ಪುಷ್ಪರಾಣಿಯರ ಕಣ್ತುಂಬಿಕೊಳ್ಳಲು ಮೈಸೂರು ಅರಮನೆಗೆ ಪ್ರವಾಸಿಗರ ಲಗ್ಗೆ!

ಮೈಸೂರು, ಡಿಸೆಂಬರ್ 26; ಕ್ರಿಸ್‌ಮಸ್ ರಜೆಯ ಮಜಾ ಅನುಭವಿಸುವ ಸಲುವಾಗಿ ಪ್ರವಾಸಿಗರು ಅರಮನೆ ನಗರಿಗೆ ಲಗ್ಗೆಯಿಡುತ್ತಿದ್ದು, ಅರಮನೆ, ಮೃಗಾಲಯ, ಚಾಮುಂಡಿ ಬೆಟ್ಟ ಸೇರಿದಂತೆ ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಜನಜಂಗುಳಿ ಕಂಡು ಬರುತ್ತಿದೆ.

ಮುಂದಿನ ವಾರ ಹೊಸ ವರ್ಷವನ್ನು ಹೊರ ಊರುಗಳಿಗೆ ಹೋಗಿ ಆಚರಿಸಬೇಕೆಂದು ಹಲವರು ತೀರ್ಮಾನ ಮಾಡಿದ್ದದ್ದರು.

ಆದರೆ ಹೊಸ ವರ್ಷಾಚರಣೆಗೆ ಕೊರೊನಾ ರೂಪಾಂತರಿ ಓಮಿಕ್ರಾನ್ ಹಿನ್ನಲೆಯಲ್ಲಿ ಸರ್ಕಾರ ನಿರ್ಬಂಧ ಹೇರಿರುವುದರಿಂದ ಬಹಳಷ್ಟು ಪ್ರವಾಸಿಗರು ವಾರದ ಮೊದಲೇ ತಮ್ಮ ನೆಚ್ಚಿನ ತಾಣಗಳಿಗೆ ತೆರಳಿ ಒಂದಷ್ಟು ಮಜಾ ಮಾಡುತ್ತಿದ್ದಾರೆ.

ಕಳೆದೆರಡು ವರ್ಷಗಳಿಂದ ಕೊರೊನಾ ಭಯದಲ್ಲಿ ಮನೆಯಿಂದ ಹೊರಗೆ ಹೋಗದೆ ಗೋಡೆಗಳ ನಡುವೆ ಬಂಧಿಯಾಗಿದ್ದವರು ಈಗ ರೆಕ್ಕೆ ಬಿಚ್ಚಿ ಹಾರುವ ಸಲುವಾಗಿ ಮೈಸೂರಿನತ್ತ ಮುಖ ಮಾಡಿದ್ದು, ಸಂಜೆಯಾಗುತ್ತಿದ್ದಂತೆಯೇ ವಸ್ತುಪ್ರದರ್ಶನಕ್ಕೆ ಭೇಟಿ ನೀಡಿ ಸುತ್ತಾಡುತ್ತಾ ತಮಗೆ ಬೇಕಾದನ್ನು ಕೊಂಡು, ಸವಿದು ಆಟಗಳನ್ನು ಆಡಿ ಹಿಂತಿರುಗುತ್ತಿದ್ದಾರೆ.

ಮತ್ತೊಂದೆಡೆ ಪ್ರವಾಸಿಗರನ್ನು ಅರಮನೆ ಮತ್ತು ಅರಮನೆ ಆವರಣದಲ್ಲಿ ಏರ್ಪಡಿಸಲಾಗಿರುವ ಫಲಪುಷ್ಪ ಪ್ರದರ್ಶನ ಕೈಬೀಸಿ ಕರೆಯುತ್ತಿದೆ. ಕ್ರಿಸ್‌ಮಸ್ ದಿನವೇ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಲಾಗಿದ್ದು, ಮೊದಲ ದಿನವೇ ಜನ ಕಿಕ್ಕಿರಿದು ತುಂಬಿದ್ದು ವಿಶೇಷವಾಗಿತ್ತು. ವಾರಾಂತ್ಯದ ರಜೆಯ ಮೂಡ್ ನಲ್ಲಿದ್ದವರು ಶನಿವಾರದ ಸಂಜೆಯೇ ಭೇಟಿ ನೀಡಿ ಮನತಣಿಸಿಕೊಂಡರು.

ಫಲಪುಷ್ಪ ಪ್ರದರ್ಶನದ ಎರಡೂ ಗೇಟ್ ಬಳಿ ಫಲಕವೊಂದರಲ್ಲಿ ಕೋವಿಡ್ ಲಸಿಕೆ ಪಡೆದಿರುವುದನ್ನು ಖಚಿತ ಪಡಿಸಲು ಮೊಬೈಲ್ ಸಂಖ್ಯೆಯನ್ನು ಪ್ರದರ್ಶಿಸಲಾಗಿದ್ದು, ಅದಕ್ಕೆ ಮಿಸ್ಡ್ ಕಾಲ್ ನೀಡಿದರೆ ಲಸಿಕೆ ಪಡೆದಿರುವ ಪ್ರಮಾಣ ಪತ್ರ ಪ್ರದರ್ಶನವಾಗಲಿದೆ. ಫಲಪುಷ್ಪ ಪ್ರದರ್ಶನದಲ್ಲಿ ಸೆಲ್ಪಿ ತೆಗೆದುಕೊಳ್ಳಲು ಸೆಲ್ಪಿ ಪಾಯಿಂಟ್ ಇದ್ದು, ಅಂತರ ಕಾಪಾಡಿಕೊಂಡು ಕೋವಿಡ್ ನಿಯಮ ಪಾಲಿಸುವ ಮೂಲಕ ಪ್ರದರ್ಶನಕ್ಕೆ ತೆರಳಿದರೆ ಎಲ್ಲರಿಗೂ ಒಳ್ಳೆಯದಾಗಲಿದೆ.

ಅರಮನೆ ಆವರಣದಲ್ಲಿ ಉತ್ಸವ
 ವೀಕೆಂಡ್ ಹಿನ್ನಲೆಯಲ್ಲಿ ದೂರದ ಊರುಗಳಿಂದ ಬಂದು ನಗರದಲ್ಲಿ ವಾಸ್ತವ್ಯ ಹೂಡಿರುವ ಪ್ರವಾಸಿಗರು ಕೆಆರ್ ಎಸ್ ಬೃಂದಾವನ, ಚಾಮುಂಡಿಬೆಟ್ಟ, ಬಂಡೀಪುರ, ಕೊಡಗಿನತ್ತ ತೆರಳುತ್ತಿದ್ದಾರೆ. ಇತ್ತ ಅರಮನೆಯತ್ತವೂ ಪ್ರವಾಸಿಗರ ದಂಡು ಜಮಾಯಿಸುತ್ತಿದ್ದು, ಫಲಪುಷ್ಪ ಪ್ರದರ್ಶನದಲ್ಲಿ ಜನವೋ ಜನ ಕಂಡು ಬರುತ್ತಿದ್ದಾರೆ. ಪ್ರತಿವರ್ಷವೂ ಅರಮನೆ ಆವರಣದಲ್ಲಿ ಮಾಗಿ ಉತ್ಸವ ಮಾಡಲಾಗುತ್ತಿತ್ತು. ಆದರೆ ಕೊರೊನಾ ಕಾರಣದಿಂದ ಕಳೆದ ವರ್ಷ ನಡೆದಿರಲಿಲ್ಲ. ಈ ಬಾರಿ ಮಾಗಿ ಉತ್ಸವದ ಬದಲಿಗೆ ಬರೀ ಫಲಪುಷ್ಪ ಪ್ರದರ್ಶನವನ್ನು ಮಾತ್ರ ಏರ್ಪಡಿಸಲಾಗಿದೆ.

ಕಣ್ಮನ ತಣಿಸುವ ಪುಷ್ಪರಾಣಿಯರು

ಇದೀಗ ಫಲಪುಷ್ಪ ಪ್ರದರ್ಶನದಿಂದಾಗಿ ವಿಶ್ವವಿಖ್ಯಾತ ಅರಮನೆಗೆ ಹೊಸಕಳೆ ಬಂದಿದೆ. ಅರಮನೆ ಆವರಣಕ್ಕೆ ಭೇಟಿ ನೀಡಿದವರಿಗೆ ಎರಡು ಕಡೆಯಲ್ಲೂ ಗದೆಯ ಮಾದರಿಯ ಚಿತ್ತಾರಗಳ ದ್ವಾರ ಪುಷ್ಪ ಪ್ರೇಮಿಗಳನ್ನು ಫಲಪುಷ್ಪ ಪ್ರದರ್ಶನಕ್ಕೆ ಸ್ವಾಗತಿಸುತ್ತದೆ. ಸ್ವಾಗತ ದ್ವಾರದ ಮೂಲಕ ಹೆಜ್ಜೆ ಹಾಕುತ್ತಾ ಹೋದಂತೆ ಫಲಪುಷ್ಪ ಪ್ರದರ್ಶನದ ವಿಶೇಷತೆ ಮತ್ತು ಚೆಲುವು ಒಂದೊಂದಾಗಿ ತೆರೆದುಕೊಳ್ಳುತ್ತಾ ಕಣ್ಣಿಗೆ ರಸದೂಟವನ್ನು ನೀಡುತ್ತಾ ಹೋಗುತ್ತದೆ.

10 ಲಕ್ಷಕ್ಕೂ ಅಧಿಕ ಗುಲಾಬಿ

ಎಲ್ಲೆಂದರಲ್ಲಿ ಶೋಭಿಸುವ ಪುಷ್ಪರಾಣಿಯರನ್ನು ನೋಡುವುದೇ ಕಣ್ಣಿಗೆ ಆನಂದವನ್ನುಂಟು ಮಾಡುತ್ತದೆ. ಮೆರಿಗೋಲ್ಡ್, ಸಾಲ್ವಿಯ, ಡೇಲಿಯ, ಪಿಟೋನಿಯ, ಸೇವಂತಿಗೆ, ಕೋಲಿಯಸ್, ಸಿಲೋಷಿಯ, ನಸ್ಟರ್ಸಿಯಂ, ಆಂಟಿರೈನಂ, ಬೋನ್ಸಾಯ್ ಗಿಡಗಳಂತಹ ಸುಮಾರು ಹದಿನೈದು 15 ಸಾವಿರಕ್ಕೂ ಹೆಚ್ಚು ಹೂವಿನ ಕುಂಡಗಳನ್ನು ವಿಭಿನ್ನ ರೀತಿಯಲ್ಲಿ ಜೋಡಿಸಲಾಗಿದ್ದು, 32 ಜಾತಿಯ ಹೂವಿನ ಗಿಡಗಳನ್ನಿಡಲಾಗಿದೆ. ವಿವಿಧ ಬಣ್ಣಗಳಿಂದ ಕೂಡಿದ 10 ಲಕ್ಷಕ್ಕೂ ಹೆಚ್ಚು ಗುಲಾಬಿಗಳು, ಕ್ರೈಸಾಂಥಿಮಮ್, ಪಿಂಗ್‌ಪಾಂಗ್, ಕಾರ್ನೆಷನ್, ಆಸ್ಟ್ರಮೇರಿಯ, ಜರ್ಬೆರಾ, ಆಂಥೋ ರಿಯಮ್, ಆರ್ಕಿಡ್ಸ್, ಬ್ಲೂ ಡೈಸಿ, ಡ್ರೆಸಿನಾ ಹಾಗೂ ಇತರೆ ಅಲಂಕಾರಿಕ ಹೂವುಗಳಿಂದ ಹಾಗೂ ಊಟಿ ಕಟ್ ಫ್ಲವರ್‌ ಬಳಸಿ ಆನೆಗಳು, ಹೆಲಿಕಾಪ್ಟರ್ ಸೇರಿದಂತೆ ಹಲವು ರೀತಿಯ ಕಲಾಕೃತಿಗಳನ್ನು ರಚಿಸಲಾಗಿದೆ. ಇವುಗಳೆಲ್ಲವೂ ಕಣ್ಮನಸೆಳೆಯುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

 

Please follow and like us:

Leave a Reply

Your email address will not be published. Required fields are marked *

Next Post

ಶಿವಮೊಗ್ಗಕ್ಕೆ ಬಂತು ವಿಸ್ಟೋಡಾಮ್ ರೈಲು ಬೋಗಿ, ವಿಶೇಷತೆಗಳು

Sun Dec 26 , 2021
ಶಿವಮೊಗ್ಗ, ಡಿಸೆಂಬರ್ 26; ಕರ್ನಾಟಕದ ಎರಡನೇ ವಿಸ್ಟಾಡೋಮ್ ರೈಲು ಬೋಗಿ ಶನಿವಾರ ಶಿವಮೊಗ್ಗಕ್ಕೆ ಆಗಮಿಸಿತು. ಮೊದಲ ದಿನವೇ ವಿಸ್ಟಾಡೋಮ್ ಬೋಗಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಹೈಫೈ ಸೌಲಭ್ಯದ ಜೊತೆಗೆ ರೈಲು ಪ್ರಯಾಣಕ್ಕೆ ಹೊಸ ಅನುಭವ ನೀಡಲಿದೆ. ಶಿವಮೊಗ್ಗ-(ಯಶವಂತಪುರ) ಇಂಟರ್ ಸಿಟ ರೈಲಿಗೆ ಒಂದು ವಿಸ್ಟಾಡೋಮ್ ಬೋಗಿ ಅಳವಡಿಸಲಾಗಿದೆ. ಶನಿವಾರ ಯಶವಂತಪುರದಿಂದ ಶಿವಮೊಗ್ಗಕ್ಕೆ ಆಮಿಸಿದ ರೈಲಿನಲ್ಲಿ ಒಂದು ವಿಸ್ಟಾಡೋಮ್ ಬೋಗಿ ಅಳವಡಿಸಲಾಗಿತ್ತು. ಮೊದಲ ಟ್ರಿಪ್‌ನಲ್ಲಿ ಶಿವಮೊಗ್ಗಕ್ಕೆ 7 ಪ್ರಯಾಣಿಕರು ವಿಸ್ಟಾಡೋಮ್ ಬೋಗಿಯಲ್ಲಿ […]

Advertisement

Wordpress Social Share Plugin powered by Ultimatelysocial