ಅಪ್ಪನ ಜೀವನ ತೆರೆಗೆ ತರಲು ದೀಪಿಕಾ ಕಾರ್ಯೋನ್ಮುಖ

ಕರ್ನಾಟಕ ಮೂಲದ ದೀಪಿಕಾ ಪಡುಕೋಣೆ, ಕನ್ನಡದ ಸಿನಿಮಾದಿಂದ ನಟನೆ ಆರಂಭಿಸಿ ಹಾಲಿವುಡ್ ವರೆಗೂ ಏರಿದ ಎತ್ತರ ಸಾಮಾನ್ಯದ್ದಲ್ಲ.

ಆದರೆ ತಂದೆ ಮಾಡಿರುವ ಸಾಧನೆ ಮುಂದೆ ದೀಪಿಕಾರ ಸಾಧನೆ ಮಂಕೆನಿಸುತ್ತದೆ. ಹಾಗಾಗಿಯೇ ನಟಿ ದೀಪಿಕಾ ಪಡುಕೋಣೆ ಇದೀಗ ತಮ್ಮ ತಂದೆಯ ಜೀವನದ ಬಗ್ಗೆ ಸಿನಿಮಾ ಮಾಡಲು ಮುಂದಾಗಿದ್ದಾರೆ.

ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿರುವ ದೀಪಿಕಾ ಕೆಲವೇ ದಿನಗಳಲ್ಲಿ ಇತರೆ ಮಾಹಿತಿಗಳನ್ನು ಹಂಚಿಕೊಳ್ಳಲಿದ್ದಾರೆ.

ದೀಪಿಕಾ ಪಡುಕೋಣೆಯ ತಂದೆ ಪ್ರಕಾಶ್ ಪಡುಕೋಣೆ ಈ ರಾಷ್ಟ್ರದಲ್ಲಿ ಬ್ಯಾಡ್‌ಮಿಂಟನ್ ಜನಪ್ರಿಯಗೊಳ್ಳಲು ನೀಡಿರುವ ಕೊಡುಗೆ ಅಪಾರ. ಭಾರತದ ಮೊದಲ ಬ್ಯಾಡ್‌ಮಿಂಟನ್ ವಿಶ್ವಚಾಂಪಿಯನ್ ಆಗಿರುವ ಪ್ರಕಾಶ್ ಪಡುಕೋಣೆ ಹಲವು ಅಂತರಾಷ್ಟ್ರೀಯ ಟೈಟಲ್‌ಗಳನ್ನು ಬ್ಯಾಡ್‌ಮಿಂಟನ್‌ನಲ್ಲಿ ಗೆದ್ದಿದ್ದಾರೆ.

1978ರಲ್ಲಿ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಬ್ಯಾಡ್‌ಮಿಂಟನ್‌ನಲ್ಲಿ ಚಿನ್ನ ಗೆದ್ದ ಪ್ರಕಾಶ್ ಪಡುಕೋಣೆ, ಬಳಿಕ 1981 ರಲ್ಲಿ ನಡೆದ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಗೆದ್ದರು. ವಿಶ್ವ ಚಾಂಪಿಯನ್‌ಶಿಫ್‌ನಲ್ಲಿ ಕಂಚು ಸೇರಿದಂತೆ ವಿಶ್ವದ ಹಲವೆಡೆ ನಡೆದ ಹಲವು ಟೂರ್ನಮೆಂಟ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿ ಪ್ರಶಸ್ತಿ ಗೆದ್ದಿದ್ದಾರೆ. ಪ್ರಕಾಶ್ ಪಡುಕೋಣೆ ವಿಶ್ವಕಪ್ ಗೆದ್ದ ಬಳಿಕವೇ ಭಾರತದಲ್ಲಿ ಬ್ಯಾಡ್‌ಮಿಂಟನ್ ಹೆಚ್ಚು ಜನಪ್ರಿಯಗೊಂಡಿತು.

ಸಿಎಸ್ ಬರೂಚಾರ ಯೂಟ್ಯೂಬ್ ಚಾನೆಲ್‌ಗಾಗಿ ನೀಡಿದ ಸಂದರ್ಶನದಲ್ಲಿ ತಂದೆಯ ಸಿನಿಮಾ ಬಗ್ಗೆ ಮಾತನಾಡಿರುವ ದೀಪಿಕಾ ಪಡುಕೋಣೆ, ”1983 ರಲ್ಲಿ ಭಾರತ ವಿಶ್ವಕಪ್ ಗೆಲ್ಲುವ ಮೊದಲೇ ನನ್ನ ತಂದೆ ವಿಶ್ವಚಾಂಪಿಯನ್‌ಶಿಪ್ ಗೆದ್ದು ಭಾರತಕ್ಕೆ ಅಂತರಾಷ್ಟ್ರೀಯ ಗೌರವ ತಂದುಕೊಟ್ಟಿದ್ದರು. ತಂದೆಯ ಸಿನಿಮಾ ಮಾಡಲು ನಾನು ಯೋಚಿಸುತ್ತಿದ್ದೇನೆ” ಎಂದಿದ್ದಾರೆ.

ಅದೇ ಸಂದರ್ಶನದಲ್ಲಿ ತಮ್ಮ ತಂದೆ ಬ್ಯಾಡ್‌ಮಿಂಟನ್ ಆಡಲು ಪಟ್ಟ ಕಷ್ಟಗಳ ಬಗ್ಗೆ ಮಾತನಾಡಿರುವ ದೀಪಿಕಾ, ”ನಮ್ಮ ತಂದೆ ಬ್ಯಾಡ್‌ಮಿಂಟನ್ ಆಡುವಾಗ ಯಾವುದೇ ಸವಲತ್ತುಗಳು ಇರಲಿಲ್ಲ. ಹಣ ಸಹ ನೀಡಲಾಗುತ್ತಿರಲಿಲ್ಲ. ಕಷ್ಟಪಟ್ಟು ಹಣ ಹೊಂದಿಸಿಕೊಂಡು ಅವರು ಆಟ ಆಡಿ ದೇಶಕ್ಕೆ ಹೆಸರು ತಂದುಕೊಟ್ಟರು” ಎಂದು ದೀಪಿಕಾ ಪಡುಕೋಣೆ ಹೇಳಿದ್ದಾರೆ.

‘ಕಾ ಪ್ರೊಡಕ್ಷನ್ಸ್’ ಹೆಸರಿನ ನಿರ್ಮಾಣ ಸಂಸ್ಥೆಯನ್ನು ದೀಪಿಕಾ ಪಡುಕೋಣೆ ಹೊಂದಿದ್ದು ಅದರ ಮೂಲಕ ಈಗಾಗಲೇ ಆಸಿಡ್ ದಾಳಿ ಸಂತ್ರಸ್ತೆಯ ಕತೆಯನ್ನು ಸಿನಿಮಾ ಮಾಡಿದ್ದಾರೆ. ಇದೀಗ ತಮ್ಮದೇ ನಿರ್ಮಾಣ ಸಂಸ್ಥೆಯಿಂದ ತಂದೆಯ ಜೀವನವನ್ನು ಸಿನಿಮಾ ಆಗಿಸುವ ಯತ್ನದಲ್ಲಿದ್ದಾರೆ.

ದೀಪಿಕಾ ಪಡುಕೋಣೆಯ ಕುಟುಂಬ ಈಗಲೂ ಬೆಂಗಳೂರಿನಲ್ಲಿಯೇ ವಾಸಿಸುತ್ತದೆ. ಪ್ರಕಾಶ್ ಪಡುಕೋಣೆ, ದೀಪಿಕಾರ ತಾಯಿ ಹಾಗೂ ಸಹೋದರಿ ಬೆಂಗಳೂರಿನ ಇಂದಿರಾ ನಗರದಲ್ಲಿ ವಾಸಿಸುತ್ತಾರೆ.

ಸಿನಿಮಾ ವಿಷಯಕ್ಕೆ ಮರಳುವುದಾದರೆ ದೀಪಿಕಾ ಪಡುಕೋಣೆ ನಟಿಸಿರುವ ‘ಗೆಹ್ರಾಹಿಯಾ’ ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಶಾರುಖ್ ಜೊತೆ ನಟಿಸಿರುವ ‘ಪಠಾಣ್’ ಬಿಡುಗಡೆಗೆ ತಯಾರಾಗಿದೆ. ಹೃತಿಕ್ ಜೊತೆ ‘ಫೈಟರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪ್ರಭಾಸ್ ಜೊತೆ ಹೊಸದೊಂದು ತೆಲುಗು ಸಿನಿಮಾದಲ್ಲಿ ನಟಿಸಲು ಸಹಿ ಹಾಕಿದ್ದಾರೆ. ಜೊತೆಗೆ ಇಂಗ್ಲಿಷ್ ಸಿನಿಮಾದ ರೀಮೇಕ್ ‘ದಿ ಇಂಟರ್ನ್’ ಸಿನಿಮಾದಲ್ಲಿಯೂ ದೀಪಿಕಾ ನಟಿಸಲಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಥಾಣೆ: ರೈಲ್ವೇ ಸಚಿವರು ನಿಲ್ದಾಣದ ಹೊರಗೆ 'ವಡಾ ಪಾವ್' ತಿಂದು, ಬಿಲ್ ಪಾವತಿಸದೆ ಹೊರಟುಹೋದರು

Sat Feb 19 , 2022
  ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್, ಕಪಿಲ್ ಪಾಟೀಲ್, ರಾವ್ಸಾಹೇಬ್ ದಾನ್ವೆ, ನಿನ್ನೆ ಥಾಣೆಯಲ್ಲಿ ನಡೆದ ‘ವಡಾ ಪಾವ್’ ಜಂಟಿಯಾಗಿ ಊಟ ಮಾಡಿ ಆಹಾರದ ಬಿಲ್ ಪಾವತಿಸದೆ ಹೋದ ಆರೋಪದ ಮೇಲೆ ಕೇಂದ್ರ ಸಚಿವರ ವಿರುದ್ಧ ಮಹಾರಾಷ್ಟ್ರ ಸಚಿವ ಜಿತೇಂದ್ರ ಅವದ್ ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ. “ಉಚಿತವಾಗಿ ವಡಾಪಾವ್ ತಿನ್ನುವವರು, ಅವರು ನಗರವನ್ನು ಹೇಗೆ ನಿರ್ವಹಿಸುತ್ತಾರೆ” ಎಂದು ಜಿತೇಂದ್ರ ಅವದ್ ಹೇಳಿದರು. ಉಲ್ಲಾಸನಗರದಲ್ಲಿ ನಿನ್ನೆ ನಡೆದ ಕಾರ್ಯಕ್ರಮವೊಂದರಲ್ಲಿ ಅವರು ಮಾತನಾಡಿದರು. […]

Advertisement

Wordpress Social Share Plugin powered by Ultimatelysocial