ಕಾಂಗ್ರೆಸ್ ಪಕ್ಷ ಜನರ ಬಳಿ ಭಿಕ್ಷೆ ಬೇಡಿ ಹಣ ಸಂಗ್ರಹಿಸಿ ಡಿಕೆಶಿ ಟಾಂಗ್ ಬಿ.ಸಿ.ನಾಗೇಶ್ ಗೆ

 

ಬೆಂಗಳೂರು: ‘ಶಾಲಾ ಮಕ್ಕಳಿಗೆ ಶೂಸ್​, ಸಾಕ್ಸ್ ಕೊಡಲು ಸರ್ಕಾರದ ಬಳಿ ಹಣವಿಲ್ಲದಿದ್ದರೇ, ಕಾಂಗ್ರೆಸ್ ಪಕ್ಷ ರಾಜ್ಯದ ಜನರ ಬಳಿ ಭಿಕ್ಷೆ ಬೇಡಿ ಹಣ ಸಂಗ್ರಹಿಸಿ ನೀಡುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಸಿಎಸ್‌ಆರ್ ಜಾರಿಗೆ ತಂದಿದ್ದು, ರಾಜ್ಯದ ಎಲ್ಲ ಸರ್ಕಾರಿ ಶಾಲಾ ಮಕ್ಕಳಿಗೆ ನಾವೇ ಶೂ ಹಾಗೂ ಸಾಕ್ಸ್ ಗಳನ್ನು ವಿತರಿಸುತ್ತೇವೆ. ಇದು ಕರ್ನಾಟಕದ ಸ್ವಾಭಿಮಾನ, ಗೌರವ ಹಾಗೂ ಮಕ್ಕಳ ಬದುಕಿನ ವಿಚಾರ. ಇದರ ಜವಾಬ್ದಾರಿಯನ್ನು ನಾನು ಹೊರಲು ಸಿದ್ಧನಿದ್ದೇನೆ. ಈ ಬಗ್ಗೆ ಕಾಂಗ್ರೆಸ್ ಪಕ್ಷ ಕಾರ್ಯಕ್ರಮ ರೂಪಿಸಲು ಸಿದ್ಧವಿದೆ’ ಎಂದೂ ತಿಳಿಸಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿದ ನಂತರ ಮಾಧ್ಯಮಗಳ ಜತೆ ಶಿವಕುಮಾರ್ ಅವರು ಮಾತನಾಡಿದರು.

ಶಿಕ್ಷಣ ಸಚಿವ ನಾಗೇಶ್ ಅವರು ಮಕ್ಕಳು ಶಾಲೆಗೆ ಹೋಗುವುದು ಪಾಠ ಕಲಿಯಲೇ ಹೊರತು ಶೂ ಹಾಕಿಕೊಳ್ಳಲು ಅಲ್ಲ ಎಂಬ ಹೇಳಿಕೆ ನೀಡಿರುವ ಬಗ್ಗೆ ಮಾಧ್ಯಮಗಳು ಪ್ರಸ್ತಾಪಿಸಿದಾಗ ಅವರು ಹೇಳಿದ್ದಿಷ್ಟು;

‘ಶಿಕ್ಷಣ ಸಚಿವ ನಾಗೇಶ್ ಅವರ ಹೇಳಿಕೆಯಿಂದ ಇಡೀ ಕರ್ನಾಟಕ ರಾಜ್ಯವೇ ತಲೆತಗ್ಗಿಸುವಂತಾಗಿದೆ. ನಮ್ಮ ಮಕ್ಕಳು ದೇಶಕ್ಕೆ ಕೀರ್ತಿ ತಂದಿದ್ದಾರೆ. ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯಲ್ಲಿ ಓದಿದ ಮಕ್ಕಳು ಇಂದು ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿ ಸಾಧನೆ ಮಾಡಿದ್ದಾರೆ. ಶಿಕ್ಷಣ ಸಚಿವರಿಗೆ ಕನಿಷ್ಠ ಪರಿಜ್ಞಾನವೂ ಇಲ್ಲವಾಗಿದೆ. ಕೂಲಿ ಕಾರ್ಮಿಕರಿಂದ ಹಿಡಿದು ಚಾಲಕರವರೆಗೂ ಪ್ರತಿಯೊಬ್ಬರೂ ತಮ್ಮ ಮಕ್ಕಳು ಶೂ, ಸಮವಸ್ತ್ರಗಳೊಂದಿಗೆ ಶಾಲೆಗೆ ಶಿಸ್ತಿನಿಂದ ಹೋಗಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಅವರು ಸಾಲಸೋಲ ಮಾಡಿ, ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಸರ್ಕಾರ ಮಕ್ಕಳಿಗೆ ಶೂ ಹಾಗೂ ಸಾಕ್ಸ್ ನೀಡುವ ಯೋಜನೆಯನ್ನು ಮೊದಲಿನಿಂದಲೂ ಜಾರಿಗೆ ತಂದಿದೆ. ಶಿಕ್ಷಣ ಸಚಿವರು ಉತ್ತಮ ಬಟ್ಟೆ ಹಾಕಿಕೊಂಡು ಓಡಾಡುವುದಿಲ್ಲವೇ? ಅವರು ಕೇವಲ ಚಡ್ಡಿ ಬನೀಯನ್ ನಲ್ಲೇ ಓಡಾಡಬಹುದಲ್ಲವೇ? ಅವರು ವಿಧಾನಸೌಧಕ್ಕೆ ಬರಲಿ.

ಸಮವಸ್ತ್ರ ಸಕಾಲಕ್ಕೆ ಸಿಗದಿರುವುದು ಪರಂಪರೆಯಾಗಿದೆ. ಸರ್ಕಾರ ಶಾಲಾ ಮಕ್ಕಳ ಪರವಾಗಿ ಕೆಲಸ ಮಾಡದಿದ್ದರೆ, ರಾಜ್ಯದ ಜನ ಹಾಗೂ ಕಾಂಗ್ರೆಸ್ ಪಕ್ಷದವರು ಮಕ್ಕಳ ಪರವಾಗಿ ಕೆಲಸ ಮಾಡಲಿದ್ದಾರೆ. ನಾಗೇಶ್ ಅವರ ಹೇಳಿಕೆ ಗೌರವ ತರುವಂಥದಲ್ಲ. ಇದು ಬರೀ ಹಣದ ವಿಚಾರ ಮಾತ್ರವಲ್ಲ. ಇವರು ಸರ್ಕಾರಿ ಶಾಲಾ ಮಕ್ಕಳನ್ನು ಎಷ್ಟು ಅಗೌರವದಿಂದ ಕಾಣುತ್ತಿದ್ದಾರೆ ಎಂಬುದು ತಿಳಿಯುತ್ತದೆ.

ನೀವು ನಿಮ್ಮ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಬೇರೆ ನೀತಿ ತರುತ್ತಿದ್ದೀರಿ. ಇಷ್ಟು ದಿನ ಪಠ್ಯ ಪುಸ್ತಕ ಹೆಸರಲ್ಲಿ ರಂಪಾಟ ಮಾಡಿದಿರಿ. ಎಲ್ಲ ಸಮಾಜದವರಿಗೂ ಅಗೌರವ ತೋರಿ, ನೋವು ಕೊಟ್ಟಿದ್ದೀರಿ. ಅಂಬೇಡ್ಕರ್, ಬುದ್ಧ, ಬಸವ, ಕುವೆಂಪು ಅವರಿಗೆ ಅಪಮಾನ ಮಾಡಿ, ಎಲ್ಲರ ಮನಸ್ಸಿಗೂ ಗಾಯ ಮಾಡಿದ್ದೀರಿ. ಈಗ ಶಾಲಾ ಮಕ್ಕಳ ಶೂ, ಸಾಕ್ಸ್ ವಿಚಾರದಲ್ಲೂ ಇಂತಹ ಹೇಳಿಕೆ ನೀಡುತ್ತಿರುವುದು ನಾಚಿಕೆಗೇಡಿನ ವಿಚಾರ. ಇದು ಮಾನವೀಯತೆಗೆ ಮಾಡಿರುವ ಅಪಮಾನ. ಮಕ್ಕಳಿಗೆ ಶೂ ಹಾಗೂ ಸಾಕ್ಸ್ ವಿತರಿಸಲು ಕಾಂಗ್ರೆಸ್ ಪಕ್ಷದಿಂದಲೇ ಒಂದು ಕಾರ್ಯಕ್ರಮ ರೂಪಿಸುತ್ತೇವೆ. ಎಲ್ಲ ಕಾರ್ಯಕರ್ತರು ತಮ್ಮ ತಾಲೂಕುಗಳಲ್ಲಿ ದೇಣಿಗೆ ಎತ್ತಿ ಮಕ್ಕಳಿಗೆ ಶೂ, ಸಾಕ್ಸ್ ನೀಡಲಿ. ನಮ್ಮ ಈ ಕಾರ್ಯಕ್ರಮಕ್ಕೆ ಕಾರ್ಪೋರೇಟ್ ಸಂಸ್ಥೆಗಳು ಕೂಡ ತಮ್ಮ ನೆರವಿನ ಹಸ್ತ ಚಾಚಬಹುದು.’

ಪಕ್ಷದ ಸಂಘಟನೆ ಹಾಗೂ ಕಾರ್ಯಕ್ರಮಗಳ ಕುರಿತು ಚರ್ಚೆ:

ಸಿದ್ದರಾಮಯ್ಯ ಅವರ ನಿವಾಸಕ್ಕೆ ಭೇಟಿ ನೀಡಿ ಚರ್ಚೆ ಮಾಡಿದ ಕುರಿತು ಮಾಹಿತಿ ಹಂಚಿಕೊಂಡ ಶಿವಕುಮಾರ್ ಅವರು, ‘ನಿನ್ನೆ ಪಕ್ಷದ ಪದಾಧಿಕಾರಿಗಳು ಹಾಗೂ ಜಿಲ್ಲಾಧ್ಯಕ್ಷರ ಜತೆ ಚರ್ಚೆ ಮಾಡಿದ್ದು, ಜುಲೈ 18ರಂದು ಎಲ್ಲ ಶಾಸಕರ ಜತೆ ಸಭೆ ಮಾಡುತ್ತೇವೆ. ಎಐಸಿಸಿ ಕಾರ್ಯಕ್ರಮಗಳು ಹಾಗೂ ಪಕ್ಷದ ಸಂಘಟನೆ ವಿಚಾರವಾಗಿ ಪಕ್ಷದ ಪದಾಧಿಕಾರಿಗಳು, ಸಂಸದರಿಗೆ ಜವಾಬ್ದಾರಿ ವಹಿಸಿದ್ದು, ಅವರ ಜವಾಬ್ದಾರಿಯ ಕುರಿತು ಮಾರ್ಗದರ್ಶನ ನೀಡಿದ್ದೇವೆ.

ಪಕ್ಷ ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬ ಬಗ್ಗೆ ಸ್ಥಳೀಯ ನಾಯಕರು ಕೆಲವು ಶಿಫಾರಸ್ಸುಗಳನ್ನು ಮಾಡಿದ್ದಾರೆ. ಪಕ್ಷ ಯಾವ ರೀತಿ ಸಾಗಬೇಕು ಎಂಬುದು ಸೇರಿ ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡಲು ಸಿದ್ದರಾಮಯ್ಯ ಅವರು ನನ್ನನ್ನು ಉಪಹಾರಕ್ಕೆ ಆಹ್ವಾನಿಸಿದ್ದರು. ಈ ಹಿನ್ನೆಲೆಯಲ್ಲಿ ಅವರ ನಿವಾಸಕ್ಕೆ ಬಂದು ಮುಂದಿನ ದಿನಗಳಲ್ಲಿ ಪಕ್ಷವನ್ನು ಯಾವ ರೀತಿ ಮುಂದೆ ತೆಗೆದುಕೊಂಡು ಹೋಗಬೇಕು, ಬಿಜೆಪಿ ಭ್ರಷ್ಟ ಆಡಳಿತದ ವಿರುದ್ಧ ಹೇಗೆ ಹೋರಾಡಬೇಕು ಎಂಬುದರ ಬಗ್ಗೆ ಚರ್ಚೆ ಮಾಡಿದ್ದೇವೆ.

ಬಿಜೆಪಿ ಸರ್ಕಾರ ಬಂದ ನಂತರ ಜೀವನವೇ ಹಾಳಾಗಿದೆ ಎಂದು ಜನರು ನೊಂದಿದ್ದಾರೆ. ಯುವಕರು, ಮಹಿಳೆಯರ ಪರಿಸ್ಥಿತಿ ಹಾಳಾಗಿದೆ. ರೈತರ ಪರಿಸ್ಥಿತಿ ಹೀನಾಯವಾಗಿದೆ. ಜನರ ಆಕ್ರೋಶ ಹೆಚ್ಚಾಗಿದ್ದು, ಜನರ ಭಾವನೆ ಸ್ಪಂದಿಸಿ ಕೆಲಸ ಮಾಡುವುದೇ ಕಾಂಗ್ರೆಸ್ ಮೂಲ ಧ್ಯೇಯವಾಗಿದೆ. ಈ ಬಗ್ಗೆ ಚರ್ಚೆ ಮಾಡಿದ್ದೇವೆ.

ಸಿದ್ದರಾಮಯ್ಯ ಅವರ ಹಿತೈಷಿಗಳು ಆಗಸ್ಟ್ ತಿಂಗಳಲ್ಲಿ ಅವರ ಹುಟ್ಟುಹಬ್ಬ ಆಚರಣೆಗೆ ಮುಂದಾಗಿದ್ದು, ಅವರ ಆಡಳಿತದಲ್ಲಿ ಜನರಿಗೆ ಕೊಟ್ಟ ಯೋಜನೆಗಳ ಬಗ್ಗೆ ವ್ಯಾಪಕವಾಗಿ ತಿಳಿಸುವುದು ಎಲ್ಲರ ಆಶಯವಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದಿದ್ದು, ಈ ನಿಟ್ಟಿನಲ್ಲಿ ಪಕ್ಷಾತೀತ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲು ಸೋನಿಯಾ ಗಾಂಧಿ ಅವರು ಮಾರ್ಗದರ್ಶನ ನೀಡಿದ್ದು, ಈ ಕಾರ್ಯಕ್ರಮ ಯಾವ ರೀತಿ ಮಾಡಬೇಕು ಎಂಬುದರ ಬಗ್ಗೆಯೂ ಚರ್ಚೆ ಮಾಡಿದ್ದೇವೆ’ ಎಂದು ತಿಳಿಸಿದರು.

ಪ್ರಶ್ನೆಗಳಿಗೆ ಸಿದ್ದರಾಮಯ್ಯ ಅವರ ಉತ್ತರ:

ಈ ಮಧ್ಯೆ 75ನೇ ಜನ್ಮದಿನ ಕಾರ್ಯಕ್ರಮ ಪಕ್ಷದ ವೇದಿಕೆಯಲ್ಲಿ ಮಾಡುವ ವಿಚಾರವಾಗಿ ಮಾಧ್ಯಮಗಳು ಪ್ರಶ್ನೆ ಕೇಳಿದಾಗ ಉತ್ತರಿಸಿದ ಸಿದ್ದರಾಮಯ್ಯ ಅವರು, ‘ಈ ಕಾರ್ಯಕ್ರಮದ ಆಯೋಜನಾ ಸಮಿತಿಯಲ್ಲಿ ಕಾಂಗ್ರೆಸ್ ಪಕ್ಷದವರೇ ಇದ್ದಾರೆ. ಹಿರಿಯ ನಾಯಕ ಆರ್.ವಿ. ದೇಶಪಾಂಡೆ ಅವರು ಈ ಸಮಿತಿಯ ಅಧ್ಯಕ್ಷರು. ರಾಜಣ್ಣ, ರಾಯರೆಡ್ಡಿ, ಮಹದೇವಪ್ಪ, ಶ್ಯಾಮನೂರು ಶಿವಶಂಕರಪ್ಪ ಅವರು ಈ ಸಮಿತಿಯಲ್ಲಿದ್ದಾರೆ. ನಾನು ಶಿವಕುಮಾರ್, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ, ಹರಿಪ್ರಸಾದ್, ಎಂ.ಬಿ. ಪಾಟೀಲ್ ಅವರಿಗೆ ಆಹ್ವಾನ ನೀಡಿದ್ದು, ಪಕ್ಷದವರೇ ಇರುತ್ತಾರೆ’ ಎಂದು ಉತ್ತರಿಸಿದರು.

ಈ ಕಾರ್ಯಕ್ರಮಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂಬ ಪ್ರಶ್ನೆಗೆ, ‘ಈ ಪ್ರಶ್ನೆಗೆ ಯಾರೂ ಆಕ್ಷೇಪ ವ್ಯಕ್ತಪಡಿಸಿಲ್ಲ. ಇದು ಮಾಧ್ಯಮಗಳ ಸೃಷ್ಟಿ. ಈ ಕಾರ್ಯಕ್ರಮಕ್ಕೆ ಸಿದ್ದರಾಮೋತ್ಸವ ಎಂಬ ಹೆಸರನ್ನು ಮಾಧ್ಯಮಗಳೇ ಇಟ್ಟಿವೆ. ಇದು ಕೇವಲ ಸಿದ್ದರಾಮಯ್ಯನ 75ನೇ ವರ್ಷದ ಹುಟ್ಟುಹಬ್ಬದ ಆಚರಣೆಯೇ ಹೊರತು, ಯಾರ ಉತ್ಸವವೂ ಅಲ್ಲ. ಬೇರೆ ಯಾವುದೇ ಪಕ್ಷದ ನಾಯಕರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ’ ಎಂದರು.

ಈ ಕಾರ್ಯಕ್ರಮದ ಹಿಂದೆ ರಾಜಕೀಯ ಉದ್ದೇಶ ಇದೆಯೇ ಎಂದು ಕೇಳಿದಾಗ, ‘ಸಹಜವಾಗಿ ರಾಜಕೀಯ ಉದ್ದೇಶಗಳು ಇದ್ದೇ ಇರುತ್ತವೆ. ನಾವು ಸನ್ಯಾಸಿಗಳಲ್ಲ. ನಮ್ಮ 5 ವರ್ಷದ ಸಾಧನೆಗಳನ್ನು ಹೇಳಿದರೆ ಅದು ರಾಜಕೀಯ ಆಗುವುದಿಲ್ಲವೇ? ರಾಜಕೀಯ ಪಯಣವನ್ನು ನೆನಪಿಸಿಕೊಂಡರೆ ಅದು ರಾಜಕೀಯವೇ ಆಗುತ್ತದೆ’ ಎಂದು ಉತ್ತರಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskann

Please follow and like us:

Leave a Reply

Your email address will not be published. Required fields are marked *

Next Post

ಬಾಗಲಕೋಟೆಗೆ ಸಚಿವ ಬಿ ಶ್ರೀರಾಮುಲು ಭೇಟಿ.

Fri Jul 8 , 2022
ಕೆರೂರು ಗುಂಪು ಘರ್ಷಣೆ ಪ್ರಕರಣದ ಹಿನ್ನಲೆ . ಬಾಗಲಕೋಟೆಗೆ ಸಚಿವ ಬಿ ಶ್ರೀರಾಮುಲು ಭೇಟಿ. ಬಾಗಲಕೋಟೆ ಕೆರೂಡಿ ಖಾಸಗಿ ಆಸ್ಪತ್ರೆಗೆ ಭೇಟಿ ಗಾಯಾಳುಗಳ ಆರೋಗ್ಯ ವಿಚಾರಣೆ.. ಅರುಣ ಕಟ್ಟಿಮನಿ,ಲಕ್ಷ್ಮಣ ಕಟ್ಟಿಮನಿ,ಯಮನೂರ ಚುಂಗಿನ ಹಾಗೂ ಗೋಪಾಲ ದಾಸಮನಿ ಆರೋಗ್ಯ ವಿಚಾರಣೆ.. ಗಾಯಾಳುಗಳು ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು. ಕೆರೂರು ಪಟ್ಟಣದಲ್ಲಿ ಎರಡು ಗುಂಪಿನ ಮಧ್ಯೆ ಗುಂಪು ಘರ್ಷಣೆ ನಡೆದಿತ್ತು. ಬುಧವಾರ ಸಂಜೆ ೫ ಗಂಟೆ ವೇಳೆ ನಡೆದ ಘರ್ಷಣೆ ವೇಳೆ,, ಮೂವರಿಗೆ […]

Advertisement

Wordpress Social Share Plugin powered by Ultimatelysocial