ಸಾಹಿತ್ಯರತ್ನ ಅನ್ನದಾನಯ್ಯ ಪುರಾಣಿಕ

ಸಾಹಿತ್ಯರತ್ನ ಅನ್ನದಾನಯ್ಯ ಪುರಾಣಿಕ
On the birth anniversary of writer and cultural activist Annadanaiah Puranik
ಪ್ರಾಚೀನ ಕರ್ನಾಟಕದ ಪ್ರಮುಖ ಅಗ್ರಹಾರಗಳಲ್ಲಿ ಕುಕನೂರು ಕೂಡಾ ಒಂದಾಗಿತ್ತು. ಶಾಸನಗಳ ಪ್ರಕಾರ “ಶ್ರೀಮನ್ಮಹಾಗ್ರಾರ ಕುಕ್ಕನೂರು” ಎಂದು ಕರೆಯುವ ಈ ಅಗ್ರಹಾರದ ಉತ್ತರದಲ್ಲಿ ಸುಮಾರು ಒಂದು ಮೈಲಿ ದೂರದಲ್ಲಿ ದ್ಯಾಂಪುರ (ದೇವಿಪುರ) ಎನ್ನುವ ಪುಟ್ಟ ಗ್ರಾಮವಿದೆ. ಕೊಪ್ಪಳ ಜಿಲ್ಲೆಯ, ಯಲಬುರ್ಗಾ ತಾಲೂಕಿನಲ್ಲಿರುವುದು ಈ ದ್ಯಾಂಪುರ.
ಕನ್ನಡ ಭಾಷೆಯಲ್ಲಿ 12 ಪುರಾಣಗಳನ್ನು ರಚಿಸಿರುವ, ವೇದಾಂತಿ, ದಾರ್ಶನಿಕ ಮತ್ತು ಪ್ರಸಿದ್ಧ ಪ್ರವಚನಕಾರರಾದ ಚೆನ್ನಕವಿಗಳು ಮತ್ತು ಅವರ ಅಣ್ಣನ ಮಗನಾದ ಕವಿರತ್ನ ಕಲ್ಲಿನಾಥ ಶಾಸ್ತ್ರಿ ಪುರಾಣಿಕರವರು ಕನ್ನಡ ನಾಡು-ನುಡಿಗಾಗಿ ಅವಿರತ ಮತ್ತು ಅನುಪಮ ಸೇವೆಯನ್ನು ಸಲ್ಲಿಸಿದವರಾಗಿದ್ದಾರೆ.
ವೇದೋಪನಿಷತ್ತು, ಕಾವ್ಯ, ಪುರಾಣ, ಶಾಸ್ತ್ರಗಳಲ್ಲಿ ಪಾಂಡಿತ್ಯ ಹೊಂದಿದ್ದ ಕಲ್ಲಿನಾಥ ಶಾಸ್ತ್ರಿಗಳು, ಕನ್ನಡ ಶಾಲೆಯನ್ನು ತೆರೆಯಲು ಹೈದರಾಬಾದು ನಿಜಾಮನ ಸರ್ಕಾರದ ವಿರೋಧವಿದ್ದರೂ, ಸಂಗನಾಳದಲ್ಲಿ ಕನ್ನಡ ಶಾಲೆಯನ್ನು ತೆರೆದು ನೆಡೆಸಿದವರು.ಬಡವರು, ದಲಿತರು ಮತ್ತು ಅಲ್ಪಸಂಖ್ಯಾತರ ಮಕ್ಕಳಿಗೆ ಉಚಿತವಾಗಿ ಈ ಕನ್ನಡ ಶಾಲೆಯಲ್ಲಿ ಶಿಕ್ಷಣ ನೀಡಲಾಗುತ್ತಿತ್ತು. ಸಾಮಾಜಿಕ ಪಿಡುಗಗಳ ವಿರೋಧಿಯಾಗಿ, ಆರ್ಯುವೇದ ಪಂಡಿತರಾಗಿ, 8 ಪುರಾಣಗಳನ್ನು ರಚಿಸಿದವರಾಗಿ, ನಾಟಕಗಳು ಮತ್ತು ರಂಗ ಗೀತೆಗಳನ್ನು ರಚಿಸಿದವರಾಗಿ ಕರ್ನಾಟಕದಲ್ಲಿ ಜನಪ್ರಿಯರಾದವರು ಕಲ್ಲಿನಾಥ ಶಾಸ್ತ್ರಿ ಪುರಾಣಿಕರು. ಅನ್ನದಾನಯ್ಯ ಪುರಾಣಿಕರು ಇವರ ಎರಡನೆಯ ಪುತ್ರರಾಗಿ 1928ರ ಮಾರ್ಚ್ 8ರಂದು ದ್ಯಾಂಪುರದಲ್ಲಿ ಜನಿಸಿದರು.
ಶಾಲೆಯ ವಿದ್ಯಾರ್ಥಿಯಾಗಿದ್ದಾಗಲೇ ವಿದ್ಯಾರ್ಥಿಗಳ ಮುಖಂಡರಾಗಿದ್ದ ಅನ್ನದಾನಯ್ಯನವರು, ಮಹಾತ್ಮಾ ಗಾಂಧೀಜಿಯವರ ಕರೆಗೆ ಓಗೋಟ್ಟು ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು. ಅಂದು ಖಾದಿ ಧರಿಸಿ, ಗಾಂಧಿವಾದಿಯಾದ ಅವರು ತಮ್ಮ ಕೊನೆಯ ಉಸಿರಿನವರೆಗೂ ಖಾದಿ ಮತ್ತು ಗಾಂಧಿವಾದವನ್ನು ಪಾಲಿಸಿದರು. ಕೊಪ್ಪಳ ಜಿಲ್ಲೆಯಲ್ಲಿ ಚಲೇ ಜಾವ್ ಚಳುವಳಿ ನೆಡೆಸಿದ್ಧಕ್ಕಾಗಿ ಅನ್ನದಾನಯ್ಯನವರನ್ನು ಪೋಲಿಸರು ದಸ್ತಗಿರಿ ಮಾಡಿ, ಚಿತ್ರಹಿಂಸೆ ನೀಡಿದರು. ಪೋಲಿಸರಿಂದ ಬಿಡುಗಡೆಯಾದ ನಂತರ ಅನ್ನದಾನಯ್ಯವರು ಹೈದರಾಬಾದಿನಲ್ಲಿ ತಮ್ಮ ಶಿಕ್ಷಣ ಮುಂದುವರೆಸಿದರು. 15 ಆಗಸ್ಟ್ 1947ರಂದು ಭಾರತಕ್ಕೆ ಸ್ವಾತಂತ್ರ್ಯ ದೊರೆತರೆ, ಹೈದರಾಬಾದಿನ ನಿಜಾಮ ಸ್ವತಂತ್ರ ರಾಷ್ಟ್ರವಾಗಿರಲು ಬಯಸಿದ. ನಿಜಾಮನ ಪೋಲಿಸರು ಮತ್ತು ರಜಾಕಾರರ ದಾಳಿಯಿಂದ ರಕ್ಷಿಸಿಕೊಳ್ಳಲು ಸಾವಿರಾರು ಕುಟುಂಬಗಳು ಹೈದರಾಬಾದಿನಿಂದ ವಲಸೆ ಹೊರಟವು. ಹೈದರಾಬಾದು ಪ್ರಾಂತ್ರ್ಯ ವಿಮೋಚನೆಗೊಳಿಸಿ, ಭಾರತದೊಡನೆ ವಿಲೀನಗೊಳಿಸಬೇಕು ಎಂದು ಕರ್ನಾಟಕದಲ್ಲಿ ನಡೆದ ಹೋರಾಟದಲ್ಲಿ ಪ್ರಮುಖ ಸ್ಥಾನವನ್ನು ಮುಂಡರಗಿ ಶಿಬಿರ ಪಡೆದಿದೆ. ಈ ಶಿಬಿರದಿಂದ ಹೋರಾಟ ಪ್ರಾರಂಭಿಸಿ, 17 ಸೆಪ್ಟೆಂಬರ್ 1948ರಂದು ಹೈದರಾಬಾದು ಪ್ರಾಂತ್ಯವು ಭಾರತದೊಡನೆ ವಿಲೀನವಾಗಲು ಅನ್ನದಾನಯ್ಯನವರ ನಾಯಕತ್ವ ಮತ್ತು ಹಗಲಿರಳು ನಡೆಸಿದ ಹೋರಾಟ ಪ್ರಮುಖ ಕಾರಣವಾಗಿದೆ. ನಿಜಾಮ್ ಪೋಲಿಸರು ಮತ್ತು ರಜಾಕಾರರ ಪ್ರಮುಖ ನೆಲೆಗಳಲ್ಲಿ ಒಂದಾಗಿದ್ದ ಕುಕನೂರು ಠಾಣೆಯ ಮೇಲೆ ತಮ್ಮ ಸಹಚರರೊಂದಿಗೆ ದಾಳಿ ನೆಡೆಸಿದ ಅನ್ನದಾನಯ್ಯನವರು ಗೆಲವು ಸಾಧಿಸಿದ್ದು ಹೈದರಾಬಾದು ಸಂಸ್ಥಾನದಲ್ಲಿ ಸಂಚಲನವುಂಟು ಮಾಡಿತ್ತು. ನಿಜಾಮನ ಅಡಳಿತದಿಂದ 35 ಹಳ್ಳಿಗಳನ್ನು ಬಿಡುಗಡೆ ಮಾಡಿ, ಭಾರತದ ಧ್ವಜ ಹಾರಿಸಿದಾಗ ಅನ್ನದಾನಯ್ಯನವರ ಸಾಹಸವನ್ನು ರಾಷ್ಟ್ರೀಯ ಪತ್ರಿಕೆಗಳೂ ಕೊಂಡಾಡಿದವು. ಹೈದರಾಬಾದು ಪ್ರಾಂತ್ಯ ವಿಮೋಚನೆಯ ಹೋರಾಟದ ನಂತರ ಕರ್ನಾಟಕದ ಏಕೀಕರಣ ಹೋರಾಟದಲ್ಲಿ ಭಾಗವಹಿಸಿದರು.
1953ರ ಏಪ್ರಿಲ್ 7ರಂದು ಹುಬ್ಬಳ್ಳಿಯಲ್ಲಿ ಅವರು ಏಕೀಕರಣದ ಪರವಾಗಿ ನೆಡೆಸಿದ ಬೃಹತ್ ಮತ್ತು ಶಾಂತಿಯುತ ಪ್ರತಿಭಟನೆ ಏಕೀಕರಣ ವಿರೋಧಿಗಳ ಬಾಯಿ ಮುಚ್ಚಿಸಿತ್ತು. ಅಮೇರಿಕಾದ ನ್ಯೂಯಾರ್ಕ್ ಟೈಮ್ಸ್ ಈ ಪ್ರತಿಭಟನೆ ಮತ್ತು ಅನ್ನದಾನಯ್ಯವರ ನಾಯಕತ್ವವನ್ನು ಮೆಚ್ಚಿ ಪ್ರಕಟಿಸಿತು. ಅನ್ನದಾನಯ್ಯನವರ ಜನಪ್ರಿಯತೆ ಸಹಿಸದ ಕಾಂಗ್ರೆಸ್ ನಾಯಕ ಹಳ್ಳಿಕೇರಿ ನಡೆಸಿದ ಪಿತೂರಿಯಿಂದಾಗಿ, ಪೋಲಿಸರು ಅನ್ನದಾನಯ್ಯನವರನ್ನು ಬಂಧಿಸಿದರು. ಸ್ವತಂತ್ರ ಭಾರತದಲ್ಲಿ ಏಕೀಕರಣಕ್ಕಾಗಿ ಹೋರಾಡಿದ ನಾಯಕ ಮತ್ತು ಸ್ವಾತಂತ್ರಹೋರಾಟಗಾರನನ್ನು ಬಂಧಿಸಿ 6 ದಿನಗಳ ಕಾಲ ಯಾವುದೇ ವಿಚಾರಣೆ ನಡೆಸದೆ ಸೆರೆಮನೆಯಲ್ಲಿರಿಸಿದ ಕುಖ್ಯಾತಿ ಕರ್ನಾಟಕ ಸರ್ಕಾರದ ಪಾಲಾಯಿತು. ಪೋಲಿಸರ ಕ್ರಮವನ್ನು ಖಂಡಿಸಿ, ಅನ್ನದಾನಯ್ಯನವರನ್ನು ನಿರ್ದೋಷಿಯಂದು ಕೋರ್ಟು ಬಿಡುಗಡೆ ಮಾಡಿದ ನಂತರ, ಅವರು ಮತ್ತೆ ಏಕೀಕರಣ ಹೋರಾಟ ಮುಂದುವರೆಸಿದರು. ಗಡಿ ಜಿಲ್ಲೆಗಳಾದ ಬೀದರ, ಗುಲ್ಪರ್ಗಾ, ಬಳ್ಳಾರಿ ಮತ್ತು ಚಾಮರಾಜನಗರಗಳ ಕನ್ನಡ ಪ್ರದೇಶಗಳು ಕರ್ನಾಟದಲ್ಲಿ ಉಳಿಯಲು ಅನ್ನದಾನಯ್ಯನವರು ಮಾಡಿದ ಹೋರಾಟವನ್ನು ಮತ್ತು ಏಕೀಕರಣ ಚಳುವಳಿಯ ನಾಯಕತ್ವವನ್ನು ಗೌರವಿಸಿ ಕರ್ನಾಟಕ ಸರ್ಕಾರವು 2006ರಲ್ಲಿ “ ಏಕೀಕರಣ ಸುವರ್ಣ ಪುರಸ್ಕಾರ”ವನ್ನು ನೀಡಿತು.
1960-68ವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿ ಅನ್ನದಾನಯ್ಯನವರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಪರಿಷತ್ತಿಗೆ ಸರ್ಕಾರದಿಂದ ವಾರ್ಷಿಕ ಅನುದಾನ ದೊರೆಯುವಂತೆ ಮಾಡಿದರು. ಕನ್ನಡ ನಿಘಂಟು ಮೊದಲ ಬಾರಿಗೆ ಮುದ್ರಣವಾಗಿದ್ದು ಇವರ ನಿರಂತರ ಪ್ರಯತ್ನದಿಂದಾಗಿ. ಪರಿಷತ್ತಿಗೆ ಗ್ರಂಥಾಲಯ, ಮುದ್ರಣಾಲಯ ಮತ್ತು ಸಭಾಮಂದಿರ ದೊರೆಯುವಲ್ಲಿ ಇವರು ಶ್ರಮಪಟ್ಟಿದ್ದರು. ಮಣಿಪಾಲ, ಗದಗ ಮತ್ತು ಬೀದರನಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಬೆಂಗಳೂರು, ಬೀದರ ಮತ್ತು ಕಲ್ಬುರ್ಗಿಯಲ್ಲಿ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ಮಹಾಕವಿ ಕಾಳಿದಾಸ ಮಹೋತ್ಸವ, ಹೀಗೆ ಹಲವಾರು ಕಾರ್ಯಕ್ರಮಗಳನ್ನು ಅನ್ನದಾನಯ್ಯನವರು ಯಶಸ್ವಿಯಾಗಿ ನೆರವೇರಿಸಿದರು. 1966ರಿಂದ 1969ವರೆಗೆ ಭಾಷಾ ಆಯೋಗದ ಸದಸ್ಯ, 1971ರಿಂದ 1993ರವರೆಗೆ ಕರ್ನಾಟಕ ಗೆಝೆಟೀಯರ್ ಸಲಹಾ ಸಮಿತಿಯ ಸದಸ್ಯ, ಹೀಗೆ ಹಲವಾರು ಕನ್ನಡ ಪರ ಕೆಲಸಗಳನ್ನು ಅನ್ನದಾನಯ್ಯನವರು ಮಾಡಿದರು.
50 ವರ್ಷಗಳ ಕಾಲ ಹೈಕೋರ್ಟ ಹಿರಿಯ ನ್ಯಾಯವಾದಿಯಾಗಿದ್ದ ಅನ್ನದಾನಯ್ಯನವರು, ಮೈಸೂರು ಅರಸರಿಗೆ ಸೇರಿದ್ದ ಅನೇಕ ಆಸ್ತಿಗಳು ಭೂಗಳ್ಳರ ಪಾಲಾಗದಂತೆ ರಕ್ಷಿಸಿದರು. 1964ರಿಂದ 1991ರವರೆಗೆ ಬಸವ ಸಮಿತಿಯ ಸಂಸ್ಥಾಪಕರಾಗಿ ಮತ್ತು ದತ್ತಿಯ ಗೌರವ ಕಾರ್ಯದರ್ಶಿಯಾಗಿದ್ದ ಅನ್ನದಾನಯ್ಯನವರು, ಬೆಂಗಳೂರಿನ ಬಸವ ಭವನ ನಿರ್ಮಾಣ, ಕೆಂಗೇರಿ ಬಳಿಯ ಬಸವಾಶ್ರಮ ಸ್ಥಾಪನೆ, ರಷ್ಯನ್ ಮತ್ತು ಭಾರತದ ಪ್ರಮುಖ ಭಾಷೆಗಳಲ್ಲಿ ವಚನಗಳ ಮುದ್ರಣ, ಕೇರಳ, ಮಹಾರಾಷ್ಟ್ರ ಮೊದಲಾದ ರಾಜ್ಯಗಳಲ್ಲಿ ಬಸವ ತತ್ವ ಪ್ರಚಾರ ಮಾಡಿದರು. 30 ಕನ್ನಡ ಕೃತಿಗಳನ್ನು 3000 ವಚನಗಳನ್ನು ರಚಿಸಿರುವ ಅನ್ನದಾನಯ್ಯನವರಿಗೆ 1956ರಲ್ಲಿ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿತು. ಭಾರತೀಯ ರೆಡ್ ಕ್ರಾಸ್, ಹಲವಾರು ಶಿಕ್ಷಣ ಮತ್ತು ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ ಅನ್ನದಾನಯ್ಯನವರು ಕನ್ನಡ ನಾಡು-ನುಡಿಗಾಗಿ ನಿರಂತರ 6 ದಶಕಗಳ ಸೇವೆಯನ್ನು ಸಲ್ಲಿಸಿ, 2015ರ ಅಕ್ಟೋಬರ್ 20ರಂದು ಶಿವೈಕ್ಯರಾದರು. ಮಕ್ಕಳಾದ ಪ್ರೊ. ಚಂದ್ರಿಕಾ ಪುರಾಣಿಕ ಮತ್ತು ಉದಯ ಶಂಕರ ಪುರಾಣಿಕ ಹಾಗೂ ಮೊಮ್ಮಗಳು ದೀಪ್ತಿ, ಪುರಾಣಿಕ ಕುಟುಂಬದ ನಾಡು-ನುಡಿಯ ಸೇವೆಯನ್ನು ಮುಂದುವರೆಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಯಮುನಾ ಮೂರ್ತಿ

Tue Mar 8 , 2022
ಯಮುನಾ ಮೂರ್ತಿ On the birth day of great name in our cultural world Yamuna Murthy Madam ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ಯಮುನಾ ಮೂರ್ತಿ ಅವರದ್ದು ಪ್ರಸಿದ್ಧ ಹೆಸರು. ಆಕಾಶವಾಣಿಯಲ್ಲಿ ನಿರ್ವಹಿಸಿದ್ದ ಹಿರಿಯ ಸೇವೆಯ ಜೊತೆಗೆ ನಾಟ್ಯರಂಗ, ರಂಗಭೂಮಿ, ಕಿರುತೆರೆ, ಸಿನಿಮಾ, ಬರವಣಿಗೆ ಹೀಗೆ ಯಮುನಾ ಮೂರ್ತಿ ಅವರು ಸಾಂಸ್ಕೃತಿಕ ಲೋಕದಲ್ಲಿ ಮೂಡಿಸಿರುವ ಕ್ರಿಯಾಶೀಲತೆಯ ಛಾಪು ಹಿರಿದಾದದ್ದು. ಯಮುನಾ ಮೂರ್ತಿಯವರು 1933ರ ಮಾರ್ಚ್ 8ರಂದು ಬೆಂಗಳೂರಿನಲ್ಲಿ […]

Advertisement

Wordpress Social Share Plugin powered by Ultimatelysocial