ಜೆಡಿಎಸ್ ಪಕ್ಷ ಮುಳುಗುವ ಹಡಗಲ್ಲ.

ಬೆಂಗಳೂರು, ಮೇ 13- ನಮ್ಮ ಪಕ್ಷ ಮುಳುಗುವ ಹಡಗಲ್ಲ. ದಡ ಮುಟ್ಟಿ ಮುಂದೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಪಕ್ಷವಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ತಿಳಿಸಿದರು. ಈ ಸಂಜೆಯೊಂದಿಗೆ ಮಾತನಾಡಿದ ಅವರು, ಜೆಡಿಎಸ್‍ ಅನ್ನು ಮುಳುಗುವ ಹಡಗು ಎಂದು ಹೇಳುತ್ತಿದ್ದವರೇ ಈಗ ಜೆಡಿಎಸ್ ತೇಲಲು ಶುರುವಾಗಿದೆ ಎಂದು ಹೇಳುತ್ತಿದ್ದಾರೆ.

ಹೀಗಾಗಿ ನಮ್ಮ ಪಕ್ಷ ದಡ ಮುಟ್ಟಲು ಶುರು ಮಾಡಿದೆ ಎಂದರು.

ಜೆಡಿಎಸ್ ಪಕ್ಷದ ಸಾರಥಿಯಾಗಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವನ್ನು ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೆ ತರಬೇಕೆಂಬ ಏಕೈಕ ಗುರಿ ಇದೆ. ಮಹಾಭಾರತದ ಅರ್ಜುನನ ಪಾತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕುಳಿತಿದ್ದಾರೆ. ಆಶೀರ್ವಾದ ಮಾಡುವ ಕೃಷ್ಣಪರಮಾತ್ಮನ ಸ್ಥಾನದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಇದ್ದಾರೆ. ಯುದ್ಧ ನಡೆಯುತ್ತಿದೆ. ಅಂತಿಮವಾಗಿ ಗೆಲ್ಲುತ್ತೇವೆ.

ಮಹಾಭಾರತದಲ್ಲಿ ಕೌರವರ ವಿರುದ್ಧ ಜಯಗಳಿಸಿದಂತೆ ನಾವು ಗೆದ್ದು ಕರ್ನಾಟಕವನ್ನು ಸಮೃದ್ಧಗೊಳಿಸುವ ಉದ್ದೇಶವನ್ನು ಹೊಂದಿದ್ದೇವೆ ಎಂದು ಹೇಳಿದರು. ನಾಡಿನ ನೀರಿನ ಸಂರಕ್ಷಣೆ, ಸಮರ್ಪಕ ಹಂಚಿಕೆ, ಅಸಮತೋಲನ ನಿವಾರಣೆ ಬಗ್ಗೆ ಯಾವ ರಾಜಕೀಯ ಪಕ್ಷಗಳು ಕಾರ್ಯಕ್ರಮ ಹಮ್ಮಿಕೊಂಡಿಲ್ಲ.

ನೆರೆಯ ತೆಲಂಗಾಣದಲ್ಲಿ ನೀರಾವರಿ ಯೋಜನೆಗಳು ಸಮಪರ್ಕವಾಗಿ ಅನುಷ್ಠಾನಗೊಂಡಿವೆ. ನಮ್ಮ ರಾಜ್ಯದಲ್ಲಿ ನೀರಾವರಿ ಯೋಜನೆಗಳ ಸಮರ್ಪಕ ಅನುಷ್ಠಾನದ ಅಗತ್ಯವಿದ್ದು, ಅದಕ್ಕಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಗಡಿ, ನಾಡು , ನೆಲ-ಜಲದ ಬಗ್ಗೆ ರಾಷ್ಟ್ರೀಯ ಪಕ್ಷಗಳಿಗೆ ಚಿಂತೆ ಇಲ್ಲ. ಕನ್ನಡಿಗರಾದ ನಾವು ಕನ್ನಡ ನಾಡನ್ನು ಕಾಪಾಡುವ ಪ್ರಯತ್ನ ಮಾಡಬೇಕಿದೆ. ಅದಕ್ಕೆ ಬೇಕಾದ ಶಕ್ತಿ ಜನತಾ ಜಲಧಾರೆಯಿಂದ ದೊರೆತಿದೆ ಎಂದು ತಿಳಿಸಿದರು.

ದೇವೇಗೌಡರು ನಮ್ಮ ತಂದೆಯ ಸ್ಥಾನದಲ್ಲಿದ್ದಾರೆ. ಅವರ ಸ್ನೇಹಕ್ಕೆ ಕಟ್ಟು ಬಿದ್ದು ಒಡನಾಟದಲ್ಲಿದ್ದೆ. ಹಾಗೆಯೇ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸ್ನೇಹಕ್ಕೆ ಕಟ್ಟು ಬಿದ್ದು ಒಮ್ಮೆ ಹೋಗಿದ್ದೆ. ಅವರು ಮುಖ್ಯಮಂತ್ರಿ ಆದ ಮೇಲೆ ಅದು ಮುಗಿಯಿತು. ಕನ್ನಡಿಗರಾದ ದೇವೇಗೌಡರು ಪ್ರಧಾನಿಯಾಗಿ ರಾಜ್ಯ ಮತ್ತು ರಾಷ್ಟ್ರಕ್ಕೆ ಮಾಡಿರುವ ಕಾರ್ಯಗಳ ಋಣ ರಾಜ್ಯದ ಜನತೆ ಮೇಲಿದೆ. ಆ ಋಣವನ್ನು ತೀರಿಸಲು ಮತ್ತೆ ಮರಳಿ ಜೆಡಿಎಸ್‍ಗೆ ಬಂದಿದ್ದೇನೆ ಎಂದು ಸಮರ್ಥನೆ ನೀಡಿದರು.

ಕಾಂಗ್ರೆಸ್ ಪಕ್ಷ ತೊರೆದಿರುವುದರಿಂದ ಬಿಜೆಪಿಗೆ ಲಾಭವಾಗಲಿದೆ ಎಂಬುದು ಕಾಂಗ್ರೆಸ್‍ನವರು ಮಾಡುತ್ತಿರುವ ಅಪಪ್ರಚಾರ. ಆದರೆ, ಬಿಜೆಪಿಗೆ ಹೆಚ್ಚು ನಷ್ಟವಾಗುತ್ತದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮೂರನೆ ಸ್ಥಾನಕ್ಕೆ ಹೋಗಲಿದೆ ಎಂದು ಭವಿಷ್ಯ ನುಡಿದರು.

ಕ್ರೈಸ್ತ, ಮುಸ್ಲಿಂಸೇರಿದಂತೆ ಶೇ.80ರಷ್ಟು ಜನರು ನಮ್ಮ ಪಕ್ಷ ಬೆಂಬಲಿಸಲು ಮುಂದಾಗಿದ್ದಾರೆ. ಹಾಗೆಯೇ ಹಿಂದುಳಿದ ಹಾಗೂ ಲಿಂಗಾಯಿತ ಸಮುದಾಯದ ಬೆಂಬಲವೂ ದೊರೆಯುತ್ತಿದೆ. ರಾಜ್ಯದಲ್ಲಿ ಬಿಜೆಪಿಯ ಆಡಳಿತ ವಿಫಲವಾಗಿದ್ದು, ಅದರ ಲಾಭ ಪಡೆಯಲು ಕಾಂಗ್ರೆಸ್‍ನಲ್ಲಿ ಒಗ್ಗಟ್ಟಿಲ್ಲ. ನಾಯಕರಲ್ಲಿ ಭಿನ್ನಾಭಿಪ್ರಾಯವಿದೆ. ಹೀಗಾಗಿ ಕಾಂಗ್ರೆಸ್, ಬಿಜೆಪಿ ಬಗ್ಗೆಯಾಗಲಿ ಯಾವುದೇ ರೀತಿಯ ಆತಂಕವಿಲ್ಲ ಎಂದರು.

ಜೆಡಿಎಸ್ ತೊರೆದು ರಾಷ್ಟ್ರೀಯ ಪಕ್ಷಗಳ ಕಡೆಗೆ ಯಾವ ಪ್ರಬಲ ನಾಯಕರೂ ಹೋಗುತ್ತಿಲ್ಲ. ಹೋಗುತ್ತಿರುವವರೆಲ್ಲಾ ದುರ್ಬಲವಾಗಿರುವವರೇ. ಅಂತಹವರು ಬೇಕಿದ್ದರೆ ನಾನೇ ಆ ಎರಡು ಪಕ್ಷಗಳಿಗೆ ಪಟ್ಟಿ ಕೊಡುತ್ತೇನೆ. ಅವರನ್ನು ಕರೆದುಕೊಳ್ಳಲಿ. ನಮಗೆ ಅದರಿಂದ ಚಿಂತೆ ಇಲ್ಲ ಎಂದರು.
ನಾನು ಕಾಂಗ್ರೆಸ್ ಬಿಟ್ಟ ಮೇಲೆ ಆ ಪಕ್ಷಕ್ಕೆ ದರಿದ್ರ ಶುರುವಾಗಿದೆ. ಆದರೂ ಆ ಪಕ್ಷಕ್ಕೆ ಒಳ್ಳೆಯದಾಗಲಿ ಎಂದೇ ಆಶಿಸುತ್ತೇನೆ ಎಂದು ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಟಿಕೆಟ್ ಬೇಕೆಂದರೆ ಬರ್ತ್, ಮ್ಯಾರೇಜ್ ಸರ್ಟಿಫಿಕೇಟ್ ಕಡ್ಡಾಯ..

Fri May 13 , 2022
  ಬೆಂಗಳೂರು, ಮೇ. 13: “ಮುಂದಿನ ಸಂಪುಟ ಪುನಾರಚನೆಯಾಗಲೀ, ಅಥವಾ ವಿಧಾನಸಭೆ ಚುನಾವಣೆಯಾಗಲೀ ಬರ್ತ್ ಸರ್ಟಿಫಿಕೇಟ್ ಮತ್ತು ಮ್ಯಾರೇಜ್ ಸರ್ಟಿಫಿಕೇಟ್ ಗೆ ಬಿಜೆಪಿ ಆದ್ಯತೆ ಕೊಡಲ್ಲ. ಅಂತಹ ಸಂದರ್ಭ ಎದುರಾದರೆ ಪಕ್ಷಕ್ಕಾಗಿ ವರ್ಷಗಳಿಂದ ದುಡಿದಿರುವರಿಗೆ ಆದ್ಯತೆ” ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಈ ಫಾರ್ಮುಲಾ ಇದೀಗ ಬಿಜೆಪಿ ಪಾಳಯದಲ್ಲಿ ತಳಮಳ ಸೃಷ್ಟಿಸಿದೆ. ಕುಟುಂಬ ರಾಜಕಾರಣಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಬಿಜೆಪಿ ಈ ಫಾರ್ಮುಲಾ ಅಳವಡಿಸಿಕೊಳ್ಳಲಿದೆ […]

Advertisement

Wordpress Social Share Plugin powered by Ultimatelysocial