ಲಕ್ಷ್ಮಿ ಭಾರತದ ಪ್ರಮುಖ ಸಿನಿಮಾ ತಾರೆ.

 

ಲಕ್ಷ್ಮಿ ನಮ್ಮ ಅಚ್ಚುಮೆಚ್ಚು. ಭಾರತದ ಪ್ರಮುಖ ಸಿನಿಮಾ ತಾರೆಯರಲ್ಲಿ ಲಕ್ಷ್ಮಿ ಸದಾ ಆಪ್ತರಾಗಿ ಕಂಡುಬಂದಿರುವವರು.
1968ರಲ್ಲಿ ತೆರೆಕಂಡ ತಮಿಳು ಚಿತ್ರ ‘ಜೀವನಾಂಶಂ’ ಮೂಲಕ ಚಿತ್ರರಂಗಕ್ಕೆ ಬಂದ ಲಕ್ಷ್ಮಿ ಈಗಲೂ ಸಕ್ರಿಯರಾಗಿ ಅಭಿನಯ ಕ್ಷೇತ್ರದಲ್ಲಿ ಉಳಿದಿದ್ದಾರೆ. ಆಗ ಅವರ ವಯಸ್ಸು ಕೇವಲ 15. ಅವರ ತಂದೆ ವೈ.ವಿ. ರಾವ್ ಮೂಲತಃ ತೆಲುಗಿನವರಾಗಿದ್ದರೂ, ಕನ್ನಡವನ್ನೊಳಗೊಂಡಂತೆ, ಇಡೀ ದಕ್ಷಿಣ ಭಾರತ ಚಿತ್ರರಂಗದಲ್ಲಿ ಅಪಾರ ಹೆಸರನ್ನು ಮಾಡಿದ್ದರು. ಕನ್ನಡ ಚಿತ್ರರಂಗದ ಪ್ರಪ್ರಥಮ ಚಿತ್ರ ‘ಸತಿ ಸುಲೋಚನ’ (1938) ನಿರ್ದೇಶಿಸಿದವರು ಅವರೇ. ಲಕ್ಷ್ಮಿ ಅವರ ತಾಯಿ ರುಕ್ಮಿಣಿ ಮತ್ತು ಅಜ್ಜಿ ನಂಗಂಬಕ್ಕಂ ಜಾನಕಿ ಅವರು ಸಹಾ ಆ ಕಾಲದ ಚಲನಚಿತ್ರ ಅಭಿನೇತ್ರಿಯರು. ಲಕ್ಷ್ಮಿ ಅವರ ಮಗಳು ಐಶ್ವರ್ಯ ಸಹಾ ಚಲನಚಿತ್ರರಂಗದಲ್ಲಿದ್ದವರು. ಹೀಗಾಗಿ ಅವರ ಹಲವು ತಲೆಮಾರುಗಳು ಚಿತ್ರರಂಗದಲ್ಲಿ ಇರುವಂತಾಗಿದೆ.
ಲಕ್ಷ್ಮಿ ಅವರು ಡಿಸೆಂಬರ್ 1952ರ ಡಿಸೆಂಬರ್ 13ರಂದು ಮದ್ರಾಸಿನಲ್ಲಿ ಜನಿಸಿದರು. ಪ್ರಾರಂಭದಿಂದಲೇ ದಕ್ಷಿಣ ಭಾರತದ ನಾಲ್ಕೂ ಪ್ರಮುಖ ಚಿತ್ರರಂಗಗಳಾದ ತಮಿಳು, ಕನ್ನಡ, ತೆಲುಗು, ಮಲಯಾಳಂ ಚಿತ್ರರಂಗಗಳಲ್ಲಿ ನಟಿಸಲಾರಂಭಿಸಿದ ಲಕ್ಷ್ಮಿ ಅವರಿಗೆ, 1974ರಲ್ಲಿ ನಟಿಸಿದ ‘ಚಟ್ಟಕ್ಕಾರಿ’ ಮಲಯಾಳಂ ಚಿತ್ರ ಅಪಾರ ಜನಪ್ರಿಯತೆ ತಂದುಕೊಟ್ಟಿತು. ಅದೇ ಚಿತ್ರ ‘ಜ್ಯೂಲಿ’ ಆಗಿ ಹಿಂದಿ ಚಿತ್ರವಾದಾಗ ಅವರ ಜನಪ್ರಿಯತೆ ದೇಶದೆಲ್ಲೆಡೆ ಹಬ್ಬಿತು. ‘ಜ್ಯೂಲಿ’ ಚಿತ್ರಕ್ಕಾಗಿ ಪ್ರತಿಷ್ಟಿತ ಫಿಲಂಫೇರ್ ಪ್ರಶಸ್ತಿ ಪಡೆದರು. ಹಿಂದಿ ಚಿತ್ರರಂಗದಲ್ಲಿ ಕೆಲವೊಂದು ಚಿತ್ರಗಳಲ್ಲಿ ಅಭಿನಯಿಸಿದ ಅವರಿಗೆ ದಕ್ಷಿಣ ಭಾರತ ಚಿತ್ರರಂಗವೇ ಕ್ಷೇಮವೆನಿಸಿತು. 1977ರಲ್ಲಿ ಸಿಂಗೀತಂ ಶ್ರೀನಿವಾಸರಾಯರು ನಿರ್ದೇಶಿಸಿದ ತಮಿಳು ಚಿತ್ರ ‘ಸಿಲನೇರಂಗಳಿಲ್ ಸಿಲ ಮನಿದರ್ಗಳ್’ ಚಿತ್ರದ ಶ್ರೇಷ್ಠ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದರು.
ತಮ್ಮ ಪ್ರಾರಂಭಿಕ ವರ್ಷಗಳಲ್ಲಿ ರಾಜ್ ಕುಮಾರ್ ಅವರೊಂದಿಗೆ ಒಂದು ಚಿತ್ರದಲ್ಲಿ ನಟಿಸಿ ಹೋಗಿದ್ದ ಲಕ್ಷ್ಮೀ ಅವರು ಪುನಃ ಪ್ರಖ್ಯಾತಿಯಿರುವ ದಿನಗಳಲ್ಲಿ ‘ನಾ ನಿನ್ನ ಮರೆಯಲಾರೆ’ ಚಿತ್ರದಲ್ಲಿ ಅಭಿನಯಿಸಿದರು. ಆ ಚಿತ್ರ ಕನ್ನಡದಲ್ಲಿ ಅಪಾರ ಯಶಸ್ಸು ಸಾಧಿಸಿತು. ಹಾಗಾಗಿ ಮುಂದೆ ‘ಕಿಲಾಡಿ ಜೋಡಿ’, ‘ನಾ ನಿನ್ನ ಬಿಡಲಾರೆ’, ‘ಒಲವು ಗೆಲುವು’, ‘ಅಂತ’, ‘ಪಲ್ಲವಿ ಅನುಪಲ್ಲವಿ’, ‘ಅವಳ ಹೆಜ್ಜೆ’, ‘ಟೋನಿ’, ‘ಸೌಭಾಗ್ಯ ಲಕ್ಷ್ಮಿ’, ‘ಲಯನ್ ಜಗಪತಿ ರಾವ್’, ‘ನಾನೊಬ್ಬ ಕಳ್ಳ’, ‘ಚಂದನದ ಗೊಂಬೆ’, ‘ಬೆಂಕಿಯ ಬಲೆ’, ‘ಇಬ್ಬನಿ ಕರಗಿತು’, ‘ಮುದುಡಿದ ತಾವರೆ ಅರಳಿತು’, ‘ಗಾಳಿ ಮಾತು’, ‘ಬಿಡುಗಡೆಯ ಬೇಡಿ’, ‘ಮಕ್ಕಳಿರಲವ್ವ ಮನೆ ತುಂಬಾ’, ‘ನನ್ನವರು’, ‘ಹೂವು ಹಣ್ಣು’ ಹೀಗೆ ಬಹಳಷ್ಟು ಯಶಸ್ವಿ ಚಿತ್ರಗಳ ನಾಯಕಿಯಾದರು. ದೊರೈ ಭಗವಾನ್ ಜೋಡಿ ನಿರ್ದೇಶಿಸಿದ ಬಹುತೇಕ ಕಾದಂಬರಿ ಆಧಾರಿತ ಚಿತ್ರಗಳಲ್ಲಿ ಅವರು ನಾಯಕಿಯಾಗಿ ನಟಿಸಿದ್ದರು. ‘ಹೂವು ಹಣ್ಣು’ ಚಿತ್ರದ ಅಭಿನಯಕ್ಕೆ ಕರ್ನಾಟಕ ರಾಜ್ಯ ಸರ್ಕಾರದ ಶ್ರೇಷ್ಠ ಅಭಿನೇತ್ರಿಯ ಪ್ರಶಸ್ತಿ ಸಹಾ ಪಡೆದರು.
ತಮಗೆ ಉತ್ತಮ ಪಾತ್ರಗಳನ್ನೂ, ಜನಪ್ರಿಯತೆಯನ್ನೂ ಕೊಟ್ಟ ಕನ್ನಡದ ಬಗ್ಗೆ ವಿಶೇಷ ಒಲವು ಹೊಂದಿರುವ ಲಕ್ಷ್ಮಿ, ಕನ್ನಡದಲ್ಲಿ ‘ಅವಳ ಹೆಜ್ಜೆ’ ಚಿತ್ರದ ನಿರ್ಮಾಣವನ್ನೂ, ನಂತರದಲ್ಲಿ ‘ಮಕ್ಕಳ ಸೈನ್ಯ’ ಚಿತ್ರದ ನಿರ್ದೇಶನವನ್ನೂ ಮಾಡಿ ಆ ಚಿತ್ರಗಳಲ್ಲಿ ಯಶಸ್ಸು ಕೂಡ ಪಡೆದರು.
ಮುಂದೆ ಲಕ್ಷ್ಮಿ ಅವರು ತಮಿಳು ಮತ್ತು ಹಿಂದಿ ಚಿತ್ರಗಳಲ್ಲಿ ಐಶ್ವರ್ಯ ರೈ ಅವರಿಗೆ ಅಜ್ಜಿಯಾಗಿ, ಕರೀನಾ ಕಪೂರ್ ಅವರಿಗೆ ತಾಯಿಯಾಗಿ ನಟಿಸಿದಂತೆ, ಕನ್ನಡದಲ್ಲೂ ಮತ್ತಿತ್ತರ ಭಾಷೆಗಳಲ್ಲೂ ಹಿರಿಯ ಪಾತ್ರಗಳಲ್ಲಿ ನಿರಂತರವಾಗಿ ಮುಂದುವರೆದಿದ್ದಾರೆ. ತಮಗಿಂತ ಹಿರಿಯರಾದ ರಜನೀಕಾಂತ್ ಅಂತ ನಟರಿಗೆ ಕೂಡ ತಾಯಿಯಾಗಿ ನಟಿಸಿದ್ದಾರೆ. ‘ಪ್ರೀತ್ಸೋದ್ ತಪ್ಪಾ’, ‘ಸೂರ್ಯ ವಂಶ’, ‘ದಿಗ್ಗಜರು’ ಮುಂತಾದ ಚಿತ್ರಗಳನ್ನೂ ಈ ನಿಟ್ಟಿನಲ್ಲಿ ಹೆಸರಿಸಬಹುದು. ಕರ್ನಾಟಕ ರಾಜ್ಯ ಸರ್ಕಾರದ ಪ್ರಶಸ್ತಿಗಳಲ್ಲಿ ಅವರು ‘ವಂಶಿ’ ಚಿತ್ರದಲ್ಲಿನ ಉತ್ತಮ ಅಭಿನಯಕ್ಕಾಗಿ ಸಹಾ ಪ್ರಶಸ್ತಿ ಪಡೆದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕವಿತಾ ಲಂಕೇಶ್ ನಟಿ

Fri Dec 23 , 2022
  ಕವಿತಾ ಲಂಕೇಶ್ ಚಿತ್ರ ನಿರ್ದೇಶನದಲ್ಲಿ ತಮ್ಮ ಪ್ರತಿಭೆ ಸಾಧನೆಗಳಿಂದ ಪ್ರತಿಷ್ಟಿತ ಸ್ಥಾನ ಪಡೆದಿದ್ದಾರೆ. ಕವಿತಾ ಲಂಕೇಶ್ ಅವರ ಜನ್ಮ ದಿನ ಡಿಸೆಂಬರ್ 13. ಕವಿತಾ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಕಲಾ ವಿಭಾಗದ ಪದವಿ, ಇಂಗ್ಲೀಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಜಾಹೀರಾತು ಅಧ್ಯಯನದಲ್ಲಿ ಡಿಪ್ಲೋಮಾ ಪದವಿ ಪಡೆದಿದ್ದಾರೆ. ಕವಿತಾ ಅವರು, 1994ರಲ್ಲಿ ಪ್ರದರ್ಶನ ಕಲೆಯ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿ ಚಲನಚಿತ್ರಗಳನ್ನು, ಸಾಮಾಜಿಕ – ಸಾಂಸ್ಕೃತಿಕ ನೆಲೆಗಳ ಕಿರುಚಿತ್ರಗಳನ್ನು ಜೊತೆಗೆ […]

Advertisement

Wordpress Social Share Plugin powered by Ultimatelysocial