ಅಜ್ಮೀರ್ ದರ್ಗಾ ಸಮೀಕ್ಷೆಗೆ ಹಿಂದೂ ಸಂಘಟನೆಗಳ ಒತ್ತಾಯ!

ಜೈಪುರ ಮೇ 27: ರಾಜಸ್ಥಾನದ ಅಜ್ಮೀರ್ ನಲ್ಲಿರುವ ಸೂಫಿ ಸಂತ ಮೊಯಿನುದ್ದೀನ್ ಚಿಶ್ತಿ ಅವರ ಸಮಾಧಿಯು(ದರ್ಗಾ) ಒಂದು ಕಾಲದಲ್ಲಿ ಹಿಂದೂ ದೇವಾಲಯವಾಗಿತ್ತು. ಹಾಗಾಗಿ ಭಾರತೀಯ ಪುರಾತ್ವತ್ವ ಸರ್ವೇಕ್ಷಣಾ ಇಲಾಖೆ(ಎಎಸ್‌ಐ)ಯು ದರ್ಗಾ ಆವರಣವನ್ನು ಸರ್ವೆ ಮಾಡಬೇಕು ಎಂದು ಹಿಂದೂ ಸಂಘಟನೆಯೊಂದು ಒತ್ತಾಯಿಸಿದೆ.

ಕಾಶಿಯ ಜ್ಞಾನವಾಪಿ ಮಸೀದಿ, ಮಥುರಾದ ಶಾಹೀ ಈದ್ಗಾ ಮಸೀದಿಯ ನಂತರ ಇದೀಗ ರಾಜಸ್ಥಾನದ ಅಜ್ಮೀರ್ ದರ್ಗಾದ ಸಮೀಕ್ಷೆ ನಡೆಸುವಂತೆ ಹಿಂದೂ ಸಂಘಟನೆಗಳಿಂದ ಒತ್ತಾಯ ಕೇಳಿಬಂದಿದೆ.

“ಅಜ್ಮೀರ್ ದರ್ಗಾದ ಗೋಡೆಗಳು ಮತ್ತು ಕಿಟಕಿಗಳ ಮೇಲೆ ಹಿಂದೂ ಚಿಹ್ನೆಗಳು ಇವೆ,” ಎಂದು ಮಹಾರಾಣಾ ಪ್ರತಾಪ್‌ ಸೇನೆಯ ರಾಜವರ್ಧನ್ ಸಿಂಗ್ ಪರ್ಮಾರ್ ಪ್ರತಿಪಾದಿಸಿದರು.

ಆದರೆ ದರ್ಗಾದ ಆಡಳಿತ ಮಂಡಳಿಯು ಈ ಹೇಳಿಕೆಯನ್ನು ತಿರಸ್ಕರಿಸಿದೆ. ಅಂತಹ ಯಾವುದೇ ಚಿಹ್ನೆ ದರ್ಗಾದ ಗೋಡೆಗಳು ಮತ್ತು ಕಿಟಕಿಗಳಲ್ಲಿ ಇಲ್ಲ ಎಂದು ಹೇಳಿದೆ.

ಗೋಡೆಗಳು, ಕಿಟಕಿಗಳ ಮೇಲೆ ಸ್ವಾಸ್ತಿಕ್ ಚಿಹ್ನೆ; ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜವರ್ಧನ್ ಸಿಂಗ್ ಪರ್ಮಾರ್, “ಅಜ್ಮೀರದ ಖ್ವಾಜಾ ಗರೀಬ್ ನವಾಜ್ ದರ್ಗಾ ಈ ಹಿಂದೆ ಪ್ರಾಚೀನ ಹಿಂದೂ ದೇವಾಲಯವಾಗಿತ್ತು. ಇದರ ಗೋಡೆಗಳು ಮತ್ತು ಕಿಟಕಿಗಳ ಮೇಲೆ ಸ್ವಾಸ್ತಿಕ್ ಚಿಹ್ನೆಗಳು ಇವೆ. ಭಾರತೀಯ ಪುರಾತ್ವತ್ವ ಸರ್ವೇಕ್ಷಣಾ ಇಲಾಖೆಯು ದರ್ಗಾದ ಸಮೀಕ್ಷೆಯನ್ನು ನಡೆಸಬೇಕೆಂದು ನಾವು ಒತ್ತಾಯಿಸುತ್ತೇವೆ,” ಎಂದು ಹೇಳಿದರು.

“ದರ್ಗಾದಲ್ಲಿ ಅಂತಹ ಯಾವುದೇ ಚಿಹ್ನೆಗಳಿಲ್ಲ. ಹಾಗಾಗಿ ಈ ಹಕ್ಕು ನಿರಾಧಾರವಾಗಿದೆ. ಪ್ರತಿ ವರ್ಷ ಲಕ್ಷಾಂತರ ಹಿಂದೂಗಳು ಮತ್ತು ಮುಸ್ಲಿಮರು ಅಜ್ಮೀರ್ ದರ್ಗಾಕ್ಕೆ ಭೇಟಿ ನೀಡುತ್ತಾರೆ,” ಎಂದು ಅಂಜುಮನ್ ಸೈಯದ್ ಝುಡ್ಗಾನ್‌ಗೆ ಅಧ್ಯಕ್ಷ ಮೊಯಿನ್ ಚಿಸ್ತಿ ಹೇಳಿದರು.

ದರ್ಗಾದಲ್ಲಿ ಸ್ವಸ್ತಿಕ್ ಚಿಹ್ನೆ ಎಲ್ಲೂ ಇಲ್ಲ: “ದರ್ಗಾದಲ್ಲಿ ಸ್ವಸ್ತಿಕ್ ಚಿಹ್ನೆ ಎಲ್ಲೂ ಇಲ್ಲ ಎಂದು ಸಂಪೂರ್ಣ ಜವಾಬ್ದಾರಿಯಿಂದ ಹೇಳುತ್ತಿದ್ದೇನೆ. 850 ವರ್ಷಗಳಿಂದ ದರ್ಗಾ ಇದ್ದು, ಅಂತಹ ಯಾವುದೇ ಪ್ರಶ್ನೆ ಉದ್ಭವಿಸುವುದಿಲ್ಲ. ಈ ಹಿಂದೆ ಎಂದೂ ಇಲ್ಲದ ವಾತಾವರಣವು ಇಂದು ದೇಶದಲ್ಲಿದೆ,” ಎಂದು ಬೇಸರ ವ್ಯಕ್ತಪಡಿಸಿದರು.

“ಖ್ವಾಜಾ ಮೊಯಿನುದ್ದೀನ್ ಚಿಶ್ತಿ ಅವರ ಸಮಾಧಿಯ ಬಗ್ಗೆ ಪ್ರಶ್ನೆಗಳನ್ನು ಎತ್ತುವುದು ಎಂದರೆ ಧರ್ಮಾತೀತವಾಗಿ ಅಲ್ಲಿ ಪ್ರಾರ್ಥನೆ ಸಲ್ಲಿಸುವ ಕೋಟ್ಯಂತರ ಜನರ ಭಾವನೆಗಳನ್ನು ನೋಯಿಸುವುದು ಎಂದರ್ಥ. ಈ ರೀತಿಯ ಅಂಶಗಳ ಬಗ್ಗೆ ಸರಕಾರ ಸ್ಪಂದಿಸಬೇಕು,” ಎಂದು ಮೊಯಿನ್ ಚಿಸ್ತಿ ಅಭಿಪ್ರಾಯಪಟ್ಟರು.

ಕೋಮು ಸೌಹಾರ್ದತೆ ಕದುಡುವ ಪ್ರಯತ್ನ: “ಈ ರೀತಿಯ ಹೇಳಿಕೆಗಳು ಸಮಾಜದಲ್ಲಿ ಕೋಮು ಸೌಹಾರ್ದತೆಯನ್ನು ಕದುಡುವ ಪ್ರಯತ್ನವಾಗಿದೆ,” ಎಂದು ಖ್ವಾಜಾ ಗರೀಬ್ ನವಾಜ್ ದರ್ಗಾದ ಕಾರ್ಯದರ್ಶಿ ವಾಹಿದ್ ಹುಸೇನ್ ಚಿಸ್ತಿ ಹೇಳಿದರು.

ಕಾಶಿಯ ಜ್ಞಾನವಾಪಿ ಮಸೀದಿ, ಮಥುರಾದ ಶಾಹೀ ಈದ್ಗಾ ಮಸೀದಿಯ ನಂತರ ಇದೀಗ ರಾಜಸ್ಥಾನದ ಅಜ್ಮೀರ್ ದರ್ಗಾದ ಸಮೀಕ್ಷೆಗೆ ಒತ್ತಾಯ ಕೇಳಿಬಂದಿರುವ ಹಿನ್ನೆಲೆಯಲ್ಲಿ ಈ ವಿವಾದವೂ ನ್ಯಾಯಾಲಯದ ಮೆಟ್ಟಿಲು ಹತ್ತುವ ಸಾಧ್ಯತೆಗಳು ದಟ್ಟವಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕರ್ನಾಟಕದಲ್ಲಿ ಕಡಿಮೆ ಬೆಳೆ: ಮಾವಿಗೆ ಬಂಪರ್ ಬೆಲೆ

Fri May 27 , 2022
  ಬೆಂಗಳೂರು, ಮೇ 27: ಅಕಾಲಿಕ ಮಳೆ, ಅತ್ಯಧಿಕ ತಾಪಮಾನ ಸೇರಿದಂತೆ ಹಲವು ಕಾರಣಗಳಿಂದ ರಾಜ್ಯದಲ್ಲಿ ಈ ಬಾರಿ ಮಾವಿನ ಫಸಲು ಕಡಿಮೆಯಾಗಿದ್ದು, ಬೆಲೆ ಗಗನಕ್ಕೇರಿದೆ. ಈ ಬಾರಿ ಮಾವಿನ ಹಣ್ಣಿನ ಸಿಹಿ ಸವಿಯಬೇಕೆಂದಿದ್ದರೆ ನೀವು ದುಬಾರಿ ಬೆಲೆ ತೆರಲೇಬೇಕಿದೆ. ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರಾಟ ಮಂಡಳಿ ಅಧ್ಯಕ್ಷ ಕೆ. ವಿ. ರಾಜು ಪ್ರಕಾರ ಎಲ್ಲಾ ಬಗೆಯ ಮಾವಿನ ಹಣ್ಣಿನ ಬೆಲೆ ದುಬಾರಿಯಾಗಿದೆ, “ಕಳೆದ ವರ್ಷ ಉತ್ತಮ […]

Advertisement

Wordpress Social Share Plugin powered by Ultimatelysocial