ಕೊಲಂಬಿಯಾ:: ಕೊಲಂಬಿಯಾದ ಟ್ರಾನ್ಸ್ಜೆಂಡರ್ವೊಬ್ಬರು ಸದ್ಯದಲ್ಲೇ ತಾಯಿಯಾಗಲಿದ್ದಾರೆ. ಹೌದು, ಇದು ವಿಚಿತ್ರ ಎನಿಸಿದರೂ ಸತ್ಯ. ಟ್ರಾನ್ಸ್ಜೆಂಡರ್ ಮಾಡೆಲ್ವೊಬ್ಬರು ‘ಗರ್ಭಿಣಿ’ಯಾಗಿರುವ ತನ್ನ ಗಂಡನ ಹೊಟ್ಟೆಗೆ ಖುಷಿಯಿಂದ ಮುತ್ತು ನೀಡುವ ಹೃದಯಸ್ಪರ್ಶಿ ಫೋಟೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶೇರ್ ಮಾಡಿದ್ದಾರೆ. ಅಂದ ಹಾಗೆ ಟ್ರಾನ್ಸ್ಜೆಂಡರ್ ಆಗಿರುವ ಈ ವ್ಯಕ್ತಿಗೆ ಈಗ 8 ತಿಂಗಳು.ಡನ್ನಾ ಸುಲ್ತಾನಾ ಮತ್ತು ಈಸ್ಟ್ಬನ್ ಲಾಂಡ್ರೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿರುವ ಜೋಡಿ.
ಜನಿಸಿದಾಗ ಹೆಣ್ಣಾಗಿದ್ದು ನಂತರ ಲಿಂಗಪರಿವರ್ತನೆ ಮಾಡಿಸಿಕೊಂಡಿದ್ದ ಈಸ್ಟ್ಬನ್ ಲಾಂಡ್ರೋ ತಾಯ್ತನದ ಎಲ್ಲ ಖುಷಿಯನ್ನು ಅನುಭವಿಸುತ್ತಿದ್ದಾರೆ.2 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇರುವ ತಮ್ಮ ಇನ್ಸ್ಟಾಗ್ರಾಂನಲ್ಲಿ ಮಾಡೆಲ್ ಡನ್ನಾ ಸುಲ್ತಾನಾ ಹೃದಯ ತಟ್ಟುವ ಫೋಟೊವನ್ನು ಹಂಚಿಕೊಂಡಿದ್ದಾರೆ. ‘Love Is Love’ ಎಂಬ ಹ್ಯಾಶ್ಟ್ಯಾಗ್ನಿಂದ ಈ ಖುಷಿಯ ವಿಷಯವನ್ನು ಡನ್ನಾ ಶೇರ್ ಮಾಡಿದ್ದಾರೆ. ಮತ್ತೊಂದು ಕುತೂಹಲಕಾರಿ ವಿಚಾರ ಏನೆಂದರೆ ಈಸ್ಟ್ಬನ್ ಲಾಂಡ್ರೋ ಸಹಜ ರೀತಿಯಲ್ಲೇ ಗರ್ಭ ಧರಿಸಿದ್ದಾರೆ ಅನ್ನೋದು.8 ತಿಂಗಳಾಗುತ್ತಿದ್ದಂತೆ ಈಸ್ಟ್ಬನ್ ಅವರನ್ನು ಡನ್ನಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಗರ್ಭದಲ್ಲಿರುವ ಮಗುವಿನ ಗಾತ್ರ ಸ್ವಲ್ಪ ದೊಡ್ಡದಿದೆ. ನೀವು ಆತಂಕಪಡಬೇಕಿಲ್ಲ ಎಂದು ಈ ಜೋಡಿಗೆ ವೈದ್ಯರು ಧೈರ್ಯ ಹೇಳಿದ್ದಾರೆ. ಮನೆಗೆ ಮರಳಿರುವ ಈ ಜೋಡಿ ಈಗ ಖುಷಿಯ ದಿನಕ್ಕಾಗಿ ಕಾಯುತ್ತಿದೆ. ತಮ್ಮ ಕುಟುಂಬ ಸದಸ್ಯರಿಗೂ ಈ ವಿಚಾರ ತಿಳಿಸಿರುವ ಡನ್ನಾ ಮತ್ತು ಈಸ್ಟ್ಬನ್ ಪುಟ್ಟ ಕಂದನ ಸ್ವಾಗತಕ್ಕೆ ಸಜ್ಜಾಗಿ ಎಂದು ಹೇಳಿದ್ದಾರೆ. ಹುಟ್ಟುವ ಗಂಡು ಮಗುವಿಗೆ ಈಗಾಗಲೇ ಹೆಸರನ್ನೂ ಇಟ್ಟಿದ್ದಾರೆ. ನಾವು ಮಗನನ್ನು ‘ಏರಿಯಲ್’ ಎಂದು ಕರೆಯುತ್ತೇವೆ ಎಂದು ಹೇಳಿಕೊಂಡಿದ್ದಾರೆ.