ಮಹಿಳಾ ದಿನದ ವಿಶೇಷ: ‘ಗೃಹಿಣಿ’ ಸುಗಮ ಸಂಸಾರ ನೌಕೆಯ ನಾವಿಕಳು!

 

ಮನೆಮನೆಯಲಿ ದೀಪ ಉರಿಸಿ

ಹೊತ್ತುಹೊತ್ತಿಗೆ ಅನ್ನ ಉಣಿಸಿ

ತಂದೆ ಮಗುವ ತಬ್ಬಿದಾಕೆ

ನಿನಗೆ ಬೇರೆ ಹೆಸರು ಬೇಕೇ

ಸ್ತ್ರೀ ಎಂದರೆ ಅಷ್ಟೇ ಸಾಕೆ!?

ಕವಿ ಜಿ.ಎಸ್. ಶಿವರುದ್ರಪ್ಪನವರ ಈ ಕವಿವಾಣಿ ಕೇಳುವಾಗಲೆಲ್ಲ ಪ್ರತಿದಿನ ಮನೆಗಳಲ್ಲಿ ಗಂಡ, ಮಕ್ಕಳು, ಅತ್ತೆ-ಮಾವನ ಸೇವೆ ಮಾಡುತ್ತಾ ಮನೆಯೆಂಬ ಪುಟ್ಟ ಜಗತ್ತಿಗೆ ಹಣತೆಯಂತೆ ಬೆಳಗುವ ಗೃಹಿಣಿಯರು ನೆನಪಾಗುತ್ತಾರೆ.

ತನ್ನೆಲ್ಲ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ ಮಾಡಿದಷ್ಟು ಮುಗಿಯದ ಮನೆಗೆಲಸಗಳಲ್ಲಿ ಲೀನಳಾಗಿ ಸಂಸಾರದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಗೃಹಿಣಿಯರು ಕಣ್ಮುಂದೆ ಹಾದು ಹೋಗುತ್ತಾರೆ.

ಸಂಸಾರದ ಜಂಜಾಟಗಳಲ್ಲಿ ಮರೆಯಾಗುವವರು

ಮಹಿಳೆಯರ ದಿನಾಚರಣೆ ಸಂದರ್ಭದಲ್ಲಿ ನಾವು ಸಾಧಕ ಮಹಿಳೆಯರ ಬಗ್ಗೆ ಮಾತನಾಡುತ್ತೇವೆ. ಆದರೆ ಅಂತಹ ಸಾಧಕ ಮಹಿಳೆಯರನ್ನು ಸೃಷ್ಟಿ ಮಾಡಿದ ಆ ಗೃಹಿಣಿ ನೆನಪಾಗುವುದಿಲ್ಲ. ಅವರು ನಾಲ್ಕು ಗೋಡೆಗಳ ನಡುವೆ ಉಳಿದು ಹೋಗುತ್ತಾರೆ. ಅವರು ಸಾಧಕರಾದರೂ ಎಲೆಯ ಮರೆಯ ಕಾಯಿಯಂತೆ ಸಂಸಾರದ ಜಂಜಾಟಗಳಲ್ಲಿ ಮರೆಯಾಗುತ್ತಾರೆ.

ತನ್ನೆಲ್ಲ ನೋವು, ಕಣ್ಣೀರಿಗೆ ಸೀರೆ ಸೆರಗನ್ನೇ ಅಡ್ಡವಾಗಿಸಿಕೊಂಡು, ನೋವು ನುಂಗಿ ನಗುವನ್ನು ಚೆಲ್ಲುತ್ತಾ ತನ್ನನ್ನು ತಾನೇ ಮರೆತು ಗಂಡ-ಮಕ್ಕಳ ಸುಖಕ್ಕಾಗಿ ಜೀವ ತೇಯುವ, ಇದ್ದುರರಲ್ಲಿ ಒಂದಷ್ಟನ್ನು ಉಳಿಸಿ ಡಬ್ಬಿಗಳಲ್ಲಿ ಚಿಲ್ಲರೆ ಕಾಸುಗಳನ್ನು ಕೂಡಿಟ್ಟು ಸಂಸಾರದ ಸಂಕಷ್ಟಕ್ಕೆ ನೆರವಾಗುವ, ತಾನು ಹಸಿವಿನಲ್ಲಿದ್ದರೂ ತನ್ನ ಹಸಿವು ಮರೆತು ಮಕ್ಕಳ ಹಸಿವು ನೀಗಿಸಿ ಖುಷಿಪಡುವ, ಮಕ್ಕಳ ಸಂತಸದಲ್ಲಿ ತನ್ನ ನೋವು ಮರೆಯುವ ಆ ಜೀವಗಳು ವರ್ಣನೆಗೆ ನಿಲುಕದವರು.

‘ಹೌಸ್ ವೈಫ್’ ಅಂದ್ರೆ ಹಾಯಾಗಿ ಇರುವವಳಲ್ಲ!

‘ಹೌಸ್ ವೈಫ್’ ಅಂದ್ರೆ ಗಂಡ ತಂದಿದನ್ನು ಬೇಯಿಸಿ ಹಾಕುವ, ಮಕ್ಕಳನ್ನು ಶಾಲೆಗೆ ಕಳುಹಿಸಿ ಮನೆಯ ಒಂದಷ್ಟು ಕೆಲಸ ಮುಗಿಸಿ ಪಕ್ಕದವರೊಂದಿಗೆ ಹರಟೆ ಹೊಡೆಯುತ್ತಾ ಕಾಲ ಕಳೆಯುವಳು ಎಂದು ಕೆಲವರು ಲಘುವಾಗಿ ಮಾತನಾಡಬಹುದು. ಆದರೆ ಅದು ಅಷ್ಟಕ್ಕೆ ಮುಗಿದು ಹೋಗುವ ಕರ್ತವ್ಯವಲ್ಲ. ಸಂಸಾರವೆಂಬ ಸಾಗರದಲ್ಲಿ ತನ್ನ ಕುಟುಂಬವೆಂಬ ನೌಕೆಯನ್ನು ಸುಗಮವಾಗಿ ಸಾಗಿಸುವ ನಾವಿಕ ಅವಳು.

ಹಾದಿ ತಪ್ಪಿದ ಗಂಡ, ಮಾತು ಕೇಳದ ಮಕ್ಕಳ ನಡುವೆ ಹೆಣಗಿ ಬೆಂಡಾದರೂ ಮುಂದೆ ಎಲ್ಲವೂ ಸರಿಹೋಗುತ್ತದೆ ಎಂಬ ವಿಶ್ವಾಸದಲ್ಲಿ ಸಾಗುತಲೇ ಇರುವ, ಮೋಸ, ವಂಚನೆ, ದೌರ್ಜನ್ಯವಾದರೂ ಯಾವುದನ್ನೂ ಬಿಚ್ಚಿಡದೆ, ಮುಚ್ಚಿಟ್ಟು ತನ್ನ ಸಂಸಾರಕ್ಕಾಗಿ ಆಸೆ ಆಕಾಂಕ್ಷೆಗಳನ್ನು ಬದಿಗೊತ್ತಿ ನಾಳಿನ ಭರವಸೆಯಲ್ಲಿ ಬದುಕುತ್ತಿರುವ ಜೀವಗಳಿಗೆ ನಮನಗಳು.

ಬೇಕು ಬೇಡವನ್ನು ಪೂರೈಸುವ ಜೀವ

ಇವತ್ತು ಬಹಳಷ್ಟು ಕುಟುಂಬಗಳು ಸುಖಮಯ ಜೀವನ ಮಾಡುತ್ತಿದ್ದರೆ, ಗಂಡ, ಮಕ್ಕಳು ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದರೆ, ಅವರ ಬೆನ್ನೆಲುಬಾಗಿ ನಿಂತು ಅವರ ಬೇಕು ಬೇಡಗಳನ್ನು ಪೂರೈಸುತ್ತಾ ಹೋಗುವವಳು ಗೃಹಿಣಿ ಎಂಬ ಮೂರಕ್ಷರದ ಜೀವವೇ. ಆಕೆ ಗಟ್ಟಿಯಾಗಿ ನಿಲ್ಲದ ಹೊರತು ಸಂಸಾರವೊಂದು ಸುಖಮಯವಾಗಿ ಸಾಗುವುದು ಅಸಾಧ್ಯವೇ.

ಸವಿ ನಿದ್ದೆಯಲ್ಲಿದ್ದರೂ ಬೆಳಕು ಹರಿಯುತ್ತಿದ್ದಂತೆಯೇ ಹಾಸಿಗೆ ಬಿಟ್ಟು ಆಚೆ ಬಂದು ಗಂಡ, ಮಕ್ಕಳಿಗೆ ಬೇಕಾದ ಉಪಹಾರ ತಯಾರಿ ಮಾಡಿ ಅವರನ್ನು ಅವರವರ ಪಾಡಿಗೆ ಕಳುಹಿಸಿ, ತಾನು ಮನೆಯ ಕೆಲಸವನ್ನೆಲ್ಲ ಮುಗಿಸಿ ಮತ್ತೆ ಅವರು ಬರುವ ಹೊತ್ತಿಗೆ ಅಡುಗೆ ಮಾಡಿ ಎಲ್ಲರೂ ಮಲಗಿದ ಬಳಿಕ ಮಾರನೆಯ ದಿನಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿ ತಾನು ನಿದ್ದೆಗೆ ಜಾರುವ. ಆಕೆಯ ಬಿಡುವಿಲ್ಲದ ಕೆಲಸಗಳು ಅರ್ಥವಾಗುವುದಿಲ್ಲ.

ಅವಳು ಬಯಸೋದು ನಿಮ್ಮ ಒಳಿತನ್ನೇ

ಮಹಿಳಾ ದಿನಾಚರಣೆ ವೇಳೆ ಪುಂಖಾನು ಪುಂಖವಾಗಿ ಶುಭಾಶಯಗಳನ್ನು ರವಾನಿಸುವವರು, ತಾನು ದುಡಿದು ಸಾಕುತ್ತಿದ್ದೇನೆಂದು ಅಹಂ ಪಡುವ, ಮೋಜು ಮಸ್ತಿ ಎನ್ನುತ್ತಾ ಹೊರಗೆ ಜಾಲಿ ಮೂಡ್‌ನಲ್ಲಿರುವ ಗಂಡಸರೇ, ಒಂದೇ ಒಂದು ಕ್ಷಣ ನಿಮ್ಮ ಮನೆಯಲ್ಲಿ ನಿಮಗಾಗಿ ಬದುಕುವ ಆ ಜೀವದ ಬಗ್ಗೆ ಯೋಚಿಸಿ, ಅವಳನ್ನು ಪ್ರೀತಿಸಿ. ನೀವು ಯಾವುದೇ ಉಡುಗೊರೆ ಕೊಟ್ಟರೂ ಅದೆಲ್ಲವನ್ನು ಮೀರಿ ಅವಳು ಬಯಸುವುದು ನಿಮ್ಮ ಒಳಿತನ್ನೇ, ಇದು ನೆನಪಿರಲಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

"ಕಂಪನಿಯನ್ನು ನಿರ್ಮಿಸುವಾಗ ಕಲಿಕೆಯ ರೇಖೆಯು ಕಲ್ಪನೆಗೆ ಮೀರಿದೆ": ಮಾಳವಿಕಾ ಸಿತ್ಲಾನಿ

Tue Mar 8 , 2022
\ ಮಹಿಳೆಯರು ಲಿಂಗ ಸಮಾನತೆ ಮತ್ತು ಸಮಾನ ಹಕ್ಕುಗಳಿಗಾಗಿ ದೀರ್ಘಕಾಲ ಹೋರಾಡಿದ್ದಾರೆ ಆದರೆ ಅವರಲ್ಲಿ ಹೆಚ್ಚಿನವರು ಈ ನಿಗ್ರಹಗಳನ್ನು ಮೀರಿ ಹೋಗಿರುವುದರಿಂದ ಇನ್ನು ಮುಂದೆ ಕಾಯಬೇಡಿ. ‘ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ’ಯ ಸಂದರ್ಭದಲ್ಲಿ ನಾವು ಸಬಲೀಕರಣ, ಪ್ರೇರಣೆ ಮತ್ತು ಹೆಣ್ತನಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳ ಬಗ್ಗೆ ಮಾತನಾಡೋಣ. ವಾಣಿಜ್ಯೋದ್ಯಮಿ, ಮಾಳವಿಕಾ ಸಿತ್ಲಾನಿ ಆರ್ಯನ್. ಅವರು ಇತ್ತೀಚೆಗೆ ‘MASIC ಬ್ಯೂಟಿ’ ಎಂಬ ಹೆಸರಿನ ಸ್ವಂತ ಬ್ರಾಂಡ್ ಅನ್ನು ಪ್ರಾರಂಭಿಸಿದರು ಮತ್ತು ಮಹಿಳಾ ಉದ್ಯಮಿಯಾಗಿ […]

Advertisement

Wordpress Social Share Plugin powered by Ultimatelysocial