ನಿಯಮ ಪಾಲಿಸದ ನೈಸ್ ಸಂಸ್ಥೆ ವಿರುದ್ಧ ಕ್ರಮಗೊಳ್ಳಿ: ಎಚ್‍ಡಿ ದೇವೇಗೌಡ!

ಬೆಂಗಳೂರು,ಏ.3- ನೈಸ್ ಸಂಸ್ಥೆ ಟೋಲ್ ಹಣವನ್ನು ಸರ್ಕಾರದ ಅನುಮತಿ ಇಲ್ಲದೆ ಹೆಚ್ಚಳ ಮಾಡಿದ್ದು, ಸರ್ಕಾರದ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಅರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ನೈಸ್ ಸಂಸ್ಥೆಗೆ ಕೊಮ್ಮನಗಟ್ಟದ ಬಳಿ ನೀಡಿರುವ 41 ಎಕರೆ ಜಾಗದ ಸೇಲ್ ಡೀಡ್ ರದ್ದುಗೊಳಿಸುವಂತೆ ಕೋರಿದ್ದೇನೆ ಎಂದರು.

ವಿಧಾನಪರಿಷತ್‍ನಲ್ಲಿ ಈ ವಿಷಯ ಚರ್ಚೆಯಾದರೂ ಯಾವುದೇ ಸಚಿವರು ಸರಿಯಾಗಿ ಉತ್ತರ ಕೊಟ್ಟಿಲ್ಲ. ನಾನು ಅನೇಕ ಪತ್ರಗಳನ್ನು ಸಿಎಂ ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ, ಕೈಗಾರಿಕೆ ಇಲಾಖೆ ಕಾರ್ಯದರ್ಶಿಗೂ ಕೂಡ ಪತ್ರ ಬರೆದಿದ್ದೇನೆ ಎಂದು ಹೇಳಿದರು.

ಸರ್ಕಾರ ನೈಸ್ ವಿಚಾರವಾಗಿ ಸಮಿತಿ ಮಾಡಿತ್ತು. ಸಮಿತಿಯನ್ನು ಪದೇ ಪದೇ ಬದಲಾವಣೆ ಮಾಡುತ್ತಾ ಹೋದರು. ಸಚಿವ ಮಾಧುಸ್ವಾಮಿ ಅವರು ಈ ಕಂಪನಿ ವ್ಯವಹಾರಗಳು ಸರಿಯಿಲ್ಲವೆಂದು ಹೇಳಿದ್ದಾರೆ. ಈಗ ಮಾಧುಸ್ವಾಮಿ ಅವರನ್ನು ಸಮಿತಿಯಿಂದ ಕೈ ಬಿಟ್ಟಿದ್ದಾರೆ.

ನಾನು ಒಳ್ಳೆಯ ಉದ್ದೇಶಕ್ಕಾಗಿ ಬಿಎಂಐಸಿಎಲ್ ಯೋಜನೆ ತಂದಿದ್ದೆ. ಆದರೆ ನಂತರ ಇದರಲ್ಲಿ ಅನೇಕ ನಿಯಮಗಳನ್ನೂ ಬದಲಾವಣೆ ಮಾಡಿದ್ದಾರೆ. ನೈಸ್ ಬಗ್ಗೆ ಸದನ ಸಮಿತಿ ಮಾಡಿದರು. ರಸ್ತೆ ಮಾಡಿದ ಮೇಲೆ ಟೌನ್‍ಶಿಪ್ ಮಾಡಬೇಕು ಅಂತ ಇತ್ತು. ಆದರೆ ರಸ್ತೆ ಮಾಡದೇ ಟೋಲ್ ಸಂಗ್ರಹ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸದನ ಸಮಿತಿ ಟೋಲ್ ಸಂಗ್ರಹ ರದ್ದು ಮಾಡಿ ಎಂದು ವರದಿ ನೀಡಿದ್ದರೂ 2016ರಲ್ಲಿ ನೈಸ್ ಸಂಸ್ಥೆ ಹೈಕೋರ್ಟ್‍ನಲ್ಲಿ ತಡೆಯಾಜ್ಞೆ ಪಡೆಯಿತು.
ಸದನ ಸಮಿತಿಯ ವರದಿ ಮೀರಿ ಟೋಲ್ ಸಂಗ್ರಹವಾಗಿದೆ. 2016 ರಿಂದ 2022 ರವರೆಗೆ ಟೋಲ್ ಸಂಗ್ರಹ ಮಾಡಿದ್ದಾರೆ. ನಿತ್ಯ 2-3 ಕೋಟಿ ರೂ. ಸಂಗ್ರಹ ಆಗುತ್ತದೆ. ಯಾರಾದರೂ ಅಕಾರಿಗಳು ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದ್ದಾರಾ? ಎಂದು ಪ್ರಶ್ನಿಸಿದರು.

ನಮ್ಮ ಕೆಐಎಡಿಬಿ ಜಾಗವನ್ನು ಮೆಟ್ರೊಗೆ 14 ಕೋಟಿ ರೂ.ಗೆ ಈ ಸಂಸ್ಥೆ ಮಾರಾಟ ಮಾಡಿದ್ದು, ಈಗ ಮತ್ತೆ ಮೆಟ್ರೊಗೆ ಸುಮಾರು 100 ಕೋಟಿ ರೂ.ಗೆ ಮಾರಾಟ ಮಾಡಲು ಹೊರಟಿದೆ. ರೈತರಿಗೆ ಆ ಸಂಸ್ಥೆ ಸರಿಯಾಗಿ ಪರಿಹಾರವೇ ದೊರೆತಿಲ್ಲ ಎಂದರು. ಸರ್ಕಾರಿ ಜಮೀನನ್ನು ಅಡ ಇಟ್ಟು ಸಾಲ ಪಡೆದಿದ್ದಾರೆ. ದೇಶದಲ್ಲಿ ಉತ್ತಮ ರಸ್ತೆ ಮಾಡಲು ಈ ಪ್ರಾಜೆಕ್ಟ್‍ಗೆ ಆಗಲೇ ಒಪ್ಪಿಗೆ ನೀಡಲಾಗಿತ್ತು. ಇವತ್ತು ಎಲ್ಲಾ ಉಲ್ಟಾ ಆಗಿದೆ. ಮನಸ್ಸಿಗೆ ಬಹಳ ನೋವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಪವ್ರ್ಯಾಸವೆಂದರೆ ರಸ್ತೆ ಮಾಡದೇ ಟೋಲ್ ಸಂಗ್ರಹ ಮಾಡುತ್ತಿದ್ದಾರೆ , ಜೊತೆಗೆ ಕಾಂಕ್ರೀಟ್ ರೋಡ್ ಮಾಡಿರುವುದಾಗಿ ಹೇಳಿದರು. ಅದು ಕೂಡ ಕಳಪೆ ರಸ್ತೆಯಾಗಿದೆ. ಈ ಬಗ್ಗೆ ಅನೇಕ ಪತ್ರ ಬರೆದರೂ ಸರ್ಕಾರ ಏನೂ ಕ್ರಮ ತೆಗೆದುಕೊಂಡಿಲ್ಲ. ಹೈಕೋರ್ಟ್‍ಗೆ ಸರ್ಕಾರ ಅರ್ಜಿ ಹಾಕಬೇಕಿತ್ತು. ಆದರೆ ಯಾವ ಸರ್ಕಾರವೂ ಈ ಕೆಲಸವನ್ನು ಮಾಡಲಿಲ್ಲ ಎಂದರು.

ಎಚ್.ಡಿ.ಕುಮಾರಸ್ವಾಮಿ ಅವರು ಮೈತ್ರಿ ಸರ್ಕಾರದ ಸಿಎಂ ಆಗಿದ್ದಾಗಲೂ ಕೂಡ ಸುಪ್ರೀಂಕೋರ್ಟ್ ಆದೇಶ ಪಾಲನೆ ಮಾಡುವಂತೆ ಹೇಳಿದ್ದೆ. ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ, ಯಡಿಯೂರಪ್ಪ ಅವರಿಗೂ ಪತ್ರ ಬರೆದಿದ್ದೆ. ಈಗ ಬೊಮ್ಮಾಯಿ ಅವರ ಸರ್ಕಾರಕ್ಕೆ ಬಹುಮತ ಇದೆ. ಈಗಲಾದರೂ ಕ್ರಮ ತೆಗೆದುಕೊಳ್ಳಲಿ ಎಂದು ಆಗ್ರಹಿಸಿದರು.

ಭೂಮಿ ಕಳೆದುಕೊಂಡವರು ನನ್ನ ಬಳಿ ಬಂದು ನೋವು ತೋಡಿಕೊಂಡಿದ್ದಾರೆ. ಇದು ಪ್ರಾರಂಭ. ಮುಂದೆ ಇನ್ನು ಹೋರಾಟ ಇದೆ.ನಾನು ಕಣ್ಣು ಮುಚ್ಚಿಕೊಂಡು ಈ ಪ್ರಾಜೆಕ್ಟ್ ಮಾಡಿಲ್ಲ. ನಿಯಮ ಬದ್ದವಾಗಿ ಮಾಡಿದ್ದೆ ಎಂದು ಸಮರ್ಥಿಸಿಕೊಂಡರು. ನನ್ನ ಮೇಲೆ ಎರಡು ಕೋಟಿ ಮಾನನಷ್ಟ ಮೊಕದ್ದಮೆ ಹಾಕಿದರು. ಅದಕ್ಕೆ ಕೋರ್ಟ್ ತಡೆಯಾಜ್ಞೆ ಕೊಟ್ಟಿದೆ. ಎಲ್ಲಾ ಸಿಎಂಗಳಿಗೆ ಪತ್ರ ಬರೆದಿದ್ದೇನೆ. ಆದರೆ ಏನು ಪ್ರಯೋಜನ ಆಗಿಲ್ಲ. ಲೋಕೋಪಯೋಗಿ ಇಲಾಖೆ ಸಚಿವರು ಮಾತ್ರ ನನ್ನ ಪತ್ರಕ್ಕೆ ಉತ್ತರ ಬರೆದಿದ್ದಾರೆ.

ಈಗಿನ ಮುಖ್ಯಮಂತ್ರಿ ಸಂಬಂಧಪಟ್ಟ ಮಂತ್ರಿಗಳಿಗೆ ಕೆಲಸ ಮಾಡಲು ಹೇಳಲಿ ಎಂದು ನೈಸ್ ವಿರುದ್ದ ಕ್ರಮಕ್ಕೆ ಸರ್ಕಾರವನ್ನು ಒತ್ತಾಯಿಸುವುದಾಗಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಟಿ.ಎ.ಶರವಣ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಡಿಯೋ; ಶಿವಮೊಗ್ಗದ ಕೂಡ್ಲಿಯಲ್ಲಿ ವೈಭವದ ಜಾತ್ರೆ, ಪುಣ್ಯಸ್ನಾನ!

Sun Apr 3 , 2022
  ಶಿವಮೊಗ್ಗ, ಏಪ್ರಿಲ್ 03; ಶಿವಮೂಗ್ಗದ ಕೂಡ್ಲಿಯಲ್ಲಿ ಪುರಾಣ ಪ್ರಸಿದ್ಧ ಶ್ರೀ ಸಂಗೇಶ್ವರ ಸ್ವಾಮಿ ಜಾತ್ರೆ ಅದ್ಧೂರಿಯಿಂದ ನಡೆಯುತ್ತಿದೆ. ತುಂಗಾ, ಭದ್ರಾ ಸಂಗಮ ಕ್ಷೇತ್ರದಲ್ಲಿ ಪುಣ್ಯ ಸ್ನಾನ ಮಾಡಿ, ಭಕ್ತರು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಇವತ್ತು ರಥೋತ್ಸವ ನಡೆಯುತ್ತಿದ್ದು, ಸುಮಾರು 200 ಹಳ್ಳಿಯ ಜನರು ಪಾಲ್ಗೊಳ್ಳಲಿದ್ದಾರೆ. ಯುಗಾದಿ ಹಬ್ಬದಂದು ಶ್ರೀ ಸಂಗಮೇಶ್ವರ ಜಾತ್ರೆಗೆ ಚಾಲನೆ ನೀಡಲಾಗುತ್ತದೆ. ಸುತ್ತಮುತ್ತಲ ಗ್ರಾಮಗಳು, ನೆರಹೊರೆಯ ಜಿಲ್ಲೆಯಿಂದಲು ಭಕ್ತರು ಇಲ್ಲಿಗೆ ಆಗಮಿಸಿ ಪುಣ್ಯ ಸ್ನಾನ ಮಾಡುತ್ತಾರೆ. […]

Advertisement

Wordpress Social Share Plugin powered by Ultimatelysocial