ದೇವೇಗೌಡರು ಈಗ ಇಬ್ಬರ ಮೇಲೆ ಕೈ ಹಾಕಿಕೊಂಡು ಹೋಗುತ್ತಿದ್ದಾರೆ, ನಾಲ್ವರ ಮೇಲೆ ಹೋಗುವ ಕಾಲ ಹತ್ತಿರದಲ್ಲೇ ಇದೆ”

ತುಮಕೂರು, ಜುಲೈ 1: “ಮಾಜಿ ಪ್ರಧಾನಿ ದೇವೇಗೌಡರು ಈಗ ಇಬ್ಬರ ಮೇಲೆ ಕೈ ಹಾಕಿಕೊಂಡು ಹೋಗುತ್ತಿದ್ದಾರೆ, ನಾಲ್ವರ ಮೇಲೆ ಹೋಗುವ ಕಾಲ ಹತ್ತಿರದಲ್ಲೇ ಇದೆ” ಎಂದು ಮಾಜಿ ಶಾಸಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ. ಎನ್. ರಾಜಣ್ಣ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕಾವಣದಾಲದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಜೆಡಿಎಸ್ ವರಿಷ್ಠ ದೇವೇಗೌಡರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಸಾಮಾಜಿಕ ಜಾಲಾತಾಣದಲ್ಲಿ ಈ ಹೇಳಿಕೆ ವಿಡಿಯೋಗಳು ವೈರಲ್ ಆಗಿವೆ.

ದೇಶದ ಮಾಜಿ ಪ್ರಧಾನಿ ಕುರಿತು ಈ ರೀತಿ ಹೇಳಿಕೆ ನೀಡಿರುವುದು ಸರಿಯೇ? ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದು, ಇದು ಅವರ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಟೀಕಿಸಿದ್ದಾರೆ.

ರಾಜಣ್ಣ ತಮ್ಮ ರಾಜಕೀಯದ ನಡೆ ಬಗ್ಗೆ ಪ್ರತಿಕ್ರಿಯೆ ನೀಡಿ, “ಇದು ನನ್ನ ಕೊನೆಯ ಚುನಾವಣೆ, ಶೋಕಿಗಾಗಿ ರಾಜಕಾರಣ ಮಾಡುವುದು ಬೇಡ, ನಾನು ಎಂಎಲ್‌ಎ ಆದರೆ ನೀವು ಆದಂತೆ, ನಾನು ನಾಮಕಾವಸ್ಥೆಗೆ ಇರುತ್ತೀನಿ. ಏನಾದರೂ ಕೆಲಸ ಆಗಬೇಕಾದರೆ ನೀವೇ ಅಧಿಕಾರಿಗಳನ್ನು ಕೇಳುವಂತಹ ಶಕ್ತಿ ನಿಮಗೆ ಬರುತ್ತದೆ” ಎಂದರು.

“ಮುಂದಿನ ಚುನಾವಣಗೆ ನಿಮ್ಮ ಮನೆ ಬಾಗಿಲಿಗೆ ಬಂದು ಮತ ಕೇಳುತ್ತೇನೆ. ನನ್ನ ಕೊನೆಯ ಚುನಾವಣೆ, ಮುಂದೆ ನೀವೇ ನಿಲ್ಲಿ ಎಂದು ಕೇಳಿಕೊಂಡರೂ ನಾನು ನಿಲ್ಲಲ್ಲ. ಈಗ ನನಗೆ 72 ವರ್ಷ , 77 ವರ್ಷ ಆದರೆ ಓಡಾಡುವುದಕ್ಕೂ ಆಗಲ್ಲ. ಹಾಗಾಗಿ ನನ್ನನ್ನು ನೀವು ಗೆಲ್ಲಿಸಿದ್ದರೆ, ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ನಾನು ಮಂತ್ರಿಯಾಗುತ್ತೇನೆ” ಎಂದು ಹೇಳಿದ್ದಾರೆ.

ತುಮಕೂರು ಪ್ರತಿನಿಧಿ
ಈ ಹಿಂದೆಯೂ ದೇವೇಗೌಡರ ಬಗ್ಗೆ ಹಗುರ ಮಾತುಕೆ. ಎನ್‌. ರಾಜಣ್ಣ ದೇವೇಗೌಡರ ಬಗ್ಗೆ ಮಾತನಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಸಮ್ಮಿಶ್ರ ಸರಕಾರ ಇದ್ದ ವೇಳೆ, “ದೇವೇಗೌಡ ಮೂಗರ್ಜಿ ಗಿರಾಕಿ. ಅವರು ಸಾಕಷ್ಟು ಜನರ ವಿರುದ್ಧ ಮೂಗರ್ಜಿ ಬರೆದಿದ್ದಾರೆ. ಬೇಕಾದರೆ ಪ್ರಮಾಣ ಮಾಡಲು ಹೇಳಿ” ಎಂದು ಹೇಳಿಕೆ ನೀಡಿ ಜೆಡಿಎಸ್‌ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದ್ದರು.

ದೇವೇಗೌಡರಿಗೆ ಸಾವಿಲ್ಲ

ರಾಜಣ್ಣ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಸಿ. ಎಂ. ಇಬ್ರಾಹಿಂ, “ದೇವೇಗೌಡರು ಕೇವಲ ಕುಮಾರಸ್ವಾಮಿ, ಇಬ್ರಾಹಿಂಗೆ ತಂದೆಯಲ್ಲ, ಇಡೀ ಆರೂವರೆ ಕನ್ನಡಿಗರ ತಂದೆ. ನಿಮ್ಮನ್ನ ಶಾಸಕ, ಮಂತ್ರಿಯನ್ನಾಗಿ ಮಾಡಿದ ದೇವೇಗೌಡರ ಹುಟ್ಟು-ಸಾವಿನ ಬಗ್ಗೆ ಮಾತನಾಡುತ್ತೀರಾ. ನಿಮಗೆ ತಂದೆ ಇಲ್ವಾ, ತಂದೆ ಬಗ್ಗೆ ನಿಮಗೆ ಮಮಕಾರ ಇಲ್ವಾ, ತಿಂದ ಮನೆಗೆ ದ್ರೋಹ ಬಗೆಯುತ್ತೀರಾ?” ಎಂದು ಪ್ರಶ್ನಿಸಿದ್ದಾರೆ.

“ಇದಕ್ಕೆ ಇಡೀ ಕರ್ನಾಟಕದ ಜನ ನಿಮಗೆ ಉತ್ತರ ಕೊಡುತ್ತಾರೆ. ದೇವೇಗೌಡರು ನಮಗೆ ಸ್ಪೂರ್ತಿ, ಶಕ್ತಿ. ದೇವೇಗೌಡರು ಅಜರಾಮರು, ಅವರಿಗೆ ಸಾವಿಲ್ಲ. ಸೂರ್ಯ ಚಂದ್ರ ಇರುವವರೆಗೂ ದೇವೇಗೌಡರ ಹೆಸರು ಕರ್ನಾಟಕ, ದೇಶದಲ್ಲಿ ಚಿರವಾಗಿರುತ್ತದೆ. ಕೆಂಪುಕೋಟೆಯಲ್ಲಿ ಬಾವುಟ ಹಾರಿಸಿದ ಕನ್ನಡಿಗರು ಅವರು. ಕೂಡಲೇ ದೇವೇಗೌಡರ ಮನೆಗೆ ಬಂದು ಕ್ಷಮೆ ಕೇಳಬೇಕು” ಎಂದು ಸಿ. ಎಂ. ಇಬ್ರಾಹಿಂ ಆಗ್ರಹಿಸಿದರು.

ರಾಜಣ್ಣ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ

ರಾಜಣ್ಣ ಹೇಳಿಕೆ ವಿರುದ್ಧ ಕಿಡಿಕಾರಿರುವ ಎಚ್. ಡಿ. ಕುಮಾರಸ್ವಾಮಿ, “ಇದು ಆತನ ಸಂಸ್ಕೃತಿಯನ್ನು ತೋರುತ್ತದೆ. ಅವತ್ತು ವಿಧಾನಸಭೆ ಚುನಾವಣೆಗೆ ನಿಂತಾಗ , ದೇವೇಗೌಡರು ಪ್ರಚಾರಕ್ಕೆ ಬರಲೇಬೇಕು ಎಂದು ಹಠ ಹಿಡಿದಿದ್ದ, ಅವತ್ತು ದೇವೇಗೌಡರು ಪ್ರಚಾರ ಮಾಡಿದ್ದಕ್ಕೆ ರಾಜಣ್ಣ ಗೆದ್ದಿದ್ದು. ಈಗ ಅವರ ಬಗ್ಗೆಯೇ ಮಾತಾಡುತ್ತಾರೆ. ದೇವೇಗೌಡರು ನಿಮ್ಮನ್ನ ಗೆಲ್ಲಿಸಿದರೆ ನೀವು ಲೋಕಸಭೆಯಲ್ಲಿ ಅವರ ಸೋಲಿಗೆ ಕಾರಣರಾದಿರಿ. ಇಂದು ದೇವೇಗೌಡರ ಅನಾರೋಗ್ಯಕ್ಕೆ ನಿಮ್ಮಂತಹವರೇ ಕಾರಣ. ಎರಡು ತಿಂಗಳು ಕಾದುನೋಡು, ಯಾರ ಸಹಾಯವಿಲ್ಲದೆ ನಡೆದಾಡುತ್ತಾರೆ, ನಿನ್ನನ್ನು ಕ್ಷಮೆ ಕೇಳು ಅಂತಾ ಹೇಳಲ್ಲ, ಹುಷಾರ್ ಅಂತಾ ಹೇಳಲು ಬಯಸುತ್ತೇನೆ” ಎಂದರು.

ದೇವರೇ ಉತ್ತರ ಕೊಡುತ್ತಾನೆ

“ದೇವೇಗೌಡರಿಗೆ ಇಬ್ಬರು ಹೆಗಲಿಗೆ ಹೆಗಲು ಕೊಡುತ್ತಾರೆ. ನಾವು ಪ್ರತಿನಿತ್ಯ ದೇವರಿಗೆ ಪೂಜೆ ಸಲ್ಲಿಸಿ, ಉತ್ಸವ ಮೂರ್ತಿಗೆ ಹೆಗಲು ಕೊಡುತ್ತೀವಲ್ಲ ಹಾಗೆ. ರಾಜಣ್ಣ ಮಾತು ಕೇಳಿ ನನ್ನ ಮನಸ್ಸಿಗೂ ನೋವಾಗಿದೆ. ನಾನು ಸಾವಿನ ಮನೆಗೆ ಹೋದಾಗಲೂ ಕಣ್ಣೀರು ಹಾಕಿದ್ದೇನೆ. ಆದರೆ ಇಂತಹ ದುರಹಂಕಾರದ ಮಾತಿಗೆ ಮೇಲಿರುವ ಒಬ್ಬ ದೇವರು ನೋಡಿಕೊಳ್ಳುತ್ತಾನೆ. ದೇವೇಗೌಡರ ಬದುಕು ಆಯಸ್ಸು, ಭಗವಂತ ನಿರ್ಧಾರ ಮಾಡಿದ್ದಾನೆ, ನನಗೆ ವಿಶ್ವಾಸ ಇದೆ, ದೇವೇಗೌಡರು ನೂರು ವರ್ಷ ಪೂರೈಸುತ್ತಾರೆ” ಎಂದು ಕುಮಾರಸ್ವಾಮಿ ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೋರ್ಟ್‌ ಆವರಣದಲ್ಲಿ ಸ್ಫೋಟ: ಪೊಲೀಸ್‌ ಪೇದೆಗೆ ಗಾಯ !

Fri Jul 1 , 2022
ಕೋರ್ಟ್‌ ಆವರಣದಲ್ಲಿ ಕಡಿಮೆ ಸಾಂದ್ರತೆಯ ಸ್ಫೋಟ ಸಂಭವಿಸಿದ್ದು, ಪೊಲೀಸ್‌ ಪೇದೆಯೊಬ್ಬರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಪಾಟ್ನಾ ಸಿವಿಲ್‌ ಕೋರ್ಟ್‌-೧ರಲ್ಲಿ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಗಾಯಗೊಂಡ ಪೊಲೀಸ್‌ ಪೇದೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯಲ್ಲಿ ಯಾವುದೇ ಆಸ್ತಿಪಾಸ್ತಿಗೆ ನಷ್ಟವಾಗಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಿದ್ದಾರೆ. ಕೋರ್ಟ್‌ ಆವರಣದಲ್ಲಿ ಸ್ಫೋಟ: ಪೊಲೀಸ್‌ ಪೇದೆಗೆ ಗಾಯ ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://plಇay.google.com/store/apps/details?id=com.speed.newskannada […]

Advertisement

Wordpress Social Share Plugin powered by Ultimatelysocial