ಗುಸ್ಟಾವ್ ಹರ್ಮನ್ ಕೃಂಬಿಗಲ್!

ಬೆಂಗಳೂರಿನ ಲಾಲ್ಬಾಗನ್ನು ನೋಡಿದ್ರೆ ಇದನ್ನು ನಮಗೆ ಈ ಊರಿನ ಮಧ್ಯೆ ಕೊಟ್ಟ ಪುಣ್ಯಾತ್ಮನಿಗೆ ಕೈಮುಗಿಯಬೇಕು ಅನಿಸುತ್ತೆ. ಕಾಲದಿಂದ ಕಾಲಕ್ಕೆ ಇದನ್ನು ಅಭಿವೃದ್ಧಿ ಪಡಿಸಿ, ಇಂದೂ ಅದು ನಮಗೆ ಉಳಿಯವಂತೆ ಮಾಡಿಕೊಟ್ಟಿರುವ ಮಹನೀಯರು ಅನೇಕರಿದ್ದಾರೆ. ಅವರಲ್ಲಿ ಗುಸ್ಟಾವ್ ಹರ್ಮನ್ ಕೃಂಬಿಗಲ್ ಪ್ರಮುಖರು. ಇಂದು ಅವರ ಸಂಸ್ಮರಣಾ ದಿನ.ತೋಟಗಾರಿಕಾ ನಿರ್ದೇಶಕ, ಸಸ್ಯಶಾಸ್ತ್ರಜ್ಞ, ಭೂದೃಶ್ಯ ಹಾಗೂ ನಗರದ ವಿನ್ಯಾಸಕಾರ, ವಾಸ್ತುಶಿಲ್ಪಿ, ಫಲೋದ್ಯಾನ ರೂಪಕ, ಸಸ್ಯ ಸಂರಕ್ಷಕ ಹೀಗೆ ಬಹುಮುಖಿಗಳಾದ ಕೃಂಬಿಗಲ್ ನಮ್ಮ ನಾಡಿಗೆ ಸಲ್ಲಿಸಿರುವ ಸೇವೆ ಅಪಾರ.ಗುಸ್ಟಾವ್ ಹರ್ಮನ್ ಕೃಂಬಿಗಲ್ 1865ರ ಡಿಸೆಂಬರ್ 18ರಂದು ಜರ್ಮನಿಯ ಡ್ರೆಸಡೆನ್ ಬಳಿಯ ಲೊಹಮೆನ್ ಎಂಬಲ್ಲಿ ಜನಿಸಿದರು. ಪ್ರಾರಂಭಿಕ ಶಿಕ್ಷಣವನ್ನು ವಿಲ್ಸಡ್ರಫ್ ಮತ್ತು ಡ್ರೆಸಡೆನ್ ಪಟ್ಟಣಗಳಲ್ಲಿ ಗಳಿಸಿದ ನಂತರ ಪಿಲಿನಿಟ್ಜ್ ಎಂಬಲ್ಲಿ ತೋಟಗಾರಿಕಾ ತರಬೇತಿ ಪಡೆದರು.ಕೃಂಬಿಗಲ್ 1884ರಲ್ಲಿ ಸ್ಕವೆರಿನ್, 1885-87 ಅವಧಿಯಲ್ಲಿ ಹಾಂಬರ್ಗ್ ಪ್ರದೇಶಗಳ ಉದ್ಯಾನ ನಿರ್ವಹಣೆ ಮಾಡಿ 1888ರಲ್ಲಿ ಇಂಗ್ಲೆಂಡಿಗೆ ಬಂದರು. ಇಂಗ್ಲೆಂಡಿನ ಹೈಡ್ ಪಾರ್ಕ್ ಮತ್ತು ಕ್ಯು ಎಂಬಲ್ಲಿನ ರಾಯಲ್ ಬೊಟಾನಿಕಲ್ ಗಾರ್ಡನ್ ಉದ್ಯಾನವನದಲ್ಲಿ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಿದ ಕ್ರಂಬಿಗಲ್ 1893ರಲ್ಲಿ ಬರೋಡಾ ರಾಜ ಸಂಸ್ಥಾನದಲ್ಲಿನ ಉದ್ಯಾನವನಗಳ ಕ್ಯುರೇಟರ್ ಆಗಿ ಅಧಿಕಾರ ವಹಿಸಿಕೊಂಡರು.ಬರೋಡ ಸಂಸ್ಥಾನದಲ್ಲಿ ಅತ್ಯುತ್ತಮ ರೀತಿಯಲ್ಲಿ ಉದ್ಯಾನಗಳನ್ನು ಅಭಿವೃದ್ಧಿಪಡಿಸಿದ್ದ ಕ್ರಂಬಿಗಲ್ ಅವರ ಕೆಲಸವನ್ನು ಮೆಚ್ಚಿದ ಅಂದಿನ ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್, ಅವರನ್ನು ಮೈಸೂರು ಸಂಸ್ಥಾನಕ್ಕೆ ಆಹ್ವಾನಿಸಿದರು. ಕ್ರಂಬಿಗಲ್ ಅವರು ಲಾಲ್ ಬಾಗ್, ಸರ್ಕಾರಿ ತೋಟಗಳು ಮತ್ತು ರಾಜರ ಅರಮನೆ ತೋಟಗಳ ಅಧೀಕ್ಷಕರಾಗಿ 1908ರಲ್ಲಿ ಸೇವೆಯನ್ನು ಪ್ರಾರಂಭಿಸಿ 1932ರಲ್ಲಿ ತೋಟಗಾರಿಕೆ ನಿರ್ದೇಶಕರಾಗಿ ನಿವೃತ್ತರಾದರು. ನಂತರದಲ್ಲಿ ಸಹಾ 67 ವರ್ಷ ವಯಸ್ಸಾದ ಅವರನ್ನು ಮಹಾರಾಜರು ಸಲಹೆಗಾರರನ್ನಾಗಿ ನೇಮಕ ಮಾಡಿಕೊಂಡರು. ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ಆಮಂತ್ರಣದ ಮೇರೆಗೆ ಅವರು ಸಲಹೆಗಾರರಾಗಿ ಸೇವೆ ಸಲ್ಲಿಸಿದರು.ಕನ್ನಂಬಾಡಿ ಕಟ್ಟೆಯ ಕೆಳಗಿನ ‘ಬೃಂದಾವನ ಉದ್ಯಾನವನ’ ಕೂಡ ಕ್ರಂಬಿಗಲ್ ಅವರ ಕೊಡುಗೆಯೇ. ಸಸ್ಯ ವಿಜ್ಞಾನಿ ಹಾಗೂ ತೋಟವಿನ್ಯಾಸ ತಜ್ಞರಾಗಿದ್ದ ಕೃಂಬಿಗಲ್, ಮೈಸೂರು ಸಂಸ್ಥಾನದ ಮುಖ್ಯ ವಾಸ್ತುಶಿಲ್ಪಿಯೂ ಆಗಿದ್ದರು. 1927ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 25 ವರ್ಷದ ಆಡಳಿತದ ಬೆಳ್ಳಿ ವರ್ಷಾಚರಣೆ ಸಂದರ್ಭದಲ್ಲಿ ದಿವಾನ್ ಮಿರ್ಜಾ ಇಸ್ಮಾಯಿಲ್ ಅವರು ಆಯ್ದ ನೂರು ಹಳ್ಳಿಗಳಲ್ಲಿ ಎಂಟು ಸ್ತಂಭಗಳಿಂದ ಕೂಡಿದ ವೃತ್ತ ಮತ್ತು ಭಜನೆ ಮನೆಗಳನ್ನು ನಿರ್ಮಾಣ ಮಾಡಿಸಿದ್ದರು. ಇದನ್ನು ವಿನ್ಯಾಸ ಮಾಡಿದ್ದೂ ಕೃಂಬಿಗಲ್ ಅವರು.2016ರಲ್ಲಿ, ಭಾರತ ಮತ್ತು ಜರ್ಮನಿಯ ಜಂಟಿ ಸಹಭಾಗಿತ್ವದಲ್ಲಿ, ಕೃಂಬಿಗಲ್ ಅವರ ಜನ್ಮಸ್ಥಳವಾದ ಜರ್ಮನಿಯ ಡ್ರೆಸಡೆನ್ ನಗರದಲ್ಲಿ ಕೃಂಬಿಗಲ್ ಅವರ 150 ವರ್ಷದ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬೆಂಗಳೂರಿನ ಲಾಲ್ಬಾಗಿನಲ್ಲಿ ಸಹಾ ಅವರ ಸ್ಮರಣೆಯ ವಿಶೇಷ ಫಲಪುಷ್ಪ ಪ್ರದರ್ಶನ ನಡೆಯಿತು.ಕ್ರಂಬಿಗಲ್ ಪುರಾತನ ಸ್ಥಾವರಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸಹಾ ಅಪಾರ ಕಾರ್ಯಗಳನ್ನು ಕೈಗೊಂಡಿದ್ದರು. ವಿವಿಧ ದೇಶಗಳಿಂದ ಸಸ್ಯತಳಿಗಳನ್ನು ತರಿಸಿ ನಮ್ಮ ನಾಡಿನ ಉದ್ಯಾನವನಗಳು ಮತ್ತ ನಗರಗಳು ನಿತ್ಯಶೊಭಿಸುವಂತ ಕೆಲಸ ಮಾಡಿದರು. ಇಲ್ಲಿನ ನಗರಗಳ ಬೀದಿಗಳು ವರ್ಷವಿಡೀ ಎಲ್ಲ ಋತುಮಾನಗಳಲ್ಲೂ ಒಂದಲ್ಲ ಒಂದು ಹೂವಿನ ಶೋಭೆಯಲ್ಲಿ ನಲಿಯುವಂತೆ ಮಾಡಿದರು. ಅನೇಕ ಊರುಗಳ ಗ್ರಾಮಸ್ಥರಿಗೆ ವಾಣಿಜ್ಯ ಬೆಳೆಗಳನ್ನು ಬೆಳೆದು ಅಭಿವೃದ್ಧಿ ಸಾಧಿಸುವ ಮಾರ್ಗದರ್ಶನ ನೀಡಿದ್ದರು.ಕರ್ನಾಟಕದಲ್ಲಿದ್ದು ನಮ್ಮವರೇ ಆಗಿದ್ದ ಕೃಂಬಿಗಲ್ 1956ರ ಫೆಬ್ರವರಿ 8ರಂದು ಬೆಂಗಳೂರಿನಲ್ಲಿಯೇ ನಿಧನರಾದರು. ಬೆಂಗಳೂರಿನಲ್ಲಿ ‘ಕೃಂಬಿಗಲ್ ರಸ್ತೆ’ ಅವರ ಹೆಸರನ್ನು ಉಳಿಸಿದೆ.ವಾರೆನ್ ಬಫೆಟ್ ಅವರ ಪ್ರಸಿದ್ಧ ಮಾತು ನೆನಪಾಗುತ್ತದೆ. “ಇಂದು ನೆರಳಿನಲ್ಲಿ ವಿಶ್ರಮಿಸುತ್ತಿದ್ದೇವೆ ಎಂದರೆ ಹಿಂದೆ ಯಾರೋ ಅಲ್ಲಿ ಮರ ನೆಟ್ಟಿದ್ದರು ಎಂದು ಅರ್ಥ”. ಗುಸ್ಟಾವ್ ಹರ್ಮನ್ ಕೃಂಬಿಗಲ್ ಅಂತಹ ಮಹಾನುಭಾವರಲ್ಲಿ ಒಬ್ಬರು. ನಮ್ಮ ಕೈನಲ್ಲಿ ಮರ ನೆಡುವುದು ಸಾಧ್ಯವಿಲ್ಲ. ನಮ್ಮ ವಾತಾವರಣ ಚೆನ್ನಾಗಿರಬೇಕು ಎಂದು ಆಶಿಸುವ ನಾವು ಇಂಥ ಮಹಾನುಭಾವರನ್ನು ಕೃತಜ್ಞತೆಯಿಂದ ನೆನೆದರೆ ಅಲ್ಲೊಂದು ಸಸಿ ತಲೆ ಎತ್ತಿ ನಮ್ಮ ನೋಡಿ ಹಸನ್ಮುಖತೆ ಬೀರಿತೇನೊ. ಕ್ರಂಬಿಗಲ್ ಅಂತಹ ಮಹಾನ್ ಚೇತನಗಳಿಗೆ ಸಾಷ್ಟಾಂಗ ನಮನ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸತೀಶ್ ನೀನಾಸಂ - ರಚಿತಾ ರಾಮ್ ಅಭಿನಯದ 'ಮ್ಯಾಟ್ನಿ' ಚಿತ್ರದ ಲವ್ಲಿ & ಕಲರ್ ಫುಲ್ ಟೀಸರ್ ರಿಲೀಸ್ ಆಗಿದ್ದು, ಮ್ಯೂಸಿಕಲ್ ಬ್ಯಾಕ್ ಗ್ರೌಂಡ್ ಟೀಸರ್ ‌ಮೂಡಿ ಬಂದಿದೆ.

Wed Feb 16 , 2022
ಸತೀಶ್ ನೀನಾಸಂ – ರಚಿತಾ ರಾಮ್ ಅಭಿನಯದ ‘ಮ್ಯಾಟ್ನಿ’ ಚಿತ್ರದ ಲವ್ಲಿ & ಕಲರ್ ಫುಲ್ ಟೀಸರ್ ರಿಲೀಸ್ ಆಗಿದ್ದು, ಮ್ಯೂಸಿಕಲ್ ಬ್ಯಾಕ್ ಗ್ರೌಂಡ್ ಟೀಸರ್ ‌ಮೂಡಿ ಬಂದಿದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial