ಮೇಘನಾದ ಸಹಾ ವಿಜ್ಞಾನಿಯಾಗಿ ಪ್ರಸಿದ್ಧರು. ಅವರೊಬ್ಬ ಸಮಾಜಮುಖಿ. ಅವರು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಗೆದ್ದು ಲೋಕಸಭಾ ಸದಸ್ಯರೂ ಆಗಿದ್ದರು.

ಮೇಘನಾದ ಸಹಾ ಈಗಿನ ಬಾಂಗ್ಲಾದೇಶದ ಢಾಕಾ ಜಿಲ್ಲೆಯಲ್ಲಿರುವ ಸಿಯೋರಟಾಲಿ ಎಂಬ ಸಣ್ಣ ಗ್ರಾಮದಲ್ಲಿ 1893ರ ಅಕ್ಟೋಬರ್ 6ರಂದು ಜನಿಸಿದರು. ಬಡತನದ ಜೀವನ ಎನ್ನಬಹುದು. ಸಹಾ ಅವರಿಗೆ ವಿದ್ಯಾಭ್ಯಾಸದ ಅದಮ್ಯ ಬಯಕೆ. ಪ್ರಾಥಮಿಕ ಶಾಲೆ ಇದ್ದುದು ಆ ಗ್ರಾಮದಿಂದ ಏಳು ಮೈಲು ದೂರದಲ್ಲಿ. ಆ ಊರಿನ ಒಬ್ಬ ವೈದ್ಯ ಇವರ ಅಭ್ಯಾಸಕ್ಕೆ ನೆರವು ನೀಡಿದರು. ಮೇಘನಾದ ಸಹಾ ಜಿಲ್ಲೆಗೇ ಮೊದಲಿಗರಾಗಿ ತೇರ್ಗಡೆಯಾದಾಗ ತಿಂಗಳಿಗೆ ನಾಲ್ಕು ರೂಪಾಯಿಯ ವ್ಯಾಸಂಗ ವೇತನ ದೊರಕಿತು. ಇದರಿಂದ ಮುಂದಿನ ಓದಿಗೆ ಸ್ವಲ್ಪ ಮಟ್ಟಿಗೆ ಅನುಕೂಲವಾಯಿತು. ಮುಂದೆ ಢಾಕಾದಲ್ಲಿ ಸರಕಾರಿ ಪ್ರೌಢಶಾಲೆಗೆ ಸೇರಿದರು. ಸ್ವಾತಂತ್ರ್ಯ ಅಂದೋಲನ ನಡೆಯುತ್ತಿದ್ದ ಕಾಲ ಅದು. ಅವರು ವಿದ್ಯಾರ್ಥಿಗಳೊಂದಿಗೆ ಒಮ್ಮೆ ಶಾಲೆಯ ಬಹಿಷ್ಕಾರದಲ್ಲಿ ಭಾಗವಹಿಸಿದ್ದುಕ್ಕಾಗಿ ವ್ಯಾಸಂಗ ವೇತನಕ್ಕೂ ಕುತ್ತು ಬಂತು.1913ರಲ್ಲಿ ಮೇಘನಾದ ಸಹಾ ಅವರು ಗಣಿತದಲ್ಲಿ ಹೆಚ್ಚಿನ ಅಂಕಗಳ ಸಹಿತ ಬಿ.ಎಸ್‌ಸಿ. ಪದವಿ ಗಳಿಸಿದರು. 1915ರಲ್ಲಿ ಎಂ.ಎಸ್‌ಸಿ ಓದಿದಾಗ ವಿಶ್ವವಿದ್ಯಾನಿಲಯಕ್ಕೆ ಎರಡನೆಯವರಾಗಿ ತೇರ್ಗಡೆಯಾದರು. ಮೊದಲನೆಯವರಾಗಿ ತೇರ್ಗಡೆಯಾದವರು ಅವರ ಸಹಪಾಠಿ ಸತ್ಯೇಂದ್ರನಾಥ್ ಬೋಸ್ ಅವರು. ಆ ಸಂದರ್ಭದಲ್ಲಿ ಕೋಲ್ಕತ್ತದಲ್ಲಿ ಬಿಳಿಯರ ಆಡಳಿತ ವ್ಯಾಪ್ತಿಗೆ ಹೊರತಾದ ಒಂದು ಹೊಸ ವಿಜ್ಞಾನ ಕಾಲೇಜು ಪ್ರಾರಂಭವಾಗಿ, ಮೇಘನಾದ ಸಹಾ ಮತ್ತು ಸತ್ಯೇಂದ್ರನಾಥ್ ಬೋಸ್ ಅವರುಗಳನ್ನು ಅಧ್ಯಾಪಕರುಗಳಾಗಿ ನೇಮಿಸಲಾಯಿತು. ಅಲ್ಲಿ ಅವರ ಬೋಧನೆ, ಅಧ್ಯಯನ ಸಂಶೋಧನೆ ಮುಂದುವರಿದವು. ಇಬ್ಬರೂ ಸೇರಿ ಅನಿಲಗಳ ಸ್ಥಿತಿಗೆ ಸಂಬಂಧಿಸಿದಂತೆ ಸಂಶೋಧನಾ ಪ್ರಬಂಧಗಳನ್ನು ಬರೆದರು. ಮೇಘನಾದ ಸಹಾ ವಿದ್ಯುತ್ ಆಯಸ್ಕಾಂತ ಮತ್ತು ಭೌತ ವಿಜ್ಞಾನಗಳಲ್ಲಿ ಸಂಶೋಧನೆ ಪ್ರಾರಂಭಿಸಿ ಮ್ಯಾಕ್ಸ್‌ವೆಲ್ ಒತ್ತಡ ಹಾಗೂ ವಿಕಿರಣ ಒತ್ತಡದ ಬಗ್ಗೆ ಕೆಲವು ಮೂಲ ಲೇಖನಗಳನ್ನು ಬರೆದರು. ಈ ಸಂಶೋಧನೆಯನ್ನು ಮಾನ್ಯ ಮಾಡಿ 1918ರಲ್ಲಿ ಕೋಲ್ಕತ್ತಾ ವಿಶ್ವವಿದ್ಯಾನಿಲಯ ಅವರಿಗೆ ಡಿ.ಎಸ್ಸಿ ಪದವಿ ನೀಡಿ ಗೌರವಿಸಿತು.ಪರಮಾಣುವಿನಿಂದ ಎಲೆಕ್ಟ್ರಾನು ಹೊರಬಿದ್ದಾಗ ಅದು ಆಯಾನು ಆಗುವುದು ರಾಸಾಯನಿಕ ವಿಯೋಜನೆಯಂತೆಯೇ, ಅಧಿಕ ಉಷ್ಣ ಶಕ್ತಿಯಿಂದ ಪರಮಾಣುಗಳು ಚೆಲ್ಲಾಪಿಲ್ಲಿಯಾಗಿ ಓಡಾಡುವಾಗ ಇಂತಹ ಆಯಾನೀಕರಣ ಉಂಟಾಗಬಹುದು ಎಂಬುದು ಅವರ ತರ್ಕ. ಹೀಗೆ ಆಯಾನೀಕರಣ ಆದಾಗ ಜೊತೆಗೇ ಎಲೆಕ್ಟ್ರಾನುಗಳು ಮತ್ತು ಆಯಾನುಗಳು ಸಮ್ಮಿಳನಗೊಂಡು ಪುನಃ ಪರಮಾಣುಗಳಾಗಬಹುದು. ಈ ಮಾಹಿತಿ ಬಳಸಿಕೊಂಡು ಅವರು ಒಂದು ಮುಖ್ಯ ಸಮೀರಕಣ ಮಾಡಿದರು. ಅದು ‘ಸಹಾ ಸಮೀಕರಣ’ ಎಂದೇ ಹೆಸರಾಗಿದೆ. ನಕ್ಷತ್ರಗಳಿಂದ ರೇಡಿಯೋ ಅಲೆಗಳು, ಏಕಧ್ರುವಗಳು ಮುಂತಾದ ವಿಷಯಗಳ ಕುರಿತು ಮೇಘನಾದ ಸಹಾ ಅವರ ಸಂಶೋಧನೆ ವಿಜ್ಞಾನಲೋಕದಲ್ಲಿ ಪ್ರಸಿದ್ಧವಾಗಿದೆ.ಇಷ್ಟೇ ಅಲ್ಲದೆ ಸ್ಥಿತಿಸ್ಥಾಪಕತ್ವ, ಜಡೋಷ್ಣ, ಸಂಖ್ಯಾಭೌತಶಾಸ್ತ್ರದ ಹೊಸ ವಿಷಯಗಳು, ರಾಸಾಯನಿಕ ವಸ್ತುಗಳ ಬಣ್ಣ, ವಾತಾವರಣದ ಅಭ್ಯಾಸ, ವಾತಾವರಣದಲ್ಲಿ ವಿದ್ಯುತ್ ಕಾಂತ ಅಲೆಗಳ ಚಲನೆ, ಪರಮಾಣು ಬೀಜದ ಅಭ್ಯಾಸ, ರೇಡಿಯೋ ವಿಕಿರಣ ಮುಂತಾದ ವಿಷಯಗಳ ಬಗ್ಗೆಯೂ ಅವರು ಸಂಶೋಧನೆ ನಡೆಸಿದ್ದರು.ವಿಜ್ಞಾನ ಜನಹಿತಕ್ಕೆ ಬಳಕೆಯಾಗಬೇಕು ಎಂಬ ನಿಲುವಿನ ಇವರು ನಮ್ಮ ದೇಶದ ನದಿ ಕಣಿವೆಗಳ ಯೋಜನೆ (ಈ ಸಲಹಾ ಸಮಿತಿಯಲ್ಲಿ ಸರ್ ಎಂ. ವಿಶೆಶ್ವರಯ್ಯನವರೂ ಇದ್ದರು), ಶಕ್ತಿ ಮೂಲಗಳ ಶೋಧನೆ, ಭೂವಿಜ್ಞಾನ ಶೋಧನೆ, ಪರಮಾಣು ಶಕ್ತಿ ಸಂಶೋಧನೆ-ಮುಂತಾದ ವಿಷಯಗಳಲ್ಲಿ ಸಹಭಾಗಿಯಾಗಿದ್ದರು. ದಾಮೋದರ್ ನದಿ ಯೋಜನೆಯಲ್ಲಿ ಅವರು ಪ್ರತ್ಯಕ್ಷ ಭಾಗವಹಿಸಿದ್ದರು.ಒಬ್ಬ ಪ್ರಗತಿಪರ ನಿಲುವಿನ ವಿಜ್ಞಾನಿ ಸಂಸತ್ ಸದಸ್ಯನಾದರೆ ಏನು ಮಾಡಬಹುದು ಎಂಬುದಕ್ಕೆ ಮೇಘನಾದ್ ಸಹಾ ಒಳ್ಳೆಯ ದೃಷ್ಟಾಂತವಾಗಿದ್ದಾರೆ. ಲೋಕಸಭೆಯಲ್ಲಿ ಅವರು ಕೊರಳನ್ನು ಸರ್ಕಾರ ಗಮನವಿಟ್ಟು ಕೇಳಬೇಕಾಗುತ್ತಿತ್ತು. ವಿಶ್ವವಿದ್ಯಾನಿಲಯಗಳ ಪರಿಸ್ಥಿತಿ, ಕೈಗಾರಿಕೆಗಳು ಮತ್ತು ಜಲಯೋಜನೆಗಳ ಬಗ್ಗೆ ಖಚಿತ ನಿಲುವಿಲ್ಲದಿದ್ದ ಸರ್ಕಾರವನ್ನು ಅವರು ಕಟುವಾಗಿ ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ತೈಲೋದ್ಯಮವನ್ನು ವಿದೇಶಿ ಕಂಪನಿಗಳಿಗೆ ವಹಿಸಿಕೊಡುವ ಪ್ರಸ್ತಾಪ ಬಂದಾಗ ಅದನ್ನು ಮೇಘನಾದ ಸಹಾ ಅವರಷ್ಟು ತೀವ್ರವಾಗಿ ವಿರೋಧಿಸಿದವರು ಬೇರೆ ಯಾರೂ ಇರಲಿಕ್ಕಿಲ್ಲ. ಅನೇಕ ಸಲ ಸರಕಾರ ಇವರ ಅಭಿಪ್ರಾಯಕ್ಕೆ ಮನ್ನಣೆ ನೀಡದೆ ಅನ್ಯಮಾರ್ಗವಿರಲಿಲ್ಲ.ಚಿಕ್ಕಂದಿನಿಂದಲೂ ಬಡತನದ ಬವಣೆಯನ್ನು ಬಲ್ಲ ಮೇಘನಾದ ಸಹಾ ಕೊನೆಯವರೆಗೂ ಬಡವರ ಪಕ್ಷಪಾತಿಯಾಗಿದ್ದರು. ಅವರ ಮನೆ ಬಡವಿದ್ಯಾರ್ಥಿಗಳ ಮನೆಯೇ ಆಗಿತ್ತು. ಅವರು ಸಾಮಾಜಿಕ ಕಾರ್ಯಗಳಲ್ಲಿ ಸದಾ ಮುಂದಿರುತ್ತಿದ್ದರು. ಅವರು 1956ರ ಫೆಬ್ರುವರಿ 16ರಂದು ದಿಲ್ಲಿಯಲ್ಲಿ ತಮ್ಮ ಕಛೇರಿಗೆ ನಡೆದು ಹೋಗುತ್ತಿದ್ದಾಗ ಹೃದಯ ಸ್ತಂಭನದಿಂದ ನಿಧನರಾದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಹಿಜಾಬ್ ಅನ್ನು ಅಕಾಲಿಕವಾಗಿ ನಿಷೇಧಿಸುವ ಆದೇಶವೇ', ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರವನ್ನು ಕೇಳುತ್ತದೆ; ವಿಚಾರಣೆಯನ್ನು ಫೆ.21ಕ್ಕೆ ಮುಂದೂಡಲಾಗಿದೆ

Fri Feb 18 , 2022
      ಬೆಂಗಳೂರು: ಕರ್ನಾಟಕ ಹಿಜಾಬ್ ವಿವಾದದ ವಿಚಾರಣೆ ಆರನೇ ದಿನವೂ ಮುಂದುವರಿದಿದ್ದು, ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧಿಸುವ ಆದೇಶವು ಅವಧಿಪೂರ್ವವೇ ಎಂದು ಹೈಕೋರ್ಟ್ ಶುಕ್ರವಾರ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ. ನಿಷೇಧವನ್ನು ಪ್ರಶ್ನಿಸಿದ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಾಲಯವು “ಒಂದು ಕಡೆ ನೀವು (ರಾಜ್ಯ) ಉನ್ನತ ಮಟ್ಟದ ಸಮಿತಿಯು ಸಮಸ್ಯೆಯನ್ನು ಪರಿಶೀಲಿಸುತ್ತಿದೆ ಎಂದು ಹೇಳುತ್ತೀರಿ. ಮತ್ತೊಂದೆಡೆ, ನೀವು ಈ ಆದೇಶವನ್ನು ಹೊರಡಿಸುತ್ತೀರಿ” ಮತ್ತು ಎರಡು ಹೇಳಿಕೆಗಳು “ರಾಜ್ಯವಾರು ವಿರೋಧಾತ್ಮಕ […]

Related posts

Advertisement

Wordpress Social Share Plugin powered by Ultimatelysocial