ಸಚ್ಚಿದಾನಂದ ಹೀರಾನಂದ ವಾತ್ಸ್ಯಾಯನ

ಸಚ್ಚಿದಾನಂದ ಹೀರಾನಂದ ವಾತ್ಸ್ಯಾಯನ
On the birth anniversary of great poet and novelist Sacchidananda Hirananda Vatsayan
‘ಆಜ್ಞೇಯ’ ಕಾವ್ಯನಾಮಾಂಕಿತರಾಗಿ ಹಿಂದಿ ಭಾಷೆಯಲ್ಲಿ ಕವಿಗಳಾಗಿ ಮತ್ತು ಕತೆಗಾರರಾಗಿ ಪ್ರಖ್ಯಾತರಾದ ಸಚ್ಚಿದಾನಂದ ಹೀರಾನಂದ ವಾತ್ಸ್ಯಾಯನ ಅವರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು.
ಸಚ್ಚಿದಾನಂದ ಹೀರಾನಂದ ವಾತ್ಸ್ಯಾಯನರು ಪಂಜಾಬಿನ ದೇವರಿಯ ಜಿಲ್ಲೆಯ ಕಸಿಯ ಎಂಬಲ್ಲಿ 1911ರ ಮಾರ್ಚ್ 7ರಂದು ಜನಿಸಿದರು. ತಂದೆ ಹೀರಾನಂದ ಶಾಸ್ತ್ರಿಗಳು ಪುರಾತತ್ತ್ವ ವಿಭಾಗದಲ್ಲಿ ಹಿರಿಯ ಅಧಿಕಾರಿಯಾಗಿದ್ದರು. ಆಜ್ಞೇಯರ ಬಾಲ್ಯ ಲಖನೌ, ಬಿಹಾರ, ಮದರಾಸ್ ಮುಂತಾದ ಕಡೆಗಳಲ್ಲಿ ಕಳೆಯಿತು. ಶಿಕ್ಷಣವನ್ನು ಮದರಾಸ್ ಮತ್ತು ಲಾಹೋರ್ಗಳಲ್ಲಿ ಪಡೆದರು. ಲಾಹೋರನಲ್ಲಿ ಬಿ.ಎಸ್ಸಿ. ಪದವಿ ಪಡೆದ ಅವರು ಅನಂತರ ಇಂಗ್ಲಿಷ್ ಎಂ.ಎ ಸೇರಿದ ಸಮಯದಲ್ಲಿ ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿದರು. ಆಜಾದ್ ಸುಖದೇವ್ ಮತ್ತು ಭಗವತೀ ಚರಣ ಪೋಹರಾ ಅವರುಗಳ ಪರಿಚಯವಾಯಿತು. ದೆಹಲಿಯ ಸಾಬೂನು ಕಾರ್ಖಾನೆಯಲ್ಲಿದ್ದುಕೊಂಡು ಕ್ರಾಂತಿಕಾರಿ ಗೆಳೆಯರೊಂದಿಗೆ ಬಾಂಬ್ ತಯಾರಿಸಿದ್ದರಿಂದ ಇವರು ನಾಲ್ಕು ವರ್ಷಗಳನ್ನು ಸೆರೆಮನೆಯಲ್ಲಿ ಕಳೆದರು.
ಸಚ್ಚಿದಾನಂದ ಹೀರಾನಂದ ವಾತ್ಸ್ಯಾಯನರು 1943ರಲ್ಲಿ ಸೈನ್ಯಕ್ಕೆ ಸೇರಿದರು. ಅಸ್ಸಾಂ, ಬರ್ಮ, ಕೊಹಿಮಾ ಫ್ರಂಟಿನಲ್ಲಿ ಸೇವೆಸಲ್ಲಿಸಿದರು. ಅನಂತರ ಅದನ್ನು ಬಿಟ್ಟು ಸೈನಿಕ್, ವಿಶಾಲ ಪ್ರಪಂಚ ಭಾರತ್, ಪ್ರತೀಕ್ ಮತ್ತು ದಿನಮಾನ್ ಮುಂತಾದ ಪತ್ರಿಕೆಗಳನ್ನು ಸಂಪಾದಿಸಿದರು.
ಅನೇಕ ಬಾರಿ ವಿಶ್ವಪರ್ಯಟನೆ ಮಾಡಿದ ಸಚ್ಚಿದಾನಂದ ಹೀರಾನಂದ ವಾತ್ಸ್ಯಾಯನರು ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದಲ್ಲಿ ಭಾರತೀಯ ಸಂಸ್ಕೃತಿ ಮತ್ತು ಸಾಹಿತ್ಯದ ಪ್ರಾಧ್ಯಾಪಕರಾಗಿದ್ದರು (1961-64).
ಕವಿಯಾಗಿ ಮತ್ತು ಕಥೆಗಾರರಾಗಿ ಖ್ಯಾತರಾದ ಸಚ್ಚಿದಾನಂದ ಹೀರಾನಂದ ವಾತ್ಸ್ಯಾಯನರು ಪ್ರವಾಸ ಸಾಹಿತ್ಯ, ಲಲಿತ ಪ್ರಬಂಧ ಮತ್ತು ವಿಮರ್ಶೆಯ ಕ್ಷೇತ್ರದಲ್ಲಿಯೂ ಉಲ್ಲೇಖನೀಯವಾದ ಕೊಡುಗೆ ನೀಡಿದ್ದಾರೆ. ಇವರ ಕೃತಿಗಳಲ್ಲಿ ಶೇಖರ್ ಏಕ್ ಜೀವನೀ 1944ರಲ್ಲಿ ಎರಡು ಭಾಗಗಳಲ್ಲಿ ಪ್ರಕಟಗೊಂಡಿತು. ಇವರ ಮತ್ತೊಂದು ಕಾದಂಬರಿ ನದಿ ಕೇ ದ್ವೀಪ್ 1951ರಲ್ಲಿ ಪ್ರಕಟವಾಯಿತು. ಈ ಎರಡು ಕೃತಿಗಳಲ್ಲದೆ ಅಪನೇ ಅಪನೇ ಅಜನಬೀ ಎಂಬ ಇವರ ಗ್ರಂಥ ಕ್ರಾಂತಿಕಾರಿ ವ್ಯಕ್ತಿತ್ವವನ್ನು ಪರಿಚಯಿಸುತ್ತದೆ. ಶೇಖರ್ ಏಕ್ ಜೀವನೀ ಕೃತಿಯಲ್ಲಿ ಕ್ರಾಂತಿಕಾರೀ ವ್ಯಕ್ತಿಯ ಚಿತ್ರಣ, ನದಿ ಕೇ ದ್ವೀಪ್ ಕೃತಿಯಲ್ಲಿ ಪ್ರೇಮ ಮತ್ತು ವಿವಾಹದ ಸಮಸ್ಯೆ ಇದೆ. ಅಪನೇ ಅಪನೇ ಅಜನಬೀ ಕೃತಿಯಲ್ಲಿ ಮೃತ್ಯುವಿನ ಸಾಕ್ಷಾತ್ ಅನುಭವ ಚಿತ್ರಿತವಾಗಿದೆ.
ಮೊದಮೊದಲು ಛಾಯಾವಾದಿ ಕವಿಯಾಗಿ ಬರೆಯುತ್ತಿದ್ದ ಸಚ್ಚಿದಾನಂದ ಹೀರಾನಂದ ವಾತ್ಸ್ಯಾಯನರು ಮುಂದೆ ಹೊಸ ಹಾದಿ ಹಿಡಿದು ಪ್ರಯೋಗವಾದದ ಪ್ರವರ್ತಕರಾದರು. 1943ರಲ್ಲಿ ವಾತ್ಸ್ಯಾಯನರ ತಾರ-ಸಪ್ತಕ್ ಪ್ರಕಟವಾಗಿ ಹಿಂದಿ ಕಾವ್ಯದ ಆಯಾಮವನ್ನು ವಿಸ್ತರಿಸಿತು. ಈ ಸಂಕಲನದ ಮುನ್ನುಡಿ ಪ್ರಯೋಗವಾದಕ್ಕೆ ನಾಂದಿಯಾಯಿತು. ಹರೀ ಘಾಸ್ ಪರ್ ಕ್ಷಣ ಭರ್ (1949) ಇವರ ಮೊದಲ ಪ್ರಯೋಗವಾದಿ ಕೃತಿ. ಭಗ್ನದೂತ್ (1933), ಚಿಂತಾ (1943), ಇತ್ಯಲಮ್ (1949), ಹರೀ ಘಾಸ್ ಪರ್ ಕ್ಷಣ ಭರ್ (1949), ಬಾವರಾ ಅಹೇರೀ (1954), ಅರೀ ಓ ಕರುಣಾ ಪ್ರಭಾಮಯ್ (1959), ಆಂಗನ್ ಕೇ ಪಾರ್ ದ್ವಾರ್ (1961), ಪೂರ್ವಾ (1965), ಕ್ಯೋಂಕಿ ಮೈ ಉಸೇ ಜಾನತಾ ಹೂಂ (1969), ಸಾಗರ್ ಮುದ್ರಾ (1971), ಮಹಾವೃಕ್ಷ ಕೇ ನೀಚೇ (1972), ಪಹಲೇ ಮೈ ಸನ್ನಾಟಾ ಬುನೆತಾ ಹೂಂ (1976), ಕಿತ್ನೀ ನಾವೋ ಮೇ ಕಿತ್ನೀ ಬಾರ್ (1962)-ಇವು ಇವರ ಕವನ ಸಂಕಲನಗಳು.
ಪಿಪಥಗಾ (1937), ಪರಂಪರಾ (1944), ಕೋಠರೀ ಕೀ ಬಾತ್ (1945), ಶರಣಾರ್ಥಿ (1948), ಜಯದೋಲ್ (1951) ಇವು ಇವರ ಕಥಾಸಂಕಲನಗಳು.
ಸಚ್ಚಿದಾನಂದ ಹೀರಾನಂದ ವಾತ್ಸ್ಯಾಯನರ ಆಂಗನ್ ಕೇ ಪಾರ್ ದ್ವಾರ್ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿತು (1964). ಕಿತ್ನೀ ನಾವೋ ಮೇ ಕಿತ್ನೀ ಬಾರ್ ಕವನ ಸಂಕಲನಕ್ಕೆ 1978ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭ್ಯವಾಯಿತು. 1968ರಲ್ಲಿ ಹಿಂದಿ ಸಾಹಿತ್ಯ ಸಮ್ಮೇಳನ ಇವರಿಗೆ ಸಾಹಿತ್ಯ ವಾಚಸ್ಪತಿ ಬಿರುದನ್ನೂ 1971ರಲ್ಲಿ ವಿಕ್ರಮ್ ವಿಶ್ವವಿದ್ಯಾಲಯ ಡಿಲಿಟ್ ಪದವಿಯನ್ನೂ ನೀಡಿ ಗೌರವಿಸಿತು.
ಸಚ್ಚಿದಾನಂದ ಹೀರಾನಂದ ವಾತ್ಸ್ಯಾಯನರು 1987ರ ಏಪ್ರಿಲ್ 4 ರಂದು ಈ ಲೋಕವನ್ನಗಲಿದರು.
Please follow and like us:

Leave a Reply

Your email address will not be published. Required fields are marked *

Next Post

ಶಿಶುನಾಳ ಶರೀಫರು

Tue Mar 8 , 2022
ಶಿಶುನಾಳ ಶರೀಫರು On the birth as well death anniversary of great social reformer, philosopher and poet Shishunala Shariff ಶಿಶುನಾಳ ಶರೀಫರು ಈಗಿನ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ಶಿಶುನಾಳಗ್ರಾಮದ ದೇವಕಾರ ಮನೆತನದ ಇಮಾಮ ಹಜರತ್ ಸಾಹೇಬ ಮತ್ತು ಹಜ್ಜೂಮ ಇವರ ಮಗನಾಗಿ 1819ರ ಮಾರ್ಚ್ 7ರಂದು ಜನಿಸಿದರು. ಅವರ ಮೂಲ ಹೆಸರು ಮಹಮ್ಮದ ಶರೀಫ. ಅವರು ಲೋಕವನ್ನಗಲಿದ ದಿನವೂ ಮಾರ್ಚ್ 7 (ವರ್ಷ […]

Advertisement

Wordpress Social Share Plugin powered by Ultimatelysocial