ಸಿ. ಅಶ್ವಥ್ ಸಂಗೀತಗಾರರು

ರಿಚರ್ಡ್ ಅಟೆನ್ ಬರೋ ನಿರ್ದೇಶಿಸಿದ ಪ್ರಸಿದ್ಧ ‘ಗಾಂಧೀ’ ಚಿತ್ರದಲ್ಲಿ, ಚಿತ್ರ ಪ್ರಾರಂಭವಾಗುವುದು ಗಾಂಧೀಜಿ ನಮ್ಮ ಕಣ್ಣ ಮುಂದೆ ಮೂಡುತ್ತಿದ್ದಾರೆ ಎಂದು ನಾವು ನೋಡುತ್ತಿರುವಂತೆಯೇ ಅವರ ಅಂತ್ಯದಿಂದ! ಆ ಚಿತ್ರ ನೋಡಿ ಬಂದ ಮೇಲೆ ನಮ್ಮಣ್ಣ ಹೇಳುತ್ತಿದ್ದರು. “ಇದೊಂದು ಅದ್ಭುತ ವಿಶ್ಲೇಷಣೆ. ಗಾಂಧೀ ಎಂಬ ವ್ಯಕ್ತಿಯಿಂದ ಪ್ರಾರಂಭವಾದ ಯುಗ ಆ ಮಹಾನ್ ವ್ಯಕ್ತಿಯೊಂದಿಗೆ ಮುಗಿದುಹೋಯಿತು” ಎಂದು. ನಮ್ಮ ಸಿ. ಅಶ್ವಥ್ ಅವರು, 2009ರಲ್ಲಿ ಅವರ ಹುಟ್ಟಿದ ಹಬ್ಬದ ದಿನವೇ ನಿಧನರಾದಾಗ ಇನ್ನಿಲ್ಲದಂತೆ ಈ ಮಾತು ನೆನಪಾಗುತ್ತಿತ್ತು. ಸಿ. ಅಶ್ವಥ್ ಅವರು ಹಲವು ವಿಧದಲ್ಲಿ ಅವರೊಬ್ಬರೇ.
1990ರ ಆಸುಪಾಸಿನಲ್ಲಿ ನಮ್ಮ ‘ಎಚ್ಎಮ್ಟಿ ಕನ್ನಡ ಸಂಪದ’ದಲ್ಲಿ ಅವರ ಒಂದು ಕಾರ್ಯಕ್ರಮ ಏರ್ಪಡಿಸಿದ್ದ ಸಂದರ್ಭದಲ್ಲಿ ಅವರ ಮನೆಗೆ ಹೋದೆ. ಮುಂಚೆಯೇ ನಮ್ಮ ಆತ್ನೀಯ ಸಹೋದ್ಯೋಗಿ ಮತ್ತು ಅಶ್ವಥ್ ಅವರ ಗೆಳೆಯ ನರಹರಿ KS ಅಶ್ವಥ್ ಅವರಲ್ಲಿ ನಮ್ಮ ಇಚ್ಛೆ ಮತ್ತು ಇತಿಮಿತಿಗಳ ಬಗ್ಗೆ ಹೇಳಿದ್ದರು. ಎರಡೇ ಮಾತು. ‘ನರಹರಿ ಎಲ್ಲಾ ಹೇಳಿದ್ದಾರೆ. ನಿಮಗೆ ಏನು ಸಾಧ್ಯವೋ ಅದನ್ನು ರತ್ನಮಾಲ ಹತ್ರ ಕೊಡಿ. ಕಾರ್ಯಕ್ರಮ ಮಾಡೋಣ. ನಮಸ್ಕಾರ’. ಅಶ್ವಥ್ ಅವಶ್ಯಕವಿಲ್ಲದ ಏನನ್ನೂ ಆಡುವವರಲ್ಲ.
ಇನ್ನು ಕಾರ್ಯಕ್ರಮದ ದಿನ. ಮೈಕ್ ಕೆಳಗಿಡಲು ಮನಸ್ಸಿಲ್ಲದ ಹಲವರ ಭಾಷಣದ ನಂತರ ಸಂಗೀತ ಕಾರ್ಯಕ್ರಮ ಪ್ರಾರಂಭಗೊಂಡಿತು. ನಮ್ಮಲ್ಲೋ ಜನ ಕಮ್ಮಿ. ಒಂದಷ್ಟು ಜನ ಕೆಲವು ಅಧಿಕಾರಿಗಳು ಮೇಲಿದ್ದಾರೆ ಎಂದು ಬಂದು ಅವರ ಭಾಷಣ ಮುಗಿದ ನಂತರ ಹಲ್ಕಿರಿದು ಜಾಗ ಖಾಲಿ ಮಾಡುವ ಜನ. ಅಶ್ವಥ್ ಅವರಿಗೆ ಸ್ವಲ್ಪ ಹೊತ್ತು ಹಾಡಿದ ಮೇಲೆ “ಯಾಕೋ ಜನರಲ್ಲಿ ಉತ್ಸಾಹ ಇದೆ ಎನಿಸಲಿಲ್ಲ. ಬೇಗ ಮುಗಿಸೋಣವಾ ಅಂದ್ರು.” ಇಲ್ಲಿ ನಾವು ಕುಳಿತಿರುವವರು ಕಮ್ಮಿ ಸಂಖ್ಯೆ ಆದ್ರೂ ನಿಮ್ಮ ಹಾಡುಗಳಿಗಾಗಿ ಕಾದಿದ್ದೇವೆ ಎಂದಾಗ ಬಹಳಷ್ಟು ಹೊತ್ತು ಆತ್ಮೀಯವಾಗಿ ಹಾಡಿದರು”. ಅವರಿಗೆ ಎಲ್ಲವೂ ಸ್ಫೂರ್ತಿ, ಪ್ರೀತಿ, ಆತ್ಮೀಯತೆಗಳ ವಾತಾವರಣವಾಗಬೇಕು. ಉಳಿದಿದ್ದೆಲ್ಲಾ ಗೌಣ.
ಕಾಳಿಂಗರಾವ್ ಮತ್ತು ಅನಂತಸ್ವಾಮಿ ಭಾವಗೀತಾ ಯುಗಗಳನ್ನು ಕಂಡ ಕನ್ನಡಿಗರಿಗೆ ಅಂತದೇ ಮತ್ತೊಂದು ಭವ್ಯ ಲೋಕ ಸೃಷ್ಟಿಸಿಕೊಟ್ಟವರು ಸಿ. ಅಶ್ವಥ್. ಕೆ. ಎಸ್. ನರಸಿಂಹ ಸ್ವಾಮಿಗಳ ‘ಮೈಸೂರು ಮಲ್ಲಿಗೆ’ ಹಾಡುಗಳು ಸಿ. ಅಶ್ವಥ್ ಅವರ ದ್ವನಿಯಲ್ಲಿ ಹೊಸ ತರಂಗಗಳನ್ನೇ ಸೃಷ್ಟಿಸಿದವು. ‘ಶಿಶುನಾಳ ಷರೀಫರ’ ಹಾಡುಗಳು ಇಡೀ ಕರ್ನಾಟಕದ ಜನಹೃದಯಗಳಲ್ಲಿ ಅಶ್ವಥ್ ಸಂಗೀತದ ಮುಖೇನ ಗುಡುಗಲಾರಂಭಿಸಿತು. ಕವಿವರ್ಯರಾದ ಕುವೆಂಪು, ಬೇಂದ್ರೆ, ಅಡಿಗ, ಜಿ.ಎಸ್.ಎಸ್, ಕಣವಿ ಇವರೆಲ್ಲರ ಕವನ ಓದಲು ಬಾರದೆ ಇದ್ದವರಿಗೆ, ಅದೆಲ್ಲಾ ಬುದ್ಧಿವಂತರಿಗೆ ಎಂದು ಸುಮ್ಮನಿದ್ದವರಿಗೆ, ವರ್ಷಕ್ಕೊಂದು ತಿಂಗಳು ನವೆಂಬರಿನಲ್ಲಿ ಮಾತ್ರಾ ಬಾವುಟ ಹಾರಿಸಿ ಸಿನಿಮಾ ಹಾಡು ಕೇಳುತ್ತಿದ್ದವರಿಗೆ, ಸುಮ್ಮನೆ ಬಿಡುವಿನ ಸಮಯ ನೂಕುತ್ತಿದ್ದವರಿಗೆ ಹೀಗೆ ಎಲ್ಲರಿಗೂ ಅಶ್ವಥ್ ಅವರ ಸಂಯೋಜನೆ ಮತ್ತು ಧ್ವನಿಗಳ ಮುಖೇನ ಕನ್ನಡ ಕವಿವಾಣಿ ಸಮೀಪಿಸತೊಡಗಿತು. ಮುಂದೆ ಈ ಕವಿಗಳ ಪಟ್ಟಿಗೆ ಎಚ್. ಎಸ್. ವೆಂಕಟೇಶ್ ಮೂರ್ತಿ, ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ, ದೊಡ್ಡರಂಗೇ ಗೌಡ, ಬಿ. ಆರ್. ಲಕ್ಷ್ಮಣ ರಾವ್ ಹೀಗೆ ಅನೇಕ ಕವಿಗಳನ್ನು ಸೇರಿಸುತ್ತಲೂ ಹೋಯಿತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಕುವೆಂಪು ಸಾಹಿತ್ಯ ಕ್ಷೇತ್ರದ ಪ್ರಸಿದ್ಧಹೆಸರು

Thu Dec 29 , 2022
ಇಪ್ಪತ್ತನೆಯ ಶತಮಾನದಿಂದ ಈಚೆಗಿನ ಕನ್ನಡ ಸಾಹಿತ್ಯ ಚರಿತ್ರೆ ಕುವೆಂಪು ಅವರ ಸಾಹಿತ್ಯಕ ಬೆಳವಣಿಗೆ, ಸಾಧನೆ, ಸಿದ್ಧಿಗಳಿಂದ, ಅವರು ಇತರ ಕವಿಗಳ ಮೇಲೆ ಬೀರಿದ ಪ್ರಭಾವದಿಂದ ಕಂಗೊಳಿಸುತ್ತಿದೆ. ಕಾವ್ಯ, ನಾಟಕ, ಸಣ್ಣ ಕಥೆ, ಕಾದಂಬರಿ, ವಚನ, ಕವನ, ಮಹಾಕಾವ್ಯ, ಸಾಹಿತ್ಯ ವಿಮರ್ಶೆ – ಈ ಒಂದೊಂದು ಪ್ರಕಾರದಲ್ಲೂ ಗಣನೀಯವಾದ ಕೊಡುಗೆಯನ್ನು ಕುವೆಂಪು ನೀಡಿದ್ದಾರೆ. ಕನ್ನಡಕ್ಕೆ ರಾಷ್ಟ್ರಮಟ್ಟದ ಖ್ಯಾತಿಯನ್ನು ತಂದುಕೊಟ್ಟ ಮೊದಲಿಗರಲ್ಲಿ ಅವರೂ ಒಬ್ಬರು. ಕುವೆಂಪು ಅವರ ಪೂರ್ಣ ಹೆಸರು ಕುಪ್ಪಳ್ಳಿ ವೆಂಕಟಪ್ಪ […]

Advertisement

Wordpress Social Share Plugin powered by Ultimatelysocial