ಅಗಲಿದ ಕಬೀರ ಇಬ್ರಾಹಿಂ ಸುತಾರ!

ಕನ್ನಡನಾಡಿನ ಇಂದಿನ ಯುಗದ ಕಬೀರರೆಂಬ ಭಾವ ಮೂಡಿಸಿದ್ದ ಇಬ್ರಾಹಿಂ ಸುತಾರ ಇಂದು ಮುಂಜಾನೆ ಈ ಲೋಕವನ್ನಗಲಿದ್ದಾರೆ.ಮಹಾಲಿಂಗಪುರದ ಇಬ್ರಾಹಿಂ ಸುತಾರ ವೈದಿಕ, ವಚನ ಹಾಗೂ ಸೂಫಿ ಪರಂಪರೆ ಆಶಯಗಳ ಹದ ಪಾಕವನ್ನು ಭಜನೆ, ಪ್ರವಚನ, ಸಂವಾದಗಳ ಮೂಲಕ ಉಣಬಡಿಸಿದ ಮಹಾನುಭಾವ.ಇಬ್ರಾಹಿಂ ಸುತಾರ 1940ರ ಮೇ 10ರಂದು ಜನಿಸಿದರು. ತಂದೆ ಮಹಾಲಿಂಗಪುರದಲ್ಲಿ ಬಡಗಿ ವೃತ್ತಿ ಮಾಡುತ್ತಿದ್ದ ನಬಿಸಾಹೇಬ್. ತಾಯಿ ಅಮೀನಾಬಿ. ಮನೆಯಲ್ಲಿನ ಬಡತನ ಮೂರನೇ ತರಗತಿಗೆ ಅವರ ಶಿಕ್ಷಣವನ್ನು ನಿಲ್ಲಿಸಿತು. ಊರಿನ ಬಹುಸಂಖ್ಯಾತರ ಉದ್ಯೋಗ ನೇಕಾರಿಕೆಯನ್ನೇ ಸುತಾರ ಕಲಿತರು. ಬದುಕಿಗೆ ಅದೇ ದಾರಿಯಾಯಿತು.ಇಬ್ರಾಹಿಂ ಸುತಾರ ಬಾಲ್ಯದಲ್ಲಿ ಮಸೀದಿಗೆ ಹೋಗಿ ಅಲ್ಲಿ ಧರ್ಮಗುರುಗಳ ಮಾರ್ಗದರ್ಶನದಲ್ಲಿ ನಮಾಜು, ಪ್ರಾರ್ಥನೆ ಕಲಿತು ಕುರಾನ್ ಅಧ್ಯಯನ ಮಾಡಿದರು. ಈ ವೇಳೆ ಬೇರೆ ಧರ್ಮಗಳ ಸಾರ ಅರಿಯುವ ಆಶಯ ಅವರಲ್ಲಿ ಮೊಳಕೆಯೊಡೆಯಿತು. ಅದಕ್ಕೆ ಊರಿನ ಸಾಧುನ ಗುಡಿಯಲ್ಲಿದ್ದ ಭಜನಾ ಸಂಘ ಒತ್ತಾಸೆ ನೀಡಿತು. ಅಲ್ಲಿನ ಧಾರ್ಮಿಕರ ಸಾಂಗತ್ಯದಲ್ಲಿ ತತ್ವಪದ, ವಚನಗಳನ್ನು ಕಲಿತರು. ಉಪನಿಷತ್ತಿನ ಸಾರ ಅರಿತುಕೊಂಡರು. ರಮ್ಜಾನ್ ವೇಳೆ ಮುಂಜಾನೆ ಜನರನ್ನು ಎಬ್ಬಿಸಲು ಹಳ್ಳಿಗಳಿಗೆ ಹಾಡುತ್ತಾ ಹೋಗುತ್ತಿದ್ದ ತಂಡದಲ್ಲಿ ಸಂಚರಿಸಿ ಜೀವನಾನುಭವ ಪಡೆದುಕೊಂಡ ಅವರು, ಮಹಾಲಿಂಗಪುರದಲ್ಲಿ ಬಸವಾನಂದ ಸ್ವಾಮಿಗಳ ಪುಣ್ಯಾರಾಧನೆ ನಿಮಿತ್ತ ಪ್ರತಿ ವರ್ಷ ಒಂದು ತಿಂಗಳು ಕಾಲ ಬೆಳಿಗ್ಗೆ ಹಾಗೂ ಸಂಜೆ ನಡೆಯುತ್ತಿದ್ದ ಪ್ರವಚನ ಕೇಳುತ್ತಿದ್ದರು. ‘ಅಲ್ಲಿನ ಧಾರ್ಮಿಕ ಚಿಂತನೆಗಳು ನನ್ನಲ್ಲಿನ ತಿಳಿವಳಿಕೆ ವಿಸ್ತರಿಸಲು ನೆರವಾಯಿತು’ ಎಂದು ಸುತಾರ ಸ್ಮರಿಸಿಕೊಳ್ಳುತ್ತಿದ್ದರು.ದೇವರು, ಧರ್ಮ, ಆರಾಧನೆಯ ವಿಧಾನ ಬೇರೆ ಬೇರೆಯಾದರೂ ಸತ್ಯ ಒಂದೇ ಎಂಬ ಸಂಗತಿ ಇಬ್ರಾಹಿಂ ಸುತಾರ ಅವರ ಅರಿವಿಗೆ ಬಂತು. ಜೊತೆಗೆ ತತ್ವಪದಗಳ ಅರಿವು, ನಿಜಗುಣ ಶಿವಯೋಗಿಗಳ ಶಾಸ್ತ್ರ, ಭಗವದ್ಗೀತೆಯ ಅಧ್ಯಯನ ಭವದ ಅರಿವು ವಿಸ್ತಾರಗೊಳಿಸಿತು’ ಎಂದು ವಿನಮ್ರವಾಗಿ ಹೇಳುತ್ತಿದ್ದರು.
1970ರಲ್ಲಿ ಸಾಧುನ ಗುಡಿಯಲ್ಲಿಯೇ ಸಮಾನ ಮನಸ್ಕ ಗೆಳೆಯರು ಸೇರಿ ‘ಭಾವೈಕ್ಯದ ಜನಪದ ಸಂಗೀತ ಮೇಳ’ ಆರಂಭಿಸಿದ್ದರು. ಅದರ ಮೂಲಕ ಭಜನೆ, ತತ್ವಪದಗಳ ಹಾಡುತ್ತಾ ಜನಸಾಮಾನ್ಯರಿಗೆ ಧರ್ಮದ ಸಾರ ಮನವರಿಕೆ ಮಾಡತೊಡಗಿದರು. 1980ರಲ್ಲಿ ತರೂರಿನ ಶಂಭುಲಿಂಗ ಶಾಸ್ತ್ರಿಗಳು ಮೊದಲ ಬಾರಿಗೆ ಮಹಾರಾಷ್ಟ್ರದ ಜತ್ ತಾಲ್ಲೂಕಿನ ಸಿಂಧೂರಿನಲ್ಲಿ (ವೀರ ಸಿಂಧೂರ ಲಕ್ಷ್ಮಣನ ಹುಟ್ಟೂರು) ಶ್ರಾವಣ ಮಾಸದಲ್ಲಿ ತಿಂಗಳ ಕಾಲ ಪ್ರವಚನ ಮಾಡುವ ಕಾರ್ಯಕ್ಕೆ ಸುತಾರ ಅವರನ್ನು ಕಳುಹಿಸಿದ್ದರು. ಮಹಾರಾಷ್ಟ್ರದಲ್ಲಿನ ಕನ್ನಡ ನೆಲದಲ್ಲಿ ಭಾವೈಕ್ಯತೆ ಹರಡುವ ಚೈತ್ರ ಯಾತ್ರೆ ಸುತಾರ ಆರಂಭಿಸಿದ್ದರು. ಅಲ್ಲಿಂದ ಪ್ರತಿ ವರ್ಷ ನಾಡಿನ ಉದ್ದಗಲಕ್ಕೂ ಪ್ರವಚನ, ಸಂವಾದ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದರು.ಧರ್ಮದ ಕಠಿಣ ಅಂಶಗಳನ್ನು ಸರಳವಾಗಿ ಜನಸಾಮಾನ್ಯರಿಗೆ ತಿಳಿಯುವಂತೆ ಮಾಡಲು ಪ್ರಶ್ನೋತ್ತರದ ಜೊತೆಗೆ ತತ್ವಪದ ಹಾಡುವುದನ್ನು ರೂಢಿಸಿಕೊಂಡಿದ್ದರು.ಇಬ್ರಾಹಿಂ ಸುತಾರ ಅವರ ಚಿಂತನೆಗಳು ಪುಸ್ತಕಗಳಲ್ಲಿ ಮತ್ತು ಶ್ರವ್ಯ ಮಾಧ್ಯಮಗಳಲ್ಲೂ ಜನಪ್ರಿಯತೆ ಗಳಿಸಿವೆ.ಇಬ್ರಾಹಿಂ ಸುತಾರ ಅವರಿಗೆ 2018ರಲ್ಲಿ ಕೇಂದ್ರ ಸರ್ಕಾರ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಿತ್ತು. 1995ರಲ್ಲಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಂದಿತ್ತು.ಅಗಲಿದ ಮಹಾನ್ ಚೇತನಕ್ಕೆ ನಮನ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಾನಿ ಮತ್ತು ಕೀರ್ತಿ ಸುರೇಶ್ ತಮ್ಮ ಮುಂಬರುವ ಚಿತ್ರ ದಸರಾವನ್ನು ಪ್ರಾರಂಭ!!

Wed Feb 16 , 2022
ನ್ಯಾಚುರಲ್ ಸ್ಟಾರ್ ನಾನಿ ಅವರು ನಟನಾಗಿ ಹೊಸ ಪಯಣವನ್ನು ಪ್ರಾರಂಭಿಸಿದರು ಏಕೆಂದರೆ ಅವರು ವಿಭಿನ್ನ ರೀತಿಯ ಚಿತ್ರಗಳನ್ನು ಮಾತ್ರ ಮಾಡುತ್ತಿದ್ದಾರೆ ಅದು ಅವರನ್ನು ಹಿಂದೆಂದೂ ನೋಡಿರದ ಪಾತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಪ್ರಸ್ತುತಪಡಿಸುತ್ತದೆ. ಶ್ಯಾಮ್ ಸಿಂಘ ರಾಯ್ ಅವರ ಯಶಸ್ಸಿನೊಂದಿಗೆ ಉನ್ನತ ಸವಾರಿ ಮಾಡುತ್ತಿರುವ ನಾನಿ, ದಸರಾ ಶೀರ್ಷಿಕೆಯ ಚಲನಚಿತ್ರಕ್ಕಾಗಿ ಮೊದಲ-ಟೈಮರ್ ಮತ್ತು ಅತ್ಯಂತ ಪ್ರತಿಭಾವಂತ ಶ್ರೀಕಾಂತ್ ಒಡೆಲಾ ಅವರೊಂದಿಗೆ ತಂಡಗಳು. ಸುಧಾಕರ್ ಚೆರುಕುರಿ ಅವರು ತಮ್ಮ ಶ್ರೀ ಲಕ್ಷ್ಮಿ ವೆಂಕಟೇಶ್ವರ […]

Advertisement

Wordpress Social Share Plugin powered by Ultimatelysocial