ಎಂ. ಜೆ. ಶ್ರೀನಿವಾಸ ಅಯ್ಯಂಗಾರ್

ಎಂ. ಜೆ. ಶ್ರೀನಿವಾಸ ಅಯ್ಯಂಗಾರ್
ವಿದ್ವಾನ್ ವೀಣೆ ಎಂ. ಜೆ. ಶ್ರೀನಿವಾಸ ಅಯ್ಯಂಗಾರ್ ಸಂಗೀತಲೋಕದಲ್ಲಿ ಪ್ರಸಿದ್ಧ ಹೆಸರು. ಇಂದು ಈ ಮಹನೀಯರ ಸಂಸ್ಮರಣಾ ದಿನ.
ವೀಣಾವಾದನದಲ್ಲಿ ಮಾಂತ್ರಿಕರೆನಿಸಿದ್ದ ಶ್ರೀನಿವಾಸ ಅಯ್ಯಂಗಾರ್ಯರು ಹಾಸನ ಜಿಲ್ಲೆಯ ದೊಡ್ಡಮಗ್ಗೆ ಎಂಬಲ್ಲಿ 1924ರ ಮೇ 20ರಂದು ಜನಿಸಿದರು. ತಂದೆ ಜನಾರ್ದನ ಅಯ್ಯಂಗಾರ್ ಕೃಷಿಕರು. ತಾಯಿ ಜಾನಕಮ್ಮ. ಶ್ರೀನಿವಾಸ ಅಯ್ಯಂಗಾರ್ಯರು ಲೋಯರ್‌ ಸೆಕೆಂಡರಿ ಪರೀಕ್ಷೆಯ ನಂತರ ವಿದ್ಯಾಭ್ಯಾಸಕ್ಕೆ ಮೈಸೂರಿಗೆ ಬಂದರು. ತಂದೆಯ ಗುರುಗಳಾದ ವೆಂಕಟಗಿರಿಯಪ್ಪನವರಲ್ಲಿ ವೀಣಾವಾದನ ಕಲಿಯಲಾರಂಭಿಸಿದರು. ವೆಂಕಟಗಿರಿಯಪ್ಪನವರು ವೀಣಾವಾದನದ ಎಲ್ಲ ತಂತ್ರಗಳನ್ನು ಶಿಷ್ಯನಿಗೆ ಧಾರೆ ಎರೆದರು. ವೀಣೆ ದೊರೆಸ್ವಾಮಿ ಅಯ್ಯಂಗಾರ್‌ ಮತ್ತು ಆರ್‌.ಎನ್. ದೊರೆಸ್ವಾಮಿಯವರು ಇವರ ಸಹಪಾಠಿಗಳು.
ಶ್ರೀನಿವಾಸ ಅಯ್ಯಂಗಾರ್ಯರು ತಾವು ಗುರುಗಳಿಂದ ಕಲಿತದ್ದಷ್ಟೇ ಅಲ್ಲದೆ ನಿಸ್ವಾರ್ಥ ಮನೋಭಾವದಿಂದ ವಿದ್ಯಾರ್ಥಿಗಳಿಗೂ ವೀಣಾವಾದನದ ಪಾಠ ಹೇಳಿದರು. 1944ರಲ್ಲಿಯೇ ಆಕಾಶವಾಣಿ ಚೆನ್ನೈ, ಬೆಂಗಳೂರು, ಮೈಸೂರು, ದೆಹಲಿಯಿಂದ ಇವರ ವೀಣಾವಾದನದ ಕಚೇರಿಗಳು ಪ್ರಸಾರವಾಗತೊಡಗಿದವು. ಆಕಾಶವಾಣಿಯ ’ಎ ಟಾಪ್‌ಗ್ರೇಡ್’ ಕಲಾವಿದರಾಗಿದ್ದ ಇವರ ಕಾರ್ಯಕ್ರಮ ಆಕಾಶವಾಣಿಯ ರಾಷ್ಟ್ರೀಯ ವಾಹಿನಿಯಲ್ಲೂ ಹಲವಾರು ಬಾರಿ ಪ್ರಸಾರಗೊಂಡಿತ್ತು. ಟಿ.ವಿ. ವಾಹಿನಿಯಲ್ಲೂ ಇವರ ಕಾರ್ಯಕ್ರಮಗಳು ಮೂಡಿದವು. ಸುಪ್ರಸಿದ್ಧ ಸಂಗೀತ ಸಭೆಗಳಾದ ಮಲ್ಲೇಶ್ವರಂ ಸಂಗೀತ ಸಭಾ, ಶ್ರೀಕೃಷ್ಣ ಸಂಗೀತ ಸಭಾ, ರಾಜಾಜಿನಗರದ ಸಂಗೀತ ಸಭಾ, ಕೃಷ್ಣಪ್ಪನವರ ಗಾನ ಮಂದಿರ, ಸರಸ್ವತಿ ಗಾನ ಸಭಾ, ಗಾನ ಭಾರತಿ ಮುಂತಾದೆಡೆಗಳಲ್ಲಿ, ರಾಮೋತ್ಸವ, ಗಣೇಶೋತ್ಸವ ಸಂದರ್ಭಗಳಲ್ಲಿನ ವೇದಿಕೆಗಳಲ್ಲಿ ಇವರ ಕಚೇರಿಗಳು ನಿರಂತರವಾಗಿ ನಡೆದವು. ರಷ್ಯದ ಹಿರಿಯ ನಾಯಕರಾದ ಕ್ರುಶ್ಚೇವ್ ಮತ್ತು ಬುಲ್ಗಾನಿಯನ್ ಅವರ ಭಾರತ ಭೇಟಿಯ ಸಂದರ್ಭದಲ್ಲಿ ಬೆಂಗಳೂರಿನ ಲಾಲ್‌ಬಾಗಿನ ಗಾಜಿನ ಮನೆಯಲ್ಲಿ ಇವರು ಕಚೇರಿ ನಡೆಸಿದರು. ಚೌಡಯ್ಯನವರು ಸ್ಥಾಪಿಸಿದ್ದ ಮೈಸೂರಿನ ಅಯ್ಯನಾರ್‌ ಕಾಲೇಜ್ ಆಫ್ ಮ್ಯೂಸಿಕ್, ಕೃಷ್ಣಮೂರ್ತಿ ಪುರಂನ ಭಗಿನಿ ಸೇವಾ ಸಮಾಜ, ಟಿ. ನರಸೀಪುರದಲ್ಲಿರುವ ಚೌಡಯ್ಯಸ್ಮಾರಕ ವಿದ್ಯಾಸಂಸ್ಥೆಯಲ್ಲಿ ಅಧ್ಯಾಪಕರಾಗಿ, ವಿಶ್ವವಿದ್ಯಾಲಯದ ವಿವಿಧ ಪರೀಕ್ಷೆಗಳ ಪರೀಕ್ಷಕರಾಗಿ, ಆಕಾಶವಾಣಿಯ ಆಡಿಷನ್ ಬೋರ್ಡಿನ ಸದಸ್ಯರಾಗಿ, ಕರ್ನಾಟಕ ಪ್ರೌಢಶಿಕ್ಷಣ ಮಂಡಲಿ ಸೀನಿಯರ್‌ ಪರೀಕ್ಷೆಯ ಪಠ್ಯಪುಸ್ತಕ ಸಮಿತಿ ಸಲಹೆಗಾರರಾಗಿ ಹೀಗೆ ಅನೇಕ ರೀತಿ ಇವರ ಸೇವೆ ಸಂದಿತು.
ವಿದ್ವಾನ್ ಎಂ. ಜೆ. ಶ್ರೀನಿವಾಸ ಅಯ್ಯಂಗಾರ್ಯರಿಗೆ ಗಾನಕಲಾ ಪರಿಷತ್ತಿನಿಂದ ಗಾನ ಕಲಾಭೂಷಣ, ಸಂಗೀತ ನೃತ್ಯ ಅಕಾಡೆಮಿಯಿಂದ ಕರ್ನಾಟಕ ಕಲಾ ತಿಲಕ, ರಾಜ್ಯೋತ್ಸವ ಪ್ರಶಸ್ತಿ, ಚೌಡಯ್ಯ ಪ್ರಶಸ್ತಿ, ಕಲಾಜ್ಯೋತಿ ಪ್ರಶಸ್ತಿ, ಸಂಗೀತ ಕಲಾ ಭೂಷಣ ಪ್ರಶಸ್ತಿ, ವೀಣಾ ಮಾಧುರ್ಯಸಿರಿ ಬಿರುದಯ, ಆದರ್ಶ ಸಂಸ್ಥೆಯ ಗಾನಲಯ ಸಾಮ್ರಾಟ ಬಿರುದು, ಕಲಾ ಕೌಸ್ತುಭ ಪ್ರಶಸ್ತಿ, ರಾಜ್ಯ ಸರ್ಕಾರದ ಪ್ರತಿಷ್ಠಿತ ಕನಕಪುರಂದರ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿದ್ದವು.
ಶ್ರೀನಿವಾಸ ಅಯ್ಯಂಗಾರ್ಯರು 2013ರ ಫೆಬ್ರವರಿ 13ರಂದು ಈ ಲೋಕವನ್ನಗಲಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಚ್. ಎಲ್. ಓಂಶಿವಪ್ರಕಾಶ್

Fri Mar 4 , 2022
ಎಚ್. ಎಲ್. ಓಂಶಿವಪ್ರಕಾಶ್ ಎಚ್. ಎಲ್. ಓಂಶಿವಪ್ರಕಾಶ್ ಹೆಸರೇ ಸುಂದರ. ಅವರು ಕನ್ನಡ ಡಿಜಿಟಲ್ ಲೋಕದಲ್ಲಿ ಪ್ರಕಾಶ ತಂದಿರುವ ಅಪೂರ್ವ ಸಾಹಸಿ. ಫೆಬ್ರವರಿ 13 ಈ ಅಪೂರ್ವ ಯುವ ಕನ್ನಡಿಗನ ಜನ್ಮದಿನ. ಓಂ ಶಿವಪ್ರಕಾಶ್‌ ಅಂದರೆ ಕನ್ನಡ ವಿಕಿಪೀಡಿಯಾ, ಕನ್ನಡ ಭಾಷಾ ತಂತ್ರಜ್ಞಾನ ಸಂಶೋಧನೆ, ವಚನ ಸಾಹಿತ್ಯದ ಡಿಜಿಟಲೀಕರಣ, ಕನ್ನಡ ಪುಸ್ತಕಗಳ ಡಿಜಿಟಲೀಕರಣ, ರಂಗ ಗೀತೆಗಳು, ನಾಟಕಗಳನ್ನು ಡಿಜಿಟಲ್‌ ಸ್ವರೂಪಕ್ಕೆ ತರುವ ಸಾಹಸ ಮುಂತಾದ ಅನೇಕ ವೈವಿಧ್ಯತೆಗಳ ಪರಿಧಿ ಕಣ್ಣಮುಂದೆ […]

Advertisement

Wordpress Social Share Plugin powered by Ultimatelysocial