ಹರಪನಹಳ್ಳಿ ಭೀಮವ್ವ

ಸಂಸಾರದಲ್ಲಿದ್ದುಕೊಂಡೇ ಲೌಕಿಕ ಜಗತ್ತಿನಲ್ಲಿ ಈ ಭೌತಿಕ ಜಗತ್ತಿನಲ್ಲಿ ತನ್ನ ಎಲ್ಲಾ ಕರ್ತವ್ಯಗಳನ್ನು ಮಾಡುತ್ತಲೇ ಮುಕ್ತಿಯ ಸೋಪಾನವನ್ನು ತಾನು ಸ್ವತಃ ಏರುವುದಲ್ಲದೇ ತನ್ನಂಥ ನಾರಿಯರಿಗೆ ದಾರಿ ತೋರಿಸಿದವರಲ್ಲಿ ನಮ್ಮ ಹರಿದಾಸಿಯರಲ್ಲಿ ಪ್ರಮುಖರಾದವರು ಹೆಳವನ ಕಟ್ಟೆ ಗಿರಿಯಮ್ಮ ಹಾಗೂ ಹರಪನಹಳ್ಳಿಯ ಭೀಮವ್ವನವರು. ಜನವರಿ 11 ಅವರು ಈ ಲೋಕವನ್ನಗಲಿದ ದಿನ.
ಭೀಮವ್ವನವರು 1823ರ ಜುಲೈ 6ನೇ ತಾರೀಖು ನಾರಾಯಣ ದೇವರ ಕೆರೆ ಎಂಬ ಊರಲ್ಲಿ ನರೇಭಟ್ಟರ ವಂಶದ ರಘುನಾಥಾಚಾರ್ಯ ಮತ್ತು ರಾಘಮ್ಮ ದಂಪತಿಗಳ ಮಗಳಾಗಿ ಜನಿಸಿದರು. ಇವರ ಹುಟ್ಟುಹೆಸರು ಕಮಲಾಕ್ಷಿ. ಪುಟ್ಟ ಮಗು ಅಳತೊಡಗಿದಾಗಳೆಲ್ಲಾ ತೊಟ್ಟಿಲು ತೂಗುತ್ತಾ ಹರಿನಾಮ ಹಾಡಿದರೆ ಕೂಡಲೇ ಸುಮ್ಮನಾಗುತ್ತಿತ್ತಂತೆ.
ಭೀಮವ್ವನ ನೆನಪಿನ ಶಕ್ತಿಯೂ ಘನವಾಗಿತ್ತು. ಹಾಗಾಗಿಯೇ ಅವರು ಸಾವಿರಾರು ಕೀರ್ತನೆಗಳನ್ನೂ ನೂರಾರು ನುಡಿಗಳ ಕಥನ ಕೀರ್ತನೆಗಳನ್ನೂ ಬಾಯಿಯಿಂದಲೇ ನಿರರ್ಗಳವಾಗಿ ಹೇಳುತ್ತಿದ್ದರು. ಮಗು ಆರು ವರ್ಷದವಳಿರುವಾಗಲೇ ಆಕೆಗೆ ಶ್ರೀ ವೇದವ್ಯಾಸ ದೇವರ ದರ್ಶನವಾಗಿತ್ತು. ಅಂದಿನಿಂದಲೇ ಅವಳಲ್ಲಿ ಗುರುತರ ಬದಲಾವಣೆ ಕಾಣಿಸಿಕೊಂಡಿತ್ತು. ಈಕೆಗೆ 11 ವರ್ಷವಾದಾಗ ರಾಯದುರ್ಗ ತಾಲೂಕಿನ ಹರೇ ಸಮುದ್ರ ಗ್ರಾಮದ ಗೋಪಾಲಪ್ಪ ಎಂಬುವರ ವಂಶದ ಮುನಿಯಪ್ಪನವರ ಜೊತೆ ಮದುವೆಯಾಯಿತು. ವರನ ವಯಸ್ಸು 45 ವರ್ಷ. ಅವರಿಗೆ ಇದು ಮೂರನೆಯ ಮದುವೆ. ಮದುವೆಯಾದ 14 ವರ್ಷಕ್ಕೆ ಇವರಿಗೆ ಒಬ್ಬ ಮಗ ಹಾಗೂ ನಾಲ್ಕು ವರ್ಷಗಳ ನಂತರ ಮಗಳೂ ಜನಿಸಿದರು. ಇವರ 35ನೇ ವರ್ಷಕ್ಕೆ ಪತಿ ವಿಯೋಗವಾಯಿತು.
ಇಲ್ಲಿಂದ ಇವರ ಜೀವನ ಮಾರ್ಗ ಬದಲಾಯಿತು. ಒಂದು ದಿನ ಮಧ್ಯಾಹ್ನ ಮಲಗಿದಾಗ ಕನಸಿನಲ್ಲಿ ಒಂದು ಮಹಾ ಅರಣ್ಯದಲ್ಲಿ ಇವರು ಒಂದು ಮರದ ಕೆಳಗೆ ಮಲಗಿದ್ದಾರೆ. ಆಗ ಒಬ್ಬ ತಂಬೂರಿ ಹಿಡಿದ ಮುನಿ (ನಾರದರು) ಒಂದು ಕೃಷ್ಣ ಸರ್ಪದೊಡನೆ ಬಂದಿದ್ದ. ಆ ಸರ್ಪಕ್ಕೆ ಈಕೆಯ ನಾಲಿಗೆಯ ಮೇಲೆ ಮೂರಕ್ಷರ ಬರೆಯಲು ಹೇಳಿದ್ದ. ಆ ನಂತರವೇ ಇವರು ಕೀರ್ತನೆಗಳನ್ನು ರಚಿಸಲು ಪ್ರಾರಂಭಿಸಿದ್ದು.
ಇವರ ಮೊದಲ ಹಾಡು ‘ರಕ್ಷಿಸಬೇಕೆನ್ನ ಲಕ್ಷ್ಮೀನರಸಿಂಹನ ಭಕ್ತನೇ’ ಎಂಬುದು. ಮೊದಲೆಲ್ಲಾ ಇವರು ತಮಗೆ ಬಂದ ಹಾಡುಗಳನ್ನು ಪ್ರಕಟಪಡಿಸಿರಲಿಲ್ಲ. ಇದರಿಂದಾಗಿ ಹೊಟ್ಟೆನೋವು, ತಲೆನೋವುಗಳನ್ನು ಅನುಭವಿಸಬೇಕಾಯಿತು. ಅಲ್ಲದೆ ಆ ಮುನಿಯು ಪದೇ ಪದೇ ಸ್ವಪ್ನದಲ್ಲಿ ಕಾಣಿಸಿಕೊಂಡು ‘ನಾನು ಹೇಳಿಕೊಟ್ಟ ಮಂತ್ರವನ್ನೇಕೆ ಹೇಳುತ್ತಿಲ್ಲ?’ ಎಂದು ಗದರತೊಡಗಿದ್ದ. ಸ್ವಪ್ನದಲ್ಲಿ ಬಂದಾಗ ಈಕೆ ಅದೇ ಮುನಿಯನ್ನು ತನ್ನ ಹಾಡುಗಳಿಗೆ ಮುದ್ರಿಕೆಯನ್ನು ಸೂಚಿಸಲು ಹೇಳಿದಾಗ ಆತನೇ ‘ಭೀಮೇಶಕೃಷ್ಣ’ ಎಂದು ಬಳಸಲು ಸಲಹೆಯಿತ್ತನಂತೆ. ಮುಂದೆ ಕೂಡಾ ಇವರು ಅನೇಕ ಹಾಡುಗಳನ್ನು ರಚಿಸಿದರೂ ತನ್ನನ್ನು ಜನ ಆಡಿಕೊಂಡು ನಕ್ಕಾರೆಂಬ ಹೆದರಿಕೆಯಿಂದ ಸುಮ್ಮನೆ ಇದ್ದಾಗ, ಇವರ ತಮ್ಮನ ಹೆಂಡತಿಯ ಕನಸಿನಲ್ಲಿ ಬಂದ ಆ ಮುನಿಯು ಈ ವಿಷಯವನ್ನು ಹೇಳಿದನಂತೆ. ಅಂದಿನಿಂದ ಇವರು ತಮ್ಮ ಕೀರ್ತನೆಗಳನ್ನು ಪ್ರಚಾರಗೊಳಿಸಿದರಂತೆ. ಮುಂದೆ ಇವರು ಕನಸಿನಲ್ಲಿ ಕಂಡುದೆಲ್ಲವೂ ಕೀರ್ತನೆ – ಹಾಡುಗಳ ರೂಪದಲ್ಲಿ ಬರತೊಡಗಿದವು. ಗೋಪಿಕಾಸ್ತ್ರೀಯರು ಉದ್ಧವನೆದುರು ಮಾಡಿದ ಪ್ರಲಾಪ, ಮುಯ್ಯದ ಹಾಡು, ಸುಭದ್ರಾ ಕಲ್ಯಾಣ, ರತಿ ಕಲ್ಯಾಣ, ನಳಚರಿತ್ರೆ, ಸತ್ಯಭಾಮೆಯು ‘ಪತಿದಾನ ಕೊಟ್ಟ ಹಾಡು’ ಮುಂತಾದ ದೊಡ್ಡ ಕೀರ್ತನೆಗಳನ್ನಲ್ಲದೆ ಸಣ್ಣ ಪುಟ್ಟ ಕೀರ್ತನೆಗಳನ್ನೂ ಇವರು ಮೂಡಿಸಿದರು. ಇವರು ಕ್ರಿ. ಶ. 1903ನೇ ಜನವರಿ ತಿಂಗಳ 11ನೇ ತಾರೀಖು ಅಂದರೆ ಪುಷ್ಯ ಶುದ್ಧ 13, ಮುಕ್ಕೋಟಿ ದ್ವಾದಶಿಯ ದಿನ ಮಧ್ಯಾಹ್ನದಲ್ಲಿ ನಿಧನರಾದರು.
ಕೀರ್ತನೆ, ಸುಳಾದಿ, ಉಗಾಭೋಗ ಹೀಗೆ ಮೂರು ಪ್ರಕಾರಗಳಲ್ಲಿಯೂ ಭೀಮವ್ವನರು ಕೃತಿ ರಚನೆ ಮಾಡಿದ್ದು, 143 ಸಣ್ಣ ಕೀರ್ತನೆಗಳನ್ನೂ, 193 ದೊಡ್ಡ ಕೀರ್ತನೆಗಳನ್ನೂ ರಚಿಸಿದ್ದಾರೆ. ಇನ್ನೂ ಒಂದು ಆಶ್ಚರ್ಯದ ಸಂಗತಿ ಎಂದರೆ ಸಾಮಾನ್ಯವಾಗಿ ಉತ್ತರ ಕರ್ನಾಟಕದಲ್ಲಿ ಶ್ರಾವಣ ಮಾಸದಲ್ಲಿಯ ಶುಕ್ರವಾರ ಹಾಗೂ ಶನಿವಾರಗಳಂದು ಲಕ್ಷ್ಮೀದೇವಿಯನ್ನು ಗಡಿಗೆಯ ರೂಪದಲ್ಲಿ ಕೂಡ್ರಿಸಿ ಪೂಜಿಸುವಾಗ ಹಾಡುಗಳು, ಮಂಗಳಗೌರಿಯ ಹಾಡುಗಳು, ಅಲ್ಲದೆ ಜಲಕ್ರೀಡೆ ಹಾಡುಗಳು ಇತ್ಯಾದಿ ಕಥನ, ಕವನಗಳೆಲ್ಲವೂ ಭೀಮವ್ವನವರಿಂದ ರಚಿತಗೊಂಡಿವೆ. ಇವರ ಕಥಾ ವಸ್ತುಗಳು ಸಾಮಾನ್ಯವಾಗಿ ರಾಮಾಯಣ, ಮಹಾಭಾರತ, ಭಾಗವತದ ಘಟನೆಗಳೇ ಆಗಿವೆ. ದ್ರೌಪದಿ ವಸ್ತ್ರಾಪಹರಣದ ಸಮಯದ ಸೀರೆಗಳ ವರ್ಣನೆ, ಇತರ ಕಾವ್ಯಗಳಲ್ಲಿಯ ಆಭರಣಗಳು, ಭಕ್ಷ್ಯ ಭೋಜನಗಳ ವರ್ಣನೆ ಮುಂತಾದವು ತುಂಬಾ ಸುಂದರವಾಗಿವೆ.
ಹೆಣ್ಣಿಗೆ ಮುತ್ತೈದೆತನ, ಸಂತಾನ ಪ್ರಾಪ್ತಿ ಇವುಗಳ ಮಹತ್ವವನ್ನು ತೋರುವ ಮನೋಭಾವ ಭೀಮವ್ವನವರ ಕಾವ್ಯಗಳಲ್ಲಿ ಎದ್ದು ಕಾಣುತ್ತದೆ. ಹಸೆಗೆ ಕರೆಯುವ ಆರತಿಯ ಹಾಡು, ಉರುಟಣೆಯ ಹಾಡು ಇತ್ಯಾದಿ ಸಂಪ್ರದಾಯದ ಹಾಡುಗಳನ್ನೂ ಭೀಮವ್ವನವರು ರಚಿಸಿದ್ದಾರೆ. ಅಷ್ಟೇ ಅಲ್ಲದೆ, ಮಧ್ವಮತದ ತತ್ವಗಳೂ ಅವರ ಕೀರ್ತನೆಗಳಲ್ಲಿ ಕಂಡುಬರುತ್ತವೆ. ಪಂಚವಿಧ ಭಾವಗಳಾದ ದಾಸ್ಯ, ಸಖ್ಯ, ಮಧುರ, ವಾತ್ಸಲ್ಯ ಹಾಗೂ ಶಾಂತ ಇವುಗಳಿಂದ ಇವರು ಭಗವಂತನನ್ನು ಸ್ತುತಿಸಿದ್ದಾರೆ.

ಭೀಮವ್ವನವರ ಕಾವ್ಯಗಳಲ್ಲಿಯ ಸಂಭಾಷಣಾ ತಂತ್ರದ ವೈಶಿಷ್ಟ್ಯವನ್ನು ನೋಡಬೇಕೆಂದರೆ ಸತ್ಯಭಾಮೆ, ಪಾರ್ವತಿ, ಸತ್ಯಭಾಮೆ ರುಕ್ಮಿಣಿ ಸಂವಾದದಲ್ಲಿ ನೋಡಬಹುದು. ರುಕ್ಮಿಣಿ ತಾನು ಪಟ್ಟದ ರಾಣಿ, ಸತ್ಯಭಾಮೆ ಮೆಚ್ಚಿ ಬಂದವಳು ಎಂದು ಮೂದಲಿಸಿದರೆ – ಸತ್ಯಭಾಮೆಯು, ತಂದೆ ತಾಯಿ ಅಣ್ಣಂದಿರನ್ನು ವಂಚಿಸಿ ಪತ್ರಬರೆದು ಒಲಿಸಿಕೊಂಡು ಓಡಿಬಂದವಳು ಎಂದು ಹಳಿಯುತ್ತಾಳೆ. ಈ ರೀತಿ ಕಥೆಯನ್ನು ಪಾತ್ರಗಳ ಬಾಯಿಂದಲೇ ಹೇಳಿಸುವ ರೀತಿ ಅನನ್ಯವಾದದ್ದು. ಅಸಾಮಾನ್ಯ ಗ್ರಹಣಶಕ್ತಿ, ಸ್ಮರಣಶಕ್ತಿ, ಧಾರಣ ಹಾಗೂ ಪ್ರತಿಭೆ ಮೆಚ್ಚುವಂತಹದು. ಇವರಿಗೆ ‘ಅವ್ವನವರೂ’ ಎಂದೂ ಹೇಳುತ್ತಾರೆ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ತಿರುಪ್ಪಾವೈ 27 | Thiruppavai 27 |

Wed Mar 9 , 2022
  ನೀನೀವ ಪಾಣೆ ಮೊಸರು ಹಾಲೋಗರ ಮಧುವನ್ನು ಸೇವಿಸುವೆವು. ಕೂಡಾರೈವೆಲ್ಲುಂ ಶೀರ್‌ಗೋವಿಂದಾ ಉನ್ತನ್ನೈ ಪ್ಪಾಡಿಪರೈಗೊಂಡು ಯಾಂ ಪೆರುಶಮ್ಮಾನಂ ನಾಡು ಪುಹಳುಂ ಪರಿಶಿನಾಲ್ ನನ್ರಾಹ ಶೂಡಹಮೇ ತೋಳ್ವಳೈಯೇ ತೋಡೇ ಶೆವಿಪ್ಪೂವೇ ಪಾಡಗಮೇ ಯೆನ್ರನಯ ಪಲ್ಕಲನುಂ ಯಾಂ ಅಣಿವೋಂ ಆಡೈಯುಡುಪ್ಪೋಂ ಅದನ್ವಿನ್ನೇ ಪಾರ್ಚೋರ ಮೂಡ ನೆಯ್ ಪೆಯ್‍ದ್ ಮುಳಂಗೈವಳಿವಾರ ಕ್ಕೂಡಿಯಿರಂದು ಕುಳಿರ್ರ್ನ್ದೇಲೋರೆಂಬಾವಾಯ್ ಭಾವಾನುವಾದ – 27 ಇರಲಿ ನಿನ್ನೊಲವಿನಾಸರೆ ನಮಗೆ ನೀನನಾಥ ಬಂಧು ಧರಣೀಧರನೆ ಗೋವಿಂದಾ ನೀನೊಲಿದ ನಂತರವೇ ಧರಿಸುವೆವು ನಾವ್ ಸಕಲಾಭರಣದುಡಿಗೆ […]

Advertisement

Wordpress Social Share Plugin powered by Ultimatelysocial