ಕೆ. ಎಂ. ಚಿಣ್ಣಪ್ಪ ನಾಡು

ಕೆ. ಎಂ. ಚಿಣ್ಣಪ್ಪ ನಾಡು ಕಂಡ ಮಹಾನ್ ಕಾಡುರಕ್ಷಕ. ಹಲವು ರೀತಿಯಲ್ಲಿ ಕಾಡುಗಳ್ಳರ ಪಾಲಾಗಿದ್ದ ನಾಗರಹೊಳೆ ಕಾಡನ್ನು ಹಸುರಿನ ಬನಸಿರಿಯಾಗಿ ಪ್ರಾಣಿಸಂಕುಲಗಳ ಉತ್ತಮ ನೆಲೆಯಾಗಿ ರೂಪಿಸಿದವರು ಚಿಣ್ಣಪ್ಪ. ಮಾರ್ಚ್ 20 ಈ ಅಪೂರ್ವ ಸಾಹಸಿಯ ಜನ್ಮದಿನ.
ಚಿಣ್ಣಪ್ಪನವರ ಕುರಿತು ಡಾ. ಕೆ. ಶಿವರಾಮ ಕಾರಂತರು ಹೀಗೆ ಬರೆಯುತ್ತಾರೆ:
“ನಾಗರಹೊಳೆ ಅರಣ್ಯದಲ್ಲಿ ಚಿಣ್ಣಪ್ಪ ಎಂಬೊಬ್ಬ ಅರಣ್ಯಾಧಿಕಾರಿ ಪಶುಪ್ರೀತಿಯಿಂದಲೇ ಸಲ್ಲದ ಆರೋಪಕ್ಕೆ ಗುರಿಯಾದ! ಈ ಅರಣ್ಯಧಾಮದ ಆಚೀಚೆ ಹಂದಿ, ಜಿಂಕೆ, ಕಡವೆಗಳ ಮಾಂಸಕ್ಕೆ ಹಸಿದವರಿದ್ದಾರೆ….. ಅವನ್ನು ಕಾಪಾಡಲು ಯತ್ನಿಸಿದ ಚಿಣ್ಣಪ್ಪನವರ ಮೇಲೆಯೇ ಕೊಲೆ ಆರೋಪ ಹೊರಿಸಿದ ಚತುರರೂ ಇದ್ದಾರೆ. ಅವರೀಗ ಈ ಕೃತಜ್ಞರ ತಂಟೆ ಬೇಡವೆಂದು ಉದ್ಯೋಗ ನಿವೃತ್ತರಾದರು. ಸಮಾಜಕ್ಕೆ ಒಳಿತು ಮಾಡುವವರು ಕಳ್ಳಕಾಕರಿಗೆ ಪ್ರಿಯವಾಗಲಾರರು – ಎಂಬ ವಿಷಯ ಚಿಣ್ಣಪ್ಪನವರನ್ನು ನೆನೆದರೆ ತಿಳಿದೀತು! ಅವರ ಮೇಲಿನ ಸೇಡನ್ನು ತೀರಿಸಲು ಅವರ ಸ್ವಂತ ಮನೆಯನ್ನು ಸಹ ಸುಟ್ಟು ಕಾಡಿದರು.” ಈ ಮಾತುಗಳು ಚಿಣ್ಣಪ್ಪನವರನ್ನು ಕುರಿತು ಬಹಳಷ್ಟು ಹೇಳುತ್ತವೆ.
ಕೆ. ಎಮ್. ಚಿಣ್ಣಪ್ಪನವರು ನಾಗರಹೊಳೆ ಬದಿಯಲ್ಲಿರುವ ಗ್ರಾಮವೊಂದರಲ್ಲಿ ಜನಿಸಿದರು. ಕಾಲೇಜಿನ ಶಿಕ್ಷಣ ಪಡೆಯಲು ಅನುಕೂಲವಿಲ್ಲದ ಕಾರಣ ಅವರು ಕೆಲಸ ಹುಡುಕುವುದು ಅನಿವಾರ್ಯವಾಯಿತು. 1967ರಲ್ಲಿ ಅವರಿಗೆ ಅರಣ್ಯ ಇಲಾಖೆಯಲ್ಲಿ ಉದ್ಯೋಗ ಲಭಿಸಿ ನಾಗರಹೊಳೆಯಲ್ಲಿ ಕಾರ್ಯನಿರ್ವಹಿಸತೊಡಗಿದರು.
ಚಿಣ್ಣಪ್ಪನವರು ಕಾರ್ಯನಿರ್ವಹಣೆಯ ಪ್ರಾರಂಭದ ದಿನಗಳಿಂದಲೇ ತಮ್ಮ ಅಸಾಧಾರಣ ಕಾರ್ಯತತ್ಪರತೆ, ಶ್ರದ್ಧೆ, ಪ್ರಾಮಾಣಿಕತೆ ಮತ್ತು ಕಾಡುಗಳ್ಳರ ವಿರುದ್ಧ ಖಡಾಖಂಡಿತವಾದ ನಿಷ್ಠುರ ಕಾರ್ಯಗಳಿಗೆ ಹೆಸರಾದರು. ಒಮ್ಮೆ ಅವರು ಸಂದರ್ಶನದಲ್ಲಿ ಹೇಳಿದ್ದ ಮಾತು ನೆನಪಾಗುತ್ತದೆ. “ನಾನು ನಾಗರಹೊಳೆ ಕಾಡಿನೊಳಕ್ಕೆ ಉದ್ಯೋಗ ಅರಸಿ ಬಂದಾಗ ಕಾಡಿನ ಮರಗಳನ್ನು ಸಾಗಿಸುತ್ತಿದ್ದ ಲಾರಿಯೊಂದನ್ನು ಹತ್ತಿ ಬಂದೆ. ಹಾಗೆ ಬರುವಾಗ ಅಂತದ್ದೇ ಕೆಲವು ಲಾರಿಗಳನ್ನು ಕಂಡಾಗ ಹೀಗೆ ಕಡಿದ ಮರಗಳು ಲಾರಿಯಲ್ಲಿ ಹೋಗುತ್ತಿದ್ದರೆ, ಮುಂದಿನ ಇಪ್ಪತ್ತು ಮೂವತ್ತು ವರ್ಷಗಳಲ್ಲಿ ಈ ಕಾಡು ನಿರ್ಣಾಮವಾಗುತ್ತದೆ ಅನಿಸಿತು. ಇಂದು ನನಗೆ ಈ ಕಾಡು ಇನ್ನೂ ಬಹುಕಾಲ ಉಳಿಯುವಂತ ಕೆಲಸ ಮಾಡಿದ್ದೇನೆ ಎಂಬ ಸಂತೃಪ್ತಿಯಿದೆ” ಎಂದು ಅವರು ನುಡಿದಿದ್ದರು. ನಾಗರಹೊಳೆ ಕಾಡು ಅವರು ಬರುವ ಮುಂಚೆ ಇದ್ದ 250 ಚದರ ಕಿಲೋಮೀಟರ್ ವ್ಯಾಪ್ತಿಯಿಂದ ಮುಂದೆ ಅವರಿದ್ದ ಕಾಲುದಶಕದ ಅವಧಿಯಲ್ಲಿ 640 ಚದರ ಕಿಲೋಮೀಟರಿನಷ್ಟು ವ್ಯಾಪ್ತಿ ಪಡೆಯಿತು.
ಈ ಕೆಲಸ ಸುಲಭವಾಗಿ ಆದದ್ದಲ್ಲ.ಚಿಣ್ಣಪ್ಪ ಅವರು ದಿನದ 24 ಗಂಟೆಯೂ ಕಾಡು ಗಸ್ತು ತಿರುಗುತ್ತಾ ಕೆಲಸದಲ್ಲೇ ತೊಡಗಿರುತ್ತಿದ್ದರು.
ಹೀಗೆ ಶೀಘ್ರದಲ್ಲೇ ಅವರು ಅಂದಿನ ದಿನಗಳಲ್ಲಿ ಅರಣ್ಯಾಧಿಕಾರಿಗಳಾಗಿದ್ದ ಅಚ್ಚಯ್ಯನವರ ಮೆಚ್ಚುಗೆಗೆ ಪಾತ್ರರಾದರು. ಅಂದಿನ ದಿನದಲ್ಲಿ ಅಚ್ಚಯ್ಯನವರು ಉಲ್ಲಾಸ ಕಾರಂತರ ಬಳಿ ಮಾತನಾಡುತ್ತಾ “ಇನ್ನು ಈ ಕಾಡೂ, ಕಾಡು ಪ್ರಾಣಿಗಳು ಉಳಿಯಬೇಕಾದರೆ ಯಾರು ಎಷ್ಟು ಪ್ರಯತ್ನಪಟ್ಟರೂ ಸಾಲದು. ಈಗ ಚಿಣ್ಣಪ್ಪ ಎಂಬ ಯುವಕನೊಬ್ಬ ಫಾರೆಸ್ಟರ್ ಆಗಿದ್ದಾನೆ, ಅವನೇನಾದರೂ ನಾಳೆಯ ಕಾಲಕ್ಕೆ ರೇಂಜರ್ ಆಗಿ ಇಲ್ಲಿಗೆ ಬಂದರೆ ಕಾಡೇನಾದರೂ ಉಳಿದೀತು. ಇಲ್ಲವಾದರೆ ಎಲ್ಲ ಹಾಳಾಗಿ ಹೋಗುತ್ತದೆ.” ಚಿಣ್ಣಪ್ಪನವರು 1969ರ ವೇಳೆಗೆ ನಾಗರಹೊಳೆಗೆ ಅರಣ್ಯಾಧಿಕಾರಿಗಳಾದರು.
ಆಗೆಲ್ಲ ವನ್ಯಜೀವಿ ಸಂರಕ್ಷಣಾ ಕಾಯಿದೆಯೇನೂ ಇರಲಿಲ್ಲ. ಹಳ್ಳಿಗರಾಗಲಿ, ಪಟ್ಟಣಿಗರಾಗಲಿ ಜನರೆಲ್ಲರಿಗೆ ವಿಚಾರ ಒಂದೇ-ಪ್ರಾಣಿಗಳನ್ನು ಬೇಟೆಯಾಡಿ ಕೊಂದು ತಿನ್ನುವುದು. ಕಾಡಿನೊಳಗೆ ಎಲ್ಲಿ ನೋಡಿದರೂ ಜನಸಂಚಾರ, ಬೇಸಾಯ, ಬೇಟೆ-ಯಾವುದು ಉಂಟು, ಯಾವುದು ಇಲ್ಲ ಎಂದು ಕೇಳಬೇಕಾಗಿಯೆ ಇರಲಿಲ್ಲ. ಅಂದಿನ ಸಂದರ್ಭಗಳಲ್ಲಿ ಕಾಡಿನ ಒಳಹೊಕ್ಕ ಜನರಿಗೂ ಕೂಡಾ ಎಲ್ಲೋ ಎರಡು ಮೂರು ಜಿಂಕೆಗಳನ್ನು, ಒಂದು ಆನೆಯನ್ನು, ಮತ್ತೆ ಯಾವಾಗಲೋ ಒಂದೆರಡು ಸಲ ಕಾಟಿಗಳನ್ನು ಕಂಡರುಂಟು ಅಷ್ಟೇ. ಬೇಟೆಯ ನಿಯಂತ್ರಣವಾದ ಹಾಗೆ ಪ್ರಾಣಿಗಳ ಸಂಖ್ಯೆಯೂ ಹೆಚ್ಚತೊಡಗಿತು. ಕಾಡಿನಲ್ಲಿ ನೆಲಸಿದ್ದವರ ಬೆಳೆಗಳಿಗೆ ಪ್ರಾಣಿಗಳು ಕಾಟ ಕೊಡಲಾರಂಭಿಸಿದಂತೆ ವಿಧಿಯಿಲ್ಲದೆ ಅರಣ್ಯದಿಂದ ಎಷ್ಟೋ ಜನ ತಾವಾಗಿಯೇ ಹೊರಹೋದರು. ಇನ್ನಷ್ಟು ಜನರನ್ನು ಹೊರ ಕಳುಹಿಸಲಾಯಿತು. ಕಾಡು ಕಂಗೊಳಿಸತೊಡಗಿತು; ವನ್ಯಜೀವಿಗಳ ಆದರ್ಶನೆಲೆಯಾಯಿತು. ನಾಗರಹೊಳೆಯನ್ನು ಈ ಸ್ಥಿತಿಗೆ ತರುವಲ್ಲಿ ಚಿಣ್ಣಪ್ಪನವರ ಪಾತ್ರ ಮಹತ್ವದ್ದು.
ಒಂದೆಡೆ ಬೇಸಾಯ, ಕಳ್ಳಭಟ್ಟಿ ಮೊದಲಾದ ದಂಧೆಗಳಿಗೆ ಕಾಡನ್ನೇ ನೆಲೆಯಾಗಿ ಮಾಡಿಕೊಂಡ ಜನಸಮೂಹ, “ಕಾಡುಮಾಂಸ” ತಿನ್ನುವುದನ್ನು ಒಂದು ಶೋಕಿಯಾಗಿ ಮಾಡಿಕೊಂಡ ಹಳ್ಳಿಗರು, ಜಮೀನುದಾರರು ಮೊದಲಾದವರು; ಮತ್ತೊಂದೆಡೆ ವನ್ಯಜೀವಿಗಳ ರಕ್ಷಣೆಯಲ್ಲಿ ಯಾವುದೇ ಆಸಕ್ತಿ ಇಲ್ಲದೆ ಬೇಟೆಯಾಡುವುದನ್ನೇ ಒಂದು ಉಪವೃತ್ತಿಯಾಗಿ ಮಾಡಿಕೊಂಡ ಇಲಾಖೆಯದೇ ಸಿಬ್ಬಂದಿ-ಇವರೆಲ್ಲರ ವಿರುದ್ಧ ಚಿಣ್ಣಪ್ಪನವರು “ಒನ್ ಮ್ಯಾನ್ ಆರ್ಮಿ” ಆಗಿದ್ದರು.
ಕಾಡಿನಲ್ಲಿ ನಡೆಯುವ ಜನ ಪ್ರಬಲವಾದ ಟಾರ್ಚು ಮತ್ತಿತರ ಉಪಕರಣಗಳನ್ನು ಒಯ್ದರೆ ಚಿಣ್ಣಪ್ಪನವರು ಅನೇಕ ಬಾರಿ ಕತ್ತಲೆಯಲ್ಲಿ ಅದೂ ಬಹಳ ಸರಾಗವಾಗಿ ನಡೆಯುತ್ತಿದ್ದರು: ಕೈಯಲ್ಲಿ ಟಾರ್ಚ್ ಇದ್ದರೂ ಅದನ್ನು ಉಪಯೋಗಿಸುತ್ತಿರಲಿಲ್ಲ. ಎಲ್ಲೋ ಒಂದೆಡೆ ಒಂದು ಸಣ್ಣ ಕಡ್ಡಿ ಮುರಿದ ಶಬ್ದವಾದರೆ ಕೂಡಲೆ ನಿಂತು ಅಲ್ಲಿ ಆನೆ ಇದೆ ಎನ್ನುತ್ತಿದ್ದರು. ಅವರ ಟಾರ್ಚಿನ ಬೆಳಕಿನಲ್ಲಿ ಪ್ರಾಣಿಯನ್ನು ಕಂಡಮೇಲೆ ಮಾತ್ರವೇ ಅದು ನಿಜವೆಂದು ಜೊತೆಯಿರುವವರಿಗೆ ಗೊತ್ತಾಗುತ್ತಿತ್ತು. ಚಿಣ್ಣಪ್ಪ ಇಂಥ ಅಪರೂಪದ ಸೂಕ್ಷ್ಮ ಕಾಡಿನ ಅರಿವು ಉಳ್ಳವರಾಗಿದ್ದರು.
ಚಿಣ್ಣಪ್ಪನವರು ಹೆಚ್ಚು ವಿದ್ಯಾಭ್ಯಾಸ ಮಾಡಿದವರಲ್ಲ. ಚಿಣ್ಣಪ್ಪನವರಲ್ಲಿ ಅಪಾರ ಕುತೂಹಲ ಜೀವಂತವಾಗಿ ಉಳಿದುದರಿಂದಲೇ ಅವರ ಅರಣ್ಯ ಪರಿಜ್ಞಾನ ಬೆಳೆಯಲು ಸಾಧ್ಯವಾಯಿತು. ಚಿಣ್ಣಪ್ಪನವರು ಅರಣ್ಯ ಇಲಾಖೆಗೆ ಸೇರಿದ ಮೇಲೆ ಅವರಿಗೆ ಕಾಡೇ ಶಾಲೆಯಾಯಿತು. ಅವರು ಅರಣ್ಯದ ಒಡನಾಟದಿಂದ ಅಪಾರ ಜ್ಞಾನವನ್ನು ಸಂಪಾದಿಸಿದರು. ಯಾವುದೇ ಒಂದು ಸನ್ನಿವೇಶದಲ್ಲಿ ಕಂಡುಬರುವ ಕುರುಹು, ಸೂಚನೆಗಳನ್ನೆಲ್ಲಾ ಒಟ್ಟುಗೂಡಿಸಿ ಇದು ಹೀಗೆಯೇ ನಡೆದಿದೆ ಎಂದು ಖಚಿತವಾಗಿ ಹೇಳಬಲ್ಲ ತರ್ಕ ಪ್ರಾವೀಣ್ಯ, ಕಾಡಿನ ಅರಿವು ಚಿಣ್ಣಪ್ಪನವರಿಗೆ ಸಿದ್ಧಿಸಿತ್ತು. ಈ ದೃಷ್ಟಿಯಿಂದ ಅವರನ್ನು ಅರಣ್ಯದ “ಷರ್ಲಾಕ್ ಹೋಮ್ಸ್” ಎಂದು ಕರೆಯಲಾಗುತ್ತಿತ್ತು.
ಚಿಣ್ಣಪ್ಪನವರು ಬಹಳ ನಿಷ್ಠುರವಾದಿ. ತಮಗೆ ಸರಿ ಎಂದು ತೋರಿದುದನ್ನು ಇದ್ದದ್ದನ್ನು ಇದ್ದ ಹಾಗೆ ಹೇಳುವವರಾಗಿದ್ದರು. ಅವರ ಈ ಗುಣ ಬಹಳಷ್ಟು ಜನರ ಟೀಕೆಗೆ ಕಾರಣವಾಗಿದ್ದು ಸಹಜ. ಇಲಾಖೆಯ ಮೇಲಧಿಕಾರಿಗಳು, ಅವರು ಯಾವ ಇಲಾಖೆಯವರೇ ಆಗಿರಲಿ, ತಮ್ಮ ಕೈಕೆಳಗಿನವರಿಂದ ಅತಿ ವಿನಯ ವಿಧೇಯತೆಗಳನ್ನು ಅಪೇಕ್ಷಿಸುವವರು. ಅವರಿಗೆ ಚಿಣ್ಣಪ್ಪನವರ ಈ ನೇರ ನಡವಳಿಕೆ ಸಹಿಸುತ್ತಿರಲಿಲ್ಲ. ಹೀಗಾಗಿ ಚಿಣ್ಣಪ್ಪನವರು ತಮ್ಮ ಮೇಲಿನವರಿಂದ “ಒರಟ, ಉದ್ಧಟ” ಮೊದಲಾದ ಬಿರುದುಗಳಿಗೆ ಪಾತ್ರರಾಗಿದ್ದರು.
1988ರಲ್ಲಿ ಒಂದು ಕೊಲೆ ಪ್ರಕರಣದಲ್ಲಿ ಚಿಣ್ಣಪ್ಪನವರನ್ನು ಸಿಲುಕಿಸಿ ದಸ್ತಗಿರಿ ಆಗುವಂತೆ ಮಾಡಿ ನಾಗರಹೊಳೆಯನ್ನು ಅವರ ಮೇಲ್ವಿಚಾರಣೆಯಿಂದ ಮುಕ್ತಗೊಳಿಸುವುದರಲ್ಲಿ ಕೆಲವರು ಯಶಸ್ವಿಯಾದರು. ಉಲ್ಲಾಸ ಕಾರಂತರು ನಡೆಸುತ್ತಿದ್ದ ಹುಲಿಯ ರೇಡಿಯೊ ಕಾಲರಿಂಗ್ ಬಗೆಗೆ ನಡೆದ ವಿವಾದ ಕೇವಲ ಇದೇ ಹಿನ್ನೆಲೆ ಹೊಂದಿತ್ತು. ಅದರ ಫಲವಾಗಿ ಚಿಣ್ಣಪ್ಪನವರನ್ನು ನಾಗರಹೊಳೆಯಿಂದ ಎತ್ತಂಗಡಿ ಮಾಡಿ ಬಳ್ಳಾರಿ ಜಿಲ್ಲೆಯ ಯಾವುದೋ ಊರಿಗೆ ವರ್ಗಾಯಿಸಲಾಯಿತು. ಉಲ್ಲಾಸ ಕಾರಂತರ ಸಂಶೋಧನಾ ಚಟುವಟಿಕೆಗಳನ್ನು ತಡೆಯಲಾಯಿತು. ಉಲ್ಲಾಸ ಕಾರಂತರು ನ್ಯಾಯಾಲಯದ ಮೊರೆಹೊಕ್ಕು ಮರಳಿ ತಮ್ಮ ಸಂಶೋಧನಾ ಕಾರ್ಯವನ್ನು ಆರಂಭಿಸಿದರು. ಆದರೆ ಚಿಣ್ಣಪ್ಪನವರನ್ನು ತೆಗೆದ ಅನಂತರದ ಒಂದೆರಡು ವರ್ಷಗಳಲ್ಲಿ ನಾಗರಹೊಳೆಯ ಅವಸ್ಥೆ ಹೇಳತೀರದಂತಾಯಿತು. ಸರ್ಕಾರ ಬದಲಾಗುತ್ತಿದ್ದಂತೆಯೇ ಚಿಣ್ಣಪ್ಪ ಮರಳಿ ನಾಗರಹೊಳೆಗೇ ಬಂದರು.
ಮುಂದೆ 1992ರಲ್ಲಿ ಚಿಪ್ಪನ ಕೊಲೆ ಪ್ರಕರಣದಲ್ಲಿ ಪರಿಸ್ಥಿತಿ ತೀರಾ ಗಂಭೀರವಾಯಿತು. ಚಿಣ್ಣಪ್ಪನವರನ್ನು ಮೊದಲಿನ ಕೊಲೆ ಪ್ರಕರಣದಲ್ಲಿ ಸಿಲುಕಿಸಿದಾಗಲೂ, ರೇಡಿಯೋ ಕಾಲರಿಂಗ್ ವಿವಾದದಲ್ಲಿ ಅವರನ್ನು ಬಲಿಪಶು ಮಾಡಲು ಯತ್ನಿಸಿದಾಗಲೂ, ‘ವೈಲ್ಡ್ ಲೈಫ್ ಫಸ್ಟ್’ ಸಂಘಟನೆಯಲ್ಲಿದ್ದ ಅನೇಕ ಸದಸ್ಯರು ಚಿಣ್ಣಪ್ಪನವರನ್ನು ಸಂದಿಗ್ಧ ಪರಿಸ್ಥಿತಿಯಿಂದ ಪಾರುಮಾಡುವ ವಿಷಯದಲ್ಲಿ ಬೆಂಬಲಕ್ಕೆ ನಿಂತು ಸಹಕರಿಸಿದರು. ಚಿಪ್ಪನ ಕೊಲೆ ಪ್ರಕರಣದನಂತರ ನಡೆದ ದೊಂಬಿಯಲ್ಲಿ ಚಿಣ್ಣಪ್ಪನವರ ರಕ್ಷಣೆ ಮಾತ್ರವಲ್ಲದೆ, ಉದ್ರಿಕ್ತ ಜನರ ಆಕ್ರೋಶಕ್ಕೆ ತುತ್ತಾಗಿ ಬೆಂದುಹೋದ ಕಾಡಿನ ರಕ್ಷಣೆಯೂ ಅರಣ್ಯಪ್ರೇಮಿಗಳ ಕೆಲಸವಾಯಿತು. ಇಡೀ ಸಂದರ್ಭವನ್ನು ಪತ್ರಿಕಾ ಮಾಧ್ಯಮಗಳ ಮೂಲಕ ಪರಿಣಾಮಕಾರಿಯಾಗಿ ಪ್ರಚಾರಮಾಡಿ ವಸ್ತುಸ್ಥಿತಿಯನ್ನು ವಿವರಿಸಿ ನಾಗರಹೊಳೆಯ ದಹನಕಾಂಡದ ವಿರುದ್ಧ ಸಾರ್ವಜನಿಕರ ಬೆಂಬಲ ಪಡೆಯುವಲ್ಲಿ ಅರಣ್ಯಪ್ರೇಮಿಗಳ ಬಳಗ ಯಶಸ್ವಿಯಾಯಿತು. ಅಲ್ಲದೆ ರಾಜಕೀಯ ವಲಯಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಟ್ಟದಲ್ಲೂ ಒತ್ತಡ ತಂದು ಇಂಥ ಅರಾಜಕ ಪರಿಸ್ಥಿತಿ ಮತ್ತೆ ಬಾರದಂತೆ ನಿಗಾ ವಹಿಸಬೇಕೆಂದು ಒತ್ತಾಯಮಾಡಲಾಯಿತು. ಎರಡೂ ಸರ್ಕಾರಗಳೂ ಕೂಡಲೇ ಕಾರ್ಯಪ್ರವೃತ್ತವಾಗಿ ಎಸ್.ಪಿ., ಜಿಲ್ಲಾಧಿಕಾರಿಗಳ ವರ್ಗಾವಣೆಯಿಂದ ಹಿಡಿದು ಸಿ.ಓ.ಡಿ. ತನಿಖೆಗೆ ಆಜ್ಞಾಪಿಸುವವರೆಗೂ ಕ್ರಮ ಕೈಗೊಳ್ಳುವಂತಾಯಿತು. ಆದರೆ ಚಿಣ್ಣಪ್ಪನವರು ಸ್ವಯಂ ನಿವೃತ್ತಿ ಪಡೆದು
ಶೈಕ್ಷಣಿಕ ಕಾರ್ಯಕ್ರಮ, ಜನಜಾಗೃತಿ ಮೊದಲಾದವುಗಳ ಮೂಲಕ ವನ್ಯಜೀವಿ ಸಂರಕ್ಷಣೆಗಾಗಿ ಹೊರಗಿನಿಂದ ದುಡಿಯುವುದಾಗಿ ನಿರ್ಧರಿಸಿದರು
ಅವರ ನೇತೃತ್ವದಲ್ಲಿ ನಡೆಯುತ್ತಿರುವ ‘ನಾವಿಕೋಯೆಡ್’ ಮತ್ತು ‘ವೈಲ್ಡ್ ಲೈಫ್ ಫಸ್ಟ್’ ಸಂಘಟನೆಗಳು ಯಶಸ್ಸಿನ ದಾರಿ ಕಂಡಿವೆ.
ತಮ್ಮ ವ್ಯಕ್ತಿತ್ವ, ನಡತೆಗಳಲ್ಲಿ ಮಾತ್ರ ಚಿಣ್ಣಪ್ಪ ಯಾವುದೇ ಕಾಲಕ್ಕೆ ಯಾವುದೇ ತೋರಿಕೆಯ ಮಾರ್ಪಾಡನ್ನು ಸಹ ಮಾಡಿಕೊಳ್ಳದ ನಿಷ್ಠುರ ವ್ಯಕ್ತಿ. ಅವರದ್ದು ಅಸಾಮಾನ್ಯ ಧೈರ್ಯ. ಕಾಡಾನೆಯೇ ಆಗಲಿ, ಕತ್ತಿ ಹಿಡಿದ ಹಳ್ಳಿಗರ ಗುಂಪೇ ಇರಲಿ, ಪಾನಮತ್ತ ಪಡ್ಡೆ ಹುಡುಗರ ತಂಡವೇ ಇರಲಿ ಇಲ್ಲಾ ಬಂದೂಕುಧಾರಿ ಕಳ್ಳಬೇಟೆಗಾರರೇ ಸಿಗಲಿ ಚಿಣ್ಣಪ್ಪ ಎಂದೂ ಹೆದರಿ ಹಿಮ್ಮೆಟ್ಟಿದವರಲ್ಲ. ಎಂಥ ಪರಿಸ್ಥಿತಿಯನ್ನೂ ಎದುರಿಸುತ್ತಿದ್ದ ಅವರ ಧೈರ್ಯ ಕೇವಲ ಹುಂಬು ಧೈರ್ಯ ಅಲ್ಲ; ತಮ್ಮ ಶಕ್ತಿ, ಸಾಮರ್ಥ್ಯ ಮತ್ತು ಚಾಣಾಕ್ಷತೆಗಳ ಬಗ್ಗೆ ಅವರಿಗಿದ್ದ ವಿಶ್ವಾಸದ ದ್ಯೋತಕವಾಗಿತ್ತು.
ಕಾಡಿನೊಳಗೆಲ್ಲೋ ಮನೆ ಮಾಡಿಕೊಂಡಿದ್ದು, ಅಲ್ಪಸೌಕರ್ಯಗಳಿಗೇ ತೃಪ್ತಿ ಪಟ್ಟುಕೊಂಡು, ಅವಿದ್ಯಾವಂತ ಆದಿವಾಸಿಗಳ ನೆರೆಹೊರೆಯಲ್ಲಿ ಇದ್ದುಕೊಂಡು, ಬೇಟೆಗಾರರೂ ವಿರೋಧಿಗಳೂ ತನ್ನ ಗಂಡನತ್ತ ಸದಾ ಗುರಿಯಿಟ್ಟುಕೊಂಡೇ ಇರುವ ನಿರಂತರ ಆತಂಕಗಳ ನಡುವೆ ಚಿಣ್ಣಪ್ಪನ ಬೆಂಬಲಕ್ಕೆ ನಿಂತ ಅವರ ಪತ್ನಿ ರಾಧಾರವರ ವ್ಯಕ್ತಿತ್ವ ಅನುಪಮವಾದುದು. ಈ ಪರಿಸ್ಥಿತಿಯಲ್ಲಿ ಹೆಣ್ಣು ಮಗಳೊಬ್ಬಳು ಬದುಕಲು ಅನುವಾಗುವಂತೆ ಮದುವೆಯ ಹೊಸತರಲ್ಲೇ ಚಿಣ್ಣಪ್ಪನವರು ರಾಧಾಗೆ ಬಂದೂಕಿನಿಂದ ಗುಂಡು ಹೊಡೆಯಲು ‘ಶಸ್ತ್ರಾಭ್ಯಾಸ’ ಹೇಳಿಕೊಟ್ಟಿದ್ದರು. ಮನೆಯಲ್ಲಿ ಚಿಣ್ಣಪ್ಪ ಇಲ್ಲದಿದ್ದರೂ ಮೂರು ಗುಂಡು ತುಂಬಿರಿಸಿದ ಕೋವಿಗಳನ್ನು ಗುರಿಗಾರ್ತಿ ರಾಧಾ ಇರಿಸಿಕೊಂಡ ವಿಚಾರ ಸಾರ್ವತ್ರಿಕವಾಗಿ ಗುಸು ಗುಸು ಮಾತಿನಿಂದ ಹಬ್ಬಿ ಯಾವ ಕೇಡಿಗನೂ ಅವರತ್ತ ಬರುವ ಧೈರ್ಯಮಾಡಲಿಲ್ಲ-ಮೂವತ್ತು ವರ್ಷ!
ಐದು ಎಕರೆಗಳಷ್ಟು ಅಲ್ಪವಾದ ತಮ್ಮ ತೋಟಗದ್ದೆಗಳತ್ತ ಕಣ್ಣು ಹಾಯಿಸಲೂ ಬಿಡುವಿಲ್ಲದೆ ಚಿಣ್ಣಪ್ಪ ಕರ್ತವ್ಯನಿರತರಾಗಿದ್ದಾಗ, ಅದನ್ನು ಉಳಿಸಲೂ ಬೆಳೆಸಲೂ ರಾಧಾರವರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಯಾವ ಲಂಚ ವಸೂಲಾತಿಗೂ ಕೈ ಹಾಕದ ಅಪರೂಪದ ಅರಣ್ಯಾಧಿಕಾರಿ ಚಿಣ್ಣಪ್ಪ ನಿವೃತ್ತಿಯಲ್ಲಿ ಇಂದು ಆರ್ಥಿಕವಾಗಿ ತೊಂದರೆ ಇಲ್ಲದೆ ಬದುಕುತ್ತಿದ್ದರೆ ಈ ಐದು ಎಕರೆ ತೋಟವನ್ನು 30 ವರ್ಷಕಾಲ ರಾಧಾ ಬೆವರು ಸುರಿಸಿ ಹಸನಾಗಿ ಮಾಡಿದ್ದೇ ಕಾರಣ.
ಯೋಗಿಯ ಶುದ್ಧಶೀಲ, ನಿರ್ಲಿಪ್ತತೆಗಳನ್ನೂ, ನಿಷ್ಠುರ ಕಾರ್ಯದಕ್ಷತೆಯನ್ನೂ, ಕೀಟಲೆ ಹುಡುಗನ ವಿನೋದ ಪ್ರಜ್ಞೆಯನ್ನೂ, ಹದವಾಗಿ ಬೆರೆಸಿದ ಪಾಕದಿಂದ ಹುಟ್ಟಿದ ಕೆ.ಎಂ. ಚಿಣ್ಣಪ್ಪ, ನಮ್ಮ ನಾಡಿನ ಕಾಡುಗಳಲ್ಲಿ ಓಡಾಡಿದ ಒಂದು ಎತ್ತರದ ಜೀವ. ನಾಗರಹೊಳೆಯಲ್ಲಿ ಅವರ ಕಾಲು ಶತಮಾನದ ಕಾರುಬಾರು ಭಾರತದ ವನ್ಯಜೀವಿ ಸಂರಕ್ಷಣೆಯ ಇತಿಹಾಸ ಪರ್ವಕಾಲದ ಒಂದು ಅಪರೂಪದ ದಾಖಲೆ. ಈ ಘಟನಾವಳಿಗಳೂ, ಚಿಣ್ಣಪ್ಪನವರ ಉನ್ನತ ವ್ಯಕ್ತಿತ್ವವೂ ಟಿ.ಎಸ್.ಗೋಪಾಲ್ Thiru Srinivasachar Gopal ಅವರ ನಿರೂಪಣೆಯಲ್ಲಿ ‘ಕಾಡಿನೊಳಗೊಂದು ಜೀವ’ ಎಂಬ ಕೃತಿಯಲ್ಲಿ ಮೂಡಿಬಂದಿದೆ. ಮೊದಲು ಪೂರ್ಣಚಂದ್ರ ತೇಜಸ್ವಿ ಅವರ ಪುಸ್ತಕ ಪ್ರಕಾಶನದಲ್ಲಿ ಮೂರು ಭಾಗಗಳಲ್ಲಿ ಮೂಡಿಬಂದ ಈ ಕೃತಿ ಮುಂದಿನ ವರ್ಷಗಳಲ್ಲಿ ನವಕರ್ನಾಟಕದವರಿಂದ ಸಂಯುಕ್ತ ಕೃತಿಯಾಗಿ ಪ್ರಕಟಗೊಂಡು ಅನೇಕ ಜನಪ್ರಿಯ ಮರುಮುದ್ರಣಗಳನ್ನು ಕಾಣುತ್ತಾ ಬಂದಿದೆ.
ಹಿರಿಯರೂ, ಶ್ರೇಷ್ಠ ಬದುಕಿಗೆ ಮಾದರಿಯೂ ಆದ ಕೆ. ಎಂ. ಚಿಣ್ಣಪ್ಪನವರಿಗೆ ನಮನಪೂರ್ವಕ ಶುಭಹಾರೈಕೆಗಳು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
Please follow and like us:

Leave a Reply

Your email address will not be published. Required fields are marked *

Next Post

ಉತ್ಪಾದಕತೆಯನ್ನು ಹೆಚ್ಚಿಸಲು ರೈತರಲ್ಲಿ ಕ್ರಾಸ್ ಲರ್ನಿಂಗ್ ಅಗತ್ಯ

Sat Mar 26 , 2022
ಒಂದು ಪ್ರದೇಶದ ಜೈವಿಕ ಆರ್ಥಿಕತೆಯನ್ನು ಉನ್ನತೀಕರಿಸುವಲ್ಲಿ ರೈತರು ಪ್ರಮುಖ ಪಾತ್ರ ವಹಿಸುತ್ತಾರೆ, ಏಕೆಂದರೆ ಅವರು ಕ್ಷೇತ್ರ ಕಾರ್ಯದಲ್ಲಿ ದೈಹಿಕವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಇಂಫಾಲ್ ಕೇಂದ್ರ ಕೃಷಿ ವಿಶ್ವವಿದ್ಯಾಲಯದ (ಸಿಎಯು) ಉಪಕುಲಪತಿ ಅನುಪಮ್ ಮಿಶ್ರಾ ಶುಕ್ರವಾರ ಹೇಳಿದರು. ಉತ್ಪಾದಕತೆಯನ್ನು ಸುಧಾರಿಸಲು ರೈತರಲ್ಲಿ ಅಡ್ಡ ಕಲಿಕೆಯ ಅಗತ್ಯವನ್ನು ಅವರು ಒತ್ತಿ ಹೇಳಿದರು. ಅವರು Imphalpat ಕ್ಯಾಂಪಸ್‌ನ CAU, Lamphalpat ಕ್ಯಾಂಪಸ್‌ನಲ್ಲಿ ನಡೆದ “PMVDY-ಉದ್ಯಮಶೀಲತೆ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ (PMVDY-ESOP) ಅಡಿಯಲ್ಲಿ ತಂತ್ರಜ್ಞಾನ […]

Advertisement

Wordpress Social Share Plugin powered by Ultimatelysocial