ದೇವಲಕುಂದ ವಾದಿರಾಜ್

 
ದೇವಲಕುಂದ ವಾದಿರಾಜ್ ಸಾಂಪ್ರದಾಯಕ ಶಿಲ್ಪಕಲೆಗೆ ವಿಶ್ವದಾದ್ಯಂತ ಗೌರವ ತಂದುಕೊಟ್ಟವರು.
ರಾಷ್ಟ್ರಪ್ರಶಸ್ತಿ ವಿಜೇತ ಮಹಾನ್ ಕಲಾವಿದರಾದ ದೇವಲಕುಂದ ವಾದಿರಾಜರು ಕುಂದಾಪುರ ತಾಲ್ಲೂಕಿನ ದೇವಲಕುಂದದಲ್ಲಿ 1920ರ ಮಾರ್ಚ್ 20 ರಂದು ಜನಿಸಿದರು. ತಂದೆ ಸುಬ್ಬರಾಯಭಟ್ಟರದು ಅರ್ಚಕ ವೃತ್ತಿ. ತಾಯಿ ಲಕ್ಷ್ಮಮ್ಮನವರು.
ತಂದೆಯ ಅಕಾಲ ಮರಣದಿಂದಾಗಿ ಹರಿದು ತಿನ್ನುವ ಬಡತನಕ್ಕೀಡಾದಾಗ, ತಾಯಿ ಮಗನೊಡನೆ ಮೈಸೂರು ಸೇರಿದರು. ಹುಡುಗನಿಗೋ ಶಾಲೆಗೆ ಚಕ್ಕರ್ ಹಾಕಿ ಚಿತ್ರ ಬಿಡಿಸುವಲ್ಲಿ ಆಸಕ್ತಿ. ಮುಂದೆ ತಾಯಿ ಮತ್ತು ಮಗ ನಂಜನಗೂಡಿಗೆ ಬಂದರು. ಅಲ್ಲೂ ದೇವಸ್ಥಾನದ ಚಿತ್ರಕಲೆಯಿಂದ ಆಕರ್ಷಿತರಾದರು. ಹೀಗಾಗಿ ಮೈಸೂರಿನ ಚಾಮರಾಜೇಂದ್ರ ಚಿತ್ರಕಲಾ ಶಾಲೆಗೆ ಸೇರಿಸಲು ಅವರಿವರು ಸಲಹೆ ಮಾಡಿದರು.
ಮೈಸೂರಿನ ಚಾಮರಾಜೇಂದ್ರ ಚಿತ್ರಕಲಾ ಶಾಲೆಯಲ್ಲಿ ವಾದಿರಾಜರು, ಕೆತ್ತನೆ ಕೆಲಸದಲ್ಲಿ ತರಬೇತಿ ಪಡೆದರು. ಈ ಮಧ್ಯೆ ಆಸರೆಯಾಗಿದ್ದ ತಾಯಿ ಮಲೇರಿಯಾ ಜ್ವರದಿಂದ ನಿಧನರಾದರು. 12ರ ವಯಸ್ಸಿನ ಹುಡುಗನಿಗೆ ಹೇಳತೀರದ ಬವಣೆ ಪ್ರಾಪ್ತವಾಯಿತು. ಶಿವಮೊಗ್ಗದಲ್ಲಿ ಹೊಟೇಲೊಂದರ ಮಾಣಿ ಕೆಲಸ ಮಾಡಿದರು. ಧಾರವಾಡ, ಗದಗು, ಹುಬ್ಬಳ್ಳಿ ಸುತ್ತಿ ಮತ್ತೆ ಮೈಸೂರಿಗೆ ಬಂದರು. ಕೆಲಸ ಮಾಡುತ್ತಿದ್ದ ಡಾ, ಸಂಪತ್ತೈಂಗಾರ್ ಮನೆಯಲ್ಲಿ ತೊಳೆಯಲು ಕೊಟ್ಟ ಸಾಬೂನಿನಲ್ಲೂ ಕೆತ್ತನೆ ಕೆಲಸ ಮಾಡಿ ತೋರಿದರು. ಡಾ. ಸಂಪತ್ತೈಂಗಾರ್ ಅವರು ಪ್ರೋತ್ಸಾಹ ಕೊಟ್ಟರು. ಡಾಕ್ಟರಿಗೆ ಬೆಂಗಳೂರಿಗೆ ವರ್ಗವಾದಾಗ, ಅವರ ಜೊತೆ ಬೆಂಗಳೂರಿಗೆ ಬಂದು ಕೆತ್ತನೆ ಕೆಲಸದಂಗಡಿಯಲ್ಲಿ ಉದ್ಯೋಗ ಮಾಡಲಾರಂಭಿಸಿದರು. ಅಲ್ಲಿ ಸಂಗೀತಗಾರ ಎ. ಸುಬ್ಬರಾಯರ ಪರಿಚಯವಾಯಿತು. ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ಕೃತಿ ರಚನೆ ಮಾಡಿದರು. ನಂತರ ಅಖಿಲ ಭಾರತ ಕರಕುಶಲ ಮಂಡಲಿ ವಿನ್ಯಾಸ ಕೇಂದ್ರದಲ್ಲಿ ಮರದ ಕೆತ್ತನೆ ವಿಭಾಗದಲ್ಲಿ ಕೆಲಸ ದೊರಕಿತು.
ವಾದಿರಾಜರು ಹಲವಾರು ಶ್ರೇಷ್ಠ ಕೃತಿಗಳನ್ನು ರಚಿಸಿದರು. ಅವುಗಳಲ್ಲಿ ಆನಂದಮಯಿ ಆಶ್ರಮಕ್ಕೆ ಗಂಧದ ಮಂಟಪ, ಕೈಗಾರಿಕೋದ್ಯಮಿ ನವಲ್ ಕಿಶೋರ್ ರವರಿಗೆ ದಂತದ ಕೃಷ್ಣನ ವಿಗ್ರಹ, ಕೋಲ್ಕತ್ತಾದ ಬಿರ್ಲಾ ಆಸ್ಪತ್ರೆಗೆ ವಿಷ್ಣು ವಿಗ್ರಹ ಮುಂತಾದವುಗಳಲ್ಲದೆ ಎಂ.ವೈ. ಘೋರ್ಪಡೆಯವರ ಅರಮನೆಯ ದೇವಸ್ಥಾನಕ್ಕೆ ರಚಿಸಿದ ಹಲವಾರು ವಿಗ್ರಹಗಳು ಪ್ರಮುಖವೆನಿಸಿದವು. ಹೀಗೆ ತಮ್ಮ ಕಲೆಯಲ್ಲಿ ನೈಪುಣ್ಯತೆ ಮೆರೆದ ವಾದಿರಾಜರಿಗೆ ಗ್ರೇಟ್ ಬ್ರಿಟನ್ನಿನಲ್ಲಿ ನಡೆದ ಭಾರತ್ ಉತ್ಸವದಲ್ಲಿ ಪಾಲ್ಗೊಳ್ಳಲು ಆಹ್ವಾನ ಬಂತು. ಅಲ್ಲಿ ವಿದೇಶಿ ಪತ್ರಿಕೆಗಳಿಂದ ಅಪಾರ ಪ್ರಶಂಸೆ ಬಂತು. ಇಂಗ್ಲೆಂಡ್, ಸ್ಕಾಟ್ಲೆಂಡ್, ವೇಲ್ಸ್, ಗ್ಲಾಸ್ಗೋ ಮುಂತಾದೆಡೆಗಳಲ್ಲಿ ಕೃತಿ ಪ್ರದರ್ಶನ ನಡೆಸಿದರು.
ರಾಷ್ಟ್ರದ ಅನೇಕ ದೇವಸ್ಥಾನ, ವಸ್ತು ಸಂಗ್ರಹಾಲಯಗಳಲ್ಲಿ ಖಾಸಗಿ ಗೃಹಗಳಲ್ಲಿ ವಾದಿರಾಜರ ನೂರಾರು ಶಿಲ್ಪಕಲಾಕೃತಿಗಳು ಕಂಗೊಳಿಸುತ್ತಿವೆ. ಕರಕುಶಲ ಮಂಡಲಿ ಉಪಾಧ್ಯಕ್ಷರಾಗಿ ನೇಮಕಗೊಂಡಿದ್ದ ವಾದಿರಾಜರು ಕರಕುಶಲ ಕೇಂದ್ರದ ರೂವಾರಿ ಎನಿಸಿದ್ದರು. ಕರ್ನಾಟಕ ಲಲಿತ ಕಲಾ ಅಕಾಡಮಿ ಪ್ರಶಸ್ತಿ, ರಾಷ್ಟ್ರಾಧ್ಯಕ್ಷರ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿ ಗೌರವಗಳು ವಾದಿರಾಜರಿಗೆ ಸಂದಿದ್ದವು. ವಾದಿರಾಜರ ಅನೇಕ ಶಿಷ್ಯಂದಿರು ಕಲಾಲೋಕವನ್ನು ಬೆಳುಗುತ್ತ ಸಾಗಿದ್ದಾರೆ.
ದೇವಲಕುಂದ ವಾದಿರಾಜರು ಫೆಬ್ರವರಿ 1993ರಲ್ಲಿ ಈ ಲೋಕವನ್ನಗಲಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

3ನೇ ಕೋವಿಡ್ ವ್ಯಾಕ್ಸ್ ರಕ್ತದ ಕ್ಯಾನ್ಸರ್ ರೋಗಿಗಳಲ್ಲಿ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಸುಧಾರಿಸಬಹುದು

Sat Mar 26 , 2022
ಲಂಡನ್, ಮಾರ್ಚ್ 26, ಮೂರನೇ ಕೋವಿಡ್-19 ಲಸಿಕೆಯನ್ನು ಪಡೆದ ನಂತರ ರಕ್ತದ ಕ್ಯಾನ್ಸರ್ ರೋಗಿಗಳ ದುರ್ಬಲಗೊಂಡ ರೋಗನಿರೋಧಕ ವ್ಯವಸ್ಥೆಯು ಸುಧಾರಿಸುತ್ತದೆ ಎಂದು ಹೊಸ ಅಧ್ಯಯನವು ಕಂಡುಹಿಡಿದಿದೆ. ಲಿಂಫೋಮಾ ಹೊಂದಿರುವ ರೋಗಿಗಳು ತಮ್ಮ ಪ್ರತಿರಕ್ಷಣಾ ವ್ಯವಸ್ಥೆಯಲ್ಲಿ ದೋಷಗಳನ್ನು ಹೊಂದಿರುತ್ತಾರೆ, ಅದು ವ್ಯಾಕ್ಸಿನೇಷನ್ಗೆ ಅವರ ಪ್ರತಿಕ್ರಿಯೆಯನ್ನು ನಿರ್ಬಂಧಿಸುತ್ತದೆ. ಇದರ ಹೊರತಾಗಿಯೂ, ಹೊಸ ಅಧ್ಯಯನವು ಮೂರನೇ ಲಸಿಕೆ ಡೋಸ್‌ನ ನಂತರ ಪ್ರತಿಕಾಯ ಮತ್ತು ಟಿ-ಸೆಲ್ ಪ್ರತಿಕ್ರಿಯೆಗಳಲ್ಲಿ ಸುಧಾರಣೆಗಳನ್ನು ಕಂಡುಹಿಡಿದಿದೆ, ಇತ್ತೀಚೆಗೆ ತಮ್ಮ ಕ್ಯಾನ್ಸರ್‌ಗೆ ನಿರ್ದಿಷ್ಟ […]

Advertisement

Wordpress Social Share Plugin powered by Ultimatelysocial