ಕಲ್ಯಾಣ್ ಚಲನಚಿತ್ರ ಸಂಗೀತಗಾರ

 

ಸುಂದರ ಬೆಳದಿಂಗಳ ಈ ತಂಪಿನ ಅಂಗಳದಲಿ, ನನ್ನ ನಿನ್ನ ನಡುವಿನಲಿ..” ಎಂಬ ಸಾಹಿತ್ಯದ ಮೂಲಕ ಅಮೃತ ಹನಿಸಿದವರು ಕೆ ಕಲ್ಯಾಣ್. ನೆನಪುಗಳ ಮಾತು ಮಧುರಾ (ಚಂದ್ರಮುಖಿ ಪ್ರಾಣಸಖಿ), ಸವಿ ಸವಿ ನೆನಪು ಸಾವಿರ ನೆನಪು (ಮೈ ಆಟೋಗ್ರಾಫ್), ಆಹಾ ಎಂಥಾ ಆ ಕ್ಷಣ ನೆನೆದರೆ ತಲ್ಲಣ (ಆಕಾಶ್), ಸಿಹಿ ಗಾಳಿ ಸಿಹಿ ಗಾಳಿ ಸಹಿ ಹಾಕಿದೆ ಮನಸಿನಲಿ (ಆ ದಿನಗಳು)…ಹೀಗೆ ಅನೇಕ ಸುಂದರ ಗೀತೆಗಳನ್ನು ಕೊಟ್ಟಂತಹ ಸಾಹಿತಿ ಕಲ್ಯಾಣ್.
ಪ್ರೇಮಕವಿ ಎಂದು ಚಿತ್ರಲೋಕದಲ್ಲಿ ಪ್ರಖ್ಯಾತರಾಗಿರುವ ಕೆ. ಕಲ್ಯಾಣ್ ಅವರು 1975ರ ಜನವರಿ 1ರಂದು ಜನಿಸಿದರು. ತಂದೆ ಕೃಷ್ಣಸ್ವಾಮಿ ಅಯ್ಯಂಗಾರ್ ಮತ್ತು ತಾಯಿ ವಿಜಯಲಕ್ಷ್ಮಿ. ಐದು ಮಕ್ಕಳ ಕುಟುಂಬದಲ್ಲಿ ಒಬ್ಬರಾದ ಕಲ್ಯಾಣ್ ಅತ್ಯಂತ ಕಡು ಬಡತನದಲ್ಲಿ ಜೀವನ ಸವೆಸಿದವರು. ತಂದೆ ಅರ್ಚಕ ವೃತ್ತಿಯಲ್ಲಿದ್ದು ಅವರು ಮನೆಗೆ ತರುವ ಪ್ರಸಾದವೇ ಇವರ ಚಿಕ್ಕಂದಿನಲ್ಲಿ ಜೀವನಾಧಾರವಾಗಿತ್ತು. ಒಮ್ಮೆ ಒಂದು ನಾಲ್ಕು ದಿನ ತಂದೆಯವರು ಊರಲ್ಲಿಲ್ಲದಾಗ ಪ್ರಸಾದವೂ ಸಿಗದೆ, ಉಂಡ ಅಂಬಲಿಯ ರುಚಿ ಕಲಿಸಿಕೊಟ್ಟ ಆಧ್ಯಾತ್ಮ ಮತ್ತು ಬಡತನದ ನಡುವೆ ಕಂಡ ಪ್ರೀತಿ ಕಟ್ಟಿಕೊಟ್ಟ ಕನಸಿನ ಶಕ್ತಿ ಅತ್ಯಂತ ದೊಡ್ಡದು ಎಂದು ಭಾವಿಸಿದವರು ಕೆ. ಕಲ್ಯಾಣ್. ಹಾಗೂ ಹೀಗೂ ಬಡತನದಲ್ಲೇ ಎಸ್ ಎಸ್ ಎಲ್ ಸಿ ಓದಿ, ಕಂಪ್ಯೂಟರ್ ಡಿಪ್ಲೋಮಾ ಓದುವುದರಲ್ಲಿ ಮಗ್ನರಾಗಿದ್ದರು. ಇವೆಲ್ಲವುಗಳ ನಡುವೆ ತಾಯಿ ಶಾಸ್ತ್ರೀಯ ಸಂಗೀತ ಹಾಡುತ್ತಿದ್ದು ಅದರಲ್ಲಿ ಬಾಲಕ ಕಲ್ಯಾಣರ ಮನಸ್ಸಿನ ಅಂತರಾಳದ ಯಾವುದೋ ಕಿಡಿ ಅಲೆದಾಡುತ್ತಿತ್ತು. ಈ ಸಂದರ್ಭದಲ್ಲಿ ತಮ್ಮ ಸಂವೇದನೆಗಳನ್ನು ಲೇಖನಿಯಿಂದ ಹಾಳೆಯ ಮೇಲೆ ಇಳಿಸುತ್ತಿದ್ದ ಕಲ್ಯಾಣರ ಮನಸ್ಸು ಕವಿರೂಪಕ್ಕೆ ಕಾಲಿಡತೊಡಗಿತ್ತು. ಮನೆಗೆ ಬಂದ ಒಬ್ಬ ಹಿರಿಯರು ಇವರ ಜಾತಕ ನೋಡಿ ಚಿತ್ರರಂಗದಲ್ಲಿ ನಿನಗೆ ಭವಿಷ್ಯ ಇದೆ ಆ ಹಾದಿಯಲ್ಲಿ ಸಾಗು ಎಂದು ನುಡಿದರು. ಇದನ್ನೇ ತಂದೆ ತಾಯಿಗಳೂ ನಂಬಿ ಪ್ರೋತ್ಸಾಹಿಸಿದರು. ಭವಿಷ್ಯ ನಿಜವಾಯಿತೋ ಎಂಬಂತೆ ಚಿತ್ರರಂಗದಲ್ಲಿರಲಿ, ಬದುಕಿನಲ್ಲೇ ಯಾವುದೇ ಆಧಾರವೂ ಇಲ್ಲದೆ ಇದ್ದ ಬಾಲಕನೊಬ್ಬನಿಗೆ ಕನ್ನಡದ ಧೀಮಂತ ಸಂಗೀತ ನಿರ್ದೇಶಕ ಕವಿ ಹೃದಯಿ ಹಂಸಲೇಖ ಅವರೊಂದಿಗೆ ಶಿಷ್ಯವೃತ್ತಿ ಮಾಡುವ ಅವಕಾಶ ಒದಗಿಬಂತು. ಮುಂದಿನದು ಇತಿಹಾಸ.
ಹದಿನಾರರ ವಯಸ್ಸಿನಲ್ಲೇ ಕಲ್ಯಾಣ್ ಚಲನಚಿತ್ರ ಸಂಗೀತ ಕ್ಷೇತ್ರಕ್ಕೆ ಬಂದವರು. ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ವಿದ್ವಾನ್ ಚನ್ನಕೃಷ್ಣಪ್ಪನವರಲ್ಲಿ ಕಲಿತಿದ್ದ ಕಲ್ಯಾಣರು ಮೇಲೆ ಹೇಳಿದಂತೆ ಹಂಸಲೇಖ ಅವರಲ್ಲಿ ಸಹಾಯಕರಾಗಿ ಅನುಭವಗಳಿಸಿದವರು. ಕಳೆದ ದಶಕಗಳಲ್ಲಿ ಗೀತ ರಚನಕಾರರಾಗಿ, ಚಿತ್ರಸಾಹಿತಿಯಾಗಿ ಮತ್ತು ಸಂಗೀತ ನಿರ್ದೇಶಕರಾಗಿ ಅಪಾರ ಸಾಧನೆ ಮಾಡಿರುವ ಕಲ್ಯಾಣ್ ಚಿತ್ರನಿರ್ದೇಶನವನ್ನೂ ಮಾಡಿದ್ದಾರೆ. ಕಲ್ಯಾಣರು ಬರೆದಿರುವ ಗೀತೆಗಳ ಸಂಖ್ಯೆಯೇ ಮೂರು ಸಾವಿರಕ್ಕೂ ಅಧಿಕವಾದದ್ದು. ಇವುಗಳಲ್ಲಿ ಸುಮಾರು ಚಲನಚಿತ್ರಗಳು, ಕಿರುತೆರೆ ಧಾರಾವಾಹಿಗಳು, ಮ್ಯೂಸಿಕ್ ಆಲ್ಬಂಗಳು, ಜಾನಪದ, ಶಾಸ್ತ್ರೀಯ, ಪಾಶ್ಚಾತ್ಯ, ಫ್ಯೂಶನ್ ಇತ್ಯಾದಿ ಎಲ್ಲವೂ ಅಡಕವಿವೆ.
ಅನೇಕ ಯುವ ಪ್ರತಿಭೆಗಳನ್ನು ಬೆಳಕಿಗೆ ತಂದ ಖ್ಯಾತಿ ಪಡೆದಿರುವ ಕಲ್ಯಾಣರು ತಮ್ಮನ್ನು ಹೆಚ್ಚು ಸದ್ದುಗದ್ದಲವಿಲ್ಲದೆ ಅಪಾರವಾದ ಸಮಾಜಸೇವಾ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡವರಾಗಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿದ್ಯಾ ಬಾಲನ್ ಪ್ರತಿಭಾವಂತ ಚಲನಚಿತ್ರ ಕಲಾವಿದರು

Sun Jan 1 , 2023
  ಒಂದು ರಾಷ್ಟ್ರ ಪ್ರಶಸ್ತಿ, ಆರು ಫಿಲಂ ಫೇರ್, ಹಲವು ಸ್ಕ್ರೀನ್ ಪ್ರಶಸ್ತಿಗಳನ್ನು ಗಳಿಸಿರುವ ವಿದ್ಯಾಬಾಲನ್ ಚಲನಚಿತ್ರವೆಂಬ ಬಣ್ಣದ ಲೋಕದಲಿ ಏಕತಾನತೆಯ ಪಾತ್ರಗಳಲ್ಲಿ ಕಳೆದುಹೋಗುವ ಕಲಾವಿದರ ನಡುವೆ ಅಪವಾದವೆಂಬಂತೆ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾ ತಮ್ಮ ಪ್ರತಿಭೆಯನ್ನು ಪ್ರಕಾಶಪಡಿಸುತ್ತಿರುವವರು. ವಿದ್ಯಾಬಾಲನ್ 1978ರ ಜನವರಿ 1ರಂದು ಜನಿಸಿದರು. ಸೋಷಿಯಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ವಿದ್ಯಾ ತಮ್ಮ ಹದಿನಾರರ ವಯಸ್ಸಿನಲ್ಲೇ ‘ಹಂ ಪಾಂಚ್’ ಎಂಬ ಕಿರುತೆರೆ ಧಾರಾವಾಹಿಯ ಪಾತ್ರದಲ್ಲಿ ಕಂಡಿದ್ದರು. ತಮ್ಮ ವ್ಯಾಸಂಗದ ಜೊತೆ […]

Advertisement

Wordpress Social Share Plugin powered by Ultimatelysocial