ಅರ್ಜುನನು ಕೌರವನ ಸೇನೆಯನ್ನು ಸಮ್ಮೋಹನಾಸ್ತ್ರದಿಂದ ಗೆಲಿದು ಮರಳಿದನು.

ಅರ್ಜುನನು ಕೌರವನ ಸೇನೆಯನ್ನು ಸಮ್ಮೋಹನಾಸ್ತ್ರದಿಂದ ಗೆಲಿದು ಮರಳಿದನು.
ಗೋವುಗಳು ಮರಳಿದವು. ಕೌರವರು ಅರ್ಜುನನೊಡನೆ ಯುದ್ಧಕ್ಕೆ ಸಿದ್ಧರಾದರು. ಇಡೀ ಸೇನೆಯು ಅರ್ಜುನನನ್ನು ಮುಸುಗಿತು. ಆದರೆ ಅದನ್ನು ಪರಿಹರಿಸಿ ಮುಂದುವರಿದನು ಪಾರ್ಥ. ಅತಿರಥ ಮಹಾರಥರ ಪಡೆಯನ್ನು ಲೆಕ್ಕಕ್ಕೆ ಸಿಗದಂತೆ ಕೊಂದು ಹಾಕುತ್ತ ನಡೆದ. ದ್ರೋಣ, ಅಶ್ವತ್ಥಾಮ, ಕೃಪಾಚಾರ್ಯ, ಎಲ್ಲರನ್ನೂ ಏಕಾಂಗಿಯಾಗಿ ಎದುರಿಸಿದ ಅರ್ಜುನ. ಈ ಮದ್ಯೆ ಕರ್ಣನನ್ನು ಅಶ್ವತ್ಥಾಮ ಮುಂತಾದವರು ಮೂದಲಿಸಿದರು. ರೋಷಗೊಂಡ ಕರ್ಣ ಬಹಳ ಪರಾಕ್ರಮದಿಂದ ಹೋರಾಡಿದನು. ಒಂದು ಹಂತದಲ್ಲಿ ಯಾರು ಸೋಲುವರು, ಯಾರು ಗೆಲುವರು ಎಂಬಂತೆ ಆಯಿತು. ಆದರೆ ಅರ್ಜುನನ ಪರಾಕ್ರಮಕ್ಕೆ ಮಿಗಿಲಹುದೆ?
ದ್ರೋಣರಿಗೆ ವಿನಯದಿಂದ ನಮಿಸಿ ಎದುರಿಸಿದನು. ಗುಣಕೆ ಮತ್ಸರವುಂಟೆ ಎಂದು ಅಮರಗಣ ತಲೆದೂಗಿತು. ಸಾರಥಿ, ಹನುಮ ಎಲ್ಲರೂ ನೊಂದರು. ಮತ್ತೆ ಆರ್ಭಟಿಸಿದನು ಕಲಿ ಪಾರ್ಥ. ದ್ರೋಣನ ಹಿನ್ನಡೆಯನ್ನು ಕರ್ಣನು ಹೀಯಾಳಿಸಿದನು. ಎದುರು ಬಂದ ಕೃಪಾಚಾರ್ಯರೂ ಬಹಳ ಹೊತ್ತು ನಿಲ್ಲಲಿಲ್ಲ. ಕೊನೆಗೆ ಭೀಷ್ಮನು ಬಂದನು.
ಭೀಷ್ಮನಿಗೆ ನಮಿಸಿ ಕಾಳಗ ಮುಂದುವರೆಸಿದನು ಪಾರ್ಥ. ಇಬ್ಬರಿಗೂ ಘನಘೋರ ಯುದ್ಧವಾಯಿತು. ಉತ್ತರನು ಗಾಯಗೊಂಡನು. ಹನುಮನು ಬೊಬ್ಬಿರಿದನು. ಅರ್ಜುನನಿಗೂ ಸಾಕಷ್ಟು ಗಾಯವಾಯಿತು. ಆದರೆ ಸುಧಾರಿಸಿಕೊಂಡು ಶಸ್ತ್ರ ಪ್ರತ್ಯಸ್ತ್ರಗಳ ಸಹಾಯದಿಂದ ಹೋರಾಡಿದನು. ಒಂದು ಹಂತದಲ್ಲಿ ಭೀಷ್ಮನು ಹಿಂದೆ ಸರಿದನು. ದುರ್ಯೋಧನನ ಕೋಪ ಹೆಚ್ಚಿತು. ತಾನೇ ಮುಂದೆ ಬಂದನು.
ಬಾಲ, ವೃದ್ಧ, ವಿಪ್ರರನ್ನು ಸೋಲಿಸಿದೆನೆಂಬ ಗರ್ವ ಬಿಡು ಎಂದು ಮೂದಲಿಸುತ್ತ ಬಾಣಗಳ ಸುರಿಮಳೆಗೆಯ್ದನು ಕೌರವರಾಯ. ಅರ್ಜುನನ ಬತ್ತಳಿಕೆಯು ಅಕ್ಷಯವಾದುದು. ಕೌರವನ ಶರಗಳು ಮುಗಿದವು.
ಇದಕ್ಕೆಲ್ಲ ಕೊನೆ ಹೂಡಬೇಕೆಂದು ಅರ್ಜುನನು ಸಮ್ಮೋಹನಾಸ್ತ್ರವನ್ನು ತೆಗೆದು ಹೂಡಿದನು. ಆಗ ಅಲ್ಲಿದ್ದ ಸಕಲ ಸೇನೆಯೂ ನಿದ್ರಾವಶವಾಯಿತು. ಯಾರು ಯಾರು ಎಲ್ಲೆಲ್ಲಿ ಇದ್ದರೋ ಅಲ್ಲಲ್ಲೇ ಮಲಗಿದರು. ಆನೆ, ಕುದುರೆಗಳೂ ಮಲಗಿದವು. ಅರ್ಜುನನು ಇಳಿದು ಹೋಗಿ ಗುರುಹಿರಿಯರಿಗೆ ನಮಿಸಿ ಬಂದನು. ಉತ್ತರನು ರಾಜರುಗಳ ಕಿರೀಟ, ವಸ್ತ್ರಗಳನ್ನು ಸೆಳೆದು ತಂದನು.
ಮರಳಿ ಶಮೀವೃಕ್ಷಕ್ಕೆ ಬಂದು ಗಾಂಡೀವವನ್ನು ಎತ್ತಿಟ್ಟು ಮೊದಲು ಬಂದ ಸಾಮಾನ್ಯ ರಥದಲ್ಲಿ ತಾನು ಸಾರಥಿಯಾಗಿ ಕುಳಿತು ಬೃಹನ್ನಳೆಯಂತೆಯೇ ಉತ್ತರನೊಂದಿಗೆ ವಿರಾಟನಗರಕ್ಕೆ ಹಿಂದಿರುಗಿದನು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದ. ಬಾ. ಕುಲಕರ್ಣಿ

Sat Mar 26 , 2022
ದತ್ತಾತ್ರೇಯ ಬಾಲಕೃಷ್ಣ ಕುಲಕರ್ಣಿ ಅವರು ಬರಹಗಾರರಾಗಿ ಮತ್ತು ಕನ್ನಡದ ಸಾಹಿತ್ಯದ ಪರಿಚಾರಿಕರಾಗಿ ಪ್ರಸಿದ್ಧ ಹೆಸರು. ದತ್ತಾತ್ರೇಯ ಬಾಲಕೃಷ್ಣ ಕುಲಕರ್ಣಿ ಅವರು ಬೆಳಗಾಂ ಜಿಲ್ಲೆಯ ರಾಮದುರ್ಗ ತಾಲೂಕಿನ ಮುದೇನಕೊಪ್ಪದಲ್ಲಿ 1916ರ ಮಾರ್ಚ್ 23 ರಂದು ಜನಿಸಿದರು. ಹುಟ್ಟಿದೂರಿನಲ್ಲಿಯೇ ಮುಲ್ಕಿ ಪರೀಕ್ಷೆ ಮುಗಿಸಿದ ನಂತರ ದೊಡ್ಡಮ್ಮನ ಮಗ ಪ್ರಹ್ಲಾದನನ್ನು ಕರೆದುಕೊಂಡು ಧಾರವಾಡಕ್ಕೆ ಬಂದರು. ಇವರ ಸೋದರ ಮಾವನವರಾದ ಗೋವಿಂದರಾವ್ ಚುಳಕಿಯವರು ಆಗ ಗೆಳೆಯರ ಗುಂಪಿನ ಸದಸ್ಯರಾಗಿದ್ದರು. ಚುಳಕಿಯವರು ಮನೋಹರ ಗ್ರಂಥಮಾಲೆಯ ಸಂಸ್ಥಾಪಕರಲ್ಲೊಬ್ಬರು. ಮುಂದೆ […]

Advertisement

Wordpress Social Share Plugin powered by Ultimatelysocial