ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 200 ಯೂನಿಟ್ ಉಚಿತ ವಿದ್ಯುತ್

ಚಿಕ್ಕೋಡಿ, ಜ.11- ಮುಂಬರುವ ಚುನಾವಣೆ ಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ.
ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ ಮಾಡುವುದಾಗಿ ಭರವಸೆ ನೀಡಿದ ಬೆನ್ನಲ್ಲೇ, ಕಾಂಗ್ರೆಸ್ ನಿಂದ ಈ ಹೇಳಿಕೆ ಹೊರಬಿದ್ದಿದೆ.
ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಇಂದು ಪ್ರಜಾಧ್ವನಿ ಯಾತ್ರೆ ಆರಂಭಿಸಿದೆ. ಈ ಸಂಬಂಧ ಚಿಕ್ಕೋಡಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಮನೆಯಲ್ಲಿ ಕತ್ತಲು ಕಳೆದು ಬೆಳಕು ನೀಡಲು ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರು ಸೇರಿ ಚರ್ಚೆ ಮಾಡಿ ಈ ಯಾತ್ರೆಯಲ್ಲಿ ಐದು ಭರವಸೆ ನೀಡುತ್ತಿದ್ದೇವೆ. ಅದರ ಪೈಕಿ ಮೊದಲ ಖಚಿತ ಭರವಸೆ ಪ್ರತಿ ಮನೆಗೂ 200 ಯುನಿಟ್ ಉಚಿತ ವಿದ್ಯುತ್ ನೀಡುವುದು.ಮಹಿಳೆಯರು, ಯುವಕರು, ರೈತರು 200 ಯುನಿಟ್ ವರೆಗೂ ವಿದ್ಯುತ್ ದರ ಕಟ್ಟುವಂತಿಲ್ಲ. ನಾವು ನುಡಿದಂತೆ ನಡೆದಿದ್ದೇವೆ. ನಡೆಯುತ್ತೇವೆ. ನಾಡಿನ ಜನರ ಭವಿಷ್ಯಕ್ಕಾಗಿ ನಾವು ಅನೇಕ ಯೋಜನೆ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಇದೊಂದು ಐತಿಹಾಸಿಕ ದಿನ. ಕಾಂಗ್ರೆಸ್ ಪಕ್ಷ ರಾಜ್ಯದ ಜನರ ಸಮಸ್ಯೆ, ನೋವು, ಅಭಿಪ್ರಾಯವನ್ನು ಸಂಗ್ರಹಿಸಿ ಅದರ ಪ್ರತಿಧ್ವನಿಯಾಗಿ ನಿಮಗೆ ಶಕ್ತಿ ನೀಡಲು, ನಿಮ್ಮ ಬದುಕಿಗೆ ಬೆಳಕು ನೀಡಲು ನಾವು ಇಲ್ಲಿಗೆ ಬಂದಿದ್ದೇವೆ. ಜನರ ಸಂಕಷ್ಟ ಪರಿಹಾರ ಮಾಡುವುದೇ ಈ ಪ್ರಜಾಧ್ವನಿ ಯಾತ್ರೆಯ ಉದ್ದೇಶ ಎಂದರು.
1924 ರಂದು ಬೆಳಗಾವಿಯಲ್ಲಿ ಗಾಂಧಿಜೀಯವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿ, ಬ್ರಿಟೀಷರನ್ನು ದೇಶದಿಂದ ತೊಲಗಿಸಿ ಜನರಿಗೆ ಪ್ರಜಾಪ್ರಭುತ್ವ ವ್ಯವಸ್ಥೆ ನೀಡಲು ಸಂಕಲ್ಪ ಮಾಡಿದರು. ಇಂದು ಅದೇ ಸ್ಥಳದಿಂದ ನಾವು ಈ ಯಾತ್ರೆಗೆ ನಾಂದಿ ಹಾಡಿದ್ದೇವೆ ಎಂದು ತಿಳಿಸಿದರು.
ನಾವು ಗಾಂಧಿ ಅವರ ಬಾವಿಯ ನೀರಿನಿಂದ ಬೆಳಗಾವಿಯಲ್ಲಿ ಬಿಜೆಪಿಯ ಕೊಳಕನ್ನು ತೊಳೆದು ಇಲ್ಲಿಗೆ ಬಂದಿದ್ದೇವೆ. ನಿಮ್ಮ ಜೀವನದಲ್ಲಿ ಜ್ಯೋತಿ ಬೆಳಗಬೇಕು. ನೀವು ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದೀರಿ. ದಿನ ನಿತ್ಯ ನಿಮ್ಮ ಜೇಬಿಗೆ ಕತ್ತರಿ ಬೀಳುತ್ತಿದೆ. ಕಾಂಗ್ರೆಸ್ ಪಕ್ಷ ನಿಮಗೆ ಒಂದು ವಚನ ನೀಡಲು ಬದ್ಧವಾಗಿದೆ.ಆದರೆ
ಕೇಂದ್ರ ಸರ್ಕಾರ ನೀಡಿರುವ ಭರವಸೆಗಳನ್ನು ನೀಡಲು ಸಂಪೂರ್ಣ ವಿಫಲವಾಗಿದೆ ಎಂದು ತೀವ್ರ ವಾಗ್ದಾಳಿ ನಡೆಸಿದ ಡಿಕೆಶಿ,ರೈತರ ಬದುಕು ಯಶಸ್ವಿಯಾಗಬೇಕು ಎಂದು ಕಾಂಗ್ರೆಸ್ ನುಡಿದಂತೆ ನಡೆದಿದೆ. ಬಿಜೆಪಿ ಕಳೆದ ಮೂರುವರೆ ವರ್ಷಗಳಲ್ಲಿ ನುಡಿದಂತೆ ನಡೆಯಲಿಲ್ಲ. ಬದಲಿಗೆ ಬಿಜೆಪಿಯವರು ನಿಮ್ಮ ಬದುಕಿನಲ್ಲಿ ಚೆಲ್ಲಾಟವಾಡಿದೆ ಎಂದು ಟೀಕಿಸಿದರು.
ಇದು 40% ಕಮಿಷನ್ ಸರ್ಕಾರ ಈ ರಾಜ್ಯದಲ್ಲಿ ಕೋಮು ದ್ವೇಷದ ವಿಷ ಬೀಜವನ್ನು ಜನರ ಮನಸ್ಸಿನಲ್ಲಿ ಬಿತ್ತುತ್ತಿದ್ದಾರೆ. ಈ ಸರ್ಕಾರ ಹೊಟೇಲಿನಲ್ಲಿ ಮೆನು ಕಾರ್ಡ್ ಮಾದರಿಯಲ್ಲಿ ಭ್ರಷ್ಟಾಚಾರದ ರೇಟ್ ಕಾರ್ಡ್ ಹಾಕಿದ್ದಾರೆ. ಇದನ್ನು ಪತ್ರಿಕೆಗಳಲ್ಲಿ ಮುಖ್ಯಮಂತ್ರಿ ಹುದ್ದೆಗೆ 2500 ಕೋಟಿ, ಮಂತ್ರಿ ಹುದ್ದೆಗೆ 100 ಕೋಟಿ, ಆಯುಕ್ತರಿಗೆ 15 ಕೋಟಿ, ಕೋವಿಡ್ ಪೂರೈಕೆಗೆ ಶೇ.75, ಪಿಡಬ್ಲ್ಯೂ ಕಾಮಗಾರಿಗೆ 40%, ಮಠಗಳ ಅನುದಾನಕ್ಕೆ 40%, ಮೊಟ್ಟೆ ಪೂರೈಕೆಗೆ 30% ಕಮಿಷನ್ ನಿಗದಿ ಮಾಡಿದ್ದಾರೆ. ಈ ಬಗ್ಗೆ 2 ಲಕ್ಷ ಸದಸ್ಯರಿರುವ ಗುತ್ತಿಗೆದಾರರ ಸಂಘದವರು ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿರುವುದನ್ನು ಉಲ್ಲೇಖಿಸಿದರು.
ಫೆಬ್ರವರಿ 17ರಂದು ಬಜೆಟ್ ಮಂಡಿಸಿ ಆಗ ಇನ್ನಷ್ಟು ಆಶ್ವಾಸನೆ ನೀಡಲು ಹೊರಟಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಜನರಿಗೆ ಕೊಡುಗೆ ನೀಡಲು ಆಗಿಲ್ಲ.ಮೀಸಲಾತಿ ವಿಚಾರದಲ್ಲಿ ನಾಟಕವಾಡುತ್ತಾ, ಸುಳ್ಳು ಹೇಳುತ್ತಿದ್ದಾರೆ. ಜನರನ್ನು ತಪ್ಪು ದಾರಿಗೆಳೆಯಲು ಪ್ರಯತ್ನಿಸುತ್ತಿದ್ದಾರೆ. ಬೆಲೆ ಏರಿಕೆ, ನಿರುದ್ಯೋಗ, ಆರ್ಥಿಕ ಸಮಸ್ಯೆಗೆ ಪರಿಹಾರ ನೀಡದೇ, ಜನರ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

54 ಜನ ಪ್ರಯಾಣಿಕರ ಬಿಟ್ಟು ವಿಮಾನ ಟೆಕ್ ಆಫ್

Fri Jan 13 , 2023
ಬೆಂಗಳೂರು, ಜ.೧೦-ದೇವನಹಳ್ಳಿಯ ವಿಮಾನ ನಿಲ್ದಾಣದಲ್ಲಿ ಏರ್‌ಲೈನ್ಸ್ ಸಿಬ್ಬಂದಿ ಎಡವಟ್ಟು ಮಾಡಿದ್ದು, ಪ್ರಯಾಣಿಕರನ್ನು ಟರ್ಮಿನಲ್ ನಲ್ಲೇ ಬಿಟ್ಟು ವಿಮಾನ ಟೆಕ್ ಆಪ್ ಆದ ಘಟನೆ ವರದಿಯಾಗಿದೆ. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಒಂದು ಬಸ್‌ನಲ್ಲಿ ನಿನ್ನೆ ಬರುತ್ತಿದ್ದ ೫೪ ಜನ ಪ್ರಯಾಣಿಕರನ್ನು ಬಿಟ್ಟು ವಿಮಾನ ಹಾರಿದೆ. ಬೆಂಗಳೂರಿನಿಂದ ರಾಷ್ಟ್ರ ರಾಜಧಾನಿ ದೆಹಲಿಗೆ ಜಿ೮ ೧೧೬ ನಂಬರ್‌ನ ಗೋಫಸ್ಟ್ ವಿಮಾನ ಹೊರಟಿತ್ತು. ಮೊದಲನೇ ಟ್ರಿಪ್‌ನಲ್ಲಿ ವಿಮಾನಕ್ಕೆ ಬಸ್‌ನಲ್ಲಿ ಹೋಗಿ ೫೦ ಜನ ಪ್ರಯಾಣಿಕರು ಹತ್ತಿದ್ದರು. […]

Advertisement

Wordpress Social Share Plugin powered by Ultimatelysocial