ಬಸವರಾಜ ಬೊಮ್ಮಾಯಿ ಎದುರಾಳಿ ಯಾರು?

ಹಾವೇರಿ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆ ಜಿಲ್ಲೆಯಲ್ಲಿ ಚುನಾವಣೆ ಕಾವು ನಿಧಾನವಾಗಿ ಏರುತ್ತಿದ್ದು, ರಾಜಕೀಯ ವಲಯದಲ್ಲಿ ಚುನಾವಣೆ ಪೂರ್ವ ಚಟುವಟಿಕೆಗಳು ಗರಿಗೆದರಿವೆ. ಮುಖ್ಯವಾಗಿ ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ತಾವು ಸ್ಪರ್ಧಾಕಾಂಕ್ಷಿ ಎಂಬುದನ್ನು ಬಿಂಬಿಸಲು ನಾನಾ ಕಸರತ್ತು ನಡೆಸುತ್ತಿದ್ದು, ಕುತೂಹಲ ಮೂಡಿಸಿದೆ.ಜಿಲ್ಲೆಯ 6 ಕ್ಷೇತ್ರಗಳ ಪೈಕಿ ಐದು ಕ್ಷೇತ್ರಗಳಲ್ಲಿ ಬಿಜೆಪಿ (ಬ್ಯಾಡಗಿ, ಶಿಗ್ಗಾವಿ-ಸವಣೂರು, ರಾಣಿಬೆನ್ನೂರು, ಹಿರೇ ಕೆರೂರು, ಹಾವೇರಿ-ಮೀಸಲು) ಶಾಸಕರಿದ್ದಾರೆ. ಹಾನಗಲ್ಲ ಕ್ಷೇತ್ರ ಮಾತ್ರ ಕಾಂಗ್ರೆಸ್‌ ತೆಕ್ಕೆಯಲ್ಲಿದೆ. ಈ ಬಾರಿಯ ಚುನಾ ವಣೆಯಲ್ಲಿ ಯಾವುದೇ ಶಾಸಕರ ಕ್ಷೇತ್ರ ಬದಲಾ ವಣೆ, ಪ್ರಮುಖರ ಪಕ್ಷ ಬದಲಾವಣೆ ವಿಚಾರ ಇನ್ನೂ ಅಷ್ಟಾಗಿ ಮುನ್ನೆಲೆಗೆ ಬಂದಿಲ್ಲ. ಆದರೆ ಕೆಲವು ಕ್ಷೇತ್ರಗಳಲ್ಲಿ ಹೊಸಬರ ಪ್ರವೇಶಕ್ಕೆ ರಂಗ ಸಜ್ಜುಗೊಳಿಸಲಾಗುತ್ತಿದೆ.

ಸಿಎಂ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುತ್ತಿರುವ ಶಿಗ್ಗಾವಿ-ಸವಣೂರು ವಿಧಾನಸಭೆ ಕ್ಷೇತ್ರದಲ್ಲಿ ಸದ್ಯ ಅವರಿಗೆ ಪ್ರಬಲ ಎದುರಾಳಿ ಇಲ್ಲದಂತಾಗಿದೆ. ಕಳೆದ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ವಿಪ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಟಿಕೆಟ್‌ ಬಯಸಿ ಕೈ ಸೇರ್ಪಡೆಗೊಂಡಿದ್ದಾರೆ. ಅವರೊಂದಿಗೆ ಷಣ್ಮುಖ ಶಿವಳ್ಳಿ, ಶ್ರೀಕಾಂತ ದುಂಡಿಗೌಡ್ರ ಸೇರಿ ಅನೇಕರು ಕಾಂಗ್ರೆಸ್‌ ಟಿಕೆಟ್‌ ಬಯಸಿದ್ದಾರೆ. ಆದರೆ ಇತ್ತೀಚೆಗೆ ಮತ್ತೆ ಅಜ್ಜಂಪೀರ್‌ ಖಾದ್ರಿ ಕ್ಷೇತ್ರದಲ್ಲಿ ಸಂಚರಿಸುತ್ತಿರುವುದು ಕುತೂಹಲ ಮೂಡಿಸಿದೆ.

ಬಿ.ಸಿ.ಪಾಟೀಲ್‌ ಮತ್ತೆ ಸ್ಪರ್ಧಿಸುತ್ತಾರಾ?: ಹಿರೇಕೆರೂರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಕ್ಕಿಂತ ವ್ಯಕ್ತಿ ಮುಖ್ಯ. ಈ ಸಾರಿ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಯಾರಿಗೆ ಸಿಗುತ್ತದೆ ಎಂಬ ಗೊಂದಲವಿದೆ. ಮಾಜಿ ಶಾಸಕ ಯು.ಬಿ.ಬಣಕಾರ 2019ರ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದಿದ್ದ ಸಚಿವ ಬಿ.ಸಿ.ಪಾಟೀಲ್‌ಗೆ ಬೆಂಬಲ ಕೊಟ್ಟಿದ್ದರು. ಆದರೆ ಈ ಬಾರಿ ಟಿಕೆಟ್‌ಗೆ ಇಬ್ಬರ ನಡುವೆ ಪೈಪೋಟಿ ನಡೆಯಲಿದೆ. ಬಿಜೆಪಿ ಟಿಕೆಟ್‌ ತಪ್ಪಿದವರು ಕಾಂಗ್ರೆಸ್‌ಗೆ ಹೋಗ್ತಾರೆಂಬ ಮಾಹಿತಿಯೂ ಇದೆ. ಹೀಗಾಗಿ ಕಾಂಗ್ರೆಸ್‌ನಿಂದ ಯಾರು ಸ್ಪರ್ಧಿಸುತ್ತಾರೆ ಎಂಬುದು ಇನ್ನೂ ಖಾತ್ರಿಯಾಗಿಲ್ಲ, ಜೆಡಿಎಸ್‌ನ ಜೆ.ಕೆ. ಜಾವಣ್ಣನವರ ಕ್ಷೇತ್ರದಲ್ಲಿ ಓಡಾಟ ನಡೆಸುತ್ತಿದ್ದಾರೆ.

ಎಸ್‌ಸಿ ಮೀಸಲು ಹಾವೇರಿ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌-ಬಿಜೆಪಿ ನಡುವೆ ನೇರ ಹಣಾಹಣಿ ಇದೆ. ಈ ಬಾರಿ ಹಾಲಿ ಶಾಸಕ ನೆಹರೂ ಓಲೇಕಾರ ಕಾರ್ಯಕರ್ತರನ್ನು ಅವಗಣಿಸುತ್ತಿದ್ದಾರೆಂಬ ದೂರುಗಳಿವೆ. ಕಾಂಗ್ರೆಸ್‌ನಿಂದ ಮತ್ತೆ ಮಾಜಿ ಶಾಸಕ ರುದ್ರಪ್ಪ ಲಮಾಣಿ ಸ್ಪರ್ಧಿಸುವ ಸಾಧ್ಯತೆಯಿದೆ. ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಂ.ಹಿರೇಮಠ ಅವರು ಬೇಡ ಜಂಗಮ (ಎಸ್‌ಸಿ) ಜಾತಿ ಪ್ರಮಾಣ ಪಡೆದಿರುವ ಮಾಹಿತಿ ಇದ್ದು, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆಂಬ ಮಾತುಗಳು ಹರಿದಾಡುತ್ತಿವೆ.

ಬ್ಯಾಡಗಿ ಕ್ಷೇತ್ರದಲ್ಲಿ ಹಾಲಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಬಗ್ಗೆ ವಿರೋಧದ ಅಲೆ ಎದ್ದಿದೆ. ಕಳೆದ ಚುನಾ ವಣೆಯಲ್ಲಿ ಪರಾಭಗೊಂಡಿದ್ದ ಎಸ್‌.ಆರ್‌.ಪಾಟೀಲ್‌ಹಾಗೂ ಮಾಜಿ ಶಾಸಕ ಬಸವರಾಜ ಶಿವಣ್ಣನವರ ನಡುವೆ ಕಾಂಗ್ರೆಸ್‌ ಟಿಕೆಟ್‌ಗಾಗಿ ಪೈಪೋಟಿಯಿದೆ. ಟಿಕೆಟ್‌ ತಪ್ಪಿದ್ದಕ್ಕೆ ಅಸಮಾಧಾನಗೊಂಡು ಒಳ ಏಟು ಕೊಟ್ಟರೆ ಬಿಜೆಪಿಗೆ ಅನುಕೂಲವಾಗುವ ಸಾಧ್ಯತೆಯಿದೆ.

ಹಾನಗಲ್ಲ ಕಣ ಹೇಗಿದೆ?: ಹಾನಗಲ್ಲ ಕ್ಷೇತ್ರದಲ್ಲಿ ಕಾಂಗ್ರೆಸ್‌-ಬಿಜೆಪಿ ನಡುವೆ ಸಮಬಲದ ಹೋರಾಟವಿದೆ. ಇತ್ತೀಚೆಗೆ ಗೆದ್ದಿರುವ ಶ್ರೀನಿವಾಸ ಮಾನೆ ಕ್ಷೇತ್ರದಲ್ಲಿ ನಿರಂತರ ಸಂಪರ್ಕ ಹೊಂದಿದ್ದಾರೆ. ಜತೆಗೆ ಅಲ್ಪಮತಗಳ ಅಂತರದಲ್ಲಿ ಪರಾಭಗೊಂಡಿರುವ ಬಿಜೆಪಿಯ ಶಿವರಾಜ ಸಜ್ಜನರ ಸಹ ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದು, ಕಾರ್ಯಕರ್ತ ರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಹೀಗಾಗಿ ಕಾಂಗ್ರೆಸ್‌- ಬಿಜೆಪಿ ನಡುವೆ ಸಮಬಲದ ಹೋರಾಟ ಕಂಡುಬರುತ್ತಿದೆ.

ರಾಣಿಬೆನ್ನೂರ ಕ್ಷೇತ್ರದಲ್ಲಿ ಸದ್ಯ ಅರುಣಕುಮಾರ ಪೂಜಾರ ಬಿಜೆಪಿ ಶಾಸಕರಾಗಿದ್ದು, ಮಾಜಿ ಸಚಿವ ಆರ್‌.ಶಂಕರ್‌ ಹಾಗೂ ಅರುಣ್‌ ಪೂಜಾರ ನಡುವೆ ಹೊಂದಾಣಿಕೆ ಇಲ್ಲ, ಇಬ್ಬರ ಬೆಂಬಲಿಗರ ನಡುವೆ ಕಿತ್ತಾಟ ಶುರುವಾಗಿದೆ. 2 ವರ್ಷದಲ್ಲಿ ವಿರೋಧಿ ಅಲೆ ಕೂಗು ಕೇಳುತ್ತಿದೆ. ಈ ನಡುವೆ ಬಿಜೆಪಿ ಮುಖಂಡ ಸಂತೋಷ ಪಾಟೀಲ್‌ ತಮ್ಮದೆ ತಂಡ ಕಟ್ಟಿಕೊಂಡು ಕ್ಷೇತ್ರ ಸಂಚಾರ ಆರಂಭಿಸಿದ್ದಾರೆ. ಇತ್ತ ಕಾಂಗ್ರೆಸ್‌ನಲ್ಲಿ ಮಾಜಿ ಸ್ಪೀಕರ್‌ ಕೆ.ಬಿ. ಕೋಳಿವಾಡ ಸ್ಪರ್ಧಿಸುತ್ತಾರೋ ಇಲ್ಲ ಅವರ ಪುತ್ರ ಪ್ರಕಾಶ ಕೋಳಿವಾಡ ಸ್ಪರ್ಧಿಸುತ್ತಾರೋ ಎಂಬುದು ಖಾತ್ರಿಯಾಗಿಲ್ಲ.

ಆಕಾಂಕ್ಷಿಗಳ ತೆರೆಮರೆ ಪ್ರಚಾರ
ಟಿಕೆಟ್‌ ಆಕಾಂಕ್ಷಿಗಳು ತೆರೆಮರೆಯಲ್ಲಿಯೇ ಪ್ರಚಾರ ಚಟುವಟಿಕೆ ಆರಂಭಿಸಿದ್ದಾರೆ. ಗ್ರಾಮಗಳಲ್ಲಿ ಫ್ಲೆಕ್ಸ್‌ ಅಳವಡಿಸುವುದು, ಮದುವೆ ಸೇರಿ ಶುಭ ಸಮಾರಂಭಗಳಿಗೆ ತಪ್ಪದೆ ಹಾಜರಾಗುವುದು, ಊರಿನ ಜಾತ್ರೆ, ಸಾಂಸ್ಕೃತಿಕ ಕಾರ್ಯಕ್ರಮ, ಪಂದ್ಯಾವಳಿ, ನಾಟಕಗಳು ಸೇರಿ ಊರ ಹಬ್ಬಗಳಿಗೆ ಆರ್ಥಿಕ ಸಹಾಯ ನೀಡಿ ಜನರನ್ನು ತಮ್ಮತ್ತ ಸೆಳೆಯುವ ಪ್ರಯತ್ನವನ್ನು ತೆರೆಮರೆಯಲ್ಲಿ ನಡೆಸುತ್ತಿರುವುದು ಗುಪ್ತವಾಗಿ ಉಳಿದಿಲ್ಲ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸ್ವಚ್ಛತೆ ಕಾಪಾಡಿ; ಪ್ಯಾನ್ ಅಳವಡಿಸಿ

Mon May 16 , 2022
ಚಿಕ್ಕಬಳ್ಳಾಪುರ:‌ ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡಿ. ಪ್ಯಾನ್‌ಗಳನ್ನು ಅಳವಡಿಸಿ. ರೋಗಿಗಳಿಗೆ ಅನುಕೂಲ ಆಗುವಂತೆ ಕುರ್ಚಿಗಳನ್ನು ಹಾಕಿ. ಶೌಚಾಲಯದ ಸ್ವಚ್ಛತೆ ಕಾಪಾಡಿ. ಶೌಚಾಲಯವನ್ನು ಸೂಕ್ತವಾಗಿ ನಿರ್ವಹಿಸದಿದ್ದರೆ ಗುತ್ತಿಗೆದಾರರನ್ನು ಬದಲಿಸಿ…ಹೀಗೆ ಜಿಲ್ಲಾ ಆಸ್ಪತ್ರೆಯ ವೈದ್ಯರಿಗೆ ಮತ್ತು ಸಿಬ್ಬಂದಿಗೆ ಖಡಕ್ ಸೂಚನೆ ನೀಡಿದರು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಹೈಕೋರ್ಟ್ ನ್ಯಾಯಮೂರ್ತಿ ಬಿ.ವೀರಪ್ಪ ಸೂಚಿಸಿದರು.   ಇಲ್ಲಿನ ಜಿಲ್ಲಾ ಆಸ್ಪತ್ರೆಗೆ ಭಾನುವಾರ ಭೇಟಿ ನೀಡಿದ ಅವರು, ಪ್ರತಿ ವಾರ್ಡ್‌ಗಳಿಗೆ ಭೇಟಿ ನೀಡಿ ರೋಗಿಗಳಿಂದ ಮಾಹಿತಿ […]

Advertisement

Wordpress Social Share Plugin powered by Ultimatelysocial