ಜಯಂತ ಕಾಯ್ಕಿಣಿ ಜೀವನ ಚರಿತ್ರೆ

 

ಜಯಂತ ಕಾಯ್ಕಿಣಿ ಕನ್ನಡದ ಸಮಕಾಲೀನ ಕಥೆಗಾರರಲ್ಲಿ ಪ್ರಮುಖರು. ಸಿನಿಮಾ ಸಾಹಿತ್ಯದಲ್ಲಿ ಶೋಭಾಯಮಾನರು.
1955ರ ಜನವರಿ 24ರಂದು ಗೋಕರ್ಣದಲ್ಲಿ ಜನಿಸಿದ ಜಯಂತರು ಕನ್ನಡ ಸಾಹಿತ್ಯಲೋಕದ ಪ್ರಸಿದ್ಧ ಬರಹಗಾರರಾದ ಗೌರೀಶ ಕಾಯ್ಕಿಣಿಯವರ ಮಗ.
ಜಯಂತರ ಕತೆ, ಕಾವ್ಯಗಳಲ್ಲಿ ಸೂಕ್ಷ್ಮಸಂವೇದನೆ ಬಹುತೇಕ ಕಾಣಸಿಗುವ ವಸ್ತು. ಇಳಿಸಂಜೆಯ ಬಿಸಿಲು, ಬಿಸಿಲುಕೋಲು, ಪಾತರಗಿತ್ತಿ, ಬಣ್ಣ ಅವರ ಬರಹಗಳಲ್ಲಿ ಸಾಮಾನ್ಯವಾಗಿ ಪ್ರತಿಫಲಿಸುತ್ತಲೇ ಇರುತ್ತವೆ. ಮೆದುಮಾತಿನ, ಮೆಲುದನಿಯ, ಸಜ್ಜನಿಕೆಯ, ಎಲ್ಲರಿಗೂ ಪ್ರಿಯವಾಗುವ ಆಕರ್ಷಣೀಯ ವ್ಯಕ್ತಿತ್ವ ಜಯಂತರದು.
‘ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು’, ‘ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ’, ‘ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ’, ‘ಮಧುವನ ಕರೆದರೆ ತನು ಮನ ಸೆಳೆದರೆ’, ‘ನಿಂತಲ್ಲೆ ಹಾಳಾದೆ ನಿನ್ನಿಂದಲೇ’ ಎನ್ನುವಂತಹ ಪ್ರಸಿದ್ಧ ಗೀತೆಗಳೊಂದಿಗೆ 2006ರ ವರುಷದಿಂದೀಚಿಗೆ ಕನ್ನಡ ಚಿತ್ರ ಪ್ರೇಮಿಗಳ ಹೃದಯಕ್ಕೆ ಲಗ್ಗೆ ಇಟ್ಟ ಜಯಂತ ಕಾಯ್ಕಿಣಿಯವರು ಇಂದು ಜನಪ್ರಿಯ ಮಾಧ್ಯಮವಾದ ಚಿತ್ರರಂಗದಲ್ಲಿ ಕೂಡಾ ದೊಡ್ಡ ಹೆಸರಾಗಿದ್ದಾರೆ. ದೂರದರ್ಶನದಲ್ಲಿ ನಾಡಿನ ಶ್ರೇಷ್ಠರನ್ನು ಪರಿಚಯಿಸಿಕೊಡುವಂತಹ ಸದಾಕಾಲ ಜನರ ಮನದಲ್ಲಿ ಉಳಿಯುವಂತಹ ಕಾರ್ಯಕ್ರಮಗಳನ್ನು ಮೂಡಿಸಿದ್ದಾರೆ.
ಜಯಂತರ ತಂದೆ ಹೆಸರಾಂತ ಸಾಹಿತಿ ಗೌರೀಶ ಕಾಯ್ಕಿಣಿಯವರು ವೃತ್ತಿಯಲ್ಲಿ ಅಧ್ಯಾಪಕರಾಗಿದ್ದವರು. ತಾಯಿ ಶಾಂತಾ ಕಾಯ್ಕಿಣಿರವರು ಪ್ರವೃತ್ತಿಯಲ್ಲಿ ಸಮಾಜಸೇವಕಿ ಮತ್ತು ವೃತ್ತಿಯಲ್ಲಿ ಅಧ್ಯಾಪಕಿ ಕೂಡ. ಜಯಂತರವರು ತಮ್ಮ ಪ್ರೈಮರಿ ಮತ್ತು ಹೈಸ್ಕೂಲ್ ಶಾಲಾ ಶಿಕ್ಷಣವನ್ನು ಗೋಕರ್ಣದ ‘ಭದ್ರಕಾಳಿ ವಿದ್ಯಾಸಂಸ್ಥೆ’ಯಲ್ಲಿ ಪೂರೈಸಿದರು. ತಮ್ಮ ಕಾಲೇಜಿನ ಬಿ.ಎಸ್ಸಿ. ತನಕದ ಶಿಕ್ಷಣವನ್ನು ಕುಮಟಾದ ‘ಬಾಳಿಗ ವಿದ್ಯಾಸಂಸ್ಥೆ’ಯಲ್ಲಿ ಪಡೆದುಕೊಂಡರು. ಅನಂತರದ ಉನ್ನತ ಶಿಕ್ಷಣವನ್ನು ಎಂ.ಎಸ್ಸಿ ಬಯೋಕೆಮಿಸ್ಟ್ರಿಯಲ್ಲಿ, ಧಾರವಾಡದಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ, ಚಿನ್ನದ ಪದಕ ಗಳಿಸುವುದರೊಂದಿಗೆ 1976ರಲ್ಲಿ ಪೂರೈಸಿದರು.
ಕಾಯ್ಕಿಣಿಯವರ ಬರಹದ ಆಸಕ್ತಿ ಪ್ರಾರಂಭಗೊಂಡದ್ದು 1970ರಲ್ಲಿ. ಅಂದರೆ ಹದಿನೈದು ಹದಿನಾರರ ಹರಯದಲ್ಲೇ ಅವರು ಕವಿ, ಸಣ್ಣ ಕಥೆಗಳ ಬರಹಗಾರ, ನಾಟಕಕಾರ, ಅಂಕಣಕಾರ ಹೀಗೆ ನಾನಾ ರೂಪಧಾರಿ. ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕಾರವು ಜಯಂತರನ್ನು ‘ರಂಗದಿಂದೊಷ್ಟು ದೂರ‘ ಎಂಬ ಕವನ ಸಂಕಲನಕ್ಕೆ ಅವರ 19ನೇಯ ವಯಸ್ಸಿನಲ್ಲೇ ಅರಸಿಬಂತು. ಅಂಥ ಅಸಾಧಾರಣ, ಅಭಿಜಾತ ಪ್ರತಿಭೆ ಅವರದ್ದು. ತಂದೆಯೇ ಅವರಿಗೆ ಆದರ್ಶಪ್ರಾಯ, ಅವರೊಂದಿಗೆ ಯಶವಂತ ಚಿತ್ತಾಲರೂ ಸಹ ಜಯಂತರ ಮೇಲೆ ಬಹಳ ಪ್ರಭಾವ ಬೀರಿದರು. ಜನಸಾಮಾನ್ಯರ ಆಡುಭಾಷೆಗಳಲ್ಲಿ ಬರುವ ಪದಗಳನ್ನು ಮುತ್ತಿನ ಮಣಿಗಳಂತೆ ಜೋಡಿಸಿ, ಜನರ ಮನಸ್ಸಿನ ಆಳಕ್ಕೆ ಇಳಿಯುವಂತೆ ಸುಂದರ ಪದಮಾಲೆಗಳನ್ನು ಕಟ್ಟುವುದರಲ್ಲಿ ಕಾಯ್ಕಿಣಿಯವರು ನಿಷ್ಣಾತರು. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ನಾಣ್ಣುಡಿಯಂತೆ, ಸಾಹಿತ್ಯಗಳಲ್ಲಿ ಇವರು ಬರೆಯದ ಪ್ರಕಾರಗಳಿಲ್ಲ. ತಮ್ಮ ಸಾಹಿತ್ಯ ರಚನೆಗಳಿಗಾಗಿ ಇನ್ನೂ ಮೂರು ಸಲ ರಾಜ್ಯ ಸಾಹಿತ್ಯ ಆಕಾಡೆಮಿಯ ಪ್ರಶಸ್ತಿಗಳನ್ನು 1982ರಲ್ಲಿ ‘ತೆರೆದಷ್ಟೆ ಬಾಗಿಲು’ ಎಂಬ ಸಣ್ಣ ಕಥೆಗಳ ಸಂಗ್ರಹ, 1989ರಲ್ಲಿ ‘ದಗ್ಡೂ ಪರಬನ ಅಶ್ವಮೇಧ’ ಎಂಬ ಸಣ್ಣ ಕಥೆಗಳ ಸಂಗ್ರಹ ಮತ್ತು 1996ರಲ್ಲಿ ‘ಅಮೃತ ಬಳ್ಳಿ ಕಷಾಯ’ ಎಂಬ ಸಣ್ಣ ಕಥೆಗಳ ಸಂಗ್ರಹಕ್ಕೆ ಪಡೆದರು. ಇದಲ್ಲದೆ ‘ಅಮೃತಬಳ್ಳಿ ಕಷಾಯ’ ಕ್ಕೆ 1996ರಲ್ಲಿ ಉತ್ತಮ ಸೃಜನಾತ್ಮಕ ಕಥೆಗಳಿಗಾಗಿ ಮೀಸಲಾಗಿರುವ ರಾಷ್ಟ್ರೀಯ ಕಥಾ ಪ್ರಶಸ್ತಿ ಮತ್ತು 1997ರಲ್ಲಿ ಬಿ.ಎಚ್.ಶ್ರೀಧರ್ ಕಥಾ ಪ್ರಶಸ್ತಿ ಗಳು ದೊರಕಿದವು. 1998ರಲ್ಲಿ ‘ನೀಲಿಮಳೆ’ ಕವನಸಂಕಲನಕ್ಕೆ ದಿನಕರ ದೇಸಾಯಿ ಕವನ ಪ್ರಶಸ್ತಿಯೂ ದೊರಕಿತು. 2018ರಲ್ಲಿ ದಕ್ಷಿಣ ಏಷ್ಯಾದಲ್ಲಿನ ಶ್ರೇಷ್ಠ ಸಾಹಿತ್ಯಕ್ಕೆ ಸಲ್ಲುವ ಡಿಎಸ್ಸಿ. ಪ್ರೈಸ್ ಸಂದಿದೆ.
ಜಯಂತ ಕಾಯ್ಕಿಣಿ ತಮ್ಮ ಎಂ.ಎಸ್ಸಿ ಪದವಿಯ ನಂತರ ಮುಂಬೈಯಲ್ಲಿ ಫಾರ್ಮಾ ಪ್ರೊಡಕ್ಷನ್ ಎಕ್ಸಿಕ್ಯೂಟಿವ್ ಆಗಿ, ಪ್ರಾಕ್ಟರ್-ಗ್ಯಾಂಬಲ್ ಮತ್ತು ಹೂಸ್ಟ್( Hoechst) ಎಂಬ ಕಂಪನಿಗಳಲ್ಲಿ 1977ರಿಂದ 1997ರವರೆಗೆ ಕೆಲಸ ಮಾಡಿದರು. ತಮ್ಮ ಬಿಡುವಿಲ್ಲದ ಕೆಲಸದ ಮಧ್ಯೆಯೂ ಕನ್ನಡ ಸಾಹಿತ್ಯಸೇವೆಯನ್ನಂತೂ ಅವರು ಬಿಡಲಿಲ್ಲ. 1997ರಿಂದ 1998ರ ವರೆಗೆ ಮುಂಬೈಯಲ್ಲಿಯೇ ಸ್ವತಂತ್ರ ಬರಹಗಾರನಾಗಿ (freelance copy writer) ಲಿಂಟಾಸ್, ಮುದ್ರಾ ಮತ್ತು ತ್ರಿಕಾಯ ಜಾಹೀರಾತು ಸಂಸ್ಥೆಗಳಲ್ಲಿ ಕೆಲಸ ಮಾಡಿದರು. 1997ರಲ್ಲಿ ಭಾರತೀಯ ಲೇಖಕರ ಪ್ರತಿನಿಧಿಗಳನ್ನು ಚೀನಾ ದೇಶಕ್ಕೆ ಕಳುಹಿಸಿದಾಗ, ಅವರಲ್ಲೊಬ್ಬ ಪ್ರತಿನಿಧಿಯಾಗಿ ಜಯಂತರೂ ಹೋಗಿದ್ದರು. 1997ರಿಂದ 1999ರವರೆಗೆ ಈಟಿವಿ ಕನ್ನಡವಾಹಿನಿಯ ಕಾರ್ಯಕ್ರಮ ಸಮಿತಿಯಾಗಿ ಸದಸ್ಯರಾಗಿ, ರಾಮೋಜಿ ಫಿಲ್ಮ್ ಸಿಟಿ, ಹೈದರಾಬಾದ್ ನಲ್ಲಿ ತಮ್ಮ ವೃತ್ತಿಯನ್ನು ಮುಂದುವರಿಸಿದರು.
2000ದ ಇಸವಿಗೆ, ಬೆಂಗಳೂರಿಗೆ ತಮ್ಮ ಕುಟುಂಬದೊಂದಿಗೆ ಮರಳಿ ಬಂದ ಜಯಂತ ಕಾಯ್ಕಿಣಿ, ವಿಜಯಕರ್ನಾಟಕ ಪತ್ರಿಕಾ ಸಮೂಹವು ನಡೆಸುತ್ತಿದ್ದ ‘ಭಾವನಾ’ ಎಂಬ ಕಲೆ ಮತ್ತು ಸಾಹಿತ್ಯಕ್ಕೆ ಸಂಬಂಧಿಸಿದ ಮಾಸಪತ್ರಿಕೆಯ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು. ಅವರ ಪತ್ನಿ ಶ್ರೀಮತಿ ಸ್ಮಿತರವರು ಮೂಲತಃ ಮುಂಬೈಯವರಾದರೂ ಕನ್ನಡ ಸಾಹಿತ್ಯದ ಬಗ್ಗೆ ಬಹಳ ಆಸಕ್ತಿ ಹೊಂದಿದವರು. 2001ರಲ್ಲಿ ಜಯಂತರಿಗೆ ‘ಋಜುವಾತು ಫೆಲೋಶಿಪ್’ ದೊರಕಿತು.
2002ರಿಂದ 2003ರ ತನಕ ಈಟಿವಿ ಕನ್ನಡವಾಹಿನಿಯಲ್ಲಿ ದಿನನಿತ್ಯ ಬೆಳಗ್ಗಿನ ಹೊತ್ತು ಪ್ರಸಾರವಾಗುತ್ತಿದ್ದ “ನಮಸ್ಕಾರ” ಎಂಬ ಕಾರ್ಯಕ್ರಮವನ್ನು ತಪ್ಪದೇ ವೀಕ್ಷಿಸುತ್ತಿದ್ದ ಅವರ ಅಭಿಮಾನಿಗಳಿಗೆ ನೂರಕ್ಕೆ ನೂರು ಪ್ರತಿಶತ ಖಂಡಿತವಾಗಿಯೂ ಆರ್ಥವಾದೀತು. ಬಹಳಷ್ಟು ಪ್ರಸಿದ್ಧಿಯನ್ನು, ಅಪಾರ ಅಭಿಮಾನಿ ಬಳಗವನ್ನೂ ಕಾಯ್ಕಿಣಿಯವರು ಈ ಕಾರ್ಯಕ್ರಮದಿಂದ ಗಳಿಸಿದರು. ಈ ಕಾರ್ಯಕ್ರಮದಲ್ಲಿನ ಸುಮಾರು 30 ಕಂತುಗಳಲ್ಲಿ ಕುವೆಂಪು, ಶಿವರಾಮಕಾರಂತ, ದ.ರಾ.ಬೇಂದ್ರೆ ಮತ್ತು ರಾಜ್ ಕುಮಾರ್ ಅವರ ಕುರಿತಾದ “ರಸಋಷಿಗೆ ನಮಸ್ಕಾರ”, “ಕಡಲಭಾರ್ಗವನಿಗೆ ನಮಸ್ಕಾರ”, “ಬೇಂದ್ರೆ ಮಾಸ್ಟರ್ ಗೆ ನಮಸ್ಕಾರ” ಮತ್ತು “ನಟಸಾರ್ವಭೌಮನಿಗೆ ನಮಸ್ಕಾರ” ಮುಂತಾದ ಪ್ರಸಿದ್ಧ ಕಾರ್ಯಕ್ರಮಗಳ ಜೊತೆಗೆ ಅನೇಕ ಮಹನೀಯರ ಶ್ರೇಷ್ಠಮಟ್ಟದ ಸಂದರ್ಶನವನ್ನು ಕೂಡ ನಡೆಸಿದರು.
2004ರ ವರ್ಷದಲ್ಲಿ ‘ಎಡಕಲ್ಲು ಗುಡ್ದದ ಮೇಲೆ’ ಚಿತ್ರದ ಖ್ಯಾತಿಯ ನಟ ಚಂದ್ರಶೇಖರ್ ಅವರು ನಿರ್ದೇಶಿಸಿದ ‘ಪೂರ್ವಾಪರ’ ನಮ್ಮ ಜಯಂತಣ್ಣನವರು ಪ್ರಥಮ ಬಾರಿಗೆ ಚಲನಚಿತ್ರವೊಂದಕ್ಕೆ ಹಾಡಿನ ಸಾಹಿತ್ಯ ಮತ್ತು ಸಂಭಾಷಣೆ ಬರೆದ ಚಿತ್ರ. ಅವರ ಸಿನಿಮಾ ಮತ್ತು ಸಾಹಿತ್ಯ ಕೃಷಿ ಜೊತೆ ಜೊತೆಯಾಗಿಯೇ ಸಾಗಿದವು. ಇದಕ್ಕೂ ಮೊದಲು ಜಯಂತರು ಹೆಸರಾಂತ ಸಿನೆಮಾ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರ ಬಳಿ 1979ರಷ್ಟು ಹಿಂದೆಯೇ ‘ಮೂರು ದಾರಿಗಳು’ ಎಂಬ ಚಿತ್ರಕ್ಕೆ ಸಹಾಯಕರಾಗಿ ದುಡಿದಿದ್ದರು. ‘ಬೆಟ್ಟದ ಜೀವ’ ಎಂಬ ಶಿವರಾಂ ಕಾರಂತರ ಕಾದಂಬರಿ ಆಧಾರಿತ ಸಿನೆಮಾ ತಯಾರಿಯಲ್ಲಿ ಭಾಗಿಯಾಗಿದ್ದರೂ ಅದು ಅಂದು ಪೂರ್ಣಗೊಳ್ಳಲಿಲ್ಲ. (ಇತ್ತೀಚಿನ ವರ್ಷದಲ್ಲಿ ಪಿ. ಶೇಷಾದ್ರಿ ಆ ಚಿತ್ರವನ್ನು ನಿರ್ಮಿಸಿದರು). ‘ಚಿಗುರಿದ ಕನಸು’ 2004ರಲ್ಲಿ ಪ್ರದರ್ಶಿತವಾಯಿತು. ಅ ಚಿತ್ರಕ್ಕೆ ಸಂಭಾಷಣೆ, ಚಿತ್ರಕಥೆ ಮತ್ತು ಹಾಡುಗಳ ಸಾಹಿತ್ಯ ಬರೆದದ್ದು ಕಾಯ್ಕಿಣಿಯವರೇ. ಈ ಚಲನಚಿತ್ರದ ಉತ್ತಮ ಸಂಭಾಷಣೆಗಾಗಿ 2004ರಲ್ಲಿ ಅವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ ದೊರಕಿತು. 2006ರಲ್ಲಿ ಸಾರ್ವಕಾಲಿಕವಾಗಿ ಕನ್ನಡದ ಪ್ರಖ್ಯಾತ ಚಿತ್ರಗಳಲ್ಲೊಂದಾದ ‘ಮುಂಗಾರು ಮಳೆ’ ಚಲನಚಿತ್ರಕ್ಕಾಗಿ ಜಯಂತ್ ಕೆಲವು ಹಾಡುಗಳ ಸಾಹಿತ್ಯ ಬರೆದರು. ಆ ಹಾಡುಗಳು ಇಂದಿಗೂ ಜನಪ್ರಿಯ. ‘ಅನಿಸುತಿದೆ ಯಾಕೋ ಇಂದು’ ಎಂಬ ಹಾಡಂತೂ ಚಿತ್ರ ರಸಿಕರ ಮನಕ್ಕೆ ಈಗಲೂ ಲಗ್ಗೆ ಹಾಕಿದೆ. ಮುಂಗಾರು ಮಳೆ ಚಿತ್ರದ ಹಾಡುಗಳು ಕಾಯ್ಕಿಣಿಯವರಿಗೆ ಇನ್ನೂ ಹೆಚ್ಚಿನ ಚಲನಚಿತ್ರಗಳಿಗೆ ಹಾಡುಗಳನ್ನು ಬರೆಯುವ ಸಂದರ್ಭಗಳನ್ನು ಒದಗಿಸಿದವು. ‘ಅನಿಸುತಿದೆ ಯಾಕೋ ಇಂದು’ ಹಾಡಿನ ಉತ್ತಮ ಸಾಹಿತ್ಯಕ್ಕಾಗಿ ದೊರೆತ ಪ್ರಚಂಡ ಜನಪ್ರಿಯತೆಯ ಜೊತೆಗೆ 2006ರ ವರ್ಷದಲ್ಲಿ ಮತ್ತೊಮ್ಮೆ ಜಯಂತರಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ, ಈಟಿವಿ ಕನ್ನಡ ವಾಹಿನಿಯ ‘ಉತ್ತಮ ಸಿನೆಮಾ ಸಾಹಿತಿಗಳೂ ಸಂದವು. ಹೀಗೆ ಬೆಳೆದ ಜಯಂತರ ಸಿನಿಮಾ ನಂಟು ಇಂದು ಹೆಮ್ಮರವಾಗಿ ಮೂಡಿ ನಿಂತಿದೆ. ಮಳೆಯಲಿ ಜೊತೆಯಲಿ, ಗಾಳಿಪಟ, ಕೃಷ್ಣನ್ ಲವ್ ಸ್ಟೋರಿ, ಮನಸಾರೆ ಚಿತ್ರಗಳಿಗೂ ಅವರು ಉತ್ತಮ ಸಾಹಿತ್ಯಕ್ಕಾಗಿನ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಜಯಂತರ ಸಾಹಿತ್ಯವನ್ನು ಸಮಗ್ರವಾಗಿ ನೋಡುವುದಾರೆ ತೆರೆದಷ್ಟೆ ಬಾಗಿಲು, ಗಾಳ, ದಗಡೂ ಪರಬನ ಅಶ್ವಮೇಧ, ಅಮೃತಬಳ್ಳಿ ಕಷಾಯ, ಬಣ್ಣದ ಕಾಲು, ತೂಫಾನ್ ಮೇಲ್, ಚಾರ್ಮಿನಾರ್, ನೋ ಪ್ರೆಸೆಂಟ್ಸ್ ಪ್ಲೀಸ್ ಎಂಬ ಕಥಾ ಸಂಕಲನಗಳು; ಬೊಗಸೆಯಲ್ಲಿ ಮಳೆ, ಶಬ್ದತೀರ, ಟೂರಿಂಗ್ ಟಾಕೀಸ್, ಗುಲ್ಮೊಹರ್ ಎಂಬ ಅಂಕಣ / ಪ್ರಬಂಧ ಬರಹಗಳು; ರಂಗದಿಂದೊಂದಷ್ಟು ದೂರ, ಕೋಟಿತೀರ್ಥ, ಶ್ರಾವಣ ಮಧ್ಯಾಹ್ನ, ನೀಲಿ ಮಳೆ, ಒಂದು ಜಿಲೇಬಿ ಮುಂತಾದ ಕವನ ಸಂಕಲನಗಳು; ಸೇವಂತಿ ಪ್ರಸಂಗ, ಇತಿ ನಿನ್ನ ಅಮೃತ, ಜೊತೆಗಿರುವನು ಚಂದಿರ, ರೂಪಾಂತರ ನಾಟಕಗಳು
ಪ್ರಮುಖವಾಗಿ ಎದ್ದು ಕಾಣುತ್ತವೆ.
ಹೀಗೆ ಅಪಾರ ಸಾಧನೆ ಮಾಡುತ್ತಿರುವ, ದೊಡ್ಡ ದೊಡ್ಡ ಸಾಧನೆ ಮಾಡಿದ್ದರೂ ಸಜ್ಜನಿಕೆಯ ಮಹಾಗುಣವನ್ನು ತಮ್ಮ ಜೊತೆಗಿರಿಸಿಕೊಂಡು ಇಡೀ ನಾಡಿಗೇ ಪ್ರಿಯರಾಗಿರುವ ಜಯಂತ್ ಕಾಯ್ಕಿಣಿ ಅವರಿಗೆ ಆತ್ಮೀಯ ಹುಟ್ಟು ಹಬ್ಬದ ಶುಭ ಹಾರೈಕೆಗಳು. ಎಲ್ಲ ಸಾಧನೆ, ಸಂತಸ, ಸೌಭಾಗ್ಯಗಳೂ ನಿಮ್ಮೊಂದಿಗಿರಲಿ. ನಿಮ್ಮ ಅಪೂರ್ವ ಸಾಧನೆಗಳನ್ನು ನೋಡುವ ಸೌಭಾಗ್ಯ ನಮ್ಮೊಂದಿಗೆ ಎಂದೆಂದಿಗೂ ಇರಲಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಾವು‌ ಎಳೆಯರು, ನಾವು ಗೆಳೆಯರು ವಿದ್ಯಾವಂತರ ಜಿಲ್ಲೆಯಲ್ಲಿ ಸೌಹಾರ್ದ ಸಂದೇಶ ಸಾರಿದ‌‌ ವಿದ್ಯಾರ್ಥಿನಿಯರು!

Fri Feb 18 , 2022
  ದೇಶ ವಿದೇಶಗಳಲ್ಲಿ ಹಿಜಬ್ ಗಲಾಟೆ ದಿನದಿಂದ ದಿನಕ್ಕೆ ತಾರಕಕ್ಕೆ ಏರುತ್ತಿರುವ ಸಮಯದಲ್ಲಿ ಮುಸ್ಲಿಂ ಸಮುದಾಯದ ವಿದ್ಯಾರ್ಥಿನಿಗೆ ನಾಲ್ವರು ಹಿಂದೂ ವಿದ್ಯಾರ್ಥಿನಿಯರು ಬೆಂಗಾವಲಾಗಿ ನಿಂತು ಕಾಲೇಜಿಗೆ ಕರೆದುಕೊಂಡು ಬಂದಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಉಡುಪಿಯ ಮಹಿಳಾ ಸರಕಾರಿ ಬಾಲಕಿಯರ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಮುಸ್ಲಿಂ ವಿದ್ಯಾರ್ಥಿನಿಯರ ಭಯ, ಕಿರಿಕಿರಿಗೆ ಹಿಂದೂ ಸಹಪಾಠಿಗಳು ಮಾನಸಿಕ ಶಕ್ತಿ ತುಂಬಿ, ಮುಸ್ಲಿಂ ವಿದ್ಯಾರ್ಥಿನಿಗೆ ಬೆಂಗಾವಲಾಗಿ ಹಿಂದೂ ವಿದ್ಯಾರ್ಥಿನಿಯರು ನಿಂತಿರುವ ವಿಡಿಯೋ […]

Advertisement

Wordpress Social Share Plugin powered by Ultimatelysocial