ಚಾರ್ಲಿ ಚಾಪ್ಲಿನ್ ಮಹಾನ್ ಕಲಾವಿದ

 

ಚಾರ್ಲಿ ಚಾಪ್ಲಿನ್ 1889ರ ಏಪ್ರಿಲ್ 16ರಂದು ಜನಿಸಿದ. ಚಾರ್ಲಿ ಚಾಪ್ಲಿನ್ ಹುಟ್ಟಿದ್ದು ವಾಲ್ ವರ್ತ್ ಎಂಬ ಲಂಡನ್ನಿನ ಸಮೀಪದ ಊರಿನಲ್ಲಿ. ಎಂಬತ್ತೆಂಟು ವರ್ಷ ಬದುಕಿ 1977ರ ಕ್ರಿಸ್ಮಸ್ ದಿನದಂದು ಸ್ವಿಟ್ಸರ್ಲೆಂಡಿನಲ್ಲಿ ನಿಧನನಾದ.
ಚಾಪ್ಲಿನ್ ಚಿತ್ರಗಳನ್ನು ಆಸ್ವಾದಿಸಿದ ನಮಗೆ ಚಾಪ್ಲಿನ್ನನಷ್ಟು ಆತ್ಮೀಯರು ಮತ್ತೊಬ್ಬರಿದ್ದಾರೆಯೇ ಎನಿಸುತ್ತದೆ. ಇಡೀ ವಿಶ್ವಕ್ಕೆ ಸಂತೋಷ ಕೊಟ್ಟ ಅಪರೂಪದ ವ್ಯಕ್ತಿ ಆತ. ಚಾಪ್ಲಿನ್ನನಿಗೆ ಹೇಳಬೇಕೆನಿಸುತ್ತಿದೆ “ಚಾಪ್ಲಿನ್ ನೀನು ಯಾವ ಲೋಕದಲ್ಲಿದ್ದರೂ ಅಲ್ಲಿನ ಜನರನ್ನು ಸಂತೋಷವಾಗಿ ಇಟ್ಟಿರುವೆ!”
‘ದಿ ಟ್ರಂಪ್’, ‘ಮಾಡರ್ನ್ ಟೈಮ್ಸ್’, ‘ದಿ ಗ್ರೇಟ್ ಡಿಕ್ಟೇಟರ್’, ‘ಸಿಟಿ ಲೈಟ್ಸ್’, ’ದಿ ಸರ್ಕಸ್’, ‘ಗೋಲ್ಡ್ ರಷ್’ ಮುಂತಾದ ಚಿತ್ರಗಳಲ್ಲಿ ಆತ ನಡೆದದ್ದು, ಕುಣಿದದ್ದು, ಪ್ರೇಮಿಸಿದ್ದು, ಆಟ ಆಡಿದ್ದು, ಪೆಚ್ಚನಂತೆ ನಕ್ಕದ್ದು, ಹೀಗೆ ಆತ ಚಿತ್ರದಲ್ಲಿ ಮಾಡಿದ್ದು ಮತ್ತು ಮಾಡದೆ ಸುಮ್ಮನಿದ್ದದು ಎಲ್ಲವೂ ಪ್ರಿಯವೋ ಪ್ರಿಯ.
‘ಟಿಂಗ್, ಟಿಂಗ್, ಟಿಂಗ್ ,ಟಿಂಗ್.’ ಅಂತ ಆತ ನಡೆಯುವುದೇ ಖುಷಿ. ಆತನಷ್ಟು ಬಡತನಕ್ಕೆ ವೈಭವ ತಂದವರು ಉಂಟೆ. ಆತನ ಕಿತ್ತು ಹೋಗಿರುವ ಶೂ, ಕೊಳೆ ತುಂಬಿದ ಹಳೆ ಕೋಟು, ತಲೆಯ ಮೇಲಿನ ಹ್ಯಾಟು, ಕಾಲಿಗೆ ಚಕ್ರ ಕಟ್ಟಿಕೊಂಡು ಸ್ಕೇಟಿಂಗ್ ಮೂಲಕ ಚಿನಕುರುಳಿಯಂತೆ ಅಡ್ಡಾಡುವ ವೈಭವ, ಹುಡುಗಿಯನ್ನು ಪ್ರೇಮಿಸುವ ಪರಿ, ದಡಿಯನನ್ನು ಪೇಚಿಗೆ ಸಿಕ್ಕಿಸುವ ರೀತಿ, ಸಿಕ್ಕಿದವರನ್ನೆಲ್ಲ ತನ್ನ ಕೋಲಿನಲ್ಲಿ ಕುಟ್ಟಿ ಬೀಳಿಸುವ ಚೇಷ್ಟೆಒಂದೇ ಎರಡೇ ವಾವ್ ಚಾಪ್ಲಿನ್ ವಾವ್.
ಜಾರ್ಜ್ ಬರ್ನಾಡ್ ಷಾ ಹೇಳುತ್ತಿದ್ದರು, “ಚಿತ್ರರಂಗದಿಂದ ಹೊರಬಂದ ಏಕೈಕ ಜೀನಿಯಸ್ ಅಂದರೆ ಚಾರ್ಲಿ ಚಾಪ್ಲಿನ್”. ಉಳಿದವರ ಮೇಲೆ ಅವರಿಗೆ ಸಿಟ್ಟೋ, ಅಥವ ಅವರ ಕಾಲದಲ್ಲಿ ಚಾರ್ಲಿ ಚಾಪ್ಲಿನ್ ಅಷ್ಟು ಸಕ್ರಿಯರಿರಲಿಲ್ಲವೋ ಅಥವಾ, ನಮ್ಮಂತವರಿಗೆ ಚಾಪ್ಲಿನ್ ಹಿಡಿಸಿದ ಹುಚ್ಚಿನ ಪರಾಕಾಷ್ಠೆ ಷಾ ಅವರಿಗೆ ಕೂಡ ಹಿಡಿಸಿರಬಹುದು. ಅದೇನೇ ಇರಲಿ, ಆತ ವಿಶ್ವದೆಲ್ಲೆಡೆ ತನ್ನ ಚರ್ಯೆಯ ಮೂಲಕ ನಗುವನ್ನು, ಬದುಕಿನ ಅರ್ಥವನ್ನು, ಹೃದಯದ ಕದ ತಟ್ಟುವ ಸುಂದರತೆಯನ್ನು ಎಲ್ಲಾ ಸಿದ್ಧಾಂತಗಳಿಗೂ ತಿಲಾಂಜಲಿ ಇಟ್ಟಂತೆ ಬದುಕಿನ ಸಾಮಾನ್ಯತೆಯಲ್ಲಿ ಬಿಂಬಿಸಿದವ.
ಅದೂ ಆತ ಜನರನ್ನು ನಗಿಸಿದ್ದು ಯಾವ ಕಾಲದಲ್ಲಿ. ವಿಶ್ವ ಎರಡು ಯುದ್ಧಗಳಲ್ಲಿ ನಲುಗಿದ್ದ ಕಾಲದಲ್ಲಿ. ಇಡೀ ವಿಶ್ವ ಆರ್ಥಿಕ ಸಂಕಟಗಳ ಸಂಕೋಲೆಗಳಲ್ಲಿ ನಲುಗಿದ್ದ ಕಾಲದಲ್ಲಿ. ಆತನ ವಿಡಂಭನೆಗಳ ಧೈರ್ಯವಾದರೂ ಎಂತದ್ದು. ‘ಹಿಟ್ಲರ್’ ಅಂತಹವನ್ನು ‘ದಿ ಗ್ರೇಟ್ ಡಿಕ್ಟೇಟರ್’ ಚಿತ್ರದ ಮೂಲಕ ಮೂರ್ಖನನ್ನಾಗಿ ಚಿತ್ರಿಸುವ ಆತನ ಅಂದಿನ ಧೈರ್ಯ ಎಷ್ಟಿರಬೇಡ! ಹಿಟ್ಲರನ ಬದಲಿಗೆ ಆತನದೇ ತದ್ರೂಪಿಯಾದ ಸಾಮಾನ್ಯನಾಗಿ ನಿಂತು ‘ಡೆಮಾಕ್ರಸಿ’ ಎಂದು ಉದ್ಘೋಷಿಸುವ ಆತನ ಹಿರೀತನ ಸಾಟಿಯಿಲ್ಲದ್ದು.
ಮನುಷ್ಯನ ಸ್ವಾರ್ಥಗಳು, ಅದಕ್ಕಾಗಿ ಅವರು ಲೋಕವನ್ನು ಹೀನಾಯ ಸ್ಥಿತಿಗೆ ಕೊಂಡೊಯ್ಯುವ ಪರಿ-ಪರಿಯನ್ನು ಚಾಪ್ಲಿನ್ ಹೇಳುವ ರೀತಿ, ಹಾಸ್ಯದ ಮಧ್ಯೆಯೂ ಮನಸ್ಸನ್ನು ತಟ್ಟುತ್ತದೆ. ಒಂದು ಚಿತ್ರದಲ್ಲಿ ಆತ ಸೈನಿಕನಾಗಿ ಹಿಮಾಚ್ಛಾದಿತ ಪ್ರದೇಶದಲ್ಲಿ ತನ್ನ ಸೈನಿಕರ ಒಡನೆ ಹೋಗುತ್ತಿರುತ್ತಾನೆ. ಇದ್ದಕ್ಕಿದ್ದಂತೆ ತನ್ನ ಕಪಿ ಬುದ್ಧಿಯ ಮೊದ್ದು ತನದಲ್ಲಿ ಹಿಂದುಳಿದು, ಗುಡು ಗುಡು ಓಡಿ ಶತ್ರು ಸೈನ್ಯದ ಸೈನಿಕರೊಡನೆ ಒಬ್ಬನಾಗಿ ನಡೆಯತೊಡಗುತ್ತಾನೆ. ಯಾರು ಏನಕ್ಕೆ, ಯಾತಕ್ಕಾಗಿ ಯುದ್ಧ ಮಾಡುತ್ತಾರೆ ಎಂದು ಗೊತ್ತು ಗುರಿ ಇಲ್ಲದ ಮನೋಭಾವವನ್ನು ಮೂಡಿಸುವ ಆ ಸನ್ನಿವೇಶವನ್ನು ನೆನೆದಾಗಲೆಲ್ಲ, ಇಂದೂ ಅರ್ಥ ತಾತ್ಪರ್ಯಗಳಿಲ್ಲದ ಮಾನವ ಗಡಿ ರೇಖೆಗಳನ್ನು ನಿರ್ಮಿಸಿ ಹಿಮಪರ್ವತಗಳ ಚಳಿಯಲ್ಲಿ ಮರುಭೂಮಿಯ ಬಿಸಿಲಿನಲ್ಲಿ ಮನುಷ್ಯರನ್ನು ಹಗಲು ರಾತ್ರಿ ನಿಲ್ಲಿಸಿ ನಿರ್ಮಿಸಿರುವ ಆಧುನಿಕ ಸಮಾಜ ಎಂದು ಹೇಳಿಕೊಳ್ಳುವ, ಇಂದಿನ ಮುಂದುವರಿದ ಸಮಾಜ ಮತ್ತು ದೇಶ ವ್ಯವಸ್ಥೆಗಳ ಬಗೆಗೇ ಪ್ರಶ್ನೆ ಕಾಡುತ್ತದೆ! ಚಾಪ್ಲಿನ್ ನಗಿಸುತ್ತಲೇ ಹೇಳುವ ಕಥೆಯ ಪರಿ ಅಷ್ಟೊಂದು ಪ್ರಭಾವಯುತ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de….

Please follow and like us:

Leave a Reply

Your email address will not be published. Required fields are marked *

Next Post

ಹತ್ತು ಸಾವಿರ ಯುವಕರಿಗೆ ಉದ್ಯೋಗ ಪತ್ರ

Sun Dec 25 , 2022
     ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಗೌರವಾರ್ಥ ರವಿವಾರ ‘ಸುಶಾಸನ ದಿನ’ವನ್ನು ಆಚರಿಸುವ ಮೂಲಕ ಉನ್ನತ ಶಿಕ್ಷಣ, ಕೌಶಲಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ, ವಿದ್ಯುನ್ಮಾನ, ಐಟಿ-ಬಿಟಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆ ವತಿಯಿಂದ ಹತ್ತು ಸಾವಿರ ಯುವಕರಿಗೆ ಉದ್ಯೋಗ ಪತ್ರ ವಿತರಣೆಯಾಗಲಿದೆ.ಈ ಇಲಾಖೆಗಳ ವತಿಯಿಂದ ಡಿಸೆಂಬರ್‌ ಮಾಸಾದ್ಯಂತ ಸುಶಾಸನ ದಿನ ಆಚರಿಸಿ ಹಲವು ಉಪಯುಕ್ತ ಉಪಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಉನ್ನತ ಶಿಕ್ಷಣ, ಐಟಿ- ಬಿಟಿ, ಕೌಶಲಾಭಿವೃದ್ಧಿ […]

Advertisement

Wordpress Social Share Plugin powered by Ultimatelysocial