ಭಟ್ಕಳ ಪೊಲೀಸರಿಗೆ ಬಂತು ಬಾಂಬ್‌ ಬ್ಲ್ಯಾಸ್ಟ್‌ ಬೆದರಿಕೆ ಪತ್ರ

ಕಾರವಾರ: ಇಲ್ಲಿನ ಭಟ್ಕಳ ಪಟ್ಟಣದಲ್ಲಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ ಬಾಂಬ್‌ ಬ್ಲ್ಯಾಸ್ಟ್ (Bomb Threat) ಮಾಡುವುದಾಗಿ ಬೆದರಿಕೆ ಹಾಕಿ ಪತ್ರ ರವಾನೆ ಮಾಡಿರುವ ವಿಚಾರವೊಂದು ತಡವಾಗಿ ಬೆಳಕಿಗೆ ಬಂದಿದೆ. ಬೆದರಿಕೆ ಕಾರ್ಡ್‌ ಬರೆದ ಆರೋಪಿ ಹೊಸಪೇಟೆಯ ಹನುಮಂತಪ್ಪ ಎಂದು ಗುರುತಿಸಲಾಗಿದ್ದು, ಆತನನ್ನು ಚೆನ್ನೈ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.ಹೀಗಾಗಿ ಆರೋಪಿಯನ್ನು ವಶಕ್ಕೆ ಪಡೆಯಲು ಭಟ್ಕಳ ಪೊಲೀಸರು ಕಾನೂನು ಪ್ರಕ್ರಿಯೆ ಪ್ರಾರಂಭಿಸಿದ್ದಾರೆ.’ಚೆನ್ನೈ ಕಲೆದಾ- ನೆಕ್ಸ್ಟ್ ಟಾರ್ಗೆಟ್ ಡಿಸೆಂಬರ್ 25 ಆಯಂಡ್ ಹ್ಯಾಪಿ ನ್ಯೂ ಇಯರ್ 2023′ ಎಂದು ಇಂಗ್ಲೀಷ್‌ನಲ್ಲಿ ಬರೆದ ಪೋಸ್ಟ್ ಕಾರ್ಡ್ ಡಿಸೆಂಬರ್‌ನಲ್ಲಿ ಭಟ್ಕಳ ಪೊಲೀಸ್ ಠಾಣೆಗೆ ತಲುಪಿತ್ತು. ಸೂಕ್ಷ್ಮ ವಿಷಯವಾಗಿದ್ದರಿಂದ ಪೊಲಿಸರು ವಿಚಾರವನ್ನು ಬಹಿರಂಗಪಡಿಸದೇ ತನಿಖೆ ನಡೆಸಿದ್ದರು. ಪೋಸ್ಟ್ ಕಾರ್ಡ್ ಮಂಗಳೂರಿನ ಸುಬ್ರಹ್ಮಣ್ಯದಿಂದ ಪೋಸ್ಟ್ ಆಗಿದೆ ಎನ್ನಲಾಗಿದ್ದು, ಭಯೋತ್ಪಾದಕ ಚಟುವಟಿಕೆಗೂ ಇದಕ್ಕೂ ಯಾವುದೇ ಲಿಂಕ್ ಇಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇದೇ ರೀತಿ ಪೋಸ್ಟ್ ಕಾರ್ಡ್ ಬೆದರಿಕೆಗೆ ಸಂಬಂಧಿಸಿದಂತೆ ಚೆನ್ನೈ ಪೊಲೀಸರು ಹೊಸಪೇಟೆ ಮೂಲದ ಹನುಮಂತಪ್ಪನನ್ನು ಬಂಧಿಸಿದ್ದಾರೆ.ತನಿಖೆ ನಡೆಸಿದಾಗ ಕಳ್ಳತನದ ವಿಷಯ ಮುಚ್ಚಿಡಲು ಕಳ್ಳ ಬರೆದಿದ್ದ ಹುಸಿ ಬೆದರಿಕೆ ಪತ್ರ ಎಂದು ತಿಳಿದು ಬಂದಿದೆ. ಆರೋಪಿ ಹನುಮಂತಪ್ಪ ಚೆನ್ನೈನಲ್ಲಿ ಆಯಪಲ್ ಲ್ಯಾಪ್ ಟಾಪ್‌ವೊಂದನ್ನು ಕಳ್ಳತನ ಮಾಡಿ ಅಂಗಡಿಯೊಂದಕ್ಕೆ ಅದನ್ನು ಮಾರಲು ಹೋಗಿದ್ದ. ಅಂಗಡಿ ಮಾಲೀಕ ಅನುಮಾನ ಬಂದು ಲಾಗಿನ್‌ ಮಾಡಲು ಆಯಪಲ್ ಐಡಿ ಕೊಡು ಎಂದು ಕೇಳಿದ್ದಾನೆ. ಈ ವೇಳೆ ಕಕ್ಕಾಬಿಕ್ಕಿಯಾದ ಹನುಮಂತಪ್ಪ ಅಲ್ಲಿಂದ ತಪ್ಪಿಸಿಕೊಂಡಿದ್ದು, ಅಂಗಡಿ ಮಾಲೀಕನ ಮೇಲಿನ ಸಿಟ್ಟಿಗೆ ಆತನ ಮೊಬೈಲ್ ನಂಬರ್ ಹಾಕಿ ಹುಸಿ ಬಾಂಬ್ ಬೆದರಿಕೆ ಪತ್ರ ಹಾಕಿದ್ದ ಎಂಬುದು ತನಿಖೆಯಿಂದ ತಿಳಿದು ಬಂದಿದೆ.ಅದೇ ಕಳ್ಳನೇ ಭಟ್ಕಳಕ್ಕೂ ಬಾಂಬ್ ಬೆದರಿಕೆ ಪತ್ರ ಬರೆದಿದ್ದಾನೆ ಎಂಬ ಮಾಹಿತಿ ಇದ್ದು, ನ್ಯಾಯಾಲಯದ ಅನುಮತಿ ಪಡೆದು ಪ್ರಕರಣ ದಾಖಲಿಸಲಾಗಿದೆ. ಚೆನ್ನೈ ನ್ಯಾಯಾಲಯದಿಂದ ಬಾಡಿ ವಾರೆಂಟ್ ಮೇಲೆ ಆತನನ್ನು ಪಡೆಯುವ ಕಾನೂನು ಪ್ರಕ್ರಿಯೆಗಳು ಚಾಲ್ತಿಯಲ್ಲಿವೆ. ಆತನ ವಿಚಾರಣೆಯ ನಂತರ ಆತನಿಗೂ ಭಟ್ಕಳಕ್ಕೂ ಏನು ಸಂಬಂಧ, ಯಾವ ಕಾರಣಕ್ಕೆ ಭಟ್ಕಳಕ್ಕೆ ಪತ್ರ ಕಳುಸಿದ್ದ ಎನ್ನುವ ಅಂಶಗಳು ಬೆಳಕಿಗೆ ಬರಲಿವೆ ಎಂದು ಭಟ್ಕಳ ಪೊಲೀಸರು ಮಾಹಿತಿ ನೀಡಿದ್ದಾರೆ.ಕಾರವಾರ: ಅಂಡಮಾನ್-ನಿಕೋಬಾರ್ ದ್ವೀಪ ಪ್ರದೇಶದಲ್ಲಿ ನೌಕಾಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ (Karwar News) ಅಂಕೋಲಾ ತಾಲೂಕಿನ ಲಕ್ಷ್ಮೀಶ್ವರ ಮೂಲದ ನೌಕಾಸೇನಾ ಸಿಬ್ಬಂದಿ ಮೃತಪಟ್ಟಿದ್ದಾರೆ. ಕಳೆದ 4 ದಿನಗಳ ಹಿಂದೆ ಆಕಸ್ಮಿಕ ದುರಂತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಅವರ ಪಾರ್ಥಿವ ಶರೀರವನ್ನು ಗುರುವಾರ (ಜ.೫) ಹುಟ್ಟೂರಿಗೆ ತರಲಾಗುತ್ತಿದೆ.ನಾಗರಾಜ ಮುಕುಂದ ಕಳಸ (33) ಅಕಾಲಿಕವಾಗಿ ನಿಧನರಾಗಿರುವ ನೌಕಾಸೇನಾ ಸಿಬ್ಬಂದಿ. ಭುವನೇಶ್ವರದಲ್ಲಿರುವ ಐಎನ್‌ಎಸ್ ಚಿಲಕ ನೌಕಾದಳ ತರಬೇತಿ ಕೇಂದ್ರದಲ್ಲಿ 2010ರಲ್ಲಿ ತರಬೇತಿಯನ್ನು ಪಡೆದು, ಕಾರವಾರದ ಕದಂಬ ನೌಕಾನೆಲೆಯಲ್ಲಿ ಭಾರತೀಯ ನೌಕಾಸೇನೆಗೆ ಸೇರ್ಪಡೆಯಾಗಿದ್ದರು.ಬಳಿಕ ಮುಂಬೈನಲ್ಲಿ ಸೇವೆ ಸಲ್ಲಿಸಿ ಅಂಡಮಾನ್-ನಿಕೋಬಾರ್ ದ್ವೀಪಗಳಲ್ಲಿ ತಮ್ಮ ಸೇವೆಯನ್ನು ಮುಂದುವರಿಸಿದ್ದರು. ಸೇವಾ ನಿವೃತ್ತಿಗೆ ಎರಡು ವರ್ಷ ಬಾಕಿ ಇರುವಾಗಲೇದುರ್ದೈವವಶಾತ್ ಅಸುನೀಗಿದ್ದಾರೆ.ಅಂಡಮಾನ್ ನಿಕೋಬಾರ್‌ನಿಂದ ಪಾರ್ಥಿವ ಶರೀರವನ್ನು ಗುರುವಾರ (ಜ.೫) ಬೆಳಗಿನ ಜಾವ ಅಂಕೋಲಾಕ್ಕೆ ತಲುಪಿಸಲಾಗುತ್ತಿದೆ ಎನ್ನುವ ಮಾಹಿತಿ ಇದ್ದು, ಲಕ್ಷ್ಮೀಶ್ವರದ ಮೂಲ ಮನೆಯಲ್ಲಿ ಬೆಳಗ್ಗೆ 7 ಗಂಟೆಯಿಂದ 2 ಗಂಟೆಗಳ ಕಾಲ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುವುದು. ಬಳಿಕ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.ಕಾರವಾರ: ತಾಯಿ ಭಾರತಾಂಬೆಯ ಸತತ 21 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಭಟ್ಕಳಕ್ಕೆ ಆಗಮಿಸಿದ ಮಾಜಿ ಯೋಧ ಗಣಪತಿ ಮಂಜುನಾಥ ಮೊಗೇರ ಅವರಿಗೆ ಭಟ್ಕಳ ಶಂಶುದ್ದೀನ ಸರ್ಕಲ್‌ನಲ್ಲಿ ನಾಗರಿಕರು ಅದ್ಧೂರಿ ಸ್ವಾಗತ ನೀಡಿದರು.ಭಟ್ಕಳ ಸರ್ಕಲಿನಿಂದ ಜನತಾ ಕಾಲನಿಗೆ ಬೈಕ್ ರ‍್ಯಾಲಿ ನಡೆಸಲಾಯಿತು. ಬಳಿಕ ಜನತಾ ಕಾಲನಿಯಿಂದ ಸೋಡಿಗದ್ದೆ ಶ್ರೀ ಮಹಾಸತಿ ದೇವಸ್ಥಾನದವರೆಗೆ ಕಾಲ್ನಡಿಗೆಯಲ್ಲಿ ಭವ್ಯ ಮೆರವಣಿಗೆಯಲ್ಲಿ ಸ್ವಾಗತ ನೀಡಲಾಯಿತು.ಭಟ್ಕಳ ತಾಲೂಕಿನ ಬೆಳಕೆ ಗ್ರಾಮದ ಕಾವಿನಮನೆ ಮನೆತನದ ಮಂಜುನಾಥ ದಂಪತಿಗಳ ಪುತ್ರ ಗಣಪತಿ ಮೊಗೇರ ಅವರಿಗೆ ಸಾರ್ವಜನಿಕರಿಂದ ಭರ್ಜರಿ ಸ್ವಾಗತ ಸಿಕ್ಕಿದೆ. ಸ್ಥಳೀಯ ಹೊನ್ನೆಮಡಿಯ ಶಾಲೆಯಲ್ಲಿ ಕಿರಿಯ ಪ್ರಾಥಮಿಕ, ಬೆಳಕೆಯಲ್ಲಿ ಹಿರಿಯ ಪ್ರಾಥಮಿಕ, ಮುಗಳಿಹೊಂಡದ ನಾಗಪ್ಪ ಜ್ಞಾನ ಪ್ರಸಾರಕ ಹೈಸ್ಕೂಲ್‌ ನಲ್ಲಿ ಮಾಧ್ಯಮಿಕ ಶಿಕ್ಷಣ ಮತ್ತು ಅಂಜುಮನ್ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ, ಕರ್ನಾಟಕ ವಿಶ್ವವಿದ್ಯಾನಿಲಯ ಧಾರವಾಡದಲ್ಲಿ ಡಿಗ್ರಿ ಪದವಿಯನ್ನು ಪಡೆದಿದ್ದಾರೆ.28ನೇ ಜನವರಿ, 2002ನೇ ಇಸವಿಯಲ್ಲಿ ಬೆಂಗಳೂರಿನ ಮದ್ರಾಸ್‌ ಇಂಜಿನಿಯರ್‌ ಗ್ರೂಪ್‌ (ಎಂಇಜಿ) ದಳಕ್ಕೆ ಸೇರ್ಪಡೆಗೊಂಡು ಬೆಂಗಳೂರಿನ ತರಬೇತಿ ಕೇಂದ್ರದಲ್ಲಿ ಎರಡು ವರ್ಷಗಳ ಕಠಿಣ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದರು. ಆ ಬಳಿಕ 7 ಇಎನ್‌ಜಿಆರ್ ರೆಜಿಮೆಂಟ್‌ಗೆ ಸೇರ್ಪಡೆಯಾದರು. ಜಮ್ಮು ಮತ್ತು ಕಾಶ್ಮೀರದ ಕುಪ್ವಾರ್‌ನಲ್ಲಿ ಸತತ ಮೂರು ವರ್ಷಗಳ ಮೊದಲ ಸೇವೆ ಸಲ್ಲಿಸಿದರು. ನಂತರ, ರಾಜಸ್ಥಾನದ ನಸೀರಾಬಾದ್‌ನಲ್ಲಿ ಒಂದು ವರ್ಷದ ಸೇವೆ ಸಲ್ಲಿಸಿ, ರಾಷ್ಟ್ರೀಯ ರೈಫಲ್ಸ್ ವಿಭಾಗದಲ್ಲೂ ಸೇವೆ ಸಲ್ಲಿಸುವ ಅವಕಾಶವನ್ನು ಪಡೆದುಕೊಂಡರು. ಮತ್ತೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ವಿಭಾಗದಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದರು. ಅರುಣಾಚಲ ಪ್ರದೇಶದ ತವಾಂಗ್‌ನಲ್ಲಿ ಸತತ ಮೂರು ವರ್ಷಗಳ ಕಾಲ ಸೇವೆ ಮಾಡಿದರು.ರಾಜಸ್ಥಾನದ ಜೋಧಪುರದಲ್ಲಿ ಒಂದು ವರ್ಷದ ಸೇವೆ ಸಲ್ಲಿಸಿ, ರಾಷ್ಟ್ರೀಯ ಭದ್ರತಾ ದಳದಲ್ಲಿ ಮೂರು ವರ್ಷಗಳ ಕಾಲ ಕಠಿಣ ತರಬೇತಿ ಪಡೆದುಕೊಂಡರು. ಅಲ್ಲಿಂದ ಕಾಶ್ಮೀರದ ಬಾರಾಮುಲ್ಲಾದಲ್ಲಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿ, ರಾಜಾಸ್ಥಾನದ ಶ್ರೀಗಂಗಾ ನಗರದಲ್ಲಿ ಮೂರು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದರು. ನಿವೃತ್ತಿಗೆ ಅವಕಾಶವಿದ್ದರೂ, ದೇಶ ಸೇವೆಯನ್ನು ಮುಂದುವರಿಸುವ ಛಲದಿಂದ ಅಸ್ಸಾಂನ ‘ಗೌಹಾಟಿ’ ಯಲ್ಲಿ ಒಂದು ವರ್ಷಗಳ ಸೇವೆಯೊಂದಿಗೆ ಸತತ 21 ವರ್ಷಗಳ ಸೇವೆಯನ್ನು ಪೂರೈಸಿ 31-12-2022 ರಂದು ಬೆಂಗಳೂರಿನ ಎಂಇಜಿ ಕಚೇರಿಯಲ್ಲಿ ಸೇನಾ ಗೌರವದೊಂದಿಗೆ ತಮ್ಮ ನಿವೃತ್ತಿ ಜೀವನಕ್ಕೆ ಕಾಲಿಟ್ಟರು. ಇವರಿಗೆ ಭಟ್ಕಳದಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು.ಕಾರವಾರ:ಕುಮಟಾ ತಾಲೂಕಿನ (Karwar News) ಹೆಗಡೆಯ ಕಲ್ಕೊಡ ರಸ್ತೆಯ ಶ್ರೀಕೃಷ್ಣ ದೇವಸ್ಥಾನ ಎದುರಿನ ಗದ್ದೆಯಲ್ಲಿ ಹಾಕಿದ್ದ ಭತ್ತದ ಬಣವೆಗೆ ಬೆಂಕಿ ತಗುಲಿ ಸಂಪೂರ್ಣ ಭಸ್ಮವಾಗಿ ನಷ್ಟ ಉಂಟಾಗಿದೆ.ಹೆಗಡೆ ಗ್ರಾಮದ ರೈತ ಶೇಷಗಿರಿ ವೆಂಕಟ್ರಮಣ ನಾಯ್ಕ ಎಂಬುವವರು ತಾವು ಬೆಳೆದ ಭತ್ತದ ಪೈರನ್ನು ಗದ್ದೆಯಲ್ಲಿ ಬಣವೆ ಹಾಕಿದ್ದರು. ಬಣವೆಯ ಮೇಲ್ಭಾಗದಲ್ಲಿ ವಿದ್ಯುತ್ ಲೈನ್ ಹಾದು ಹೋಗಿದೆ. ಅಲ್ಲಿ ಎರಡು ಹಕ್ಕಿಗಳು ಕುಳಿತುಕೊಂಡಿದ್ದು, ಅವುಗಳ ರೆಕ್ಕೆ ಭಾಗಕ್ಕೆ ಕರೆಂಟಿನಿಂದ ಬೆಂಕಿ ತಗುಲಿದೆ. ಅಲ್ಲಿ ಹೊತ್ತಿಕೊಂಡ ಬೆಂಕಿಯು ಬಣವೆಯ ಮೇಲೆ ಬಿದ್ದು, ಅವಘಡ ಸಂಭವಿಸಿದೆ.ಬೆಂಕಿಯ ಕೆನ್ನಾಲಿಗೆಗೆ ನಾಲ್ಕು ಬಣವೆಗಳು ಸಂಪೂರ್ಣ ಭಸ್ಮವಾಗಿವೆ. ಈ ಬಗ್ಗೆ ಮಾಹಿತಿ ಪಡೆದ ಅಗ್ನಿಶಾಮಕ ದಳವು ತಕ್ಷಣ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವ ಮೂಲಕ ಗದ್ದೆಗಳಿಗೆ ಬೆಂಕಿ ಹರಡದಂತೆ ಎಚ್ಚರ ವಹಿಸಿದೆ. ಗ್ರಾಮ ಲೆಕ್ಕಾಧಿಕಾರಿ ವಿನೋದ್‌ ರಾವ್ ಸ್ಥಳಕ್ಕೆ ಭೇಟಿ ನೀಡಿ ಸುಮಾರು 30 ಸಾವಿರ ರೂ. ನಷ್ಟ ಸಂಭವಿಸಿರುವುದಾಗಿ ಅಂದಾಜಿಸಿದ್ದಾರೆ.ಅಲ್ಲದೆ, ಘಟನಾ ಸ್ಥಳಕ್ಕೆ ಹೆಗಡೆ ಗ್ರಾಪಂ ಪಿಡಿಒ ವೆಂಕಟ್ರಮಣ ಪಟಗಾರ, ಗ್ರಾಪಂ ಸದಸ್ಯರಾದ ಬಿ.ಜಿ. ಶಾನಭಾಗ, ರಾಮಚಂದ್ರ ಪಟಗಾರ, ವಿದ್ಯಾ ಗೌಡ ಆನಂದು ನಾಯ್ಕ ಭೇಟಿ ನೀಡಿ ಪರಿಶೀಲಿಸಿದರು. ಬೆಂಕಿ ನಂದಿಸಲು ಸ್ಥಳೀಯರಾದ ಮೋಹನ ಶಾನಭಾಗ, ಅಮರನಾಥ ಭಟ್ಟ, ಪ್ರಸನ್ನ ನಾಯ್ಕ ಕಲ್ಕೊಡ ಹಾಗೂ ಗ್ರಾಮಸ್ಥರು ಸಹಕರಿಸಿದರು.ಬನವಾಸಿ:ಇಲ್ಲಿನ ಶ್ರೀ ಮಧುಕೇಶ್ವರ ದೇವಸ್ಥಾನದ (Banavasi Temple) ನೂತನ ಮಹಾರಥ ನಿರ್ಮಾಣಕ್ಕೆ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ 3 ಲಕ್ಷ ರೂ. ದೇಣಿಗೆಯ ಚೆಕ್ ಅನ್ನು ದೇವಸ್ಥಾನ ಆಡಳಿತ ಮಂಡಳಿ ಹಾಗೂ ಮಹಾ ರಥ ನಿರ್ಮಾಣ ಸಮಿತಿಗೆ ಮಂಗಳವಾರ (ಜ.೩) ವಿತರಿಸಲಾಯಿತು.ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಶಿರಸಿ ಜಿಲ್ಲಾ ನಿರ್ದೇಶಕ ಬಾಬು ನಾಯಕ್ ಚೆಕ್ ವಿತರಿಸಿ ಮಾತನಾಡಿ, ಶ್ರೀ ಮಧುಕೇಶ್ವರ ದೇವರ ಮಹಾರಥ ನಿರ್ಮಾಣಕ್ಕೆ ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳು 3 ಲಕ್ಷ ರೂ. ನೀಡಿದ್ದಾರೆ. ಕಳೆದ 40 ವರ್ಷಗಳಿಂದ ವ್ಯಕ್ತಿಯನ್ನು ಶಕ್ತಿಯನ್ನಾಗಿಸುವ ಕಾರ್ಯವನ್ನು ಗ್ರಾಮಾಭಿವೃದ್ಧಿ ಯೋಜನೆಯು ಮಾಡುತ್ತಿದೆ. ಶಿಥಿಲವಾದ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಧರ್ಮೋತ್ಥಾನ ಟ್ರಸ್ಟ್ ಮುಖಾಂತರ ಸಹಾಯ ಧನ ನೀಡಲಾಗುತ್ತಿದೆ. ಅದರಲ್ಲೂ ಶಿಲಾಮಯ ದೇವಸ್ಥಾನ ನಿರ್ಮಾಣಕ್ಕೆ ಹೆಚ್ಚು ಅನುದಾನ ನೀಡಲಾಗುತ್ತಿದೆ. ಬನವಾಸಿಯ ಮಹಾರಥವೂ ಮುಂದಿನ ಪೀಳಿಗೆಗೆ ಸಾಕ್ಷಿಯಾಗಲಿದೆ. ದೇವಸ್ಥಾನದ ಎಲ್ಲ ಕಾರ್ಯಕ್ರಮಗಳಿಗೆ ಗ್ರಾಮಾಭಿವೃದ್ಧಿ ಯೋಜನೆಯು ಸಂಪೂರ್ಣ ಸಹಕಾರ ನೀಡಲಿದೆ ಎಂದು ಹೇಳಿದರು.ಆರ್ಥಿಕ ಸಮಿತಿಯ ಅಧ್ಯಕ್ಷ ದ್ಯಾಮಣ್ಣ ದೊಡ್ಮನಿ ಚೆಕ್ ಸ್ವೀಕರಿಸಿ ಮಾತನಾಡಿ, ಮಹಾರಥ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ದೈವಿ ಸಂಕಲ್ಪ ಕಾರ್ಯಕ್ಕೆ ಸಂಕಷ್ಟದ ಸಮಯದಲ್ಲಿ ಶ್ರೀ ಧರ್ಮಸ್ಥಳ ಕ್ಷೇತ್ರದಿಂದ 3 ಲಕ್ಷ ರೂ. ದೇಣಿಗೆಯ ರೂಪದಲ್ಲಿ ಪ್ರಸಾದ ವಿತರಣೆಯಾಗಿದೆ. ಧರ್ಮಾಧಿಕಾರಿಗಳು ನೀಡಿದ ಈ ದೇಣಿಗೆಯು ಮುಂದಿನ ಕಾರ್ಯಗಳಿಗೆ ಕಲ್ಪವೃಕ್ಷವಾಗಲಿದೆ. ರಥ ಸಮರ್ಪಣಾ ಕಾರ್ಯಕ್ರಮಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರ ಬಹುಮುಖ್ಯ ಎಂದರು.ಮಹಾರಥ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷ ದಯಾನಂದ ಭಟ್, ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಕಾರ್ಯದರ್ಶಿ ಪ್ರಕಾಶ ಬಂಗ್ಲೆ ಮಾತನಾಡಿದರು. ಈ ಸಂದರ್ಭದಲ್ಲಿ ಶಿರಸಿ ಜಿಲ್ಲಾ ನಿರ್ದೇಶಕ ಬಾಬು ನಾಯಕ್ ಹಾಗೂ ಯೋಜನಾಧಿಕಾರಿ ರಾಘವೇಂದ್ರ ನಾಯ್ಕ್ ಅವರನ್ನು ದೇವಸ್ಥಾನ ಆಡಳಿತ ಮಂಡಳಿಯಿಂದ ಸತ್ಕರಿಸಲಾಯಿತು.ಕಾರ್ಯಕ್ರಮದಲ್ಲಿ ಮಾಜಿ ಎಪಿಎಂಸಿ ಅಧ್ಯಕ್ಷ ಶಿವಕುಮಾರ ದೇಸಾಯಿ ಗೌಡ, ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ರಾಜಶೇಖರ ಒಡೆಯರ್, ಸದಸ್ಯರಾದ ಸೀಮಾ ಕೆರೂಡಿ, ಶಾಂತಲಾ ಪುರೋಹಿತ, ಶಂಕರ ಉಪ್ಪಾರ, ಯೋಜನಾಧಿಕಾರಿ ರಾಘವೇಂದ್ರ ನಾಯ್ಕ್, ಮೇಲ್ವಿಚಾರಕ ನಾಗರಾಜ, ರಾಮನಾಥ ಹೆಗಡೆ, ಶಿವಾನಂದ ಮಧುರವಳ್ಳಿ, ಸಾಯಿರಾಂ ಕಾನಳ್ಳಿ, ಭಾಸ್ಕರ್ ಶೇಟ್, ಪ್ರಶಾಂತ ಶೇಟ್, ಗಂಗಾ ಸಹವಾಸಿ, ಚಂದ್ರಕಲಾ ಗೌಡ, ಸೇವಾ ಪ್ರತಿನಿಧಿ ಸವಿತಾ ಹಾಗೂ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು ಇದ್ದರು. ಮೇಲ್ವಿಚಾರಕ ನಾಗರಾಜ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

Weight lose : ಜೀವ ಕಸಿದುಕೊಂಡ ಟ್ಯಾಬ್ಲೆಟ್‌

Thu Jan 5 , 2023
    ಕಾಂಚೀಪುರಂನ ಶ್ರೀಪೆರಂಬದೂರು ಸಮೀಪದ ಸೋಮಂಗಲಂನಲ್ಲಿ ಹಾಲಿನ ಸಂಸ್ಥೆಯೊಂದರಲ್ಲಿ ವಿತರಕರಾಗಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥೂಲಕಾಯದಿಂದ ಬಳಲುತ್ತಿದ್ದ ಸೂರ್ಯ ಅವರಿಗೆ ಕಳೆದ ತಿಂಗಳುಗಳಿಂದ ತೂಕ ಕಡಿಮೆ ಮಾಡಿಕೊಳ್ಳುವಂತೆ ವೈದ್ಯರು ಸಲಹೆ ನೀಡಿದ್ದರು. ಡಿಸೆಂಬರ್ 22 ರಿಂದ ಸ್ನೇಹಿತರ ಸಲಹೆಗಳ ಆಧಾರದ ಮೇಲೆ ಮಾತ್ರೆಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು. ಔಷಧಗಳ ಡೋಸೇಜ್ ಮತ್ತು ಅಂಶಗಳ ಬಗ್ಗೆ ವಿಚಾರಣೆಗೆ ಹಾಜರಾಗಲು ಖಾಸಗಿ ಕಂಪನಿಗೆ ಕರೆ ಮಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು […]

Advertisement

Wordpress Social Share Plugin powered by Ultimatelysocial