ಪುತ್ತೂರು ನರಸಿಂಹನಾಯಕ್ ಸಂಗೀತಗಾರರು

‘ಪವಮಾನ ಜಗದ ಪ್ರಾಣ’, ‘ಮುನಿಸು ತರವೇ ಮುಗುದೆ’, ‘ಸಂಜೆಯ ರಂಗಕೆ ಬಾನು ಕೆಂಪಾಗಿದೆ’ ಇಂತಹ ಹಾಡುಗಳನ್ನು ಮೆಲುಕು ಹಾಕದವರಿಲ್ಲ. ಈ ಹಾಡುಗಳನ್ನು ತಮ್ಮದೇ ಧಾಟಿಯಲ್ಲಿ ಜನ ಮಾನಸದಲ್ಲಿ ನಲಿಯುವಂತೆ ಮಾಡಿರುವ ಗಾಯಕ ಪುತ್ತೂರು ನರಸಿಂಹನಾಯಕ್. ‘ಭಕ್ತಿ ಗೀತೆ’, ‘ಭಾವ ಗೀತೆ’, ‘ಜನಪದ ಗೀತೆ’, ‘ಚಲನಚಿತ್ರ ಗಾಯನ’ ಹೀಗೆ ವಿವಿಧ ಪ್ರಕಾರಗಳ ಸುಗಮ ಸಂಗೀತ ಗಾಯನದಲ್ಲಿ ತಮ್ಮ ಅಚ್ಚಳಿಯದ ಮುದ್ರೆ ಒತ್ತಿ ಪ್ರಖ್ಯಾತರಾಗಿದ್ದಾರೆ ಗಾಯಕ ಪುತ್ತೂರು ನರಸಿಂಹ ನಾಯಕ್.
ನರಸಿಂಹ ನಾಯಕ್ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ 1958ರ ಡಿಸೆಂಬರ್ 28ರಂದು ಹರಿಹರ ನಾಯಕ್ ಮತ್ತು ವರಲಕ್ಷ್ಮಿ ದಂಪತಿಗಳ ಸುಪುತ್ರರಾಗಿ ಜನಿಸಿದರು. ಸಣ್ಣ ವಯಸ್ಸಿನಲ್ಲೇ ಸಂಗೀತದಲ್ಲಿ ಆಸಕ್ತಿ ಮೂಡಿಸಿಕೊಂಡ ನಾಯಕ್ ಪಂಡಿತ ದೇವದಾಸ ನಾಯಕ್ ಅವರಲ್ಲಿ ಹಿಂದೂಸ್ಥಾನೀ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದರು.
ವಿವೇಕಾನಂದ ಕಾಲೇಜಿಗೆ ಬಂದ ಮೇಲೆ ಅಲ್ಲಿನ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾ ಬಂದರು. ಸ್ಪರ್ಧೆಗಳಲ್ಲಿ ಮೊದಲ ಸ್ಥಾನ ಇವರಿಗೇ ಕಟ್ಟಿಟ್ಟ ಬುತ್ತಿ. ಪುತ್ತೂರಿನಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹಾಡುವ ಅವಕಾಶಗಳು ಅರಸುತ್ತಾ ಬಂದವು. ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಂಡು ತಮ್ಮ ಗಾಯನದಲ್ಲಿ ಪ್ರಬುದ್ಧತೆಯನ್ನು ಬೆಳೆಸಿಕೊಳ್ಳುತ್ತಾ ಸಾಗಿದ ನಾಯಕ್ ಕೆಲವೇ ವರ್ಷಗಳಲ್ಲಿ ಬೇರೆ ಬೇರೆ ಊರುಗಳ ಕಾರ್ಯಕ್ರಮಗಳಿಗೆ ಆಹ್ವಾನಿತರಾಗಿ ಭಾವಗೀತೆ ಮತ್ತು ದಾಸರಪದಗಳನ್ನು ಹಾಡಿ ಹೆಸರಾದರು. ಈ ಮಧ್ಯೆ ಉತ್ತಮ ಅಂಕದೊಂದಿದೆ ಬಿ.ಎ. ಪದವಿಯನ್ನೂ ಪಡೆದರು. ತಂದೆ ತಾಯಿಯರು ಮಗ ಯಾವುದಾದರೂ ಕೆಲಸಕ್ಕೆ ಸೇರಲಿ ಎಂಬ ಬಯಕೆಯನ್ನು ತೋರಿದ್ದರೂ, ಗಾಯನದಲ್ಲಿ ತಮಗಿದ್ದ ಆತ್ಮ ವಿಶ್ವಾಸದಿಂದ ನರಸಿಂಹ ನಾಯಕ್ ಗಾಯನ ಕ್ಷೇತ್ರವನ್ನೇ ವೃತ್ತಿಯಾಗಿ ಸ್ವೀಕರಿಸಿದರು.
ನರಸಿಂಹ ನಾಯಕ್ 1984ರಲ್ಲಿ ಮಂಗಳೂರಿನ ಆಕಾಶವಾಣಿ ಗಾಯನ ವಿಭಾಗದಲ್ಲಿ ತೇರ್ಗಡೆಯಾದರು. ಪ್ರಸಿದ್ಧ ವಯೋಲಿನ್ ವಾದಕ ಹಾಗೂ ಸಂಗೀತ ನಿರ್ದೇಶಕ ಪದ್ಮಚರಣ್ ಅವರು ತಮ್ಮ ‘ನವೋದಯ’ ಧ್ವನಿ ಸುರುಳಿಯಲ್ಲಿ ನಾಯಕ್ ಅವರಿಗೆ ಅವಕಾಶವಿತ್ತರು.
ಮುಂದೆ ನರಸಿಂಹ ನಾಯಕ್ ಅವರ ಗಾಯನ ವೃತ್ತಿಯಲ್ಲಿ ಚಲನ ಚಿತ್ರಗಳ ಅವಕಾಶಗಳೂ ಅರಸಿ ಬಂದವು. ‘ಕೆಂಡದ ಮಳೆ’ ಚಿತ್ರದಲ್ಲಿನ ಗಾಯನಕ್ಕಾಗಿ ಅವರಿಗೆ 1998ರಲ್ಲಿ ‘ರಾಜ್ಯಪ್ರಶಸ್ತಿ’ ಸಂದಿತು. ಮುಂದೆ ‘ಗೌರಿ ಗಣೇಶ’ ಚಿತ್ರದಲ್ಲಿನ ಹಾಡಿಗಾಗಿ ಚಿತ್ರರಸಿಕರ ಸಂಘದಿಂದ ಸನ್ಮಾನಿತರಾದರು. ಸಿ.ಅಶ್ವಥ್ ರವರ ಹಲವಾರು ಧ್ವನಿಸುರುಳಿಗಳಿಗೂ ಹಾಡಿದರು. ‘ಸಲ್ಲಾಪ’ ಇವರ ಮೊಟ್ಟಮೊದಲ ಭಾವಗೀತಾ ಸೋಲೋ ಆಲ್ಬಂ. ಇದರಲ್ಲಿರುವ ಸುಬ್ರಾಯ ಚೊಕ್ಕಾಡಿಯವರ ರಚನೆಯ ‘ಸಂಜೆಯಾ ರಾಗಕೆ ಬಾನು ಕೆಂಪೇರಿದೆ’ ಹಾಗೂ ‘ಮುನಿಸುತರವೇ ಮುಗುದೆ’ ಗೀತೆಗಳು ಅಪಾರ ಪ್ರಸಿದ್ಧಿ ಪಡೆದವು. ಭಾವಗೀತೆ, ಭಕ್ತಿಗೀತೆ, ದಾಸರಪದ, ಜನಪದ, ವಚನ ಹೀಗೆ ಬಹಳಷ್ಟು ಪ್ರಕಾರಗಳಲ್ಲಿ ಹಾಡುತ್ತಿದ್ದ ನರಸಿಂಹನಾಯಕ್ ಶ್ರೋತೃಗಳ ಮೆಚ್ಚಿನ ಗಾಯಕರಾದರು. 1989ರಲ್ಲಿ ಇವರು ಹಾಡಿದ ‘ದಾಸನಾಗು ವಿಶೇಷನಾಗು’ ಗೀತೆಯಂತೂ ಅತ್ಯದ್ಭುತ ಯಶಸ್ಸು ಪಡೆಯಿತು. ಹೀಗೆ ಅವರ ಧ್ವನಿಸುರುಳಿಯ ಸಂಖ್ಯೆ ನೂರನ್ನೂ ಮೀರಿವೆ. 10,000ಕ್ಕೂ ಹೆಚ್ಚು ಗೀತೆಗಳನ್ನು ಹಾಡಿರುವ ಗಾಯಕ ಎಂಬ ಖ್ಯಾತಿಗೆ ಇವರು ಪಾತ್ರರಾಗಿದ್ದಾರೆ. ಕನ್ನಡ ಭಾಷೆಯ ಗೀತೆಗಳಷ್ಟೇ ಅಲ್ಲದೇ, ತೆಲುಗು, ತಮಿಳು, ಮರಾಠಿ, ಹಿಂದಿ, ಕೊಂಕಣಿ, ತುಳು ಗೀತೆಗಳನ್ನು ಹಾಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಸ್ತ್ರೀ ಶಕ್ತಿಯ ದರ್ಶನ ಮಾಡಿಸುವ 'ವೇದ'; ಪ್ರತೀಕಾರವೇ ಇಲ್ಲಿ ಆಯುಧ!

Wed Dec 28 , 2022
ನಟ ಶಿವರಾಜ್‌ಕುಮಾರ್ ಅವರು ಚಿತ್ರರಂಗಕ್ಕೆ ಕಾಲಿಟ್ಟು 36 ವರ್ಷಗಳಾಗಿವೆ. ನೂರಾರು ಸಿನಿಮಾಗಳಲ್ಲಿ ನಾನಾ ಥರದ ಪಾತ್ರಗಳನ್ನು ಮಾಡಿದ್ದಾರೆ. ಪ್ರಸ್ತುತ ಕಾಲಘಟ್ಟಕ್ಕೆ ತಕ್ಕಂತೆ ಹೊಸ ಹೊಸ ಮಾದರಿಯ ಕಥೆಗಳ ಆಯ್ಕೆಗಳನ್ನು ಶಿವಣ್ಣ ಮಾಡಿಕೊಳ್ಳುತ್ತಿದ್ದಾರೆ. ಇದೀಗ ತೆರೆಕಂಡಿರುವ ಅವರ ನಟನೆಯ 125ನೇ ಸಿನಿಮಾ ‘ವೇದ’ ಕೂಡ ಆ ಥರದ್ದೊಂದು ವಿಭಿನ್ನ ಆಯ್ಕೆ. ನಿರ್ದೇಶಕ ಹರ್ಷ ಈ ಬಾರಿ ಶಿವಣ್ಣ ಜೊತೆಗೆ ಕೈಜೋಡಿಸಿ ‘ವೇದ’ ಚಿತ್ರವನ್ನು ತೆರೆಗೆ ತಂದಿದ್ದಾರೆ. ಹಾಗಾದರೆ, ಈವರೆಗಿನ ಸಿನಿಮಾಗಳಿಗಿಂತ ‘ವೇದ’ […]

Advertisement

Wordpress Social Share Plugin powered by Ultimatelysocial