Karnataka Budget 2023 Expectations: ಚಾಮರಾಜನಗರದ ಜನರು ಸಂತೃಪ್ತಿದಾಯಕ ಬಜೆಟ್ ಕೊಡುತ್ತಾರೆ ಎಂಬ ವಿಶ್ವಾಸ

ಚುನಾವಣೆ ಹೊಸ್ತಿಲಿನಲ್ಲಿ ಬಿಜೆಪಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸುತ್ತಿರುವ ಬಜೆಟ್ ಮೇಲೆ ಜಾನಪದ ತವರೂರು, ಗಡಿ ಜಿಲ್ಲೆಯಾದ ಚಾಮರಾಜನಗರದ ಜನರು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚುನಾವಣೆ ಪೂರ್ವದಲ್ಲಾದರೂ ಜಿಲ್ಲೆಯ ಜನರಿಗೆ ಸಂತೃಪ್ತಿದಾಯಕ ಬಜೆಟ್ ಕೊಡುತ್ತಾರೆ ಎಂಬ ವಿಶ್ವಾಸ ಇಲ್ಲಿನವರದ್ದಾಗಿದೆ.

ಚಾಮರಾಜನಗರ ಜಿಲ್ಲೆಯಲ್ಲಿ ಬಾಳೆ, ಅರಿಶಿಣ ಹಾಗೂ ಟೊಮ್ಯಾಟೊ, ಸಣ್ಣ ಈರುಳ್ಳಿಯನ್ನು ಬಹುಪಾಲು ಮಂದಿ ರೈತರು ಬೆಳೆಯುತ್ತಿದ್ದು, ಇದಕ್ಕೆ ತಮಿಳುನಾಡು ಮತ್ತು ಮೈಸೂರು ಉತ್ತಮ ಮಾರುಕಟ್ಟೆಗಳಾಗಿದೆ. ಅರಿಶಿಣಪುಡಿ ತಯಾರಿಕಾ ಘಟಕ ಮತ್ತು ಟೊಮ್ಯಾಟೊ, ಬಾಳೆ ಸಂಸ್ಕರಣ ಘಟಕವನ್ನು ಸ್ಥಾಪಿಸಬೇಕೆಂದು ರೈತರ ಬಹುವರ್ಷಗಳ ಬೇಡಿಕೆಯಾಗಿದೆ.

ಜೊತೆಗೆ, ಹಣ್ಣು-ತರಕಾರಿ ಸಾಗಾಟಕ್ಕೆ ಗ್ರೀನ್ ವೆಹಿಕಲ್ ಮತ್ತು ಕೋಲ್ಡ್ ಸ್ಟೋರೇಜ್ ದೊರಕಿಸಿಕೊಡಬೇಕೆಂಬುದು ರೈತರ ಒತ್ತಾಯವಾಗಿದ್ದು, ಈ ಬಾರಿಯಾದರೂ ಸಿಎಂ ಇತ್ತಕಡೆ ಕಿವಿಗೊಡುತ್ತಾರಾ ಅನ್ನುವುದನ್ನು ಕಾದು ನೋಡಬೇಕಿದೆ‌.

ಮೊದಲು ರೇಷ್ಮೆಗೆ ಜಿಲ್ಲೆ ಹೆಸರುವಾಸಿಯಾಗಿತ್ತು. ಈಗ, ರೇಷ್ಮೆಯನ್ನು ಬೆಳೆಯುವವರೇ ಇಲ್ಲದಂತಾಗಿದೆ. ರೇಷ್ಮೆಗೆ ಜಿಲ್ಲೆಯಲ್ಲಿ ಮಾರುಕಟ್ಟೆ ಒದಗಿಸಲು ಸಿಲ್ಕ್ ಪಾರ್ಕ್ ನಿರ್ಮಾಣ ಮಾಡಬೇಕು. ಮತ್ತು ರೇಷ್ಮೆ ಬೆಳೆಗೆ ಉತ್ತೇಜನ ನೀಡಲು ಯೋಜನೆಗಳನ್ನು ತರಬೇಕಿದೆ.

ಕಳೆದ ಮೈತ್ರಿ ಸರ್ಕಾರದ ಅವಧಿಯಲ್ಲಿ ಎಚ್.ಡಿ‌.ಕುಮಾರಸ್ವಾಮಿಯವರ ರೇಷ್ಮೆ ಕಾರ್ಖಾನೆ ಪುನರುಜ್ಜೀವನಗೊಳಿಸುವ ಭರವಸೆ ಇನ್ನೂ ಈಡೇರಿಲ್ಲ. ರೇಷ್ಮೆಯಿಂದ ವಿಮುಖರಾಗಿರುವ ರೈತರಿಗೆ ಉತ್ತೇಜನ ಕೊಡಬೇಕಿದೆ‌.

ವಿಶೇಷ ಪ್ಯಾಕೇಜ್ ಕೊಡಬೇಕಿದೆ

ಹೈದರಾಬಾದ್ ಕರ್ನಾಟಕ ಈಗ ಕಲ್ಯಾಣ ಕರ್ನಾಟಕವಾಗಿ ನಿರೀಕ್ಷೆಯಂತೆ ಅಭಿವೃದ್ಧಿಗೊಳ್ಳುತ್ತಿದೆ. ಅದೇ ರೀತಿ, ಎರಡು ರಾಜ್ಯಗಳ ಗಡಿಯನ್ನು ಹಂಚಿಕೊಂಡರೂ, ವ್ಯವಹಾರಿಕ ಸಂಬಂಧ ಗಟ್ಟಿಯಾಗಿದ್ದರೂ ಕನ್ನಡವೇ ಉಸಿರಾಗಿರುವ ಚಾಮರಾಜನಗರ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಕೊಡಬೇಕಿದೆ.

ಪಕ್ಕದ ಮೈಸೂರು, ಮಂಡ್ಯದ ಗಡಿಗಳನ್ನಷ್ಟೇ ಚಾಮರಾಜನಗರ ಹೊಂದಿದ್ದು, ಆ ಜಿಲ್ಲೆಗಳಲ್ಲಾಗುತ್ತಿರುವ ವೇಗದ ಬೆಳವಣಿಗೆ ಚಾಮರಾಜನಗರದಲ್ಲಿಲ್ಲ. ಈಗಲೂ ಪಕ್ಕದ ಜಿಲ್ಲೆಗಳನ್ನೇ ಉದ್ಯೋಗಕ್ಕೆ ಆಶ್ರಯಿಸಬೇಕಿದ್ದು, ಜಿಲ್ಲೆಗೆ ವಿಶೇಷ ಪ್ಯಾಕೇಜ್ ಘೋಷಿಸಿ ಜಿಲ್ಲಾಭಿವೃದ್ಧಿಗೆ ವೇಗ ಕೊಡಬೇಕಿದೆ ಎನ್ನುವುದು ಇಲ್ಲಿನ ಜನರ ಬೇಡಿಕೆ ಆಗಿದೆ.

ಕನ್ನಡ ಭವನ ನಿರ್ಮಾಣ ಆಗಬೇಕು

ಎರಡು ರಾಜ್ಯಗಳ ಗಡಿ ಹೊಂದಿದ್ದರೂ, ಅಚ್ಚ ಕನ್ನಡವೇ ಮೇಳೈಸಿರುವ ಜಿಲ್ಲೆಯಲ್ಲಿ ಕನ್ನಡ ಭವನ ನಿರ್ಮಾಣ ಮಾಡಬೇಕೆಂಬುದು ಬಹುದಿನಗಳ ಬೇಡಿಕೆಯಾಗಿದೆ. ಹಾಗೆಯೇ ಚಾಮರಾಜನಗರದಲ್ಲೊಂದು ಉಪನಗರ ನಿರ್ಮಾಣ ಮಾಡಬೇಕೆಂಬುದು ಒತ್ತಾಯವಾಗಿದೆ.

ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕು

ಚಾಮರಾಜನಗರ ಶೇ.50-52 ರಷ್ಟು ಅರಣ್ಯದಿಂದ ಕೂಡಿರುವ ಸಂಪದ್ಭರಿತ ಜಿಲ್ಲೆಯಾಗಿದೆ. ಎರಡು ಹುಲಿ ಸಂರಕ್ಷಿತ ಪ್ರದೇಶ, ಎರಡು ವನ್ಯಜೀವಿಧಾಮಗಳನ್ನು ಒಳಗೊಂಡ ರಾಜ್ಯದ ಏಕೈಕ ಜಿಲ್ಲೆಯಾಗಿದೆ‌‌. ಮೈಸೂರಿಗೆ ಬರುವ ಲಕ್ಷಾಂತರ ಪ್ರವಾಸಿಗರನ್ನು ಚಾಮರಾಜನಗರಕ್ಕೂ ಕರೆತರುವಲ್ಲಿ ಸರ್ಕಾರದ ಇಚ್ಛಾಶಕ್ತಿ ಪ್ರಮುಖ ಪಾತ್ರ ವಹಿಸಲಿದ್ದು, ಪ್ರವಾಸೋದ್ಯಮಕ್ಕೆ ಉತ್ತೇಜನ ಕೊಟ್ಟರೇ ಜಿಲ್ಲೆಗೆ ಅನೂಕೂಲ. ಚಾಮರಾಜನಗರಕ್ಕೆ ಎರಡು ಬಾರಿ ಭೇಟಿ ಕೊಟ್ಟಿರುವ ಬಸವರಾಜ ಬೊಮ್ಮಾಯಿ ಅವರು ತಮ್ಮ ಬಜೆಟ್‌ನಲ್ಲಿ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಆದ್ಯತೆ ಕೊಡುತ್ತಾರೆ ಎನ್ನುವ ನಿರೀಕ್ಷೆ ಇದೆ.

ಪ್ರವಾಸಿಗರನ್ನ ಸೆಳೆಯುವ ಪ್ಲಾನ್‌

ಇಕೋ ಟೂರಿಸಂ, ಯಾತ್ರಾ ಪ್ರವಾಸೋದ್ಯಮ, ಜಲಪಾತಗಳ ವೀಕ್ಷಣೆ ಜಿಲ್ಲೆಯಲ್ಲಿ ಸಾಧ್ಯವಾಗಲಿದೆ. ಮಲೆಮಹದೇಶ್ವರ ಬೆಟ್ಟ, ಬಿಳಿಗಿರಿರಂಗನ ಬೆಟ್ಟ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಬಂಡೀಪುರ ಮತ್ತು ಕೆ‌.ಗುಡಿಯಲ್ಲಿ ಸಫಾರಿ, ಹೊಗೆನಕಲ್, ಭರಚುಕ್ಕಿ ಜಲಪಾತ ಹೀಗೆ ಹತ್ತಾರು ಪ್ರೇಕ್ಷಣೀಯ ಸ್ಥಳಗಳನ್ನು ಬರೀ ರಾಜ್ಯಗಳಲ್ಲದೇ, ವಿದೇಶಿಗಳಿಗೆ ಪರಿಚಯಿಸುವ ಕೆಲಸವನ್ನು ಬೊಮ್ಮಾಯಿ ಮಾಡುತ್ತಾರೆಂಬ ನಂಬಿಕೆ ಜನರದ್ದಾಗಿದೆ‌.

ಪ್ರಾಣಿ ಸಂಘರ್ಷಕ್ಕೆ ಬ್ರೇಕ್ ಹಾಕಿ

ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸಲು ಈಗಾಗಲೇ ರೇಷ್ಮೆ ಇಲಾಖೆಯ ಸ್ಥಳ ಕೊಟ್ಟಿದ್ದರೂ, ನಿರ್ಮಾಣ ಕಾರ್ಯ ಆರಂಭವಾಗುವ ಸೂಚನೆ ಕಾಣುತ್ತಿಲ್ಲ. ಆದ್ದರಿಂದ, ವಿಶೇಷ ಅನುದಾನದ ಮೂಲಕ ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತ ಬಸ್ ನಿಲ್ದಾಣ, ಪ್ರತಿ ಗ್ರಾಮಗಳಿಗೆ ಬಸ್ ಸಂಪರ್ಕ ಕಲ್ಪಿಸುವ ಜವಾಬ್ದಾರಿ ಸಿಎಂ ಅವರ ಮೇಲಿದೆ.

ಇದರ ಜೊತೆಗೆ ಜಿಲ್ಲಾ ಕೇಂದ್ರದಲ್ಲಿ ಒಂದು ಸಂಸ್ಕೃತ ಪಾಠಶಾಲೆ, ಸರ್ಕಾರಿ ಫಾರ್ಮಸಿ ಕಾಲೇಜು ಮಂಜೂರು ಮಾಡಿದರೆ ಉದ್ಯೋಗಕ್ಕೆ ನೆರವಾಗಲಿದೆ ಎಂಬುದು ಜಿಲ್ಲೆ ಜನತೆಯ ಅಭಿಮತವಾಗಿದೆ.

ಜಿಲ್ಲೆಯ ಹಲವು ನಿರೀಕ್ಷೆಗಳು

ಬಹುಮುಖ್ಯವಾಗಿ ಜಿಲ್ಲೆಯಲ್ಲಿ ಪ್ರಾಣಿ ಮತ್ತು ಮಾನವ ಸಂಘರ್ಷ ದೊಡ್ಡ ಸಮಸ್ಯೆಯಾಗಿದ್ದು, ಇದನ್ನು ತಪ್ಪಿಸಲು ಶಾಶ್ವತ ಯೋಜನೆ ರೂಪಿಸಬೇಕು. ಇಲ್ಲವೇ ಶಾಶ್ವತ ಕಾರ್ಯಪಡೆ ಜಿಲ್ಲೆಗೆ ಬೇಕಿದೆ. ಬೆಳೆ ಹಾನಿಗೆ ತಕ್ಕ ಸಮರ್ಪಕ ಪರಿಹಾರವನ್ನು ಸರ್ಕಾರ ಕೊಡಲು ಬಜೆಟ್‌ನಲ್ಲಿ ಹೊಸ ಯೋಜನೆ ಘೋಷಣೆ ಮಾಡಬೇಕೆಂವುದು ರೈತರ ಆಗ್ರಹವಾಗಿದೆ.

ಹಾಗೆಯೇ ಬಹುತೇಕ ಸರ್ಕಾರಿ ಶಾಲೆಗಳು ಶಿಥಿಲಗೊಂಡಿದ್ದು, ಇವುಗಳ ನಿರ್ಮಾಣಕ್ಕಾಗಿ ಹಣ, ರಸ್ತೆಗಳಿಗೆ ಅನುದಾನ, ಹೆಲಿ ಟೂರಿಸಂ, ಗುಡಿ ಕೈಗಾರಿಕೆಗಳಿಗೆ ಸಿಎಂ ಬೊಮ್ಮಾಯಿ ಒತ್ತು ಕೊಡುವ ನಂಬಿಕೆ ಇದ್ದು, ಜನರ ನಿರೀಕ್ಷೆ ಸಾಕಾರಗೊಳ್ಳುತ್ತದೆಯೋ ಎಂಬುದನ್ನು ಕಾದು ನೋಡಬೇಕಿದೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

3 ತಿಂಗಳ ಭ್ರೂಣವನ್ನು ರಸ್ತೆಗೆ ಎಸೆದು ಪರಾರಿಯಾದ ಯುವ ಜೋಡಿ,

Sat Feb 11 , 2023
ಗುಜರಾತ್‌ನ ಸೂರತ್ ನಗರದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ನಗರದ ಗೊಡತಾರಾ ಪ್ರದೇಶದಲ್ಲಿ ಯುವ ಜೋಡಿಯೊಂದು ರಸ್ತೆಬದಿಯಲ್ಲಿ ಭ್ರೂಣ ಎಸೆದು ಪರಾರಿಯಾದ ಹೃದಯವಿದ್ರಾವಕ ಘಟನೆ ಜರುಗಿದೆ. 3 ತಿಂಗಳ ಭ್ರೂಣವನ್ನು ನಿರ್ದಾಕ್ಷಿಣ್ಯವಾಗಿ ರಸ್ತೆಯಲ್ಲಿ ಬಿಸಾಡಿ ಹೋಗಿರುವ ದೃಶ್ಯ ಅಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದರ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯುವ ಜೋಡಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಭ್ರೂಣವನ್ನು ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಘಟನೆಯ ಕುರಿತು ರಾತ್ರಿ ಗಸ್ತಿನಲ್ಲಿದ್ದ ಪೊಲೀಸರಿಗೆ […]

Advertisement

Wordpress Social Share Plugin powered by Ultimatelysocial