ಮಾಸ್ಟರ್ ಹಿರಣ್ಣಯ್ಯ

ಮಾಸ್ಟರ್ ಹಿರಣ್ಣಯ್ಯ
ನಾಟಕಲೋಕದಲ್ಲಿ ಮಾಸ್ಟರ್ ಹಿರಣ್ಣಯ್ಯನವರ ಹೆಸರು ಅಜರಾಮರವಾದದ್ದು.
ನಾಟಕ ರತ್ನಾಕರ ಮಾಸ್ಟರ್ ಹಿರಣ್ಣಯ್ಯನವರು 1934ರ ಫೆಬ್ರವರಿ 15ರಂದು ಮೈಸೂರಿನಲ್ಲಿ ಜನಿಸಿದರು. ಅವರು ಕಲ್ಚರ್ಡ್ ಕಮೆಡಿಯನ್ ಎಂದು ಪ್ರಖ್ಯಾತರಾಗಿದ್ದ ಕೆ. ಹಿರಣ್ಣಯ್ಯ ಮತ್ತು ಶಾರದಮ್ಮ ದಂಪತಿಗಳ ಒಬ್ಬನೇ ಮಗ. ಓದಿದ್ದು ಇಂಟರ್ ಮೀಡಿಯೆಟ್ ವರೆಗೆ. 1952ರಲ್ಲಿ ತಂದೆಯೊಂದಿಗೆ ಕೂಡಿಕೊಂಡು ಅವರಿಂದಲೇ ರಂಗಶಿಕ್ಷಣ ಪಡೆದರು. 1953ರಲ್ಲಿ ತಂದೆಯವರು ನಿಧನರಾದಾಗ, ‘ಕೆ. ಹಿರಣ್ಣಯ್ಯ ಮಿತ್ರ ಮಂಡಲಿ’ಯನ್ನು ತಾವೇ ವಹಿಸಿಕೊಂಡು ನಿರಂತರವಾಗಿ ಮುನ್ನಡೆಸಿದರು.
ಮಾಸ್ಟರ್ ಹಿರಣ್ಣಯ್ಯನವರು ನಾಟಕಗಳಲ್ಲಿ ಪ್ರಖ್ಯಾತರಾಗಿ, ತಮ್ಮ ನಾಟಕಗಳ ಮೂಲಕ ಸಾರ್ವಜನಿಕ ವಲಯದಲ್ಲಿ, ಸಮಾಜದ ರಾಜಕೀಯದ ಅಂಕು ಡೊಂಕುಗಳ ಬಗ್ಗೆ ವಿಚಾರ ಕ್ರಾಂತಿ ಮೂಡಿಸಿದವರು. ಅದಕ್ಕೂ ಮಿಗಿಲಾಗಿ ಅವರ ವಿರುದ್ಧ ಕಿರುಕುಳ ನೀಡಲು ನಿಂತವರ ಮುಂದೆ ಸೊಪ್ಪು ಹಾಕದೆ ತಮ್ಮ ಕೆಲಸವನ್ನು ನಿರಂತರವಾಗಿ ಮುಂದುವರೆಸಿದವರು. ಮುಖ್ಯಮಂತ್ರಿಗಳಾದ ನಿಜಲಿಂಗಪ್ಪ, ಪ್ರಧಾನಿ ಇಂದಿರಾ ಗಾಂಧೀ ಜೊತೆಗೆ ಅನೇಕ ರಾಜಕೀಯ ನಾಯಕರು, ವಿವಿಧ ಹಂತಗಳ ಪುಡಾರಿಗಳು ಇವರ ಟೀಕಾ ಪ್ರಹಾರವನ್ನು ತಡೆದುಕೊಳ್ಳಲಾರದೆ ಅವರ ಚಟುವಟಿಕೆಗಳನ್ನು ಮಟ್ಟ ಹಾಕಲು ನಡೆಸಿದ ಪ್ರಯತ್ನಗಳನ್ನೆಲ್ಲಾ ಧೈರ್ಯವಾಗಿ ಮೆಟ್ಟು ನಿಂತ ಧೀರರಾಗಿ ಅವರು ತಮ್ಮ ಕಲೆಯನ್ನು ಬೆಳಗಿದ ರೀತಿ ಅನನ್ಯ. ಅದೆಷ್ಟು ಬಾರಿ ಕೋರ್ಟ್ ಹತ್ತಿದರೋ ಈ ಪುಣ್ಯಾತ್ಮ. ಸುಪ್ರೀಂ ಕೋರ್ಟಿಗೆ ಹೋಗಿ ನ್ಯಾಯ ಪಡೆದರು. ಆದರೆ ಅನ್ಯಾಯವಂತರೆದುರು ಎಂದೂ ತಲೆತಗ್ಗಿಸಲಿಲ್ಲ. ಅವರ ಸಾಮಾಜಿಕ ಕಾಳಜಿ, ಅನ್ಯಾಯದ ವಿರುದ್ಧ ನಿರ್ದಾಕ್ಷಿಣ್ಯ ಮಾತು, ಅಂತೆಯೇ ಕನ್ನಡದ ಬಗ್ಗೆ, ಕನ್ನಡದ ಸಾಮಾನ್ಯ ಜನತೆಗೆ ಅವರು ಕಡೆಯವರೆಗೆ ತೋರುತ್ತಿದ್ದ ಪ್ರೀತಿ, ಸರಳ ಸಜ್ಜನಿಕೆ, ಇವೆಲ್ಲಾ ಅನುಪಮವಾದದ್ದು.
ಮಾಸ್ಟರ್ ಹಿರಣ್ಣಯ್ಯನವರು ಬಾಲ್ಯದಲ್ಲಿರುವಾಗ ಅವರ ತಂದೆ ಮದರಾಸಿನಲ್ಲಿ ಬದುಕನ್ನರಸಿ ತಮ್ಮ ಕುಟುಂಬವನ್ನು ಅಲ್ಲಿಗೆ ಕೊಂಡೊಯ್ದರು. ಹೀಗಾಗಿ ಅಲ್ಲಿ ಅವರಿಗೆ ತಮಿಳು, ತೆಲುಗು ಮತ್ತು ಇಂಗ್ಲಿಷ್ ಭಾಷೆಗಳ ಅಭ್ಯಾಸವಾಯಿತು. ಜೊತೆ ಜೊತೆಗೆ ಮನೆಯಲ್ಲಿ ಕನ್ನಡದ ಬಾಯಿಪಾಠ ಮತ್ತು ಸಂಸ್ಕೃತದ ಸ್ತೋತ್ರ ಪಾಠ ಕೂಡಾ ನಡೆಯಿತು. ನಂತರದಲ್ಲಿ ಮೈಸೂರಿಗೆ ಬಂದು ಸೇರಿದ್ದು ಬನುಮಯ್ಯ ಮಾಧ್ಯಮಿಕ ಶಾಲೆ. ‘ಸಾಧ್ವಿ’, ‘ಮೈಸೂರು ಪತ್ರಿಕೆ’ಯನ್ನು ಮನೆ ಮನೆಗೆ ಹಂಚಿ ಆ ಸಂಪಾದನೆಯಿಂದ ಶಾಲಾ ಪರೀಕ್ಷೆಗಳ ಶುಲ್ಕಕ್ಕೆ ದಾರಿ ಮಾಡಿಕೊಂಡರು. ಮುಂದೆ ಇಂಟರ್ ಮೀಡಿಯೆಟ್ ಓದಿಗಾಗಿ ಶಾರದಾವಿಲಾಸ ಕಾಲೇಜು ಸೇರಿದರು. ಓದು ಅಲ್ಲಿಗೆ ಮುಕ್ತಾಯಗೊಂಡಿತು.
ತಂದೆ ಕೆ. ಹಿರಣ್ಣಯ್ಯನವರು 1940ರಲ್ಲಿ ರಚಿಸಿ, ನಿರ್ದೇಶಿಸಿದ ಚಲನಚಿತ್ರ ‘ವಾಣಿ’ಯಲ್ಲಿ ಹಿರಣ್ಣಯ್ಯನವರು ಪಾದಾರ್ಪಣ ಮಾಡಿದರು. 1948ರಲ್ಲಿ ರಂಗಭೂಮಿಯಲ್ಲಿ ಚಿಕ್ಕ ಪಾತ್ರಮಾಡಲು ಹೋಗಿ ಸೋತರೂ ಛಲದಿಂದ ಕಾಲೇಜಿನಲ್ಲಿ ಸಂಘ ಕಟ್ಟಿ ‘ಆಗ್ರಹ’ ಎಂಬ ನಾಟಕವನ್ನು ಪ್ರದರ್ಶಿಸಿದರು. ಅದ್ಭುತ ಅಭಿನಯದಿಂದ ನಾಟಕವೇನೋ ಗೆದ್ದಿತು. ನಾಟಕದಲ್ಲಿ ಅಭಿನಯಿಸಿದವರೆಲ್ಲರೂ ಪರೀಕ್ಷೆಯಲ್ಲಿ ಡುಮ್ಕಿ!
ತಂದೆಯ ಮರಣದ ನಂತರ ಅ.ನ.ಕೃ. ಮತ್ತು ಮಿತ್ರರ ಸಹಾಯದಿಂದ ನಾಟಕ ಕಂಪನಿ ಕಟ್ಟಿದರು. ಆದರೆ ಅನುಭವಿಸಿದ್ದು ನಷ್ಟ ಮಾತ್ರ. ತಂದೆಯವರು ನಡೆಸುತ್ತಿದ್ದ ‘ಹಿರಣ್ಣಯ್ಯ ಮಿತ್ರ ಮಂಡಲಿ’ಯನ್ನು ಪುನಃ ಆರಂಭಿಸಿ ‘ಲಂಚಾವತಾರ’ ನಾಟಕವನ್ನು ರಚಿಸಿ ರಂಗ ಪ್ರಯೋಗ ಮಾಡಿದರು. ಜನಪ್ರಿಯತೆಯ ಜೊತೆಗೆ ಮಹಾರಾಜರಿಂದ ಸನ್ಮಾನ ಮತ್ತು ‘ನಟರತ್ನಾಕರ’ ಬಿರುದು ಬಂತು. ನಂತರ ‘ನಡುಬೀದಿ ನಾರಾಯಣ’ದಲ್ಲಿ ತೀರ್ಥರೂಪುವಾಗಿ, ‘ಭ್ರಷ್ಟಾಚಾರ’ದಲ್ಲಿ ಧಫೇದಾರ್ ಮುರಾರಿಯಾಗಿ, ‘ಸದಾರಮೆ’ಯಲ್ಲಿ ಕಳ್ಳನಾಗಿ, ಆದಿಮೂರ್ತಿಯಾಗಿ, ‘ಕಪಿಮುಷ್ಠಿ’ಯಲ್ಲಿ ಜಾರ್ಜ್ ಆಗಿ, ಕಸ್ತೂರಿಯಾಗಿ, ‘ಮಕ್ಮಲ್ ಟೋಪಿ’ಯಲ್ಲಿ ನಾಣಿಯಾಗಿ ಹಿರಣ್ಣಯ್ಯನವರು ಜನರನ್ನು ಅಪಾರವಾಗಿ ಆಕರ್ಷಿಸಿದರು. ಈ ನಾಟಕಗಳೇ ಅಲ್ಲದೆ ‘ದೇವದಾಸಿ’, ‘ಅನಾಚಾರ’, ‘ಅತ್ಯಾಚಾರ’, ‘ಕಲ್ಕ್ಯಾವತಾರ’, ‘ಅಮ್ಮಾವ್ರ ಅವಾಂತರ’, ‘ಪುರುಷಾಮೃಗ’ ಹೀಗೆ ಇಪ್ಪತ್ತೈದಕ್ಕೂ ಹೆಚ್ಚು ನಾಟಕಗಳನ್ನು ರಂಗಕ್ಕೆ ತಂದು ಅವರು ಗಳಿಸಿದ ಕೀರ್ತಿ ಅಪಾರವಾದುದು. ಅವರ ‘ಲಂಚಾವತಾರ’ ನಾಟಕವೊಂದೇ 10,000ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡ ದಾಖಲೆಯನ್ನು ನಿರ್ಮಿಸಿತು.
ಅವರ ವಿಡಂಭನೆಯ ಸೊಬಗೇ ಸೊಬಗು. ಕೆಲವೇ ವರ್ಷಗಳ ಹಿಂದೆ ಅವರ ಒಂದು ನಾಟಕದ ತುಣುಕನ್ನು ವೀಕ್ಷಿಸುತ್ತಿದ್ದೆ. ಅವರ ಒಂದು ವಿಡಂಭನೆಯ ತುಣುಕು ಹೀಗಿದೆ: “ಈ ಅಮೇರಿಕಾದವರಿಗೆ ಒಂದು ಚೂರು ಕೂಡಾ ಹಣ ಉಳಿಸೋದ್ರ ಬಗ್ಗೆ ಕಾಳಜಿ ಇಲ್ಲ. ದುಡ್ಡಿದೆ ಅಂತ ಅವರು ಮಾಡೋ ಕೆಲಸ ನೋಡಿದ್ಯಾ. ಕುಡಿಯೋ ನೀರ್ಗೇ ಬೇರೆ ಪೈಪಂತೆ. ಕೊಳಚೆ ನೀರು ಹೋಗೋಕ್ಕೆ ಮತ್ತೊಂದು ಪೈಪಂತೆ. ಮಾತಿಗೆ ಹೇಳ್ತೀನಿ. ಆ ಮುಂಡೆ ಮಕ್ಳಿಗೆ ಕಿಂಚಿತ್ತೂ ಬುದ್ಧಿ ಇಲ್ಲ, ದುಡ್ಡು ಹೇಗೆ ಉಳಿಸ್ಬೇಕು ಅಂತ ಗೊತ್ತಿಲ್ಲ. ಅದೇ ನಮ್ಮ ಬೆಂಗಳೂರಲ್ಲಿ ನೋಡು, ಎರಡೂ ಒಂದೇ ಪೈಪಲ್ಲಿ ಬರುತ್ತೆ. ನಮ್ಮ ಬುದ್ಧಿವಂತಿಕೆ ಆ ಅಮೆರಿಕಾದವರಿಗೆ ಎಲ್ಲಿಂದ ಬರಬೇಕು!”
ಇದನ್ನೆಲ್ಲಾ ಅವರು ನಮ್ಮ ಜನರ ಬಗ್ಗೆ ಅವಹೇಳನ ಮಾಡಿ ಮಾತನಾಡಬೇಕು ಎಂಬುದಕ್ಕಿಂತ ನಮ್ಮ ಸಮಾಜದಲ್ಲಿನ ಕಾಳಜಿಯಾಗಿ ಕಾಣುತ್ತಿದ್ದರು.. ಹೀಗೆ ಮಾತನಾಡಿ ಅದರ ರಾಜಕೀಯ ದುರ್ಲಾಭ ಪಡೆದ ಯಾವುದೇ ಘಟನೆಯೂ ಅವರ ಸುದೀರ್ಘ ಅಧಿಯ ಕಾಯಕದಲ್ಲಿ ನಡೆಯಲಿಲ್ಲ ಎಂಬುದು ಕೂಡಾ ನೆನಪಿನಲ್ಲಿಡಬೇಕಾದ ಅಂಶ. ವಿವಿಧ ಸಂದರ್ಭಗಳಲ್ಲಿ ಮೂರು ನಾಲ್ಕು ಬಾರಿ ಅವರಿದ್ದ ವೇದಿಕೆಯಲ್ಲಿ ವಿವಿಧ ರೀತಿಯಲ್ಲಿ ಪಾಲ್ಗೊಂಡ ನನಗೆ ಅವರು ಅಷ್ಟು ದೊಡ್ಡವರಾದರೂ, ದೊಡ್ಡವರು ಸಾಮಾನ್ಯರೂ ಎಂಬ ಭೇದವಿಲ್ಲದೆ ತೋರುತ್ತಿದ್ದ ಆಪ್ತಗುಣ ಹೃದಯಕ್ಕೆ ಹತ್ತಿರದಲ್ಲಿ ಮೂಡಿಬಂದಿದೆ. ಒಮ್ಮೆ ಬೆಂಗಳೂರಿನಲ್ಲಿದ್ದಾಗ ಅವರು ಒಂದು ಎಫ್.ಎಂ ರೇಡಿಯೋದಲ್ಲಿ ಮಾತನಾಡಿದ್ದನ್ನು ಕೇಳುತ್ತಿದ್ದೆ. ಅವರ ಧ್ವನಿ ಮಾಧುರ್ಯ, ಮೊನಚು, ಹಾಸ್ಯಪ್ರಜ್ಞೆ, ಸಾಮಾನ್ಯರಲ್ಲಿ ಪ್ರೇಮಭಾವ, ಕನ್ನಡ ನಾಡು – ನುಡಿಗಳ ಬಗೆಗೆ ಅವರಿಗಿರುವ ಗೌರವ, ತಾನು ಏನು ಮಾತನಾಡುತ್ತಿದ್ದೇನೆ ಎಂಬುದರ ಕುರಿತಾದ ಜಾಗೃತಿ ಇವೆಲ್ಲಾ ಗಮನಕ್ಕೆ ಬಂದು ಆಶ್ಚರ್ಯವಾಯಿತು.
ಪತ್ರಿಕೆಗಳು ಸರ್ಕಾರದ ವಿರುದ್ಧ ಧ್ವನಿ ಎತ್ತಲು ಹೆದರುತ್ತಿದ್ದ ದಿನಗಳಲ್ಲಿ; ಇನ್ನೂ ಲಂಕೇಶ್, ರವಿ ಬೆಳಗೆರೆ ಅಂಥವರು ಪತ್ರಿಕೆ ತಂದು ಜನರಲ್ಲಿ ದಿಟ್ಟತನ ಕಾಣಿಸುವುದಕ್ಕೂ ಮುಂಚಿನ ದಿನಗಳಲ್ಲಿಯೇ ಏಕ ವ್ಯಕ್ತಿಯಾಗಿ ಇಡೀ ವ್ಯವಸ್ಥೆಯ ದುರ್ನಡತೆಗಳನ್ನು ಪ್ರಬಲವಾಗಿ ತೋರಿಸುತ್ತಾ ಧೈರ್ಯವಹಿಸಿ ಮುನ್ನಡೆದ ಹಿರಣ್ಣಯ್ಯನಂತಹವರ ಕೆಲಸ ಅಸಾಮಾನ್ಯವಾದುದು. ಮಾಧ್ಯಮಗಳು ಅಂದು ಇಷ್ಟೊಂದು ವ್ಯಾಪ್ತಿಯಲ್ಲಿಲ್ಲದ ದಿನಗಳಲ್ಲಿ ತಾನೇ ಒಂದು ಮಾಧ್ಯಮವಾಗಿ ಮೂಡಿ ಹಿರಣ್ಣಯ್ಯನವರು ತೋರಿದ ಇಚ್ಛಾಶಕ್ತಿ ಮರೆಯಲಾಗದಂತದ್ದು. ಹಿರಣ್ಣಯ್ಯನವರ ಪರಂಪರೆ ಅವರಿಗೆ ಅವರ ತಂದೆಯವರಿಂದ ಬಂದು, ಅವರ ಮಗನಿಂದ ಈಗಲೂ ಮುಂದುವರೆಯುತ್ತಿದೆ.
ಮಾಸ್ಟರ್ ಹಿರಣ್ಣಯ್ಯನವರಿಗೆ ಹಲವಾರು ಬಿರುದುಗಳೂ ಅತ್ಯುನ್ನತ ರಂಗ ಪ್ರಶಸ್ತಿಯಾದ ಡಾ. ಗುಬ್ಬೀ ವೀರಣ್ಣ ಪ್ರಶಸ್ತಿಯೂ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭ್ಯವಾಗಿದ್ದವು. ಇವೆಲ್ಲಕ್ಕೂ ಮಿಗಿಲಾಗಿ ದೇಶ ವಿದೇಶಗಳಲ್ಲಿರುವ ಕನ್ನಡಿಗರು ಅವರ ನಾಟಕಗಳನ್ನೂ ಅವರನ್ನೂ ನಿರಂತರವಾಗಿ ಗೌರವಿಸುತ್ತಿದ್ದರು.
ಯಾವುದೂ ಶಾಶ್ವತವಲ್ಲ. ಶ್ರೇಷ್ಠತೆಯೂ ಅಲ್ಲ. ಸಾಧನೆಗಳೂ ಅಲ್ಲ, ಸಾಧಕರೂ ಅಲ್ಲ. ಅವರ ಮುಂದೆ ನಾವೂ ಎಲ್ಲೋ ಸರಿದು ಹೋಗುತ್ತಿದ್ದೆವು ಎಂಬುದೇ ನಮಗೆ ಸಮಾಧಾನ ನೀಡುತ್ತಿತ್ತು. 2019ರ ಮೇ 2ರಂದು ನಮ್ಮ ಹಿರಣ್ಣಯ್ಯನವರೂ ಹೋಗಿಬಿಟ್ರು. ಅವರು ಹೋಗಿಬಿಟ್ಟ ಸುದ್ಧಿ ಕೇಳಿ ಒಂದು ಕಾಲದ ಮಹಾನ್ ಕೊಂಡಿ ಬಿಟ್ಟುಹೋದ ಹಾಗನಿಸಿತು. ನಾವು ಶಾಶ್ವತ ಅಂದುಕೊಂಡದ್ದನ್ನೆಲ್ಲಾ ಅಶಾಶ್ವತಗೊಳಿಸುವುದೇ ವಿಧಿಯ ರೀತಿ. ಕೆಲವು ವರ್ಷದ ಹಿಂದೆ ಕಾಲಿಗೆ ತೊಂದರೆಯಾಗಿ ಅವರು ನಿಧಾನವಾಗಿ ಕೋಲು ಹಿಡಿದು ಬಂದಾಗಲೇ, ಇಂತಹ ನಿರ್ಭಯತೆಯ ಹಕ್ಕಿಗೆ ಕೂಡಾ ಹಾರುವುದಕ್ಕೆ ಕಷ್ಟವಲ್ಲಾ ಎಂದು ಮನಸ್ಸಿಗನ್ನಿಸಿತು. ಒಂದು ಜೀವ ನೋವಿನ ದಿನಗಳಲ್ಲಿ ಹೆಚ್ಚು ಸವೆಯುವುದಕ್ಕಿಂತ ಬಿಡುಗಡೆ ಕೂಡಾ ಅಗತ್ಯ ಎಂದು ಮನಸ್ಸು ಸಮಾಧಾನ ಹೇಳುತ್ತದೆ. ಆದರೆ ಇಂತಹ ಬೃಹತ್ ಸಾಧನೆ ಈಗ ಬರೀ ನೆನಪೆಲ್ಲಾ ಅನಿಸುತ್ತೆ. ಅಂತಹ ಒಂದೊಂದು ಸಮಾಧಾನಗಳೂ ಕಣ್ಮರೆಯಾಗುವುದು ನಮ್ಮ ಬದುಕಿನ ಮುಂದಿರುವ ಅನುದಿನದ ವ್ಯಥೆ. ಆ ವ್ಯಥೆಯನ್ನು ನೀಗುವಂತಹ ಹಿರಣ್ಣಯ್ಯನಂತಹ ಮಹನೀಯರು ಮುಂದೂ ಉದಯಿಸಿ ಈ ಲೋಕದ ಬದುಕಿಗೆ ಒಂದಷ್ಟು ಸಹ್ಯತೆ ತರಲಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸುಷ್ಮಾ ಸ್ವರಾಜ್

Fri Mar 4 , 2022
ಸುಷ್ಮಾ ಸ್ವರಾಜ್ ನಿತ್ಯ ನಗೆಮೊಗದ, ನಿರಂತರ ಕ್ರಿಯಾಶೀಲೆ, ಉತ್ತಮ ವಾಗ್ಮಿ, ಅಪರೂಪದ ರಾಜಕಾರಣಿ ದಿವಂಗತರಾದ ಸುಷ್ಮಾ ಸ್ವರಾಜ್ ಅವರ ಜನ್ಮದಿನವಿದು. 2014-19 ಅವಧಿಯಲ್ಲಿ ಕೇಂದ್ರದ ವಿದೇಶಾಂಗ ಸಚಿವೆಯಾಗಿದ್ದು ರಾಜಕೀಯ ಜೀವನದಲ್ಲಿ ಹಲವು ಜವಾಬ್ಧಾರಿಗಳನ್ನು ಸುಲಲಿತವಾಗಿ ನಿರ್ವಹಿಸಿದ್ದ ಸುಷ್ಮಾ ಸ್ವರಾಜ್, ತಮ್ಮ ದಿಟ್ಟ ನಡೆ, ನೇರ ನುಡಿಗಳ ಮೂಲಕ ಎಲ್ಲರ ಮನಗೆದ್ದವರು. ಹರಿಯಾಣ ಮೂಲದ ಸುಷ್ಮಾ ಸ್ವರಾಜ್ ಅವರು 1953 ಫೆಬ್ರವರಿ 14ರಂದು ಅಂಬಾಲಾ ಕಂಟೋನ್ಮೆಂಟ್‍ನಲ್ಲಿ ಜನಿಸಿದರು. ತಂದೆ ಹಾರ್ದೇವ್ ಶರ್ಮಾ […]

Advertisement

Wordpress Social Share Plugin powered by Ultimatelysocial