ಜಾನ್ ಬಿ ಹಿಗ್ಗಿನ್ಸ್ ಕರ್ನಾಟಕ ಸಂಗೀತವನ್ನು ಶಾಸ್ರಜ್ಞರು

 

 

ಅಮೆರಿಕದವರಾದರೂ ಕರ್ನಾಟಕ ಸಂಗೀತವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿ, ಕಲಿತು ಅದರಲ್ಲಿ ಉತ್ತುಂಗಕ್ಕೆ ಏರಿ ಅಷ್ಟೇ ಬೇಗ ಈ ಲೋಕದಿಂದ ಕಣ್ಮರೆಯಾದವರು ಜಾನ್ ಬಿ ಹಿಗ್ಗಿನ್ಸ್. ಹೀಗೆ ಸಾಧನೆ ಮಾಡಿದ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತದ ದಿಗ್ಗಜರುಗಳಿಂದಲೇ ಹಿಗ್ಗಿನ್ಸ್ ಭಾಗವತರ್ ಎಂಬ ಸಂಬೋಧನೆಗೆ ಪಾತ್ರರಾದವರು. ಇಂದು ಈ ಮಹಾನುಭಾವರ ಸಂಸ್ಮರಣೆ ದಿನ.
ಜಾನ್ ಬೋರ್ತ್ವಿಕ್ ಹಿಗ್ಗಿನ್ಸ್ 1939ರ ಸೆಪ್ಟೆಂಬರ್ 18ರಂದು ಅಮೆರಿಕದ ಮೆಸಾಚುಸೆಟ್ಸ್‌ ಪ್ರದೇಶದ ಆ್ಯಾಂಡೋವರ್ ಎಂಬಲ್ಲಿ ಜನಿಸಿದರು.. ಅವರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಅದೇ ಊರಿನ ಫಿಲಿಪ್ಸ್ ಅಕಾಡೆಮಿಯಲ್ಲಿ ನೆರವೇರಿತು. ಅದೇ ಶಾಲೆಯಲ್ಲಿ ಅವರ ತಂದೆ ಇಂಗ್ಲಿಷ್ ಅಧ್ಯಾಪಕರಾಗಿದ್ದರೆ, ತಾಯಿ ಸಂಗೀತದ ಅಧ್ಯಾಪಕಿಯಾಗಿ ಕೆಲಸ ಮಾಡುತ್ತಿದ್ದರು. ಮುಂದೆ ಹಿಗ್ಗಿನ್ಸ್ ವೆಸ್ಲಿಯನ್ ವಿಶ್ವವಿದ್ಯಾಲಯಲ್ಲಿ ಸಂಗೀತ ಮತ್ತು ಚರಿತ್ರೆಯಲ್ಲಿ ಬಿ.ಎ. ಪದವಿಯನ್ನೂ, 1964ರಲ್ಲಿ ಸಂಗೀತದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದರು. ಮುಂದೆ ಸ್ವಲ್ಪ ಕಾಲ ಮಿನೆಸೋಟಾ ವಿಶ್ವವಿದ್ಯಾಲಯದಲ್ಲಿ ಅಧ್ಯಾಪನ ಮಾಡಿದರು.
ಜಾನ್ ಹಿಗ್ಗಿನ್ಸ್ ತಮ್ಮ ಊರಿನ ವೆಸ್ಲಿಯನ್ ವಿಶ್ವವಿದ್ಯಾಲಯದಲ್ಲಿ ಬೋಧಿಸುತ್ತಿದ್ದ ಸಂದರ್ಭದಲ್ಲಿ ವಿಶ್ವದ ವಿವಿಧ ಸಂಸ್ಕೃತಿಗಳಲ್ಲಿರುವ ಸಂಗೀತ ಅಧ್ಯಯನವನ್ನು ಕೈಗೊಂಡರು. ಈ ಸಂದರ್ಭದಲ್ಲಿ ಅವರು ಭಾರತೀಯ ಸಂಗೀತವನ್ನೂ ಅಧ್ಯಯನ ಮಾಡಿದರು. ಆ ವಿಷಯದಲ್ಲಿ ಅವರಿಗೆ ಮಾರ್ಗದರ್ಶನ ನೀಡಿದವರು ಪ್ರೊಫೆಸರುಗಳಾದ ರಾಬರ್ಟ್ ಬ್ರೌನ್ ಮತ್ತು ಟಿ. ರಂಗನಾಥನ್ ಅವರುಗಳು. ಅಂದಿನ ದಿನಗಳಲ್ಲಿ ಕೂಡಾ ಭಾರತೀಯ ಸಂಗೀತದ ಕುರಿತಾಗಿ ಅಧ್ಯಯನ ಕೈಗೊಳ್ಳುತ್ತಿದ್ದ ಅನೇಕ ಅಮೆರಿಕದ ವಿದ್ಯಾರ್ಥಿಗಳು ಇದ್ದರಾದರೂ ಅವರಲ್ಲಿ ಬಹುತೇಕರು ಅಧ್ಯಯನಕ್ಕಾಗಿ ಅಧ್ಯಯನ ಕೈಗೊಳ್ಳುತ್ತಿದ್ದವರು. ಜಾನ್ ಹಿಗ್ಗಿನ್ಸ್ ಅವರಿಗೆ ಅಂತಹ ಸೀಮಿತ ಜ್ಞಾನ ರುಚಿಸಲಿಲ್ಲ. ಫುಲ್ಬ್ರೈಟ್ ಫೆಲೋಶಿಪ್ ಪಡೆದುಕೊಂಡು ಸಂಗೀತ ಕಲಿಯಲಿಕ್ಕೆ ಭಾರತಕ್ಕೇ ಬಂದಿಳಿದರು.
ಕರ್ನಾಟಕ ಸಂಗೀತಕ್ಕೆ ನಿರಂತರವಾಗಿ ಹೆಚ್ಚು ಪೋಷಣೆ ನೀಡುತ್ತಾ ಬಂದಿರುವ ಚೆನ್ನೈಗೆ ಬಂದಿಳಿದ ಜಾನ್ ಹಿಗ್ಗಿನ್ಸ್ ಅವರು ಮಹಾನ್ ಸಂಗೀತ ವಿದ್ವಾಂಸರಾದ ಟಿ. ವಿಶ್ವನಾಥನ್ ಅವರಲ್ಲಿ ಶಾಸ್ತ್ರೋಕ್ತವಾಗಿ ಶಿಷ್ಯವೃತ್ತಿ ಸ್ವೀಕರಿಸಿದರು. ಅವರ ಸಂಗೀತ ತಪಸ್ಸಿನ ಶ್ರದ್ಧೆ ಎಷ್ಟರಮಟ್ಟಿಗೆ ಇತ್ತೆಂದರೆ, 1966ರ ವೇಳೆಗಾಗಲೇ ಅವರು ಚೆನ್ನೈನಲ್ಲಿ ತ್ಯಾಗರಾಜ ಆರಾಧನೆಯ ವೇದಿಕೆಯನ್ನು ಏರಿದ್ದರು.
ಆ ಕಾಲದಲ್ಲಿ ನಡೆದ ಜಾನ್ ಹಿಗ್ಗಿನ್ಸ್ ಅವರ ಒಂದು ಕಾರ್ಯಕ್ರಮದ ಬಗ್ಗೆ ಸಂಗೀತ ವಿಮರ್ಶಕರೊಬ್ಬರು ನೀಡಿದ ಅಭಿಪ್ರಾಯ ಇಂತಿದೆ: “ಮದ್ರಾಸಿನಲ್ಲಿ ನಡೆವ ಉಳಿದೆಲ್ಲ ಸಂಗೀತ ಕಛೇರಿಗಳಂತೆ ಈ ಕಾರ್ಯಕ್ರಮವೂ ಅರ್ಧ ಗಂಟೆ ತಡವಾಗಿ ಪ್ರಾರಂಭಗೊಂಡಿತು. ಈ ಪರಂಗಿ ತೊಗಲಿನ ಈ ಕನೆಕ್ಟಿಕಟ್ ಯಾಂಕಿ ಹಾಡುವುದನ್ನು ನೋಡಲು ಜನಸಾಗರವೇ ಹರಿದುಬಂದಿತ್ತು. ಯಾವ ಭಾರತೀಯ ಸಂಗೀತಗಾರನಿಗೂ ಕಮ್ಮಿಯಿಲ್ಲದಂತೆ ಜಾನ್ ಅತ್ಯಂತ ಪರಿಶುದ್ಧವಾದ ಬಿಳಿ ಅಂಗಿ ಮತ್ತು ಧೋತಿಗಳಲ್ಲಿ ಶೋಭಿಸುತ್ತಾ ವೇದಿಕೆ ಹತ್ತಿದರು. ಆತನ ಗುರುಗಳಾದ ಟಿ. ವಿಶ್ವನಾಥನ್ ಅವರಾದರೋ ಅಮೆರಿಕದ ಹುಡುಗನಂತೆ ವೇಷಭೂಷಣ ಧರಿಸಿ ಪ್ರೇಕ್ಷಕರ ಸಾಲಿನಲ್ಲಿ ಆಸೀನರಾಗಿದ್ದರು. ಅಪ್ಪಟ ಭಾರತೀಯ ಸಂಗೀತಗಾರನಂತೆ ಹಾಡಿದ ಈ ಬಿಳಿಯ, ನಡುನಡುವೆ ಪಿಟೀಲು ಮತ್ತು ಮೃದಂಗ ವಾದಕರ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಕೊಡುತ್ತಾ. ‘ಭಲೇ!’, ‘ಶಹಭಾಷ್!!’ ಇತ್ಯಾದಿ ಸಂದರ್ಭೋಚಿತ ಮೆಚ್ಚುಗೆಗಳನ್ನು ಭಾವಾಭಿನಯ ಸಹಿತವಾಗಿ ಅವರಿಗೆ ವರ್ಗಾಯಿಸುತ್ತಿದ್ದ. ಈ ಬಿಳಿಯನ ಪೂರ್ವಜನ್ಮ ಭಾರತದಲ್ಲೇ ನಡೆದಿರಬೇಕೆಂಬ ಶಂಕೆ ಬಲವಾಗುವಂತಿತ್ತು ಆತನ ಸಂಗೀತ! ಈ ದೇಶದ ಮಣ್ಣಲ್ಲಿ-ಅದರಲ್ಲೂ ಕಾವೇರಿಯ ತಪ್ಪಲಲ್ಲಿ ಹುಟ್ಟಿ ಬೆಳೆಯದ ಪ್ರತಿಭೆಯೊಂದು ಕರ್ನಾಟಕ ಸಂಗೀತದ ವಿಷಯದಲ್ಲಿ ಇಷ್ಟು ಪ್ರಾವೀಣ್ಯ ಪಡೆಯುವುದು ಅತ್ಯಂತ ಅಪರೂಪದ ವಿದ್ಯಮಾನವೇ ಸರಿ!’’
‘ಎಂದರೋ ಮಹಾನುಭಾವುಲು’, ‘ಕೃಷ್ಣ ನೀ ಬೇಗನೆ ಬಾರೋ’, ‘ವಾ ವಾ, ಕಂದಾ ವಾ ವಾ, ಎನ್ನೈ, ಕಾವ ವೇಲಾ ವಾ’, ‘ಗೋವರ್ಧನ ಗಿರಿ ಧಾರಾ’ ಹೀಗೆ ಹಲವು ಭಾಷೆಗಳ ಕೀರ್ತನೆಗಳನ್ನು ಸುಶ್ರಾವ್ಯವಾಗಿ ಹಾಡಿ ಶ್ರೋತೃಗಳು ಮತ್ತು ಸಂಗೀತ ಪಂಡಿತರುಗಳಿಂದ ‘ಜಾನ್ ಬಿ. ಹಿಗ್ಗಿನ್ಸ್ ಭಾಗವತರ್’ ಎಂದೇ ಪ್ರಖ್ಯಾತರಾದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಪಂಡಿತ್ ಸಂಗಮೇಶ್ವರ ಗುರವ ಕಿರಾಣಾ ಘರಾಣೆಯ ಶ್ರೇಷ್ಠ ಗಾಯಕರಲ್ಲಿ ಒಬ್ಬರು.

Sat Dec 24 , 2022
  ಪಂಡಿತ್ ಸಂಗಮೇಶ್ವರ ಗುರವ ಕಿರಾಣಾ ಘರಾಣೆಯ ಶ್ರೇಷ್ಠ ಗಾಯಕರಲ್ಲಿ ಒಬ್ಬರು. ಸಂಗಮೇಶ್ವರ ಗುರವ 1931ರ ಡಿಸೆಂಬರ್ 7ರಂದು ಜನಿಸಿದರು. ಅವರು ಇನ್ನೂ ಒಂಬತ್ತನೇ ಕಿರಿಯ ವಯಸ್ಸಿನಲ್ಲಿಯೇ ಶಾಸ್ತ್ರೀಯ ಗಾಯನದತ್ತ ಆಕರ್ಷಿತರಾಗಿ ಕಿರಾಣ ಘರಾಣದ ಮಹತ್ವದ ಸಾಧಕರಾಗಿ ರೂಪುಗೊಂಡರು. ಸಂಗಮೇಶ್ವರ ಅವರ ತಂದೆ ಗಣಪತರಾವ್‌ ಗುರವ ಅವರು ಸಹಾ ಮಹಾನ್ ಸಂಗೀತಗಾರರಾಗಿದ್ದು ಮೂಲತಃ ಬಾಗಲಕೋಟೆ ಜಿಲ್ಲೆಯ ಜಮಖಂಡಿಯವರಾಗಿದ್ದರು. 1947ರಲ್ಲಿ ಜಮಖಂಡಿಯ ರಾಜಮನೆತನ ದೇಶದ ಪ್ರಜಾಪ್ರಭುತ್ವಕ್ಕೆ ಒಂದುಗೂಡಿಕೊಂಡಾಗ, ಸಂಗೀತಕ್ಕೆ ರಾಜಾಶ್ರಯ ತಪ್ಪಿ […]

Advertisement

Wordpress Social Share Plugin powered by Ultimatelysocial