ನೀರಿನ ಬಾಯಾರಿಕೆ IIntrospective look on World Water Day |

 
ಮಾರ್ಚ್ 22 ವಿಶ್ವ ನೀರಿನ ದಿನವಂತೆ. ಕೆಲವೊಮ್ಮೆ ಈ ವಿಚಿತ್ರದ ದಿನಗಳನ್ನು ನೆನೆದು ಭಾರತೀಯ ಸಾಮಾನ್ಯ ಮನುಷ್ಯ ಗಹಗಹಿಸಿ ನಗುತ್ತಾನೆ. ಆ ನಗು ಒಂದು ರೀತಿಯಲ್ಲಿ ಬಹಳಷ್ಟು ಹೇಳುತ್ತದೆ. ಹೇಳಲಾಗದ ಅನೇಕತೆಗಳನ್ನು ತನ್ನಲ್ಲಿ ಅಡಗಿಸಿಕೊಂಡು, ಇದೇ ನಮಗೆ ಬರೆದಿರುವ ಬದುಕು, ಇದಕ್ಕೆ ವ್ಯಾಖ್ಯೆ ಬೇಕೆ ಎಂದು ಮೌನಿಯಾಗಿಯೂ ಇರುತ್ತದೆ.
ಒಮ್ಮೆ ಎಂಬತ್ತರ ದಶಕದಲ್ಲಿ ಬೆಂಗಳೂರಿನಲ್ಲಿ ನೀರಿನ ಹಾಹಾಕಾರವಾಗಿ ಮಧ್ಯರಾತ್ರಿಯಲ್ಲಿ ಎಲ್ಲೋ ನೀರಿನ ಸರಬರಾಜು ಮಾಡುವ ಲಾರಿಯ ಸದ್ದು ಕೇಳಿದಾಗ ಎಷ್ಟೆಷ್ಟೋ ದೂರದಿಂದ ಮನೆಯಲ್ಲಿರುವ ಬಕೆಟ್ಟು, ಪಾತ್ರೆಗಳನ್ನೆಲ್ಲಾ ತೆಗೆದುಕೊಂಡು ಹೋಗಿ ಸರದಿಯಲ್ಲಿ ನಿಂತು ಒಂದಷ್ಟು ಮಧ್ಯೆ ನುಗ್ಗುವವರ ಜೊತೆ ಕಿತ್ತಾಡಿ ಮನೆಮಂದಿಯೆಲ್ಲಾ ಏದುಸಿರು ಬಿಡುತ್ತಾ ನೀರು ಹೊತ್ತು ತರುತ್ತಿದ್ದುದು ನೆನಪಾಗುತ್ತಿದೆ. ನಮಗೆಲ್ಲಾ ಅದು ಅಂತಹ ದೊಡ್ಡ ಸಂಗತಿ ಎನಿಸಿರಲಿಲ್ಲ. ಕಾರಣ ಅದು ಇಂದೋ ನಾಳೆಯೋ ಸರಿ ಹೋಗುವ ವಿಚಾರ ಎಂದು ಅನಿಸುತ್ತಿತ್ತು. ಇನ್ನೊಂದು ಸಂಗತಿ ನಾವು ನೀರಿಗೆ ಅದಕ್ಕಿಂತ ಹೆಚ್ಚಿನ ಕಷ್ಟವನ್ನು ಕೂಡಾ ನೋಡಿದ್ದೆವು.
ಅಂದಿನ ದಿನದ ವಠಾರದ ಜೀವನದಲ್ಲಿ ನಾವು ಹನ್ನೆರಡು ಮನೆಗಳಿಗೆ ಒಂದು ನಲ್ಲಿ ಎರಡು ಶೌಚಾಲಯ ಮಾತ್ರ ಇದ್ದ ವಾತಾವರಣದಲ್ಲಿ ಬದುಕಿದ್ದೆವು. ಒಂದೊಂದು ನೀರಹನಿಯ ಬೆಲೆ, ಅದರ ಕಿತ್ತಾಟ ಅವೆಲ್ಲದರ ನಡುವೆಯೂ ಒಬ್ಬರನ್ನೊಬ್ಬರು ಆತ್ಮೀಯವಾಗಿ ಸಹಿಸುವ ಸಹಜೀವನ ನಮ್ಮನ್ನು ಒಡಮೂಡಿಸಿತ್ತು. ಇದು ನೀರಿನ ವಿಚಾರವಾದ್ದರಿಂದ ಈ ಮಾತು ಇಲ್ಲಿಗೇ ಇರಲಿ. ನಾವು ನಮ್ಮ ಕಥೆಯನ್ನೇ ಹೇಳುತ್ತಿರುತ್ತೇವೆ. ಪ್ರಪಂಚದಲ್ಲಿ ಎಷ್ಟು ಜನ ನೀರಿಲ್ಲದೆ ಭೀಕರತೆಯಿಂದ ಬದುಕುತ್ತಿದ್ದಾರೆ ಎಂಬುದನ್ನು ನೋಡುವುದೇ ಇಲ್ಲ.
ಅಂದಿನ ದಿನದಲ್ಲಿ ಕನಕಪುರದಲ್ಲಿ ನಮ್ಮ ರಾಮಕೃಷ್ಣ ಹೆಗ್ಗಡೆ ಅವರು ಮೊದಲಬಾರಿಗೆ ಚುನಾವಣೆಗೆ ಸ್ಪರ್ಧಿಸಿದಾಗ ಅವರ ಪರ ಪ್ರಚಾರ ಕೈಗೊಂಡಿದ್ದಾಗ ನೋಡಿದ ಘಟನೆ ನಾವು ಬದುಕಿನಲ್ಲಿ ನೋಡಿದ್ದ ನೀರಿನ ಕಷ್ಟಗಳೆಲ್ಲಾ ಏನೂ ಇಲ್ಲ ಎನಿಸುವಂತೆ ಮಾಡಿದ್ದವು. ಒಂದು ಹಾಸ್ಟೆಲ್ಲಿನ ಸ್ನಾನದ ನೀರಿನ ಹೊರದ್ವಾರದ ಬಳಿ ಬಕೆಟ್ ಇಟ್ಟುಕೊಂಡು ಆ ನೀರಿಗೂ ಕಾಯುತ್ತಿದ್ದ ಜನರನ್ನು ನೋಡಿ ಆದ ಹೃದಯದ ತಳಮಳ ಅಷ್ಟಿಷ್ಟಲ್ಲ. ಅದೇ ರೀತಿ ಅಂದಿನ ದಿನದಲ್ಲಿ ನಮ್ಮ ಗೆಳೆಯರು ಸಂಘಟಿಸುತ್ತಿದ್ದ ಆರೋಗ್ಯ ಶಿಬಿರಗಳಿಗೆ ಕಾಯಕ ನೀಡಲು ಹೋದ ಕೆಲವೊಂದೆಡೆಗಳಲ್ಲಿ ಕೂಡಾ ಅಂತಹದ್ದೇ ನೀರಿಗೆ ಜನ ಪರದಾಟ ಪಡುವ ಹೃದಯ ಕಲಕುವ ಅನೇಕ ಘಟನೆಗಳನ್ನು ಕಂಡು ಅಯ್ಯೋ ನಮ್ಮ ಮಾನವ ಜೀವನವೇ ಎಂದು ನಮ್ಮ ಹೃದಯಗಳು ಮರುಗಿದೆ. ಅಂತಹ ಸಂದರ್ಭದಲ್ಲೇ ಇರಬೇಕು ನಮ್ಮ ನಜೀರ್ ಸಾಬರು ಅಷ್ಟು ಉತ್ತಮ ಕೆಲಸ ಮಾಡಿ ನೀರು ಸಾಬರಾಗಿದ್ದು. ಇಂತಹ ಸಂದರ್ಭದಲ್ಲಿ ಆ ಶ್ರೇಷ್ಠ ಮಹಾತ್ಮನನ್ನು ನೆನೆಯಬೇಕು. ಇಷ್ಟು ದೊಡ್ಡ ವೆಬ್ ನಲ್ಲಿ ಅಂತಹ ಮಹಾತ್ಮನ ಬಗ್ಗೆ ನಾಲ್ಕು ಸಾಲು ಕೂಡಾ ಕಾಣುವುದಿಲ್ಲ. ನಮ್ಮ ಲೋಕಕ್ಕೆ ಬರ ಬರದೆ ಇನ್ನೇನಾದೀತು ಎನಿಸುತ್ತದೆ. ಮೊನ್ನೆ ಕುಮಾರವ್ಯಾಸನ ವಿರಾಟ ಪರ್ವ ಓದುತ್ತಿದ್ದಾಗ ಒಂದು ಮಾತು ಮನತಟ್ಟಿತು: “ಎಲ್ಲೆಡೆಯೂ ಬರದ ಹಾಹಾಕಾರವಿದ್ದಾಗ ವಿರಾಟನ ಸಂಸ್ಥಾನ ಮಾತ್ರಾ ಹಸುರು ಗೋವುಗಳಿಂದ ಸಮೃದ್ಧವಾಗಿತ್ತು. ಕಾರಣ ಅಲ್ಲಿ ಧರ್ಮಜನಿದ್ದ!”.
ಅಂದ ಹಾಗೆ ಎಂ. ಎಸ್. ಸತ್ಯು ಅವರ ಅನಂತಮೂರ್ತಿಗಳ ಕಥೆ ಆಧಾರಿತ ‘ಬರ’ ಚಿತ್ರ ಮೂಡಿಸಿದ ಹೃದಯಸ್ಪರ್ಶಿ ಚಿತ್ರಣ ಕೂಡಾ ಮನಸ್ಸಿನಲ್ಲಿ ಹಾದು ಹೋಗುತ್ತಿದೆ.
ಒಮ್ಮೆ ನೀರಿನ ಗದ್ಧಲ ಎದ್ದಾಗ ನಮ್ಮ ಅಟಲ್ ಬಿಹಾರಿ ವಾಜಪೇಯಿ ಹೇಳಿದ್ದರು. ನೀರಿನ ಬಗ್ಗೆ ರಾಜಕೀಯದ ಹುಡುಗಾಟ ಆಡಬೇಡಿ ನೀರು ಕೂಡಾ ಬೆಂಕಿಯಾಗಿ ನಮ್ಮೆಲ್ಲರನ್ನೂ ಸುಟ್ಟೀತು ಅಂತ. ವಾಜಪೇಯಿ ಅವರು ಹೇಳಿದ್ದು ನಮ್ಮಲ್ಲಿ ಉದ್ಭವಿಸುವ ನೀರಿನ ಕುರಿತ ಒಳಜಗಳ ಬಗ್ಗೆ ಅನಿಸಬಹುದಾದರೂ ಅದಕ್ಕೆ ಇನ್ನೂ ಹೆಚ್ಚಿನ ವ್ಯಾಪ್ತಿ ಇದೆ ಎನಿಸುತ್ತದೆ. ನಾನು ವಿದೇಶದಲ್ಲಿದ್ದ ಸಂದರ್ಭದಲ್ಲಿ ನನ್ನ ಆತ್ಮೀಯ ವಿದ್ವಾಂಸರೊಬ್ಬರು ಹೇಳುತ್ತಿದ್ದರು. “ಹಿಮಾಲಯದಲ್ಲಿ ಕಡಿಮೆಯಾಗುತ್ತಿರುವ ಹಿಮದ ಗ್ಲೇಜಿಯರ್ರುಗಳು ನಿಮ್ಮ ಭಾರತೀಯ ಉಪಖಂಡದ ನದಿಗಳ ಮೇಲೆ ಭೀಕರ ಪ್ರಭಾವ ಭೀರುವ ಕಾರಣದಿಂದಾಗಿ, ನಿಮ್ಮ ನೆಲೆಯಲ್ಲಿ ಪರಮಾಣು ಯುದ್ಧದ ಭೀತಿ ವಿಶ್ವದ ಇತರೆಡೆಗಳಿಗಿಂತ ಹೆಚ್ಚಿದೆ” ಅಂತ.
ಈ ಎಲ್ಲಾ ವಿಚಾರಗಳ ಆಚೆ ಕೂಡಾ ನೀರು ಎಂಬ ನಮ್ಮ ಬಾಯಾರಿಕೆಯ ಹಂತದ ವಿವಿಧ ಮುಖಗಳನ್ನು ಈ ಸಂದರ್ಭದಲ್ಲಿ ನೋಡುವುದು ಅತಿ ಅವಶ್ಯಕ ಎನಿಸುತ್ತದೆ:
೧. ನಾವುಗಳೆಲ್ಲಾ ಜಲಾಶ್ರಿತ ಮತ್ತು ಜಲಾವೃತ ಜೀವಿಗಳಾಗಿದ್ದು, ನಮ್ಮ ದೇಹದ ಶೇಕಡಾ 60 ರಷ್ಟು ಭಾಗ, ನಮ್ಮ ಮೆದುಳಿನ 70 ರಷ್ಟು ಭಾಗ ಮತ್ತು ನಮ್ಮ ರಕ್ತದ 80ರಷ್ಟು ಭಾಗ ಜಲಾವೃತವಾಗಿದೆ. ಒಂದು ತಿಂಗಳವರೆಗೆ ಆಹಾರವಿಲ್ಲದಿದ್ದರೂ ತಡೆಯುವ ಒಂದು ಸಾಮಾನ್ಯ ದೇಹ ಒಂದು ವಾರ ನೀರಿಲ್ಲದೆ ಉಳಿಯುವುದು ಅತೀ ಕಷ್ಟಸಾಧ್ಯ (ಜೈನಮುನಿಗಳಾದ ಏಲಾಚಾರ್ಯ ಮಹಾಮುನಿಗಳು ವರ್ಷಾನುಗಟ್ಟಲೆ ಆಹಾರ ನೀರಿಲ್ಲದೆ ಆಧ್ಯಾತ್ಮಿಕ ಉಪವಾಸ ಕೈಗೊಂಡಿದ್ದರು ಎಂಬುದು ನಿಜ. ಇಲ್ಲಿ ನಾನು ಪ್ರಸ್ತಾಪಿಸುತ್ತಿರುವುದು ನನ್ನಂತಹ ತೃಣಮಾತ್ರರ ಬಗ್ಗೆ ಮಾತ್ರ).
೨. ಎಷ್ಟೋ ಕೋಟಿ ವರ್ಷಗಳ ಹಿಂದೆ ಇದ್ದ ನೀರೇ ಇಂದೂ ಕೂಡಾ ಈ ಭೂಮಿಯ ಮೇಲಿದೆ.
೩. ಭೂಮಿಯ ತುಂಬಾ ನೀರೇ ತುಂಬಿದ್ದರೂ ಶೇಕಡಾ 3 ರಷ್ಟು ಮಾತ್ರ ಶುದ್ಧ ನೀರಾಗಿ ಲಭ್ಯವಿದೆ.
೪. ಅದೂ ಕೂಡಾ ಹೆಚ್ಚಿನ ಭಾಗ ಮಂಜುಗಡ್ಡೆಯ ರೂಪದಲ್ಲಿದೆ.
೫. ಶುದ್ಧ ನೀರಿನ ಶೇಕಡಾ 1 ರಷ್ಟು ಮಾತ್ರ ಮಾನವನ ಉಪಯೋಗಕ್ಕೆ ಲಭ್ಯವಿದೆ
೬. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಕೇವಲ ಭೂಮಿಯ ಮೇಲಿರುವ ಶೇಕಡಾ 0.007 ನೀರು ಮಾತ್ರ ಕುಡಿಯುವುದಕ್ಕೆ ಲಭ್ಯವಿದೆ
೭. ನಮ್ಮ ಮನೆಗಳಿಗೆ ಬರುವ ಶೇಕಡಾ 25ರಷ್ಟು ನೀರು ನಮ್ಮ ಶೌಚಾಲಯಗಳನ್ನು ಫ್ಲಶ್ ಮಾಡಲು ಉಪಯೋಗಿಸಲ್ಪಡುತ್ತದೆ. ಒಂದು ಆಧುನಿಕ ಟಾಯ್ಲೆಟ್ ಅನ್ನು ಫ್ಲಶ್ ಮಾಡಲು 3 ಗ್ಯಾಲನ್ ನೀರು ಉಪಯೋಗಿಸಲ್ಪಡುತ್ತದೆ.
೮. ಒಂದು ವಾಷಿಂಗ್ ಮೆಶಿನ್ನಿನ ಲೋಡು 40 ಗ್ಯಾಲನ್ ನೀರನ್ನು ಬಯಸುತ್ತದೆ.
೯. ಹತ್ತು ನಿಮಿಷದ ಸ್ನಾನಗೃಹದ ಶೋವರಿನ ನೀರಿಳಿತ 50 ಗ್ಯಾಲನ್ ನೀರನ್ನು ಕಬಳಿಸುತ್ತದೆ.
೧೦. ನಲ್ಲಿಯನ್ನು ತಿರುಗಿಸಿಟ್ಟುಕೊಂಡು ಹಲ್ಲನ್ನು ಬ್ರಷ್ ಮಾಡಿದರೆ 4 ಗ್ಯಾಲನ್ ನೀರು ಸೋರಿ ಹೋಗಿರುತ್ತದೆ. ಅದೇ ನಲ್ಲಿಯನ್ನು ಬೇಕಷ್ಟು ಸಮಯ ಮಾತ್ರ ತಿರುಗಿಸಿಕೊಂಡು ಬ್ರಷ್ ಮಾಡಿದಲ್ಲಿ ಕೇವಲ 0.25 ಗ್ಯಾಲನ್ ನೀರು ಮಾತ್ರ ಸಾಕಾಗುತ್ತದೆ.
ಇದು ಉಳ್ಳವರ ಬದುಕಿನ ರೀತಿಯಾದರೆ ನಾವು ನೋಡಬೇಕಾದ ವಿಶಾಲ ಪ್ರಪಂಚ ಇನ್ನೊಂದು ತೆರನಾದದ್ದಾಗಿದೆ. ಅದರ ಸತ್ಯತೆ ಹೀಗಿದೆ.
೧. ಕೋಟಿಗಟ್ಟಲೆ ಜನ ಪ್ರತಿ ದಿನ 3 ಗ್ಯಾಲನ್ನುಗಳ ನೀರಿನ ಮಿತಿಯಲ್ಲೇ ಬದುಕುತ್ತಿದ್ದಾರೆ.
೨. ಒಬ್ಬ ಆಧುನಿಕ ಸೌಲಭ್ಯಗಳುಳ್ಳ ಮನುಷ್ಯ 160 ಗ್ಯಾಲನ್ಗಳ ನೀರನ್ನು ವ್ಯಯಿಸುತ್ತಿದ್ದಾನೆ.
೩. ಇಪ್ಪತ್ತೈದು ದಶಲಕ್ಷ ಜನರು ವಿಷಪೂರಿತ ನೀರಿನ ದೆಸೆಯಿಂದಾಗಿ ತಮ್ಮ ನೆಲೆಸ್ಥಾನವನ್ನು ಕಳೆದುಕೊಂಡು ನಿರಾಶ್ರಿತರಾಗಿ ಬದುಕು ಅರಸುತ್ತಿದ್ದಾರೆ. ಈ ಸಂಖ್ಯೆ ಎಲ್ಲಾ ಯುದ್ಧಗಳ ಭೀತಿಯಿಂದ ತಮ್ಮ ನೆಲೆ ಬದಲಿಸಿದವರ ಸಂಖ್ಯೆಯನ್ನೂ ಬಹಳಷ್ಟು ಪಾಲು ಮೀರಿದ್ದಾಗಿದೆ.
೪. ವಿಶ್ವದಲ್ಲಿನ ಪ್ರತಿ ಮೂರರಲಿ ಒಬ್ಬ ವ್ಯಕ್ತಿ ಸ್ವಚ್ಚ ನೀರಿನ ಮತ್ತು ಒಳ ಚರಂಡಿಯ ವ್ಯವಸ್ಥೆಯಿಲ್ಲದೆ ಬದುಕುತ್ತಿದ್ದಾನೆ.
೫. ವಿಶ್ವದಲ್ಲಿ ಪ್ರತಿ ಐವರಲ್ಲಿ ಒಬ್ಬನಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ.
೬. ವಿಶ್ವಸಂಸ್ಥೆಯ ವರದಿಯ ಪ್ರಕಾರ ಹದಿನೈದು ಸೆಕೆಂಡಿಗೆ ಒಂದು ಮಗು ನೀರಿನ ಸಂಬಂಧಿತ ರೋಗದಿಂದ ಮರಣವನ್ನಪ್ಪುತ್ತಿದೆ.
ಒಂದು ವಿಚಾರ ಸಹೋದರ ಸಹೋದರಿಯರೆ. ನೀರಿನ ತೀವ್ರ ಕೊರತೆಯ ಕ್ಷಣಗಳು ಸನಿಹವಾಗುತ್ತಿವೆ. ನಮ್ಮಲ್ಲಿ ಲಭ್ಯವಿರುವ ನೀರಿನ ಮೂಲಗಳು ಒತ್ತಡದಲ್ಲಿವೆ. ಇಪ್ಪತ್ತನೆಯ ಶತಮಾನದಲ್ಲಿನ ಜನಸಂಖ್ಯೆ ಆ ಹಿಂದಿನ ಜನಸಂಖ್ಯೆಯ ಮೂರು ಪಟ್ಟು ಹೆಚ್ಚಾಗಿದೆ. ವಿಚಿತ್ರವೆಂದರೆ ನೀರಿನ ಉಪಯೋಗ ಆರು ಪಟ್ಟು ಅಧಿಕಗೊಂಡಿದೆ!. ಈ ಶತಮಾನದ ಮಧ್ಯಭಾಗದ ವೇಳೆಗೆ ಇನ್ನೂ ಮುನ್ನೂರು ಕೋಟಿ ಜನರು ಈ ಪ್ರಪಂಚದಲ್ಲಿ ಹೆಚ್ಚಾಗಲಿದ್ದಾರೆ. ಈ ಜನಸಂಖ್ಯೆಯ ಹೆಚ್ಚಳ ಈಗಾಗಲೇ ನೀರಿನ ತೊಂದರೆ ಅನುಭವಿಸುತ್ತಿರುವ ದೇಶಗಳಲ್ಲೇ ಆಗುತ್ತಿರುವುದು ಮತ್ತಷ್ಟು ಚಿಂತಿಸಬೇಕಾದ ಸಂಗತಿ.
ವಿಶ್ವದಲ್ಲಿ ತಲೆದೋರುತ್ತಿರುವ ನೀರಿನ ಹಾಹಾಕಾರ ಭೀಕರವಾಗುತ್ತಿದ್ದು, “ಪೆಟ್ರೋಲ್ ಮುಗಿಯುವ ಮೊದಲೇ ನೀರಿನ ಸಂಪೂರ್ಣ ಬರ ನಿಶ್ಚಿತ” ಎಂಬ ಮಾತು ಕೇಳಿ ಬರುತ್ತಿದೆ. ನೀರಿನ ದುರ್ಲಭತೆಯಿಂದ ಉಂಟಾಗುವ ಆಹಾರ ಮತ್ತಿತರ ವ್ಯವಸ್ಥೆಗಳಲ್ಲಿ ಉಂಟಾಗುವ ಪರಿಣಾಮಗಳನ್ನು ಹೇಳಬೇಕಾದದ್ದಿಲ್ಲ!
ಸಿಕ್ಕಿದ ಕಾಡನ್ನೆಲ್ಲಾ ಸುಟ್ಟು ಸುಣ್ಣ ಮಾಡಿ, ಇರುವ ವ್ಯವಸಾಯ ಭೂಮಿ – ಕಾಡು ಭೂಮಿಗಳನ್ನೆಲ್ಲಾ ರಸ್ತೆ, ಕಟ್ಟಡ, ಸೇತುವೆ, ಗಣಿಗಳ ಹೆಸರಿನಲ್ಲಿ ಕಾಂಕ್ರೀಟ್ ಮಾಡಿ, ನೀರನ್ನು ಹಿಡಿದಿಟ್ಟುಕೊಳ್ಳುವ ನದೀಪಾತ್ರದ ಮರಳನ್ನು ಸಹಾ ಆಳವಾಗಿ ಬಗೆದು ಹೊತ್ತು ಕಳ್ಳ ಮಾರಾಟ ಮಾಡಿ, ಆ ನೀರು ಹರಿಯುತ್ತಿದೆಯೆಲ್ಲಾ ಅದರ ಕೆಳಗೆ ಒಂದು ಹೋಟೆಲ್ ಒಂದಷ್ಟು ಮನೆ ಕಟ್ಟಿದರೆ ನಾನು ಇನ್ನೊಂದು ಚುನಾವಣೆ ಸ್ಪರ್ಧಿಸಿ ಮತ್ತೊಂದು ಬಾರಿ ಮಂತ್ರಿಯಾಗುತ್ತೇನೆ ಎನ್ನುವ ಕೀಳು ಮಾನುಷತ್ವ ನರನಲ್ಲಿ ತುಂಬಿ; ಒಳ್ಳೇ ಜನ ಇದ್ರೇ ತಾನೇ ಮಳೆ ಬೆಳೆ ಆಗುತ್ತೆ ಎಂಬ ಗಾದೆ ನಿಜವಾಗುತ್ತಿದೆಯೋ ಎಂಬಂತೆ ಸಕಾಲದಲ್ಲಿ ಇವೆಲ್ಲಾ ಕಡಿಮೆಯಾಗುತ್ತಾ ಬಂದು, ಕಾಡು ಪ್ರಾಣಿಗಳು ಒಂದಿಷ್ಟು ಹಸಿರು ನೀರು ಕೂಡಾ ಇಲ್ಲದೆ ನಗರದ ರಸ್ತೆಗಳಲ್ಲಿ ಅಲೆದಾಡುವ ಪರಿಸ್ಥಿತಿಯಂತೆ, ಭೂ ತಾಯೀ ಕೂಡಾ ತನಗೆ ಹಸಿರಿನ ತಂಪಿಲ್ಲ ಎಂದು ಆಕೆಯ ಕಣ್ಣೀರು ಬತ್ತಿಹೋಗಿರುವಂತೆ ಜಲ ಸಂಪನ್ಮೂಲಗಳು ಕ್ಷೀಣಿಸಿ ನೆಲಬಾವಿಗಳೆಲ್ಲಾ ಇಂದು ಬತ್ತಿ ರೋಧಿಸುತ್ತಿವೆ. ಯಾಕೋ ನಾಳಿನ ಜನಾಂಗ ಇಂತಹ ಜನ ಇದ್ದ ಸಮಯದಲ್ಲಿ ಇದೆಲ್ಲ ಹಾಳಾಯಿತು ಎಂದು ಚರಿತ್ರೆಯಲ್ಲಿ ನಮ್ಮನ್ನೆಲ್ಲಾ ತೋರಿ ಚುಚ್ಚುತ್ತಿರುವ ಪಾಪ ಪ್ರಜ್ಞೆ ಕಾಡುತ್ತಿರುವಂತೆನಿಸುತ್ತದೆ. ದಾರಿ ಮಾತ್ರ ಕಾಣುತ್ತಿಲ್ಲ.
ಎಲ್ಲರೂ ಸುಮ್ಮನಿರುವಾಗ ನಾವೊಬ್ಬರು ನೀರು ಉಳಿತಾಯ ಮಾಡುವುದರಿಂದ ಏನು ಪ್ರಯೋಜನ ಎಂಬ ಮನೋಭಾವ ಬಿಟ್ಟುಬಿಡೋಣ. ಒಂದು ಒಳ್ಳೆಯ ನಡೆ ಕೂಡಾ ಹಲವಾರು ಹೃದಯಗಳ ಮೇಲೆ, ಪ್ರಕೃತಿಯ ಮೇಲೆ, ನಮ್ಮನ್ನು ಕಾಪಾಡುವ ಆ ಪರಮಾತ್ಮನ ಕೃಪೆಯ ದೃಷ್ಟಿಯಲ್ಲಿ ಮಹತ್ವದ ಪರಿಣಾಮ ಬೀರಬಲ್ಲದು ಎಂಬುದರಲ್ಲಿ ನಂಬಿಕೆಯಿಟ್ಟು ನಮ್ಮ ಒಳಿತಿಗಾಗಿ ವಿಶ್ವದ ಹಿತಕ್ಕಾಗಿ ನಮ್ಮ ಬದುಕಿನಲ್ಲಿ ಉತ್ತಮ ಶಿಸ್ತು, ಶ್ರದ್ಧೆಗಳ ಮೂಲಕ ನೀರಿನ ಪೋಲಾಗುವಿಕೆಯನ್ನು ತಡೆಯಲು ನಮ್ಮದೇ ರೀತಿಯಲ್ಲಿ ಕಾರ್ಯಪ್ರವೃತ್ತರಾಗೋಣ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಂ. ವಿ. ವಾಸುದೇವರಾವ್ | On the birth anniversary of great actor M. V. Vasudeva Rao |

Mon Mar 28 , 2022
  ಎಂ. ವಿ. ವಾಸುದೇವರಾವ್ ಅವರು ಚೋಮನದುಡಿ ವಾಸುದೇವರಾವ್ ಎಂದೇ ಪ್ರಖ್ಯಾತರು. ಅವರು ರಂಗಭೂಮಿ ಮತ್ತು ಚಿತ್ರರಂಗದ ನಿಷ್ಠಾವಂತ ಕಲಾವಿದರಾಗಿ ಬದುಕು ನಡೆಸಿದವರು. ಇಂದು ಅವರ ಸಂಸ್ಮರಣಾ ದಿನ. ಮೂಡಬಿದರೆ ವೆಂಕಟರಾವ್ ವಾಸುದೇವರಾವ್ 1921ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದರೆಯಲ್ಲಿ ಜನಿಸಿದರು. ಶಿಕ್ಷಕವೃತ್ತಿಯಲ್ಲಿದ್ದ ತಂದೆ ಬಿ.ವೆಂಕಟರಾವ್ ಅವರಿಗೆ ಕವಿತೆ, ನಾಟಕ ಹಾಗೂ ಸಂಗೀತದಲ್ಲಿ ಅಪಾರ ಆಸಕ್ತಿಯಿತ್ತು. ವಾಸುದೇವರಾವ್ ತಮ್ಮ ತಂದೆಯವರಿಂದ ರಂಗಭೂಮಿಯಲ್ಲಿ ಆಸಕ್ತಿ ಬೆಳೆಸಿಕೊಂಡರು. ವಾಸುದೇವರಾವ್ ಅವರು ದಕ್ಷಿಣ ಕನ್ನಡ […]

Advertisement

Wordpress Social Share Plugin powered by Ultimatelysocial