ಮರೆಯಾದ ಕೊರೊನಾ; ಮರಳಿದ ಹೋಳಿ ಸಂಭ್ರಮ

 

 

 

 

 

 

 

 

 

ಹೊಸಪೇಟೆ (ವಿಜಯನಗರ): ಕೊರೊನಾ ಸೋಂಕಿನಿಂದ ಎರಡು ವರ್ಷ ಕಳೆಗುಂದಿದ್ದ ಹೋಳಿ ಹಬ್ಬದ ಸಂಭ್ರಮ ಈ ವರ್ಷ ಮರಳಿದೆ.

ಕೊರೊನಾ ಸೋಂಕು ವ್ಯಾಪಕವಾಗಿ ಹರಡಿ ಕೋವಿಡ್‌ ಪ್ರಕರಣಗಳು ಹೆಚ್ಚಾಗಿದ್ದರಿಂದ 2020, 2021ನೇ ಸಾಲಿನಲ್ಲಿ ಹೋಳಿ ಹಬ್ಬದ ಸಂಭ್ರಮ ಕಳೆಗುಂದಿತ್ತು.

ಕಾಮದಹನ, ರಂಗಿನಾಟವಾಡಲು ಜನರಿಗೆ ಸಾಧ್ಯವಾಗಿರಲಿಲ್ಲ. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಎಲ್ಲೆಡೆ ಹಬ್ಬದ ಸಂಭ್ರಮ ಗರಿಗೆದರಿದೆ.

ಸಾರ್ವಜನಿಕರಲ್ಲಿ ರಂಗಿನಾಟದ ಸಂಭ್ರಮ ಮನೆ ಮಾಡಿದರೆ, ರಂಗು ಮಾರಾಟ ಮಾಡುವ ವ್ಯಾಪಾರಿಗಳಲ್ಲಿ ಕೈತುಂಬ ಹಣ ಗಳಿಸುವ ಭರವಸೆ ಮೂಡಿದೆ. ಹಬ್ಬಕ್ಕೆ ಇನ್ನೆರಡು ದಿನಗಳು ಉಳಿದಿವೆ. ಆದರೆ, ವಾರಕ್ಕೂ ಮುಂಚೆಯೇ ನಗರದ ಹಲವು ಬಡಾವಣೆಗಳಲ್ಲಿ ಸಂಭ್ರಮ, ಸಡಗರದ ವಾತಾವರಣ ಸೃಷ್ಟಿಯಾಗಿದೆ. ಯುವಕರು, ಚಿಣ್ಣರು ಗುಂಪು ಕಟ್ಟಿಕೊಂಡು, ತಮಟೆ ಬಾರಿಸುತ್ತ ಮನೆ, ಮನೆಗೆ ತೆರಳಿ ಚಂದಾ ಸಂಗ್ರಹಿಸುತ್ತಿದ್ದಾರೆ. ಕಾಮದಹನ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಆಚರಿಸಲು ಸಿದ್ಧತೆ ನಡೆಸಿದ್ದಾರೆ. ಅದಕ್ಕೂ ಮಿಗಿಲಾಗಿ ರಂಗಿನಾಟವಾಡಲು ಯೋಜನೆ ಹಾಕಿಕೊಂಡಿದ್ದಾರೆ.

ನಗರದ ಬಹುತೇಕ ಮಳಿಗೆಗಳಲ್ಲಿ ವಿವಿಧ ಬಗೆಯ ನೈಸರ್ಗಿಕ ಬಣ್ಣಗಳನ್ನು ಮಾರಾಟಕ್ಕೆ ಇಡಲಾಗಿದೆ. ಅದರೊಂದಿಗೆ ಪಿಚಕಾರಿ ಸೇರಿದಂತೆ ಚಿಣ್ಣರ ಆಟಿಕೆಗಳನ್ನು ಮಾರುತ್ತಿದ್ದಾರೆ. ಇದು ಸಹಜವಾಗಿಯೇ ಮಕ್ಕಳನ್ನು ಸೆಳೆಯುತ್ತಿದೆ. ಭರ್ಜರಿ ವ್ಯಾಪಾರ ಆಗುತ್ತಿರುವುದರಿಂದ ವ್ಯಾಪಾರಿಗಳ ಮೊಗದಲ್ಲಿ ಮಂದಹಾಸ ಮೂಡಿದೆ.

‘ಈ ಹಿಂದಿನ ಎರಡು ವರ್ಷ ಕೋವಿಡ್‌ನಿಂದ ಜನ ಬಣ್ಣದಾಟವಾಡಿರಲಿಲ್ಲ. ಖರೀದಿಸಿ ತಂದಿದ್ದ ಬಣ್ಣವೆಲ್ಲ ಹಾಳಾಗಿ ನಷ್ಟ ಉಂಟಾಗಿತ್ತು. ಆದರೆ, ಈ ವರ್ಷ ಕೋವಿಡ್‌ ಪ್ರಕರಣಗಳು ಬಹುತೇಕ ಕಡಿಮೆಯಾಗಿವೆ. ಹಬ್ಬ ಆಚರಿಸಲು ಸರ್ಕಾರ ಅನುಮತಿ ನೀಡಿದೆ. ಜನ ಉತ್ಸಾಹದಿಂದ ಬಂದು ಬಣ್ಣ ಖರೀದಿಸುತ್ತಿದ್ದಾರೆ’ ಎಂದು ಸ್ಥಳೀಯ ವ್ಯಾಪಾರಿ ಕಿಶನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜನರಲ್ಲಿ ಸಾಕಷ್ಟು ತಿಳಿವಳಿಕೆ ಬಂದಿದೆ. ಎಲ್ಲರೂ ನೈಸರ್ಗಿಕ ಬಣ್ಣಗಳನ್ನೇ ಹೆಚ್ಚಾಗಿ ಕೇಳುತ್ತಾರೆ. ನಾವು ಕೂಡ ಅವುಗಳನ್ನೇ ಹೆಚ್ಚಾಗಿ ಇಟ್ಟಿದ್ದೇವೆ. ಇನ್ನು, ಮಕ್ಕಳ ಪಿಚಕಾರಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಹಬ್ಬಕ್ಕೆ ಇನ್ನೆರಡು ದಿನಗಳು ಉಳಿದಿದ್ದು, ಕೊನೆಯ ದಿನದ ವರೆಗೂ ಮಾರಾಟವಾಗುತ್ತವೆ. ಈ ವರ್ಷ ಹೆಚ್ಚಿನ ಲಾಭ ಸಿಗದಿದ್ದರೂ ಕನಿಷ್ಠ ನಷ್ಟವಾದರೂ ಉಂಟಾಗುವುದಿಲ್ಲ’ ಎಂದು ಹೇಳಿದರು.

‘ಎರಡು ವರ್ಷ ರಂಗಿನಾಟ ಆಡಿರಲಿಲ್ಲ. ಈ ವರ್ಷ ಮನೆಯವರು, ಸ್ನೇಹಿತರೊಂದಿಗೆ ಕೂಡಿಕೊಂಡು ಬಣ್ಣದಾಟ ಆಡುತ್ತೇವೆ. ಕಾಮದಹನಕ್ಕೂ ವ್ಯವಸ್ಥೆ ಮಾಡಲಾಗಿದೆ. ಹಬ್ಬ ಅಂದರೆ ಸಂಭ್ರಮ ಇರಬೇಕು ತಾನೇ?’ ಎಂದು ಪ್ರಶ್ನಿಸಿದರು ಸ್ಥಳೀಯ ಯುವಕರಾದ ರಾಜೇಶ್‌, ಕರಣ್‌.

ಹಂಪಿಯಲ್ಲೂ ರಂಗಿನಾಟ

ಕೋವಿಡ್‌ ಪ್ರಕರಣಗಳ ಸಂಖ್ಯೆ ಬಹಳಷ್ಟು ತಗ್ಗಿರುವುದರಿಂದ ದೇಶ-ವಿದೇಶಗಳಿಂದ ಹಂಪಿಗೆ ಬರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಅದರಲ್ಲೂ ಹೋಳಿ ಹಬ್ಬದ ರಂಗಿನಾಟಕ್ಕೆಂದೇ ವಿದೇಶಿಯರು ಮೊದಲಿನಿಂದಲೂ ಹಂಪಿಗೆ ಬರುತ್ತಾರೆ. ಈ ಹಿಂದಿನ ಎರಡು ವರ್ಷ ಬಂದಿರಲಿಲ್ಲ. ಆದರೆ, ಈ ವರ್ಷ ಬರುವ ನಿರೀಕ್ಷೆ ಇದೆ ಎಂದು ಸ್ಥಳೀಯ ನಿವಾಸಿ ರಾಚಯ್ಯ, ರಾಜು ತಿಳಿಸಿದರು.

ವಿದೇಶಿಯರು ಸ್ಥಳೀಯರೊಂದಿಗೆ ಬೆರೆತು, ಮೈಮರೆತು ಹಂಪಿಯಲ್ಲಿ ಹೋಳಿ ರಂಗಿನಾಟದಲ್ಲಿ ಭಾಗವಹಿಸಿ ಕುಣಿದು ಕುಪ್ಪಳಿಸುತ್ತಾರೆ. ಈ ಕಾರಣಕ್ಕೆ ಹಂಪಿಯಲ್ಲಿ ಆಚರಿಸಲಾಗುವ ಹೋಳಿಗೆ ವಿಶೇಷ ಮಹತ್ವವಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅದಕ್ಕಾಗಿಯೇ ಪೋಷಕರು ತಮ್ಮ ಮಕ್ಕಳ ಮೇಲೆ ಉತ್ತಮ ಶ್ರೇಣಿಗಳಿಗಾಗಿ ಒತ್ತಡವನ್ನು ಹಾಕಬಾರದು!

Thu Mar 17 , 2022
ಶಿಕ್ಷಣವು ಜಗತ್ತನ್ನು ಬದಲಾಯಿಸಲು ನೀವು ಬಳಸಬಹುದಾದ ಅತ್ಯಂತ ಶಕ್ತಿಶಾಲಿ ಅಸ್ತ್ರವಾಗಿದೆ, ನೆಲ್ಸನ್ ಮಂಡೇಲಾ ಅವರ ಈ ಸ್ಪೂರ್ತಿದಾಯಕ ಉಲ್ಲೇಖವು ವ್ಯಕ್ತಿಯ ಜೀವನದಲ್ಲಿ ಶಿಕ್ಷಣವು ಹೇಗೆ ಪ್ರಮುಖವಾಗಿದೆ ಎಂಬುದರ ಕುರಿತು ನಮಗೆ ತಿಳಿಸುತ್ತದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ, ಸಮಾಜಗಳು ಶೈಕ್ಷಣಿಕ ಉತ್ಕೃಷ್ಟತೆಯನ್ನು ಪ್ರಮುಖ ಆದ್ಯತೆಯಾಗಿ ಪರಿಗಣಿಸುತ್ತಿವೆ. ನಮ್ಮ ಶಿಕ್ಷಣ ಸಂಸ್ಥೆಗಳು ಉಜ್ವಲ ವಿದ್ಯಾರ್ಥಿಗಳನ್ನು ಹುಡುಕುತ್ತಿರುವುದರಿಂದ, ನಿಸ್ಸಂದೇಹವಾಗಿ, ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳು ಗುಣಮಟ್ಟಕ್ಕೆ ಹೊಂದಿಕೆಯಾಗುವ ಯಶಸ್ಸನ್ನು ಪಡೆಯುವುದನ್ನು ನೋಡಬೇಕೆಂದು ಆಶಿಸುತ್ತಾರೆ. ಪರಿಣಾಮವಾಗಿ, […]

Advertisement

Wordpress Social Share Plugin powered by Ultimatelysocial