ಪರಿಷತ್ ಚುನಾವಣೆ : ಕಾಂಗ್ರೆಸ್ ನಲ್ಲಿ ಜೋರಾಗಿದೆ ಟಿಕೆಟ್ ಲಾಬಿ

 

ಬೆಂಗಳೂರು, ಮೇ 23- ವಿಧಾನ ಪರಿಷತ್ ಚುನಾವಣೆಯಲ್ಲಿ ಅಚ್ಚರಿಯ ಬೆಳವಣಿಗೆಗಳು ನಡೆಯುತ್ತಿದ್ದು, ಹೊಸ ಹೊಸ ಹೆಸರುಗಳು ಪ್ರಸ್ತಾಪವಾಗುತ್ತಿದೆ. ರಾಜ್ಯಸಭೆಗೆ ಬಹುತೇಕ ಜೈರಾಮ್ ರಮೇಶ್ ಮರು ಆಯ್ಕೆಯಾಗುವ ಸಾಧ್ಯತೆ ಇದೆ.

ವಿಧಾನ ಪರಿಷತ್‍ನ ಎರಡು ಸ್ಥಾನಗಳಿಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕ್ರಿಶ್ಚಿಯನ್ ಸಮುದಾಯದ ಐವಾನ್ ಡಿ ಸೋಜಾ, ತಮ್ಮ ಆಪ್ತರಾದ ವಿ.ಎಸ್.ಉಗ್ರಪ್ಪ, ಮಾಜಿ ಸಚಿವರ ಎಂ.ಆರ್.ಸೀತಾರಾಮ್ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ.

ಎಂ.ಆರ್.ಸೀತಾರಾಂ ಅವರಿಗೆ ಅವಕಾಶ ನೀಡುವುದರಿಂದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಆರ್ಥಿಕ ಬಲ ಬಂದಂತಾಗುತ್ತದೆ. ಉಗ್ರಪ್ಪ ಈ ಹಿಂದೆ ಡಿ.ಕೆ.ಶಿವಕುಮಾರ್ ಕುರಿತು ಆಕ್ಷೇಪಾರ್ಹ ಸಂಭಾಷಣೆಯ ಭಾಗವಾಗಿ ಪಕ್ಷಕ್ಕೆ ಮುಜುಗರ ತಂದಿದ್ದರು. ಹಾಗಾಗಿ ಅವರ ಆಯ್ಕೆಗೆ ವಿರೋಧ ವ್ಯಕ್ತವಾಗಿದೆ.

ಆದರೆ ವಿಧಾನ ಪರಿಷತ್‍ನಲ್ಲಿ ಬಿಜೆಪಿಯನ್ನು ಪ್ರತಿಬಂಸಲು ವಾಗ್ಮಿಗಳ ಅಗತ್ಯ ಇದೆ. ಹಾಗಾಗಿ ಉಗ್ರಪ್ಪರಿಗೆ ಅವಕಾಶ ನೀಡಬೇಕು ಎಂಬ ವಾದಗಳು ಕೇಳಿ ಬಂದಿವೆ. ಕ್ರಿಶ್ಚಿಯನ್ ಸಮುದಾಯಕ್ಕೆ ಅವಕಾಶ ನೀಡುವುದಾದರೆ , ಮಾಜಿ ಸದಸ್ಯ ಐವಾನ್ ಡಿ ಸೋಜಾ ಅವರಿಗೆ ಟಿಕೆಟ್ ನೀಡಬೇಕು ಎಂಬ ಒತ್ತಾಯವಿದೆ. ಈ ನಡುವೆ ಲಿಂಗಾಯಿತ ಸಮುದಾಯದ ಎನ್.ತಿಪ್ಪಣ್ಣ ಅವರ ಹೆಸರನ್ನು ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಾರೆ.

ಕಲಬುರಗಿ ಜಿಲ್ಲೆಯವರಾದ ತಿಪ್ಪಣ್ಣ ಅವರಿಗೆ ಮಲ್ಲಿಕಾರ್ಜುನ ಖರ್ಗೆ ಅವರ ಬೆಂಬಲವೂ ಸಿಗಬಹುದು ಎಂಬ ಅಂದಾಜುಗಳಿವೆ. ಈ ಮೂಲಕ ಎಸ್.ಆರ್.ಪಾಟೀಲ್ ಬದಲಿಗೆ ಪರ್ಯಾಯ ಲಿಂಗಾಯಿತ ನಾಯಕತ್ವ ಕ್ಕೆ ಸಾಥ್ ಕೊಟ್ಟಂತಾಗುತ್ತದೆ. ವೀರಶೈವ ಲಿಂಗಾಯಿತ ಸಂಘಟನೆಯಲ್ಲಿ ಸಕ್ರಿಯವಾಗಿರುವ ತಿಪ್ಪಣ್ಣ ಪಕ್ಷಕ್ಕೆ ಲಾಭದಾಯಕವಾಗುತ್ತಾರೆ ಎಂಬ ಲೆಕ್ಕಾಚಾರಗಳು ನಡೆದಿವೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಅಲ್ಪಸಂಖ್ಯಾತರ ಕೋಟಾದಲ್ಲಿ ಮುಸ್ಲಿಂ ಸಮುದಾಯದ ಮನ್ಸೂರ್ ಆಲಿಖಾನ್, ಲಿಂಗಾಯಿತ ಸಮುದಾಯದಲ್ಲಿ ಎಸ್.ಆರ್.ಪಾಟೀಲ್, ಗೌಡ ಸಮುದಾಯದ ಬಿ.ಎಲ್.ಶಂಕರ್ ಹಾಗೂ ಕೊಡಗು ಭಾಗದ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಅವರ ಹೆಸರು ಪ್ರಸ್ತಾಪಿಸಿದ್ದಾರೆ.

ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿ ಆಯ್ಕೆಯಲ್ಲಿ ಜಾತಿ ಪೈಪೋಟಿ, ನಾಯಕತ್ವ ಹಿಡಿತದ ಸಂಘರ್ಷ ವ್ಯಾಪಕವಾಗಿದೆ. ಲಿಂಗಾಯಿತ ಸಮುದಾಯದಲ್ಲಿ ಎಸ್.ಆರ್.ಪಾಟೀಲ್ ಅಥವಾ ತಿಪ್ಪಣ್ಣ ಎಂಬ ಜಿದ್ದಾಜಿದ್ದಿ ನಡೆದರೆ, ಅಲ್ಪಸಂಖ್ಯಾತರ ಖೋಟಾದಲ್ಲಿ ಐವಾನ್ ಡಿ ಸೋಜಾ, ಮನ್ಸೂರ್ ಖಾನ್ ಅವರ ನಡುವೆ ಪೈಪೋಟಿ ಇದೆ. ಇಲ್ಲಿ ಆಕಾಂಕ್ಷಿಗಳ ನಡುವಿನ ಸ್ಪರ್ಧೆ ಎನ್ನುವುದಕ್ಕಿಂತ ನಾಯಕರ ಪ್ರತಿಷ್ಠೆ ಮತ್ತು ಪಕ್ಷದ ಮೇಲಿನ ಹಿಡಿತದ ಪ್ರಶ್ನೆ ಎದುರಾಗಿದೆ. ಏನೇ ಆದರೂ ಸಂಜೆಯ ಒಳಗೆ ಅಭ್ಯರ್ಥಿಗಳ ಆಯ್ಕೆ ಅಖೈರುಗೊಳ್ಳಬೇಕಿದೆ. ನಾಳೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.

ರಾಜ್ಯ ಸಭೆಯ ಒಂದು ಸ್ಥಾನಕ್ಕೆ ಹಿಂದಿನ ಅಧ್ಯಕ್ಷ ಜೈರಾಮ್ ರಮೇಶ್ ಅವರು ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದ್ದರೂ, ಹಾಲಿ ಸದಸ್ಯರಾಗಿಯೇ ನಿಧನರಾದ ಆಸ್ಕರ್ ಫರ್ನಾಂಡೀಸ್ ಅವರ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಜೊತೆಗೆ ತುಮಕೂರಿನ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ, ಮಾಜಿ ಸದಸ್ಯ ಪ್ರೊ.ರಾಜೀವ್ ಗೌಡ, ಮಾರ್ಗರೇಟ್ ಆಳ್ವ ಅವರ ಪುತ್ರ ನಿವೇದಿತ್ ಆಳ್ವ ಕೂಡ ಲಾಬಿ ನಡೆಸುತ್ತಿದ್ದಾರೆ.

ವಿಧಾನ ಪರಿಷತ್‍ನ ಎರಡು ಸ್ಥಾನಗಳಿಗೆ ನಿರ್ಗಮಿತ ಸದಸ್ಯರಾದ ಅಲ್ಲಂ ವೀರಭದ್ರಪ್ಪ, ಆರ್.ಬಿ.ತಿಮ್ಲಾಪುರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರ್‍ನಾಥ್, ಎಸ್.ಮನೋಹರ್, ಅನಿವಾಸಿ ಭಾರತೀಯ ಘಟಕದ ಉಪಾಧ್ಯಕ್ಷೆ ಆರತಿ ಕೃಷ್ಣ ಸೇರಿದಂತೆ ಹಲವು ಮಂದಿ ಸ್ಪರ್ಧೆಯ ಸಾಲಿನಲ್ಲಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವೇಯ್ಟ್ ಅಲರ್ಜಿ: ಜೈಲಿನಿಂದ ಆಸ್ಪತ್ರೆಗೆ ಶಿಫ್ಟ್ ಆದ ನವಜೋತ್ ಸಿಧು..!

Mon May 23 , 2022
ಚಂಡೀಗಢ: ಪಂಜಾಬ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸದ್ಯ ಜೈಲಿನಲ್ಲಿದ್ದಾರೆ. ಕಳೆದ 35 ವರ್ಷದ ಹಿಂದಿನ ಕೇಸ್ ನಲ್ಲಿ ಜೈಲುಪಾಲಾಗಿದ್ದು, ಸದ್ಯ ಅನಾರೋಗ್ಯದ ಕಾರಣ ಜೈಲಿನಿಂದ ಆಸ್ಪತ್ರೆಗೆ ಶಿಫ್ಟ್ ಆಗಿದ್ದಾರೆ. ವೇಯ್ಟ್ ಅಲರ್ಜಿಯಿಂದ ಬಳಲುತ್ತಿರುವ ನವಜೋತ್ ಸಿಂಗ್ ಸಿಧು, ಪಟಿಯಾಲ ಸೆಂಟ್ರಲ್ ಜೈಲಿನಿಂದ ರಾಜೇಂದ್ರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಸಿಧು ಪರ ವಕೀಲರು ಮಾಹಿತಿ ನೀಡಿದ್ದಾರೆ. ನವಜೋತ್ ಸಿಂಗ್ ಸಿಧು, 1988ರಲ್ಲಿ ರಸ್ತೆ ಮಧ್ಯೆ ನಿಲ್ಲಿಸಲಾಗಿದ್ದ ಜಿಪ್ಸಿಯಲ್ಲಿ ಕುಳಿತಿದ್ದರು. […]

Advertisement

Wordpress Social Share Plugin powered by Ultimatelysocial