ಮನುಷ್ಯಪ್ರಯತ್ನ, ದೈವಾನುಗ್ರಹ ಎರಡೂ ಮುಖ್ಯ

 

ಒಬ್ಬ ನಾವಿಕನು ಜನರನ್ನು ಮತ್ತು ಸರಕನ್ನು ವಿದೇಶಕ್ಕೆ ಸಾಗಿಸುವ 8 ಅಂತಸ್ತಿನ ದೊಡ್ಡ ಹಡಗನ್ನು ನಡೆಸುತ್ತಿದ್ದನು. ಆ ನಾವಿಕನು ದೇವರ ಪ್ರಾರ್ಥನೆ ಮತ್ತು ಧ್ಯಾನವನ್ನು ಮಾಡಿಯೇ ಪ್ರತಿದಿನದ ಪ್ರಯಾಣವನ್ನು ಪ್ರಾರಂಭಿಸುತ್ತಿದ್ದನು.

ಒಮ್ಮೆ ಎಂದಿನಂತೆ ನಾವಿಕನು ಹಡಗನ್ನು ಆರಂಭಿಸುವ ಮೊದಲು ದೇವರ ಪ್ರಾರ್ಥನೆ ಮಾಡುತ್ತಿದ್ದನು. ಆಗ ಅಲ್ಲಿದ್ದ ಯುವಕ-ಯುವತಿಯರು ಇದೊಂದು ಮೌಢ್ಯ ಆಚರಣೆಯೆಂದು ಅವನನ್ನು ಅಪಹಾಸ್ಯ ಮಾಡತೊಡಗಿದರು.

ಆತನು ಅದಕ್ಕೆ ಕಿವಿಗೊಡದೆ ಪ್ರಾರ್ಥನೆಯ ನಂತರ ಹಡಗನ್ನು ನಡೆಸಲು ಪ್ರಾರಂಭಿಸಿದನು. ದೂರದೇಶದ ಏಳು ದಿನಗಳ ಪ್ರಯಾಣ. ಮೂರನೆಯ ದಿನ ಆಕಾಶದಲ್ಲಿ ದಟ್ಟಕಪ್ಪು ಕಾರ್ವೇಡ ಆವರಿಸಿತು. ಗುಡುಗು, ಮಿಂಚುಗಳ ಆರ್ಭಟ. ಧಾರಾಕಾರ ಮಳೆ. ರಭಸದ ಬಿರುಗಾಳಿ. ಇಡೀ ಹಡಗೇ ಬುಡಮೇಲಾಗುವಂತೆ ಅಲುಗಾಡತೊಡಗಿತು. ಪ್ರಯಾಣಿಕರು ಜೀವಭಯದಿಂದ ‘ಓ ದೇವರೇ, ನನ್ನನ್ನು ರಕ್ಷಿಸು’ ಎಂದು ಪ್ರಾರ್ಥನೆಮಾಡುತ್ತಿದ್ದರು. ಸ್ವಲ್ಪ ಸಮಯದ ಹಿಂದೆ ತಮಾಷೆ ಮಾಡಿದ ಯುವಕ-ಯುವತಿಯರು ಸಹ ದೇವರಲ್ಲಿ ಮೊರೆಯಿಟ್ಟರು! ನಮ್ಮ ಪ್ರಾರ್ಥನೆಯಿಂದ ಹಡಗು ನಿಯಂತ್ರಣಕ್ಕೆ ಬರುತ್ತಿಲ್ಲ. ತಾವು ಈಗ ಪ್ರಾರ್ಥನೆ ಮಾಡಿ ನಿಯಂತ್ರಿಸಬೇಕು ಎಂದು ನಾವಿಕನಲ್ಲಿ ಮನವಿಯನ್ನು ಮಾಡಿದರು. ಅದಕ್ಕೆ ಆ ನಾವಿಕನು ನಾನು ಪ್ರಯಾಣದ ಮೊದಲು ಪ್ರಾರ್ಥನೆ ಮಾಡುವೆ ಅಷ್ಟೇ. ಈಗ ಪ್ರಯಾಣಿಕರನ್ನೂ – ಸರಕನ್ನೂ ರಕ್ಷಿಸುವ ಜವಾಬ್ದಾರಿಯಿದೆ. ಬಿರುಗಾಳಿಯು ನಾವು ಸೇರಬೇಕಾದ ದೇಶದ ವಿರುದ್ಧ ದಿಕ್ಕಿಗೆ ಎದ್ದಿದೆ. ಹಾಗಾಗಿ ಗಾಳಿಬೀಸುವ ದಿಕ್ಕಿಗೇ ಹಡಗನ್ನು ತಿರುಗಿಸಿ ಕಾಪಾಡಬೇಕಾಗಿದೆ. ಈಗ ನನ್ನ ಕರ್ತವ್ಯವೇ ಮುಖ್ಯ ಎಂದನು. ಹಲವು ಘಂಟೆಗಳು ಭೀಕರ ಗಾಳಿಮಳೆಯ ದಿಕ್ಕಿನಲ್ಲೇ ಪ್ರಯಾಣವನ್ನು ಬೆಳಸಿ, ವಾತಾವರಣ ಶಾಂತವಾದ ನಂತರ ಸೇರಬೇಕಾದ ದೇಶದ ದಿಕ್ಕಿಗೆ ತಿರುಗಿಸಿದನು. ಪ್ರಯಾಣವು ಸುಖಾಂತ್ಯವಾಯಿತು. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ, ನಾವಿಕನು ಒಂದು ಅಪಾಯದ ಸನ್ನಿವೇಶವನ್ನು ಹೋಗಲಾಡಿಸುವುದಕ್ಕಷ್ಟೇ ಅಲ್ಲದೇ ಭಗವಂತನ ಮೇಲಿನ ಭಕ್ತಿಯಿಂದ ನಿತ್ಯವೂ ಕಾರ್ಯಾರಂಭ ಮಾಡುವಾಗಲೇ ಪ್ರಾರ್ಥನೆ ಮಾಡುತ್ತಿದ್ದ. ಅಂದೂ ಹಾಗೆಯೇ ಮಾಡಿದ. ಆ ಯುವ ಪ್ರಯಾಣಿಕರು ಸಂಕಟ ಬಂದಾಗ ವೆಂಕಟರಮಣ ಎಂಬಂತೆ ಮಾಡಿದ ಪ್ರಾರ್ಥನೆಯಂತಲ್ಲ ಇದು. ಭೀಕರ ಮಳೆಗಾಳಿಯಲ್ಲಿ, ಹಡಗು ಆಲ್ಲಾಡುತ್ತಿರುವಾಗ ಜೀವ ಭಯದಿಂದ ಮಾಡಿದ ಯುವ ಪ್ರಯಾಣಿಕರ ಪ್ರಾರ್ಥನೆಯಲ್ಲಿ ಏಕಾಗ್ರತೆ ಎಲ್ಲಿಂದ ಬರಬೇಕು? ಧ್ಯಾನವಂತೂ ದೂರದ ಮಾತು. ಆ ಸಂದರ್ಭದಲ್ಲಿ ನಾವಿಕನು ತನಗೆ ವಹಿಸಿದ ಜವಾಬ್ದಾರಿಯನ್ನು ಪುರುಷ ಪ್ರಯತ್ನದಿಂದ ನಿರ್ವಹಿಸಿ ಹಡಗನ್ನೂ, ಪ್ರಯಾಣಿಕರನ್ನೂ ಕಾಪಾಡುವುದೇ ಮುಖ್ಯವೆಂಬ ವಿವೇಕವನ್ನು ಮೆರೆದಿದ್ದಾನೆ. ತನ್ನ ಚಾಣಾಕ್ಷತೆಯಿಂದ ಪಥ ಬದಲಿಸಿ ಧೃತಿಗೆಡದೆ ಸಮಸ್ಯೆಯನ್ನು ಬಗೆಹರಿಸಿದ್ದಾನೆ. ಹೀಗೆ ದೈವಬಲ ಮತ್ತು ಪುರುಷಪ್ರಯತ್ನಗಳೆರಡೂ ಮುಖ್ಯ. ಪ್ರಾರ್ಥನೆಯ ಜೊತೆಗೆ ಪುರುಷಪ್ರಯತ್ನ ಅತ್ಯಾವಶ್ಯಕವಾಗಿದೆ, ದೈವಾನುಗ್ರಹ ಹಾಗೂ ಪುರುಷಪ್ರಯತ್ನ, ರಥದ ಎರಡೂ ಚಕ್ರಗಳಿದ್ದ ಹಾಗಪ್ಪಾ. ಒಂದು ಚಕ್ರವೇ ಇಲ್ಲದಿದ್ದರೆ ರಥ ಹೇಗಪ್ಪಾ ಮುಂದೋಡುತ್ತೆ? ಎಂಬ ಶ್ರೀರಂಗ ಮಹಾಗುರುಗಳ ವಾಣಿ ಇಲ್ಲಿ ಸ್ಮರಣೀಯ. ನಮ್ಮ ಜೀವನದಲ್ಲೂ ಒಂದರಮೇಲೊಂದು ಕಷ್ಟಗಳು ಬರುತ್ತಿರುತ್ತವೆ. ಸಂಕಟ ಬಂದಾಗ ವೆಂಕಟರಮಣ ಎನ್ನುವ ಬದಲು ಪ್ರತಿನಿತ್ಯ

ನಿಃಸ್ವಾರ್ಥವಾಗಿ ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತ ಬಂದರೆ, ಕಷ್ಟಗಳು ಬಂದರೂ ಎದುರಿಸುವ ಧೈರ್ಯ ನಮ್ಮಲ್ಲಿರುತ್ತದೆ. ‘ಈ ಜೀವನಕ್ಕೆ ಒಂದು ದಡವುಂಟು. ಮಧ್ಯೆ ಎಲ್ಲಿಯೋ ಜಾರಿ ಸಾಗರಕ್ಕೆ ಬಿದ್ದಿದ್ದೇವೆ – ಗರಮಯವಾದ (ವಿಷದಿಂದ ಕೂಡಿದ) ಸಗರವಾದ ಜೀವನದಲ್ಲಿ ಬಿದ್ದಿದ್ದೇವೆ. ವಿಷವನ್ನು ತಪ್ಪಿಸಿಕೊಂಡು (ಅಮೃತಮಯವಾದ) ನಿರ್ವಿಷವಾದ ಜೀವನ ಮಾಡಬೇಕು. ಅಮರವಾದ ಜೀವನವನ್ನು ಮಾಡಬೇಕು. ಜೀವನಕ್ಕೆ ಬೇಕಾದ ಗೊತ್ತು-ಗುರಿ-ಶಿಸ್ತು-ಜವಾಬ್ದಾರಿಗಳೊಡನೆ ಬಂದರೆ ಅಲ್ಲಿ ತಾನೆ ತೀರ್ಮಾನ ಸಿಗುತ್ತದೆ. ಆಂಜನೇಯ ನೂರು ಯೋಜನ ಸಮುದ್ರ ಹಾರಬೇಕು ಎಂದು ಸಿದ್ಧನಾಗಿ ಹಾರಿದ. ಅದಕ್ಕಾಗಿ ಕಟ್ಟುವ ಉಸಿರಿನಲ್ಲಿ, ನೆಗೆಯುವ ನೆಗೆತದಲ್ಲಿ, ನೂರು ಯೋಜನದ ಗುರಿ, ಅದಕ್ಕೆ ಬೇಕಾದ ಶಿಸ್ತು, ಅದಕ್ಕೆ ತಕ್ಕ ಜವಾಬ್ದಾರಿ, ಇವುಗಳು ಇದ್ದಾಗ ತಾನೆ ನೂರು ಯೋಜನ ದಾಟಬಹುದು ಮತ್ತು ದಡಸೇರಬಹುದು’ ಎಂಬ ಯೋಗಿವರೇಣ್ಯರಾದ ಶ್ರೀರಂಗ ಮಹಾಗುರುಗಳ ವಾಣಿಗಳಿಲ್ಲಿ ಸ್ಮರಣೀಯ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಂಡ್ಯದ 5 ರೂ ಖ್ಯಾತಿಯ ವೈದ್ಯ ಡಾ.ಶಂಕರೇಗೌಡ ಇನ್ನಿಲ್ಲ: ಈ ಬಗ್ಗೆ ಪತ್ನಿ ಹೇಳಿದ್ದೇನು ಗೊತ್ತಾ.?

Thu May 26 , 2022
ಮಂಡ್ಯ: ಜಿಲ್ಲೆಯಲ್ಲಿ 5 ರೂ ಗೆ ಚಿಕಿತ್ಸೆ ನೀಡುವ ಮೂಲಕ, ಪ್ರಸಿದ್ಧಿಗಳಿಸಿದ್ದಂತ ಐದು ರೂ ವೈದ್ಯ ಡಾ.ಶಂಕರೇಗೌಡ್ರು ಲಘು ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೇ.. ಸೋಷಿಯಲ್ ಮೀಡಿಯಾದಲ್ಲಿ ಅವರು ಇನ್ನಿಲ್ಲ ಎಂಬುದಾಗಿ ಸುದ್ದಿ ಹರಿದಾಡುತ್ತಿತ್ತು.ಈ ಬಗ್ಗೆ ಅವರ ಪತ್ನಿ ಸುಳ್ಳು ಸುದ್ದಿ. ಡಾಕ್ಟರ್ ಚೆನ್ನಾಗಿದ್ದಾರೆ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.ಈ ಕುರಿತು ವೀಡಿಯೋ ಬಿಡುಗಡೆ ಮಾಡಿರುವಂತ ಅವರು, ಡಾ.ಶಂಕರೇಗೌಡ್ರು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಪೊರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಷಿಯಲ್ […]

Advertisement

Wordpress Social Share Plugin powered by Ultimatelysocial