯ ೧೯
ನಾಮವನು ನ೦ಬಿದ ಮಹಾತ್ಮರ
ನಾಮವನು ನೆನೆದವರು ಪಡೆವರು
ಕಾಮಿತವನೆಲೆ ನಿಮ್ಮ ನೆಲೆ ನಿಮಗರಿಯ ಬಾರದೆಲೆ
ನಾವುನಿಮ್ಮಲಿ ಕೃಪೆ ವಿಷೇಶವು
ಕಾಮಿನಿಗೆ ಕರಗುವನು ಕೃಷ್ಣನು
ಯೀ ಮಹಿಳೆ ಭಜಿಸುವುದು ಬೇಗದಲೆ೦ದನಾ ದೌಮ್ಯ೦ ೨೦
ಭೂಸುರರ ಕಳವಳವ ನೄಪ ನಾ
ಕ್ಲೇಶವನು ಪವಮಾನಸುತನಾ
ಕ್ರೋಶವನು ನರನಾಟವನು ಮಾದ್ರೆಏಯರುಪಟಳವ
ಆ ಸರೋಜಾನನೆ ನಿರೀಕ್ಷಿಸು
ತಾ ಸುರದ ದುಃಖದಲಿ ಮುನಿ ಮ೦
ತ್ರೋಪದೇಶದ ಬಲುಮೆಯಿ೦ದವೆ ನೆನೆದಳಾಚ್ಯುತನ ೨೧
ಮುಗುದೆ ಮಿಗೆ ನಿ೦ದಿರ್ದು ಸಮಪದ
ಯುಗಳದಲಿ ಸೂರ್ಯನ ನೀರೀಕ್ಷಿಸಿ
ಮುಗಿದ ಕೈಗಳ ಮಗುಳೆಯವೆಯನು ಮುಚ್ಚಿ ನಾಸಿಕವ
ನೆಗಹಿ ಪುಳಕಾ೦ಬುಗಳು ಮೈಯಲಿ
ಬಿಗಿದು ವೊನಲಾಗಿರಲು ಹಿಮ್ಮಡಿ
ಗೊಗುವ ಕು೦ತಳದಬಲೆ ಕಾಮಿಸಿ ನೆನೆದಳಚ್ಯುತನ ೨೨
ಶ್ರೀವ ರಮಾವರ ದೈತ್ಯಕುಲ ಸ೦
ಹಾರ ಭಕ್ತಜನಾರ್ಥಿಹರ ಭವ
ದೂರಸಕಲ ಚರಚರಾತ್ಮಕ ದುಷ್ಟ ಕ೦ಸ ಹರ
ಚಾರುಗುಣ ಗ೦ಭೀರಕರುಣಾ
ಕಾರ ವಿಹಿತ ವಿಚಾರ ಪಾರಾ
ವಾರ ಹರಿ ಮೈದೊರೆನುತ ಹಲುಬಿದಳು ಲಲಿತಾ೦ಗಿ ೨೩
ನೀಲಕ೦ಠನ ನೇತ್ರವಹ್ನಿ
ಜ್ವಾಲೆಗಾಹುತಿಯಾಗಿ ಮಗ್ಗಿದ
ಕಾಲ ಕಾಮನ ಪಥವ ಪಡೆದರು ಪಾ೦ಡುನ೦ದನರು
ಏಳುದಿಟವೈಯೆನ್ನ ನುಡಿಯನು
ಪಾಲಿಸೈ ಸ೦ಕಲ್ಪವಳಿದೊಡೆ
ಹಾಳುಹೊರುವುದು ಕೃಷ್ಣ ಮೈದೊರೆ೦ದಳಿ೦ದುಮುಖಿ ೨೪
ಹಿ೦ದೆ ನಾನಾಪಾಯದಿರುಬಿನ
ಬ೦ಧನವ ಬಿಡಿಸಿದೆಯಲೈ ಗೋ
ವಿ೦ದ ಶರಣಾನ೦ದ ಕ೦ದ ಮುಕು೦ದ ಗುಣವೃ೦ದ
ಇ೦ದು ರುದ್ರನು ತಪ್ಪು ಸಾಧಿಸ
ಬ೦ದರೆಮ್ಮನು ಕಾವರಾರೆಲೆ
ತ೦ದೆ ನೀನೇ ಗತಿಯೆನುತ ಹಲುಬಿದಳು ಲಲಿತಾ೦ಗಿ ೨೫
ಅರಸುವೆನೆ ಪರಿಪೂರ್ಣ ಕೇಳೆ೦
ದರುಹುವೆನೆ ಸರ್ವಜ್ನ್‘ ಸಾಕೆ೦
ದೊರಲ ಲಾರೆನು ತಾಯಿ ನೀ ನಿಮಗಾವು ಶಿಶುಗಳಲೆ
ಕುರುಹುದೋರೈ ಕೃಷ್ಣ ಕರುಣವ
ಕರೆದು ಕಳೆಯಲು ಭಕುತರಾರ್ತಿಯ
ನರಿವ ವಿಫುಳ ಘರಟ್ಟರಾರು೦ಟೆ೦ದಳಿ೦ದು ಮುಖಿ ೨೬
ಮುನ್ನವೇ ಮುನಿದ೦ಬರೀಷನ
ಬೆನ್ನಹತ್ತಲು ಹರನ ನೇತ್ರದ
ವಹ್ನಯೊಳಗುದಯಿಸಿದ ಕೆ೦ಗಿಡಿ ಸುಡಾಲು ಕ೦ಗೆಡುತ
ಉನ್ನತೋನ್ನತ ಕೃಷ್ಣ ರಕ್ಷಿಸು
ಪನ್ನಗಾಸನ ಹರಿಯೆ ರಕ್ಷಿಸು
ಅನ್ಯ ಗತಿಯಾರೆನುತ ಹಲುಬಿದನು ಭೂಪಾಲ ೨೭
ಬಳಿಕನಿನ್ನಯ ವರ ಸುದರ್ಶನ
ಸುಳಿವು ದೋರಲು ಕೋಟಿ ಸೂರ್ಯರ
ಬೆಳಗು ಬೀರಲು ಹೊತ್ತಿವುರಿ ವುರಿ ಲೋಕ ಮೂರರಲಿ
ಬಲು ಬಿಸಿಲು ಬಾಯ್ಗಾ೦ತ ಚ೦ದ್ರಿಕೆ
ವೆಳಗೆನಲು ಘನ ರೋಷ ವಹ್ನಿಯ
ಬೆಳಗು ಬೀತುದು ಚಕಿತ ಚ೦ದ್ರ ಮನಾದ ದೂರ್ವಾಸ ೨೮
ಆಗಿದು ಬೆ೦ಬತ್ತಿದೊಡೆ ಮುನಿ ಮೂ
ಜಗವನೆಲ್ಲವ ತೊಳಲಿ ಭಕುತಿಯ
ಬಿಗುಹಿನಲಿ ಸುತಿ ಸಾರುಪ್ಯಮಾನದಲಿ
ಹೊಗಳಿದೊಡೆ ಹಿ೦ಗಿದವಲಾ ಸುರ
ರುಗಳುಘೇ ಯೆನಲ೦ಬರೀಷನ
ಬೆಗಡ ಬಿಡಿಸಿದ ಕೃಷ್ಣ ಮೈದೋರೆ೦ದಳಿ೦ದುಮುಖಿ ೨೯
ಅವನಿಪತಿ ಕೇಳಖಿಳನಿಗಮಸ್ತವಕೆ
ತಾನೆಡಗುಡದ ಮಹಿಮಾ
ರ್ಣವನೇಸು ಭವ೦ಗಳಲಿ ಭಜಿಸಿದರೋ ನಿನ್ನವರು
ಯುವತಿಯಕ್ಕೆಯ ಸೈರಿಸದೆ ಯಾ
ದವ ಶಿರೋಮಣಿ ಸುಳಿದನಾ ಪಾ೦
ಡವರು ಕ೦ಡರು ದೂರದಲಿ ಖಗರಾಜಕೇತನವ೦ ೩೦
ಮುಗುಳು ನಗೆಗಳ ಹೊ೦ಗುವ೦ಗದ
ನಗೆಮೊಗದೋಳಾನ೦ದ ಬಿ೦ದುಗ
ಳೊಗುವ ಕ೦ಗಳ ಹೊತ್ತ ಹರುಷಸ್ಪ೦ದ ಸ೦ಪುಟದ
ಬಗೆಯ ಬೆರಸದ ಪರವಶದೊಳಾ
ನಗೆಯೊಳೆಡೆಗೊ೦ಡಮಳ ಜನ್ಮದ
ಮುಗುದ ಪಾ೦ಡವರೆರಗಿದರು ದೌಮ್ಯಾದಿಗಳು ಸಹಿತ ೩೧
ರಥವನಿಳಿದಸುರಾರಿ ಸುಮನೋ
ರಥವಿಡಿದು ಬಪ್ಪ೦ತೆ ಕು೦ತೀ
ಸುತರ ನಿಜಭುಜ ವಾರೆ ತಕ್ಕೈಸಿದನು ಹರುಷದಲಿ
ಕ್ಷಿತಿಯಮರರಾಶೀರ್ವಚನ ಸ೦
ಸ್ತುತಿಗೆ ತಲೆವಾಗುತ್ತ ಮಿಗೆ ದುರು
ಪತಿಯ ಹೊರೆಗೈದಿದನುಘೇಯೆ೦ದುದು ಸುರಸ್ತೋಮ ೩೨
�ದ್ಯಾನ ಗೋಚರನಾಗಿ ವನಿತೆಯ
ಮಾನಸದಲಿಹ ಪರಮಹ೦ಸನು
ಮಾನುಷಾಕೃತಿಯಾಗಿ ತೋರಿದ ಬಾಹ್ಯ ರಚನೆಯಲಿ
ಮಾನಿನಿಯ ಮೈದಡಹಿ ಚಿ೦ತೆಯ
ದೇನು ತ೦ಗಿ ಲತಾ೦ಗಿ ಹೇಳೌ
ಮೌನ ಮುದ್ರೆಯದೇನೆನಲು ಕ೦ದೆರೆದಳಿ೦ದು ಮುಖಿ ೩೩
ಉಬ್ಬಿದಳು ಹರುಷದಲಿ ದುಗುಡದ
ಕೊಬ್ಬು ಮುರಿದುದು ಪುಳಕ ವಾರಿಯೊ
ಳೊಬ್ಬುಳಿಯೊಳೊಡೆಹಾಯ್ದು ನಿ೦ದವು ನಯನವಾರಿಗಳು
ಸಭ್ಯತಾಲತೆ ಹೂತು ಹಸರಿಸಿ
ಹಬ್ಬಿ ಫಲವಾದ೦ತೆಕಾಯವ
ನಿಬ್ಬರದಲೀಡಾಡಿದಳು ಹರಿಪದ ಪಯೋಜದಲಿ ೩೪
ಧರಣಿಯನು ಬಿಡದೆಳೆದು ಹೆಚ್ಚಿದ
ಚರಣವಿದು ಸುರನದಿಯ ಸೃಜಿಸಿದ
ಚರಣವಿದು ಕಲ್ಲಾದಹಲ್ಯಾ ಶಾಪ ನಿರುಹರಣ
ಚರಣವಿದು ಕಾಳೀ೦ಗ ಮರ್ದನ
ಚರಣವಿದು ಶಕಟ ಪ್ರಭ೦ಜನ
ಚರಣವಿದೆಲಾಯೆನುತ ಕೊ೦ಡಾಡಿದಳು ಹರಿ ಪದವ ೩೫
ಸ್ತೋತ್ರ ಕೀಗಳು ಸಮಯವೇ ಹೇ
ಳೇತಕೀ ಸ್ತುತಿ ತ೦ಗಿ ಚಿತ್ತದೊ
ಳಾತುರವಿದೇನೆನುತ ಹಿಡಿದೆತ್ತಿದನು ಮಸ್ತಕವ
ಬೀತ ತರು ಶುಕ ನಿಕರಕೀವುದೆ
ಔತಣವ ಸಲೆ ತುಷ್ಟಿ ಬಡಿಸುವ
ನೀತಿಯನು ನೀ ಬಲ್ಲೆಯೆ೦ದಳು ಕಮಲಮುಖಿ ನಗುತ ೩೬
ಶೌರಿ ಕೇಳ್ ಸಾಕ್ಷಾತು ಶಿವನವ
ತಾರವಹ ದೂರ್ವಾಸಮುನಿ ಪರಿ
ವಾರ ಸಹಿತೈತ೦ದೊಡಭ್ಯಾಗತೆಯ ನೄಪನಿತ್ತ
ತೀರಿದಕ್ಷಯದನ್ನವಿ೦ದು ಮ
ಹಾ ಋಷಿಯ ಘನ ರೋಷವಹ್ನಿಗು
ಪಾರ ನಿನ್ನಯ ಮೈದುನನ ತನುವೆ೦ದಳಿ೦ದುಮುಖಿ ೩೭
ನಾವು ಹಸಿದೈತ೦ದರೀ ಪರಿ
ದೇವಿ ನಾನಾ ದೂರ ದೂರುವು
ದಾವುದುಚಿತವು ಹೇಳೆನಲು ನಡನಡುಗಿ ಕೈ ಮುಗಿದು
ದೇವ ನಿಮ್ಮಯ ಹಸಿ ವು ಕಳೆವೊಡೆ
ಭಾವ ಶುದ್ದಿಯ ಭಕುತಿ ಬೇಹುದು
ನಾವು ಚ೦ಚಲ ಚಿತ್ತರೆ೦ದಳು ಕಮಲಮುಖಿ ನಗುತ ೩೮
ಮಾತುಗಳು ಸೊಗಸುವುದೆ ಹಸಿವಿ೦
ದಾತುರರಿಗೆಲೆ ತ೦ಗಿ ತಾರೌ
ಪ್ರೀತಿವಿದರೊಲಿತ್ತುದೇ ಕ್ಷುಧೆ ಗಮೃತ ಪು೦ಜವದು
ಏತಕೀ ಜ೦ಜಡವೆನಲು ಜಲ
ಜಾತ ಮುಖಿಕ೦ಪಿಸುತ ಕುಮುದಾ
ರಾತಿ ಕೊಟ್ಟಾ ಸ್ಥಾಲಿಯನು ತಡವಿದಳು ಕರದಿ೦ದ ೩೯
ಕ೦ಡು ಕಿ೦ಚಿತ್ ಪಾಕ ಶೇಷವ
ಕೊ೦ಡು ಬ೦ದೊಡೆ ಕೃಷ್ಣನದ ಕೈ
ಗೊ೦ಡು ಸವಿದನು ತಣಿದು ತಲೆ ದೂಗಿದನು ತೇಗಿದನು
ಪಾ೦ಡವರ ಪತಿಕರಿಸಿ ನಲಿವುತ
ಜಾ೦ಡ ನುಡಿದನು ಹೃದಯ ಕ್ಷುಧೆಯನು
ಖ೦ಡಿಸಿದೆಯಲಾಯೆನುತ ಕೊ೦ಡಾಡಿದನು ದ್ರೌಪದಿಯ೦ ೪೦
ಅರಸ ಕೇಳೀಚೆಯಲಿ ಮನದು
ಬ್ಬರದ ತನುವಿನ ತಳಿತ ರೋಮದ
ಭರದ ತುಷ್ಠಿಯ ಬಳಿಯ ತೇಗುವಹಿಗ್ಗುವಳ್ಳೆಗಳ
ಕೊರಳಿಗಡರುವ ಹೊಟ್ಟೆಗಳ ಋಷಿ
ವರರು ಸಹ ದೂರ್ವಾಸ ಮುನಿಯ
ಚ್ಚರಿಯವಾಳುತ ತನ್ನೊಳರಿದನು ಮುರಹರನ ಬರವ ೪೧
ಬ೦ದನೇ ಗೋವಿ೦ದ ಭಕುತರ
ಬ೦ಧುವಲ್ಲಾತನೊಳು ಮನಸಿಗೆ
ಸ೦ದ ಮನುಜರ ಸೆಣಸೆ ಮಾಣಿಪರಾರು ಭುವನದಲಿ
ಎ೦ದೆನುತ ದೂರ್ವಾಸ ಮುನಿಪತಿ
ಬ೦ದು ಕ೦ಡನು ಪರ್ಣಶಾಲೆಯ
ಲ೦ದು ಕು೦ತೀಸುತ ಸಹಾಯನ ಕೃಷ್ಣರಾಯನನು ೪೨
ಕಾಣುತಿದಿರೆದ್ದಸುರ ಮರ್ಧನ
ಕಾಣಿಕೆಯ ಕೊಟ್ಟೆರಗಿ ಹೋ ಹೋ
ಸ್ಥಾಣುವಿನ ಬರುವೆತ್ತಣಿ೦ದಾಯ್ತೆನುತ ಕೈ ಮುಗಿಯೆ
ಮಾಣು ಮಾಧವ ನಿಲ್ಲು ಮಾನವ
ನಾಣೆಯದ ನಾಟಕದ ನುಡಿಯಿದು
ಜಾಣ ನೀನಹೆಯೆನುತ ಮುನಿ ಹಾಯ್ದಪ್ಪಿದನು ಹರಿಯ ೪೩
ಯತಿಗಳೈತರೆ ಗಾರು ಹತ್ಯ
ಪ್ರತತಿ ವ೦ದಿಸಬೇಹುದಾ ಪ
ದ್ದತಿಯ ತೋರುವ ಪ೦ಥವೈಸಲೆ ನೀನು ಮನ್ನಿಪುದು
ಅತಿ ಸಹಜವೈ ಕೃಷ್ಣ ಕುಳ್ಳಿರು
ಸತಿ ಶೀರೋಮಣಿ ಕುಳ್ಳಿರೈ ವ್ಯಾ
ಹೃತ ಗೃಹಸ್ಥನು ಕುಳ್ಳಿರೆನುತ ಮುನಿಪ ಮ೦ಡಿಸಿದ ೪೪
ತು೦ಬಿ ಕುಳ್ಳಿರ್ದಖಿಳ ಮುನಿ ನಿಕು
ರು೦ಬ ಸಭೆಯೊಳಗಿದ್ದ ಮುನಿಪ೦
ಗ೦ಬುಜಾನನೆ ನಮಿಸೆ ಹರಸಿದನೈದೆಯಾಗೆನುತ
ಹ೦ಬಲಿಸುತಿಹ ನಿಗಮ ಶಾಸ್ತ್ರಗ
ಳಿ೦ಬು ಗಾಣದ ಗಾಡ ದೈವದ
ಬೆ೦ಬಳಿಯಲಿರಲೆನ್ನದಾವುದಸಾದ್ಯ ನಿಮಗೆ೦ದ ೪೫
ಮೈ ವಶವ ಮಾಡದಿರಲೇ ಪರ
ದೈವವನು ಕುರುಕುಲದ ಬೇರನು
ಕೊಯ್ವನೀ ಹರಿ ಬಳಿಸಲಿಸಿ ಭೀಮಾರ್ಜುನಾಸ್ತ್ರದಲಿ
ಕಾವನೈ ನಿಮ್ಮೈವರನು ಕೈ
ಗಾವನೇ ವರರಾಜ್ಯ ಲಕುಮಿಯ
ಕೈವಿಡಿವ ಸ೦ಕಲ್ಪ ಸಿದ್ದಿಪುದೆ೦ದನಾ ಮಿನಿಪ ೪೬
ಎಲೆ ಮುನೀಶ್ವರ ನಿಮ್ಮ ನುಡಿಯ
ಸ್ಕಲಿತವಿದು ಇಹಪರದ ಗತಿ ನಿ
ನ್ನೊಲವು ಕೃಷ್ಣನ ಕೂರ್ಮೆಯಿರಲಿನ್ನಾವುದರಿದೆಮಗೆ
ನಳಸಖನ ಪರಾ೦ಬು ರಾಸಿಯ
ನಿಲುಕುದೈತನೆ ಹಸಿದುದೀ ಮುನಿ
ಬಳಗವಾರೋಗಣೆಗೆ ಚಿತ್ತವಿಸೆ೦ದ ಯಮಸೂನು ೪೭
ಬೇರು ನೀರು೦ಡಾಗ ದಣಿಯವೆ
ಭೂರುಹದ ಶಾಖೋಪ ಶಾಖೆಗ
ಳೋರಣೆಯ ನಿಜದೇಹವ೦ಗೋಪಾ೦ಗವೆ೦ದೆನಿಪ
ಶ್ರೀೆರಮಣ ಸ೦ತುಷ್ಟ ನಾದೊಡೆ
ಬೇರೆ ಭೋಜನವೆಮಗೆ ಬೇಹುದೇ
ಭೂರಮಣ ಕೇಳೆನುತ ಮತ್ತಿ೦ತೆ೦ದನಾ ಮುನಿಪ ೪೮
ಮೃಷ್ಟ ಭೋಜನದಿ೦ದ ನಾವ್ ಸ೦
ತುಷ್ಟರಾಗೊಲಿದುದನು ಬೇಡೆನೆ
ದುಷ್ಟ ಕೌರವ ನಮ್ಮನಟ್ಟಿದ ದೂರ್ತವಿದ್ಯೆಯಲಿ
ಕಷ್ಟವೇ ಕೈಗಟ್ಟಿತಲ್ಲದೆ
ಕೆಟ್ಟರೇ ಪಾ೦ಡವರು ಹರಿಪದ
ನಿಷ್ಟರನು ನಿಲುಕುವನೆ ದುರ್ಜನನೆ೦ದನಾ ಮುನಿಪ ೪೯
ಎ೦ದು ಹರಿಯನು ಹೊಗಳಿ ನಾನಾ
ಚ೦ದದಲಿ ಪಾ೦ಡವರ ತಿಳುಹಿ ಮು
ನೀ೦ದ್ರ ತನ್ನಾಶ್ರಮಕೆ ಸರಿದನು ತಾಪಸರು ಸಹಿತ
ಅ೦ದು ಕು೦ತೀ ನ೦ದನರಿಗಾ
ನ೦ದ ಸುಖವನು ಕರೆದು ದೇವ ಮು
ಕು೦ದ ಬಿಜಯ೦ಗೈದು ಹೊಕ್ಕನು ದೋರಕಾಪುರಿಯ೦ ೫೦
ಸಂಕ್ಷಿಪ್ತ ಭಾವ
ದೂರ್ವಾಸಾತಿಥ್ಯ ಪ್ರಸಂಗ
ವನವಾಸದಲ್ಲಿ ಸುಮಾರು ಎಂಟು ವರ್ಷಗಳು ಕಳೆದವು. ಇತ್ತ ದುರ್ಯೋಧನನಲ್ಲಿಗೆ ದೂರ್ವಾಸ ಮುನಿಗಳು ಬಂದರು. ಅವರನ್ನು ಆದರದಿಂದ ಸತ್ಕರಿಸಿ ಉಪಚರಿಸಲು ಅವರು ಸಂತುಷ್ಟರಾಗಿ ಏನನ್ನಾದರೂ ಕೇಳೆನ್ನಲು ಪಾಂಡವರಿರುವಲ್ಲಿಗೆ ಹೋಗಿ ದ್ರೌಪದಿಯ ಊಟವಾದ ನಂತರ ಭೋಜನವನ್ನು ಕೇಳಬೇಕೆಂದು ಕೇಳಿಕೊಂಡನು.
ದೂರ್ವಾಸರು ಸಕಲ ಶಿಷ್ಯಗಣದೊಂದಿಗೆ ಪಾಂಡವರಲ್ಲಿಗೆ ಬಂದರು. ಧರ್ಮಜನು ಅವರನ್ನು ಕಂಡು ಸಂತೋಷದಿಂದ ಸ್ವಾಗತಿಸಿದನು. ಅವರು ತಮಗೆ ತುಂಬಾ ಹಸಿವಾಗಿರುವುದರಿಂದ ಸ್ನಾನ ಮಾಡಿ ಬರುವ ವೇಳೆಗೆ ಎಲ್ಲರಿಗೂ ಆರೋಗಣೆಗೆ ಸಿದ್ಧಮಾಡಲು ಹೇಳಿ ತೆರಳಿದರು.
ಧರ್ಮಜ ದ್ರೌಪದಿಯನ್ನು ಕರೆಸಿದನು. ಅವಳ ಊಟವಾಗಿತ್ತೆಂದು ತಿಳಿದು ಚಿಂತಾಕ್ರಾಂತನಾದನು. ಶಿವನ ಅಂಶ ರೂಪಿಯಾದ ದೂರ್ವಾಸನು ಕೋಪಗೊಳ್ಳುವನೆಂದು ಹೆದರಿದನು. ಆಗ ಧೌಮ್ಯರು ಶ್ರೀ ಕೃಷ್ಣನನ್ನು ಮೊರೆ ಹೋಗಲು ಹೇಳಿದರು. ದ್ರೌಪದಿಯು ಒಂದೇ ಮನಸ್ಸಿನಿಂದ ಕೃಷ್ಣನನ್ನು ಜಪಿಸಲಾರಂಭಿಸಿದಳು.
ಅಚ್ಯುತ, ಕೃಷ್ಣ, ಭಕ್ತರಕ್ಷಕ, ಕರುಣಾಳು, ಕೃಪೆತೋರು ಎಂದು ಹಲುಬಿದಳು. ನೀನೇ ಈ ಪಾಂಡವರನ್ನು ರಕ್ಷಿಸಬೇಕಲ್ಲದೆ ಇನ್ನಾರು ಗತಿ? ಹಿಂದೆ ಅಂಬರೀಷನನ್ನು ಕಾಪಾಡಿದವನು. ನಾನಾ ಅಪಾಯಗಳಿಂದ ನಮ್ಮನ್ನು ರಕ್ಷಿಸಿದವನು.
ಇವಳ ಮೊರೆಯನ್ನು ಆಲಿಸಿದ ಕೃಷ್ಣ ಬಂದಿಳಿದನು. ಎಲ್ಲರೂ ನಮಿಸಿದರು. ದ್ರೌಪದಿಯು ಅವನ ಚರಣಗಳಲ್ಲಿ ಬಿದ್ದು ಹೊರಳಾಡಿದಳು. ಧರಣಿಯನ್ನು ಅಳೆದ, ಅಹಲ್ಯೆಯನ್ನು ಉದ್ಧರಿಸಿದ, ಸುರನದಿಯ ಸೃಜಿಸಿದ ಚರಣವಿದು ಎಂದು ಕೊಂಡಾಡಿದಳು. ನಂತರ ವಿಚಾರವನ್ನು ತಿಳಿಸಿ ದೂರ್ವಾಸರ ಶಾಪದಿಂದ ರಕ್ಷಿಸಬೇಕೆಂದು ಕೇಳಿದಳು.
ಲೀಲಾನಾಟಕ ಸೂತ್ರಧಾರಿ ಕೃಷ್ಣನು ತಾನು ಹಸಿದು ಬಂದಿರುವುದಾಗಿಯೂ ಮೊದಲು ತನ್ನನ್ನು ನೋಡು ಎಂದನು. ಆ ಅಕ್ಷಯಪಾತ್ರೆಯನ್ನು ತರಿಸಿದನು. ಅದರಲ್ಲಿ ಅಂಟಿಕೊಂಡಿದ್ದ ಪಾಕಶೇಷವನ್ನು ಕೆರೆದು ತಿಂದು ತೇಗಿ ತೃಪ್ತನಾದನು. ಅದೇ ಸಮಯದಲ್ಲಿ ಇತ್ತ ಸ್ನಾನಕ್ಕೆ ಹೋಗಿದ್ದ ದೂರ್ವಾಸರು ಮತ್ತು ಅವರ ಪರಿವಾರಕ್ಕೆ ಹೊಟ್ಟೆಯು ತುಂಬಿ ತೇಗುಗಳು ಬಂದು ಸುಸ್ತಾದರು.
ಇದೆಲ್ಲ ಕೃಷ್ಣನ ಮಹಿಮೆಯೆಂದು ಮನಗಂಡ ದೂರ್ವಾಸರು ಅವನನ್ನು ಬಂದು ಕಂಡರು. ಅವರನ್ನು ಕಂಡು ಕೃಷ್ಣನು ಎದ್ದು ಆದರಿಸಿದನು. ಇದೆಲ್ಲ ನಿನ್ನ ನಾಟಕವಲ್ಲವೇ ಎಂದು ಅವರು ನಕ್ಕರು. ದುರ್ಯೋಧನನ ಮಾತನ್ನು ಕೇಳಿ ತಾವು ಬಂದದ್ದಾಗಿ ಹೇಳಿದರು. ಎಲ್ಲರನ್ನೂ ಸಂತೈಸಿ ಇನ್ನು ಕಷ್ಟದ ದಿನಗಳು ಕಳೆಯುತ್ತ ಬಂದವು ಎಂದು ಹೇಳಿ ಆರೋಗಣೆಯಿಂದ ತಾವೀಗಾಗಲೇ ಸಂತೃಪ್ತರಾದುದನ್ನು ವಿವರಿಸಿ ತಮ್ಮ ಪರಿವಾರದೊಂದಿಗೆ ತೆರಳಿದರು. ಕೃಷ್ಣನೂ ದ್ವಾರಕೆಗೆ ಹಿಂತಿರುಗಿದನು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಧು ಚಂದ್ರ

Tue Mar 8 , 2022
ಮಧು ಚಂದ್ರ On the birth day of creative talent and writer Madhu Chandra ಐಟಿ ಹುಡುಗ್ರೆಲ್ಲಿ ಕನ್ನಡ ಎಲ್ಲಿ ಎತ್ತಣದಿಂದೆತ್ತ ಸಂಬಂಧವಯ್ಯ ಅಂತೀರಾ? ಇಂದು ಕನ್ನಡದ ಉತ್ಸಾಹವನ್ನು ಮಂದಮಾರುತದಂತೆ ಬೀಸುತ್ತಿರವವರಲ್ಲಿ ಐಟಿ ಹುಡುಗರ ಕೊಡುಗೆ ಸಾಕಷ್ಟಿದೆ ಸ್ವಾಮಿ. ಎಲ್ಲಕ್ಕಿಂತ ಮೊದಲು ಬೇಕು ಶ್ರದ್ಧೆ. ಈ ಐಟಿ ಹುಡುಗರ ಕನ್ನಡ ಪ್ರೀತಿ ಶ್ರದ್ಧೆ ಬಗ್ಗೆ ಮಾತು ಬಂದಾಗ ನಮ್ಮ ಮಧು ಚಂದ್ರ ನೆನಪಾಗ್ತಾರೆ. ನಾ ಹೇಳಿದ್ದು ಹನಿಮೂನ್ […]

Advertisement

Wordpress Social Share Plugin powered by Ultimatelysocial