ವಿವಾದ ಸೃಷ್ಟಿಸಿದ ಕೆಟಿಆರ್ ಟ್ವೀಟ್:

 

ಬೆಂಗಳೂರು: ಗಂಟು-ಮೂಟೆಯೊಂದಿಗೆ ಹೈದರಾಬಾದ್ ಗೆ ಬನ್ನಿ ಎಂದು ತೆಲಗಾಂಣ ಮುಖ್ಯಮಂತ್ರಿ ಪುತ್ರ‌ ಕೆ.ಟಿ.ರಾಮರಾವ್ ಮಾಡಿದ ಟ್ವೀಟ್ ರಾಜ್ಯದಲ್ಲಿ ವಾದ- ವಿವಾದ ಸೃಷ್ಟಿಸುತ್ತಿದೆ.

ಕೆಟಿಆರ್ ಟ್ವೀಟ್ ಹಾಸ್ಯಾಸ್ಪದ. ಇಡಿ ಜಗತ್ತಿನ ಜನರಿಗೆ ಬೆಂಗಳೂರಿನ ಬಗ್ಗೆ ಗೊತ್ತಿದೆ.

ಐಟಿಬಿಟಿ, ನವೋದ್ಯಮ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಬೆಂಗಳೂರು ಮುಂದಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಮ್ಮ ಸರಕಾರವನ್ನು ಸಮರ್ಥಿಸಿಕೊಂಡಿದ್ದಾರೆ. ಆದರೆ ಡಬಲ್ ಎಂಜಿನ್ ಸರಕಾರದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಇದೊಂದು ಕಡು ಭ್ರಷ್ಟ ಸರಕಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲಿ ಅಶಾಂತಿ ವಾತಾವರಣ ನಿರ್ಮಾಣವಾಗಿದೆ. ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿರುವ ಉದ್ಯಮಿಗಳಿಗೆ, ತಮ್ಮ ರಾಜ್ಯಕ್ಕೆ ಬನ್ನಿ ಎಂದು ಕರೆಯುತ್ತಿದ್ದಾರೆ. ಈ ಸಮಯದಲ್ಲಿ ಮುಖ್ಯಮಂತ್ರಿಗಳಾಗಲಿ, ಬೇರೆ ಮಂತ್ರಿಗಳಾಗಲಿ ಯಾರೂ ಕೂಡ ನಮ್ಮ ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಮಾಡುತ್ತೇವೆ, ಇಲ್ಲೇ ಉದ್ಯೋಗ ಸೃಷ್ಟಿಸಿ ಯಾರನ್ನೂ ಬೇರೆ ರಾಜ್ಯಗಳಿಗೆ ಹೋಗಲು ಬಿಡುವುದಿಲ್ಲ ಎಂದು ಹೇಳಲು ಸಾಧ್ಯವಾಗಿಲ್ಲ ಎಂದು ಟೀಕಿಸಿದರು.

ಬಿಜೆಪಿಯವರು ಕೆ.ಟಿ.ರಾಮರಾವ್ ಅವರಿಗೆ ಉತ್ತರ ನೀಡದೇ ನನ್ನ ಟ್ವೀಟ್ ಗೆ ಉತ್ತರಿಸುತ್ತಾರೆ. ಅವರು ಏನು ಬೇಕಾದರೂ ಹೇಳಲಿ. ನನಗೆ ಕರ್ನಾಟಕ ರಾಜ್ಯ ಮುಖ್ಯ. ಇಲ್ಲಿ ಬಂಡವಾಳ ಹೂಡಿಕೆ ಹೆಚ್ಚಿಸಿ, ಉದ್ಯೋಗ ಸೃಷ್ಟಿಸುವುದು ನಮ್ಮ ಮೊದಲ ಆದ್ಯತೆ ಎಂದರು.

ಇಡೀ ರಾಜ್ಯದಲ್ಲಿ 66 ಮೆಡಿಕಲ್ ಕಾಲೇಜುಗಳಿವೆ. ಉಡುಪಿಯ ಒಂದೇ ಪಂಚಾಯತ್‍ನಲ್ಲಿ 3 ಮೆಡಿಕಲ್ ಕಾಲೇಜುಗಳಿವೆ. ಎಷ್ಟೋ ಎಂಜಿನಿಯರ್, ತಂತ್ರಜ್ಞರನ್ನು, ವೈದ್ಯರನ್ನು ತಯಾರು ಮಾಡಿರುವ ರಾಜ್ಯ ಇದು ಎಂದು ಹೇಳಿದರು.

ನವೋದ್ಯಮ, ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನದ ರಾಜಧಾನಿ ಬೆಂಗಳೂರು. ಬಯೋಕಾನ್ ಮುಖ್ಯಸ್ಥೆ ರಾಜ್ಯದ ಪರಿಸ್ಥಿತಿ ಬಗ್ಗೆ ಮಾತನಾಡುತ್ತಾರೆ ಎಂದರೆ ಅದಕ್ಕೆ ಉತ್ತರ ಕೊಡಲು ಒಬ್ಬರಿಗೂ ಸಾಧ್ಯವಾಗಿಲ್ಲ.ಅವರನ್ನು ರಾಜಕೀಯ ಪಕ್ಷದ ಭಾಗ ಎಂದು ಹೇಳಿದರು. ಅವರು ಸರ್ಕಾರಕ್ಕೆ ಸಲಹೆ ನೀಡಿದ್ದರು. ಇನ್ಫೋಸಿಸ್, ರಾಜೀವ್ ಚಂದ್ರಶೇಖರ್ ಸೇರಿದಂತೆ ಎಲ್ಲರೂ ಕೂಡ ಸರ್ಕಾರಕ್ಕೆ ಸಲಹೆ ನೀಡಿದ್ದವರು. ಅದು ರಾಜಕೀಯ ತಂಡವಾಗಿರಲಿಲ್ಲ. ಇವರು ಕೂಡ ಅನೇಕರಿಂದ ಸಲಹೆ ಪಡೆದಿದ್ದಾರೆ. ಅದು ತಪ್ಪಲ್ಲ. ಮಂತ್ರಿಗಳು ಏನಾದರೂ ಹೇಳಲಿ ನಾನು ಅವರಿಗೆ ಸೊಪ್ಪು ಹಾಕಲ್ಲ, ಲೆಕ್ಕಿಸುವುದಿಲ್ಲ. ನನಗೆ ರಾಜ್ಯದ ಹಿತ ಹಾಗೂ ಗೌರವ ಕಾಪಾಡುವುದು ಮುಖ್ಯ ಎಂದು ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ದಿನಬೆಳಗಾದರೆ ಅಶಾಂತಿ ಮೂಡುತ್ತಿದ್ದು, ಯಾರೂ ಕೂಡ ಬಂಡವಾಳ ಹೂಡಿಕೆ ಮಾಡಲು ಇಲ್ಲಿಗೆ ಬರುತ್ತಿಲ್ಲ. ನಾವು ನೆರೆ ರಾಜ್ಯಗಳ ಜತೆ ಸ್ಪರ್ಧೆ ಮಾಡುತ್ತೇವೆ. ಇಲ್ಲಿಂದ ಬೇರೆ ರಾಜ್ಯಗಳಿಗೆ ಎಷ್ಟು ಉದ್ದಿಮೆಗಳು ಹೋಗಿವೆ ಎಂದು ಸರ್ಕಾರ ಸಮೀಕ್ಷೆ ಮಾಡಲಿ ಎಂದು ಸವಾಲು ಹಾಕಿದರು.

ನಾನು ನಮ್ಮ ಜನರಿಗೆ ಭರವಸೆ ನೀಡುವ ಕೆಲಸ ಮಾಡಿದ್ದೇನೆ. ರಾಜ್ಯ ಒಂದಾಗಿ ಕೆಲಸ ಮಾಡುತ್ತಿದೆಯೇ? ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ ಇಲ್ಲಿದೆ. ಕೋವಿಡ್ ಸಮಯದಲ್ಲಿ ಐಟಿ ಹಾಗೂ ಬಿಟಿ ಅವರಿಗೆ ಏನೆಲ್ಲ ಪರ್ಸೆಂಟೇಜ್ ನಿಗದಿ ಆಗಿತ್ತು ಎಂಬುದು ನಮಗೂ ಗೊತ್ತಿದೆ. ಈ ಸರ್ಕಾರ ಪ್ರವಾಸೋದ್ಯಮಿಗಳು ಸೇರಿದಂತೆ ಯಾರಿಗೆ ನೆರವಾಗಿದೆ? ಬೇರೆ ರಾಜ್ಯಗಳಲ್ಲಿ ಅಲ್ಲಿನ ಉದ್ಯಮಿಗಳಿಗೆ ನೆರವು ಸಿಕ್ಕಿತಾದರೂ ನಮ್ಮ ರಾಜ್ಯದಲ್ಲಿ ಬಿಜೆಪಿ ಸರ್ಕಾರದಿಂದ ಯಾವುದೇ ನೆರವು ನೀಡಲಿಲ್ಲ. ರೈತರ ಆದಾಯ ಡಬಲ್ ಮಾಡುತ್ತೇವೆ ಎಂದರಲ್ಲ, ಈ ಡಬಲ್ ಇಂಜಿನ್ ಸರ್ಕಾರ ಅದನ್ನು ಮಾಡಿತೇ?’ ಎಂದು ಪ್ರಶ್ನಿಸಿದರು.

Please follow and like us:

Leave a Reply

Your email address will not be published. Required fields are marked *

Next Post

ವಿಧಾನ ಸೌಧ: ಎಲ್ಲವನ್ನೂ ಕೂಡ ನಿಯಮದ ಅಡಿಯಲ್ಲೇ ಮಾಡಬೇಕಾಗುತ್ತದೆ.

Tue Apr 5 , 2022
ಒಂದು ಬಸ್ ಓಡಿಸುವುದಕ್ಕೂ ಕೂಡ ಒಂದು ಡೆಸಿಬಲ್ ಲಿಮಿಟ್ ಅಂತ ಇರುತ್ತದೆ. ಸುಪ್ರಿಂ ಕೋರ್ಟ್ ಆದೇಶ ಪ್ರಕಾರವೇ ನಡೆದುಕೊಳ್ಳಬೇಕಾಗುತ್ತದೆ. ಕಾಂಗ್ರೆಸ್ ನವರು ಎಲ್ಲದರಲ್ಲೂ ರಾಜಕಾರಣ ಮಾಡುತ್ತಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನವರು ಎಲ್ಲದರಲ್ಲೂ ರಾಜಕಾರಣ ಮಾಡುತ್ತಾರೆ. ಸ್ವಾತಂತ್ರ್ಯ ಬಂದಾಗಿನಿಂದ ಓಟ್ ಬ್ಯಾಂಕ್ ರಾಜಕಾರಣ ಮಾಡಿಕೊಂಡೇ ಬಂದಿದ್ದಾರೆ. ಓಟ್ ಬ್ಯಾಂಕ್ ರಾಜಕಾರಣ ಮಾಡಿಕೊಂಡೇ ಸಿಂಹಾಸನದ ಮೇಲೆ ಕೂತಿದ್ದಾರೆ. ಹಿಜಾಬ್, […]

Advertisement

Wordpress Social Share Plugin powered by Ultimatelysocial