ಆರ್ ನಾಗೇಶ್

ಆರ್ ನಾಗೇಶ್ ಕರ್ನಾಟಕ ರಂಗಭೂಮಿಗೆ ಹೊಸ ದಾರಿಹಾಕಿಕೊಟ್ಟ ನವ್ಯ ಪರಂಪರೆಯಲ್ಲಿನ ಪ್ರಮುಖರು. ಅವರು ರಂಗನಟ, ನಿರ್ದೇಶಕ, ಬೆಳಕು ತಜ್ಞ, ರಂಗ ವಿನ್ಯಾಸಕ ಹೀಗೆ ರಂಗಭೂಮಿಯ ಹಲವಾರು ಆಯಾಮಗಳಲ್ಲಿ ದುಡಿದವರು.
ಆರ್. ನಾಗೇಶ್ 1943ರ ಮಾರ್ಚ್ 13ರಂದು ಬೆಂಗಳೂರು ಸಮೀಪದ ರಾಮೋಹಳ್ಳಿಯಲ್ಲಿ ಜನಿಸಿದರು. ತಂದೆ ರಾಮರಾಜ ಅರಸು. ತಾಯಿ ಲಕ್ಷ್ಮೀದೇವಮ್ಮ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಓದಿ ಮೊದಲು ಕೇಂದ್ರ ಸರ್ಕಾರದ ಆದಾಯ ತೆರಿಗೆ ಇಲಾಖೆಯಲ್ಲಿ ನಂತರ, ತಮ್ಮ ಅಭಿರುಚಿಗೆ ತಕ್ಕಂತೆ ವಾರ್ತಾ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಾಗೇಶ್ ಹಲವಾರು ವರ್ಷಗಳ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದರು. ಕನ್ನಡವೆಂದರೆ ಅವರಿಗೆ ಪಂಚಪ್ರಾಣ. ಕನ್ನಡ ಸೇನಾನಿ ಮ. ರಾಮಮೂರ್ತಿ ಆವರ ಜೊತೆ ಅನೇಕ ಹೋರಾಟಗಳಲ್ಲಿ ಪಾಲ್ಗೊಂಡಿದ್ದರು. ಕನ್ನಡ ಸಾಹಿತ್ಯ ಕಲಾ ಸಂಘವನ್ನು ಸ್ಥಾಪಿಸಿದರು. ಬಿ. ವಿ. ಕಾರಂತರು ಬೆಂಗಳೂರಿಗೆ ಬರಲು ಆರ್. ನಾಗೇಶ್ ಪ್ರಮುಖ ಕಾರಣಕರ್ತರಾದರು.
1950-60ರ ದಶಕದಲ್ಲಿ ಕೆ. ಗುಂಡಣ್ಣ, ಪರ್ವತವಾಣಿ, ಎ.ಎಸ್. ಮೂರ್ತಿ, ಕೈವಾರ ರಾಜಾರಾಯರ ನಗೆ ನಾಟಕಗಳು ಹೆಚ್ಚು ಪ್ರಚಲಿತವಿದ್ದ ಕಾಲ. ಅಂಥ ಸಂದರ್ಭದಲ್ಲಿ ವೈಚಾರಿಕ ನಾಟಕಗಳನ್ನು ರಂಗಕ್ಕೆ ತಂದವರಲ್ಲಿ ನಾಗೇಶ್ ಪ್ರಮುಖರು.
1969 ರಲ್ಲಿ ಪ್ರೊ.ಬಿ.ಚಂದ್ರಶೇಖರ್‌ ನಿರ್ದೇಶನದಲ್ಲಿ ಸಿ. ಆರ್. ಸಿಂಹರ ಅಭಿನಯದಲ್ಲಿ ಗಿರೀಶ್‌ಕಾರ್ನಾಡ್‌ ಅವರ ‘ತೊಘಲಕ್‌’ ನಾಟಕ ಪ್ರದರ್ಶನ ಸಂಘಟಿಸಿದ ನಾಗೇಶ್‌ ಆ ಮೂಲಕ ಹಲವಾರು ಕಲಾವಿದರು ಮತ್ತು ತಂತ್ರಜ್ಞರು ಹವ್ಯಾಸಿ ರಂಗಭೂಮಿಗೆ ಪಾದಾರ್ಪಣೆ ಮಾಡಲು ಕಾರಣರಾದರು. ಈ ನಾಟಕ ಪ್ರದರ್ಶನದ ನಂತರ ಇಡೀ ರಂಗಭೂಮಿಯ ದಿಕ್ಕೇ ಬದಲಾಯಿತು. ಬಿ. ವಿ. ಕಾರಂತರ ನಿರ್ದೇಶನದಲ್ಲಿ ಅವರು ನಿರ್ಮಿಸಿದ ‘ಸ್ವರ್ಗಕ್ಕೆ ಮೂರೇ ಬಾಗಿಲು’ ಮತ್ತೊಂದು ವಿಶಿಷ್ಟ ಯಶಸ್ವೀ ಪ್ರದರ್ಶನವೆನಿಸಿತು. 1972ರಲ್ಲಿ ರವೀಂದ್ರ ಕಲಾಕ್ಷೇತ್ರದ ಹೊರಗೆ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಜತೆಗೂಡಿ ಬಿ.ವಿ.ಕಾರಂತರ ನಿರ್ದೇಶನದಲ್ಲಿ ‘ದೊರೆ ಈಡಿಪಸ್‌’, ‘ಸಂಕ್ರಾಂತಿ’, ಹಾಗೂ ‘ಜೋಕುಮಾರಸ್ವಾಮಿ’ ನಾಟಕ ಪ್ರದರ್ಶನ ಮಾಡಿದರು. ಇದು ರಂಗಭೂಮಿಯಲ್ಲಿ ಹೊಸ ಇತಿಹಾಸ ಸೃಷ್ಟಿಸಿತ್ತು. ಈ ಕಾರ್ಯಕ್ರಮದ ನಂತರ ರಂಗಸಂಪದ, ಬೆನಕ, ನಟರಂಗ, ಸಮುದಾಯ, ಕಲಾಗಂಗೋತ್ರಿ, ಕಾಲಾನಂತರದಲ್ಲಿ ಸ್ಪಂದನ ಮುಂತಾದ ಪ್ರಸಿದ್ಧ ತಂಡಗಳು ಸೃಷ್ಟಿಯಾದವು. ನೂರಾರು ಕಲಾವಿದರು ಬೆಳಕಿಗೆ ಬಂದರು. ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ಇದೊಂದು ಸ್ವರ್ಣಯುಗ.
1970ರ ದಶಕ ವೈಚಾರಿಕ ನಾಟಕಗಳ ಸುಗ್ಗಿಕಾಲ. 1972ರಲ್ಲಿ ಜೆ. ಲೋಕೇಶ್, ಆನಂದ್, ಹರಿಕೃಷ್ಣರೊಡಗೆ ‘ರಂಗ ಸಂಪದ’; 1984ರಲ್ಲಿ ಮಾಲತಿರಾವ್ ಅವರೊಡನೆ ‘ಸೂತ್ರಧಾರ’; 1989ರಲ್ಲಿ ಎಲ್. ಕೃಷ್ಣಪ್ಪ, ಮಾನು, ಹುಲಿವಾನ ಗಂಗಾಧರಯ್ಯ ಅವರೊಡನೆ ಜನ ನಾಟ್ಯಮಂಡಲಿ ಹೀಗೆ ಹಲವಾರು ನಾಟ್ಯ ಸಂಸ್ಥೆಗಳೊಡನೆ ನಾಗೇಶ್ ಒಡನಾಟದಲ್ಲಿದ್ದರು. ಶ್ರೀರಂಗ, ಲಂಕೇಶ್, ಕಾರ್ನಾಡ್, ಚಂದ್ರಶೇಖರ ಪಾಟೀಲ, ಕಂಬಾರರ ನಾಟಕಗಳನ್ನು ರಂಗಕ್ಕೆ ತಂದುದೇ ಅಲ್ಲದೆ ಪೂರ್ಣಚಂದ್ರ ತೇಜಸ್ವಿ, ಅನಂತಮೂರ್ತಿ, ಶ್ರೀಕೃಷ್ಣ ಆಲನಹಳ್ಳಿ, ಕಾರಂತರ ಕಾದಂಬರಿಗಳಿಗೆ ರಂಗ ರೂಪಕೊಟ್ಟವರು ಆರ್ ನಾಗೇಶ್. ಹೀಗೆ ಅವರು ಕಥೆಯಾಧಾರಿತ ನಾಟಕಗಳಿಗೆ ಹೊಸ ಪ್ರೇಕ್ಷಕ ವರ್ಗ ಹುಟ್ಟಲು ಕಾರಣಕರ್ತರೂ ಆದರು.
ನೀ ಕೊಡೆ ನಾ ಬಿಡೆ, ಕುಬಿ ಮತ್ತು ಇಯಾಲ, ತಾಮ್ರ ಪತ್ರದಲ್ಲಿ ನೀಡಿದ ಮನೋಜ್ಞ ಅಭಿನಯ; ಪ್ರಸನ್ನರ ನಿರ್ದೇಶನದ ಗೆಲಿಲಿಯೋ, ಕದಡಿದ ನೀರು, ವೈಕುಂಠರಾಜುರವರ ಸನ್ನಿವೇಶ ನಾಟಕಗಳಿಗೆ ಬೆಳಕಿನ ವಿನ್ಯಾಸ; ಅಸಂಗತ ನಾಟಕಗಳಿಗೆ ರಚಿಸಿದ ರಂಗಸಜ್ಜಿಕೆ; ಚೋಮ, ತಬರನ ಕಥೆ, ಯಯಾತಿ, ಕೃಷ್ಣೇಗೌಡನ ಆನೆ, ಮುಂತಾದವುಗಳಿಗೆ ಮಹತ್ವದ ನಿರ್ದೇಶನ, ಹಲವಾರು ತಂಡಗಳನ್ನು ಸೇರಿಸಿ ಬಿ. ಚಂದ್ರಶೇಖರ್ ನಿರ್ದೇಶಿಸಿದ ತುಘಲಕ್ ಇವೇ ಮುಂತಾದುವು ಆರ್ ನಾಗೇಶರ ವಿಭಿನ್ನ ವೈಶಿಷ್ಟ್ಯಪೂರ್ಣ ಸಾಧನೆಗಳು.
ರಂಗಭೂಮಿಯ ಕುರಿತು ದೂರದರ್ಶನಕ್ಕಾಗಿ ನಾಗೇಶ್ ‘ರಂಗವಿಹಂಗಮ’ ಎಂಬ ಸಾಕ್ಷಚಿತ್ರ ತಯಾರಿಸಿದ್ದರು. ರಂಗಭೂಮಿ ಮಾಸಿಕ ಪತ್ರಿಕೆ ‘ಸೂತ್ರಧಾರ’ ಹೊರತಂದ ಕೀರ್ತಿಯೂ ಆರ್‌.ನಾಗೇಶ್‌ ಅವರಿಗೆ ಸಲ್ಲುತ್ತದೆ.
ಕರ್ನಾಟಕ ನಾಟಕ ಅಕಾಡೆಮಿ, ಕೆಂಪೇಗೌಡ, ಆರ್ಯಭಟ, ರಾಜ್ಯೋತ್ಸವ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿಗಳು ಆರ್ ನಾಗೇಶರನ್ನು ಅರಸಿ ಬಂದವು. 2003-06 ನೇ ಸಾಲಿನಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ ನಾಗೇಶ್‌ ಸೇವೆ ಸಲ್ಲಿಸಿದ್ದರು. ಜಿಲ್ಲೆಯ ನಾಟಕ ತಂಡಗಳಿಗೆ ನೀಡಿದ ಪ್ರಾತಿನಿಧ್ಯ, ತಿಂಗಳ ಬೆಳಕಲ್ಲಿ ರಂಗದ ಬೆರಗು-ದಾವಣಗೆರೆಯಲ್ಲಿ ಪ್ರತಿ ತಿಂಗಳ ವಿಶಿಷ್ಟ ನಾಟಕ ಪ್ರದರ್ಶನ ಮುಂತಾದವು ಅವರ ಮನೋಜ್ಞ ಕಾರ್ಯಸಾಧನೆಗಳಾಗಿವೆ.
2010 ಸೆಪ್ಟಂಬರ್ 18ರಂದು ಆರ್ ನಾಗೇಶರ ನಿರ್ದೇಶನದ ಪೂರ್ಣಚಂದ್ರ ತೇಜಸ್ವಿಯರ ‘ಕೃಷ್ಣೇಗೌಡನ ಆನೆ’ ಕಥೆಯ ಪ್ರಸಿದ್ಧ ನಾಟಕರೂಪವು ತನ್ನ ನೂರನೆಯ ಪ್ರದರ್ಶನವನ್ನು ಬೆಂಗಳೂರಿನಲ್ಲಿ ಕಾಣುತ್ತಿತ್ತು. ಅದಕ್ಕೆ ಆರ್. ನಾಗೇಶರು ಅದು ಹೇಗೆತಾನೇ ಗೈರು ಹಾಜರು ಎಂದು ಮಿತ್ರರು ಅಚ್ಚರಿಪಡುತ್ತಿದ್ದರು. ಈ ಮಹಾನ್ ರಂಗಯಾತ್ರಿ ಇತ್ತಕಡೆ ಈ ಭೂಲೋಕವೆಂಬ ರಂಗಯಾತ್ರೆಯಿಂದ ಹೊರಕ್ಕೆ ತಮ್ಮ ಯಾತ್ರೆಯನ್ನು ಪ್ರಾರಂಭಿಸಿಬಿಟ್ಟಿದ್ದರು. ನಾಡು ಅವರನ್ನು ನಾಯಕ ತಾರೆಯರಂತೆ ಮೆರೆಸಲಿಲ್ಲ ನಿಜ. ಆದರೆ ಅವರು ಈ ನಾಡಿನ ಕಲಾರಂಗದಲ್ಲಿ ಅಘೋಷಿತ ನಿತ್ಯತಾರೆಯಾಗಿ ಮಿನುಗುವಂತಹ ಶ್ರೇಷ್ಠರು. ಈ ನಮ್ಮ ಕರ್ನಾಟಕದಲ್ಲಿ ರಂಗಯಾತ್ರಿಯಾಗಿ ಹಾದುಹೋದ ಈ ಕ್ರಿಯಾಶೀಲ ಆರ್ ನಾಗೇಶ್ ಎಂಬ ವ್ಯಕ್ತಿತ್ವಕ್ಕೆ ನಮ್ಮ ನಮನ.
Please follow and like us:

Leave a Reply

Your email address will not be published. Required fields are marked *

Next Post

ಪಾರ್ಥನಿಂದ ದುರ್ಯೋಧನನ ಬಿಡುಗಡೆ.

Sun Mar 13 , 2022
ಪಾರ್ಥನಿಂದ ದುರ್ಯೋಧನನ ಬಿಡುಗಡೆ. ವೈಭವದಿಂದ ಬಂದಿದ್ದ ಕೌರವನ ಪರಿವಾರಕ್ಕೆ ದಿಕ್ಕು ತೋಚದಂತಾಯಿತು. ದುರ್ಯೋಧನನ ಪತ್ನಿ ಭಾನುಮತಿಯು ಧರ್ಮಜನಲ್ಲಿಗೆ ಬಂದು ಕಾಲಿಗೆ ಬಿದ್ದು ಪತಿಯನ್ನು ಉಳಿಸಿಕೊಡುವಂತೆ ಬೇಡಿಕೊಂಡಳು.ದ್ರೌಪದಿಯನ್ನೂ ಕೇಳಿಕೊಂಡಳು. ಧರ್ಮಜನು ಅವಳನ್ನು ಸಂತೈಸಿದನು. ಭೀಮನಿಗೆ ದುರ್ಯೋಧನನನ್ನು ಬಿಡಿಸಿಕೊಂಡು ಬರುವಂತೆ ಹೇಳಿದನು. ಆದರೆ ಭೀಮ ಒಪ್ಪಲಿಲ್ಲ. ಅವರಿಗೆ ತಕ್ಕ ಶಾಸ್ತಿ ಅದಾಗಿಯೇ ಆಗಿದೆ. ಅನುಭವಿಸಲಿ ಎಂದನು. ಅದಕ್ಕೆ ಧರ್ಮಜನು ಬೇರೆಯವರೆದುರು ಬಂದಾಗ ನಾವು ನೂರೈವರು. ನಮ್ಮ ನಮ್ಮಲ್ಲಿ ಕಲಹ ಬಂದಾಗ ಅವರು‌ ನೂರು […]

Advertisement

Wordpress Social Share Plugin powered by Ultimatelysocial