ಕರ್ನಾಟಕ ಸಂಗೀತದಲ್ಲಿ ಮಹಾನ್ ಹೆಸರಾದವರು ಬಿಡಾರಂ ಕೃಷ್ಣಪ್ಪನವರು.

ಅತ್ಯುತ್ತಮ ಗಾಯಕರಾಗಿ, ಎತ್ತರದ ಆಕರ್ಷಕ ವ್ಯಕ್ತಿತ್ವದಿಂದ, ಲಕ್ಷ್ಯ- ಲಕ್ಷಣಗಳಲ್ಲಿ ಸಮನಾದ ಪಾಂಡಿತ್ಯದಿಂದ, ಸ್ಫುಟವಾದ ಉಚ್ಚಾರಣೆಯಿಂದ ಅರ್ಥವನ್ನರಿತು ಹಾಡುವ ಕಾಳಜಿ ಹೊಂದಿದ್ದ ಅವರ ಹೆಸರು ಸಂಗೀತಲೋಕದಲ್ಲಿ ಪ್ರಸಿದ್ಧವಾದುದು.
ಬಿಡಾರಂ ಕೃಷ್ಣಪ್ಪನವರು 1866ರಲ್ಲಿ ಜನಿಸಿದರು. ವಿಶ್ವನಾಥಯ್ಯ ಮತ್ತು ಸರಸ್ವತಿಬಾಯಿ ದಂಪತಿಗಳು, ಕೃಷ್ಣಜನ್ಮಾಷ್ಟಮಿಯಂದು ಜನಿಸಿದ ಕಾರಣ ತಮ್ಮ ಮಗುವಿಗೆ ’ಕೃಷ್ಣ’ ಎಂದು ಹೆಸರನ್ನಿಟ್ಟರು. ವಿಶ್ವನಾಥಯ್ಯನವರು ಉಡುಪಿಯ ಬಳಿಯಿರುವ ನಂದಳಿಕೆ ಎಂಬಲ್ಲಿ ವಾಸವಾಗಿದ್ದ ಕೊಂಕಣಿ ಮಾತೃಭಾಷೆಯನ್ನಾಡುತ್ತಿದ್ದ ಗೌಡಸಾರಸ್ವತ ಪಂಗಡಕ್ಕೆ ಸೇರಿದವರಾಗಿದ್ದರು ಹಾಗೂ ಧರ್ಮಸ್ಥಳದ ದಶಾವತಾರ ಯಕ್ಷಗಾನ ಮಂಡಳಿಯಲ್ಲಿ ಸ್ತ್ರೀಪಾತ್ರವನ್ನು ಉತ್ತಮವಾಗಿ ನಿರ್ವಹಿಸಿ ಹೆಸರನ್ನು ಗಳಿಸಿದ್ದರು.ಯದುವಂಶ ರಾಜರು ಕಲೆಗೆ ಪ್ರೋತ್ಸಾಹ ನೀಡುವುದರಲ್ಲಿ ಎತ್ತಿದ ಕೈ. ಮುಮ್ಮಡಿ ಕೃಷ್ಣಭೂಪಾಲರು ವಿಶ್ವನಾಥಯ್ಯನವರ ನಟನೆ ಹಾಗೂ ಗಾಯನಕ್ಕೆ ಮಾರುಹೋಗಿ ಮೈಸೂರಿಗೆ ಬಂದು ಕಾರ್ಯಕ್ರಮ ನೀಡಲು ಆಹ್ವಾನಿಸಿದರು. ಈ ದಂಪತಿಗಳು ಮೈಸೂರಿಗೆ ತಮ್ಮ ಮಕ್ಕಳಾದ ಸುಬ್ಬರಾಯಪ್ಪ ಮತ್ತು ಕೃಷ್ಣಪ್ಪನವರೊಂದಿಗೆ ಬಂದು ಬಿಡಾರ ಬಿಟ್ಟರು. ಹಾಗಾಗಿ ಮುಂದಿನ ದಿನಗಳಲ್ಲಿ ’ಬಿಡಾರಂ’ ಕೃಷ್ಣಪ್ಪ ಎಂದೇ ಪ್ರಸಿದ್ಧರಾದರು ಕೃಷ್ಣಪ್ಪನವರು.ವಿಶ್ವನಾಥಯ್ಯನವರ ಹಠಾತ್ ಮರಣದಿಂದ ಸಂಸಾರವು ಆರ್ಥಿಕ ಸಂಕಷ್ಟಕ್ಕೆ ಸಿಲುಕಿತು. ಸುಂದರರಾಗಿದ್ದ ಹಾಗೂ ಉತ್ತಮ ಕಂಠವನ್ನೂ ಹೊಂದಿದ್ದ ಈ ಸಹೋದರರು ಮೈಸೂರಿನಲ್ಲಿ ಲವಕುಶರಂತೆ ಬೀದಿಯಲ್ಲಿ ಊಂಛವೃತ್ತಿಯ ರೀತಿಯಲ್ಲಿ ಹಾಡುತ್ತ, ಜನಸಹಾಯ ಪಡೆದು ನಿತ್ಯಜೀವನ ನಡೆಸುವಂತಹ ಪರಿಸ್ಥಿತಿ ಉಂಟಾಯಿತು. ಚಿಕ್ಕ ವಯಸ್ಸಿನ ಕೃಷ್ಣಪ್ಪ ಆಲಸ್ಯ ಮತ್ತು ಹುಡುಗಾಟದಿಂದ ದಿನನಿತ್ಯ ಅಣ್ಣನೊಂದಿಗೆ ಹೋಗಲು ಹಿಂಜರಿಯುತ್ತಿದ್ದ. ಒಮ್ಮೆ ಅರಮನೆಯ ಆವರಣದಲ್ಲಿರುವ ಆಂಜನೇಯನ ಮುಂದೆ ತನ್ನ ಹರಿದ ಅಂಗವಸ್ತ್ರವನ್ನು ಹರಡಿ ರಾಮ-ಆಂಜನೇಯರ ಪರವಾದ ದೇವರನಾಮಗಳನ್ನು ಸುಶ್ರಾವ್ಯವಾಗಿ, ಭಾವಪರವಶನಾಗಿ ಹಾಡುತ್ತಿದ್ದಾಗ ಆಯಾಸದಿಂದ ಬಳಲಿ ನಿದ್ರೆಗೆ ಜಾರಿದ. ಕೊಡುಗೈ ದಾನಿಗಳಾಗಿದ್ದ ಡಾ|| ನಂಜುಂಡಯ್ಯ ಎಂಬ ವೈದ್ಯರು ಈ ಹುಡುಗನನ್ನು ನೋಡಿ ತಮ್ಮ ಮನೆಗೆ ಕರೆದೊಯ್ದು ಉಪಚರಿಸಿ ಆರ್ಥಿಕ ನೆರವು ನೀಡಿದರು. ಇದಾದ ನಂತರ ಕೃಷ್ಣಪ್ಪನಿಗೆ ಈ ದೇವಸ್ಥಾನದ ಮುಂದೆ ಹಾಡುವುದು ನಿತ್ಯ ವ್ರತವೇ ಆಯಿತು.ಒಮ್ಮೆ ಕರೂರು ರಾಮಸ್ವಾಮಿ ಎಂಬ ಪ್ರಸಿದ್ಧ ಗಾಯಕರಲ್ಲಿ ಸಂಗೀತಶಿಕ್ಷಣ ಕೊಡಿಸಬೇಕೆಂಬ ಹಂಬಲ ತಾಯಿ ಸರಸ್ವತಿಬಾಯಿಗೆ ಉಂಟಾಗಿ ಅವರಲ್ಲಿ ವಿಚಾರಿಸಿದಾಗ ಅದು ನಾನಾ ಕಾರಣಗಳಿಂದ ಫಲಿಸಲಿಲ್ಲ. ಆದರೆ ಮುಂದೊಂದು ದಿನ ಕೃಷ್ಣಪ್ಪನ ದೈವದತ್ತವಾದ ಸಿರಿಕಂಠಕ್ಕೆ ಮಾರುಹೋದ ಸಾಹುಕಾರ ತಿಮ್ಮಯ್ಯ ಎಂಬುವರು ಇದೇ ವಿದ್ವಾಂಸರ ಬಳಿ 100 ರೂ. ವಿದ್ಯಾಶುಲ್ಕವನ್ನಿತ್ತು ಸಂಗೀತವನ್ನು ಹೇಳಿಕೊಡಲು ಕೇಳಿದಾಗ ರಾಮಸ್ವಾಮಿಗಳು ಇಲ್ಲವೆನ್ನಲಾಗಲಿಲ್ಲ!ಗುರುಗಳಾದರೋ ದೂರ್ವಾಸಮುನಿಗಳ ಅಪರಾವತಾರ. ಶಾರೀರದೊಂದಿಗೆ ಶರೀರದ ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕೆಂಬ ಅಭಿಪ್ರಾಯವುಳ್ಳವರಾಗಿದ್ದರು. ಪ್ರತಿದಿವಸ ಕಂಠದವರೆಗೆ ತಣ್ಣೀರಿನಲ್ಲಿ ದೇಹವನ್ನು ಮುಳುಗಿಸಿ ’ಅಕಾರ’ ಸಾಧನೆ ಮಾಡತಕ್ಕದ್ದು. ಪದ್ಮಾಸನದಲ್ಲಿ ಕುಳಿತು ಬೆನ್ನನ್ನು ನೇರವಾಗಿ ಇರಿಸಿ ಆರಂಭದಿಂದ ಕೊನೆಯವರೆಗೆ ಒಂದೇ ಲಯವಿರುವಂತೆ ಅಭ್ಯಾಸ ಮಾಡಬೇಕಾಗಿತ್ತು.ಈ ಅಸುರ ಸಾಧನೆಯ ಫಲವಾಗಿ ಕೃಷ್ಣಪ್ಪನವರಿಗೆ ತ್ರಿಸ್ಥಾಯಿಗಳಲ್ಲಿ ಲೀಲಾಜಾಲವಾಗಿ ಸಂಚರಿಸಬಲ್ಲ ಬಲವಾದ ಹಾಗೂ ನಾದಮಯವಾದ ಶಾರೀರ ಸಿದ್ಧಿಸಿತ್ತು. ಮನೆಯಿಂದ ಹೊರಗಡೆ ಬರುವಾಗಲೆಲ್ಲ ಕುತ್ತಿಗೆಯನ್ನು ಉಣ್ಣೆಬಟ್ಟೆಯಿಂದ ಮುಚ್ಚಿಕೊಳ್ಳುವುದು ವಾಡಿಕೆಯಾಗಿತ್ತು ಹಾಗೂ ಹೊರಗಡೆ ಪಾನೀಯ ಅಥವಾ ಆಹಾರ ಸೇವಿಸುತ್ತಿರಲಿಲ್ಲ.ಗಿರಿಭಟ್ಟ ತಮ್ಮಯ್ಯ, ಮೈಸೂರು ಕರಿಗಿರಿರಾವ್ ಮತ್ತು ವೀಣೆ ಶೇಷಣ್ಣನವರಲ್ಲಿಯೂ ಗಾಯನ ಅಭ್ಯಾಸವಾಯಿತು. ನಾಟಕದ ಕಂಪೆನಿಯಲ್ಲಿ ಸೂತ್ರಧಾರನಾಗಿ ನಟಿಸುತ್ತಿದ್ದಾಗ, ದಿವಾನ್ ರಂಗಾಚಾರ್ಲು ಅವರ ಮೆಚ್ಚುಗೆಯ ಫಲವಾಗಿ ರೂ. 6 ಮಾಸಿಕ ಸಂಬಳ ಸಿಗುವಂತಾಗಿ, ಮುಂದೆ ಇದು ರೂ. 30ಕ್ಕೆ ಏರಿಕೆಯಾಯಿತು. ಮಹಾರಾಜರೂ ಇವರನ್ನು ಆಹ್ವಾನಿಸಿ ಇವರ ಹಾಡನ್ನು ಬಹಳವಾಗಿ ಮೆಚ್ಚಿ ಆಸ್ಥಾನ ವಿದ್ವಾಂಸರನ್ನಾಗಿ ನೇಮಿಸಿದರು. ಕ್ರಮೇಣ ಇವರ ಗಾಯನಪ್ರತಿಭೆ ದೇಶದಲ್ಲೆಲ್ಲ ಹರಡಿದ ಪರಿಣಾಮವಾಗಿ ತಂಜಾವೂರು, ಮಧುರೈ, ದೇವಕೋಟೆ, ಮುಂಬಯಿ, ಗದ್ವಾಲ್ ಮುಂತಾದ ಸ್ಥಳಗಳಲ್ಲಿ ಹಲವಾರು ಬಾರಿ ಆಹ್ವಾನಿತರಾಗಿ ಜನಮನ್ನಣೆಗಳಿಸಿ ಮೈಸೂರಿಗೆ ಕೀರ್ತಿ ತಂದುಕೊಟ್ಟರು.ಆರು ಅಡಿ ಎತ್ತರ, ತುಟಿಯ ಮೇಲೆ ಕಂಗೊಳಿಸುತ್ತಿದ್ದ ದೊಡ್ಡ ಗಿರಿಜಾಮೀಸೆ, ಹೊಂಬಣ್ಣ, ನಾದಾನುಸಂಧಾನ ಫಲದಿಂದ ದೀಪ್ತಿಯುತ ಕಣ್ಣುಗಳು, ಎಲ್ಲದಕ್ಕಿಂತ ಮಿಗಿಲಾಗಿ ತಲೆಯ ಮೇಲಿನ ಮೈಸೂರಿನ ಪೇಟದಿಂದ ಆಕರ್ಷಕವಾಗಿದ್ದ ಇವರನ್ನು ನೋಡಿದವರೆಲ್ಲ ಗೌರವಿಸುವಂತೆ ಆಗುತ್ತಿತ್ತು. ಕೃಷ್ಣಪ್ಪನವರು ಪಕ್ಕವಾದ್ಯಗಾರರನ್ನು ಅತ್ಯಂತ ಗೌರವದಿಂದ ಆದರಿಸುತ್ತಿದ್ದ ಪರಿಯೂ ಬಹಳ ಶ್ಲಾಘನೀಯವಾಗಿತ್ತು.ಕೃಷ್ಣಪ್ಪನವರ ಶಿಷ್ಯರಲ್ಲಿ ಒಬ್ಬರಾಗಿದ್ದ ಗಾನವಿದ್ಯಾಸುಂದರಿ ಬೆಂಗಳೂರು ನಾಗರತ್ನಮ್ಮನವರು ಮದ್ರಾಸಿನಲ್ಲಿ ತಮ್ಮ ನೂತನ ಮನೆಯ ಗೃಹಪ್ರವೇಶಕ್ಕೆ ಕೃಷ್ಣಪ್ಪನವರಿಂದ ಹರಿದಾಸರ ಪದಗಳನ್ನೇ ಆಧರಿಸಿದ ಕಛೇರಿ ಏರ್ಪಡಿಸಿದ್ದರು. ಅಂದು ಹಾಜರಿದ್ದ ಗಣ್ಯ ವ್ಯಕ್ತಿಗಳ ಪೈಕಿ ’ಹಿಂದೂ’ ಪತ್ರಿಕೆಯ ಕಸ್ತೂರಿರಂಗ ಅಯ್ಯಂಗಾರ್ಯರು ಕೃಷ್ಣಪ್ಪನವರ ಸಂಗೀತಕ್ಕೆ ಮಾರುಹೋಗಿ ’ಹಿಂದೂ’ ಪತ್ರಿಕೆಯಲ್ಲಿ ಕೃಷ್ಣಪ್ಪನವರ ಸಂಗೀತದ ಗುಣಗಾನ ಮಾಡಿ ಬರೆದರು. ಮುಂದೆ ಕೃಷ್ಣಪ್ಪನವರ ಆದೇಶದಂತೆ, ವಿದುಷಿ ನಾಗರತ್ನಮ್ಮನವರು ತಮ್ಮ ಸರ್ವಸ್ವವನ್ನೂ ಅರ್ಪಿಸಿ ತಿರುವಯ್ಯಾರಿನಲ್ಲಿ ಸಂತ ತ್ಯಾಗರಾಜರ ಸಮಾಧಿಗೆ ಸೂಕ್ತ ರೀತಿಯಲ್ಲಿ ಕಟ್ಟಡ ಕಲ್ಪಿಸಿ ಅಮರರಾದರು.ದೇಶದುದ್ದಗಲಕ್ಕೆ ಸಂಚರಿಸಿ ಅನೇಕ ಅಮೂಲ್ಯ ಬಹುಮಾನಗಳನ್ನು ಗಳಿಸಿದ ಕೃಷ್ಣಪ್ಪನವರನ್ನು ಪಂಡಾರ ಸನ್ನಿಧಿಯ ಸ್ವಾಮಿಗಳು ’ಗಾಯಕ ಶಿಖಾಮಣಿ’ ಎಂಬ ಬಿರುದು ಮತ್ತು ಚಿನ್ನದ ತೋಡಾವನ್ನಿತ್ತು ಸಮ್ಮಾನಿಸಿದರು. ಸ್ವಾಮಿಗಳು ’ಮಹಾವೈದ್ಯನಾಥ ಅಯ್ಯರ್’ ಅವರಾದ ಮೇಲೆ ಕೃಷ್ಣಪ್ಪನವರ ದೇವಗಾನ ಕೇಳುತ್ತಿದ್ದೇನೆ, ಎಂದು ಪ್ರಶಂಸಿಸಿದರು. ಶಿವಗಂಗೆಯ ಮಠದ ಸ್ವಾಮಿಗಳೂ ಇವರನ್ನು ಸಮ್ಮಾನಿಸಿದರು. ಮಂತ್ರಾಲಯದ ಮಠದಿಂದ ಆಗಿನ ಕಾಲದಲ್ಲೇ ರೂ. 25 ವಾರ್ಷಿಕ ಸಂಭಾವನೆ ನೀಡಲ್ಪಟ್ಟಿತ್ತು. ಮೈಸೂರು ದೊರೆಗಳು ಕೃಷ್ಣಪ್ಪನವರಿಗೆ ’ಗಾನವಿಶಾರದ’ ಎಂಬ ಬಿರುದನ್ನಿತ್ತು ಕನಕಾಭಿಷೇಕವನ್ನು ನೆರವೇರಿಸಿದರು. ಮಹಾರಾಜರು ಇತರ ದೇಶದಿಂದ ಹಾಗೂ ಉತ್ತರಭಾರತದಿಂದ ಅನೇಕ ವಿದ್ವಾಂಸರನ್ನು ಮೈಸೂರಿಗೆ ಆಹ್ವಾನಿಸಿ ಅವರ ಸಂಗೀತವನ್ನು ನಮ್ಮ ವಿದ್ವಾಂಸರು ಮತ್ತು ರಸಿಕರು ಕೇಳಿ ಜ್ಞಾನಾರ್ಜನೆ ಮಾಡಿಕೊಳ್ಳಲು ಸದವಕಾಶ ಕಲ್ಪಿಸುತ್ತಿದ್ದರು. ಇದರ ಲಾಭವನ್ನು ಪೂರ್ಣವಾಗಿ ಪಡೆದುಕೊಂಡವರು ಬಿಡಾರಂ ಕೃಷ್ಣಪ್ಪನವರು. ಅಬ್ದುಲ್ ಕರೀಂಖಾನ್ ಅವರ ಸಂಗೀತದಿಂದ ಪ್ರಭಾವಿತರಾಗಿ ಅವರ ಸಂಗೀತದ ಮರ್ಮಗಳನ್ನು ಅರಿತು ತಮ್ಮ ಗಾಯನದಲ್ಲಿ ಅಳವಡಿಸಿಕೊಂಡು ಕೆಲವೊಮ್ಮೆ ಹಿಂದಿ ಭಜನ್‌ಗಳನ್ನು ತಮ್ಮ ಕಛೇರಿಯಲ್ಲಿ ಹಾಡುತ್ತಿದ್ದರು. ಹರಿದಾಸ ಪದಗಳನ್ನು ಸೊಗಸಾಗಿ ಹಾಡುತ್ತಿದ್ದರು. ಜೊತೆಗೆ ವಯೊಲಿನ್ ವಾದನದಲ್ಲೂ ಸಿದ್ಧಹಸ್ತರಾಗಿದ್ದರು. ಅವರ ಶ್ರುತಿಶುದ್ಧತೆಗೆ ’ಶುದ್ಧ ಸ್ವರಾಚಾರ್ಯ’ ಎಂಬ ಬಿರುದನ್ನು, ಲಯದಲ್ಲಿ ಅಪ್ರತಿಮ ಪಾಂಡಿತ್ಯವನ್ನು ಹೊಂದಿದ್ದರಿಂದ ’ಲಯ ಬ್ರಹ್ಮ’ ಎಂಬ ಬಿರುದನ್ನು ಪಡೆದರು. ಅಪಸ್ವರವನ್ನಾಗಲಿ, ಅಪಲಯವನ್ನಾಗಲಿ ಸಹಿಸುತ್ತಿರಲಿಲ್ಲ. ಪಲ್ಲವಿ ಗಾಯನದಲ್ಲಿ ಪ್ರಕಾಂಡ ಪಾಂಡಿತ್ಯವಿದ್ದುದರಿಂದ ’ಪಲ್ಲವಿ ಕೃಷ್ಣಪ್ಪ’ ಎಂಬ ಬಿರುದೂ ಸಂದಿತ್ತು. ಇವರ ಶಿಷ್ಯ ವರ್ಗದಲ್ಲಿನ ಪ್ರಮುಖರಲ್ಲಿ ಪಿಟೀಲು ಚೌಡಯ್ಯ, ರಾಳ್ಳಪಲ್ಲಿ ಅನಂತಕೃಷ್ಣಶರ್ಮ, ದೇವೇಂದ್ರಪ್ಪ, ಬೆಂಗಳೂರು ನಾಗರತ್ನಮ್ಮ ಮುಂತಾದ ಅನೇಕರಿದ್ದರು.
ಬಿಡಾರಂ ಕೃಷ್ಣಪ್ಪನವರು ಚಿಕ್ಕಂದಿನಲ್ಲಿ ತನ್ನ ಜೀವನದ ದಿಕ್ಕನ್ನೇ ಬದಲಿಸಿದ ಶ್ರೀರಾಮನನ್ನು ಪ್ರತಿದಿವಸ ನೆನೆದು ಶ್ರೀರಾಮನಿಗಾಗಿ ಒಂದು ಮಂದಿರ ಕಟ್ಟಬೇಕೆಂಬ ಬಹುವರ್ಷದ ಬಯಕೆಯನ್ನು ಈಡೇರಿಸಿಕೊಳ್ಳಲು ತಮ್ಮನ್ನು ಉದ್ಧರಿಸಿದ ಸಾಹುಕಾರ ತಮ್ಮಯ್ಯ, ಡಾ. ನಂಜುಂಡಯ್ಯ ಮುಂತಾದವರೊಂದಿಗೆ ಚರ್ಚಿಸಿ ಅವರಿಂದ ಉತ್ತೇಜನ ಪಡೆದು ರಾಮಮಂದಿರ ಕಟ್ಟಲು ಪ್ರಾರಂಭಿಸಿಯೇಬಿಟ್ಟರು. ಹಣ ಸಂಗ್ರಹಕ್ಕಾಗಿ ಅನೇಕ ಸ್ಥಳಗಳಿಗೆ ಅನಾರೋಗ್ಯದಿಂದ ಬಳಲುತ್ತಿದ್ದರೂ ಲೆಕ್ಕಿಸದೆ ಕಚೇರಿಗಳನ್ನು ಮಾಡಿ, ಗಳಿಸಿದ ದುಡ್ಡನ್ನು ರಾಮಮಂದಿರಕ್ಕಾಗಿ ಮೀಸಲಿಟ್ಟು, ಜೀವನದಲ್ಲಿ ತಮಗೆ ದೊರಕಿದ ಚಿನ್ನ, ಬೆಳ್ಳಿ, ಅಮೂಲ್ಯವಾದ ಬಹುಮಾನಗಳೆಲ್ಲವನ್ನು ಮಾರಿದರು. ಅದಷ್ಟೇ ಅಲ್ಲದೆ ತಮ್ಮ ಧರ್ಮಪತ್ನಿಯ ಚಿನ್ನದ ಮಾಂಗಲ್ಯವನ್ನೂ ಮಾರಿ ಬಂದ ಹಣವನ್ನೆಲ್ಲ ರಾಮಾರ್ಪಣೆ ಮಾಡಿದ ತ್ಯಾಗಮಯಿ ಕೃಷ್ಣಪ್ಪನವರು. ದಾಸರು ನುಡಿದಂತೆ ’ಕೆರೆಯ ನೀರನು ಕೆರೆಗೆ’ ಚೆಲ್ಲಿದರು. ಹಿಂದೊಮ್ಮೆ ಮದ್ರಾಸಿನಲ್ಲಿದ್ದ ಇವರ ಅಭಿಮಾನಿ ಆಳ್ವಾರ್ ಚೆಟ್ಟಿಯಾರ್ ತಮ್ಮ ಸರ್ವಸ್ವವನ್ನು ಕಳೆದುಕೊಂಡಾಗ, ಕೃಷ್ಣಪ್ಪನವರು ಅವರಿಗಾಗಿ ಕಛೇರಿಗಳನ್ನು ಮಾಡಿ ಹಣ ಸಂಗ್ರಹಿಸಿ ಕೊಟ್ಟಿದ್ದರಂತೆ. ಹಾಗಾಗಿ ರಾಮಮಂದಿರಕ್ಕಾಗಿ ಚೆಟ್ಟಿಯಾರ್‌ರವರು ಕಬ್ಬಿಣದ ತೊಲೆಗಳನ್ನು ಕಳುಹಿಸಿಕೊಟ್ಟರಂತೆ. ಮೈಸೂರಿನ ನಾರಾಯಣಶಾಸ್ತ್ರಿ ಬೀದಿಯಲ್ಲಿ ಕಂಗೊಳಿಸುತ್ತಿರುವ ’ಬಿಡಾರಂ ಕೃಷ್ಣಪ್ಪ ರಾಮ ಮಂದಿರ’ವು ಸಂಗೀತ ಪ್ರಪಂಚದಲ್ಲಿನ ಅತಿ ಅಮೂಲ್ಯವಾದ ಕಟ್ಟಡ. ಈ ’ಪ್ರಸನ್ನ ಸೀತಾರಾಮ ಮಂದಿರ’ವು ತಂಜಾವೂರಿನ ಸಂಗೀತ ಮಹಲ್‌ನಂತೆ, ಹಂಪಿಯ ಪದ್ಮಸದನವನ್ನು ಹೋಲುತ್ತದೆ. 1928ರಲ್ಲಿ ಈ ಕಟ್ಟಡದ ನಿರ್ಮಾಣ ಮುಗಿಯಿತು. ಈ ಭವ್ಯ ಸಭಾಂಗಣದಲ್ಲಿ ಇಂದಿಗೂ ಸಂಗೀತ ಕಾರ್ಯಕ್ರಮಗಳು ನಡೆಯುತ್ತಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗುರುಕಿರಣ್ ಕನ್ನಡದ ಯಶಸ್ವೀ ಚಲನಚಿತ್ರ ಸಂಗೀತ ನಿರ್ದೇಶಕರು!

Fri Feb 18 , 2022
ಗುರುಕಿರಣ್ ಶೆಟ್ಟಿ ಮಂಗಳೂರು ಮೂಲದವರು. ಎಪ್ಪತ್ತರ ದಶಕದಲ್ಲಿ ಸೈಂಟ್ ಅಲೋಷಿಯಸ್ ಪ್ರೈಮರಿ ಶಾಲೆಯಲ್ಲಿ ಓದುವಾಗಲೇ ಅವರು ಸುಶ್ರಾವ್ಯವಾಗಿ ಹಾಡುತ್ತಿದ್ದರು. ಮಂಗಳೂರಿನಲ್ಲಿ ವಾಣಿಜ್ಯ ಪದವಿ ಪಡೆದ ನಂತರದಲ್ಲಿ ಅವರು ಮಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾದ್ಯಗೋಷ್ಠಿಗಳಲ್ಲಿ ಗಾಯಕರಾಗಿ ಮತ್ತು ಕೀಬೋರ್ಡ್ ನುಡಿಸುವವರಾಗಿ ಕಾರ್ಯನಿರ್ವಹಿಸಿದರು. 1994ರಲ್ಲಿ ಗುರುಕಿರಣ್ ಅವರು ಸಂಗೀತ ನಿರ್ದೇಶಕ ಮತ್ತು ಗೀತರಚನಕಾರರಾದ ವಿ. ಮನೋಹರ್ ಅವರ ಸಹಾಯಕರಾಗಿ ಕಾರ್ಯನಿರ್ವಹಿಸಲು ಆರಂಭಿಸಿದರು. ಸುರದ್ರೂಪಿಗಳಾದ ಗುರುಕಿರಣ್ ಚಿತ್ರರಂಗದಲ್ಲಿ ನಟರಾಗಲು ಆಶಿಸಿದ್ದರು. ಅವರು ನಟಿಸಿದ […]

Advertisement

Wordpress Social Share Plugin powered by Ultimatelysocial