ಸಿಎಂ ಬೊಮ್ಮಾಯಿ-ಬಿಎಸ್‍ವೈ ರಹಸ್ಯ ಚರ್ಚೆ….

ಬೆಂಗಳೂರು,ಮೇ 13- ಸಚಿವ ಸಂಪುಟ ವಿಸ್ತರಣೆ, ವಿಧಾನಪರಿಷತ್ ಹಾಗೂ ರಾಜ್ಯಸಭೆ ಚುನಾವಣೆ , ಅಭ್ಯರ್ಥಿಗಳ ಆಯ್ಕೆ ಮತ್ತು ದೆಹಲಿ ಪ್ರವಾಸ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜೊತೆ ಮಾತುಕತೆ ನಡೆಸಿದರು.

ಕಳೆದ ರಾತ್ರಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಜೊತೆ ಮಾತುಕತೆ ನಡೆಸಿದ ಬೆನ್ನಲ್ಲೇ ಇಂದು ಬೆಳಗ್ಗೆ ಕಾವೇರಿ ನಿವಾಸಕ್ಕೆ ಆಗಮಿಸಿದ ಬೊಮ್ಮಾಯಿ ಅವರು, ಬಿಎಸ್‍ವೈ ಜೊತೆ ಸುಮಾರು 20 ನಿಮಿಷಕ್ಕೂ ಹೆಚ್ಚು ಕಾಲ ರಹಸ್ಯವಾಗಿ ಚರ್ಚೆ ನಡೆಸಿದ್ದಾರೆ.

ಎರಡು ದಿನಗಳ ಹಿಂದಷ್ಟೇ ದೆಹಲಿಗೆ ತೆರಳಿದ್ದ ಬೊಮ್ಮಾಯಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿಯಾಗಿ ಸಚಿವ ಸಂಪುಟ ವಿಸ್ತರಣೆ/ಪುನಾರಚನೆ ಕುರಿತಾಗಿ ಮಾತುಕತೆ ನಡೆಸಿದ್ದರು. ಮೂರ್ನಾಲ್ಕು ದಿನಗಳಲ್ಲಿ ದೆಹಲಿಯಿಂದ ಸಂದೇಶ ಬರುತ್ತದೆ ಎಂದು ಸ್ವತಃ ಬೊಮ್ಮಾಯಿ ಅವರೇ ಹೇಳಿದ್ದರು. ಇದೀಗ ಬಿಎಸ್‍ವೈ ಅವರ ಬಳಿ ಸಂಪುಟದಿಂದ ಕೈಬಿಡುವವರು ಹಾಗೂ ತೆಗೆದುಕೊಳ್ಳುವವರ ಬಗ್ಗೆಯೂ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಸಂಪುಟದಲ್ಲಿ ಸದ್ಯ 5 ಸ್ಥಾನಗಳು ಖಾಲಿಯಿದ್ದು, ಚುನಾವಣಾ ವರ್ಷ ಆಗಿರುವುದರಿಂದ ಪುನಾರಚನೆ ಮಾಡಬೇಕೆಂಬ ಬೇಡಿಕೆಯನ್ನು ವರಿಷ್ಠರ ಮುಂದೆ ಬೊಮ್ಮಾಯಿ ಇಟ್ಟಿದ್ದಾರೆ. ಯಾವುದೇ ವೇಳೆ ಗ್ರೀನ್ ಸಿಗ್ನಲ್ ಸಿಗಬಹುದೆಂಬ ನಿರೀಕ್ಷೆಯ ಹಿನ್ನೆಲೆಯಲ್ಲಿ ಪಕ್ಷದ ಪ್ರಮುಖರು ಆಗಿರುವ ಯಡಿಯೂರಪ್ಪ ಅವರ ಬಳಿ ಸಾಧಕ-ಬಾಧಕಗಳ ಕುರಿತು ಚರ್ಚೆ ನಡೆಸಿದ್ದಾರೆ.

ಚುನಾವಣೆ ಬಗ್ಗೆಯೂ ಚರ್ಚೆ:
ಇನ್ನು ಜೂನ್ ತಿಂಗಳಿನಲ್ಲಿ ನಡೆಯಲಿರುವ 4 ವಿಧಾನಪರಿಷತ್, ವಿಧಾನಸಭೆಯಿಂದ ವಿಧಾನಪರಿಷತ್‍ಗೆ ಆಯ್ಕೆಯಾಗಲಿರುವ 4 ಸ್ಥಾನಗಳು, ಎರಡು ರಾಜ್ಯಸಭೆ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕುರಿತು ಬಿಎಸ್‍ವೈ ಬಳಿಯಿಂದ ಮಾಹಿತಿ ಪಡೆದುಕೊಂಡರು. ಮುಂದಿನ ತಿಂಗಳು ವಿಧಾನಪರಿಷತ್‍ನ ಏಳು ಸ್ಥಾನಗಳು ಖಾಲಿಯಿದ್ದು, ವಿಧಾನಸಭೆಯಲ್ಲಿ ಬಿಜೆಪಿ ಹೊಂದಿರುವ ಬಲಾಬಲದಲ್ಲಿ ನಾಲ್ಕು ಸ್ಥಾನಗಳನ್ನು ಸುಲಭವಾಗಿ ಆಯ್ಕೆ ಮಾಡಬಹುದು.

ತೆರವಾಗಲಿರುವ ಈ ಸ್ಥಾನಕ್ಕೆ ಯಾವ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕು, ಹಾಲಿ ಸದಸ್ಯರಾದ ಲಕ್ಷ್ಮಣ ಸವದಿ, ಲೆಹರ್ ಸಿಂಗ್ ಅವರುಗಳನ್ನು ಮುಂದುವರೆಸಬೇಕೆ, ಇಲ್ಲವೇ ಹೊಸ ಮುಖಗಳಿಗೆ ಆದ್ಯತೆ ನೀಡಬೇಕೆ ಎಂಬುದರ ಬಗ್ಗೆ ಅಭಿಪ್ರಾಯ ಪಡೆದಿದ್ದಾರೆ.

ಲೆಹರ್ ಸಿಂಗ್ ಮತ್ತು ಸವದಿ ಮುಂದುವರೆಯಲು ಹಿಂದೇಟು ಹಾಕಿದ್ದು, ಹೊಸಬರನ್ನು ಆಯ್ಕೆ ಮಾಡಬೇಕೆಂಬ ಅಭಿಪ್ರಾಯ ಪಕ್ಷದ ವಲಯದಲ್ಲಿ ಕೇಳಿಬಂದಿದೆ. ಹೀಗಾಗಿ ಸಿಎಂ ಯಡಿಯೂರಪ್ಪ ಅವರಿಂದ ಸಲಹೆಗಳನ್ನು ಪಡೆದುಕೊಂಡರು ಎಂದು ಮೂಲಗಳು ತಿಳಿಸಿವೆ. ಇದೇ ರೀತಿ ಎರಡು ಪದವೀಧರ ಹಾಗೂ ಎರಡು ಶಿಕ್ಷಕರ ಕ್ಷೇತ್ರಕ್ಕೂ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕುರಿತಾಗಿ ಉಭಯ ನಾಯಕರು ವಿಷಯ ವಿನಿಮಯ ಮಾಡಿಕೊಂಡರು.

ರಾಜ್ಯಸಭೆಗೆ ನಡೆಯಲಿರುವ ಎರಡು ಸ್ಥಾನಗಳ ಚುನಾವಣೆಗೂ ಅಭ್ಯರ್ಥಿಗಳ ಆಯ್ಕೆ ಕುರಿತು ಚರ್ಚೆ ಮಾಡಲಾಗಿದೆ. ಎರಡು ಸ್ಥಾನಗಳಲ್ಲಿ ಹಾಲಿ ಹಣಕಾಸು ಸಚಿವೆ ನಿರ್ಮಲಾ ಸೀತರಾಮ್ ಅವರನ್ನು ಆಯ್ಕೆ ಮಾಡಲೇಬೇಕಾದ ಅನಿವಾರ್ಯತೆ ಇದೆ. ಒಂದು ಸ್ಥಾನಕ್ಕೆ ಹಾಲಿ ಸದಸ್ಯ ಕೆ.ಸಿ.ರಾಮಮೂರ್ತಿ ಅವರನ್ನು ಅಭ್ಯರ್ಥಿಯನ್ನಾಗಿಸಬೇಕೆ? ಇಲ್ಲವೇ ಬೇರೊಬ್ಬರನ್ನು ಕಣಕ್ಕಿಳಿಸಬೇಕೆ ಎಂಬುದರ ಕುರಿತಾಗಿಯೂ ಚರ್ಚೆ ಮಾಡಲಾಗಿದೆ.

ಅಂತಿಮವಾಗಿ ವಿಧಾನಪರಿಷತ್ ಮತ್ತು ರಾಜ್ಯಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಪಕ್ಷದ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಬೇಕಾಗುತ್ತದೆ. ಈ ವಿಷಯದಲ್ಲಿ ನಾನು ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಬಿಎಸ್‍ವೈ ಸಿಎಂಗೆ ತಿಳಿಸಿದ್ದಾರೆ ಎಂದು ಗೊತ್ತಾಗಿದೆ. ಬೃಹತ್ ನೀರಾವರಿ ಸಚಿವ ಗೋವಿಂದ ಕಾರಜೋಳ ಕೂಡ ಹಾಜರಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

63 ಲಕ್ಷ ಮನೆಗಳ ಕೆಡವಲು ಬಿಜೆಪಿ ಯೋಜನೆ:

Fri May 13 , 2022
ನವದೆಹಲಿ: ದೆಹಲಿಯ ಅನಧಿಕೃತ ಕಾಲೊನಿಗಳು, ಕೊಳೆಗೇರಿಗಳಲ್ಲಿರುವ 63 ಲಕ್ಷ ಮನೆಗಳನ್ನು ಕೆಡವಲು ಕೇಂದ್ರದ ಬಿಜೆಪಿ ಸರ್ಕಾರ ಉದ್ದೇಶಿಸಿದೆ. ಅವರ (ಬಿಜೆಪಿ) ‘ಬುಲ್ಡೋಜರ್’ ನೀತಿಯನ್ನು ಎಎಪಿ ಸರ್ಕಾರ ವಿರೋಧಿಸುತ್ತದೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ. ಎಎಪಿ ಸರ್ಕಾರವು ನಿಮ್ಮ ಜತೆಗಿರಲಿದೆ ಎಂದು ದೆಹಲಿಯ ಜನತೆಗೆ ನಾನು ಭರವಸೆ ನೀಡುತ್ತೇನೆ. ಬಿಜೆಪಿಯ ತೆರವು ಕಾರ್ಯಾಚರಣೆ ವಿರುದ್ಧ ಜೈಲಿಗೆ ಹೋಗಲೂ ನಾವು ಸಿದ್ಧರಿದ್ದೇವೆ ಎಂದು ಅವರು ಹೇಳಿದ್ದಾರೆ. ಜನರಿಂದ ಹಣ […]

Advertisement

Wordpress Social Share Plugin powered by Ultimatelysocial