Arjun Gowda Movie Review: ‘ಅರ್ಜುನ್ ಗೌಡ’;

ಯೋಚನೆ ಒಳ್ಳೆಯದಿದ್ದರೆ ಮಾತ್ರ ಸಾಲದು ಆ ಯೋಚನೆಯನ್ನು ಕತೆಯ ಚೌಕಟ್ಟಿನೊಳಗೆ ಬಂಧಿಸಿ ಅದಕ್ಕೆ ಸಿನಿಮಾ ರೂಪ ನೀಡಿ ಪ್ರೇಕ್ಷಕರಿಗೆ ದಾಟಿಸುವುದು ಬಹಳ ಅವಶ್ಯಕ. ಪ್ರಜ್ವಲ್ ದೇವರಾಜ್ ನಟಿಸಿ, ಲಕ್ಕಿ ಶಂಕರ್ ನಿರ್ದೇಶನ ಮಾಡಿರುವ ‘ಅರ್ಜುನ್ ಗೌಡ’ ಸಿನಿಮಾದ ಆರಂಭದಲ್ಲಿ ಗಾಂಧಿ ಹತ್ಯೆ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರುಗಳ ಹತ್ಯೆಯ ಉಲ್ಲೇಖವನ್ನು ನಿರ್ದೇಶಕರು ಮಾಡುತ್ತಾರೆ.

ಪತ್ರಕರ್ತೆ ಗೌರಿ ಲಂಕೇಶ್, ವಿಚಾರವಾದಿ ನರೇಂದ್ರ ದಾಬೋಳ್ಕರ್ ಹತ್ಯೆಯ ಬಗ್ಗೆಯೂ ಮಾತನಾಡುತ್ತಾರೆ. ವ್ಯಕ್ತಿಯನ್ನು ಕೊಲ್ಲುವ ಮೂಲಕ ವಿಚಾರವನ್ನು ಕೊಲ್ಲುವ ಈ ಘಟನೆಗಳೇ ಈ ಸಿನಿಮಾ ಮಾಡಲು ಪ್ರೇರಣೆ ಎನ್ನುತ್ತಾರೆ ನಿರ್ದೇಶಕ. ಇದು ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಿಸುತ್ತದೆ, ಒಂದು ಘನವಾದ ವಿಷಯವಸ್ತುವುಳ್ಳ ಸಿನಿಮಾ ನೋಡಲು ಸಿಗುತ್ತದೆ ಎಂಬ ನಿರೀಕ್ಷೆ ಮೂಡಿಸುತ್ತದೆ. ಆದರೆ ಸಿನಿಮಾ ಆರಂಭವಾದ 15 ನಿಮಿಷದಲ್ಲಿಯೇ ಈ ಸಿನಿಮಾದಲ್ಲಿ ಅಂಥ ವಿಶೇಷ ಪ್ರಯತ್ನವೇನೂ ಇಲ್ಲ ಎಂಬುದು ಗೊತ್ತಾಗಿಬಿಡುತ್ತದೆ.

ಸಿನಿಮಾ ಆರಂಭವಾಗುವುದು ನಾಯಕ ‘ಅರ್ಜುನ್ ಗೌಡ’ ಮಹಿಳೆಯೊಬ್ಬಾಕೆಯನ್ನು ಶೂಟ್ ಮಾಡುವ ಮೂಲಕ. ಆ ಮಹಿಳೆ ಆತನ ತಾಯಿಯೇ! ಅರ್ಜುನ್ ಗೌಡ ತನ್ನ ತಾಯಿಯನ್ನೇ ಯಾಕೆ ಕೊಲ್ಲಲು ಯತ್ನಿಸಿದ, ಅಥವಾ ಕೊಲ್ಲುವ ಸಂದರ್ಭ ಸೃಷ್ಟಿಯಾಯಿತು, ನಿಜಕ್ಕೂ ಆತನೇ ತನ್ನ ತಾಯಿಯ ಮೇಲೆ ಗುಂಡು ಹಾರಿಸಿದನಾ? ಇತರೆ ಅಂಶಗಳು ಪ್ರೇಕ್ಷಕನಿಗೆ ಸ್ಪಷ್ಟವಾಗುವುದು ಸಿನಿಮಾದ ಅಂತ್ಯದಲ್ಲಿ. ಸಿನಿಮಾದ ಮೊದಲ ಹಾಗೂ ಕೊನೆಯ ಕಥಾ ಬಿಂದು ನಡುವೆ ಹಲವು ದೃಶ್ಯಗಳು ಬಂದು ಹೋಗುತ್ತವೆ. ಆ ದೃಶ್ಯಗಳೆಲ್ಲವೂ ನಾಯಕ ಈ ಕುಕೃತ್ಯ ಮಾಡಲು ಕಾರಣವನ್ನು ವಿವರಿಸುವ ಯತ್ನ ಮಾಡುತ್ತವೆ.

ಹಾಗೆ ನೋಡಿದರೆ ಅರ್ಜುನ್ ಗೌಡ ತನ್ನ ತಾಯಿಯನ್ನು ಕೊಲ್ಲಲು ಯತ್ನಿಸಿದ್ದಕ್ಕೆ ಗಟ್ಟಿ ಕಾರಣವೇ ಇಲ್ಲ. ಆದರೆ ಅದನ್ನೇ ಕತೆಯ ಮುಖ್ಯ ಧಾತುವನ್ನಾಗಿಸಿಕೊಂಡು ಸಿನಿಮಾ ಹೆಣೆದಿದ್ದಾರೆ ನಿರ್ದೇಶಕ. ಮುಖ್ಯ ಎಳೆಯೇ ಪೇಲವವಾಗಿರಲು ಇತರೆ ದೃಶ್ಯಗಳು ಗಟ್ಟಿಯಾಗಿರುತ್ತವೆ ಎಂದು ಪ್ರೇಕ್ಷಕ ಊಹಿಸುವಂತಿಲ್ಲ.

ಒಂದು ಕಮರ್ಷಿಯಲ್ ಸಿನಿಮಾಕ್ಕೆ ಬೇಕಾದ ಎಲ್ಲವನ್ನೂ ನಿರ್ದೇಶಕರು ಕತೆಯಲ್ಲಿ ಸೇರಿಸಿದ್ದಾರೆ. ಹೀರೋನ ಮಾಸ್ ಎಂಟ್ರಿ, ತಾಯಿ ಸೆಂಟಿಮೆಂಟ್, ಪ್ರೀತಿ, ಭಗ್ನ ಪ್ರೇಮ, ನಾಯಕ ತಿರುಗಿಬೀಳುವುದು, ಸೇಡು ತೀರಿಸಿಕೊಳ್ಳುವುದು, ಹಾಸ್ಯಕ್ಕೆ ಪ್ರತ್ಯೇಕ ಟ್ರ್ಯಾಕ್, ಒಂದು ಹೀರೋ ಇಂಟ್ರೊಡಕ್ಷನ್ ಹಾಡು, ಎರಡು ಯುಗಳ ಗೀತೆ, ಒಂದು ಎಣ್ಣೆ ಹಾಡು ಹೀಗೆ ಎಲ್ಲವೂ ಇದೆ, ಎಲ್ಲವೂ ಇದ್ದರು ಸಿನಿಮಾ ಒಟ್ಟಾರೆಯಾಗಿ ಪ್ರೇಕ್ಷಕನನ್ನು ಪೂರ್ಣವಾಗಿ ಹಿಡಿದಿಟ್ಟುಕೊಳ್ಳುವುದಿಲ್ಲ. ಪ್ರೀತಿ, ತಾಯಿ ಸೆಂಟಿಮೆಂಟ್, ಸೇಡಿನ ಕತೆ, ಹಾಸ್ಯ ಯಾವುದನ್ನೂ ಒತ್ತಿ ಹೇಳಲು ನಿರ್ದೇಶಕರಿಗೆ ಸಾಧ್ಯವಾಗಿಲ್ಲ. ಎಲ್ಲವೂ ಟಚ್ ಆಂಡ್ ಗೋ.

ಸಿನಿಮಾದಲ್ಲಿನ ಕಲಾವಿದರು ಸಹ ತಮಗೆ ಕೊಟ್ಟ ಕೆಲಸವನ್ನು ಮುಗಿಸಿಕೊಟ್ಟಿದ್ದಾರಷ್ಟೆ. ಒಳ್ಳೆಯ ನಟನೆಯನ್ನು ನೀಡಲು ಕತೆಯೇ ಅವಕಾಶ ನೀಡದಿದ್ದಾಗ ಪ್ರಜ್ವಲ್ ದೇವರಾಜ್, ಸ್ಪರ್ಶ ರೇಖ, ಸಾಧುಕೋಕಿಲ ಅಂಥ ಪ್ರತಿಭಾನ್ವಿತರೂ ಹೆಚ್ಚಿಗೆ ಏನೂ ಮಾಡಲಾಗದು. ಆದರೂ ಪ್ರಜ್ವಲ್ ದೇವರಾಜ್, ನಾಯಕಿ ಪ್ರಿಯಾಂಕಾ ತಿಮ್ಮೇಶ್, ಸ್ಪರ್ಶ ರೇಖ, ಸಾಧು ಕೋಕಿಲ ಅವರುಗಳ ನಟನೆ ಗಮನ ಸೆಳೆಯುತ್ತದೆ.

ಈ ಸಿನಿಮಾದಲ್ಲಿ ಸಾಧು ಕೋಕಿಲ ಅವರಿಗೆ ಎರಡು ಕೆಲಸ ನೀಡಲಾಗಿದೆ. ಹಾಸ್ಯದ ಜೊತೆಗೆ ಕಾರು ಬ್ರ್ಯಾಂಡ್ ಒಂದರ ಪ್ರಚಾರಕ್ಕೂ ಅವರನ್ನು ಬಳಸಿಕೊಳ್ಳಲಾಗಿದೆ. ಹಾಸ್ಯ ದೃಶ್ಯಗಳ ಮೇಲೆ ನಿರ್ದೇಶಕರು ಹೆಚ್ಚಿನ ಗಮನ ವಹಿಸಿದಂತಿಲ್ಲ. ಹೇಗಾದರು ಮಾಡಿ, ಏನಾದರೂ ಮಾತನಾಡಿ ಒಟ್ಟಿನಲ್ಲಿ ನಗಿಸಿ ಎಂದು ನಟರಿಗೇ ಜವಾಬ್ದಾರಿ ಬಿಟ್ಟಂತಿದೆ. ನಗಿಸಲು ಸಾಧು ಕೋಕಿಲ ಶಕ್ತಿಮೀರಿ ಯತ್ನಿಸಿದ್ದಾರೆ ಎಂದಷ್ಟೆ ಹೇಳಬಹುದು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಜೈ ಭೀಮ್' ಪ್ರಭಾವಶಾಲಿ ಎಮೋಷನಲ್ ಕೋರ್ಟ್ ಡ್ರಾಮಾ;

Wed Jan 5 , 2022
ಭಾರತ ಸಂವಿಧಾನ ಕಾರ್ಯಾಂಗ, ಶಾಸಕಾಂಗದಷ್ಟೇ ನ್ಯಾಯಾಂಗವನ್ನುಕೂಡ ಅತ್ಯಂತ ಜವಾಬ್ದಾರಿಯುತವಾದ ವ್ಯವಸ್ಥೆಯಾಗಿ ಗುರುತಿಸಿದೆ. ದುರಂತವೆಂದರೆ ಯಾವ ನ್ಯಾಯವ್ಯವಸ್ಥೆ ಬಡವರು ದಲಿತರು, ಅಶಕ್ತರ ಪರವಾಗಿ ಧ್ವನಿಯಾಗಬೇಕು ಅದು ಅವರ ಪಾಲಿಗೆ ಗಗನ ಕುಸುಮವಾಗಿದೆ. ಒಬ್ಬ ಶ್ರೀಮಂತನ ಬೇಲ್ ಪಿಟಿಶನ್ ಗಂಟೆಗಳಲ್ಲಿ ವಿಚಾರಣೆ ಮಾಡಿ ಕ್ಷಣಗಳಲ್ಲಿ ಬೇಲ್ ಕೊಟ್ಟುಬಿಡುತ್ತಾರೆ. ಅದೇ ಒಬ್ಬ ಅಶಕ್ತನ ಬೇಲ್ ಅಪ್ಲಿಕೇಶನ್ ತಿಂಗಳುಗಟ್ಟಲೆ ವಿಚಾರಣೆಗೆ ಕೂಡ ಬರುವುದಿಲ್ಲ. ಇದಕ್ಕೆ ಕಾನೂನಿನ ಒಳಗಿನ ಲೋಪದೋಷಗಳು ಆಗಬಹುದು, ನ್ಯಾಯ ವ್ಯವಸ್ಥೆಯಲ್ಲಿರುವ ಭ್ರಷ್ಟಾಚಾರವು ಆಗಬಹುದು […]

Advertisement

Wordpress Social Share Plugin powered by Ultimatelysocial