ಸೈನಾ ನೆಹವಾಲ್ | On the birth day of our badminton star Saina Nehwal |

ನಮ್ಮ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹವಾಲ್ ಅವರನ್ನು ನೆನೆದರೆ ಅವರು ಆಡುವ ಬಿರುಸು ಸೊಗಸಿನ ಆಟ, ಪ್ರಶಸ್ತಿ ಬಹುಮಾನಗಳ ಜೊತೆ ಈ ಹುಡುಗಿಯ ನಗು, ಸೋತಾಗ ಅವರು ನನಗಿಂತ ಉತ್ತಮ ಆಟಗಾರರು – ಆದರೆ ಅವರನ್ನು ಗೆಲ್ಲಬಹುದು – ಗೆಲ್ಲುತ್ತೇನೆ ಎಂದು ಆತ್ಮವಿಶ್ವಾಸ ತೋರುವ ಪರಿ ಇವೆಲ್ಲವೂ ಹೆಮ್ಮೆ ಮೂಡಿಸುತ್ತೆ. ಈ ನಮ್ಮ ಹುಡುಗಿಯ ಹುಟ್ಟುಹಬ್ಬವಿದು. ಹುಟ್ಟಿದ್ದು ಮಾರ್ಚ್ 17,1990
ಇಂಡೋನೇಷ್ಯಾ ಸೂಪರ್ ಸರಣಿ; ಸಿಂಗಪೂರ್ ಸೂಪರ್ ಸರಣಿ, ಹಾಂಕಾಂಗ್ ಸೂಪರ್ ಸರಣಿ, ಚೈನಾದ ತೈಪೀ ಮುಕ್ತ ಪಂದ್ಯಾವಳಿ, ಭಾರತೀಯ ಗ್ರಾಂಡ್ ಪ್ರಿಕ್ಸ್, ಸ್ವಿಸ್ ಮುಕ್ತ ಪಂದ್ಯಾವಳಿ, ಡೆನ್ಮಾರ್ಕ್ ಸೂಪರ್ ಸೀರೀಸ್ ಪ್ರೀಮಿಯರ್, ಕಾಮನ್ ವೆಲ್ತ್ ಕ್ರೀಡಾಕೂಟ ಪದಕ ಪ್ರಶಸ್ತಿಗಳನ್ನು ಗೆದ್ದಿರುವುದರ ಜೊತೆಗೆ ಅವರು ಒಲಿಂಪಿಕ್ಸ್ ಕಂಚಿನ ಪದಕದ ಸಾಧನೆ ಮತ್ತು 2015ರ ವರ್ಷದ BFW ವಿಶ್ವ ಚಾಂಪಿಯನ್ಷಿಪ್ನ ಬೆಳ್ಳಿ ಪದಕದ ಸಾಧನೆಗಳನ್ನು ಮಾಡಿ ನಮ್ಮ ದೇಶಕ್ಕೆ ಕೀರ್ತಿ ತಂದಿದ್ದು, ವಿಶ್ವದ ಶ್ರೇಷ್ಠ ಆಟಗಾರ್ತಿಯರಲ್ಲಿ ಒಬ್ಬರೆನಿಸಿದ್ದಾರೆ.
ಹರ್ಯಾಣಾದ ಹಿಸಾರ್ ಪಟ್ಟಣದಲ್ಲಿ ಜನಿಸಿದ ಸೈನಾ ಬಹುತೇಕ ಜೀವನವನ್ನು ಹೈದರಾಬಾದಿನಲ್ಲಿ ಕಳೆದಿದ್ದಾರೆ. ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಎಸ್. ಎಂ ಆರಿಫ್, ಆಲ್ ಇಂಗ್ಲೆಂಡ್ ಚಾಂಪಿಯನ್ ಗೋಪಿ ಚಂದ್ ಹಾಗೂ 2008ರ ವರ್ಷದಿಂದೀಚೆಗೆ ಇಂಡೋನೇಷಿಯಾದ ಪ್ರಸಿದ್ಧ ಆಟಗಾರ ಅತಿಕ್ ಜೌವಾರಿ ಅವರು ಸೈನಾ ಅವರಿಗೆ ಗುರುಗಳಾಗಿ ಮಾರ್ಗದರ್ಶಕರಾಗಿ ಆಕೆಯನ್ನು ಮುನ್ನಡೆಸಿದ್ದಾರೆ. ಸೈನಾ ಅವರ ತಂದೆ ಡಾ. ಹರವೀರ್ ಸಿಂಗ್ ಮತ್ತು ತಾಯಿ ಉಷಾ ನೆಹವಾಲ್ ಅವರುಗಳು ಕೂಡಾ ಬ್ಯಾಡ್ಮಿಂಟನ್ ಆಟದಲ್ಲಿ ಹರ್ಯಾಣದಲ್ಲಿ ರಾಜ್ಯಮಟ್ಟದ ಆಟಗಾರರಾಗಿದ್ದುದು ಸೈನಾಗೆ ಜನ್ಮತಃ ಈ ಆಟದಲ್ಲಿ ಅಭಿರುಚಿ ಮೂಡಲು ಸಹಾಯಕವಾಗಿದೆ.
ತುಂಬಾ ಪುಟ್ಟ ವಯಸ್ಸಿನಲ್ಲೇ ಸೈನಾ ಕರಾಟೆ ಪ್ರವೀಣೆಯಾಗಿದ್ದರು. ಕರಾಟೆಯಲ್ಲಿ ಬ್ರೌನ್ ಬೆಲ್ಟ್ ಸಾಧನೆ ಮಾಡಿದ ಸೈನಾ ಎಂಟನೇ ವಯಸ್ಸಿಗೆ ಕರಾಟೆ ಆಟದಿಂದ ಹೊರಬಂದರು. ನೈನಾಳ ತಂದೆ ಹೈದರಾಬಾದಿನಲ್ಲಿ ಪ್ರಸಿದ್ಧ ಕೋಚ್ ಆದ ನಾನಿ ಪ್ರಸಾದ್ ಅವರ ಬಳಿ ಬೇಸಿಗೆಯ ಶಿಬಿರದ ಅಭ್ಯರ್ಥಿಯಾಗಿ ಸೈನಾಳನ್ನು ಬ್ಯಾಡ್ಮಿಂಟನ್ ಆಟಕ್ಕೆ ತಂದರು. ಈ ತರಬೇತಿಗಾಗಿ ಎಂಟು ವರ್ಷದ ಪುಟ್ಟ ಬಾಲೆ ನೈನಾ ಪ್ರತಿದಿನ ಬೆಳಗಿನ ಜಾವ ನಾಲ್ಕು ಗಂಟೆಗೆ ಎದ್ದು 25 ಕಿಲೋಮೀಟರ್ ದೂರವನ್ನು ತಂದೆಯೊಡನೆ ಸ್ಕೂಟರಿನಲ್ಲಿ ಕ್ರಮಿಸಬೇಕಿತ್ತು. ಪಾಪ, ಪುಟ್ಟ ಹುಡುಗಿ ನಿದ್ದೆ ತಡೆಯಲಾಗದು. ಹಿಂದೆ ಕುಳಿತಾಗ ಬಿದ್ದು ಬಿಡುವ ಸಾಧ್ಯತೆ ಇದೆ ಎಂದು ಅಮ್ಮನೂ ದಿನಾ ಸ್ಕೂಟರ್ ಸವಾರಿ ಮಾಡಲಾರಂಭಿಸಿದರು. ಹೀಗೆ ಅಪ್ಪ ಅಮ್ಮಂದಿರು ಪುಟ್ಟ ಸೈನಾಗೆ ಎಲ್ಲ ರೀತಿಯಲ್ಲೂ ಪ್ರೋತ್ಸಾಹ ಮತ್ತು ಬೆಂಗಾವಲಾದರು. ಅಷ್ಟೇ ಅಲ್ಲ ಸೈನಾಳಿಗೆ ಆಟದ ಕಲಿಕೆಗೆ ಬೇಕಿದ್ದ ಹಣಕಾಸು ವೆಚ್ಚವನ್ನು ಭರಿಸುವ ಸಲುವಾಗಿ ಈ ತಂದೆ ತಾಯಿಯರು ತಮ್ಮ ಕುಡಿಕೆಯ ಉಳಿತಾಯ ಮತ್ತು ಪ್ರಾವಿಡೆಂಟ್ ಫಂಡುಗಳನ್ನು ಕೂಡಾ ಖಾಲಿ ಮಾಡಿದರಂತೆ. ಈ ಹುಡುಗಿಯ ಮೂಲಕ ನಮ್ಮ ನಾಡಿಗೆ ಕೀರ್ತಿ ತಂದ ಈ ಅಪ್ಪ ಅಮ್ಮಂದರಿಗೂ ನಾವು ವಂದನೆ ಹೇಳಲೇಬೇಕು.
ತಮ್ಮ ಅಪ್ಪ ಅಮ್ಮಂದಿರು ತನ್ನಲ್ಲಿ ಇಟ್ಟಿರುವ ನಿರೀಕ್ಷೆಯನ್ನು ಹುಸಿಗೊಳಿಸದ ಸೈನಾ ಆಟದಲ್ಲಿ ಪ್ರಗತಿ ತೋರುತ್ತಾ 2002ರ ವರ್ಷದ ವೇಳೆಗೆ ಯೋನಿಕ್ಸ್ ಸಂಸ್ಥೆಯ ಪ್ರಾಯೋಜಕತ್ವ ಪಡೆದರು. ಮುಂದೆ ಅವರ ಸಾಧನೆಗಳ ಮುನ್ನಡೆಯ ಜೊತೆಗೆ ಇನ್ನೂ ಹೆಚ್ಚಿನ ರೀತಿಯ ಪ್ರಾಯೋಜಕತ್ವ ಅವರಿಗೆ ಲಭಿಸುತ್ತಾ ಹೋಯಿತು.
ಸೈನಾ ಅವರ ಪ್ರಮುಖ ಸಾಧನೆಗಳಲ್ಲಿ ಹತ್ತೊಂಬತ್ತು ವಯಸ್ಸು ಒಳಗಿನವರ ಪ್ರಶಸ್ತಿ ಗೆದ್ದದ್ದು ವಿಶೇಷ ಮೈಲುಗಲ್ಲಾಗಿದೆ. ಹೀಗೆ ಮುಂದೆ ಸಾಗಿದ ಸೈನಾ ಎರಡು ಬಾರಿ ಪ್ರತಿಷ್ಠಿತ ಏಷಿಯನ್ ಸ್ಯಾಟಲೈಟ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಗೆಲುವು ಸಾಧಿಸಿದರು. ವಿಶ್ವದ ವಿವಿಧ ಸ್ಪರ್ಧೆಗಳಲ್ಲಿ ತೋರಿದ ಪ್ರತಿಭೆಯ ದೆಸೆಯಿಂದಾಗಿ ವಿಶ್ವ ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ 2008ರ ವರ್ಷದ ಅತ್ಯಂತ ಭರವಸೆಯ ಆಟಗಾರ್ತಿ ಎಂದು ಪರಿಗಣಿತರಾದರು. ಅದೇ ವರ್ಷದಲ್ಲಿ ವಿಶ್ವ ಸೂಪರ್ ಸರಣಿಯ ಸ್ಪರ್ಧೆಗಳಲ್ಲಿ ಸೆಮಿಫೈನಲ್ ತಲುಪಿದರು. ಈಗಾಗಲೇ ಹೇಳಿದ ಇಂಡೋನೇಶಿಯನ್ ಸೂಪರ್ ಸರಣಿಯ ಎರಡು ಪ್ರಶಸ್ತಿಗಳು, ಹಾಂಕಾಂಗ್ ಸೂಪರ್ ಸರಣಿ, ಸಿಂಗಾಪುರ್, ಸ್ವಿಸ್ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿನ ಗೆಲುವುಗಳು, ಒಲಿಂಪಿಕ್ಸ್ ಕಂಚಿನ ಪದಕ, BWF ಚಾಂಪಿಯನ್ಷಿಪ್ ಬೆಳ್ಳಿ ಪದಕ ಮುಂತಾದ ಗೆಲುವುಗಳ ಮೂಲಕ ಬ್ಯಾಡ್ಮಿಂಟನ್ ಆಟದಲ್ಲಿ ದಾಪುಗಾಲಿಡುತ್ತಾ ಮುಂದೆ ಸಾಗಿದ ಸೈನಾ ವಿಶ್ವಮಟ್ಟದಲ್ಲಿ ಅನೇಕ ಪ್ರಸಿದ್ಧ ಆಟಗಾರರ ವಿರುದ್ಧ ಜಯಗಳಿಸಿ ಇಂದು ವಿಶ್ವದ ಶ್ರೇಷ್ಠ ಆಟಗಾರ್ತಿಯರ ಸಾಲಿನಲ್ಲಿ ಸ್ಥಾಪಿತರಾಗಿದ್ದಾರೆ. ಎರಡು ವರ್ಷಗಳ ಹಿಂದೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೂ ಪುನಃ ಕ್ರೀಡಾಂಗಣವನ್ನು ಬೆಳಗುತ್ತಾ ಮುಂದೆ ಸಾಗಿದ್ದಾರೆ.
ಸೈನಾ ನೆಹವಾಲ್ ಅವರಿಗೆ ಪದ್ಮ ಪ್ರಶಸ್ತಿ, ಪದ್ಮಭೂಷಣ, ಅರ್ಜುನ ಪ್ರಶಸ್ತಿ, ಖೇಲ್ ರತ್ನ ಪ್ರಶಸ್ತಿಗಳಂತಹ ಗೌರವಗಳೆಲ್ಲಾ ಹುಡುಕಿ ಬರುತ್ತಿದೆ. ಚಿಕ್ಕವಯಸ್ಸಿನಿಂದ ಅಪಾರ ಸಾಧನೆ ಮಾಡಿ ಮುಂದುವರೆಯುತ್ತಿರುವ ಈ ಬಿರುಸಿನ ಆಟದ ಹುಡುಗಿ, ತನ್ನ ಬದುಕಿನ ಹಾಗೂ ಆಕೆಯ ನೆಚ್ಚಿನ ಕ್ರೀಡೆಯಲ್ಲಿ ಎಲ್ಲ ರೀತಿಯ ಸಾಧನೆಗಳನ್ನೂ ಮಾಡಿ ಎಲ್ಲ ರೀತಿಯ ಸುಂದರ ಬದುಕನ್ನು ಆಸ್ವಾದಿಸುವಂತಾಗಲಿ ಎಂದು ಆಶಿಸುತ್ತಾ ಹುಟ್ಟು ಹಬ್ಬದ ಶುಭಾಶಯಗಳನ್ನು ಹೇಳೋಣ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಯುದ್ಧವು 22 ನೇ ದಿನವನ್ನು ಪ್ರವೇಶಿಸುತ್ತಿದ್ದಂತೆ, ಉಕ್ರೇನ್ನಲ್ಲಿನ ಶಾಲೆಗಳು, ಸಮುದಾಯ ಕೇಂದ್ರಗಳನ್ನು ಗುರಿಯಾಗಿಟ್ಟುಕೊಂಡು ರಷ್ಯಾದ ದಾಳಿಗಳು!

Fri Mar 18 , 2022
ಯುದ್ಧವು 22 ನೇ ದಿನಕ್ಕೆ ಕಾಲಿಟ್ಟಾಗ, ರಷ್ಯಾದ ವಾಯುದಾಳಿಗಳು ಉಕ್ರೇನ್‌ನಾದ್ಯಂತ ಸಮುದಾಯ ಕೇಂದ್ರಗಳು ಮತ್ತು ಶಾಲೆಗಳನ್ನು ಹೊಡೆದವು ಎಂದು ವರದಿಯಾಗಿದೆ. ಮರಿಯುಪೋಲ್ ಕೌನ್ಸಿಲ್ ನಾಗರಿಕರು ಆಶ್ರಯ ಪಡೆಯುತ್ತಿರುವ ನಗರದ ರಂಗಮಂದಿರದ ಚಿತ್ರಗಳನ್ನು ತೋರಿಸಿದರು. ಚಿತ್ರಮಂದಿರಕ್ಕೆ ಭಾರೀ ಹಾನಿಯಾಗಿದೆ ಎಂದು ಚಿತ್ರಗಳು ತೋರಿಸಿವೆ. ಆಶ್ರಯ ಪಡೆದ 1,000 ಮಂದಿಯಲ್ಲಿ ಹಲವಾರು ಮಕ್ಕಳು ಸೇರಿದ್ದಾರೆ. ಏತನ್ಮಧ್ಯೆ, ಖಾರ್ಕಿವ್‌ಗೆ ಸಮೀಪವಿರುವ ಮೆರೆಫಾದಲ್ಲಿನ ಶಾಲೆ ಮತ್ತು ಸಮುದಾಯ ಕೇಂದ್ರದ ಮೇಲೆ ವಾಯುದಾಳಿ ಸಂಭವಿಸಿದ ನಂತರ ಕನಿಷ್ಠ […]

Advertisement

Wordpress Social Share Plugin powered by Ultimatelysocial