ಅಡ್ಯನಡ್ಕ ಕೃಷ್ಣಭಟ್ಟ

ಅಡ್ಯನಡ್ಕ ಕೃಷ್ಣಭಟ್ಟರು ಕನ್ನಡದಲ್ಲಿ ವಿಜ್ಞಾನ ಬರಹಗಳಿಗೆ ಪ್ರಖ್ಯಾತರಾಗಿದ್ದವರು.
ಲೇಖಕರಾಗಿ, ವಿಜ್ಞಾನ ಪತ್ರಿಕಾ ಸಂಪಾದಕರಾಗಿ ಮತ್ತು ಭೌತವಿಜ್ಞಾನದ ಶ್ರೇಷ್ಠ ಅಧ್ಯಾಪಕರಾಗಿ ಅಪಾರ ಕಾರ್ಯಮಾಡಿದ್ದ ಕೃಷ್ಣಭಟ್ಟರು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಿಂದ ಕಾಸರಗೋಡಿಗೆ ಹೋಗುವ ಹಾದಿಯಲ್ಲಿರುವ ಪ್ರಾಕೃತಿಕ ಸೌಂದರ್ಯದ ನಿಧಿಯಂತಿರುವ ಅಡ್ಯನಡ್ಕ ಎಂಬಲ್ಲಿ 1938ರ ಮಾರ್ಚ್ 15ರಂದು ಜನಿಸಿದರು. ತಂದೆ ತಿಮ್ಮಣ್ಣ ಭಟ್ಟರು ಮತ್ತು ತಾಯಿ ಲಕ್ಷ್ಮಿ ಅಮ್ಮ ಅವರು. ಅಡ್ಯನಡ್ಕದ ಶಾಲೆಯಲ್ಲಿ ಕೃಷ್ಣಭಟ್ಟರ ಪ್ರಾಥಮಿಕ ವಿದ್ಯಾಭ್ಯಾಸ ನೆರವೇರಿತು. ಪ್ರೌಢಶಾಲಾ ವಿದ್ಯಾಭ್ಯಾಸ ಪುತ್ತೂರಿನ ಬೋರ್ಡ್ ಹೈಸ್ಕೂಲಿನಲ್ಲಿ ನೆರವೇರಿತು. ಇಂಟರ್‌ಮೀಡಿಯಟ್ ಓದು ಎಂ.ಜಿ.ಎಂ. ಕಾಲೇಜಿನಲ್ಲಿ ಸಾಗಿತು. ನಂತರದಲ್ಲಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಿಂದ ಬಿ.ಎಸ್ಸಿ ಆರ್ನಸ್ ಪದವಿ ಹಾಗೂ ಸ್ನಾತಕೋತ್ತರ ಪದವಿಗಳನ್ನು ಪಡೆದರು.
ಎಂ.ಜಿ.ಎಂ. ಕಾಲೇಜಿನಲ್ಲಿ ಇಂಟರ್‌ಮೀಡಿಯಟ್ ಓದುತ್ತಿದ್ದಾಗಿನಿಂದಲೇ ವಿಜ್ಞಾನ ಬರಹಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡಿದ್ದ ಕೃಷ್ಣಭಟ್ಟರಿಗೆ ಕಾಲೇಜಿನ ಗ್ರಂಥ ಭಂಡಾರದಲ್ಲಿ ದೊರೆಯುತ್ತಿದ್ದ ಎಡಿಂಗ್‌ಟನ್ ಜೆಮ್ಷ್‌ಜೀನ್ಸ್ ಮುಂತಾದವರುಗಳ ವಿಜ್ಞಾನ ಕೃತಿಗಳನ್ನು ಓದುವ ಅವಕಾಶ ಲಭಿಸಿತು. ಜೊತೆಗೆ ಶಿವರಾಮ ಕಾರಂತರ ವೈಜ್ಞಾನಿಕ ಬರಹಗಳ ಪುಸ್ತಕ ‘ಬಾಲ ಪ್ರಪಂಚ’ ಮುಂತಾದವು ವಿಜ್ಞಾನದ ಬಗ್ಗೆ ಒಲವು ಮೂಡಲು ಪ್ರೇರಣೆ ಒದಗಿಸಿದವು. ಈ ಅಭ್ಯಾಸ ಪ್ರೆಸಿಡೆನ್ಸಿ ಕಾಲೇಜಿನಲ್ಲೂ ಮುಂದುವರೆಯಿತು. ನೊಬೆಲ್ ಪ್ರಶಸ್ತಿ ವಿಜೇತರಾದ ಸರ್. ಸಿ.ವಿ.ರಾಮನ್, ಸುಬ್ರಹ್ಮಣ್ಯಂ ಚಂದ್ರಶೇಖರ್ ಅವರುಗಳು ಓದಿದ, ಪ್ರಯೋಗ ನಡೆಸಿದ ಸ್ಥಳದಲ್ಲಿ ಓದುತ್ತಿದ್ದೇವೆ, ಪ್ರಯೋಗ ನಡೆಸುತ್ತಿದ್ದೇವೆಂಬ ಎಂಬ ಭಾವವೇ ವಿದ್ಯಾರ್ಥಿಗಳನ್ನು ವಿಜ್ಞಾನ ಲೋಕಕ್ಕೆ ಹುರಿದುಂಬಿಸಿ ಕರೆದುಕೊಂಡು ಹೋಗುವ ಅಂಶಗಳಾಗಿತ್ತು.
ಕೃಷ್ಣಭಟ್ಟರು ಭೌತವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದನಂತರ ತಾವು ಇಂಟರ್ಮೀಡಿಯೇಟ್ ಓದಿದ ಎಂ.ಜಿ.ಎಂ. ಕಾಲೇಜಿನಲ್ಲೇ ಅಧ್ಯಾಪಕರಾದರು. ನಂತರ ಸೇಂಟ್ ಫಿಲೋಮಿನ ಕಾಲೇಜಿನಲ್ಲಿ ಕೆಲ ವರ್ಷ ಕಾರ್ಯನಿರ್ವಹಿಸಿ, ಆನಂತರ ಡಾ. ತೋನ್ಸೆ ಮಾಧವ ಅನಂತ ಪೈಗಳು ಸ್ಥಾಪಿಸಿದ ವಿಜಯ ಕಾಲೇಜಿನಲ್ಲಿ ಕೆಲಸಕ್ಕೆ ಸೇರಿದರು. ವಿಜಯ ಕಾಲೇಜಿನಲ್ಲಿ ಭೌತವಿಜ್ಞಾನದ ವಿಭಾಗವನ್ನು ಕಟ್ಟಿ ಬೆಳಸಿದ ಕೀರ್ತಿ ಕೃಷ್ಣಭಟ್ಟರದು. ಹೀಗೆ ಮೂವತ್ತು ಮೂರು ವರ್ಷಗಳ ಸುದೀರ್ಘ ಸೇವೆಯ ನಂತರ 1997ರಲ್ಲಿ ನಿವೃತ್ತಿ ಹೊಂದಿದರು.
ಕೃಷ್ಣಭಟ್ಟರು ಮಂಗಳೂರು ವಿಶ್ವವಿದ್ಯಾಲಯಕ್ಕೆ ಸೇರಿದ ವಿಜ್ಞಾನ ಕಾಲೇಜುಗಳ ಭೌತ ವಿಜ್ಞಾನ ಅಧ್ಯಾಪಕರ ಸಂಘದ ಕಾರ್ಯದರ್ಶಿಯಾಗಿ, ನಂತರ ಅಧ್ಯಕ್ಷರಾಗಿ, ಸಂಘದ ಚಟುವಟಿಕೆಗಳಿಗೆ ಹೊಸರೂಪ ನೀಡಿ, ವಿಜ್ಞಾನದ ಶಿಕ್ಷಣದ ಬಗ್ಗೆ ಹೊಸ ಹೊಸ ಕಾರ್ಯಕ್ರಮಗಳನ್ನು ರೂಪಿಸಿದರು. ಈ ಹಿಂದೆಯೇ ಶಿವರಾಮ ಕಾರಂತರಿಂದ ಪ್ರಾರಂಭವಾಗಿ, ಸ್ಥಗಿತಗೊಂಡಿದ್ದ ವಿಚಾರವಾಣಿ ಪತ್ರಿಕೆಯ ಸಂಪಾದಕೀಯದ ಹೊಣೆ ಹೊತ್ತು ವಿಜ್ಞಾನಕ್ಕೆ ಸಂಬಂಧಿಸಿದ ಲೇಖನಗಳನ್ನು ಬರೆದು ಜನಪ್ರಿಯಗೊಳಿಸಿದರು. ವಿಜಯಾ ಕಾಲೇಜಿನಲ್ಲಿ ಸ್ನೇಹಿತರೊಡನೆ ‘ರಿಸರ್ಚ್ ಅಂಡ್ ಪಬ್ಲಿಕೇಷನ್’ ಎಂಬ ಸಂಸ್ಥೆ ಸ್ಥಾಪಿಸಿದ್ದರು. ಈ ಸಂಸ್ಥೆಯ ಮೂಲಕ ಸಾಮಾಜಿಕ ಚಿಂತನೆಗೆ ಅವಕಾಶ ಕೊಡುವುದು ಅವರ ಮುಖ್ಯ ಉದ್ದೇಶವಾಗಿತ್ತು. ಪ್ರತಿ ಹದಿನೈದು ದಿವಸಕ್ಕೊಮ್ಮೆ ಕಲೆತು ವೈಜ್ಞಾನಿಕ ಪ್ರಬಂಧಗಳನ್ನು ಓದಿ, ಚರ್ಚಿಸಿ ಪ್ರಕಟಿಸುವುದು ಈ ಸಂಸ್ಥೆಯ ಪ್ರಮುಖ ಚಟುವಟಿಕೆಯಾಯಿತು. ಹೀಗೆ ಈ ಸಂಸ್ಥೆಯಲ್ಲಿನ ಚರ್ಚೆಗಳ ಫಲವಾಗಿ ಪ್ರಕಟವಾದ ಮೊದಲ ಕೃತಿ ‘ಗಗನ ಯುಗ’ ಎಂಬ ಕಿರು ಹೊತ್ತಗೆ. ಈ ಹೊತ್ತಗೆಯಲ್ಲಿ ಗಗನಯಾನಿ ಯೂರಿಗಗಾರಿನ್ ಬಾಹ್ಯಾಕಾಶಕ್ಕೇರಿ ವಿಕ್ರಮ ಸಾಧಿಸಿದ್ದರ ಬಗ್ಗೆ ಮಾಹಿತಿ ಇದ್ದು, ಅಂದು ಬಹು ಜನಪ್ರಿಯ ಕೃತಿಯಾಗಿತ್ತು.
ಕೃಷ್ಣಭಟ್ಟರು ವಿಜ್ಞಾನದ ಹರವನ್ನು ವಿಸ್ತರಿಸಲು ಪ್ರಾರಂಭಿಸಿದ ಸಂಸ್ಥೆ ‘ವಿಜ್ಞಾನ ಪ್ರತಿಷ್ಠಾನ’. ಈ ಪ್ರತಿಷ್ಠಾನದ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ, ಕಾಲೇಜುಗಳಲ್ಲಿ ವಿಜ್ಞಾನ ಉಪನ್ಯಾಸ, ಸಂವಾದ ಹಾಗೂ ಪ್ರಾತ್ಯಕ್ಷಿಕೆಗಳನ್ನು ನೀಡಿದರು.
ಸಾಹಿತಿ ನಿರಂಜನರವರ ಮುಂದಾಳತ್ವದಲ್ಲಿ ಪ್ರಕಟಗೊಂಡ ‘ಜ್ಞಾನ ಗಂಗೋತ್ರಿ’ ಮೂರು ವಿಜ್ಞಾನ ಸಂಪುಟಗಳಿಗೆ ಕೃಷ್ಣಭಟ್ಟರು ಸಂಪಾದಕರಾಗಿದ್ದರು. ಟಿ.ಎಂ.ಎ. ಪೈಗಳ 80ನೇ ವರ್ಷದ ಅಭಿನಂದನ ಗ್ರಂಥದ ಸಂಪಾದಕತ್ವವನ್ನೂ ನಿರ್ವಹಿಸಿದರು. ಜ್ಞಾನ ಗಂಗೋತ್ರಿಯು ಇಂದು ಕೂಡ ಶಾಲಾ ಕಾಲೇಜುಗಳಿಗೆ ವಿಜ್ಞಾನ ವಿಷಯಗಳ ಆಕರ ಗ್ರಂಥವೆನಿಸಿದೆ.
ವಿಜ್ಞಾನ ಪ್ರಚಾರಕ್ಕಾಗಿ ಸ್ಥಾಪಿತಗೊಂಡ ಸ್ವಾಯತ್ತ ಸಂಸ್ಥೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು. ಕೃಷ್ಣಭಟ್ಟರು ವಿಜ್ಞಾನ ಪರಿಷತ್ತಿನ ಸ್ಥಾಪಕ ಸದಸ್ಯರಾಗಿ, ಈ ಪರಿಷತ್ತಿನ ಪತ್ರಿಕೆಯಾದ ‘ಬಾಲ ವಿಜ್ಞಾನ’ದ ಸಂಪಾದಕರಾಗಿ, ಹಾಗೂ ಪರಿಷತ್ತಿನ ಉಪಾಧ್ಯಕ್ಷರಾಗಿ ಅನೇಕ ಜವಾಬ್ದಾರಿಗಳನ್ನು ಹೊತ್ತರು. ಇಂಗ್ಲಿಷಿನ ವಿಜ್ಞಾನ ಪದಗಳ ಪಾರಿಭಾಷಿಕ ಪದಕೋಶ ಇಂಗ್ಲಿಷ್-ಕನ್ನಡ ವಿಜ್ಞಾನ ಕೋಶವನ್ನು ಪ್ರೊ. ಜಿ.ಆರ್. ಲಕ್ಷ್ಮಣರಾಯರೊಡನೆ ರಚಿಸಿದರು. ಕೃಷ್ಣಭಟ್ಟರ ಇತರ ಕೃತಿಗಳೆಂದರೆ ಸರ್.ಸಿ.ವಿ. ರಾಮನ್, ಐಸಾಕ್ ನ್ಯೂಟನ್, ಮನುಷ್ಯನ ವಂಶಾವಳಿ, ಇಂಟ್ರಡಕ್ಟರಿ ಫಿಸಿಕ್ಸ್, ಮನುಷ್ಯನ ಕಥೆ, ಬೆಳ್ಳಿ ಚುಕ್ಕೆ, ನಮ್ಮ ವಾತಾವರಣ, ಕಿಶೋರ ವಿಜ್ಞಾನ ಮುಂತಾದವುಗಳು.

ಕೃಷ್ಣಭಟ್ಟರ ‘ಮನುಷ್ಯನ ಕಥೆ’ ಪುಸ್ತಕಕ್ಕೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ‘ಸುದರ್ಶನ’ ಪ್ರಕಾಶನಕ್ಕಾಗಿ 20ನೆಯ ರಾಷ್ಟ್ರೀಯ ಉತ್ಕೃಷ್ಟ ಮುದ್ರಣ, ಪ್ರಕಾಶನ ಪ್ರಶಸ್ತಿ, ಮಣಿಪಾಲ ಅಕಾಡಮಿ ಆಫ್ ಜನರಲ್ ಎಜುಕೇಷನ್‌ನಿಂದ ಫೆಲೋಷಿಪ್, ಭಾರತ ಸರ್ಕಾರದ ಎನ್.ಸಿ.ಇ.ಆರ್.ಟಿ ಇಂದ ರಾಷ್ಟ್ರೀಯ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿ ಗೌರವಗಳು ಕೃಷ್ಣಭಟ್ಟರಿಗೆ ಸಂದಿದ್ದವು.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

IPL 2022 ಕಾರಣ ಮಾರ್ಚ್ 19 ರಂದು MCA AGM ಇಲ್ಲ!

Tue Mar 15 , 2022
ಮುಂಬೈ ಕ್ರಿಕೆಟ್ ಅಸೋಸಿಯೇಷನ್ ​​(MCA) ಸೋಮವಾರ ತಮ್ಮ AGM ಅನ್ನು ಮಾರ್ಚ್ 19 ರಂದು ಮುಂದೂಡಲು ನಿರ್ಧರಿಸಿದೆ. ತುರ್ತು ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮಾರ್ಚ್ 26 ರಂದು ಮುಂಬೈ ಮತ್ತು ಪುಣೆಯಲ್ಲಿ ಪ್ರಾರಂಭವಾಗುವ ಐಪಿಎಲ್‌ಗೆ ಇದು ತುಂಬಾ ಹತ್ತಿರದಲ್ಲಿದೆ ಎಂಬುದು ಹಲವಾರು MCA ಅಧಿಕಾರಿಗಳ ಪ್ರಕಾರ ಮುಂದೂಡಿಕೆಗೆ ಕಾರಣ. ಎಂಸಿಎ ಸದಸ್ಯರು ಮತ್ತು ಅಧಿಕಾರಿಗಳ ಗುಂಪು ಇತ್ತೀಚೆಗೆ ಅವರನ್ನು ಭೇಟಿ ಮಾಡಿದ ನಂತರ ಸಂಘದ ಮಾಜಿ […]

Advertisement

Wordpress Social Share Plugin powered by Ultimatelysocial