ಸಂತೋಷ್ ಪಾಟೀಲ್ ಆತ್ಮಹತ್ಯೆ ಕಾಂಗ್ರೆಸ್ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟಿದೆ !

ಬೆಂಗಳೂರು, ಏ.14- ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್ ಪಾಟೀಲ್ ಪ್ರಕರಣದಲ್ಲಿ ಕಾಂಗ್ರೆಸ್ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೊರಟಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದಿಲ್ಲಿ ವಾಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಕಾರಾವಯಲ್ಲಿ ಇಂತಹ ಅನೇಕ ಪ್ರಕರಣಗಳು ನಡೆದಿವೆ. ಕೊಲೆ ಪ್ರಕರಣಗಳನ್ನೇ ಹಿಂಪಡೆದಿರುವ ಅವರಿಗೆ ಈಗ ಪ್ರತಿಭಟನೆ ನಡೆಸುವ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಹೋರಾಟ ನಡೆಸುವ ನೈತಿಕತೆ ಕಾಂಗ್ರೆಸ್‍ಗಿಲ್ಲ. ಹಿಂದೆ ಅವರ ಅಕಾರಾವಯಲ್ಲೇ ಅನೇಕ ಕೊಲೆಗಳಾಗಿವೆ. ಕೊಲೆ ಮಾಡಿದವರ ಪ್ರಕರಣಗಳನ್ನೇ ಹಿಂಪಡೆದಿರುವ ಕುಖ್ಯಾತಿ ಆ ಪಕ್ಷಕ್ಕಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಇಂತಹ ಅರಾಜಕತೆ ಸೃಷ್ಟಿಸಿ, ಮಾಡಬಾರದ್ದನ್ನೆಲ್ಲ ಮಾಡಿದ್ದಕ್ಕಾಗಿಯೇ ಕಾಂಗ್ರೆಸ್ ಪಕ್ಷವನ್ನು ಜನರು ತಿರಸ್ಕರಿಸಿದ್ದಾರೆ. ಬಿಜೆಪಿ ವಿರುದ್ಧವಾಗಲಿ, ನಮ್ಮ ಸರ್ಕಾರದ ವಿರುದ್ಧ ಹೋರಾಟ ಮಾಡುವ ನೈತಿಕತೆಯನ್ನು ಅವರು ಉಳಿಸಿಕೊಂಡಿಲ್ಲ. ಇದು ರಾಜಕೀಯ ಲಾಭಕ್ಕಾಗಿ ನಡೆಸುತ್ತಿರುವ ಹೋರಾಟ ಎಂದು ಕಿಡಿಕಾರಿದರು.

ಮುಖ್ಯಮಂತ್ರಿ ಕಚೇರಿಯಲ್ಲೇ ಲಂಚ ಪಡೆಯಲಾಗುತ್ತಿದೆ ಎಂಬ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರ ಆರೋಪಕ್ಕೆ ತಿರುಗೇಟು ನೀಡಿದ ಬೊಮ್ಮಾಯಿ ಅವರು ಬಿಡಿಎ ಸೇರಿದಂತೆ ಅನೇಕ ಇಲಾಖೆಗಳಲ್ಲಿ ಹಗರಣ ನಡೆದಿರುವುದಕ್ಕೆ ಸಾಕ್ಷಿಗಳಿವೆ. ಅವರಿಗೆ ಯಾವ ನೈತಿಕತೆ ಇದೆ ಎಂದು ತರಾಟೆಗೆ ತೆಗೆದುಕೊಂಡರು.

ಬಿಡಿಎನಲ್ಲೇ ಬಹುದೊಡ್ಡ ಹಗರಣ ನಡೆದಿರುವುದಕ್ಕೆ ಸಾಕ್ಷಿಗಳಿವೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಅವರು ಇನ್ನೊಬ್ಬರ ಬಗ್ಗೆ ಆರೋಪ ಮಾಡುವಾಗ ಅಳೆದು ತೂಗಿ ಮಾತನಾಡಬೇಕು. ಭ್ರಷ್ಟಾಚಾರವನ್ನೇ ಮುಚ್ಚಿಹಾಕಿರುವ ನಿಮಗೆ ನಮ್ಮ ವಿರುದ್ಧ ಮಾತನಾಡಲು ನೈತಿಕತೆ ಇಲ್ಲ ಎಂದು ಹೇಳಿದರು.

ಈ ಆತ್ಮಹತ್ಯೆ ಪ್ರಕರಣವನ್ನು ಸರ್ಕಾರ ಮುಕ್ತ ಮತ್ತು ಪಾರದರ್ಶಕತೆಯಿಂದ ತನಿಖೆ ನಡೆಸಲಿದೆ. ಪ್ರಾಥಮಿಕ ವರದಿ ಬಂದ ನಂತರ ಯಾವ ಸಂಸ್ಥೆಯಿಂದ ತನಿಖೆ ನಡೆಸಬೇಕೆಂಬುದನ್ನು ಸರ್ಕಾರ ತೀರ್ಮಾನಿಸಲಿದೆ ಎಂದರು. ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣವನ್ನು ಸಂಪೂರ್ಣವಾಗಿ ತನಿಖೆ ನಡೆಸುತ್ತೇವೆ. ಸತ್ಯ ಆಚೆ ಬಂದೇ ಬರಲಿದೆ. ಇಲ್ಲಿ ಯಾರನ್ನೂ ಕೂಡ ರಕ್ಷಣೆ ಮಾಡುವ ಉದ್ದೇಶವಿಲ್ಲ. ವರದಿ ಬಂದ ನಂತರ ಸಚಿವ ಈಶ್ವರಪ್ಪನವರ ರಾಜೀನಾಮೆ ಕುರಿತು ತೀರ್ಮಾನವಾಗಲಿದೆ ಎಂದು ತಿಳಿಸಿದರು.

ಪ್ರಾಥಮಿಕ ತನಿಖೆಯಾಗುವವರೆಗೂ ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳಲು ಸಾಧ್ಯವಿಲ್ಲ. ಪ್ರತಿಪಕ್ಷದವರು ಆಧಾರರಹಿತ ಆರೋಪ ಮಾಡಿದರೆ ಅದಕ್ಕೆಲ್ಲ ಉತ್ತರಿಸಲು ಸಾಧ್ಯವಿಲ್ಲ. ಈವರೆಗೂ ಈಶ್ವರಪ್ಪನವರ ವಿಷಯದಲ್ಲಿ ಹೈಕಮಾಂಡ್ ಮಧ್ಯ ಪ್ರವೇಶ ಮಾಡಿಲ್ಲ ಎಂದು ಬೊಮ್ಮಾಯಿ ಸ್ಪಷ್ಟಪಡಿಸಿದರು.

ಈಗಾಗಲೇ ಮರಣೋತ್ತರ ಪರೀಕ್ಷೆ ನಡೆದು ವರದಿ ಬರುವುದು ಬಾಕಿ ಇದೆ. ಅದು ಬಂದ ನಂತರ ನಾವು ತನಿಖೆ ಬಗ್ಗೆ ತೀರ್ಮಾನಿಸುತ್ತೇವೆ.
ದಾಖಲೆ ಇದ್ದರೆ ಕೊಡಿ: ಮುಖ್ಯಮಂತ್ರಿ ಕಚೇರಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕಮಿಷನ್ ಪಡೆಯಲಾಗುತ್ತಿದೆ ಎಂಬ ಆರೋಪ ಕುರಿತು ಯಾರ ಬಳಿಯಾದರೂ ದಾಖಲೆಗಳಿದ್ದರೆ ಕೊಡಿ. ಸರ್ಕಾರ ಖಂಡಿತವಾಗಿಯೂ ತನಿಖೆ ನಡೆಸಲಿದೆ ಎಂದು ಭರವಸೆ ಕೊಟ್ಟರು.

ಸುಖಾಸುಮ್ಮನೆ ಆಧಾರರಹಿತವಾಗಿ ಮಾತನಾಡಬಾರದು. ನನ್ನ ಕಚೇರಿಯಲ್ಲಿ ಲಂಚ ಪಡೆಯಲಾಗುತ್ತದೆ ಎಂದು ಸಿದ್ದರಾಮಯ್ಯನವರ ಬಳಿ ದಾಖಲೆಗಳಿದ್ದರೆ ಕೊಡಲಿ. ನೀವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಭ್ರಷ್ಟಾಚಾರ ನಡೆದಿರಲಿಲ್ಲವೆ ಎಂದು ಪ್ರಶ್ನಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಲೋಕೋಪಯೋಗಿ, ಬೃಹತ್ ನೀರಾವರಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಕಮಿಷನ್ ಪಡೆದಿರುವುದಕ್ಕೆ ದಾಖಲೆಗಳಿದ್ದರೆ ಗುತ್ತಿಗೆದಾರರು ನಿರ್ದಿಷ್ಟ ದಾಖಲೆಗಳನ್ನು ಸರ್ಕಾರಕ್ಕೆ ಕೊಡಬೇಕು. ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡಬಾರದು ಎಂದು ಗುತ್ತಿಗೆದಾರರಿಗೆ ಸೂಚ್ಯವಾಗಿ ಎಚ್ಚರಿಕೆ ಕೊಟ್ಟರು.

ನಿಮ್ಮ ಆರೋಪಗಳಿಗೆ ಪುಷ್ಟಿ ನೀಡುವ ದಾಖಲೆಗಳಿದ್ದರೆ ತನ್ನಿ. ಯಾರದ್ದೋ ಮಾತು ಕೇಳಿಕೊಂಡು ಆರೋಪ ಮಾಡಬೇಡಿ. ನೀವು ದಾಖಲೆ ಕೊಟ್ಟರೆ ನಾವು ತನಿಖೆ ಮಾಡಲು ಸಿದ್ಧರಿದ್ದೇವೆ. ಯಾರದೋ ದಾಳಕ್ಕೆ ನೀವು ಬಲಿಯಾಗಬಾರದು ಎಂದು ಸಿಎಂ ತಿಳಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಂತೋಷ್ ಕುಟುಂಬಕ್ಕೆ 1 ಕೋಟಿ ರೂ.ಪರಿಹಾರ ನೀಡಬೇಕು. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಆಗ್ರಹಿಸಿದ್ದಾರೆ.

Thu Apr 14 , 2022
ಬೆಳಗಾವಿ : ರಾಜ್ಯ ಸರ್ಕಾರ ಆತ್ಮಹತ್ಯೆ ಮಾಡಿಕೊಂಡಿರುವ ಗುತ್ತಿಗೆದಾರ ಸಂತೋಷ್ ಕುಟುಂಬಕ್ಕೆ 1 ಕೋಟಿ ರೂ.ಪರಿಹಾರ ನೀಡಬೇಕು. 4 ಕೋಟಿ ರೂ. ಬಿಲ್ ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಆಗ್ರಹಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಮೂವರ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಎಫ್ ಐಆರ್ ಆಗಿದ್ದರೂ ಆರೋಪಿಗಳ ಬಂಧನವಾಗಿಲ್ಲ. ಮೂವರು ಬಂಧಿಸಲು ಸಂತೋಷ್ ಮೊಬೈಲ್ ನಲ್ಲಿ ಸಾಕ್ಷ್ಯವಿದೆ. ಆದರೆ […]

Advertisement

Wordpress Social Share Plugin powered by Ultimatelysocial