ಪ್ರಾಚೀನ ದೇಗುಲಗಳಿಗೆ ದಾರಿ ತೋರುವ ಚಕ್ರಪಾಣಿ

ಪ್ರಾಚೀನ ದೇಗುಲಗಳ ಬಗ್ಗೆ ಇಂದಿನ ದಿನದಲ್ಲಿ ಹೇಳುವಾಗ ಕನ್ನಡಿಗರಿಗೆ ಥಟ್ ಅಂತ ನೆನಪಾಗುವ ಹೆಸರು ಕೆಂಗೇರಿ ಚಕ್ರಪಾಣಿ. ಕನ್ನಡ ನಾಡಿನ ಮೂಲೆ ಮೂಲೆಯಲ್ಲಿರುವ ದೇಗುಲಗಳನ್ನೆಲ್ಲಾ ಸುತ್ತಿ ಅದರ ದೃಶ್ಯದರ್ಶನ ಸೌಭಾಗ್ಯವನ್ನು ಎಲ್ಲ ಕನ್ನಡಿಗರಿಗೆ ಮುಕ್ತವಾಗಿ ನೀಡುತ್ತಿರುವ ಕೆಂಗೇರಿ ಚಕ್ರಪಾಣಿಯವರದು ಸರಳ ಸಜ್ಜನಿಕೆಯಿಂದ ಕೂಡಿದ ವಿಶಾಲ ಮನಸ್ಸು.
ಬಿ ಎಸ್ ಎನ್ ಎಲ್ ಕೇಂದ್ರದಲ್ಲಿ ದೂರಸಂಪರ್ಕ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಕೆಂಗೇರಿ ಚಕ್ರಪಾಣಿ ಅವರಿಗೆ ಈ ಹವ್ಯಾಸ ತಮ್ಮ ಸಹೋದ್ಯೋಗಿಗಳೊಂದಿಗೆ ವಿವಿಧ ಪ್ರಾಚೀನ ದೇಗುಲಗಳಿರುವ ಊರುಗಳಿಗೆ ಪ್ರವಾಸ ಹೋಗುವುದರ ಮೂಲಕ ಮೊದಲ್ಗೊಂಡಿತು. ಹೀಗೆ ಮೊದಲ್ಗೊಂಡ ಪ್ರವಾಸ ಚಕ್ರಪಾಣಿ ಮತ್ತು ಅವರ ಸಹೋದ್ಯೋಗಿ ಗೆಳೆಯರಿಗೆ ಒಂದು ನಿರಂತರ ಸಂಚಾಲನಾ ಪ್ರಕ್ರಿಯೆಯಾಗಿ ಸಾಗುತ್ತಿದ್ದಂತೆ ಚಕ್ರಪಾಣಿ ಅವರಿಗೆ ತಾವು ನೋಡುತ್ತಾ ಬಂದ ಪ್ರತಿ ಶಿಲ್ಪದ ಬಗ್ಗೆಯೂ ತೀವ್ರವಾದ ಆಸಕ್ತಿ ತುಂಬಿಕೊಳ್ಳುತ್ತಾ, ಅದು ಅವರ ಕ್ಯಾಮೆರಾ ಕಣ್ಣಿನಿಂದ ಹೆಚ್ಚು ಹೆಚ್ಚು ಸೆರೆಯಾಗುತ್ತಾ, ಮುಂದೆ ವ್ಯಾಪಕವಾಗಿ ಚಿತ್ರಪ್ರದರ್ಶನಗಳ ಮೂಲಕ ಜನಸಾಗರವನ್ನೂ ತಲುಪುತ್ತಾ ಸಾಗಿದೆ. ಅವರು ‘ಕರ್ನಾಟಕ ದರ್ಶನ’ ಶೀರ್ಷಿಕೆ ಅಡಿಯಲ್ಲಿ ಹಲವು ದಿನಗಳ ಕಾಲ ಪ್ರದರ್ಶಿಸುತ್ತಿರುವ ಬೃಹತ್ ಛಾಯಾಚಿತ್ರ ಪ್ರದರ್ಶನಗಳೇ ನೂರೈವತ್ತರಷ್ಟು. ಅವರ ಛಾಯಾಗ್ರಹಣ ಮತ್ತು ಆಸಕ್ತಿಗೆ ಸೆರೆಯಾಗಿರುವ ಪ್ರಧಾನ ದೇಗುಲಗಳು 400 ನ್ನು ಮೀರಿದ್ದು, ಒಂದೊಂದೂ ವಿಶಿಷ್ಟ ಎನಿಸುವಂತೆ ಮನಸೂರೆಗೊಳ್ಳುವ ಅವರ ಚಿತ್ರಗಳ ಸಂಖ್ಯೆ ಹಲವು ಸಹಸ್ರಗಳನ್ನು ಪೋಣಿಸಿಕೊಂಡು ಸಾಗಿವೆ.
ಚಕ್ರಪಾಣಿ ಅವರ ದೇಗುಲಗಳ ಭೇಟಿಯ ಆಸಕ್ತಿ ಕೇವಲ ಪ್ರವಾಸದ ಮೋಜಿನ ಮತ್ತು ಸಿಕ್ಕದ್ದನ್ನು ಕ್ಲಿಕ್ ಮಾಡಿದ್ದೇನೆ ನೋಡಿ ಎಂಬಂತಹ ಸೀಮಿತ ಮೇಲ್ಮೈನದಲ್ಲ. ಅವರು ಕರ್ನಾಟಕ ಇತಿಹಾಸ ಮತ್ತು ಸಾಂಸ್ಕೃತಿಕ ಚರಿತ್ರೆಯ ಕುರಿತಂತೆ ಆಳವಾದ ಅಧ್ಯಯನ ಮಾಡಿದ್ದಾರೆ. ಅನೇಕ ಅಮೂಲ್ಯ ಗ್ರಂಥಗಳನ್ನೂ ಸಂಗ್ರಹಿಸಿದ್ದಾರೆ. ಅವರ ಅಧ್ಯಯನಶೀಲತೆಗೆ ಮತ್ತಷ್ಟು ಹೆಚ್ಚಿನ ಪ್ರೇರಣೆ ದೊರೆತಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಶಾಸನಶಾಸ್ತ್ರ ತರಗತಿಗಳಿಂದ. ಆ ಪರೀಕ್ಷೆಯಲ್ಲಿ ಆಗ್ರಶ್ರೇಯಾಂಕದ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದ ಸಾಧನೆ ಕೂಡಾ ಚಕ್ರಪಾಣಿ ಅವರ ಬೆನ್ನಿಗಿದೆ. ಅನೇಕ ಸಂಘ ಸಂಸ್ಥೆಗಳು ಮತ್ತು ದೇಗುಲಗಳ ಭಿತ್ತಿಗಳಲಿ ಅವರ ಚಿತ್ರಗಳು ರಾರಾಜಿಸುತ್ತಿವೆ. ಅನೇಕ ನಿಯತಕಾಲಿಕಗಳು ಅವರ ಲೇಖನಗಳು ಮತ್ತು ಛಾಯಾಚಿತ್ರಗಳನ್ನು ಆಗಾಗ ಬಿಂಬಿಸುತ್ತಿವೆ. ‘ದೇಗುಲಗಳ ದಾರಿ’ ಎಂಬ ಅವರ ಕೃತಿ ಉತ್ತಮ ವಿಮರ್ಶೆಗಳನ್ನು ಪಡೆಯುವುದರ ಜೊತೆಗೆ ಸಹಸ್ರಾರು ಓದುಗರ ಮನೆ-ಮನಗಳನ್ನು ಮುಟ್ಟಿವೆ.
ಚಕ್ರಪಾಣಿ ಅವರು ತಾವು ತೆಗೆದ ಛಾಯಾಚಿತ್ರಗಳಲ್ಲಿ ದೇವಾಲಯಗಳ ವಾಸ್ತು ಶಿಲ್ಪ ಶೈಲಿ, ಕಾಲ ಹಾಗೂ ವೈಶಿಷ್ಟತೆ ಮುಂತಾದ ಮಹತ್ವದ ವಿವರಗಳನ್ನು ನೀಡುತ್ತಾರೆ. ಚಕ್ರಪಾಣಿ ಅವರ ವೈವಿಧ್ಯಮಯ ಸಂಗ್ರಹಗಳನ್ನು ಒಂದಿನಿತು ಇಣುಕಿದಾಗ ಕರ್ನಾಟಕದ ಅತ್ಯಂತ ಪ್ರಾಚೀನ ಶಿವಲಿಂಗವಾದ ತಾಳಗುಂದದ ಪ್ರಣವೇಶ್ವರ, ಬೆಂಗಳೂರು ಜಿಲ್ಲೆಯ ಅತ್ಯಂತ ಪ್ರಾಚೀನ ಶಿವಲಿಂಗ ಚಿಕ್ಕನಹಳ್ಳಿ (ಹೊಸಕೋಟೆಯ ಸಮೀಪ) ಸೋಮೇಶ್ವರ, ಬೂದಿಗೆರೆ ತಾಲ್ಲೂಕು ಚೌಡಪ್ಪನಹಳ್ಳಿಯ ತಬ್ಬುಲಿಂಗೇಶ್ವರ, ಕಾಡುಗೋಡಿ ಸಮೀಪದ ಹಣಗೊಂಡನಹಳ್ಳಿಯ 7 ಅಡಿ ಎತ್ತರದ ಬಾಣೇಶ್ವರ ಲಿಂಗ, ಅತ್ಯಂತ ಎತ್ತರದ ಶ್ರೀ ಕೇಶವನ ಶಿಲ್ಪವಾದ ಹಾಸನ ಜಿಲ್ಲೆಯ ಕೊಂಡಜ್ಜಿ ಕೇಶವ, ಹೊಯ್ಸಳರ ವಾಸ್ತುಶಿಲ್ಪದ ಏಕ, ದ್ವಿಕೂಟ, ತ್ರಿಕೂಟ, ಚತುಷ್ಕೂಟ, ಪಂಚಕೂಟ ದೇವಾಲಯಗಳು, ಕದಂಬ ಅರಸರಿಂದ ಹಿಡಿದು ಮೈಸೂರು ಅರಸರ ಕಾಲದ ವರೆಗಿನ ಕರ್ನಾಟಕ ವಾಸ್ತುಶಿಲ್ಪದ ಬೆಳವಣಿಗೆಯ ಹಂತಗಳು, ನಂಜನಗೂಡಿನ 32 ಭಂಗಿಯ ವಿನಾಯಕ ಮೂರ್ತಿಗಳು ಹೀಗೆ ಅನೇಕಾನೇಕ ಅಚ್ಚರಿಗಳನ್ನು ಕಾಣಬಹುದು.
ಚಕ್ರಪಾಣಿ ಅವರೊಂದಿಗೆ ‘ಬೆಂಗಳೂರು ದೂರವಾಣಿ ನೌಕರರ ಪ್ರಾಚೀನ ದೇವಾಲಯಗಳ ಹವ್ಯಾಸಿ ವೀಕ್ಷಣಾ ತಂಡ’ ಸದಾ ಜೊತೆಗಿದೆ. ಜೊತೆಗೆ ನಾಡಿನ ಅನೇಕಾನೇಕ ಆಸಕ್ತರು ಇವರೊಂದಿಗೆ ಹೆಚ್ಚು ಹೆಚ್ಚು ಸೇರ್ಪಡೆಗೊಳ್ಳುತ್ತಲೂ ಇರುತ್ತಾರೆ. ಹೀಗೆ ಅವರು ತಮ್ಮ ಆತ್ಮೀಯ ಆಸಕ್ತ ಕೂಟದೊಂದಿಗೆ ಪ್ರಾಚೀನ ದೇವಾಲಯಗಳಿಗೆ ಬಿಡುವಿನ ದಿನಗಳಲ್ಲಿ ಪ್ರವಾಸ ಹೋಗುತ್ತಾರೆ. ದೇವಾಲಯದ ಇತಿಹಾಸ, ಮಾಹಿತಿ ಸೇರಿದಂತೆ ಇನ್ನಿತರೆ ಮಾಹಿತಿಯ ಪ್ರವಾಸಿ ಕೈಪಿಡಿಯನ್ನು ಮುದ್ರಿಸಿ ಉಚಿತವಾಗಿ ಪ್ರವಾಸಿಗರಿಗೆ ಹಂಚುತ್ತಾರೆ.
ಚಕ್ರಪಾಣಿ ಅವರ ಈ ಮಹತ್ವದ ಕಾಯಕವನ್ನು ಕರ್ನಾಟಕ ಇತಿಹಾಸ ಅಕಾಡೆಮಿಯೂ ಸೇರಿದಂತೆ ಅನೇಕ ಪ್ರತಿಷ್ಟಿತ ಸಂಘಸಂಸ್ಥೆಗಳು ಗೌರವಿಸಿ ಸನ್ಮಾನಿಸಿವೆ.
ತಮ್ಮ ಕುಟುಂಬ ಮತ್ತು ಕಾರ್ಯಕ್ಷೇತ್ರದಲ್ಲಿ ಮಾತ್ರವಲ್ಲದೆ ಹವ್ಯಾಸದಲ್ಲೂ ಸಂತೃಪ್ತಿ ತುಂಬಿಕೊಂಡು ಅದರ ಸವಿಯನ್ನು ಎಲ್ಲರಿಗೂ ಉಣಬಡಿಸುತ್ತಿರುವ ಆತ್ಮೀಯ ಗೆಳೆಯರಾದ ಕೆಂಗೇರಿ ಚಕ್ರಪಾಣಿ ಬದುಕು ನಿತ್ಯ ಸುಖ ಶಾಂತಿ ಸಂತೃಪ್ತಿಗಳಿಂದ ಆನಂದದಾಯಕವಾಗಿರಲಿ ಎಂಬುದು ನಮ್ಮೆಲ್ಲರ ಆತ್ಮೀಯ ಹಾರೈಕೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನವಿ ಮುಂಬೈ ವ್ಯಕ್ತಿಯ ಜೀವನವನ್ನು ಹ್ಯಾಕರ್ ತೆಗೆದುಕೊಳ್ಳುತ್ತಾನೆ!

Fri Feb 18 , 2022
ಅವರ ಮೊಬೈಲ್ ರಿಂಗಣಿಸಿದಾಗ ಅಥವಾ ನೋಟಿಫಿಕೇಶನ್ ಬಂದಾಗಲೆಲ್ಲಾ ಚಂದನ್ ಕುಮಾರ್ ಬೆನ್ನುಮೂಳೆಯ ಮೇಲೆ ಚಳಿ ಬೀಳುತ್ತದೆ. ಕಳೆದ ನಾಲ್ಕು ತಿಂಗಳಿಂದ ಕಿರುಕುಳ ಕೊಡುವವನೊಬ್ಬ ಈತನ ಪ್ರಾಣವನ್ನೇ ತೆಗೆದುಕೊಂಡಿದ್ದಾನೆ. ಸೈಬರ್ ಅಪರಾಧಿಗಳು ಕುಮಾರ್ ಮತ್ತು ಅವರ ಪತ್ನಿಯ ಫೋನ್‌ಗಳನ್ನು ಪದೇ ಪದೇ ಹ್ಯಾಕ್ ಮಾಡಿದ್ದಾರೆ ಮತ್ತು ಅವರ ವೈಯಕ್ತಿಕ ವಿವರಗಳನ್ನು ಪ್ರವೇಶಿಸಿದ್ದಾರೆ. ನವಿ ಮುಂಬೈ ನಿವಾಸಿ ಮತ್ತು ಆತನ ಮಕ್ಕಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ, ಸಾಲ ಪಡೆಯುವುದು, ಹೋಟೆಲ್ ಕೊಠಡಿಗಳನ್ನು ಕಾಯ್ದಿರಿಸುವುದು […]

Advertisement

Wordpress Social Share Plugin powered by Ultimatelysocial