ಡಿ. ಆರ್. ವೆಂಕಟರಮಣನ್

ಡಿ. ಆರ್. ವೆಂಕಟರಮಣನ್ ಕನ್ನಡ ಸಾಹಿತ್ಯ ಲೋಕದ ಮಹಾನ್ ಆಚಾರ್ಯರಾದ ಡಿ.ವಿ.ಜಿ ಅವರಿಗೆ ಆಪ್ತ ಬಲಗೈ ಅಂತಿದ್ದು ಅವರ ಸಾಹಿತ್ಯ ಸ್ವಾದವನ್ನು ಲೋಕಕ್ಕೆ ನೀಡಿದ ಮಹಾನ್ ಋಷಿ ಸದೃಶ ವ್ಯಕ್ತಿ. ಅವರ ‘ಕಗ್ಗಕ್ಕೊಂದು ಕೈಪಿಡಿ’ ಬಹು ಪ್ರಖ್ಯಾತ ಕೃತಿ.
ಡಿ. ಆರ್ ವೆಂಕಟರಮಣನ್ 1931ರ ಫೆಬ್ರವರಿ 21ರಂದು ಕೊಳ್ಳೇಗಾಲದ ಬಳಿ ಇರುವ ಹನೂರು ಗ್ರಾಮದಲ್ಲಿ ಜನಿಸಿದರು. ತಂದೆ ರಾಮಚಂದ್ರ ಅಯ್ಯರ್ ಮೂಲತಃ ದಾರಾಪುರಂ ಎಂಬ ಸ್ಥಳಕ್ಕೆ ಸೇರಿದವರಾಗಿದ್ದು ಸರ್ಕಾರಿ ಕೆಲಸದ ನಿಮಿತ್ತ ಕರ್ನಾಟಕದಲ್ಲಿ ನೆಲೆಸಿದರು. ತಾಯಿ ಸುಬ್ಬಲಕ್ಷ್ಮಿ. ಇವರಿಗೆ ಇಬ್ಬರು ತಮ್ಮಂದಿರು.
ವೆಂಕಟರಮಣನ್ ಅವರ ಪ್ರಾಥಮಿಕ ವಿದ್ಯಾಭ್ಯಾಸ ಮೈಸೂರಿನಲ್ಲಿ ನಡೆಯಿತು. ಬಿ.ಎ. ಪದವಿಯನ್ನು ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಪಡೆದರು. ನಂತರ ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರದಲ್ಲಿ ಎಂ.ಎ. ಪದವಿ ಗಳಿಸಿದರು.
ವೆಂಕಟರಮಣನ್ 21ನೆಯ ವಯಸ್ಸಿಗೆ ಹೈದರಾಬಾದಿನ ಅಕೌಂಟೆಂಟ್ ಜನರಲ್ ಕಚೇರಿಯಲ್ಲಿ ಕೆಲಸಕ್ಕೆ ಸೇರಿದರು. 1956ರಲ್ಲಿ ಕೇಂದ್ರ ಸರ್ಕಾರವು ಭಾಷಾವಾರು ಪ್ರಾಂತ್ಯಗಳನ್ನಾಗಿ ರಾಜ್ಯಗಳನ್ನು ವಿಂಗಡಿಸಿದಾಗ ಕನ್ನಡಿಗರೆಲ್ಲ ಬೆಂಗಳೂರಿಗೆ ಹೋಗಿ ಕೆಲಸ ಮಾಡುಮಾಡುವ ಅವಕಾಶವನ್ನು ಕಲ್ಪಿಸಿತು. ಹೀಗೆ 1956ರಲ್ಲಿ ಸ್ನೇಹಿತರಾದ ಎಂ. ವಿ. ರಾಮ ಚೈತನ್ಯ ಅವರೊಡನೆ ಬೆಂಗಳೂರಿಗೆ ಬಂದು ನೆಲೆಸಿದರು.
ವೆಂಕಟರಮಣನ್ ಬೆಂಗಳೂರಿನ ಎನ್. ಆರ್. ಕಾಲೋನಿಯಲ್ಲಿ ಪ್ರೊ. ಕೆ. ಸಂಪತ್ ಗಿರಿರಾಯರ ಮನೆಯಲ್ಲಿ ವಾಸ ಮಾಡತೊಡಗಿದರು. ಈ ಮನೆಯ ಬಳಿಯಲ್ಲಿಯೇ ಡಿವಿಜಿಯವರು ಸ್ಥಾಪಿಸಿದ ಗೋಖಲೆ ಸಾರ್ವಜನಿಕ ಸಂಸ್ಥೆ ಇತ್ತು. ಇಬ್ಬರು ಸ್ನೇಹಿತರೂ ದಿನವೂ ಸಂಸ್ಥೆಯ ವಾಚನಾಲಯ ಹಾಗೂ ಪುಸ್ತಕ ಭಂಡಾರಕ್ಕೆ ಹೋಗುತ್ತಿದ್ದರು. ತರುಣರನ್ನು ಗಮನಿಸಿದ ಪೂಜ್ಯ ಡಿವಿಜಿಯವರು ಈ ತರುಣರನ್ನು ತಾವೇ ಕರೆದು ಹೆಸರು, ಉದ್ಯೋಗ, ತಂದೆ-ತಾಯಿ ಮುಂತಾದ ವಿವರಗಳನ್ನು ವಿಚಾರಿಸಿದರು. ಸಂಸ್ಥೆಗೆ ಸದಸ್ಯರಾಗಿ ಎಂದು ಹೇಳಿದರು. ಹೀಗೆ ವೆಂಕಟರಮಣನ್ ಅವರಿಗೆ ಪೂಜ್ಯ ಡಿವಿಜಿಯವರ ಪರಿಚಯವಾಯಿತು. 1961ರ ಜೂನ್ 26ರಂದು ಸರಸ್ವತಿ ಅವರ ಜೊತೆ ಮದುವೆಯಾಯಿತು.
ವೆಂಕಟರಮಣನ್ ಅವರು ಒಂದು ಕಡೆ ಹೀಗೆ ಬರೆದಿದ್ದಾರೆ: “ನನ್ನ ಮನಸ್ಸಿನಲ್ಲಿದ್ದ ಜೀವನವನ್ನು ಕುರಿತ ಹಲವಾರು ಪ್ರಶ್ನೆಗಳಿಗೆ ಉತ್ತರಿಸುವ ಗುರುವನ್ನು ಡಿವಿಜಿ ಅವರಲ್ಲಿ ಕಂಡೆ. ನಾನು ಕೇಳದೆಯೇ ನನ್ನ ಪ್ರಶ್ನೆಗಳಿಗೆ ಉತ್ತರ ಅವರ ಬಳಿ ಸಿಗುತ್ತಿತ್ತು”.
ಸುಮಾರು 18 ವರ್ಷ ಕಾಲಪ್ರತಿದಿನ ವೆಂಕಟರಮಣನ್ ಅವರು ಬೆಳಿಗ್ಗೆ 7:00 ಗಂಟೆಗೆ ಗುಂಡಪ್ಪನವರ ಮನೆಗೆ ಹೋಗಿ ಅವರಿಗೆ ಓದು ಬರವಣಿಗೆ ಕಾಗದ-ಪತ್ರ ಇವುಗಳಲ್ಲಿ ನೆರವಾಗಿ ಸುಮಾರು 9:30 ಘಂಟೆಗೆ ವಿಧಾನಸೌಧದ ಬಳಿ ಇರುವ ತಾವು ಕೆಲಸ ಮಾಡುತ್ತಿದ್ದ ಅಕೌಂಟೆಂಟ್ ಜನರಲ್ ಕಚೇರಿಗೆ ತೆರಳುತ್ತಿದ್ದರು. ಕಚೇರಿ ಮುಗಿಸಿಕೊಂಡು ಬಂದ ನಂತರ ಗೋಖಲೆ ಸಂಸ್ಥೆಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ಸುಮಾರು 40 ವರ್ಷಗಳ ಕಾಲ ಗೋಖಲೆ ಸಂಸ್ಥೆಯ ಜಂಟಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ವೆಂಕಟರಮಣನ್ ಅವರು ಸರ್ಕಾರದ ಯಾವುದೇ ಉನ್ನತ ಪರೀಕ್ಷೆಗಳನ್ನು ತೆಗೆದುಕೊಳ್ಳಲಿಲ್ಲ. ಪರೀಕ್ಷೆಗಳಲ್ಲಿ ಉತ್ತೀರ್ಣರಾದರೆ ಹೆಚ್ಚಿನ ಅಧಿಕಾರದೊಂದಿಗೆ ವರ್ಗಾವಣೆ ಆಗಿ, ಗುಂಡಪ್ಪನವರ ಸಾನಿಧ್ಯವನ್ನು ತೊರೆಯಬೇಕಾಗುತ್ತದೆ ಎಂದು ತಾವು ಸೇರಿದ ಅದೇ ಶ್ರೇಣಿಯಲ್ಲಿ ನಿವೃತ್ತರಾದರು.
ಡಿವಿಜಿಯವರು ತಮ್ಮ ಶಿಷ್ಯರಿಗೆ ತಮ್ಮಲ್ಲಿದ್ದ ವಿದ್ಯೆಯನ್ನೆಲ್ಲ ಪಕ್ಷಪಾತವಿಲ್ಲದೆ ಧಾರೆ ಎರೆದರು ಎಂದರೆ ಅತಿಶಯೋಕ್ತಿ ಅಲ್ಲ.
ವೆಂಕಣರಮಣನ್ ಗುಂಡಪ್ಪನವರ ಆಪ್ತ ಶಿಷ್ಯರಾಗಿ ಸಂಸ್ಕೃತ, ಇಂಗ್ಲಿಷ್ ಕ್ಲಾಸಿಕ್ಸ್ , ರಾಜಕೀಯ, ವಿಜ್ಞಾನ, ಸಂಗೀತ, ಅದ್ವೈತ ತತ್ವ ಅಲ್ಲದೆ ಪಾಶ್ಚಾತ್ಯ ತತ್ವಶಾಸ್ತ್ರ ಹೀಗೆ ವೈವಿಧ್ಯಪೂರ್ಣ ವಿಷಯಗಳಲ್ಲಿ ಆಸಕ್ತಿ ಬೆಳೆಸಿಕೊಂಡರು. ಆಳವಾದ ಅಭ್ಯಾಸವನ್ನೂ ಮಾಡಿದರು. ಡಿವಿಜಿಯವರ ಒಡನಾಟದಿಂದ ಅಧ್ಯಯನ ಅವರ ಪ್ರಕೃತಿ ಸಹಜ ಗುಣವಾಯಿತು. ವಿದ್ವಾನ್ ಎನ್. ರಂಗನಾಥ ಶರ್ಮರಿಂದ ಸಂಸ್ಕೃತವನ್ನೂ ಕಲಿತರು.
ವೆಂಕಟರಮಣನ್ ಅವರ ಮತ್ತೊಂದು ಪ್ರೀತಿಯ ಕಾರ್ಯಕ್ಷೇತ್ರ ಗೋಖಲೆ ಸಾರ್ವಜನಿಕ ಸಂಸ್ಥೆಯ ಪುಸ್ತಕ ಭಂಡಾರ. ಸಂಸ್ಥೆಯ ಕನ್ನಡ, ಸಂಸ್ಕೃತ, ಇಂಗ್ಲಿಷ್ ವಿಭಾಗದ ಪುಸ್ತಕಗಳನ್ನು ಬಹಳ ಆಸಕ್ತಿಯಿಂದ ಒಂದು ವ್ಯವಸ್ಥಿತವಾದ ರೀತಿಯಲ್ಲಿ ಜೋಡಿಸುವುದನ್ನು ಅವರು ಹಲವಾರು ವರ್ಷಗಳ ಕಾಲ ವ್ರತದಂತೆ ಕೈಗೊಂಡರು. ಸಂಸ್ಥೆಗೆ ಪುಸ್ತಕಗಳನ್ನು ಹುಡುಕಿಕೊಂಡು ಜನರು, ಅದರಲ್ಲೂ ಪಿಎಚ್.ಡಿ ಮಾಡುವ ವಿದ್ಯಾರ್ಥಿಗಳಿಗೆ ಅವರ ಸಂಶೋಧನೆಯ ವಿಷಯವನ್ನು ತಿಳಿದುಕೊಂಡು ಅವರಿಗೆ ಬೇಕಾದ ಪುಸ್ತಕಗಳನ್ನು ಬಹಳ ಕಳಕಳಿಯಿಂದ ತೆಗೆದು ಕೊಡುಕೊಡುತ್ತಿದ್ದರು. ಶತಾವಧಾನಿ ಡಾ. ಆರ್. ಗಣೇಶ್ ಅವರು ವೆಂಕಟರಮಣನ್ ಅವರು ಪುಸ್ತಕಗಳನ್ನು ತೆಗೆದು ಕೊಡುವುದಲ್ಲದೆ ನಮಗೆ ಬೇಕಾದ ವಿಚಾರಗಳನ್ನು ಹುಡುಕಿ ಅದನ್ನು ಸೂಚಿಸಲು ಒಂದು ಚೀಟಿಯನ್ನು ಸಹ ಇರಿಸುತ್ತಿದ್ದರು ಎಂದು ಸ್ಮರಿಸುತ್ತಾರೆ.
ಗೋಖಲೆ ಸಂಸ್ಥೆಗೆ ಬರುತ್ತಿದ್ದ ಗುಂಡಪ್ಪನವರ ಅಭಿಮಾನಿಗಳು ಶಿಷ್ಯರು ಎಲ್ಲರೊಡನೆ ವೆಂಕಟರಮಣನ್ ಅವರಿಗೆ ಆತ್ಮೀಯವಾದ ಸಂಬಂಧವಿತ್ತು. ಗುಂಡಪ್ಪನವರು ಸಮಾಜದ ಒಳಿತಿಗಾಗಿ ನಡೆಸುತ್ತಿದ್ದ ಎಲ್ಲ ಕಾರ್ಯಕ್ರಮಗಳಲ್ಲಿ ಅವರು ಭಾಗಿಯಾಗುತ್ತಿದ್ದರು.
ಡಿವಿಜಿಯವರು ಭಾನುವಾರದಂದು ವ್ಯಾಸಂಗ ಗೋಷ್ಠಿಯನ್ನು ಸಂಸ್ಥೆಯಲ್ಲಿ ನಡೆಸುತ್ತಿದ್ದರು. ಅಲ್ಲಿ ಅವರು ಭಗವದ್ಗೀತೆ, ವೇದ, ಉಪನಿಷತ್ತು, ಪಾಶ್ಚಾತ್ಯ ತತ್ವಶಾಸ್ತ್ರ, ಸಂಸ್ಕೃತಮಹಾ ಕಾವ್ಯಗಳನ್ನೂ, ಇಂಗ್ಲಿಷ್ ಮಹಾಕಾವ್ಯಗಳನ್ನೂ ಪಾಠ ಮಾಡುತ್ತಿದ್ದರು. ವೆಂಕಟರಮಣನ್ ವಿಧೇಯ ವಿದ್ಯಾರ್ಥಿಯಂತೆ ಟಿಪ್ಪಣಿಗಳನ್ನು ಕೂಡ ಬರೆದುಕೊಳ್ಳುತ್ತಿದ್ದರು. 1975ರಲ್ಲಿ ಡಿವಿಜಿಯವರು ದೈವಾಧೀನರಾದ ಮೇಲೆ ವೆಂಕಟರಮಣನ್ ಅವರೇ ಸಂಸ್ಥೆಯಲ್ಲಿ ಭಾನುವಾರದ ವ್ಯಾಸಂಗ ಗೋಷ್ಠಿಯನ್ನು ಮುಂದುವರಿಸಿದರು.
1975ರಲ್ಲಿ ಡಿವಿಜಿಯವರು ಶ್ರೀ ಶ್ರೀ ಚಂದ್ರಶೇಖರೇಂದ್ರ ಭಾರತೀ ಮಹಾಸ್ವಾಮಿಗಳ ಸನ್ನಿಧಾನದಲ್ಲಿ “ಅದ್ವೈತ ತತ್ವ ಮತ್ತು ಅನುಷ್ಠಾನ” ಎಂಬ ವಿಷಯವನ್ನು ಕುರಿತು ಉಪನ್ಯಾಸವನ್ನು ನೀಡಲು ಆರು ತಿಂಗಳ ಕಾಲ ತಯಾರಿ ನಡೆಸಿ ಭಾಷಣವನ್ನು ಸಿದ್ಧಪಡಿಸಿದರು. ಆದರೆ ದುರದೃಷ್ಟವಶಾತ್ ಅವರು ಅಕ್ಟೋಬರ್ ತಿಂಗಳಲ್ಲಿ ಕಾಲವಾದರು. ವೆಂಕಟರಮಣನ್ ಅವರು ಮದರಾಸಿಗೆ ಹೋಗಿ ಈ ಭಾಷಣವನ್ನು ಪೂಜ್ಯ ಸ್ವಾಮಿಗಳ ಸಮ್ಮುಖದಲ್ಲಿ ಪ್ರಸ್ತುತಪಡಿಸಿದರು.
18 ವರ್ಷಗಳ ಕಾಲ ತಮ್ಮಗುರುಗಳು ಹೇಳಿದ್ದನ್ನು ಮಾಡುತ್ತ ತಿಳಿಸಿದ್ದನ್ನು ಭಕ್ತಿಯಿಂದ ತಿಳಿದುಕೊಳ್ಳುತ್ತ ಬಂದ ವೆಂಕಟರಮಣನ್ ಅವರಿಗೆ ಅಧ್ಯಯನ ಪ್ರಿಯವಾದ ಹವ್ಯಾಸವಾಗಿತ್ತು. ಹಾಗಾಗಿ ಅವರು ಸ್ವಂತವಾಗಿ ಬರವಣಿಗೆಯನ್ನು ಪ್ರಾರಂಭಿಸಿದ್ದು ಬಹಳ ತಡವಾಗಿಯೇ ಎಂದು ಹೇಳಬಹುದು. ಅವರ ಹೆಚ್ಚಿನ ಬರವಣಿಗೆ, ಡಿವಿಜಿಯವರನ್ನೂ ಅವರ ಸಾಹಿತ್ಯವನ್ನು ಕುರಿತದ್ದು ಎಂಬುದು ಗಮನಾರ್ಹ.
ವೆಂಕಟರಮಣನ್ ಅವರ ಬರವಣಿಗೆ ಸಂಪಾದನೆ ಭಾಷಾಂತರ ಹಾಗೂ ಸ್ವತಂತ್ರ ಕೃತಿಗಳನ್ನು ಒಳಗೊಂಡಿದೆ. ‘ಮಾರುತಿ ಮಹಿಮೆ’ ಎಂಬುದು ಡಿವಿಜಿಯವರ ಪದ್ಯಸಂಕಲನಕ್ಕೆ ವಿವರಣೆಯನ್ನು ನೀಡಿರುವ ಗ್ರಂಥ. ‘ವಿರಕ್ತ ರಾಷ್ಟ್ರಕ ಡಿವಿಜಿ’ ಪ್ರಾಯಶಃ ಡಿವಿಜಿಯವರ ಜೀವನ ಚರಿತ್ರೆಗಳಲ್ಲಿ ಮೊದಲನೆಯದು. ರಾಷ್ಟ್ರಕ್ಕಾಗಿ, ರಾಷ್ಟ್ರಕನಾಗಿ, ಒಬ್ಬ ಪತ್ರಿಕಾ ಸಂಪಾದಕರಾಗಿ, ಸಾರ್ವಜನಿಕ ಜೀವನದಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡ ರೀತಿಯನ್ನು ಆಮೂಲಾಗ್ರವಾಗಿ, ಆಧಾರಸಹಿತವಾಗಿ ವೆಂಕಟರಮಣನ್ ನೀಡಿದ್ದಾರೆ. ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರ ಸಾಲಿನಲ್ಲಿ ಗುಂಡಪ್ಪನವರ ಬಗ್ಗೆ ಬರೆದಿರುವ ಇನ್ನೊಂದು ಪುಸ್ತಕ ‘ಡಿ. ವಿ. ಗುಂಡಪ್ಪ ಡಿವಿಜಿಯವರ ಅವರ ಸೂಕ್ತಿಗಳನ್ನು ಸಂಗ್ರಹಿಸಿರುವ ಪುಸ್ತಕ ‘ಜೀವ ಸಾರ್ಥಕ್ಯ ದೀಪಿಕೆ’.
‘ಕಗ್ಗಕೊಂದು ಕೈಪಿಡಿ’ ಗ್ರಂಥದಲ್ಲಿ ವೆಂಕಟರಮಣನ್ ಅವರು ಡಿವಿಜಿಯವರ ಮಂಕುತಿಮ್ಮನ ಕಗ್ಗದ 945 ಪದ್ಯಗಳಿಗೂ ಅರ್ಥ ವಿವರಣೆಯನ್ನು ನೀಡಿದ್ದಾರೆ. ಡಿವಿಜಿಯವರ ಅಗಾಧವಾದ ಗ್ರಂಥ ರಾಶಿ ಹಾಗೂ ಡಿವಿಜಿಯವರ ಪರಿಪೂರ್ಣ ದೃಷ್ಟಿಯನ್ನು ನೀಡುವಲ್ಲಿ ಈ ಗ್ರಂಥ ಸಹಾಯ ಮಾಡುತ್ತದೆ. ಈ ಪುಸ್ತಕಕ್ಕೆ 1993ರಲ್ಲಿ ಶಿವರಾಮ ಕಾರಂತ ಪ್ರತಿಷ್ಠಾನದಿಂದ ಶಿವರಾಮ ಕಾರಂತ ಪುರಸ್ಕಾರ ಸಂದಿತು.
ವೆಂಕಟರಮಣನ್ ಅವರು ಸಂಸ್ಕೃತ, ತೆಲುಗು, ತಮಿಳು ಹಾಗೂ ಇಂಗ್ಲಿಷ್ ಭಾಷೆಗಳಲ್ಲಿಯೂ ಪಾಂಡಿತ್ಯವನ್ನು ಪಡೆದಿದ್ದರು. ಶೃಂಗೇರಿ ಜಗದ್ಗುರುಗಳ ಸಂಸ್ಕೃತ ಅನುಗ್ರಹ ಭಾಷಣಗಳ ಕನ್ನಡ ಅನುವಾದ ‘ಉಪದೇಶ ಸುಧಾ’. ಸಂಸ್ಕೃತ ಶ್ಲೋಕ ಮಾಲೆ ‘ಕಮಲಜಯಿತಾಷ್ಟಕ’. ಇದಕ್ಕೆ ಕನ್ನಡದಲ್ಲಿ ವಿವರಣೆಯನ್ನು ನೀಡಿದ್ದಾರೆ. ಡಿವಿಜಿಯವರು ಇಂಗ್ಲೀಷಿನಲ್ಲಿ ಅದ್ವೈತ ತತ್ವದ ಬಗ್ಗೆ ಬರೆದಿದ್ದ ಇಂಗ್ಲೀಷ್ ಲೇಖನವನ್ನು ‘ಅದ್ವೈತ ತತ್ವ ಮತ್ತು ಅನುಷ್ಠಾನ’ ಎಂಬ ಶೀರ್ಷಿಕೆಯಲ್ಲಿ ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ತೆಲುಗಿನ ಮಹಾಕವಿ ‘ವೇಮನ’ನನ್ನು ಕುರಿತು ರಾಳ್ಳಪಲ್ಲಿ ಅನಂತಕೃಷ್ಣ ಶರ್ಮ ಅವರು ತೆಲುಗಿನಲ್ಲಿ ಬರೆದಿರುವ ಲೇಖನಗಳನ್ನು
ವೆಂಕಟರಮಣನ್ ಕನ್ನಡಕ್ಕೆ ಅನುವಾದಿಸಿದ್ದಾರೆ. ರೈಟ್ ಆನರಬಲ್ ಶ್ರೀ. ಶ್ರೀನಿವಾಸ ಶಾಸ್ತ್ರಿಗಳು ವಾಲ್ಮೀಕಿ ರಾಮಾಯಣವನ್ನು ಕುರಿತು ಇಂಗ್ಲೀಷಿನಲ್ಲಿ ಮಾಡಿದ ಭಾಷಣಗಳನ್ನು ‘ರಾಮಾಯಣ ಉಪನ್ಯಾಸ ಮಂಜರಿ’ ಎಂಬ ಹೆಸರಿನಲ್ಲಿ ಕನ್ನಡಿಸಿದ್ದಾರೆ. ‘ಶ್ರೀ ವಿಷ್ಣು ಸಹಸ್ರನಾಮ ಅರ್ಥ ಸಹಿತ’ ಎಂಬ ಪುಸ್ತಕದಲ್ಲಿ ನಾಮಗಳ ವಿವರಣೆಯನ್ನು ನೀಡಿದ್ದಾರೆ. ಸಿ. ರಾಜಗೋಪಾಲಚಾರಿ (ರಾಜಾಜಿ) ಅವರು ತಮಿಳಿನಲ್ಲಿ ಬರೆದ ಕ್ರೈಸ್ತ ವಿರಕ್ತ ಲಾರೆನ್ಸ್ ಅವರನ್ನು ಕುರಿತ ಪುಸ್ತಕವನ್ನು ಕನ್ನಡಕ್ಕೆ ‘ಸ್ನೇಹ ಯೋಗ’ ಎಂಬ ಶೀರ್ಷಿಕೆಯಲ್ಲಿ ಅನುವಾದಿಸಿದ್ದಾರೆ. ತಮಿಳಿನಲ್ಲಿ ರಾಜಾಜಿಯವರು ಬರೆದಿರುವ ಮಾರ್ಕಸ್ ಅರಿಲಿಯಸ್ಸನ ಚಿಂತನೆಗಳನ್ನು ಕನ್ನಡಕ್ಕೆ ‘ಆತ್ಮಚಿಂತನೆ’ ಎಂದು ಅನುವಾದಿಸಿದ್ದಾರೆ. ಇದಲ್ಲದೇ ಕನ್ನಡದ ನಿಯತಕಾಲಿಕೆಗಳಲ್ಲಿ ಹಲವಾರು ಲೇಖನಗಳು ಪ್ರಕಟವಾಗಿವೆ.
ವೆಂಕಟರಮಣನ್ ಗಾಂಧಿ ಕೃತಿ ಶ್ರೇಣಿಯ ಹಲವು ಭಾಗಗಳನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ರಾಜಕೀಯದಲ್ಲಿಯೂ ತಮ್ಮ ಗುರುಗಳಾದ ಗುಂಡಪ್ಪನವರಂತೆಯೇ ವೆಂಕಟರಮಣನ್ ಅವರಿಗೆ ಆಸಕ್ತಿ ಇತ್ತು. ‘ಸೆಂಟರ್ ಸ್ಟೇಟ್ ರಿಲೇಷನ್ ಶಿಪ್’ ಎಂಬುದರ ಬಗ್ಗೆ ಭಾರತ ಸರ್ಕಾರದ ‘ಸರ್ಕಾರಿಯಾಕಮಿಷನ್’ಗೆ ಅವರು ಬರೆದಿದ್ದ ಲೇಖನ 1986ರಲ್ಲಿ ಪ್ರಕಟವಾಯಿತು. ಆಲ್ ಇಂಡಿಯಾ ರೇಡಿಯೋದಲ್ಲಿ ರಾಜಕೀಯ ಪಕ್ಷಗಳ ಮ್ಯಾನಿಫೆಸ್ಟೋಗಳನ್ನು ಪರಿಶೀಲಿಸುವ ಸಮಿತಿಯಲ್ಲಿಯೂ ಕೆಲಸ ಮಾಡಿದರು.
ವೆಂಕಟರಮಣನ್ ಅವರು ಒಳ್ಳೆಯ ಭಾಷಣಕಾರರಾಗಿದ್ದರು. ಗೋಖಲೆ ಸಂಸ್ಥೆಯಲ್ಲಿ ಅವರ ಸ್ವಾಗತ ಭಾಷಣವು ಸಭಿಕರಿಂದ ವಿಶೇಷವಾದ ಮೆಚ್ಚುಗೆಯನ್ನು ಪಡೆದಿತ್ತು. ಹಲವಾರು ವರ್ಷ ಅವರು ಮಂಕುತಿಮ್ಮನ ಕಗ್ಗ ಹಾಗೂ ಭಗವದ್ಗೀತೆಯ ಪಾಠ ಮಾಡುತ್ತಿದ್ದರು. ಇವರ ಪಾಠವನ್ನು ಕೇಳಲು ಬರುತ್ತಿದ್ದವರೆಲ್ಲ ವಿದ್ವಾಂಸರು, ವೈದ್ಯರು,ಕಾಲೇಜಿನಲ್ಲಿ ಅಧ್ಯಾಪಕರು ಎಂಬುದು ಗಮನಾರ್ಹ.
ವೆಂಕಟರಮಣನ್ ಅವರ ಉಪನ್ಯಾಸಗಳಲ್ಲಿ ಯಾವುದೇ ತೋರ್ಪಡಿಕೆಗಳ ವಿಜ್ರಂಭಣೆಗಳಿರುತ್ತಿರಲಿಲ್ಲ. ಡಿವಿಜಿ ಅವರ ಶತಮಾನೋತ್ಸವ ಆಚರಣೆ ಸಂದರ್ಭದಲ್ಲಿ ಅವರನ್ನು ನಮ್ಮ ಎಚ್ಎಮ್ಟಿ ಕನ್ನಡ ಸಂಪದದಲ್ಲಿ ಉಪನ್ಯಾಸಕ್ಕಾಗಿ ಆಹ್ವಾನಿಸಿದ ಸಂದರ್ಭದಲ್ಲಿ ಅವರು ಹಲವು ಡಿವಿಜಿ ಅವರ ಕುರಿತ ಮಾತುಗಳನ್ನು ಓದಿದರು. ಹೀಗೆ ಓದಿದ್ದು ಭಾವನಾತ್ಮಕ ಭಾಷಣ ಶೈಲಿಯನ್ನು ಬಯಸುವ ಅಂದಿನ ನಮ್ಮ ಕಚೇರಿ ವಾತಾವರಣದ ಜನಕ್ಕೆ ಆಪ್ತವಾಗಲಿಲ್ಲ. ಆದರೆ ನನಗಂತೂ ಅವರ ಸರಳತೆ, ಯಾರನ್ನೂ ಮೆಚ್ಚಿಸಲೇಬೇಕೆಂಬ ಧಾವಂತವಿಲ್ಲದ ಡಿವಿಜಿ ಕುರಿತಾದ ಭಕ್ತಿನಿಷ್ಠೆ ಕಣ್ಣಿಗೆ ಕಟ್ಟಿದಂತಿದೆ.
ಡಿ. ಆರ್. ವೆಂಕಟರಮಣನ್ ಅವರಿಗೆ ಹಿಂದುಸ್ತಾನಿ ಹಾಗೂ ಕರ್ನಾಟಕ ಸಂಗೀತದ ಬಗ್ಗೆ ಆಳವಾದ ಒಲವಿತ್ತು. ಖರಹರಪ್ರಿಯ, ಶಂಕರಾಭರಣ, ಕಾಂಬೋಧಿ ಮುಂತಾದ ಹಲವು ಜನಪ್ರಿಯ ರಾಗಗಳನ್ನು ಆಲಿಸಿ ಸಂತೋಷಿಸುತ್ತಿದ್ದರು. ಡಿವಿಜಿಯವರ ಅಂತಃಪುರ ಗೀತೆಗಳನ್ನು ವಿದ್ವಾನ್. ಎಸ್. ಶಂಕರ್ ಅವರ ಸಿರಿಕಂಠದಲ್ಲಿ ಕ್ಯಾಸೆಟ್ ರೂಪದಲ್ಲಿ1990ರಲ್ಲಿ ನಿರ್ಮಾಣ ಮಾಡಿದರು. ಗೋಖಲೆ ಸಾರ್ವಜನಿಕ ಸಂಸ್ಥೆ ಅಲ್ಲದೆ ಅನಾಥ ಶಿಶುನಿವಾಸ, ಶ್ರೀ ರಾಮ ಮಂದಿರ ಅಸೋಸಿಯೇಶನ್ ಮತ್ತು ಬಿಎಂಶ್ರೀ ಪ್ರತಿಷ್ಠಾನ ಇವುಗಳೊಂದಿಗೆ ಅವರಿಗೆ ಆತ್ಮೀಯವಾದ ಸಂಬಂಧವಿತ್ತು.
ವೆಂಕಟರಮಣನ್ ಅವರ ಬರವಣಿಗೆಗೆ ಸಹಾಯ ಮಾಡುತ್ತಿದ್ದವರು ಅವರ ಧರ್ಮಪತ್ನಿ ಶ್ರೀಮತಿ ಸರಸ್ವತಿ. ಈ ದಂಪತಿಗಳಿಗೆ ಇಬ್ಬರು ಮಕ್ಕಳು. ರುಕ್ಮಿಣಿ ಹಾಗೂ ವಿದ್ಯಾರಣ್ಯ.
ವೆಂಕಟರಮಣನ್ ಅವರದ್ದು ಸರಳವಾದ ವ್ಯಕ್ತಿತ್ವ. ಪ್ರಾಮಾಣಿಕತೆ, ಸ್ನೇಹಪರತೆ, ಸ್ವಾವಲಂಬನೆ ಮುಖ್ಯವಾಗಿದ್ದ ಗುಣಗಳೊಂದಿಗೆ ಅಪಾರವಾದ ಮಾನವೀಯತೆಯನ್ನು ಕಾಣಬಹುದಾಗಿತ್ತು. ಬಿಳಿಯ ಪಂಚೆಯ ಸಾಧಾರಣ ಉಡುಗೆ. ಊಟ ಮಾತು ಸಂಗೀತ ಸ್ನೇಹ ಎಲ್ಲದರಲ್ಲಿಯೂ ಆಸಕ್ತಿ. ಸನಾತನ ಧರ್ಮದ ವಿಷಯದಲ್ಲಿ ಅಪಾರವಾದ ಭಕ್ತಿ ಹಾಗೂ ನಂಬಿಕೆ. ಅವರಿಗೆ ಪ್ರಿಯವಾದದ್ದು ಶ್ರೀ ವಾಲ್ಮೀಕಿ ರಾಮಾಯಣ. ಜೀವನದುದ್ದಕ್ಕೂ ವಾಲ್ಮೀಕಿ ರಾಮಾಯಣ ಪಾರಾಯಣ ಮಾಡುತ್ತಿದ್ದರು. ಮರುಳಮುನಿಯನ ಕಗ್ಗಕ್ಕೂ ಮಂಕುತಿಮ್ಮನ ಕಗ್ಗದ ರೂಪದಲ್ಲಿಯೇ ವಿವರಣೆಯನ್ನು ಬರೆಯತೊಡಗಿದ್ದರು. ದುರದೃಷ್ಟವಶಾತ್ ಕೇವಲ 100ಪದ್ಯಗಳಿಗೆ ವಿವರಣೆ ನೀಡುವಷ್ಟರಲ್ಲಿ ತೀವ್ರ ಅನಾರೋಗ್ಯದಿಂದ 2001ರಲ್ಲಿ ದೈವಾಧೀನರಾದರು.
ಡಿ. ಆರ್. ವೆಂಕಟರಮಣನ್ “ಗೌರವಿಸು ಜೀವನವ ಗೌರವಿಸು ಚೇತನವ” ಎಂಬ ಡಿವಿಜಿಯವರ ತತ್ವದಲ್ಲಿ ನಂಬಿಕೆ ಇಟ್ಟು ಪವಿತ್ರವಾದ ಸುಂದರವಾದ ಜೀವನವನ್ನು ನಡೆಸಿದವರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವೃದ್ದಿಮಾನ್ ಸಹಾ ಆರೋಪಗಳ ಬಗ್ಗೆ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದೇನು?

Tue Feb 22 , 2022
ಕೊಲ್ಕತ್ತಾ: ಟೀಂ ಇಂಡಿಯಾ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಮಾಡಿದ ಕಾಮೆಂಟ್‌ಗಳಿಗೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಪ್ರತಿಕ್ರಿಯಿಸಿದ್ದಾರೆ. ಅವರ ಮಾತು ತನಗೆ ಯಾವುದೇ ನೋವನ್ನುಂಟು ಮಾಡಿಲ್ಲ ಎಂದ ಅವರು, ಸಹಾ ಬಗ್ಗೆ ನನ್ನ ಮನಸ್ಸಿನಲ್ಲಿ ಇನ್ನೂ ಗೌರವವಿದೆ.   ಭಾರತೀಯ ಕ್ರಿಕೆಟ್‌ಗೆ ಅವರ ಸೇವೆಗಳಿಗೆ ಮತ್ತು ಆಟಗಾರನಾಗಿ ಅವರು ಪಡೆದ ಯಶಸ್ಸೇ ಇದಕ್ಕೆ ಕಾರಣ ಎಂದಿದ್ದಾರೆ. ಶ್ರೀಲಂಕಾ ವಿರುದ್ಧ ತವರಿನಲ್ಲಿ ನಡೆಯಲಿರುವ ಟೆಸ್ಟ್ ಸರಣಿಗೆ ಸಹಾ ಅವರನ್ನು ತಂಡದಿಂದ ಹೊರಗಿಡಲಾಗಿತ್ತು. […]

Advertisement

Wordpress Social Share Plugin powered by Ultimatelysocial