ಕಸ್ತೂರ ಬಾ

ಕಸ್ತೂರ ಬಾ 1944ರ ಫೆಬ್ರವರಿ 22 ರ ಮಹಾಶಿವರಾತ್ರಿಯಂದು ಈ ಲೋಕವನ್ನಗಲಿದರು.
ಗಾಂಧೀಜಿಯವರು ಬಾ ಅವರನ್ನು ಕುರಿತು ಆಡಿರುವ ಮಾತುಗಳು ಆಕೆಯ ವ್ಯಕ್ತಿತ್ವದ ಪ್ರೋಜ್ವಲತೆಗೆ ಸಾಕ್ಷಿಯಾಗಿವೆ : “ಕಸ್ತೂರ ಬಾ ಉದ್ದಕ್ಕೂ ನನ್ನ ಪೋಷಕಳಾಗಿದ್ದಳು. ಆಕೆಯಿಲ್ಲದಿದ್ದರೆ ನಾನು ಅನಾಥನಾಗುತ್ತಿದ್ದೆ. ಜಗತ್ತಿನಲ್ಲಿ ಮತ್ತಾವ ಹೆಣ್ಣೂ ನನ್ನನ್ನು ಹಾಗೆ ಮಿಡಿಯಲಾರಳು. ಆಕೆಯ ಸಹನೆ ಅದ್ವಿತೀಯ. ಆ ಸಹನೆಯೇ ನನಗೆ ಅಹಿಂಸೆಯ ಪಾಠವನ್ನು ಕಲಿಸಿತು. ಅದೇ ನನ್ನ ತಾರಕ ಮಂತ್ರವಾಯಿತು. ತನ್ನ ಸಹನೆಯ ಬೆಲೆ ಆಕೆಗೇ ಗೊತ್ತಿರಲಿಲ್ಲ. ನಾನು ಅದರ ಅಮಿತವಾದ ಬೆಲೆಯನ್ನರಿತು ಅನುಸರಣೆಗೆ ತಂದೆ. ಆದ್ದರಿಂದ ಈ ವಿಚಾರದಲ್ಲಿ ಆಕೆ ನನಗೆ ಎಂದೆಂದಿಗೂ ಗುರುಸಮಾನಳು”
ಕಸ್ತೂರ ಬಾ ಅವರು 1869 ವರ್ಷದ ಏಪ್ರಿಲ್ 11 ರಂದು ಪೋರ್ಬಂದರಿನಲ್ಲಿ ಜನಿಸಿದರು. ತಮ್ಮ ಪತಿ ಮಹಾತ್ಮ ಗಾಂಧಿ ಅವರಿಗಿಂತ ಅವರು 5 ತಿಂಗಳು ಹಿರಿಯರು.
ಕಸ್ತೂರ ಬಾ ಅವರ ತಂದೆ ಗೋಕುಲದಾಸ ಮಾಕಂಜಿ ಮತ್ತು ತಾಯಿ ವೆರಾಜ್ಕುಂವರ ಬಾ ಅವರಿಗೆ ಕಸ್ತೂರ ಬಾ ಹಿರಿಯ ಮಗಳು. ಮಾಕಂಜಿಯವರಿಗೂ ಗಾಂಧೀಜಿಯ ತಂದೆ ಕರಮಚಂದ್ರ ಗಾಂಧೀಯವರಿಗೂ ತುಂಬ ಸ್ನೇಹ. ಹೀಗೆ ಕಸ್ತೂರ ಬಾ ಮತ್ತು ಗಾಂಧೀಜಿಯವರ ವಿವಾಹ ನೆರವೇರಿತು. ಆಗ ಅವರಿಬ್ಬರಿಗೂ ಹನ್ನೆರಡು ವರ್ಷ ವಯಸ್ಸು.
ಸಂಪ್ರದಾಯವಂತ ಧನಿಕ ಮನೆತನದಲ್ಲಿ ಬೆಳೆದ ಕಸ್ತೂರ ಬಾ ಗೆ ಓದುಬರಹ ಬರುತ್ತಿರಲಿಲ್ಲ. ಗಾಂಧೀಜಿ ಆಕೆಯನ್ನು ವಿದ್ಯಾವಂತಳನ್ನಾಗಿ ಮಾಡಲು ತುಂಬ ಪ್ರಯತ್ನಪಟ್ಟರು. ಆದರೆ ಅದು ಫಲಿಸಲಿಲ್ಲ. ಕಸ್ತೂರ ಬಾ’ಗೆ ಆಗ ಕಲಿಯುವ ಅಗತ್ಯ ಕಾಣಿಸಲಿಲ್ಲ. ಆದರೆ ಮುಂದೆ ಅದಕ್ಕಾಗಿ ಅವರು ಪಶ್ಚಾತ್ತಾಪಪಟ್ಟದ್ದುಂಟು. ಅಲ್ಪಸ್ವಲ್ಪ ಗುಜರಾಥಿಯನ್ನು ಮಾತ್ರ ಅವರು ಅಭ್ಯಾಸ ಮಾಡಿದ್ದರು.
ಗಾಂಧೀಜಿಗೆ ತಮ್ಮ ಹೆಂಡತಿ ಆದರ್ಶ ಸತಿಯಾಗಬೇಕೆಂಬ ಹೆಬ್ಬಯಕೆಯಿತ್ತು. ಇದಕ್ಕಾಗಿ ಅವರು ಕಸ್ತೂರ ಬಾ ಚಲನವಲನಗಳ ಮೇಲೆ ನಿರ್ಬಂಧ ಹೇರಿದರು. ಆಕೆ ತಮಗೆ ಸದಾ ವಿಧೇಯಳಾಗಿರಬೇಕೆಂದಾಶಿಸಿದರು. ಕಸ್ತೂರ ಬಾ ಎಂದೂ ಪತಿಗೆ ಅವಿಧೇಯರಾಗಿ ನಡೆಯದಿದ್ದರೂ ಪತಿಯ ಈ ಕಟ್ಟುಕಟ್ಟಳೆಗಳು ಅವರಿಗೆ ಸಹನವಾಗುತ್ತಿರಲಿಲ್ಲ. ಕೆಲವು ವೇಳೆ ಗಾಂಧೀಜಿಯ ಅಪ್ಪಣೆಯಿಲ್ಲದೆ ದೇವಸ್ಥಾನಕ್ಕೋ ಗೆಳತಿಯರ ಮನೆಗೋ ಹೋಗುತ್ತಿದ್ದರು. ಇದು ಗಾಂಧೀಜಿಗೆ ಅಪರಾಧವಾಗಿ ತೋರಿ ಅದು ಮುನಿಸಿನಲ್ಲಿ ಪರ್ಯವಸಾನವಾಗುತ್ತಿತ್ತು. ಕೋಪದಲ್ಲಿ ಒಮ್ಮೆ ಹೆಂಡತಿಯನ್ನು ತೌರುಮನೆಗೆ ಕಳುಹಿಸಿಬಿಟ್ಟಿದ್ದೂ ಉಂಟು. ಕಸ್ತೂರ ಬಾ ತುಟಿ ಎರಡು ಮಾಡದೆ ಇದೆಲ್ಲವನ್ನು ಸಹಿಸಿದರು. ತಮ್ಮ ಈ ವರ್ತನೆಗಾಗಿ ಗಾಂಧೀಜಿ ಮುಂದೆ ಜಿಗುಪ್ಸೆ ಪಟ್ಟುಕೊಂಡರು.
ಇಂಗ್ಲೆಂಡಿನಲ್ಲಿ ಬಾರ್-ಆಟ್-ಲಾ ವ್ಯಾಸಂಗವನ್ನು ಮುಗಿಸಿ ಮರಳಿದ ಗಾಂಧೀಜಿ ವಕೀಲಿ ವೃತ್ತಿ ಕೈಗೊಂಡರು. ಆದರೆ ಅದರಲ್ಲಿ ಯಶಸ್ಸು ಸಿಗಲಿಲ್ಲ. ಅಷ್ಟರಲ್ಲಿ ದಕ್ಷಿಣ ಆಫ್ರಿಕದಿಂದ ಅವರಿಗೆ ಕರೆ ಬಂತು. ಮೊಕದ್ದಮೆಯೊಂದನ್ನು ನಡೆಸಿಕೊಡಲು ಹೋದ ಗಾಂಧೀಜಿ ಮೂರು ವರ್ಷ ಅಲ್ಲಿಯೇ ನಿಂತರು. ವಿದೇಶೀಯರ ದಬ್ಬಾಳಿಕೆಯಿಂದ ನರಳುತ್ತಿದ್ದ ಭಾರತೀಯರ ಉದ್ಧಾರಕ್ಕೆ ಕಂಕಣತೊಟ್ಟರು. ಮೂರು ವರ್ಷಗಳ ಅನಂತರ ಭಾರತಕ್ಕೆ ಮರಳಿ, ಕಸ್ತೂರ ಬಾ ಮತ್ತು ಎರಡು ಮಕ್ಕಳೊಂದಿಗೆ ಮತ್ತೆ ಆಫ್ರಿಕಕ್ಕೆ ಹೊರಟರು.
ವಿದೇಶದಲ್ಲಿ ಗಾಂಧೀಜಿ ಮತ್ತು ಕಸ್ತೂರ ಬಾ ಅವರ ಸಂಸಾರ ಆರಂಭವಾಯಿತು. ಉನ್ನತಾದರ್ಶಧ್ಯೇಯ ಸಾಧನೆಗಾಗಿ ಅನವರತ ಶ್ರಮಿಸುತ್ತಿದ್ದ ಗಾಂಧೀಜಿಯವರೊಡನೆ ಬಾಳು ನಡೆಸುವಾಗ ಕಸ್ತೂರ ಬಾ ಅನೇಕ ಅಗ್ನಿಪರೀಕ್ಷೆಗಳನ್ನೆದುರಿಸಬೇಕಾಯಿತು. ಒಮ್ಮೆ ಅವರ ಮನೆಗೆ ಬಂದಿದ್ದ ಹರಿಜನರೊಬ್ಬರ ಕಲ್ಮಶಪಾತ್ರೆಯನ್ನು ತೊಳೆಯಲು ಬಾ ನಿರಾಕರಿಸಿದರು. ಕೋಪಗೊಂಡ ಗಾಂಧೀಜಿ ಅವರನ್ನು ಮನೆಯಿಂದಾಚೆ ತಳ್ಳಲು ಹೊರಟರು. ಬಾ ಅಳುತ್ತಾ, ಅಯ್ಯೋ ಇದೇನು ನಿಮಗೆ ಸ್ವಲ್ಪವೂ ನಾಚಿಕೆಯಿಲ್ಲವೇ, ಈ ವಿದೇಶದಲ್ಲಿ ನಾನೆಲ್ಲಿಗೆ ಹೋಗಲಿ ? ಇಲ್ಲಿ ನನಗೆ ಯಾರಿದ್ದಾರೆ ? ನಿಮ್ಮ ಹೆಂಡತಿಯಾದ ಮಾತ್ರಕ್ಕೆ ನಾನು ಈ ಎಲ್ಲ ಅವಮಾನಗಳನ್ನೂ ಸಹಿಸಿಕೊಂಡಿರಬೇಕೆ ? ನಿಮ್ಮ ದಮ್ಮಯ್ಯ, ದಯವಿಟ್ಟು ಬಾಗಿಲು ಮುಚ್ಚಿ. ನೋಡಿದವರೇನಂದಾರು ? ಎಂದು ದೈನ್ಯವಾಣಿಯಿಂದ ನಿವೇದಿಸಿಕೊಂಡರು. ಈ ಮಾತುಗಳನ್ನು ಕೇಳಿ ಗಾಂಧೀಜಿಗೆ ನಾಚಿಕೆಯಾಯಿತು. ತಮ್ಮ ಹೆಂಡತಿ ತಮ್ಮನ್ನು ಬಿಟ್ಟಿರಲು ಅಸಾಧ್ಯವಾದರೆ ಆಕೆಯನ್ನು ಬಿಟ್ಟಿರುವುದಕ್ಕೆ ತಮಗೂ ಸಾಧ್ಯವಿಲ್ಲ ಎಂದು ಬಗೆದರು.
ಮತ್ತೊಮ್ಮೆ ಇಂಥದ್ದೇ ಪ್ರಸಂಗವೊಂದು ನಡೆಯಿತು. ಗಾಂಧೀಜಿ ವಿದೇಶದಿಂದ ಭಾರತಕ್ಕೆ ಮರಳುವಾಗ ಅಲ್ಲಿಯ ಭಾರತೀಯರೆಲ್ಲ ಅವರಿಗೆ ಅನೇಕ ಕಾಣಿಕೆಗಳನ್ನು ಕೊಟ್ಟರು. ಗಾಂಧೀಜಿಗೆ ಅವುಗಳನ್ನು ತೆಗೆದುಕೊಂಡು ಹೋಗಲಿಷ್ಟವಿರಲಿಲ್ಲ. ಆದರೆ ಇದಕ್ಕೆ ಬಾ ರವರನ್ನೊಪ್ಪಿಸುವುದು ತುಂಬಾ ಕಷ್ಟವಾಯಿತು. ಬಾ ಎಷ್ಟೆಷ್ಟೋ ವಾದಿಸಿದರೂ ಗಾಂಧೀಜಿಯ ನಿರ್ಧಾರ ಬದಲಾಗಲಿಲ್ಲ. ಕೊನೆಗೆ ಆ ಒಡವೆ ವಸ್ತುಗಳನ್ನೆಲ್ಲ ಅಲ್ಲಿಯೇ ಬಿಟ್ಟುಬರಲೊಪ್ಪಿದರು. ಹೀಗೆ ಅವರ ಆರಂಭದ ಸಂಸಾರ ಜೀವನದಲ್ಲಿ ಹಲವು ವಿರಸಗಳು ಬರುತ್ತಿದ್ದರೂ ಅವು ಶಾಂತಿಯಲ್ಲಿ ಮುಕ್ತಾಯವಾಗುತ್ತಿದ್ದವು. ಕಸ್ತೂರ ಬಾರವರ ಸಹನೆಯೇ ಕೊನೆಗೆ ಗೆಲ್ಲುತ್ತಿತ್ತು.
ಕಸ್ತೂರ ಬಾ ಎಂತಹ ಸಂಕಷ್ಟ ಬಂದರೂ ಸಂಪ್ರದಾಯ ನಿಷ್ಠೆಯನ್ನು ಬಿಟ್ಟವರಲ್ಲ. ಆಚಾರ ವ್ಯವಹಾರಗಳನ್ನು ಮೀರಿ ನಡೆದವರಲ್ಲ. ಮೊದಲಿನಿಂದಲೂ ಅವರು ಬೆಳೆದ ವಾತಾವರಣ ಅಂಥದಾಗಿತ್ತು. ಒಮ್ಮೆ ಆಫ್ರಿಕದಲ್ಲಿದ್ದಾಗ ಅವರು ತೀವ್ರ ಕಾಯಿಲೆಗೊಳಗಾದರು. ಅದು ವಾಸಿಯಾದ ಮೇಲೆ ಶಕ್ತಿಗೊಡಲು ಮಾಂಸದ ಕಷಾಯವನ್ನು ಕುಡಿಯುವಂತೆ ವೈದ್ಯರು ಸೂಚಿಸಿದರು. ಆದರೆ ಆಕೆ ತಮ್ಮ ಪ್ರಾಣ ಹೋದರೂ ಮಾಂಸದ ಕಷಾಯವನ್ನು ಮುಟ್ಟುವುದಿಲ್ಲವೆಂದರು. ಗಾಂಧೀಜಿಯವರಿಗೂ ಅವರ ನಿರ್ಧಾರ ಸಂತೋಷವನ್ನೇ ತಂದಿತು.
ಬಾ ಮತ್ತು ಬಾಪೂರವರ ಬಾಳಿನಲ್ಲಿ 1906 ಮಹತ್ವದ ವರ್ಷ. ಆಗ ಗಾಂಧೀಜಿ ಬ್ರಹ್ಮಚರ್ಯವ್ರತವನ್ನು ಸ್ವೀಕರಿಸಿದರು. ಕಸ್ತೂರ ಬಾ ಸಂತೋಷದಿಂದ ಅದಕ್ಕೆ ಸಮ್ಮತಿಯಿತ್ತರು. ಅವರ ಚಿತ್ರಸ್ಥೈರ್ಯ ಮತ್ತು ಅಪೂರ್ವ ಸಂಯಮಗಳನ್ನು ಕಂಡು ಗಾಂಧೀಜಿಯವರೇ ಬೆರಗಾದರು.
ಗಾಂಧೀಜಿಯವರು ದಕ್ಷಿಣ ಆಫ್ರಿಕದಲ್ಲಿ ಆರಂಭಿಸಿದ ಸತ್ಯಾಗ್ರಹ ಚಳವಳಿಯಲ್ಲಿ ಕಸ್ತೂರ ಬಾ ಸ್ವಸಂತೋಷದಿಂದ ಭಾಗವಹಿಸಿದರು; ಆರು ವರ್ಷಗಳ ಕಾಲ ನಡೆದ ಧೀರ್ಘ ಚಳವಳಿಯಲ್ಲಿ ಅನೇಕ ಬಾರಿ ಸೆರೆಗೆ ಹೋದರು. ಅವರ ಶ್ರದ್ಧೆ ಸಾಹಸಗಳನ್ನು ಕಂಡು ಎಲ್ಲರಿಗೂ ಬೆರಗಾಯಿತು. ಕಟ್ಟಕಡೆಗೆ ಜಯಗಳಿಸಿದ ಗಾಂಧೀಜಿಯವರನ್ನು ಕಂಡು ಬಾ ಕೃತಾರ್ಥರಾದರು. ಕೇವಲ ತಮ್ಮ ಸಂಸಾರದ ಜೀವನೋಪಾಯವನ್ನು ಗಳಿಸುವುದಕ್ಕೆ ದೇಶ ಬಿಟ್ಟು ಹೊರಟ ದಂಪತಿಗಳು ನೂರಾರು ಸಂಸಾರಗಳಿಗೆ ಜೀವನೋಪಾಯವನ್ನು ತೋರಿಸಿಕೊಟ್ಟು ಸ್ವದೇಶಕ್ಕೆ ಹಿಂದಿರುಗಿದರು.
ಗಾಂಧೀಜಿ ಸಬರ್ಮತಿಯಲ್ಲಿ ಸ್ಥಾಪಿಸಿದ ಆಶ್ರಮದಲ್ಲಿ ಕಸ್ತೂರ ಬಾ ಅವರೇ ಮೊಟ್ಟಮೊದಲ ಶಿಷ್ಯೆ. ಇಡೀ ಆಶ್ರಮವೇ ಆಕೆಯ ಸಂಸಾರವಾಯಿತು. ಆಶ್ರಮದ ಎಲ್ಲ ಜವಾಬ್ದಾರಿಗಳನ್ನೂ ದಕ್ಷತೆಯಿಂದ ನಿರ್ವಹಿಸುತ್ತ ಅಲ್ಲಿಯ ಪ್ರತಿಯೊಬ್ಬ ನಿವಾಸಿಗೂ ಅವರು ತಾಯಿಯಂತಿದ್ದರು. ಅಲ್ಲಿಯೂ ಆಕೆ ಗಾಂಧೀಜಿಯ ಕಠಿಣ ಪರೀಕ್ಷೆಗಳಿಗೊಳಬೇಕಾಯಿತು. ಆಶ್ರಮದಲ್ಲಿ ಅಸ್ಪೃಷ್ಯ ಸಂಸಾರವೊಂದು ನೆಲೆಸಿದಾಗ ಆಶ್ರಮದ ಇತರರಂತೆ ಬಾ ಅವರಿಗೂ ಅಸಮಾಧಾನವಾಯಿತು. ಇದರಿಂದ ನೊಂದ ಗಾಂಧೀಜಿಯವರು ಉಪವಾಸ ಕೈಗೊಂಡರು. ಕೊನೆಗೆ ಬಾ ಸಂಪೂರ್ಣವಾಗಿ ಬದಲಾದರು. ಅಂದಿನಿಂದ ಅಸ್ಪೃಷ್ಯತೆ ಎಂಬದು ಅವರ ಮನಸ್ಸಿನಲ್ಲಿ ಇಣುಕಲಿಲ್ಲ. ಗಾಂಧೀಜಿ ಹರಿಜನರ ಮೇಲ್ಮೆಗಾಗಿ ಕೈಗೊಂಡ ಪ್ರತಿಯೊಂದು ಕಾರ್ಯದಲ್ಲೂ ನೆರವಾಗಿ ನಿಂತು ಹೃತ್ಪೂರ್ವಕವಾಗಿ ಸೇವೆ ಸಲ್ಲಿಸಿದರು. ಇಷ್ಟೇ ಅಲ್ಲ, ಲಕ್ಷ್ಮಿ ಎಂಬ ಅನಾಥ ಹರಿಜನ ಕನ್ಯೆಯೊಬ್ಬಳನ್ನು ಅವರು ಸಾಕಿ ಸಲಹಿದರು.
1936ರಲ್ಲಿ ಅಮೃತಸರದಲ್ಲಿ ಏರ್ಪಡಿಸಿದ್ದ ಹರಿಜನರ ಮಹಾಸಭೆಗೆ ಬಾ ಅವರೇ ಅಧ್ಯಕ್ಷಿಣಿ. ಅಂದು ಅವರು ಮಾಡಿದ ಸರಳ ಭಾಷಣದಲ್ಲಿ ಹರಿಜನರ ಬಗೆಗಿನ ಅನುಕಂಪ ಸಹಾನುಭೂತಿಗಳು ಸುವ್ಯಕ್ತವಾಗಿವೆ. ದ್ರವ್ಯ ಸಂಚಯಮಾಡುವುದು ಗಾಂಧೀಜಿಯವರ ಆದರ್ಶಕ್ಕೆ ವಿರೋಧವಾಗಿದ್ದಿತು. ಬಾ ತಮ್ಮ ಬಳಿಯಲ್ಲಿಟ್ಟುಕೊಂಡಿದ್ದ ಒಂದೆರಡು ರೂಪಾಯಿಗಳ ಸಮಾಚಾರ ಗಾಂಧೀಜಿಯವರಿಗೆ ಹೇಗೋ ತಿಳಿದು ಆಶ್ರಮದ ನಿವಾಸಿಗಳೆಲ್ಲರೆದುರಿಗೆ ಅದನ್ನು ಬಹಿರಂಗಪಡಿಸಿದರು. ಮತ್ತೊಮ್ಮೆ ಆಶ್ರಮದ ನಿವಾಸಿಯೊಬ್ಬರು ಅಸ್ವಸ್ಥರಾದಾಗ ಅವರಿಗೆ ತಕ್ಕ ಶುಶ್ರೂಷೆ ಮಾಡಲಿಲ್ಲವೆಂದು ತಿಳಿದು ಗಾಂಧೀಜಿ ಬಾ ಅವರನ್ನು ಎಲ್ಲರೆದುರಿಗೂ ಆಕ್ಷೇಪಣೆ ಮಾಡಿದರು. ಮರುಮಾತನಾಡದೆ ಬಾ ಈ ನೋವು ಅವಮಾನಗಳನ್ನು ನುಂಗಿದರು.
1917ರಲ್ಲಿ ರೈತರ ಉದ್ದಾರಕ್ಕಾಗಿ ಗಾಂಧೀಜಿ ಚಂಪಾರಣ್ಯದಲ್ಲಿ ಚಳವಳಿ ಪ್ರಾರಂಭಿಸಿದಾಗ ಕಸ್ತೂರ ಬಾ ಎಂದಿನಂತೆ ಪತಿಯ ದಾರಿಯಲ್ಲಿ ಅತ್ಯಾನಂದದಿಂದ ನಡೆದರು. ಹಳ್ಳಿ ಹಳ್ಳಿಗೂ ಹೋಗಿ ಅಲ್ಲಿಯ ಜನರಿಗೆ ಶಿಸ್ತು, ಶುಚಿ, ಸದಾಚಾರ, ಸದ್ವರ್ತನೆಗಳನ್ನು ಹೇಳಿಕೊಟ್ಟರು. ಮುಂದೆ ಪತಿಯೊಡನೆ ಅವರು ಕೈಗೊಂಡ ರಾಷ್ಟ್ರಸೇವೆಗೆ ಈ ಚಳುವಳಿಯೇ ನಾಂದಿಯಾಯಿತು. ಅನಂತರ ಗಾಂಧೀಜಿ ಕೈಗೊಂಡ ಪ್ರತಿಯೊಂದು ಚಳವಳಿಯಲ್ಲೂ ಬಾ ಭಾಗವಹಿಸಿ ನಿರ್ಭಯದಿಂದ ತಮ್ಮ ಶಕ್ತಿಮೀರಿ ದೇಶಸೇವೆ ಮಾಡಿದರು. 1922ರ ಅಸಹಕಾರ ಚಳವಳಿಯ ಕಾಲದಲ್ಲಿ ಗಾಂಧೀಜಿಯವರು ಬಂಧನಕ್ಕೊಳಗಾದಾಗ ಅವರ ಸ್ಥಾನದಲ್ಲಿ ನಿಂತು ದಿಕ್ಕುಗೆಟ್ಟ ಜನತೆಗೆ ಮಾರ್ಗದರ್ಶನ ನೀಡಿ, ರಚನಾತ್ಮಕ ಹೋರಾಟಕ್ಕೆ ಕರೆಯಿತ್ತವರು ಕಸ್ತೂರ ಬಾ.
1930ರಲ್ಲಿ ಕಾನೂನುಭಂಗ ಚಳವಳಿಯ ಬಿಸಿ ದೇಶದೆಲ್ಲೆಡೆ ವ್ಯಾಪಿಸಿತು. ಆಗ ಕಸ್ತೂರ ಬಾ ವಿಶ್ರಾಂತಿಯಿಲ್ಲದೆ ಹಗಲಿರುಳು ಒಂದೇ ಸಮನಾಗಿ ದುಡಿದರು. ಜನತೆಯ ಕರೆ ಬಂದೆಡೆ ಅವರು ಪ್ರತ್ಯಕ್ಷರಾಗುತ್ತಿದ್ದರು. ಸ್ಥಳೀಯ ಮುಖಂಡರನ್ನು ಕಾಣುತ್ತ, ಆಯಾ ಪ್ರದೇಶಗಳ ವಿದ್ಯಾಮಾನಗಳನ್ನು ಪರಿಶೀಲಿಸುತ್ತ, ಅಗತ್ಯಬಿದ್ದಾಗ ಹೇಳಿಕೆಗಳನ್ನು ಕೊಡುತ್ತ, ಆಗಾಗ್ಗೆ ಆಸ್ಪತ್ರೆಗಳಿಗೆ ಹೋಗಿ ಸತ್ಯಾಗ್ರಹಿಗಳ ಯೋಗಕ್ಷೇಮವನ್ನು ವಿಚಾರಿಸುತ್ತ, ಜನತೆಯಲ್ಲಿ ಧೈರ್ಯವನ್ನು ತುಂಬುತ್ತ ಅವರು ಅವಿರತವಾಗಿ ಶ್ರಮಿಸುತ್ತಿದ್ದರು. ಪತಿಯ ಪ್ರತಿನಿಧಿಯಾಗಿ ಜನತೆಯ ಮಧ್ಯೆ ನಿಂತು ಕಾಂಗ್ರೆಸಿನ ಸೂತ್ರವನ್ನು ಹಿಡಿದು ಕಾರ್ಯಭಾರ ನಿರ್ವಹಿಸಿದ ರೀತಿ ಅತ್ಯಾಶ್ಚರ್ಯಕರವಾದುದು. ಅವರ ದೇಹದ ದುರ್ಬಲತೆಯನ್ನು ಗಮನಿಸಿ ವೈದ್ಯರು ವಿಶ್ರಾಂತಿ ತೆಗೆದುಕೊಳ್ಳಲು ಹೇಳಿದಾಗ, ಬಾಪೂವಿನ ಸ್ಥಾನದಲ್ಲಿ ನಿಂತು, ಅವರ ಹಾಗೆ ಕೆಲಸ ಮಾಡುವ ಇಂಥ ಸಮಯಗಳು ನನ್ನ ಬಾಳಿನಲ್ಲಿ ಅಪೂರ್ವ. ಆದ್ದರಿಂದ ನನಗೀಗ ವಿಶ್ರಾಂತಿಯ ಯೋಚನೆಯೇ ಇಲ್ಲ-ಎಂದು ಉತ್ತರಿಸಿದರು. ಅವರು ಮಾತೃವಾತ್ಸಲ್ಯದಿಂದ ಆಡುತ್ತಿದ್ದ ಮಾತುಗಳು ಜನತೆಯ ಹೃದಯವನ್ನು ನೇರವಾಗಿ ಮುಟ್ಟುತ್ತಿದ್ದುವು. ನೊಂದವರು ಸೋತವರು ಕುಗ್ಗಿದವರು ಆಕೆಯ ಆಶ್ರಯ ಬಯಸುತ್ತಿದ್ದರು. ಅವರಿಗೆ ಅಲ್ಲಿ ಅಪೂರ್ವವಾದ ಸಾಂತ್ವನ ದೊರೆಯುತ್ತಿತ್ತು. ಹೆಂಡತಿ ಮತ್ತು ಮಗಳನ್ನು ಕಳೆದುಕೊಂಡ ರೈತನೊಬ್ಬ ಮೂರು ತಿಂಗಳ ಕೂಸಿನೊಡನೆ ಬಾ ಅವರ ಬಳಿಗೆ ದೀನನಾಗಿ ಬಂದಾಗ ಬಾ ಅವನಿಗೆ ಆಶ್ರಯ ನೀಡಿದರು. ತನ್ನ ಒಬ್ಬನೇ ಮಗ ಬಾ ಅವರೊಂದಿಗೆ ಹಳ್ಳಿಹಳ್ಳಿಗಳನ್ನು ಸುತ್ತುತ್ತಿದ್ದುದನ್ನು ಕಂಡು ನೊಂದ ತಾಯಿಯೊಬ್ಬಳಿಗೆ ಬಾ ಹೇಳಿದರು : ನಿನಗೆ ಒಬ್ಬನೇ ಮಗನ ಯೋಚನೆ. ನನಗಾದರೋ ಮೂರು ಮಕ್ಕಳಿದ್ದಾರೆ. ಆದರೆ ಎಲ್ಲರೂ ದೂರವಿದ್ದಾರೆ. ಅವರು ದೇಶಕ್ಕಾಗಿ ದುಡಿಯುತ್ತಿದ್ದಾರೆಂಬುದೇ ನನಗೆ ತೃಪ್ತಿ. ಮರೆಹೊಕ್ಕವರನ್ನು ಮೃದುವಾದ ಮಾತುಗಳಿಂದ ಸಂತೈಸುವ ಜಾಣ್ಮೆ ಆಕೆಯಲ್ಲಿತ್ತು. ಆಕೆಯ ಮಾತುಗಳು ಜನತೆಗೆ ಅಮೃತಸೇಚನ ಮಾಡುತ್ತಿದ್ದವು. ದೇಹಾರೋಗ್ಯವಿಲ್ಲದಿದ್ದರೂ ಬಾ ದುರ್ಗಮವಾದ ದಾರಿಗಳಲ್ಲಿ ನಡೆದು, ಹಳ್ಳಿಹಳ್ಳಿಗೆ ಹೋಗಿ, ಜನರಲ್ಲಿ ಉತ್ಸಾಹ ಚೈತನ್ಯಗಳನ್ನು ತುಂಬುತ್ತಿದ್ದರು; ಅವರಿಗೆ ಅಗತ್ಯವಾದ ಸೇವೆ ಸಲ್ಲಿಸುತ್ತಿದ್ದರು. ಅವರಲ್ಲಿದ್ದ ದೃಢನಿರ್ಧಾರ, ಆತ್ಮಸಂಯಮಗಳು ದೇಹ ದೌರ್ಬಲ್ಯವನ್ನು ಮೆಟ್ಟಿ ನಿಂತವು. ಈ ಅವಿರತವಾದ ದೇಶಪರ್ಯಟನೆಯಲ್ಲಿ ಅವರು ತಮ್ಮ ನಿತ್ಯನಿಯಮಗಳನ್ನೆಂದು ಮೀರಿ ನಡೆದವರಲ್ಲ. ಆಶ್ರಮದಲ್ಲಿದ್ದಾಗ ನಡೆಯುತ್ತಿದ್ದಂತೆಯೇ ಪ್ರಾತಃಕಾಲ ನಾಲ್ಕು ಗಂಟೆಗೇ ಎದ್ದು ದೇವರ ಪ್ರಾರ್ಥನೆ ಮಾಡಿ, ತಮ್ಮ ಬಟ್ಟೆಗಳನ್ನು ತಾವೇ ಒಗೆದುಕೊಳ್ಳುತ್ತಿದ್ದರು. ಅವರ ಆಹಾರ ಜೋಳದ ರೊಟ್ಟಿ ಮತ್ತು ಉಪ್ಪಿಲ್ಲದ ಒಂದಿಷ್ಟು ತರಕಾರಿ. ಸರಳತೆ ಅವರ ಬದುಕಿನ ಜೀವಾಳ. ಅಬ್ಬರ ಆಡಂಬರಗಳಿಗೂ ಅವರಿಗೂ ಬಹುದೂರ. ದಿಕ್ಕುಗೆಟ್ಟ ಜನರನ್ನು ಹುರಿದುಂಬಿಸಿ ಒಟ್ಟುಗೂಡಿಸುವ ಶಕ್ತಿ, ಹಿಡಿದ ಕಾರ್ಯದಲ್ಲಿ ಶ್ರದ್ಧೆಭಕ್ತಿಗಳನ್ನಿಟ್ಟು ಅದನ್ನು ನಿರ್ವಹಿಸುವ ಸಾಮರ್ಥ್ಯ, ಸರಸವಾಗಿ ಮಾತಾಡಿ ಜನರನ್ನು ಗೆಲ್ಲುವ ಬಲ್ಮೆ, ನಿರಾಶೆಯಲ್ಲಿ ಮಂಕು ಕವಿದು ಕಾರ್ಯಭಂಗವಾಗದಂತೆ ಮುಂದುವರಿಯುವ ಮೇಲ್ಮೆ, ಗುರಿಯನ್ನಾಗಲಿ ಗಂಡ ಹಾಕಿಕೊಟ್ಟ ಮೇಲ್ಪಂಕ್ತಿಯನ್ನಾಗಲಿ ಮರೆಯದಂತೆ ತಪ್ಪದೆ ನೆರವೇರಿಸುವ ನಿಷ್ಠೆ-ಈ ಎಲ್ಲ ಗುಣಗಳು ಅವರ ರಾಷ್ಟ್ರಸೇವಾಕಾರ್ಯದಲ್ಲಿ ಬೆಳಕಿಗೆ ಬಂದುವು.
ಈ ಎಲ್ಲ ಚಟುವಟಿಕೆಗಳಲ್ಲಿ ತೊಡಗಿದ್ದಾಗ 1932 ರಲ್ಲಿ ಕಸ್ತೂರ ಬಾ ಸೆರೆಮನೆಗೆ ಹೋಗಬೇಕಾಯಿತು. ಬಾರ್ದೋಲಿಯ ಸೆರೆಮನೆಯಲ್ಲಿ ಆರು ತಿಂಗಳ ಕಠಿಣ ಕಾರಾಗೃಹ ವಾಸವನ್ನೂ ಧೈರ್ಯದಿಂದ ಎದುರಿಸಿದರು.
1935 ರ ಅನಂತರ ಗಾಂಧೀಜಿ ಚಳವಳಿ ನಿಲ್ಲಿಸಿ ವರ್ಧಾ ಬಳಿ ಸೇವಾಗ್ರಾಮದಲ್ಲಿ ತಮ್ಮ ಹೊಸ ಆಶ್ರಮ ಸ್ಥಾಪಿಸಿದರು. ಕಸ್ತೂರ ಬಾ ಅವರೇ ಆಶ್ರಮದ ಮೇಲ್ವಿಚಾರಣೆಯ ಹೊಣೆ ಹೊತ್ತರು. ಆ ವೇಳೆಗೆ ವಯಸ್ಸು ಮಾರ್ಪಾಡುಗಳನ್ನುಂಟುಮಾಡಿದ್ದರೂ ಮನಸ್ಸು ಮಾತ್ರ ಚಿರತಾರುಣ್ಯದ ಚಿಲುಮೆಯಾಗಿತ್ತು. ಅನಾರೋಗ್ಯದಿಂದ ದೇಹದಾರ್ಡ್ಯ ಕುಗ್ಗಿದ್ದರೂ ಉತ್ಸಾಹ ತಗ್ಗಿರಲಿಲ್ಲ. ಆಶ್ರಮದ ನಿತ್ಯಕಾರ್ಯಗಳಲ್ಲಿ ಮಗ್ನರಾಗಿರುತ್ತಿದ್ದ ಅವರನ್ನು ನೋಡಿದರೆ ಆಕೆ ಒಬ್ಬ ಆದರ್ಶ ಗೃಹಿಣಿಯಂತೆ ಕಂಡುಬರುತ್ತಿದ್ದರೇ ಹೊರತು ದೇಶಕ್ಕಾಗಿ ಜೀವವನ್ನೇ ಮುಡುಪಿಟ್ಟು ಸಹಸ್ರಾರು ಸಂಕಷ್ಟಗಳನ್ನನುಭವಿಸಿದ ನಾಯಕಿಯಂತೆ ಕಂಡುಬರುತ್ತಿರಲಿಲ್ಲ. ಇಷ್ಟರಲ್ಲಿ ಕಸ್ತೂರ ಬಾ ಮಾತೃ ಹೃದಯಕ್ಕೆ ದೊಡ್ಡ ಆಘಾತವನ್ನುಂಟುಮಾಡಿದ ಒಂದು ಸನ್ನಿವೇಶ ಒದಗಿತು. ಅದು ಆಕೆಯ ಮಗ ಹೀರಾಲಾಲ್ ಚಾರಿತ್ರ್ಯ ಹೀನನಾಗಿ ಮುಸಲ್ಮಾನ್ ಮತಕ್ಕೆ ಸೇರಿದ್ದು. ಆ ಸಮಯದಲ್ಲಿ ಆಕೆ ಮಗನಿಗೆ ಬರೆದ ದೀರ್ಘಪತ್ರದಲ್ಲಿ ಮಾತೃಹೃದಯದ ವೇದನೆ ವ್ಯಕ್ತವಾಗುತ್ತದೆ. ಆಕೆಯ ಮಮತೆ ಕುರುಡಾಗಿರಲಿಲ್ಲ. ಅವರು ಬಿಚ್ಚುಹೃದಯದಿಂದ ಮಗನ ವರ್ತನೆಯನ್ನು ಅದರಲ್ಲಿ ಖಂಡಿಸಿದ್ದಾರೆ. ಅದರಲ್ಲಿ ಕೋಪದ ಬಿಸಿಯಿಲ್ಲ, ಪಶ್ಚಾತ್ತಾಪದ ಕಣ್ಣೀರಿದೆ. ಬಾ ಅಪೂರ್ವ ಸಹನೆಯಿಂದ ಸಂಕಟವನ್ನು ನುಂಗಿದರು; ದೇಶಕ್ಷೇಮದಲ್ಲಿ ಮೈಮರೆತರು.
1939 ರಲ್ಲಿ ರಾಜಕೋಟೆಯಲ್ಲಿ ಮತ್ತೆ ಆಂದೋಲನ ನಡೆದಾಗ ಕಸ್ತೂರ ಬಾ ದೇಹ ದುರ್ಬಲವಾಗಿದ್ದರೂ ಚಳವಳಿಯಲ್ಲಿ ಭಾಗವಹಿಸಿ ಮತ್ತೆ ಸೆರೆ ಸೇರಿದರು. ಆ ಕಾಲದಲ್ಲೇ ಗಾಂಧೀಜಿ ಆಮರಣಾಂತ ಉಪವಾಸ ಕೈಗೊಂಡಿದ್ದು. ಇದರಿಂದ ಮೊದಲಿಗೆ ಬಾ ತಳಮಳಗೊಂಡರೂ ಅನಂತರ ಪತಿಯ ಕ್ಷೇಮಕ್ಕಾಗಿ ಭಗವಂತನಲ್ಲಿ ಸಂಪೂರ್ಣ ಶರಣಾದರು. ಗಾಂಧೀಜಿ ಉಪವಾಸ ಕೈಗೊಂಡಾಗಲೆಲ್ಲ ಅವರು ಭಗವಂತನಲ್ಲಿ ಮೊರೆ ಹೋಗುತ್ತಿದ್ದರು. ಭಗವಂತನಲ್ಲಿದ್ದ ಅವರ ಈ ಅಚಲವಾದ ಶ್ರದ್ಧಾಭಕ್ತಿಗಳು ಗಾಂಧೀಜಿಗೆ ವಜ್ರಕವಚದಂತಿದ್ದುವು. ರಾಜಕೋಟೆಯ ಪ್ರಕರಣ ಮುಗಿದ ಮೇಲೆ ಗಾಂಧೀದಂಪತಿಗಳು ಮತ್ತೆ ಸೇವಾಗ್ರಾಮವನ್ನು ಸೇರಿದರು.
1942 ರಲ್ಲಿ ಸ್ವಾತಂತ್ರ್ಯ ಚಳವಳಿಯ ಜ್ವಾಲೆ ಮತ್ತೊಮ್ಮೆ ದೇಶವನ್ನೆಲ್ಲ ವ್ಯಾಪಿಸಿತು. ಆಗಸ್ಟ್ 9ರಂದು ಗಾಂಧೀಜಿಯಾದಿಯಾಗಿ ದೇಶದ ನಾಯಕರೆಲ್ಲ ಸೆರೆ ಸೇರಿದರು. ಅದೇ ಸಂಜೆ ಗಾಂಧೀಜಿ ಬೊಂಬಾಯಿಯ ಶಿವಾಜಿಪಾರ್ಕಿನಲ್ಲಿ ಉಪನ್ಯಾಸ ಮಾಡಬೇಕಾಗಿತ್ತು. ಪತಿಯ ಪ್ರತಿನಿಧಿಯಾಗಿ ಕಸ್ತೂರ ಬಾ ಆ ಕೆಲಸವನ್ನು ನಿರ್ವಹಿಸಲು ನಿರ್ಧರಿಸಿದರು. ಆದರೆ ಅಷ್ಟರಲ್ಲಿಯೇ ಪೋಲೀಸರು ಆಕೆಯನ್ನು ಬಂಧಿಸಿ ಆಗಾಖಾನ್ ಅರಮನೆಗೆ ಒಯ್ದರು. ಅಲ್ಲಿಂದ ಅವರಿಗೆ ಮತ್ತೆ ಬಿಡುಗಡೆಯಾಗಲಿಲ್ಲ. ಮೃತ್ಯು ಅವರನ್ನು ಈ ಪ್ರಪಂಚದಿಂದಲೇ ಶಾಶ್ವತವಾಗಿ ಬಿಡುಗಡೆ ಮಾಡಿತು.
1943ರ ಮಾರ್ಚ್ 12 ರಂದು ಕಸ್ತೂರ ಬಾ ಎರಡು ಬಾರಿ ಹೃದಯವೇದನೆಗೊಳಗಾದರು. ಅಲ್ಲಿಂದಾಚೆಗೆ ಅವರ ಆರೋಗ್ಯ ಕ್ಷೀಣಿಸುತ್ತ ಬಂತು. 1944 ರ ಫೆಬ್ರವರಿ 22 ರ ಮಹಾಶಿವರಾತ್ರಿಯಂದು ಪತಿಯ ತೊಡೆಯ ಮೇಲೊರಗಿದ್ದಂತೆಯೇ ಬಾರ ಆತ್ಮ ಅನಂತದಲ್ಲಿ ಲೀನವಾಗಿ ಯೋಯಿತು. ಆ ಮಹಾಸತಿಯ ಪಾರ್ಥಿವಶರೀರ ಕಣ್ಮರೆಯಾದರೂ ಆಕೆಯ ಕೀರ್ತಿ ಅಜರಾಮರವಾಯಿತು.
ಸಹನೆ ಸಂಯಮ ಔದಾರ್ಯಗಳು ಆಕೆಯಲ್ಲಿ ಮುಪ್ಪುರಿಗೊಂಡಿದ್ದುವು. ಯಾವ ಮಹತ್ವಾಕಾಂಕ್ಷೆಯಾಗಲೀ, ಕೀರ್ತಿಕಾಮನೆಯಾಗಲಿ ಅವರಲ್ಲಿರಲಿಲ್ಲ. ಸಂಕುಚಿತ ಸಂಸಾರದ ಅನುರಾಗ ಅಭಿಮಾನಗಳನ್ನು ತೊರೆದು ವಿಶ್ವಕುಟುಂಬದ ಹೊಣೆ ಹೊತ್ತು ದೇಶಸೇವೆಗಾಗಿ ಗಂಡ ಮತ್ತು ಮಕ್ಕಳನ್ನು ಬಿಟ್ಟುಕೊಟ್ಟು ಅನನ್ಯತ್ಯಾಗವನ್ನು ಮೆರೆದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಿಕ್ಕೇರಿ ಕೃಷ್ಣಮೂರ್ತಿ ಸುಗಮ ಸಂಗೀತ ಕಲಾವಿದರಾಗಿ ಹೆಸರಾಗಿದ್ದಾರೆ.

Tue Feb 22 , 2022
ಕೃಷ್ಣಮೂರ್ತಿಯವರು 1964ರ ಫೆಬ್ರವರಿ 21ರಂದು ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ ಜನಿಸಿದರು. ತಂದೆ ಬಿ.ಎಸ್. ನಾರಾಯಣ ಭಟ್. ತಾಯಿ ರುಕ್ಮಿಣಮ್ಮ. ವಾಣಿಜ್ಯ ಡಿಪ್ಲೊಮಾ ನಂತರದಲ್ಲಿ ಬಿ.ಕಾಂ. ಪದವಿ ಜೊತೆಗೆ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ) ಪದವಿ ಗಳಿಸಿದರು. ಕೃಷ್ಣಮೂರ್ತಿಯವರಿಗೆ ಶಾಲಾ ಕಾಲೇಜು ದಿನಗಳಿಂದಲೂ ಹಾಡಿನ ಬಗ್ಗೆ ವಿಶೇಷ ಒಲವು. ಹಲವಾರು ವರ್ಷ ಜಾನಪದ ತಜ್ಞ ಎಸ್.ಕೆ. ಕರೀಂಖಾನರ ಸಹವರ್ತಿಯಾಗಿದ್ದರು. ಕರೀಂಖಾನರ ಸಾಹಿತ್ಯಕ್ಕೆ ಸಂಗೀತ ನೀಡಿ ಮೊಟ್ಟಮೊದಲ ಧ್ವನಿಸುರಳಿಯನ್ನು ಹೊರತಂದರು. ಆಕಾಶವಾಣಿ, ದೂರದರ್ಶನದಲ್ಲಿ […]

Advertisement

Wordpress Social Share Plugin powered by Ultimatelysocial