ಆಸೆಗೆ ಬಿದ್ದು 5.42 ಲಕ್ಷ ರೂ. ಕಳೆದುಕೊಂಡ ಮಹಿಳೆ!

ದಿನದಿಂದ ದಿನಕ್ಕೆ ಸೈಬರ್ ಕಳ್ಳರ ಹಾವಳಿ ಹೆಚ್ಚಾಗುತ್ತಿದೆ. ಎಷ್ಟೇ ಚುರುಕಾಗಿ ಕೆಲಸ ಮಾಡಿದರೂ, ಎಲ್ಲೋ ಕೂತು ನಡೆಯುವ ಸೈಬರ್​ ವಂಚನೆಯನ್ನು ಭೇಧಿಸುವುದು ಮಾತ್ರ ಪೊಲೀಸ್ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ. ಸೈಬರ್​ ಖದೀಮರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಳ್ಳುತ್ತಿರುವವರ ಸಂಖ್ಯೆಯು ಹೆಚ್ಚಾಗುತ್ತಿದೆ.

ಇದೀಗ ಇಂಥದ್ದೇ ಮತ್ತೊಂದು ಪ್ರಕರಣ ಆಂಧ್ರ ಪ್ರದೇಶದ ವಿಶಾಖಪಟ್ಟಣ ಸಮೀಪದ ವಿಶಾಲಾಕ್ಷಿ ನಗರದಲ್ಲಿ ವರದಿಯಾಗಿದೆ.

ಆನ್​ಲೈನ್​ನಲ್ಲಿ ಅಮಾಯಕರನ್ನು ಟಾರ್ಗೆಟ್​ ಮಾಡುವ ಒಂದು ಗುಂಪಿದ್ದು, ಅವರ ಬಗ್ಗೆ ಎಚ್ಚರಿಕೆ ವಹಿಸುವ ಅಗತ್ಯವಿದೆ. 100 ರೂಪಾಯಿ ಆಸೆಗೆ ಬಿದ್ದ ಮಹಿಳೆಯೊಬ್ಬಳು ಬರೋಬ್ಬರಿ 5.42 ಲಕ್ಷ ರೂಪಾಯಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾಳೆ. ವಾಟ್ಸ್​ಆಯಪ್​ನಲ್ಲಿ ಬಂದ ಮೆಸೇಜ್​ ನಂಬಿದ ಮಹಿಳೆ ಪಂಗನಾಮ ಹಾಕಿಕೊಂಡಿದ್ದಾಳೆ.

ವಿವರಣೆಗೆ ಬರುವುದಾದರೆ, ವಿಶಾಲಾಕ್ಷಿ ನಗರದ ನಿವಾಸಿಯಾಗಿರುವ ಸಂತ್ರಸ್ತ ಮಹಿಳೆ, ವಾಟ್ಸ್​ಆಯಪ್​ ಮೆಸೇಜ್​ ಒಂದನ್ನು ಸ್ವೀಕರಿಸುತ್ತಾಳೆ. ಅದರಲ್ಲಿ ಮನೆಯಲ್ಲೇ ಕುಳಿತು ಪಾರ್ಟ್​ ಟೈಂ ಜಾಬ್​ ಮಾಡಬಹುದು ಮತ್ತು ಒಳ್ಳೆಯ ಹಣ ಗಳಿಸಬಹುದು ಎಂಬ ಸಂದೇಶ ಇರುತ್ತದೆ. ಆರಂಭದಲ್ಲಿ ಮಹಿಳೆ ಇದನ್ನು ನಂಬುವುದಿಲ್ಲ. ಆದರೆ, ನಂತರದಲ್ಲಿ ಮತ್ತೆ ಸಂದೇಶ ಕಳುಹಿಸುವ ಸೈಬರ್​ ವಂಚಕರು ಆಕೆಯನ್ನು ನಂಬಿಕೆ ಎಂಬ ಬಲೆಗೆ ಬೀಳಿಸಿಕೊಳ್ಳುತ್ತಾರೆ.

ನಾವು ಕಳುಹಿಸುವ ವಿಡಿಯೋ ಲಿಂಕ್​ ಓಪನ್​ ಮಾಡಿ ಲೈಕ್​ ಮತ್ತು ಸಬ್​ಸ್ಕ್ರೈಬ್​ ಮಾಡಿದರೆ ಒಂದು ವಿಡಿಯೋಗೆ 100 ರೂಪಾಯಿ ಕೊಡುತ್ತೇವೆ ಎಂದು ನಂಬಿಸುತ್ತಾರೆ. ಆರಂಭದಲ್ಲಿ ನಾಲ್ಕು ವಿಡಿಯೋಗೆ ಮಹಿಳೆ ಲೈಕ್​ ಮಾಡುತ್ತಾಳೆ. ಇದಾದ ತಕ್ಷಣ ಆಕೆಯ ಬ್ಯಾಂಕ್​ ಖಾತೆಗೆ 400 ರೂ. ಜಮಾ ಆಗುತ್ತದೆ. ಇದರಿಂದ ಆಕೆಯ ನಂಬಿಕೆ ಇನ್ನಷ್ಟು ಗಟ್ಟಿಯಾಗುತ್ತದೆ. ಇದಾದ ಬಳಿಕ ಸೈಬರ್​ ವಂಚಕರ ಪ್ಲಾನ್​ ಟೆಲಿಗ್ರಾಮ್​ಗೆ ಸ್ಥಳಾಂತರವಾಗುತ್ತದೆ.

ಈ ಬಾರಿ ನಾವು ಹೇಳಿದ ಕೆಲಸ ಮಾಡಿದರೆ ಹೆಚ್ಚಿನ ಹಣ ಸಿಗುತ್ತದೆ ಎನ್ನುತ್ತಾರೆ. ನಾವು ಹೇಳಿದ ಖಾತೆಗೆ 54 ಸಾವಿರ ರೂ. ಹಣ ಹಾಕಿದರೆ, ನಿಮಗೆ 72 ಸಾವಿರ ರೂ. ವಾಪಸ್​ ಬರುತ್ತದೆ ಎಂದು ನಂಬಿಸುತ್ತಾರೆ. ಅವರು ಹೇಳಿದಂತೆ 54 ಸಾವಿರ ರೂ. ಹಣವನ್ನು ಬ್ಯಾಂಕ್​ ಖಾತೆಗೆ ಮಹಿಳೆ ಜಮಾ ಮಾಡುತ್ತಾಳೆ. ಆಕೆಯ ನಂಬಿಕೆಯನ್ನು ಗಳಿಸುವ ಸಲುವಾಗಿ ಸೈಬರ್​ ವಂಚಕರು ವಾಪಸ್​ ಆಕೆಯ ಖಾತೆಗೆ 72 ಸಾವಿರ ರೂ. ಹಣವನ್ನು ಕ್ರೆಡಿಟ್​ ಮಾಡುತ್ತಾರೆ.

ಯಾವಾಗ ತನ್ನ 72 ಸಾವಿರ ರೂ. ಹಣ ಬಂತೋ ಮಹಿಳೆ ನಂಬಿಕೆ ಮುಗಿಲು ಮುಟ್ಟಿರುತ್ತದೆ. ಆದರೆ, ನಂತರದಲ್ಲಿ ನಡೆದಿದ್ದೆಲ್ಲ ಅದಕ್ಕೆ ವಿರುದ್ಧವಾಗಿದೆ. ಇನ್ನಷ್ಟು ಟಾಸ್ಕ್​ಗಳು ಅಂತಾ ಹೇಳಿ, ಮಹಿಳೆಯಿಂದ ಸುಮಾರು 5.42 ಲಕ್ಷ ರೂ. ಹಣವನ್ನು ಸೈಬರ್​ ವಂಚಕರು ಡೆಪಾಸಿಟ್​ ಮಾಡಿಸಿಕೊಳ್ಳುತ್ತಾರೆ. ಇದಾದ ಬಳಿಕ ಖದೀಮರು ಮಹಿಳೆಗೆ ಯಾವುದೇ ಮೆಸೇಜ್​ ಕಳುಹಿಸುವುದೇ ಇಲ್ಲ. ಆಕೆಯ ಮೆಸೇಜ್​ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬರುವುದಿಲ್ಲ. ಇದರಿಂದ ಅನುಮಾನಗೊಂಡು ತಾನು ಮೋಸ ಹೋಗಿರುವುದು ಗೊತ್ತಾದ ಬಳಿಕ ಸಂತ್ರಸ್ತ ಮಹಿಳೆ ಸೈಬರ್​ ಕ್ರೈಂ ಪೊಲೀಸರಿಗೆ ದೂರು ದಾಖಲಿಸಿದ್ದಾಳೆ.

ಸದ್ಯ ಈ ಸೈಬರ್ ವಂಚನೆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರಿಮಿನಲ್​ಗಳು ಉದ್ಯೋಗದ ಹೆಸರಿನಲ್ಲಿ ವಂಚನೆ ಎಸಗುತ್ತಿದ್ದು, ಎಲ್ಲರೂ ಜಾಗೃತರಾಗಿರಿ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಅಂತಹ ಸಂದೇಶಗಳು ಬಂದರೆ ದೂರು ದಾಖಲಿಸುವಂತೆ ಸೂಚಿಸಲಾಗಿದೆ. ನಂಬಿ ಮೋಸ ಹೋಗಬೇಡಿ ಎಂದು ಸಲಹೆ ನೀಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶ್ವೇತಾ - ನಕ್ಷತ್ರ ಮಧ್ಯೆ ವಿಶೇಷ ಟಾಸ್ಕ್:

Wed Jan 11 , 2023
  ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ ‘ಲಕ್ಷಣ’ ಕೂಡ ಒಂದು. ‘ಲಕ್ಷಣ’ ಧಾರಾವಾಹಿ ಇದೀಗ ಕುತೂಹಲಕಾರಿ ಘಟ್ಟ ತಲುಪಿದೆ. ಇಷ್ಟು ದಿನ ನಕ್ಷತ್ರಳನ್ನ ಸೊಸೆ ಅಂತ ಶಕುಂತಲಾ ದೇವಿ ಪರಿಗಣಿಸುತ್ತಿರಲಿಲ್ಲ. ಅಷ್ಟೇ ಯಾಕೆ.. ಮಯೂರಿ ಹಾಗೂ ಶೆರ್ಲಿ ಅವರುಗಳನ್ನೂ ಶಕುಂತಲಾ ದೇವಿ ‘ಸೊಸೆ’ ಎಂದು ಪರಿಗಣಿಸಿಲ್ಲ. ಇದೀಗ ಚಂದ್ರಶೇಖರ್ ಕೊಟ್ಟಿರುವ ಟಾಸ್ಕ್‌ನಲ್ಲಿ ನಕ್ಷತ್ರ ಗೆದ್ದುಬಿಟ್ಟರೆ.. ಆಡಿದ ಮಾತಿನಂತೆ ಶಕುಂತಲಾ ದೇವಿ ನಡೆಯಲೇಬೇಕಿದೆ. ನಕ್ಷತ್ರಗೆ ಅವಮಾನ ಮಾಡಿದ್ದ […]

Advertisement

Wordpress Social Share Plugin powered by Ultimatelysocial