ಶ್ಯಾಮಲಾ ಜಿ. ಭಾವೆ | On the birth anniversary of great musician Shyamala G Bhave |

ಹಿಂದೂಸ್ಥಾನಿ ಹಾಗೂ ಕರ್ನಾಟಕ ಸಂಗೀತ ಪದ್ಧತಿಗಳೆರಡರಲ್ಲೂ ನಿಷ್ಣಾತರಾಗಿ, ಶಾಸ್ತ್ರೀಯ ಸಂಗೀತದ ಜೊತೆಗೆ ಸುಗಮ ಸಂಗೀತದಲ್ಲಿ ವಿಶೇಷ ಸಾಧನೆಗೈದು, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ, ಸಂಗೀತಕ್ಕಾಗಿ ತಮ್ಮ ಸಂಪೂರ್ಣ ಜೀವನವನ್ನು ಮೀಸಲಾಗಿರಿಸಿದ್ದ ಉಭಯ ಗಾನ ವಿದುಷಿ ಶ್ರೀಮತಿ ಶ್ಯಾಮಲಾ ಜಿ. ಭಾವೆ ಕರ್ನಾಟಕ ಮಹಿಳಾ ಸಂಗೀತಗಾರರಲ್ಲಿ ಅಗ್ರಗಣ್ಯರು.
ಶ್ಯಾಮಲಾ ಭಾವೆ 1941ರ ಮಾರ್ಚ್ 14ರಂದು ಬೆಂಗಳೂರಿನಲ್ಲಿ ಜನಿಸಿದರು. ಅವರದು ಸಂಗೀತ ಹಾಗೂ ರಂಗಭೂಮಿ ಪರಂಪರೆಯ ಮನೆತನ. ಅವರ ಮುತ್ತಜ್ಜ ವಿಷ್ಣುದಾಸ ಭಾವೆ ಮರಾಠಿ ರಂಗಭೂಮಿಯ ಆದ್ಯ ಪ್ರವರ್ತಕರು. ತಂದೆ ಗೋವಿಂದ ವಿಠಲ ಭಾವೆ ಗಾಯಕರಷ್ಟೇ ಅಲ್ಲದೆ ಹದಿನಾಲ್ಕು ವಾದ್ಯ ನುಡಿಸಬಲ್ಲ ಪ್ರತಿಭಾನ್ವಿತರು. ಸಂಗೀತೋದ್ಧಾರಕ ಪಂ. ವಿಷ್ಣು ದಿಗಂಬರ ಪಲುಸ್ಕರ ಅವರ ಶಿಷ್ಯಂದಿರು. ತಾಯಿ ಶ್ರೀಮತಿ ಲಕ್ಷ್ಮೀ ಭಾವೆ ಜೇನು ಕಂಠದ ಗಾಯಕಿ. ಇಂತಹ ಸಂಗೀತ ವಾತಾವರಣದ ಮನೆತನದಲ್ಲಿ ಜನಿಸಿದ ಶ್ಯಾಮಲಾ ಅವರಿಗೆ 3ನೇ ವಯಸ್ಸಿನಲ್ಲಿ ಸಂಗೀತ ಕಲಿಕೆಗೆ ನಾಂದಿಯಾಯಿತು. 6ನೇ ವಯಸ್ಸಿನಲ್ಲಿ ಸಂಗೀತ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಪಡೆದ ಹೆಗ್ಗಳಿಕೆ ಸಂದಿತು. 12ನೇ ವಯಸ್ಸಿಗೆ ಸಾರ್ವಜನಿಕ ಸಂಗೀತ ಕಛೇರಿ ನೀಡಿದರು. ತಂದೆ-ತಾಯಿಯರಿಂದ ಹಿಂದೂಸ್ಥಾನಿ ಸಂಗೀತವನ್ನು, ಬಿ. ದೊರೆಸ್ವಾಮಿ ಹಾಗೂ ಎ. ಸುಬ್ಬರಾಯ ಅವರಲ್ಲಿ ಕರ್ನಾಟಕ ಸಂಗೀತದ ತಾಲೀಮು ಪಡೆದು ಉಭಯಗಾನ ವಿದುಷಿ ಎಂಬ ಖ್ಯಾತಿಗಳಿಸಿದರು.
1930ರಲ್ಲಿ ಬೆಂಗಳೂರಿನಲ್ಲಿ ಶ್ಯಾಮಲಾ ಅವರ ತಂದೆ ಗೋವಿಂದ ವಿಠಲ ಭಾವೆಯವರು ಪ್ರಪ್ರಥಮ ಹಿಂದುಸ್ಥಾನಿ ಸಂಗೀತ ಶಾಲೆ ಸರಸ್ವತಿ ಸಂಗೀತ ವಿದ್ಯಾಲಯವನ್ನು ಸ್ಥಾಪಿಸಿದರು. ಅದನ್ನು ಸಮರ್ಥವಾಗಿ ಮುನ್ನಡೆಸುತ್ತ, ಸಹಸ್ರಾರು ಆಸಕ್ತರಿಗೆ ಸಂಗೀತ ಶಿಕ್ಷಣ ನೀಡುತ್ತಿದ್ದ ಶ್ಯಾಮಲಾ ಅವರು ವಿವಿಧ ದೇಶಗಳಲ್ಲಿ ಸಂಗೀತ ಕಛೇರಿ ನೀಡಿ ಭಾರತೀಯ ಸಂಗೀತಕ್ಕೆ ರಾಷ್ಟ್ರೀಯ ಖ್ಯಾತಿ ತಂದುಕೊಟ್ಟಿದ್ದರು. ಪಂ. ಜಸರಾಜ್‌ ಅವರ ಮಾರ್ಗದರ್ಶನದಲ್ಲಿ ಸಂಗೀತ ತಾಲೀಮು ಪಡೆದ ಅವರು ಅನೇಕ ಚಲನಚಿತ್ರ, ಸಾಕ್ಷಚಿತ್ರ, ಗ್ರಾಮಫೋನ್‌ ಹಾಗೂ ಕ್ಯಾಸೆಟ್‌ಗಳಲ್ಲಿ ಧ್ವನಿ ನೀಡಿ, ಸಂಗೀತ ನಿರ್ದೇಶನ ಮಾಡಿದ್ದರು. ಒಂಭತ್ತು ಭಾಷೆಗಳ ಸುಮಾರು 1500ಕ್ಕೂ ಹೆಚ್ಚಿನ ಗೀತೆಗಳಿಗೆ ರಾಗ ಸಂಯೋಜಿಸಿದ್ದರು.
ಶ್ಯಾಮಲಾ ಭಾವೆ ಅವರು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಸದಸ್ಯರಾಗಿ, ಅಕಾಡೆಮಿಯ ಅಧ್ಯಕ್ಷರಾಗಿ ಸಂಗೀತ ಕ್ಷೇತ್ರದ ಸೇವೆ ಮಾಡಿದ್ದರು. 1997ರಲ್ಲಿ ಅವರ ಶಿಷ್ಯರು, ಅಭಿಮಾನಿಗಳು ‘ಸ್ವರ ಸಾಧನಾ’ ಎಂಬ ಅಭಿನಂದನ ಗ್ರಂಥ ಅರ್ಪಿಸಿದ್ದರು. ಅವರಿಗೆ, ಉಭಯಗಾನ ವಿಶಾರದೆ, ಉಭಯ ಗಾನ ವಿದುಷಿ, ಕರ್ನಾಟಕ ರಾಜ್ಯೋತ್ಸವ, ಗಾನ ಮಾಧುರಿ, ಸುರಮಣಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕಲಾ ತಿಲಕ, ಅಮೇರಿಕಾದ ಹ್ಯೂಸ್ಟನ್‌ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್‌ (2007), ಭಾರತ ಗೌರವ್‌, ‘ವರ್ಷದ ಮಹಿಳೆ’ (1997), ಗಾನ ಕೋಕಿಲ, ಕೃಷ್ಣಗಾನ ಮಾಧುರಿ ಮುಂತಾದ ಅನೇಕ ಪ್ರಶಸ್ತಿ ಪುರಸ್ಕಾರಗಳು ಸಂದಿದ್ದವು.
ಅವರನ್ನು ಕೆಲವು ಬಾರಿ ಸನಿಹದಲ್ಲಿ ಕಂಡ ನೆನಪು. ಒಮ್ಮೆ(2003 ವರ್ಷದಲ್ಲಿ) ಮೂರು ದಿನಗಳ ಧ್ಯಾನ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಅಲ್ಲಿಗೆ ಅನಿರೀಕ್ಷಿತವಾಗಿ ಶ್ಯಾಮಲಾ ಜಿ ಭಾವೆ ಅವರು ಬಂದು ಎರಡು ಭಕ್ತಿಗೀತೆ ಹಾಡಿದರು. ಆ ದಿನ ನಾನು ಧ್ಯಾನದ ಆಳದ ಉಪಸ್ಥಿತಿಯಲ್ಲಿ ಇದ್ದದ್ದು ನನಗೆ ಅರಿವಾಗುತ್ತಿತ್ತು. ಆ ಸಂದರ್ಭದಲ್ಲಿ ನನ್ನ ಬಳಿ ಬಂದ ಶ್ಯಾಮಲಾ ಜಿ ಭಾವೆ ಅವರು ಆಪ್ತವಾಗಿ ಕೈಮುಗಿದದ್ದು ಮರೆಯಲಾಗದ ಅನುಭವ. ಅವರಿಗೆ ಆವರಣದಲ್ಲಿ ಎಲ್ಲವನ್ನೂ ಗಮನಿಸುವಲ್ಲಿ ಇದ್ದ ಶಕ್ತಿ ಇಂದೂ ಬೆರಗು ಹುಟ್ಟಿಸುತ್ತಿದೆ.

ಶ್ಯಾಮಲಾ ಜಿ ಭಾವೆ 2020ರ ಮೇ 22ರಂದು ಈ ಲೋಕವನ್ನಗಲಿದರು. ಇಲ್ಲಿ ಉಸಿರಾಡುತ್ತ ಇದ್ದ ಸಮಯದಲ್ಲಿ ಮಾಡಿದ ಸಾಧನೆಗಳ ಸಂತೃಪ್ತಿಯೇ ಉತ್ತಮ ಬದುಕು. ಅಂತಹ ಸಂತೃಪ್ತ ಬಾಳ್ವೆ ನಡೆಸಿದ ಚೇತನ ಈ ತಾಯಿ. 🌷🙏🌷ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಡೆಯುತ್ತಿರುವ ರಷ್ಯಾ-ಉಕ್ರೇನ್ ಯುದ್ಧದಲ್ಲಿ ಉಕ್ರೇನ್ ಓಲ್ಗಾ ಸೆಮಿಡಿಯಾನೋವಾ, 'ತಾಯಿ ನಾಯಕಿ' ಕಳೆದುಕೊಂಡಿದೆ!

Fri Mar 18 , 2022
ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದಲ್ಲಿ, ಒಮ್ಮೆ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದ ಪ್ರಸಿದ್ಧ ವೈದ್ಯ ಓಲ್ಗಾ ಸೆಮಿಡಿಯಾನೋವಾ, ದೇಶದ ದಕ್ಷಿಣದಲ್ಲಿರುವ ಡೊನೆಟ್ಸ್ಕ್ ಬಳಿಯ ನಗರದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದರು. 48 ವರ್ಷ ವಯಸ್ಸಿನವಳು ತನ್ನ ತಂಡದ ಹೆಚ್ಚಿನವರು ಕೊಲ್ಲಲ್ಪಟ್ಟ ನಂತರ ಹೋರಾಡುತ್ತಲೇ ಇದ್ದರು ಎಂದು ಹೇಳಲಾಗಿದೆ. ಸೆಮಿಡಿಯಾನೋವಾ ಅವರ ಕುಟುಂಬ ಸದಸ್ಯರ ಪ್ರಕಾರ ಹೊಟ್ಟೆಗೆ ಗುಂಡು ತಗುಲಿತು, ಆದರೆ ಆ ಪ್ರದೇಶದಲ್ಲಿ ನಡೆಯುತ್ತಿರುವ ಹೋರಾಟದಿಂದಾಗಿ ಆಕೆಯ ದೇಹವನ್ನು […]

Advertisement

Wordpress Social Share Plugin powered by Ultimatelysocial